- ಬೇಲಿಯೇ ಎದ್ದು….. - ಸೆಪ್ಟೆಂಬರ್ 29, 2024
- ಗಣೇಶನ ಕೈಯಲ್ಲಿಯ ಲಾಡು - ಸೆಪ್ಟೆಂಬರ್ 22, 2024
- ನೋ ಪಾರ್ಕಿಂಗ್ - ಆಗಸ್ಟ್ 29, 2024
ಈ ಎರಡರಲ್ಲಿ ಒಂದು ಎನ್ನುವ ಮೂಲಭೂತ ಉದ್ದೇಶ, ನನಗನಿಸಿದ ಹಾಗೆ ಮನುಜನ ಸೃಷ್ಟಿಯಷ್ಟೇ ಹಳೆಯದು. ಅಲ್ಲ ಅಲ್ಲ. ಇನ್ನೂ ಪುರಾತನವಾದದ್ದು. ಎಂದಾಗ ನಮ್ಮ ಹುಡುಕಾಟ ಬಹುಕಣ ಜಂತುಜಾಲದ ಸೃಷ್ಟಿಯವರೆಗೆ ಒಯ್ಯಬಹುದು. ಈ ಜಂತುಜಾಲವನ್ನು ಸೃಷ್ಟಿಸುವಾಗ ದೇವರು ( ಅಥವಾ ಪ್ರಕೃತಿ ಎನ್ನಬಹುದು) ಈ ಉದ್ದೇಶ ಪ್ರಕಟಿಸಿದ್ದಾನೆ. ತಾನು ಸೃಷ್ಟಿಸಿದ ಪ್ರಾಣಿಗಳ ಹಲವಾರು ಅಂಗಗಳಲ್ಲಿ ಈ ಗುರುತರ ಉದ್ದೇಶವನ್ನು ಯಶಸ್ವಿಯಾಗಿ ಅಳವಡಿಸಿದ್ದು ಕಂಡು ಬರುತ್ತದೆ. ಉದಾಹರಣೆಗೆ ನಾವು ಮೂಗಿನಿಂದ ಉಸಿರಾಡುತ್ತೇವೆ ಮತ್ತು ಮೂಸುತ್ತೇವೆ. ನಾಲಿಗೆಯಿಂದ ಮಾತನಾಡುತ್ತೇವೆ ಹಾಗೇ ರುಚಿ ನೋಡಲು ಅದು ಬೇಕು. ನಮ್ಮ ಎದೆ ರಕ್ತ ಸರಬರಾಜಿನ ಪಂಪು ಮತ್ತು ಎಲ್ಲ ತರದ ಸಂವೇದನೆಗಳ ಆಗರ. ಮೆದಳು ಸರ್ವ ನರ್ವುಗಳ ಅಧಿನೇತ ಮತ್ತು ಬುದ್ಧಿಯ ಅಳತೆಗೋಲು. ಹಾಗಲ್ಲದೇ ಪ್ರತಿ ಕಾರ್ಯಾಚರಣೆಗೂ ಒಂದೊಂದು ಬೇರೇ ಅಂಗವು ಏರ್ಪಾಡಾಗಿದ್ದು ಅವುಗಳನ್ನು ದೇಹದಲ್ಲಿ ಹೇಗೋ ಜೋಡಿಸಿದ್ದಲ್ಲಿ ನಮ್ಮ ಆಕಾರ ಹೇಗಿರುತ್ತಿತ್ತೋ ಊಹಿಸಲಸಾಧ್ಯ. ಹಾಗಾದರೆ ನಮ್ಮ ಈ ದೇಹ ರಚನೆ ಒಂದು ಉತ್ಕೃಷ್ಟ ತಾಂತ್ರಿಕತೆಯ ಸಂಕೇತವಲ್ಲದೆ ಮತ್ತೇನು ! ಇದಕ್ಕಿಂತ ಮತ್ತೆ ಬೇರೇ ಯಾವ ರೀತಿಯ ಮೋಡೆಲ್ ಗಳು ಇನ್ನುವರೆಗೆ ತಯಾರಾಗದೇ ಇವೆ ಎಂದರೇ ಇದು ಒಂದು ಅಸಾಮಾನ್ಯ ವಿನ್ಯಾಸ ಎಂದು ನಾವು ಹೇಳಬಹುದಾಗಿದೆ. ಆರಡಿ ಎತ್ತರ ( ಸರಾಸರಿ ಅಳತೆ ಮಾತ್ರ) ಮತ್ತು ಒಂದಡಿ ಅಗಲದ ಈ ದೇಹದಲ್ಲಿ ಒಂದಿಂಚೂ ಪೋಲಾಗದ ಹಾಗೆ, ಮತ್ತೆ ಏನೇನು ಅಗತ್ಯವೋ ಎಲ್ಲವನ್ನೂ ಹೊಂದಿಸಿರುವುದೂ, ಮತ್ತೆ ಈ ವಿನ್ಯಾಸ ಯುಗಾಂತರಗಳಿಂದ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದು, ಜೀವರಾಶಿಗಳಲ್ಲೇ ಅತಿ ಬುದ್ಧಿವಂತನೆನಿಸಿಕೊಳ್ಳುವ ಪಟ್ಟಕ್ಕೆ ಏರಿದ್ದು ನೋಡಿದರೆ ಈಗಿನ ಇಂಜಿನಿಯರ್ ಗಳ ಜಾಗ ಉಳಿಸಿ ಕಟ್ಟುವ ತಂತ್ರಜ್ಞಾನ ಅತಿ ಸಾಧಾರಣವೆನಿಸದೇ ಇರದು.
ಇಷ್ಟು ವೇದಾಂತದ ತಳಪಾಯವಿದ್ದರೂ ಈ ರೀತಿ ಒಂದೇ ಅಂಗಕ್ಕೆ ಎರಡೆರಡು ಕಾರ್ಯಗಳನ್ನು ಮಾಡುವ ಈ ಪ್ರಕ್ರಿಯೆಗೆ ನಮ್ಮವರು ಒಂದು ಹೆಸರು ನೀಡಲಿಲ್ಲ. ಪಾಶ್ಚಾತ್ಯರು ಇಂಥ ಒಂದು ಯಂತ್ರವನ್ನೇ ತಯಾರಿಸಿ ಅದಕ್ಕೆ“ಟೂ ಇನ್ ಒನ್” ಅಂತ ಹೆಸರಿಟ್ಟು ಮಾರುಕಟ್ಟೆಗೆ ಬಿಟ್ಟು ಹಣ ಮಾಡಿದರು. ನಾವೀಗ ಆ ಹೆಸರನ್ನೇ ಮೂಲಪ್ರತಿಯಾಗಿಸಿ ಅದಕ್ಕೇ ಮನ್ನಣೆ ನೀಡುತ್ತಿದ್ದೇವೆ. ನಮ್ಮ ವಿಶೇಷ ಗುಣಗಳನ್ನು ಬೇರೇ ಯಾರೋ ತೋರಿಸಬೇಕು ನಮಗೆ ! ನಮ್ಮ ಅರಿಶಿಣವನ್ನು ಅಮೆರಿಕದವರು ಪೇಟೆಂಟ್ ಮಾಡುತ್ತಾರೆ, ಬಸ್ಮತಿ ಅಕ್ಕಿಯು ಮತ್ತೊಬ್ಬರು ನಮ್ಮದೆನ್ನುತ್ತಾರೆ. ನಾವು ಅವರು ಅದೆಲ್ಲ ಮಾಡಿಯಾದ ಮೇಲೆ ಅದು ಮೂಲತಃ ನಮ್ಮದೇ ಎನ್ನುವ ಒಂದು ಕ್ಷೀಣ ದನಿ ಹೊರಡಿಸಿ ಸುಮ್ಮನಾಗುತ್ತೇವೆ. ಹೀಗೇ ನಮ್ಮ ವಿಜ್ಞಾನವೆಲ್ಲ ಸೋರಿ ಹೋಗಿದೆ. ಅದಿರಲಿ.
ಇಷ್ಟು ಪುರಾತನವಾದ ಈ ಮನುಷ್ಯನ ನಮೂನೆ ಅತ್ಯುತ್ತಮವಾಗಿ ಕೆಲಸ ಮಾಡುತ್ತಿರುವಾಗ ನಂತರ ಹೊರಬಂದ ಟೂ ಇನ್ ಒನ್ ಯಂತ್ರಗಳು ಅದೇಕೆ ಸರಿಯಾಗಿ ಕೆಲಸ ಮಾಡುವುದಿಲ್ಲ ಎಂದು ನನಗೆ ತಿಳಿಯದಾಗಿದೆ.
ಈ ಸರಣಿಯಲ್ಲಿ ಎಂಬತ್ತರ ದಶಕದ ಕ್ರೇಜ್ ರೇಡಿಯೋ ಮತ್ತು ಟೇಪ್ ರಿಕಾರ್ಡರ್ ಎರಡನ್ನೂ ಒಂದರಲ್ಲೇ ಸೇರಿಸಿಕೊಂಡ ಟೂ ಇನ್ ಒನ್. ಬಹಳಷ್ಟು ದಿನ ಇದು ಚಾಲ್ತಿಯಲ್ಲಿತ್ತು ಮತ್ತು ಬೇಡಿಕೆಯಲ್ಲಿತ್ತು ಸಾಧಾರಣ ಎಲ್ಲರ ಮನೆಯ ಪಡಸಾಲೆಗಳಲ್ಲಿಯ ಟೇಬಲ್ ಗಳ ಮೇಲೆ ಇಂಥದೊಂದು ಇರಲೇ ಬೇಕಿತ್ತು. ನಾನೂ ಒಂದು ಚಿಕ್ಕ ಸೆಟ್ಟನ್ನು ಖರೀದಿಸಿದ್ದೆ. ಕೆಲ ದಿನ ಎರಡರ ಮಜಾ ತೊಗೊಂಡಾಯಿತು. ರೇಡಿಯೋ ದಲ್ಲಿ ಬರುವ ಇಷ್ಟವಾದ ಹಾಡುಗಳನ್ನು ಅದರಲ್ಲೇ ಇರುವ ಟೇಪ್ ರಿಕಾರ್ಡರ್ ನಲ್ಲಿ ಮುದ್ರಿಸಿ ಆನಂದ ಪಟ್ಟೆ.
ನಂತರ ಒಂದು ದಿನ ರೇಡಿಯೋ ಕೆಲಸ ಮಾಡಲಿಲ್ಲ. ಅದರ ಡಾಕ್ಟರ್ ರ ಹತ್ತಿರ ತೋರಿಸಿದೆ. ಅವನೊಂದು ಸೊಟ್ಟ ನಗೆ ನಕ್ಕು “ ಇದು ಟೂ ಇನ್ ಒನ್ ಅಲ್ವಾ ಸಾರ್ ! ಇದರಲ್ಲಿ ರೇಡಿಯೋ ವೀಕು “ ಅಂದ. ಯಾಕೆ ಎಂದಿದ್ದಕ್ಕೆ “ಎರಡರ ಪಾರ್ಟುಗಳು ಒಂದರಲ್ಲೇ ಹೊಂದಿಸಬೇಕಲ್ವಾ ಸಾರ್. ಹೇಗಾಗುತ್ತೆ ನೀವೇ ಹೇಳಿ. ಅದಕ್ಕೆ ಇದರಲ್ಲಿ ಟೇಪಿಗೆ ಜಾಸ್ತಿ ನಿಗಾ ಕೊಡ್ತಾರೆ.” ಅಂದ.
ನನಗೆ ಆಗ ಈ ಭಗವಂತನ ಟೂ ಇನ್ ಒನ್ ನೆನಪಾಗಿ ಪುಣ್ಯ, ಅವನು ಮಾಡಿದ ಟೂ ಇನ್ ಒನ್ ಈ ತರ ಇಲ್ಲವಲ್ಲ ಅಂತ ನೆಮ್ಮದಿಯಾಯಿತು. ಉಸಿರಾಟ ಮುಖ್ಯ ಅಂತ ಎಣಿಸಿ ಮೂಸುವ ಗುಣವನ್ನು ಕಡೆಗಾಣಿಸಿದ್ದಲ್ಲಿ ನಮ್ಮಪಾಡೇನಾಗುತ್ತಿತ್ತು? ಮಾತಾಡುವುದು ಸರಿ ಇರಬೇಕು ಅಂತ ಹೇಳಿ ರುಚಿ ಗೊತ್ತಾಗುವ ಹಾಗೆ ಮಾಡದಿದ್ದಲ್ಲಿ ! ನೆನೆಸಿಕೊಳ್ಳಲಿಕ್ಕೆ ಭಯವಾಯ್ತು.ಆದರೆ ಇನ್ನೂವರೆಗೆ ಹಾಗೆ ಆಗಿಲ್ಲ. ಅದಕ್ಕೆ ಆತನ ಸೃಷ್ಟಿ ಮಹತ್ತರವಾದದ್ದು. ಈಗ ಮಾರ್ಕೆಟ್ ಗೆ ಬರುವ ಕೆಲ ಮೊಬೈಲುಗಳಲ್ಲಿ ಕೆಮೆರಾಗೆ ಒತ್ತುಕೊಟ್ಟು ಉಳಿದವುಗಳ ಬಗ್ಗೆ ಹೊಂದಾಣಕೆಯಾದದ್ದು ಕಂಡು ಬರುತ್ತದೆ.
ಇದಾದ ನಂತರ ತ್ರೀ ಇನ್ ಒನ್ ಫೋರ್ ಇನ್ ಒನ್ ಗಳು ಮಾರುಕಟ್ಟೆಗೆ ಬಂದರೂ ನನ್ನ ಮೇಲ್ಕಾಣಿಸಿದ ಅನುಭವದ ಆಧಾರದ ಮೇಲೆ ಖರೀದಿಸಲು ಹೋಗಲಿಲ್ಲ. ಇವುಗಳ ಕೊಂಡವರ ದೂರುಗಳನ್ನು ಕೇಳಿಸಿಕೊಳ್ಳುತ್ತಿದ್ದೆ. ಎಲ್ಲವೂ ಸುಸೂತ್ರವಾಗಿ ಕೆಲಸ ಮಾಡುತ್ತಿಲ್ಲವೆಂದು ಎಲ್ಲರ ದೂರು. ಯಾವುದು ವೀಕ್ ಎನ್ನುವುದು ಅದು ಕೈಕೊಟ್ಟ ಮೇಲೇ ಮಾತ್ರ ತಿಳಿದು ಬಂದು, ಅದರ ಸಲುವಾಗೇ ಕೊಂಡದ್ದಾದರೆ ಕೈ ಕೈ ಹಿಸುಕಿಕೊಳ್ಳುವುದು ಬಿಟ್ಟರೇ ಬೇರೇ ದಾರಿ ಇರುತ್ತಿದ್ದಿಲ್ಲವೆಂಬುದು ವಾಸ್ತವದ ಸಂಗತಿ.
ನಾವು ಕಾಲೇಜಿನಲ್ಲಿ ಓದುವಾಗ ಒಂದು ಇಂಗ್ಲೀಷಿನ ಪಾಠವಿತ್ತು. ಅದರ ಹೆಸರು ನನಗೆ ಈಗ ನೆನಪಿಲ್ಲ. ಅದರಲ್ಲಿಯ ನಾಯಕ ( ಬರಹಗಾರನದೇ ಅನುಭವ ಇದ್ದಿರಲಿಕ್ಕೆ ಸಾಕು ) ನಾಲ್ಕು ತರ ಉಪಯೋಗ ಆಗಬಹುದಾದ ಒಂದೇ ವಸ್ತುವನ್ನು ಮಾರ್ಕೆಟಿಂಗ್ ನವರ ಮಾತು ಕೇಳಿ ಖರೀದಿ ಮಾಡುತ್ತಾನೆ. ಅದು ಏಣಿ, ಮೇಜು, ಕುರ್ಚಿ ಮತ್ತು ಸ್ಟೂಲ್ ಆಗಿ ಕೆಲಸಕ್ಕೆ ಬರುತ್ತದೆ ಎಂದು ಹೇಳಿ ಇವನಿಗೆ ಮಾರಾಟ ಮಾಡಿರುತ್ತಾರೆ. ಅದು ಈ ಬಹು ಉಪಯೋಗೀ ಕೆಲಸಗಳನ್ನೇನೋ ಮಾಡುತ್ತದೆ, ಆದರೆ ಇವನಿಗೆ ಬೇಕಾದ ಹಾಗಲ್ಲ. ಇವನಿಗೆ ಮೇಜು ಬೇಕಾದಾಗ ಕುರ್ಚಿಯಾಗುತ್ತದೆ, ಏಣಿ ಬೇಕಾದಾಗ ಮೇಜಾಗುತ್ತದೆ. ಹೀಗ. ಕೊನೆಗೆ ಬೇಸತ್ತು ಬಿಸಾಡುತ್ತಾನೆ.
ಮನುಷ್ಯ ತನ್ನ ಬುದ್ಧಿಯನ್ನೆಲ್ಲ ಖರ್ಚು ಮಾಡಿ ತಯಾರು ಮಾಡುವ ಒಂಥ ಬಹು ಉಪಯೋಗಿ ವಸ್ತುಗಳು ನಿರರ್ಥಕವಾಗುತ್ತಿದ್ದಾಗ ಭಗವಂತನ ಈ ಮಹೋನ್ನತ ಬಹು ಉಪಯೋಗೀ ರಚನೆಯನ್ನು ನಾವು ಎಷ್ಟು ಕೊಂಡಾಡಿದರೂ ಸ್ವಲ್ಪ ಅಲ್ಲವೇ ಸ್ನೇಹಿತರೇ !
ಹೆಚ್ಚಿನ ಬರಹಗಳಿಗಾಗಿ
ಬೇಲಿಯೇ ಎದ್ದು…..
ಗಣೇಶನ ಕೈಯಲ್ಲಿಯ ಲಾಡು
ನೋ ಪಾರ್ಕಿಂಗ್