- “ಗೋಪಿ ಮತ್ತು ಗಾಂಡಲೀನ” – ಐವತ್ತರ ಹೊಸಿಲಲ್ಲಿ… - ಆಗಸ್ಟ್ 10, 2021
- ಬುದ್ಧ ಗುರುವಿಗೆ - ಮೇ 30, 2021
- “ಭವ”ದ ಬಂಧಗಳಲ್ಲೇ ಅರಳಿದ ಸಾರ್ಥಕ ಸಾಲುಗಳು - ಫೆಬ್ರುವರಿ 11, 2021
ಬಿ.ಆರ್.ಲಕ್ಷ್ಮಣರಾವ್ ಅವರಿಗೆ ೭೫. ಅವರ ಕಾವ್ಯ ನಾಯಕ ಗೋಪಿಗೆ ೫೦. ಅಂದರೆ ಬಿ.ಆರ್.ಎಲ್ ಕಾವ್ಯ ಕೃಷಿಯ ಈ ಐವತ್ತು ವರ್ಷಗಳ ನಿರಂತರ ಪಯಣದಲ್ಲಿ ಗೋಪಿಯೂ ಬೇರೆ ಬೇರೆ ರೂಪದಲ್ಲಿ ಅವರೊಟ್ಟಿಗೇ ಪಯಣಿಸಿದ್ದಾನೆ. ಕಾಲಕ್ಕೆ ತಕ್ಕಂತೆ ಅವನ ವೇಷ ಭೂಷಣ ಬದಲಾಗಿದೆ ಅಷ್ಟೆ. ಅಂದರೆ ಗೋಪಿಗೂ ವಯಸಾಯಿತು, ಅನುಭವದಿಂದ ಅವನು ಮಾಗಿದ್ದಾನೆ, ಬದುಕಿನ ಹಳವಂಡಗಳಿಂದ ಬಾಗಿದ್ದಾನೆ, ಸಂತಸದ ದುಃಖದ ಸಂಗತಿಗಳಲ್ಲಿ ಬಳುಕಿದ್ದಾನೆ ಎಂದು ಮನಗಾಣಬೇಕಾದರೆ ಬಿ.ಆರ್.ಎಲ್ ಅವರ ಎಲ್ಲ ಪದ್ಯಗಳಲ್ಲಿ ಇದ್ದೂ ಇರದಂತಿರುವ ‘ಗೋಪಿ’ಯನ್ನು ಅವನ ಛಾಯೆಯನ್ನೂ ಗಮನಿಸಬೇಕು.
ಬಿ.ಆರ್.ಎಲ್. ಅವರ “ಗೋಪಿ ಮತ್ತು ಗಾಂಡಲೀನ” ಸಂಕಲನಕ್ಕೆ ಮುನ್ನುಡಿ ಬರೆದಿದ್ದ ಪಿ. ಲಂಕೇಶ್ ಈ ಸಂಕಲನದ ಪದ್ಯಗಳ ಬಗ್ಗೆ ಬರೆಯುತ್ತ ಮುಂದೊಂದು ದಿನ ಇಲ್ಲಿನ ಪದ್ಯಗಳು ರೆಫರಲ್ ಪಾಯಿಂಟ್ ಆಗುತ್ತವೆಂದು ಭವಿಷ್ಯ ನುಡಿದಿದ್ದರು. ವಿಮರ್ಶೆಯ ಹರಿತ ಅಲುಗುಗಳಿಂದ ಕವಿತೆಗಳನ್ನು ಡಿಸೆಕ್ಟ್ ಮಾಡದ ಲಂಕೇಶ್ ತಮ್ಮ ಸೂಕ್ಷ್ಮ ನೋಟದಿಂದ ಅವನ್ನು ಸ್ಕ್ಯಾನ್ ಮಾಡಿದ್ದರು. ಹಾಗಾಗಿಯೇ ಲಂಕೇಶ್ ೫೦ ವರ್ಷದ ಹಿಂದೆ ಹೇಳಿದ್ದು ಇವತ್ತಿಗೂ ಸತ್ಯವಾಗಿಯೇ ಉಳಿದಿದೆ.
“ಗೋಪಿ ಮತ್ತು ಗಾಂಡಲೀನ” ಪ್ರಕಟವಾದ ೫೦ ವರ್ಷಗಳ ಕುರುಹಾಗಿ ಅದರ ಮರು ಓದು ಹುಟ್ಟಿಸಬಹುದಾದ ಹೊಸಬರ ಪ್ರತಿಕ್ರಿಯೆಗಳನ್ನು ಪುಸ್ತಕವನ್ನಾಗಿ ಪ್ರಕಟಿಸಲು ಬಿ.ಆರ್.ಎಲ್. ನನ್ನನ್ನೂ ಒಂದು ಲೇಖನ ಬರೆದುಕೊಡಲು ಕೇಳಿದಾಗ ಆಶ್ಚರ್ಯವೆನ್ನಿಸಿತು. ತಮ್ಮದೇ ಗುಂಪುಗಳ, ಗಿಂಡಿ ಶಿಷ್ಯರ, ಪರಾಕು ಪಂಪುಗಳ, ಆಹಾ-ಓಹೋ ವಿಮರ್ಶೆಗಳ ನಡುವೆ ಕನ್ನಡದ ಹೊಸ ಕವಿಗಳೇ ಸತ್ತು ಹೋಗುತ್ತಿರುವಾಗ ಬಿ.ಆರ್.ಎಲ್. ೭೫ರ ಪ್ರಾಯದಲ್ಲೂ “ಹರಯ” ದ ಯುವಕನಾಗಿರುವ ಗುಟ್ಟು ತಿಳಿದುಹೋಯಿತು! ಅಲ್ಪ ಸ್ವಲ್ಪ ಪ್ರಸಿದ್ಧರಾದೊಡನೆ ಬಾಲ್ಯದ ಸಹಜ ಕುಕೃತ್ಯಗಳನ್ನು ನೆನೆಯಲೂ ಹೆದರುವವರ ನಡುವೆ ತಮ್ಮ ಮೊತ್ತ ಮೊದಲ ಸಂಕಲನ ಈ ಕಾಲದಲ್ಲೂ ಸಲ್ಲುತ್ತದೆ ಎನ್ನುವ ಧೈರ್ಯವೇ ಅವರ ಇಷ್ಟೂ ದಿನದ ಕಾವ್ಯ ಪಯಣಕ್ಕೆ ತಕ್ಕ ಇಂಧನವನ್ನು ಪೂರೈಸಿದೆ, ಕಾವ್ಯ ಯಾನದ ಬಂಡಿ ಕೆಟ್ಟು ನಿಲ್ಲದಂತೆ ಸರ್ವಿಸ್ ಮಾಡಿದೆ.
ಇವರನ್ನು ಪೋಲಿ ಕವಿ ಎಂದೇ ಸಂಬೋಧಿಸುವ ಹಲವರಿಗೆ ಇವರ ಕವಿತೆಗಳ ಆಳದಲ್ಲಿರುವ ಗಾಢ ವಿಷಾದ, ಬದುಕಿನ ಬಗ್ಗೆ ಇರುವ ತಾತ್ವಿಕ ದರ್ಶನದ ತೀವ್ರತೆ ಮೇಲ್ನೋಟಕ್ಕೆ ದಕ್ಕದೇ ಇರಬಹುದು. ಆದರೆ ಗುರು ದ್ರೋಣರ ಅಣತಿಯ ಮೇರೆಗೆ ಹಕ್ಕಿಯ ಕಣ್ಣಿಗೆ ಗುರಿ ಇಟ್ಟ ಅರ್ಜುನನ ದೃಷ್ಟಿಯ ಹಾಗೆ ನನಗೆ ಬಿ.ಆರ್.ಎಲ್. ಕಾಣುತ್ತಾರೆ. ಮೇಲ್ನೋಟಕ್ಕೆ ಪೋಲಿತನ ಸಾಮಾನ್ಯ ಪ್ರತಿಮೆಗಳ ಮೂಲಕ ಸಾಗುತ್ತ ಸಂಕೀರ್ಣ ವಸ್ತು ವ್ಯಾಪ್ತಿಗೆ ಎಳಸುವ ಕ್ರಮ ನಿಸ್ಸಂಶಯವಾಗಿ ತುಡಿಯುವುದು ಇರದೇ ಇರುವ ಮತ್ತು ಕಾಣದೇ ಇರುವ ಬದುಕಿನಾಚೆಯ ಸತ್ಯದ ಹುಡುಕುವಿಕೆಯನ್ನು…ಅಂದರೆ ಪಾರಮಾರ್ಥವನ್ನು. ಆದರೆ ವಯಸ್ಸಾದಂತೆ ಇತರರ ಹಾಗೆ ಬೇಕೆಂತಲೇ ಅಧ್ಯಾತ್ಮದ ಪೊಳ್ಳು ಧ್ಯಾನದಲ್ಲಿ ಸಂತನ ಹಾಗೆ ಅನುಭಾವಿಯ ವೇಷದಲ್ಲಿ ಮುಲುಗದೇ ಸಹಜ ನಡಿಗೆಯ ಗೊಡವೆಯಲ್ಲಿ ಹುಟ್ಟುವ ಸರಳ ಸುಭಗ ಮಾರ್ಗದಿಂದಲೇ ಅವರು ಕಾಣದ ಲೋಕದ ದಾರಿಯ ಪಥಿಕನಾಗಿರುವುದು ಸ್ಪಷ್ಟವಾಗಿದೆ.
ಬಿ.ಆರ್.ಎಲ್. ಈವರೆಗೂ ಪ್ರಕಟಿಸಿರುವ ಕವನ ಸಂಕಲನಗಳ ಮುನ್ನುಡಿ ಬೆನ್ನುಡಿಗಳಲ್ಲಿ ಚರ್ಚಿತವಾಗಿರುವುದರಾಚೆಗೆ ಹೇಳುವ ಮಾತು ಏನೇನೂ ಉಳಿದಿಲ್ಲ. ಏಕೆಂದರೆ ಕನ್ನಡದ ಅತ್ಯದ್ಭುತ ಓದುಗ ವಿಮರ್ಶಕ ಪಡೆ ಅವರ ಕಾವ್ಯಯಾನದ ಮಗ್ಗುಲುಗಳನ್ನು ಸಾಹಿತ್ಯ ಚರಿತ್ರೆಯ ಏರುಪೇರುಗಳಲ್ಲೂ ಮುನ್ನಡೆಯುತ್ತಲೇ ಇರುವ ಕಾವ್ಯ ಕೃಷಿಯ ಅಂತರ್ಗತ ಪಲುಕುಗಳನ್ನೂ ಎತ್ತಿ ಆಡಿದ್ದಾರೆ, ಹೊಗಳಿ ಹಾರ ಹಾಕಿದ್ದಾರೆ, ಸೂಕ್ಷ್ಮವಾಗಿ ತಿವಿದು ಗದರಿಸಿದ್ದಾರೆ, ಪೋಲಿ ಎಂದು ಜರಿದಿದ್ದಾರೆ, ತಮಗೆಟುಕದ ಎತ್ತರೇಕ್ಕೇರಿದ ಕವಿಯನ್ನು ಅಭಿನಂದಿಸಿಯೂ ಇದ್ದಾರೆ..ಪ್ರಾಯಶಃ ಕವಿಯೊಬ್ಬನ ಸಮಗ್ರ ಕವಿತೆಗಳ ಹೆಸರಿನಲ್ಲಿ ಪ್ರಕಟವಾದ ಮೂರು ಸಂಪುಟ ಇವರೊಬ್ಬರದೇ ಇರಬೇಕು..ಕ್ಯಾಮರಾ ಕಣ್ಣು, ಜೀವ ಜಲ…..
ಈವರೆಗೂ ಪ್ರಕಟವಾದ ಅವರ ಎಲ್ಲ ಸಂಕಲನಗಳಲ್ಲಿ ಅವರ ಕವಿತೆಗಳಲ್ಲದೇ ಅನ್ಯ ಭಾಷೆಗಳ ಅನುವಾದಗಳನ್ನೂ ಅವರು ಪ್ರಕಟಿಸುತ್ತ ಬಂದಿರುವುದನ್ನು ಗಮನಿಸಲೇಬೇಕು. ಏಕೆಂದರೆ ಕವಿಯೊಬ್ಬ ತನ್ನ ಹಾದಿಯನ್ನು ನಿರ್ಮಿಸಿಕೊಳ್ಳುತ್ತ ಅದಕ್ಕೆ ಕಾರಣರಾದ ಪೂರ್ವ ಸೂರಿಗಳನ್ನೂ ಸಮಕಾಲೀನ ಕವಿಗಳನ್ನೂ ನೆನೆಯುವುದು ಕೃತಜ್ಞತೆಯ ಸಂಕೇತವಷ್ಟೇ ಅಲ್ಲದೆ ಕೃತಕೃತ್ಯದ ಋಣಭಾರದ ನೆನಕೆಯೂ ಆಗಿದೆ.
ಈ ಬರಹದ ತಾಕತ್ತು ಹೆಚ್ಚಿಸುವ ಸಲುವಾಗಿ ಇವರ ಸಂಕಲನಗಳ ಮುನ್ನುಡಿ ಬೆನ್ನುಡಿಗಳಾಚೆ ಇನ್ನೇನಾದರೂ ಸಿಗಬಹುದೇ ಎಂದು ಸಿದುಕುತ್ತಿದ್ದಾಗ ಈಗ್ಗೆ ಐದು ವರ್ಷಗಳ ಹಿಂದೆ ಅಂದರೆ ಇವರ ೭೦ನೇ ಹುಟ್ಟು ಹಬ್ಬದ ನೆವದಲ್ಲಿ ವಾರ್ತಾ ಭಾರತಿಯಲ್ಲಿ ಪ್ರಕಟವಾಗಿದ್ದ ಜಿ.ಎನ್. ರಂಗನಾಥ ರಾಯರ ಲೇಖನವೊಂದು ಸಿಕ್ಕಿತು. ಆ ಲೇಖನದ ಅಷ್ಟೋ ಇಷ್ಟೋ ಸಾಲುಗಳನ್ನೆಗರಸಿ ತಂದು ಇಲ್ಲಿಗೆ ಕಟ್ ಅಂಡ್ ಪೇಸ್ಟ್ ಮಾಡುವುದಕ್ಕಿಂತ ಇಡೀ ಲೇಖನವನ್ನೇ ಅನಾಮತ್ತು ಹೈಜಾಕ್ ಮಾಡಿ ಇಲ್ಲಿ ಹಾಕಿದರೆ ಅದು ಕವಿಯೊಬ್ಬನಿಗೆ ತೋರಿಸಬಹುದಾದ ಗೌರವವೇ ಆಗುತ್ತದೆ..
ಇರಲಿ, ೧೯೭೧, ಅಂದರೆ ನವ್ಯಕಾವ್ಯ ಉತ್ತುಂಗದಲ್ಲಿದ್ದಾಗ ಕಾವ್ಯಪ್ರಪಂಚಕ್ಕೆ ಕಾಲಿಟ್ಟ ಬಿ.ಆರ್.ಎಲ್. ನವ್ಯರ ಮನೋಧರ್ಮ ಶೈಲಿ ಮತ್ತು ಅಂತರ್ಮುಖತೆಯಲ್ಲೇ ಕಳೆದು ಹೋಗದೇ ಅನುಭವವನ್ನು ಮುಕ್ತವಾಗಿ ಹೇಳಿಕೊಂಡ ಕಾರಣಕ್ಕೇ ಏನೋ ನವ್ಯದ ಶಾಲೆಯು ವಿಧಿಸಿದ ಶಿಸ್ತುಬದ್ಧತೆ ಮತ್ತು ಪರಿಪಕ್ವತೆಯ ಪರೀಕ್ಷೆಗಳನ್ನೆದುರಿಸಲೇ ಇಲ್ಲ. ವಯೋಸಹಜ ಬಂಡಾಯ ಇದ್ದಿರಬಹುದೆಂಬ ಕಾರಣಕ್ಕೆ ಬಂಡಾಯದ ಪೆಂಡಾಲುಗಳಲ್ಲೂ ಇವರ ಮೂರ್ತಿ ಪ್ರತಿಷ್ಥಾಪನೆ ಆಗಲೇ ಇಲ್ಲ. ಸಮಾಜಮುಖೀ ಪದ್ಯಗಳನ್ನು ಬರೆದರೂ ವಾಸ್ತವ ಪ್ರಜ್ಞೆಯ ಮತ್ತು ಮೇಲ್ಜಾತಿಯ ಕವಿಯನ್ನು ದಲಿತ ಬಂಡಾಯಗಳು ಅನುಮಾನದಿಂದಲೇ ದೂರವಿಟ್ಟವು. ಅದಕ್ಕೆ ತಕ್ಕಂತೆ ಬಿ.ಆರ್.ಎಲ್. ಕೂಡ ನೇರವಾಗಿ ಯಾವುದೇ ಸಾಹಿತ್ಯ ಚಳುವಳಿಗಳ ಬ್ಯಾನರ್ ಹಿಡಿದುಕೊಂಡು ತಮ್ಮದೇ ಗುಂಪು ಕಟ್ಟಿಕೊಂಡು ರಾಜಕೀಯ ಮಾಡಲಿಲ್ಲ. ಮೊದಲು ಲಂಕೇಶ್ ಜೊತೆ ಇದ್ದರೂ ಆಮೇಲೆ ಎಂಭತ್ತರ ದಶಕದ ಉತ್ತರಾರ್ಧದಲ್ಲಿ ಎಚ್ಸೆಸ್ವಿ, ಎನ್ನೆಸ್ಸೆಲ್, ವ್ಯಾಸರಾವ್ ಜೊತೆ ಸೇರಿ ಭಾವಗೀತೆಗಳ ಕ್ಯಾಸೆಟ್ಟಿಗೆ ಬರೆಯತೊಡಗಿ ಜನಪ್ರಿಯ ಕವಿಯಾದರು. ನವ್ಯರಿಗೆ ಜನಪ್ರಿಯತೆ ಎಂಬುದೇ ಕಿರಿ ಕಿರಿ. ಹಾಗಾಗಿ ನವ್ಯದ ದಿವ್ಯ ಪ್ರಭೆಯಿಂದಲೇ ಹುಟ್ಟಿದ “ಗೋಪಿ ಮತ್ತು ಗಾಂಡಲೀನ” ಕವಿತೆ ಸುಬ್ಬಾಭಟ್ಟರ ಮಗಳೇ ಎನ್ನುವ ಕ್ಯಾಸೆಟ್ಟಿನ ಗೀತೆಯಾದಾಗ ಅದು ನವೋದಯದ ಹಾಡಾಗಿ ಬದಲಾಯಿತು. ಮತ್ತು ಹಾಡಾಗಿ ಬದಲಾದ ಕಾರಣಕ್ಕೇ ಪದ್ಯದ ಆಳದ ವಿಷಾದ ಹಾಡಿನ ಸೊಲ್ಲಿನಲ್ಲಿ, ಬ್ಯಾಂಡ್ ಸದ್ದಿನ ಲಯದಲ್ಲಿ ಲಯವಾಯಿತು. ಆದರೆ ಸಿ ಅಶ್ವಥ್ ಮತ್ತು ಮೈಸೂರು ಅನಂತ ಸ್ವಾಮಿ ಜೋಡಿ ಗೋಪಿಯನ್ನೂ ಗಾಂಡಲೀನಳನ್ನೂ ಕನ್ನಡಿಗರ ಮನೆ ಮನೆಗೂ ಮನಸ್ಸಿಗೂ ತಲುಪಿಸಿದ್ದಷ್ಟೇ ಅಲ್ಲದೆ ಕನ್ನಡ ಸಾಹಿತ್ಯ ಲೋಕದ ವಿಶೇಷ ಮನ್ನಣೆಗೆ ಪಾತ್ರವಾಗಿಸಿತು.
“ಬಿಡಲಾರೆ ನಾ ಸಿಗರೇಟು, ಹುಡುಗಿ ಅದು ನಿನ್ನಂತೆಯೇ ಅದು ಥೇಟು” ಎನ್ನುವ ಅವರ ಕವಿತೆಯನ್ನು ಕೇಳಿಯೇ ನನ್ನ ೨೨ನೇ ವಯಸ್ಸಿನಿಂದ ಅಂದರೆ ೧೯೮೮ರಿಂದ ನಾನು ಅವರನ್ನು ಓದತೊಡಗಿದೆ. ಆಗ ನವ್ಯದ ಕಾವು ಕಳೆದ ಬಂಡಾಯದ ಬಿರುಸಿನ ಜೊತೆಗೇ ದಲಿತ ಕಾವ್ಯ ತನ್ನ ವ್ಯಾಪಕತೆಯನ್ನು ವಿಸ್ತರಿಸುತ್ತಿದ್ದ ಕಾಲ. ಪ್ರತಿ ಗುರುವಾರ ಲಂಕೇಶ್ ಓದದೇ ಇದ್ದರೆ, ಪ್ರಜಾವಾಣಿಯ ಭಾನುವಾರದ ಪದ್ಯದ ಬಗ್ಗೆ ಮಾತನಾಡದೇ ಇದ್ದರೆ “ಕವಿ” / ಚಿಂತಕ ಎಂದು ಲೇಬಲ್ ಬೀಳದ ಕಾಲ. ಆದರೆ ಆ ಕಾಲದ ಪ್ರತಿಷ್ಠಿತ ಪತ್ರಿಕೆಗಳ ಯುಗಾದಿ ದೀಪಾವಳಿ ಸಂಚಿಕೆಗಳಲ್ಲಿ ಬಿಡದೇ ಪಬ್ಲಿಷ್ ಆಗುತ್ತಿದ್ದವರೆಂದರೆ ಬಿ.ಆರ್.ಎಲ್. ಮತ್ತು ಜಯಂತ ಕಾಯ್ಕಿಣಿ. ಇಬ್ಬರ ಕಾವ್ಯ ಯಾನದ ನಾವೆ ಮತ್ತು ಉದ್ದೇಶ ಬೇರೆ ಬೇರೆಯದೇ ಆದರೂ ಈ ಇಬ್ಬರೂ ಅಕಡೆಮಿಕ್ ವಲಯದ ಹಿನ್ನೆಲೆಯಿಲ್ಲದೆಯೂ ಜನಪ್ರಿಯರಾದದ್ದು ಬಹುಕಾಲ ನೆನಪಲ್ಲಿ ಉಳಿಯುವ ಹಾಗೆ ಬರೆದುದಕ್ಕಾಗಿ ಮತ್ತವಕ್ಕೆ ಯಾವುದೇ ಸಿದ್ಧಾಂತದ ಕೋಟು ಹ್ಯಾಟು ಸಿಕ್ಕಿಸದೇ ಸಹಜ ಸಾಲುಗಳ ಮೂಲಕ ಸಾಮಾನ್ಯ ಬದುಕಿನ ಅಸಾಮಾನ್ಯ ಕ್ಷಣಗಳನ್ನು ಕವಿತೆಯಾಗಿಸಿದ ಸಿದ್ಧಿಗಾಗಿ.
ಮಂತ್ರಕ್ಕಿಂತ ಉಗುಳೇ ಘನವಾಗುತ್ತಿರುವ ಕಾಲದಲ್ಲಿ ಮಂತ್ರ ದ್ರಷ್ಟಾರತೆ ಮತ್ತು ಮಂತ್ರ ಪಠಣಕ್ಕೆ ತಕ್ಕ ಗುರುಗಳೇ ಇಲ್ಲದ ಕಾಲದಲ್ಲಿ ಈ ಕವಿ ಅಕಾಡೆಮಿಕ್ ವಲಯದಲ್ಲಿಲ್ಲದ ಹಲವು ಏಕಲವ್ಯ ಶಿಷ್ಯರ ದ್ರೋಣ ಗುರುವಾಗಿದ್ದಾರೆ. ಸಿಕ್ಕಾಗಲೆಲ್ಲ ಬೆನ್ನು ತಟ್ಟಿ ಹೆಗಲ ಮೇಲೆ ಕೈ ಇಟ್ಟು ಕವಿತೆಗಳ ಕುರಿತು ಹಿತದ ಮಾತನಾಡಿ ತಪ್ಪಿದಾಗ ಕೈ ಹಿಡಿದು ಎತ್ತಿದ್ದಾರೆ.
ಗೋಪಿ ಮತ್ತು ಗಾಂಡಲೀನ ಸಂಕಲನದ ಕವಿತೆಗಳು ಬೇರೆ ಬೇರೆಯದೇ ರೂಪ ಧರಿಸಿ ಮತ್ತೆ ಮತ್ತೆ ಅವರ ಇತರ ಸಂಕಲನಗಳಲ್ಲೂ ಹಣಕಿವೆ. ಹಾಗೆ ಹಣುಕುವಾಗ ಆಯಾ ಕಾಲಕ್ಕೆ ತಕ್ಕಂತೆ ಬದಲಾದ ವೇಷ ಭೂಷಣ ಧರಿಸಿದ್ದರೂ ಮೂಲದ ನಡಿಗೆಯಲ್ಲೂ ಆಂತರ್ಯದ ವೈಚಾರಿಕತೆಯಲ್ಲೂ ರಾಜಿಯಾಗದ ಭಾವದಲ್ಲೇ ಮುಂದುವರೆದಿವೆ. ಮತ್ತು ಅದು ಹಾಗಾದಾಗ ಮಾತ್ರ ಕವಿ ಲೇಖಕ ಚಿಂತಕ ಒಂದು ವೈಚಾರಿಕ ಚೌಕಟ್ಟಿಗೆ ತನ್ನನ್ನು ತಾನು ಬದ್ಧನಾಗಿರುವುದನ್ನು ಸೂಚಿಸುತ್ತದೆ. ಹಾಗಿಲ್ಲದೆ ಬದಲಾದ ಕಾಲಕ್ಕೆ ತಕ್ಕಂತೆ ತನ್ನ ಬದ್ಧತೆಯನ್ನು ಬದಲಿಸುತ್ತ ಹೋಗುವವನು ಸಮಾಜದ ಕುರಿತು ಚರ್ಚಿಸುವ ನೈತಿಕತೆಯನ್ನೇ ಕಳೆದುಕೊಳ್ಳುತ್ತಾನೆ.
ಅವರ ಮೊದಲ ಸಂಕಲನದ ಮೊದಲ ಪದ್ಯವಾದ “ನಾನು” ಪ್ರಾಯಶಃ ನಮ್ಮೆಲ್ಲರ ಇತಿ-ಹಾಸ, ಭೂ-ಗೋಳ, ಸಮಾಜ- ವಿಜ್ಞಾನ. ಹಾಗಾಗಿಯೇ ಆ ಪದ್ಯ ನಮ್ಮೆಲ್ಲರ ಮುಕ್ತಿಗಾಗಿ ಬೇಡುತ್ತಲೇ ಇರುವ ನಿತ್ಯ ನೂತನ ಪ್ರಾರ್ಥನೆ. “ಅಪ್ಪ” ಪದ್ಯ ಬಂಡಾಯದ ಸೊಲ್ಲಿನ ನವ್ಯದ ಭೂಮಿಕೆಯ ವರ್ತಮಾನದ ವಸ್ತು ವಿಷಯದ ಮತ್ತು ಭವಿಷ್ಯದ ಕಾವ್ಯ ಚರಿತ್ರೆಯಲ್ಲೂ ಖಾಯಂ ಸ್ಥಾನ ಉಳಿಸಿಕೊಳ್ಳುವ ಸರ್ವಕಾಲಿಕ ಕವಿತೆ. “ಅಮ್ಮ” ಹೆಸರಿನ ಪದ್ಯವಂತೂ ಅದೆಷ್ಟು ಬಾರಿ ಹೊಸ ಹೊಸ ರೂಪ ಧರಿಸಿ ಭಾವಗೀತೆಯಾಗಿ, ಹಾಡಾಗಿ, ವಿವಿಧ ಗಾಯನ ಸ್ಪರ್ಧೆಗಳ ಖಾಯಂ ಐಟೆಂ ಸಾಗಾಂಗಿ ಇನ್ನೂ ಮತ್ತೂ ವ್ಯಾಪಿಸುತ್ತಲೇ ಇದೆ. “ವಾಸಂತಿ” ಅಮಾಯಕ ಅಸಹಾಯಕ ಹೆಣ್ಣಾಗಿದ್ದವಳು, ಅಪ್ಪನ ಗೃಹಸ್ಥ ಧರ್ಮದ ಗಂಧ ತೇಯುತ್ತಿದ್ದವಳು ಆಮೇಲಿನ ಕವಿತೆಗಳ ಪ್ರೇಯಸಿ ಆದಳು. “ನನ್ನ ಪ್ರೇಮ, ಊಟವಾದೊಡನೆ ಎಲೆ ಗೋಮ” “ಸುತ್ತ ಗುಂಯ್ಗುಡುವ ಹೆಣ; ನನ್ನ ಒಬ್ಬಂಟಿ ಹೆಣ” ಎಂದು ಸ್ವಂತದ ಶರಾ ಬರೆದುಕೊಂಡಿದ್ದ “ಪ್ರೇಮ-ಗೀಮ” ಆ ಕಾಲದ ಹಲವು ಪ್ರೇಮ ಕಥೆಗಳ ಬಗ್ಗೆ ಕವಿ ನೇರವಾಗಿ ಹೇಳಲಾರದೇ ಕವಿತೆಯ ಮೂಲಕ ಲೋಕವನ್ನೆಚ್ಚರಿಸಿದ ಕ್ರಮ ಎನಿಸುತ್ತದೆ.
“ಗೆಳೆಯರು” ಅನ್ನುವ ಪದ್ಯ “ಗೋಪಿ ಮತ್ತು ಗಾಂಡಲೀನ” ಸಂಕಲನದ ಮತ್ತೊಂದು ಹೆಚ್ಚುಗಾರಿಕೆಯ ಪದ್ಯ. ತನ್ನ ಗೆಳೆಯರ ಕುರಿತು ಹೇಳುವುದಕ್ಕಿಂತಲೂ ತಾನವರನ್ನು ಆಶ್ರಯಿಸಿರುವ ರೀತಿಯನ್ನು ಕವಿ ಅದ್ಭುತವಾಗಿ ಚಿತ್ರಿಸುತ್ತ “ಹಕ್ಕಿ ಹಾರಿಸಲಿಕ್ಕೆ,/ ಹಾರಿಸಿ ಗುಂಡಿಟ್ಟು ಕೊಲ್ಲಲಿಕ್ಕೆ, / ಅಂದರೆ, ಗುಂಡಿಗೆ, ತಿಂಡಿಗೆ, ಪುಂಡಾಟಕ್ಕೆ / ಭಗವದ್ಗೀತೆಗೆ/ ಮಾತಿಗೆ/ ಇರವಿನ ಸಾಬೀತಿಗೆ ಎಂದು ಕೊಂಡಾಡುವುದು ಈ ಕವಿಯ ಸ್ವಂತದ ಟಿಪ್ಪಣಿಯೋ ಅಥವ ಎಲ್ಲ ಕಾಲದಲ್ಲೂ ಪ್ರಚಲಿತವಾಗಿಯೇ ಇರುವ ಶ್ರೀಮಂತ ವರ್ಗದ ಗೆಳೆಯರ ಖಾಸಗಿ ಕೂಟಗಳ ಚಿತ್ರಣವೋ ಎನ್ನುವುದು ನಮ್ಮ ನಮ್ಮ ನಿಲುವಿಗೆ ಬಿಟ್ಟ ವಿಚಾರ.
ಜಾಯ್ಸ್ ಕಿಲ್ಮರ್ ಅನ್ನುವವನ ಮೂಲ ಕವಿತೆಯ ಅನುವಾದವಾದ ” ಮರ”ದ ಮೂಲ ಹುಡುಕಿ ಓದಿದರೆ ಈ ಪದ್ಯ ಆ ಮೂಲದ ನೆವದಲ್ಲಿ ಅರಳಿದ ಭಾವಾನುವಾದ.
ವಿಜ್ಞಾನ ಎನ್ನುವ ಹೆಸರಿನ ಪದ್ಯ ಸುರುವಾಗುವುದು “ಬಾಳೇ ಗೊನೆಯಂತಿದ್ದ ನಮ್ಮ ಮನೆಯ ಹಿತ್ತಿಲಲ್ಲಿ”. ಈ ಹಿತ್ತಿಲು ಪರಂಪರೆಯೇ, ಈ ಪರಂಪರೆ ತನ್ನದೇ ದರ್ಶನದಲ್ಲಿ ಕಟ್ಟಿಕೊಂಡ ನೆಲೆಗೆ ವಿಜ್ಞಾನವು ಅಪ್ಪಳಿಸಿದ ರೀತಿಗೆ ತನ್ನದೆಲ್ಲವನ್ನೂ ಕಳೆದುಕೊಂಡು ಅನಾಥವಾಯಿತೇ ಎನ್ನುವ ಕೊರಗಿದೆ.
ಸಾಕು ಎನ್ನುವ ಪದ್ಯದ ಶೀರ್ಷಿಕೆಯ ಅರ್ಥವನ್ನು “ಎನಫ್” ಎನ್ನುವ ಬದಲಾಗಿ “ಪೋಷಿಸು” ಎಂಬ ರೀತಿಯಲ್ಲಿ ಗ್ರಹಿಸಿ ಆಗ ಒಡ-ಮೂಡುವ ಅರ್ಥ ತೀರ ಭಿನ್ನವಾಗುತ್ತದೆ. ಕೂಚು ಭಟ್ಟ ಹೆಸರಿನ ಪದ್ಯ ಬರಿಯ ಓದಿನಲ್ಲೇ ಕಳೆದುಹೋದವನ ಕಥೆಯಾಗದೇ ಓದಲ್ಲದೆ ಬೇರೇನೂ ಅಸಾಧ್ಯವಾದ ಅಂದರೆ ಆಸ್ತಿ ಪಾಸ್ತಿ ಇಲ್ಲದವನ ಗೊಣಗಾಗಿದೆ.
ಗೋಪಿ ಮತ್ತು ಗಾಂಡಲೀನ ಕವಿತೆ ಕ್ಯಾಸೆಟ್ಟಿನ ಹಾಡಾದಾಗ ಟ್ಯೂನಿಗೆ ತಕ್ಕಂತೆ ತನ್ನ ಸ್ವರೂಪವನ್ನು ಬದಲಿಸಿಕೊಂಡಿತು. ಆದರೆ ಮೂಲದಲ್ಲಿ ಕಡೆಯ ಸಾಲಿನ “ಜಾರಿ ಬಿದ್ದನೋ” ಅನ್ನುವ ಹಳೆಯ ಜೋಕೊಂದರ ಪರಿಣಾಮವನ್ನು ಮತ್ತು ನಿಜಕ್ಕೂ ಇದ್ದ ಪೋಲಿತನದ ಪ್ರಭೆಯನ್ನೂ ಕಳಕೊಂಡಿತು.
ಸಖೀಗೀತದ ಶಕೂ, ಅಪ್ಪ, ಅಟ್ಲಸ್ ಆವರಿಸುವ ನವ್ಯದ ಪ್ರಭೆ ಮುಂದಿನ ಅವರ ಸಂಕಲನಗಳಲ್ಲಿ ಬೇರೆಯದೇ ರೀತಿ ಮತ್ತೆ ಮತ್ತೆ ಪ್ರಕಟಗೊಂಡಿದ್ದನ್ನು ನಾವೆಲ್ಲರೂ ಬಲ್ಲೆವು.
ಪ್ರೇಮದ ತುರೀಯದಲ್ಲಿ ತನ್ನನ್ನು ತಾನೇ ಸಮರ್ಪಸಿಕೊಂಡ ಕುರುಹಾಗಿ ರೇಷ್ಮೆ ನೂಲಾಗಿ ಪ್ರಿಯತಮೆಯ ಜರತಾರಿ ಸೀರೆ ಆಗುವ ಕಲ್ಪನೆಯೇ ವಿಶಿಷ್ಠವಾದದ್ದು, ಅಪ್ರತಿಮವಾದದ್ದು.ರೊಟ್ಟಿ, ಒಬ್ಬಂಟಿ ಪದ್ಯಗಳು ಪ್ರಾಯಶಃ ಎಕೆಆರ್ ಹಾಗೆ ಮತ್ತೇನೋ ಪ್ರಯೋಗ ಮಾಡಿದ ರಚನೆಗಳು. ಬಿ.ಆರ್.ಎಲ್. ಅವರ ನಿತ್ಯನೂತನ ಪದ್ಯವೆಂದರೆ ಅದು ಫೋಟೋಗ್ರಾಫರ್. ಅದರ ಕುರಿತು ಈಗಾಗಲೇ ಸಾಕಷ್ಟು ಚರ್ಚೆಗಳೂ ಮತ್ತು ಕವಿಯ ಮನಸ್ಸಲ್ಲಿ ಉಳಿದ “ನೆಗೆಟೀವ್” ಗಳು ಓದುಗನ ತಲೆಯಲ್ಲಿ ಖಾಯಂ ಆಗಿ “ಧನಾತ್ಮಕ” ಭಾವಗಳಾಗಿ ಉಳಿದದ್ದು ಕವಿಗೂ ಕವಿತೆಗೂ ಸಿಕ್ಕ ಗೌರವವೇ ಹೌದು.
ಡಿ ಎಚ್ ಲಾರೆನ್ಸ್ ಪದ್ಯದ ರೂಪಾಂತರ, ಕೆಳಗೆ ಆ ಕವಿಯ ಹೆಸರಿರದಿದ್ದರೆ ಅದು ಬಿ.ಆರ್.ಎಲ್. ಅವರದ್ದೇ ಇರಬೇಕು ಅನ್ನುವಷ್ಟು ಬಿ.ಆರ್.ಎಲ್. ಶೈಲಿಯನ್ನು ಹೊತ್ತಿದೆ. “ಕೇಳಿ” ಎನ್ನುವ ಪನ್ ಪಂಡಿತ ಮಂಡಿತ ಸ್ವಾಲಂಕೃತ ಪದ್ಯ. ಸಾಲು ಸಾಲಿನ ನಡುವೆ ಇರುವ ಇಲ್ಲದಿರುವ ಲೋಕ ಗೂಢ ಮತ್ತು ಪ್ರೌಢ! ಶಶಿಯ ಮೊರೆ ಹೆಸರಿನ ಪದ್ಯ ಕೂಡ ಪೋಲಿ ಪಟಾಲಮ್ಮಿನ ಹೆಸರಲ್ಲಿ ಬಿತ್ತಿದ ಭಯದ ಬೀಜ. ಸಂಕಲನದ ಕಡೆಯ “ಹಸಿರು ಹಾವು” ಪದ್ಯ ಕುರಿತೂ ಈಗಾಗಲೇ ಸಾಕಷ್ಟು ಚರ್ಚೆ, ವಾದ ನಡೆದದ್ದು ಇತಿಹಾಸ. ಈ ಪದ್ಯ ಕೂಡ ಲಾರೆನ್ಸನ ಸ್ನೇಕ್ ಪದ್ಯದ ಮತ್ತೊಂದು ಕೊಂಡಿಯೇ ಇರಬಹುದೆನ್ನುವ ನನ್ನ ಊಹೆಯನ್ನು ಸಮರ್ಥಿಸಲು ತಟ್ಟನೆ ಯಾವ ಪಾಯಿಂಟು ಸಿಗದೆ ಹೋದರೂ ಈ ಲಕ್ಷ್ಮಣರಾಯರು ತಾವೆಳದ ಗೆರೆಯಲ್ಲಿ ತಾವೇ ಬಂಧಿಯಾಗಿ ನವ್ಯದ ಟಿಸಿಲಲ್ಲೇ ನವೋದಯದ ಹಾಡಿನ ಭಾವಲಹರಿಯನ್ನೂ,ಬಂಡಾಯದ ಕಿಚ್ಚನ್ನೂ ಜಾಗತೀಕರಣ ಕಾಲದ ತಬ್ಬಲಿತನವನ್ನೂ ಮಿಶ್ರ ಮಾಡಿ ಬೇರೆಯದೇ ಆದ ಪಾಕ ಪ್ರಾವೀಣ್ಯತೆಯಲ್ಲಿ ಮೆರೆಯುತ್ತಿದ್ದಾರೆಂದೂ ಆ ಕಾರಣಕ್ಕೇ ಅವರನ್ನು ಸುಲಭಕ್ಕೆ ಕನ್ನಡ ಕಾವ್ಯ ಚರಿತ್ರೆ ಮರೆಯಲಾಗದೆನ್ನುವ ವಿನಮ್ರ ಅನಿವಾರ್ಯ ಮಾತಿನೊಂದಿಗೆ ಈ ಬರಹವನ್ನು ಮುಗಿಸುತ್ತಿದ್ದೇನೆ.
ಹೆಚ್ಚಿನ ಬರಹಗಳಿಗಾಗಿ
ಬೇಲಿಯೇ ಎದ್ದು…..
ಗಣೇಶನ ಕೈಯಲ್ಲಿಯ ಲಾಡು
ನೋ ಪಾರ್ಕಿಂಗ್