- ಗೆಜ್ಜೆ ಸುರಿವ ಸದ್ದು - ಜನವರಿ 8, 2021
- ಹೀಗೂ ಒಂದು ಕಾಯುವಿಕೆ - ಜೂನ್ 6, 2020
- ಹಕ್ಕಿ ಹೋದದ್ದು ಎಲ್ಲಿಗೆ - ಏಪ್ರಿಲ್ 30, 2020
ಒಮ್ಮೆ ಸ್ರವಿಸಿದ ನಂತರ
ಗುಳೆ ಹೊರಟವರ ಹಿಡಿದು ನಿಲ್ಲಿಸಿತು
ಬಯಲಿನಂಚಿಗೆ ಹೂಬಿಟ್ಟ
ತಾರೆಯ ಮರ…
ಅಷ್ಟು ಹೊತ್ತಿಗೆ ದುಂಬಿಯ ಜೊತೆಗಿದ್ದ
ಎಷ್ಟು ಕುಡಿದರೂ ಮತ್ತಾಗದ
ಅರೆನಿಮೀಲಿತ ಚಂದ್ರ
ಎದೆಗೆ ಎದೆ ಬೆಸೆದು ತುಟಿಗಿಷ್ಟು ಜೇನು ಬಳಿದು
ಮತ್ತೆ ಮತ್ತೆ ಪ್ರೇಮಿಸುವುದು ಹೇಗೆಂದು
ಖುದ್ದು ತೋರಿಸಿ
ಪಾಠ ಮಾಡುತ್ತಿದ್ದ
ಕೇಳುತ್ತ ಕೂತರು
ಹತ್ತು ಹಲವು ಜನ
ತಾರೆಯ ಹೂವು ಬಲು ಅಮಲು
ನೋಡಿಯೇ ನೋಡಿದರು ಕಣ್ಣುಕಿಸಿದು
ತಡೆಯಲಾರದೆ ಸೊಕ್ಕಿದರು ಉಕ್ಕಿದರು
ಇಡಿಕಿರಿದರು ಒತ್ತಾಗಿ
ಅಲ್ಲಲ್ಲೆ ಹುಡುಕಿದರು ತಕ್ಕಂತೆ ಜೋಡಿಗಳನು
ಮತ್ತೆ ಹಗುರಾದರು
ಇನ್ನಾದರು ಹೋಗಗೊಡಿ
ಕಿರುಚಿದರು… ಹೊರಳಾಡಿ ಗೋಗರೆದರು…
ಹೊತ್ತು ಹೋಗದ ಮುದುಕರಲ್ಲ ಯಾರೂ
ತಕ್ಕ ಸಂಗಾತಿ ಸಿಗದ ಮಾತ್ರಕ್ಕೆ
ವೈರಾಗ್ಯ ಮೈಗೂಡಿಹೋಗಿದೆ ಅನುಗಾಲದಿಂದ
ಎಲ್ಲ ಅರ್ಥವಾಯಿತು ಚಂದಿರನಿಗೆ
ಇದೀಗಲೇ ತಡವಾಗಿದೆ
ಚಿಟಿಕೆ ಹೊಡೆಯುವುದರೊಳಗೆ
ನಿಮ್ಮ ಬಲಮೊಲೆಯನ್ನು ಹೀಗೆ
ಒತ್ತಿಹಿಡಿಯಿರೆಂದು ಇವರಿಗೂ
ನಿಮ್ಮ ಸಂಗಾತಿಯ ಕಿಬ್ಬೊಟ್ಟೆಯನ್ನು
ಸವರಿ ಅಲ್ಲೇ ನಿಲ್ಲಿ ಎಂದು ಅವರಿಗೂ
ಆಣತಿಯಿತ್ತ
ಮುಖನೋಡುವಷ್ಟೂ ವೇಳೆ ಇಲ್ಲದ
ಸಮಯದಲ್ಲಿ ಹೇಳಿದಷ್ಟು
ಮಾಡುವುದಾಯಿತು ಎಲ್ಲರಿಗೆ
ಜೊತೆಗಾರರು ಅದಲು ಬದಲಾಗಿ ಹೋದರು
ಬರೀ ಮೊಲೆಗಳು ಮತ್ತು ಕಿರಿದು ಹೊಟ್ಟೆಗಳು ಎಲ್ಲೆಲ್ಲೂ
ಮತ್ತವುಗಳ ಮೇಲೆ ಎರಡು ಕೈಗಳು
“ಮೊಲೆ ಯೋನಿ ಶಿಶ್ನವಿಲ್ಲದ ಪದ್ಯ”
ಅದೆಂತಹುದ್ದೆಂದು ಗಹಗಹಿಸಿ ನಕ್ಕು
ಸ್ವಂತ ಕೂಡುವಿಕೆಯ ಸಮಯದಲ್ಲೂ
ಅಣಕವಾಡುವ
ಹಲವರಲ್ಲಿ ಕೆಲವರು ಇಲ್ಲಿದ್ದರು
ಆಡಮ್… ಈವ್… ಇಡೀ ಜೀವನಪರ್ಯಂತ
ಅದೊಂದರಲ್ಲೇ ಉಳಿದುದನ್ನು
ಕೇಳಿ ಸೋಜಿಗಪಟ್ಟರು
ಇವೆಲ್ಲ ಪದ್ಯಕ್ಕಲ್ಲ ಬಿಡಿ..
ಇಲ್ಲೂ ಬದಿಗೆ ನಿಂತು ಬಿಡದೇ ಮೂಗುಮುರಿದರು
ಅದಿರಲಿ
ಇದ್ಯಾವ ಅವ್ವನ ಎದೆ ?
ಇದ್ಯಾರ ಮಗಳ ಸ್ತನ ?
ಇದ್ಯಾವ ಕಾಲು ಸೋತ ಪೇಲವ ಗೆಳತಿಯ
ಮುದ್ದು ಮಿದು ?
ಗುರ್ತಿಸುವಿಕೆಗೂ ಅವಕಾಶವಿಲ್ಲದಂತೆ ಮುಚ್ಚಿಹೋಗಿತ್ತು ಭೂಗೋಳ
ಒಂದು ನಿಮಿಷದ ಮೌನ
ಸಮಾಪ್ತಿ ಹೇಳುವವರೆಗೂ ಬಿಡುವಂತಿಲ್ಲ
ಆ ಅವಧಿಯಲ್ಲೇ ನಿಲುಕಿತ್ತು
ಹಿಡಿದ ಕೈಗಳಿಗೆ
ಗುಳಾಪಿನೊಳಗೊಂದು ಜೀವಮಿಸುಕುವ ಸದ್ದು
ಬರೀ ಕಾಮಕ್ಕೆ ಮಾತ್ರ ಅಂದುಕೊಂಡಿದ್ದ
ಸರ್ವಾಂಗವೂ ತಾಯ್ತನಕ್ಕೆ ಸಜ್ಜಾಗುವುದು
ಕೇಳುತ್ತಿತ್ತು
ತಿಂಗಳೊಪ್ಪತ್ತಿನಲ್ಲೇ
ಸಾಮೂಹಿಕ ವಿವಾಹದ ಛತ್ರದ ಪಕ್ಕ
ನಿರ್ಮಾಣವಾದವು
ಸಾಲು ಸಾಲು ಬೀಡುಗಳು
ಅಲ್ಲೀಗ ಹಾಲು ಜಿನುಗುವ ಹೊತ್ತು
ಪುಟ್ಟ ಪಾದಗಳಿಗಾಗಿ ಗೆಜ್ಜೆ ಸುರಿವ ಸದ್ದು
ಗುಳೆಯೆದ್ದವರಾಗಲೇ ಮನಸ್ಸು ಬದಲಿಸಿ
ಕೈಕಾಲು ಮುಖ ತೊಳೆದು
ಒಳಗೆ ಬಂದಿದ್ದಾರೆ
ಮನೆ ಮಠ ಮಾಡಿಕೊಂಡು
ತೆಂಗು ಬಾಳೆ ಅಂತ ನೆಟ್ಟುಕೊಂಡು
ಎಲ್ಲಿ ಬಾವಿತೋಡಿದರೆ ನೀರು ಬಂದೀತೆಂದು
ಚರ್ಚಿಸುತ್ತ
ಮತ್ತೆಲ್ಲ ಆರಾಮ ತಾನೇ ?
ಎಂದು ಪರಸ್ಪರ ಕೇಳಿಕೊಳ್ಳುತ್ತಿದ್ದಾರೆ
ಇನ್ನೇನು ಮಳೆಗಾಲವೂ ಹತ್ತಿರ ಬರುತ್ತಿದೆ
ಬೆಚ್ಚಗೆ
ಹಿಂದಣ ಬಚ್ಚಲು ಮನೆಯ ಹೊಸ ಹಂಡೆ
ಬಿಸಿ ನೀರು ಕುದಿವ ಪುಳಕಕ್ಕೆ ಕಾದಿದೆ
ಪ್ರೀತಿಯಿಂದ
ಹೆಚ್ಚಿನ ಬರಹಗಳಿಗಾಗಿ
ಮಹಾಸಾಗರವಾದಳು
ಪುಸ್ತಕ ಪ್ರೇಮಿಯ ಸ್ವಗತ
ಪೊರೆವ ತಂದೆ