- ಕನ್ನಡ ಕವಿಗಳಲ್ಲಿ ಪ್ರಜ್ವಲಿಸುತ್ತಿರುವ ದೀಪಮಾಲೆ - ಅಕ್ಟೋಬರ್ 27, 2024
- ಚಿಕ್ಕಣಿರಾಜ ಕೃತಿಯ ಜೀವಾಳ ಪುಟ್ಟ - ಸೆಪ್ಟೆಂಬರ್ 12, 2024
- ಹಾಲಾಡಿಯಲ್ಲಿ ಹಾರುವ ಓತಿ - ಜುಲೈ 20, 2024
‘ಚಿಕ್ಕಣಿ ರಾಜ’ ಕೆ.ವಿ. ತಿರುಮಲೇಶರ ಮಕ್ಕಳ ಕವನ ಸಂಕಲನ . ತಿರುಮಲೇಶರು ಮಕ್ಕಳ ಮನೋಲೋಕಕ್ಕೆ ಇಳಿದು ಬರೆದಿರುವ ಕವನಗಳು ಅಕ್ಷರಶಃ ಮಕ್ಕಳ ಮನಸ್ಸಿನ ಕನ್ನಡಿಯಂತಿವೆ. ಆಡು ಮಾತಿನ ಸೊಗಸಿನಲ್ಲಿ ಲಹರಿಯಾಗಿ ಬಂದಿರುವ ಒಂದೊಂದು ಕವಿತೆಗಳು ಓದುಗರನ್ನು ಅವರ ಬಾಲ್ಯಕ್ಕೆ ಕರೆದೊಯ್ಯುತ್ತವೆ ಮನಸ್ಫೂರ್ತಿಯಾಗಿ ಕ್ಷಣ ಕಾಲ ನಕ್ಕು ಅದನ್ನೆ ಮತ್ತೆ ನೆನಪಿಸಿಕೊಳ್ಳುವಂತಾಗುತ್ತದೆ ಒಂದು ಕವಿತೆಗೆ ಇಷ್ಟು ಸಾಕು ಅನ್ನಿಸುತ್ತದೆ ಅದರ ಮಹತಿಯನ್ನು ವಿವರಿಸಲು.
ಮಕ್ಕಳ ಪ್ರಾರ್ಥನೆಯನ್ನು ಭಗವಂತ ಬೇಗನೆ ಆಲಿಸುತ್ತಾನೆ ಎನ್ನುತ್ತಾರೆ ಅಂತೆಯೇ ಇಲ್ಲಿ ಮೊದಲೊಂದಿಪೆ ನಿನಗೆ ಗಜಾನಾನ ಎನ್ನುವಂತೆ ಗಣಪತಿಯನ್ನು ಗುರುಗಳನ್ನು ಸ್ಮರಿಸಿ ನಾಡೋಜ ಪಂಪನನ್ನೂ ಸ್ಮರಿಸಿಕೊಂಡು ‘ವರ್ಣಮಾತ್ರಂ ಕಲಿಸಿದಾತಂ ಗುರು’ ಎನ್ನುವಂತೆ ಕವಿ ಹಿರಿಯನೊ ಕಿರಿಯನೋ ಅವನೂ ಸ್ತ್ಯುತ್ಯಾರ್ಹ ಎನ್ನುತ್ತಾ ಸ್ಮರಿಸುವಿಕೆಯನ್ನು ಮಿಂಚುಹುಳದ ಮಿಂಚು ಬೆಳಕಿಗೆ ಹೋಲಿಸುತ್ತಾರೆ.
ಪುಟಾಣಿ ಲೋಕದ ಈ ಕವಿತೆಗಳು ಅಕ್ಷರಶಃ ಮಕ್ಕಳ ಮನೋಲೋಕವನ್ನು ತೆರೆದಿಡುತ್ತದೆ ಅದಕ್ಕೆ ಪುರಕವಾದ ಚಿತ್ರವೂ ಕವಿತೆಯ ಉದ್ದೇಶವನ್ನು ಇಮ್ಮಡಿಸಿದೆ. ಹೂತೋಟ, ಸುರಿಯುವ ಮಳೆ,ಹರಿಯುವ ಹೊಳೆ,ಜೋಕಾಲಿ,ಹಕ್ಕಿಗೂಡು,ಜೇನುಗೂಡು, ಅಣಬೆ, ಜೇಡರ ಬಲೆ ಇವುಗಳ ನಡುವೆ ಬೆಳೆಯುವ ಮಕ್ಕಳು ಅವುಗಳೊಂದಿಗೆ ಕಲೆತು ಜೀವನವನ್ನು ಕಲಿಯುವ ಮಕ್ಕಳು ನಿತ್ಯ ಬಾಲ್ಯ ಇರಲಿ ಎಂದು ಬಯಸುವ ಬಯಕೆ ಸಾಧು ಎನ್ನಿಸುತ್ತದೆ.
ತುಂಟತನಕ್ಕೆ ಇನ್ನೊಂದು ಹೆಸರು ಮಕ್ಕಳು ಎಂದೇ ‘ಪೋಲಿಕಿಟ್ಟ’ ಎನ್ನುವ ಕವಿತೆಯಲ್ಲಿ ಲಡ್ಡು,ಬೆಣ್ಣೆ ಕದ್ದು ಅಪ್ಪನ ಚದ್ದರ ಹೊದ್ದವರು ಕಿಟ್ಟನೋ ಪುಟ್ಟನೋ ಎನ್ನುವಾಗ ಪುಟ್ಟ ಎನ್ನುವ ಉತ್ತರ ಬರುತ್ತದೆ ಆದರೆ ಬೇಸರವಾಗುವುದು ಇಂದಿನ ಮಕ್ಕಳಿಗೆ ಲಡ್ಡು ಬೆಣ್ಣೆಗಳು ಹಿಡಿಸುವುದಿಲ್ಲ ಅಪ್ಪನ ಚದ್ದರದೊಳಗೋ ಅಜ್ಜಿ ತಾತನ ಚದ್ದರದೊಳಹೊಕ್ಕು ಬೆಚ್ಚಗೆ ಸುಖಿಸುವ ಮನಃಸ್ಥತಿ ಈಗಿಲ್ಲ ಬುದ್ಧಿ ಬರುವುದಕ್ಕೂ ಮೊದಲೆ ಮಕ್ಕಳ ಹೆಸರಿನ ಪ್ರತ್ಯೇಕ ಕೊಠಡಿಗಳಿವೆ ಅವರಿಗೆ ನಾವು ಕೊಡಿಸುವ ಆಧುನಿಕ ತಿಂಡಿಗಳ ಪಟ್ಟಿಯೇ ಬೇರೆ ಇದೆ. ನಮ್ಮ ಬಾಲ್ಯ ನಮ್ಮ ಮಕ್ಕಳಿಗೆ ಇಲ್ಲ ಎನ್ನುವ ಕೊರಗು ನಮ್ಮನ್ನು ಇಲ್ಲಿ ಕಾಡುತ್ತದೆ. “ಆಡಿ ಬಾ ಎನ ಕಂದ ಅಂಗಾಲ ತೊಳೆದೇನ” ಎನ್ನುವ ಜಾನಪದ ಅಮ್ಮಂದಿರು ಮಕ್ಕಳ ಆಟದ ಬಗ್ಗೆ ಹೇಳುವಂತೆ ಇಲ್ಲಿ ತಿರುಮಲೇಶರು ಮಕ್ಕಳ ಅಂಗಿ ಚಂಡಿಯಾಗಿದೆ, ತಲೆಯ ಮೇಲೆ ಹುಲ್ಲಿನ ಕಡ್ಡಿಯಿದೆ, ತಲೆಯಲ್ಲಿ ರಕ್ತದ ಗುರುತಿದೆ,ಕೈ ಗೆ ಬೇಕಂತಲೆ ಮೆತ್ತಿಸಿಕೊಂಡ ಇಂಕಿನ ಗುರುತಿದೆ ಇವೆಲ್ಲಾ ಮಕ್ಕಳಾಟದ ವಿಭಿನ್ನ ಅವತಾರಗಳು ಎನ್ನುತ್ತಾರೆ.
ಮಕ್ಕಳು ಅತ್ಯಂತ ಇಷ್ಟಪಡುವ ಸಾಕುಪ್ರಾಣಿ ಎಂದರೆ ಬೆಕ್ಕು ಅದನ್ನು ಬೆಕ್ಕಿನ ಕಣ್ಣುಗಳು ಎನ್ನುವ ಪದ್ಯದಲ್ಲಿ ಬರೆಯುತ್ತಾರೆ. ಕತ್ತಲಲ್ಲೆ ಬೆಕ್ಕಿದೆ ಎಂದು ಗೋಚರಿಸುವುದು ಅವುಗಳ ಹೊಳೆಯುವ ಕಣ್ಣುಗಳ ಮೂಲಕವೆ ಎನ್ನುವುದನ್ನು ಬಾಲ,ಕಾಲು, ಕೈ,ಹೊಟ್ಟೆ,ಮೀಸೆ,ಮೂತಿಗಳು ಮಾಯವಾಗಿ ಕಡೆಗೆ ಉಳಿಯುವುದು ಕಣ್ಣುಗಳು ಮಾತ್ರ ಎನ್ನುತ್ತಾರೆ. ಕೆಲವೊಮ್ಮೆ ಮಕ್ಕಳ ಕೀಟಲೆಗೆ ಹೈರಾಣಾಗಿ ಕತ್ತಲಲ್ಲಿ ಅವಿತು ಕಣ್ಣುಗಳ ಮೂಲಕ ಸಿಕ್ಕಿ ಬೀಳುವ ಬೆಕ್ಕಿನ ಅವಸ್ಥೆಯನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
ಮನೆಯ ಮುದ್ದು ಅಧ್ಯಕ್ಷೆ ಎಂದರೆ ಆ ಮನೆಯ ಪುಟ್ಟ ಹೆಣ್ಣು ಮಗುವೆ ಆ ಮಗುವಿನ ಸಂಕೇತ ಮುದ್ದು ಮಾತು,ಬೊಂಬೆಗಳು ಬಣ್ಣದ ಲಂಗ ಅದಕ್ಕೆ ಮ್ಯಾಚಿಂಗ್ ರಿಬ್ಬನ್ ಹೆಜ್ಜೆ ಹೆಜ್ಜೆಗೂ ಸದ್ದು ಮಾಡುವ ಪೀಪಿ, ಶೂಗಳನ್ನು ಇಲ್ಲಿ ತಿರುಮಲೇಶರು ನೆನಪಿಸಿಕೊಂಡಿದ್ದಾರೆ.
ಶಿಶುವಿನಿಂದ ಮಕ್ಕಳ ಗುಂಪಿಗೆ ಸೇರುವ ಮಕ್ಕಳಿಗೆ ಸಾಮಾನ್ಯ ಜ್ಞಾನ ಬೆಳೆಸುವುದೂ ಹೊಣೆಗಾರಿಕೆ ವಾರಗಳ ಹೆಸರನ್ನು ಸೋಮ್ವಾರವೇನೋ ತಮ್ಮ ಎಂಬ ಪದ್ಯದ ಮೂಲಕ ಒಂದರಿಂದ ಹತ್ತರವರೆಗಿನ ಅಂಕಿಗಳ ಪರಿಚಯವನ್ನು ಏನು ಬೇಕೋ ಪುಟ್ಟ ಎನ್ನುವ ಕವಿತೆಗಳ ಮೂಲಕ ಹೇಳಿದ್ದಾರೆ ಇಲ್ಲಿ ಸಹಜವಾಗಿ ಬಂದಿರುವ ಖಾದ್ಯಗಳ ಹೆಸರುಗಳು ಸಿಹಿರೊಟ್ಟಿ, ಖಾರದ ರೊಟ್ಟಿಗಳು ದೊಡ್ಡವರ ಬಾಯಲ್ಲೂ ನೀರೂರಿಸುತ್ತವೆ. ಯಾರಿಗೆ ಏನಾಯ್ತು ಎನ್ನುವ ಪದ್ಯದಲ್ಲಿ ಪ್ರಾಣಿಗಳ ಜೈವಿಕ ರಚನೆಯ ಅಧಾರದಲ್ಲಿ ಅವುಗಳ ಪರಿಚಯ ಮಾಡಿಕೊಟ್ಟಿರುವುದು ವಿಶೇಷವೆನಿಸಿದೆ. ಊಟದ ಪಾಠಕವಿತೆಯಲ್ಲಿ ಮಕ್ಕಳು ಹೇಗೆ ಊಟಕ್ಕೆ ಕುಳಿತುಕೊಳ್ಳಬೇಕು ನಂತರ ಅಕ್ಷರಾಭ್ಯಾಸ, ಅಕ್ಷರಾಭ್ಯಾಸದಲ್ಲೂ ಆಲೂಪರಾಟ, ಶ್ಯಾವಿಗೆ ಪಾಯಿಸ, ಉಪ್ಪಿಟ್ಟು, ಊತಪ್ಪ ಹೋಳಿಗೆ ಇತ್ಯಾದಿಗ ಪರಿಚಯವನ್ನು ಮಾಡಿಕೊಡುತ್ತಾರೆ.
ಏನೇ ಆಗಲಿ ಮಕ್ಕಳಿಗೆ ಹಿರಿಯರು ಕೊಟ್ಟಿದ್ದನ್ನು ತಿನ್ನುವುದಕ್ಕಿಂತ ಕದ್ದು ತಿನ್ನುವುದರಲ್ಲೇ ಅತ್ಯಂತ ಖುಷಿ ಅದೇ ಇಲ್ಲಿ ಪುಟ್ಟನ ಮೂಲಕ ವಿವರಿಸಿದೆ ಹಾಉ,ಹಣ್ಣು,ಖರ್ಜೂರ, ಜೇನು ಇತ್ಯಾದಿ ಪೌಷ್ಟಿಕ ಆಹಾರಗಳ ಪರಿಚಯವೇ ಇದೆ. ಬೆಟ್ಟ ಪುಟ್ಟ ಬೇರೆಯಲ್ಲ ಪುಟ್ಟನೆ ಎಲ್ಲಾ ಅನ್ನುವಲ್ಲಿಗೆ ಈ ಕವಿತೆ ಸಮಾಪ್ತಿಯಾಗುತ್ತದೆ.
‘ಬಿಟ್ಟರೆ ಸಿಕ್ಕ’ ಎನ್ನುವಂತೆ ಮಕ್ಕಳನ್ನು ಹಿಡಿಯುವುದು ಕಷ್ಟ ಅಂತೆ ಮಕ್ಕಳು ಮಾತು,ಸ್ನಾನ ಓದನ್ನು ಮರೆತರೂ ಆಟ,ಊಟ ಓಟವನ್ನು ಬಿಡುವುದಿಲ್ಲ ಎನ್ನುತ್ತಾರೆ ಇದರರ್ಥ ಆಟ ಊಟ ಪಾಠವೇ ಮುಖ್ಯ ಎಂಬಬುದಾಗಿದೆ. ಹಿರಿಯರು ಎಷ್ಟು ಮುದ್ದು ಮಾಡುದರೂ ಮಕ್ಕಳ ಮುನಿಸನ್ನು ಕೆಲವೊಮ್ಮೆ ತಗ್ಗಿಸಲು ಸಾಧ್ಯವಾಗುವುದಿಲ್ಲ ಅದನ್ನೇ ಇಲ್ಲಿ ಆಟ ಆಡಿದ್ದು ಕಾಟ ಕೊಟ್ಟಿದ್ದು ಎಲ್ಲ ಮುಗಿದ ಮೇಲೆ ನಾಳೆಯಿಂದ ತೆಪ್ಪಗೆ ಶಾಲೆಗೆ ಹೊರಡು ಎನ್ನುವಂತೆ ‘ಸಿಟ್ಟು ಯಾತಕೋ’ ಎನ್ನುವ ಕವನ ರಚನೆಯಾಗಿದೆ.
ಮಕ್ಕಳಿಗೆ ಏನಾದರು ವಸ್ತುಗಳನ್ನು ಹಂಚಿ ಎಂದು ಕೊಟ್ಟರೆ ಅವರಿಗೆ ಬೇಕಾದ್ದನ್ನು ಉಳಿಸಿಕೊಂಡು ಉಳಿದ್ದದ್ದನ್ನು ಇತರರಿಗೆ ಕೊಡುತ್ತಾರೆ ಅಂತೆಯೇ ಇಲ್ಲಿ ದೀಪಾವಳಿಯ ಸಂದರ್ಭದಲ್ಲಿ ಪುಟ್ಟನ ಕೈಗೆ ಸಿಹಿ ಹೇಗೆ ಬಂತು ಎನ್ನುವ ಸಂದರ್ಭದಲ್ಲಿಯೂ ಹಂಚುವ ಹೊಣೆಗಾರಿಕೆ ಅವನ ಮೇಲೆ ಇದ್ದರೆ ಸಂಚು ಹೂಡಿ ತನ್ನಿಷ್ಟದ ವಸ್ತುವನ್ನು ತನ್ನದಾಗಿಸಿಕೊಳ್ಳುತ್ತಾನೆ ಎನ್ನುವ ಅಂತಃಸತ್ವ ಇಲ್ಲಿದೆ.
ನಾಟಕದ ಕಣ್ಣೀರಿಗೆ ಮೊಸಳೆ ಕಣ್ಣೀರು ಎನ್ನುವಂತೆಯೇ ಇಲ್ಲಿ ಹಾಸ್ಯ ಜೊತೆಗೆ ವಿಡಂಬನೆ ಎನ್ನುವಂತೆ ತಿರುಮಲೇಶರು ಮೊಸಳೆ ಮತ್ತು ಬೆಕ್ಕಿನ ಸಂಭಾಷಣೆಯನ್ನು ತಂದಿದ್ದಾರೆ. ನಿನ್ನ ಸ್ನೇಹಿತ ನನ್ನ ಹೊಟ್ಟೆ ಸೇರಿದ್ದಾನೆ ನೀನು ಬಾ ಎಂದು ಬೇಟೆಯ ಸಂಚನ್ನು ತೋರಿಸಿದರೆ ಬೆಕ್ಕು ಅಷ್ಟೇ ಲೀಲಾಜಾಲವಾಗಿ “ನಾನು ಬರಲ್ಲ ನಾವಿಬ್ರೂ ಈಗ ಜಗಳ ಮಾಡಿಕೊಂಡಿದ್ದೇವೆ” ಎಂದು ಹೇಳುತ್ತದೆ . ಶಕ್ತಯಿಂದಾಗದ್ದನ್ನು ಉಪಾಯದಿಂದ ಪಡೆಯಬೇಕು ಎನ್ನುವುದಕ್ಕೆ ಇದು ಸೂಚಕವಾಗಿ ಬಂದಿದೆ.
ಏನೇ ಮಾಡಿದರೂ ಪರಂಪರೆಯೋ ರಕ್ತಗತವೋ ಎಂಬಂತೆ ನಾವು ಭಗವಂತನನ್ನು ನೆನೆಯುತ್ತೇವೆ ಅಂತೆಯೇ ಸೂರ್ಯ ದೇವರ ಸ್ಮರಣೆಯೂ ಹಣ್ಣು ಎನ್ನುವ ಕವಿತೆಯಲ್ಲೂ ಪುಟ್ಟಗಾಳಿ,ಮಂಗ, ಅಳಿಲು, ಪಕ್ಷಿಗಳಿಗೂ ಹಣ್ಣುಗಳನ್ನು ಕೊಟ್ಟಮೇಲೆ ಸೂರ್ಯನಿಗೂ ಕೊಡುವುದನ್ನು ಮರೆಯಲಾರ.
ಎಷ್ಟೇ ಆದರೂ ಭಾಷಾ ತಜ್ಞ ತಿರುಮಲೇಶರು ನಾವಾಡುವ ಅವಳಿ ಪದಗಳನ್ನು ಮಕ್ಕಳ ಪದ್ಯದಲ್ಲೂ ತಂದಿದ್ದಾರೆ ಉದಾಹರಣೆಗೆ ರೊಟ್ಟಿ-ಗಿಟ್ಟಿ ಹಾಲು-ಗೀಲು ಎನ್ನುತ್ತೇವೆ ಇಲ್ಲಿ ಮೊದಲ ಪದಕ್ಕೆ ಅರ್ಥವಿದ್ದರೆ ಎರಡನೆ ಪದಹಾಗೆ ವಿಶೇಷ ಅರ್ಥವಿಲ್ಲದೆಯೆ ಬಂದು ಬಿಡುತ್ತದೆ ಅದನ್ನೆ ಇಲ್ಲಿ ಬೆಣ್ಣೆ-ಗಿಣ್ಣೆ,ತುಪ್ಪ -ಗಿಪ್ಪ, ಹಪ್ಪಳ-ಗಿಪ್ಪಳ ಅನ್ನುವುದನ್ನು ತಂದು ಖುಷಾಲಿಗೆ ಪುಟ್ಟನನ್ನು ಪೆಟ್ಟು ಬೇಕೋ ಗಿಟ್ಟುಬೇಕೋ ಎಂದರೆ ಜಾಣ ಪುಟ್ಟ ಗಿಟ್ಟು ಬೇಕು ಎನ್ನುತ್ತಾನೆ. ಹಾಸ್ಯದೊಂದಿಗೆ ಮಕ್ಕಳಬುದ್ಧಿವಂತಿಕೆಯ ಸೂಕ್ಷ್ಮತೆಯನ್ನು ಇಲ್ಲಿ ತಂದಿದ್ದಾರೆ .’ರೋಮತ್,’ ‘ನಾಪಾಸು’ ಪದ್ಯಗಳು ಪದಚಮತ್ಕಾರದಿಂದ ಕೂಡಿವೆ.ಕಣ್ಣಲ್ಲಿ ನೀರು ತರಿಸುವ ಈರುಳ್ಳಿ ಕುರಿತು ಎರಡು ಪದ್ಯಗಳು ಇವೆ. ಹಿರಿಯರಿಗೆ ಬೆಲೆ ಹೆಚ್ಚಾಗಿ ನೀರು ತರಿಸುವುದು ಬೇರೆ ಅದರೆ ಇಲ್ಲಿ ಈರುಳ್ಳಿಯ ವಿಶೇಷತೆಯನ್ನು ಮಕ್ಕಳ ಧಾಟಿಯಲ್ಲಿಯೇ ಹೇಳಿದ್ದಾರೆ.
ಮಕ್ಕಳ ಕತೆಗಳಲ್ಲಿ ಬರುವ ನರಿ,ಬೆಕ್ಕು , ಮಂಗ, ಆನೆ ಕಾಗೆ ಗಳು ಅವುಗಳಿಗೆ ಇಷ್ಟವಾದ ಬೆಣ್ಣೆ, ಬಾಳೆ , ಕಬ್ಬು, ಭತ್ತ, ಸೌತೆಯನ್ನು ಇಲ್ಲಿ ಹೇಳಿದ್ದಾರೆ ಅದರ ಜೊತೆಗೆ ಮಕ್ಕಳು ಸಹಜವಾಗಿ ಇಷ್ಟಪಡುವ ಕುರುಂ ಕುರುಮ ಹಪ್ಪಳದ ಸದ್ದೂ ಇದೆ.ಸಹಜವಾಗಿ ಪ್ರಾಣಿಗಳು ವಾಸಿಸುವ ಸ್ಥಳವನ್ನು ಇಲ್ಲಿ ಮಕ್ಕಳಿಗೆ ವಿನೋದವಾಗಿಯೇ ವಿವರಿಸುತ್ತಾರೆ. ಹುಲಿಗೆ ಕಾಡು, ಬೆಕ್ಕಿಗೆ ಒಲೆ ಮೂಲೆ, ಕೋತಿಯ ಲಾಗ, ಕಪ್ಪೆಯ ಗುಟುರು ಸೃಷ್ಟಿಯ ವೈಚಿತ್ರ್ಯವನ್ನು ಅವುಗಳು ಮಾಡುವ ಸಹಜ ಸದ್ದಿನ ಮೂಲಕ ಮಕ್ಕಳಿಗೆ ಪರಿಚಯಿಸುವ ಪರಿ ಅನನ್ಯಯವಾಗಿದೆ.
ಬಾಲ್ಯ ಕಳೆದು ಯೌವ್ವನ ಮುಪ್ಪು ಅನ್ನುತ್ತಿದ್ದಂತೆ ಮನುಷ್ಯ ಬೇಕಿಲ್ಲದಷ್ಟು ಗಂಭೀರವಾಗಿಬಿಡುತ್ತಾನೆ ಆದರೆ ಹಾಗೆ ಮಾಡಕೊಡದೆ ಮಕ್ಕಳು ಹಿರಿಯರು ಯೋಚಿಸದ್ದನ್ನು, ತಮ್ಮಿಂದ ಆಗದ ಕೆಲಸಗಳನ್ನು ಸಾಹಸ ಎಂಬಂತೆ ಮಾಡಹೊರಡುವ ಪರಿ ಇಲ್ಲಿ ಮತ್ತೆ ಜೀವನೋತ್ಸಾಹವನ್ನು ತುಂಬುತ್ತದೆ. ದೋಸೆಯ ಕಣ್ಣುಗಳನ್ನು, ಗಿಡದ ಹೂವನ್ನು, ಆಗಸದ ತಾರೆಗಳನ್ನು ಎಣಿಸುವ ಕೆಲದಸವನ್ನು ಪುಟ್ಟಿ ಮಾಡುತ್ತಾಳೆ ಸಾಹಸ ಕೆಲಸಗಳನ್ನು ಮಾಡಿ ಆಯಾಸಗೊಂಡು ಈಗ ವಿಶ್ರಾಂತಿ ಪಡೆದಿದ್ದಾಳೆ ಎಂದು ಆಯಾಸದಿಂದ ನಿದ್ದೆಗೆ ಜಾರುವ ಮಕ್ಕಳ ಪ್ರತಿನಿಧಿ ಪುಟ್ಟಿ ಇಲ್ಲಿದ್ದಾಳೆ.
ಯಾವ ಮಾಮನನ್ನು ಬಿಟ್ಟರು ನಾವು ಮಕ್ಕಳಿಗೆ ಚಂದ ಮಾಮನನ್ನು ಪರಿಚಯಿಸದೆ ಬಿಡುವುದಿಲ್ಲ . ‘ಚಂದಮಾಮ’, ‘ಎಲ್ಲೆಲ್ಲೂ ಚಂದಿರ’, ‘ಚಂದಿರ 2’, ‘ಉತ್ತರ’ ಎನ್ನುವ ಕವಿತೆಗಳಲ್ಲಿ ಬಂದಿದೆ. ‘ಪುಟ್ಟನ ಇಜಾರ ‘ಎನ್ನುವ ಕವಿತೆಯಂತೂ ಹಾಸ್ಯ ಹಾಗು ಗಂಭೀರತೆಯಿಂದ ಕೂಡಿರುವ ಕವಿತೆಯಾಗಿದೆ.
ಮಕ್ಕಳಾಟವನ್ನು ಭಗವಂತ ಕೂಡ ಆಡಲಾರನು ಎಂಬಂತೆಯೆ ಕನ್ನಡಿಯ ಮುಂದೆ ಕುಳಿತ ಮಗು ತನ್ನನ್ನು ಕಂಡು ಅಚ್ಚರಿ ಪಡುವುದು ,ಫೋಟೊದಲ್ಲಿ ತನ್ನನ್ನು ಕಂಡು ಹಿಗ್ಗುವುದು ಟಿವಿಯಲ್ಲಿ ಕಾಣುವ ದೃಶ್ಯಗಳಿಗೆ ಅಚ್ಚರಿ ವ್ಯಕ್ತಪಡಿಸುವದು ಮಕ್ಕಳ ಮನದಿಂಗಿತ ಮಾತ್ರವಲ್ಲ ಹಿರಿಯರೂ ಅಚ್ಚರಿಪಡಬೇಕಾಂಥ ಸಂಗತಿಯೇ .
‘ಪುಸ್ತಕ’ ಎಂಬುದು ಕೆಲವೊಮ್ಮೆ ಮಕ್ಕಳಿಗೆ ಮಾಡದ ಹೋಂವರ್ಕ್ನಿಂದ,ಕೆಲಸಕಳ್ಳತನದಿಂದ, ತಾವು ಬಚಾವಾಗುವ ಆಯುಧ ಇದ್ದಂತೆ ಅದನ್ನು ಇಲ್ಲಿ ಚೆನ್ನಾಗಿ ಹೇಳಿದ್ದಾರೆ. ಊಟಕ್ಕೆ ಉಪ್ಪಿನ ಕಾಯಿ ಸೊಗಯಿಸುವಂತೆ ಬಾಯಲ್ಲಿ ನೀರು ತರಿಸುವ ಮಕ್ಕಳು ಕದ್ದು ತಿನ್ನುತ್ತಿದ್ದ ಉಪ್ಪಿನಕಾಯಿ ಕುರಿತ ಪದ್ಯ ಇಲ್ಲಿ ಚೆನ್ನಾಗಿ ಬಂದಿದೆ ಅದರೆ ಈಗಿನ ಮಕ್ಕಳಿಗೆ ಇದು ವರ್ಜ್ಯ ಎನ್ನುವುದೇ ಅಪಸವ್ಯ.
ಮಕ್ಕಳು ಯಾವ ರೀತಿಯ ಪುಸ್ತಕಗಳನ್ನು ಓದಬೇಕು ಎನ್ನುವ ಪಟ್ಟಿಯನ್ನು ಇಲ್ಲಿ ಮಾಡಿದ್ದಾರೆ.ಬೆಕ್ಕು ಕೂಡ ದಿನಕ್ಕೊಂದು ಬಣ್ಣವನ್ನು ಬದಲಿಸುತ್ತದೆ ಒಂದು ದಿನ ಹೆಬ್ಬುಲಿ ಬಣ್ಣ, ಇನ್ನೊಮ್ಮೆ ಚುಂಡಿಲಿ ಬಣ್ಣ ಮಂತ್ರಿ-ಕುತಂತ್ರಿ ಬಣ್ಣ ಎನ್ನುತ್ತಾ ಹಾಗೆ ಅದು ಬದಲಾಗುವುದಕ್ಕೆ ನಿಲ್ಲುವ ನೆಲ,ನೆಲೆ ಕಾರಣ ಹಾಗೆ ಮನುಷ್ಯ ಸಮಯ ಸಂದರ್ಭಕ್ಕೆ ಬದಲಾಗುತ್ತಾನೆ ಎನ್ನುತ್ತಾರೆ. ಕೋಳಿಗೆ ಬೆಳಗಾಯಿತು ಎಂದು ಹೇಗೆ ಗೊತ್ತಾಗುತ್ತದೆ ಎನ್ನುವುದನ್ನು ಆಧುನಿಕ ಪರಿಕ್ರಮಕ್ಕೆ ಅನ್ವಯಿಸಿ ಹೇಲಿರುವ ಕ್ರಮ ಅನನ್ಯವಾಗಿದೆ.
‘ರಾಜ ಗೆಲ್ಲಲಿಲ್ಲ’ ಅನ್ನುವ ಪದ್ಯ ಗಂಭೀರ ಯೋಚನೆ ಮೂಡಿಸುವಂತದ್ದು. ರಾಜ ಗೆಲ್ಲಲು ಅವನಿಗೆ ಮಾತ್ರ ಮನಸ್ಸಿದ್ದರೆ ಸಾಲದು ಅವನ ಪರಿವಾರವೂ ಸಹಾಯ ಮಾಡಬೇಕು ಅವರುಗಳಲ್ಲಿ ಕರ್ತವ್ಯ ಲೋಪವಾದರೆ ರಾಜನಿಗೆ ಸೋಲಾಗುತ್ತದೆ ರಾಜ ಅಧಿಕಾರದ ಕೇಂದ್ರವಾದರೂ ಅವನ ಮಂತ್ರಿಗಳು,ಸೈನಿಕರಲ್ಲಿ ಒಗ್ಗಟ್ಟಿರಬೇಕು. ಒಗ್ಗಟಟಿನಲ್ಲಿ ಬಲವಿರಬೇಕು ಎನ್ನುವುದನ್ನು ಈ ಪದ್ಯದಲ್ಲಿ ನೋಡಬಹುದು.
‘ಕಟಾಣಿ ಇರುವೆ’ ಪದ್ಯ ಇರುವೆ ಎನ್ನುವುದು ಕೇವಲ ಸಾಲಿನ ಶಿಸ್ತಿಗೆ ಹೆಸರಾಗಿರುವ ಜೀವಿಯಲ್ಲ ಗೂಡಾರ್ಥವನ್ನು ಹೊಂದಿರುವ ಕವಿತೆಯಾಗಿದೆ ಪುರಂದರದಾಸರ ‘ರಾಗಿ ತಂದೀರಾ’. ಕನಕದಾಸರ ‘ಪರಮಪುರುಷ ನೀ ನೆಲ್ಲಿಕಾಯಿ’ ಎನ್ನುವ ಕೀರ್ತನೆಗಳು ಇಲ್ಲಿ ನೆನಪಾಗುತ್ತವೆ. ‘ನೃಪತಿಗೆ ಆತ್ಮವಿಚಾರವೂ ಬೇಕು ಭೋಗವಿಚಾರವೂ ಬೇಕು’ ಎಂದು ರತ್ನಾಕರವರ್ಣಿ ಹೇಳಿರುವಂತೆ ಮಕ್ಕಳ ಬೆಳವಣಿಗೆಗೆ ಬೇಕಾದ ಬಾಲ್ಯ ಹಾಸ್ಯ, ಸಾಮಾನ್ಯ ಜ್ಞಾನ , ಮೌಲ್ಯಗಳನ್ನು ತಿರುಮಲೇಶರು ‘ಚಿಕ್ಕಣಿ ರಾಜ’ ಎನ್ನುವ ಮಕ್ಕಳ ಕವನ ಸಂಕಲನದಲ್ಲಿ ಮಕ್ಕಳಂತೆಯೆ ಹೇಳಿದ್ದಾರೆ. ಓದಿದ ಹಿರಿಯರು ಒಂದಷ್ಟು ವರ್ಷ ಹಿಂದಕ್ಕೆ ಸರಿದು ಜೀವನೋತ್ಸಾಹ ಹೆಚ್ಚಿಸಿಕೊಳ್ಳುವ ರೀತಿ ಇಲ್ಲಿ ಲಹರಿಯಾಗಿದೆ. ಕೃತಿಯ ತುಂಬೆಲ್ಲಾ ಪುಟ್ಟ ಓಡಾಡುತ್ತ ಪುಟ್ಟಿಯನ್ನು ಕಿಟ್ಟುವನ್ನು ತರುವುದು ಮನಸ್ಸಿಗೆ ಸಂತೋಷವನ್ನು ನೀಡುತ್ತದೆ. ಇಂಥ ಮಕ್ಕಳ ಕವಿತೆಗಳ ಮಕ್ಕಳನ್ನು ತಲುಪುತ್ತಿಲ್ಲ ಅನ್ನುವುದೇ ಬೇಸರದ ಸಂಗತಿ.
ಸುಮಾವೀಣಾ
ಹೆಚ್ಚಿನ ಬರಹಗಳಿಗಾಗಿ
ನೋ ಪಾರ್ಕಿಂಗ್
ಪುತಿನ ರ ವಸಂತ ಚಂದನ
ಅಳಿಯ ದೇವೋಭವ !