ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಡಿವಿಜಿಯವರ ಅಂತಃಪುರ ಗೀತೆಗಳಲ್ಲಿ ನವರಸಗಳು, ಶಾಸ್ತ್ರೀಯರಾಗಗಳು

ಸುಮಾ ವೀಣಾ

“ವಿಶ್ವಚೇತನದ ಸ್ಪಂದನವೇ ಸೌಂದರ್ಯ. ಅದುವೆ ಜೀವನ, ಮೂಲ ಬಂಧುರತೆ ಬೊಮ್ಮನದು” ಎಂದು ಡಿ.ವಿ.ಜಿಯವರು ‘ಮಂಕುತಿಮ್ಮನ ಕಗ್ಗ’ದಲ್ಲಿ ಹೇಳಿರುವಂತೆ ಸೌಂದರ್ಯ ಸೃಷ್ಠಿ ಹಾಗು ದೃಷ್ಠಿಯ ಶುಭ ಹೊನಲು. ಸೌಂದರ್ಯವನ್ನು ಹಿಗ್ಗಿಸುವ ಸಾಧನ ಶೃಂಗಾರ. ನಾಟ್ಯ, ಸಂಗೀತ, ಕಾವ್ಯಗಳ ರಸಾಯನವೇ ‘ಅಂತಃಪುರಗೀತೆಗಳು’ ಕೃತಿ. ದೇವಾಲಯವನ್ನು ಆಶ್ರಯಿಸಿ ಅದಕ್ಕೆಂದೇ ಪ್ರತ್ಯೆಕ ಕೃತಿ ರಚನೆಯಾದ ಉದಾಹರಣೆ ನಮ್ಮಲಿಲ್ಲ. ಅದಕ್ಕೆ ಅಪವಾದವೆಂಬಂತೆ ನಾಯಕ, ನಾಯಕಿಯರ ಹಾವ, ಭಾವ, ನೃತ್ಯ ವಿಲಾಸಕ್ಕೆ ಪೂರಕವಾಗಿ ಶಿಲ್ಪವನ್ನು ಆಧರಿಸಿದ ವಿಶಿಷ್ಠ ಕೃತಿ. ‘ಅಂತಃಪುರಗೀತೆಗಳು’ ಕೃತಿಯು ಬೇರೆ ಕಾವ್ಯಗಳಲ್ಲಿರುವಂತೆ ನಾಂದಿ ಮುಕ್ತಾಯ, ದೇವೀಸ್ತುತಿ ಮಂಗಳ ಪದ್ಯಗಳನ್ನು ಒಳಗೊಂಡಿದೆ. ಸ್ವತಃ ಸಂಗೀತ ವಿದ್ವಾಂಸ ಡಿ.ವಿ.ಜಿ ತಾಳ, ರಾಗ, ಪಲ್ಲವಿ ಅನುಪಲ್ಲವಿಗಳೊಂದಿಗೆ ಸ್ಥಿತವಾಗಿರುವ ಈ ಕೃತಿಯನ್ನು ಓದುಗರ ಕೈಗಿತ್ತಿದ್ದಾರೆ. ನೃತ್ಯ ಸಂಯೋಜಕರು ಹಾಗು ಹಾಡುಗಾರರು ಅಂತಃಪುರಗೀತೆಗಳನ್ನು ನೃತ್ಯರೂಪಕಗಳಲ್ಲಿ ಲಘುಶಾಸ್ತ್ರೀಯ ಧಾಟಿಯಲ್ಲಿಯೂ ಅಳವಡಿಸಿ ಪ್ರೇಕ್ಷಕರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದ್ದಾರೆ.

‘ರಸ’ ಎಂಬುದು ಅತ್ಯಂತ ಪ್ರಾಚೀನವಾದ ಶಬ್ದ, ಋಗ್ವೇದ ಸಂಹಿತೆಯಲ್ಲಿಯೂ ಇದರ ಬಳಕೆ ಇದೆ. ‘ರಸ’ ಈ ಪದ ‘ಅರ್ಷ್’ ಎಂಬ ಧಾತುವಿನಿಂದ ಬಂದಿದೆ ಇದಕ್ಕೆ ಆಸ್ವಾದಿಸು , ಆರ್ದ್ರ ಎಂಬ ಅರ್ಥಗಳಿವೆ. ನವರಸಗಳು ಅಂದಾಗ “ಆಸ್ವಾದಯಂತು ಮನಸಾ ತಸ್ಮಾನ್ನಾಟ್ಯ ರಸಾಃ ಶೃಂಗಾರ ಹಾಸ್ಯ ಕರುಣಾ ರೌದ್ರ ವೀರ ಭಯಾನಕಃ ಭೀಭತ್ಸಾದ್ಭುತ ಸಂಜ್ಞಾ ಚೇತ್ಯೇಷ್ಠೌ ನಾಟ್ಯೇ ರಸಾಃ ಸ್ಮೃತಾಃ” ಎಂಬ ರಸಗಳಿದ್ದವು ಅದರ ಜೊತೆಗೆ ಶಾಂತ ರಸವನ್ನು ಸೇರಿಸಲಾಗಿದೆ, ಇದರ ಜೊತೆಗೆ ಸ್ನೇಹ, ಪ್ರಕೃತಿಃ, ಪ್ರೇಯಾನ್, ಸಾಹಚರ್ಯ , ವಾತ್ಸಲ್ಯ, ಭಕ್ತಿ, ಮಾಯಾ, ಕಾರುಣ್ಯ ಮುಂತಾದವುಗಳು ಉಪಷ್ಟಂಬಕವಾಶಗಿ ಬರುತ್ತವೆ ಎಂದು ಮೀಮಾಂಸಕರು ಹೇಳುತ್ತಾರೆ. ನವರಸಗಳಿಗೆ ಹೊಂದಿಕೆಯಾಗುವ ‘ಅಂತಃಪುರಗೀತೆಗಳು’ ಕೃತಿಯ ಗೀತೆಗಳನ್ನು ಶೃಂಗಾರಾದಿ ರಸಗಳಿಂದ ತೌಲನಿಕವಾಗಿ ನೋಡುವ ಚಿಕ್ಕ ಪ್ರಯತ್ನವಿದು.

ಶೃಂಗಾರ’ ರಸವು ಸರಸ ಸಲ್ಲಾಪ, ಇನಿಯ ಅಥವಾ ಇನಿಯಳ ಭೇಟಿ ಇತ್ಯಾದಿಗಳನ್ನು ಸೂಚಿಸುತ್ತವೆ. ಇದರ ಸ್ಥಾಯಿ ಭಾವ ‘ರತಿ’. “ಕಾವ್ಯಂ ಆನಂದಾಯ” ಎಂಬಂತೆ ಮನಸ್ಸಿಗೆ ಸಂತೋಷವನ್ನು ಶೃಂಗಾರ ಕೊಡುತ್ತದೆ. . ಇಲ್ಲಿ ಕಣ್ಣುಗಳ ಚಲನೆಯೇ ಮುಖ್ಯವಾಗಿರುತ್ತದೆ. ಇದಕ್ಕೆ ಉದಾಹರಣೆಯೆಂದರೆ ಕಾಳಿದಾಸನ ‘ಶಾಕುಂತಲ’ ನಾಟಕ. ನಾಟಕದ ಆದಿ ‘ಸಂಭೋಗ ಶೃಂಗಾರ’ಕ್ಕೆ ಉದಾಹರಣೆಯಾದರೆ ಅಂತ್ಯ ಭಾಗ ‘ವಿಪ್ರಲಂಭ ಶೃಂಗಾರ’ಕ್ಕೆ ಉದಾಹರಣೆಯಾಗಿದೆ. ಶೃಂಗಾರವನ್ನು ಪ್ರತಿನಿಧಿಸುವ ರಾಗಗಳಲ್ಲಿ ಕಲ್ಯಾಣಿ ರಾಗ ಮುಖ್ಯವಾದದ್ದು. ಇದು ರಾಗಗಳ ರಾಣಿ ಎಂದೇ ಪರಿಚಿತ. ಅಂತಃಪುರಗೀತೆಗಳು ಕೃತಿಯ ‘ವೀಣಾಪಾಣಿ’ ಕವಿತೆಯ “ವೀಣಾಪಾಣಿ ವಿಶ್ವಕಲ್ಯಾಣಿ “ ಗೀತೆಯನ್ನೂ‘ನೀಲಾಂಬರಿ ರಾಗಕ್ಕೆ ಏನೀ ಭಯ ಭ್ರಾಂತಿಯೇ ನೀಲಾಂಬರೆ’ ಎಂಬ ಗೀತೆಯನ್ನೂ ಹೊಸ ಹುರುಪಿನ ರಾಗ ವಸಂತರಾಗದ “ವಾಸಂತ ಕೇಳೀರತೆ ಲಲಿತೇ” ಗೀತೆಗಳನ್ನು ಶೃಂಗಾರ ರಸಕ್ಕೆ ಹೆಸರಿಸಬಹುದು.
‘ಹಾಸ್ಯ’ ರಸ ಪುರುಷರು ಯಾವಾಗಲು ಹೆಣ್ಣು ಮಕ್ಕಳಿಗಿಂತ ಹಾಸ್ಯ ಪ್ರಜ್ಞೆ ಉಳ್ಳವರು ಎನ್ನುತ್ತಾರೆ.. ಅಂಗಾಂಗಗಳ ಚಲನೆ ಅನೌಚಿತ್ಯ ವರ್ತನೆ , ದೇಹ ಕಂಪಿಸಿಕೊಂಡು ನಗುವಂತೆ ಪ್ರಚೋದಿಸುತ್ತದೆ ಇದರ ಸ್ಥಾಯಿ ಭಾವ ‘ಹಾಸ’ ಸ್ವಪ್ನವಾಸವದ್ತ ಹಾಗು ಮುದ್ದಣನ ರಾಮಾಶ್ವಮೇಧದಲ್ಲಿ ಬರುವ ಮುದ್ದಣ ಮನೋರಮೆಯರ ಸಂವಾದವನ್ನು ಇಲ್ಲಿ ಉದಾಹರಿಸಬಹುದು.. ಸಂಗೀತದಲ್ಲಿ ಹಂಸಧ್ವನಿಯನ್ನು ಇಲ್ಲಿ ಹೆಸರಿಸಬಹುದು. ಈ ರಾಗವು ಮನಸ್ಸಿನಲ್ಲಿ ಸಂತೋಷವನ್ನು ಹೆಚ್ಚಿಸಿ ಒತ್ತಡವನ್ನು ಕಡಿಮೆ ಮಾಡುತ್ತದೆ. ಆರೋಹಣ ಹಾಗು ಅವರೋಹಣಗಳಲ್ಲಿಯೇ ಸಂತೋಷದ ಅಲೆಗಳನ್ನು ತರಿಸುತ್ತದೆ. ‘ಹಾವ ಸುಂದರಿ ಗೀತೆ’ಯ “ಸರಸವಾಡೆ ಕೆಳೆಯನೆತ್ತರಸಿ ತಂದೆಯೇ’ ಎಂಬ ಸಾಲುಗಳನ್ನು ವಿವರಿಸಬಹುದು.

ಮೋಹನ ರಾಗ’ ಇದನ್ನು ‘ಮೋಹಕ ರಾಗ’ವೆಂದೇ ಕರೆಯಬಹುದು ಇಲ್ಲಿ ಸ್ವರಗಳ ನಡುವೆ ಅಂತರ ನಮ್ಮ, ಕ್ಲೇಷಗಳನ್ನು ಹೀರಿ ಆತ್ಮ ಸ್ಥೈರ್ಯವನ್ನು ಉಂಟುಮಾಡುತ್ತದೆ ಎನ್ನುತ್ತಾರೆ. ವೀರ ಹಾಗು ಕಾರುಣ್ಯ ರಸಕ್ಕೆ ಬಹಳ ಹತ್ತಿರವಾಗಿರುವುದು. ‘ಅಂತಃಪುರಗೀತೆ’ಯ ‘ಭಸ್ಮಮೋಹಿನಿ’ ಎಂಬ ಸಂಗೀತ ರೂಪಕದ ಹಿಮ್ಮೇಳದವರ ಹಾಡಿಗೆ ಮೋಹನ ರಾಗವನ್ನು ಸಂಯೋಜನೆ ಮಾಡಿದ್ದಾರೆ.
‘ಕರುಣಾ’ ರಸ ‘ಶೋಕ’ ಇದರ ಸ್ಥಾಯಿ ಭಾವ ಇಲ್ಲಿ ವಿರಹ, ತಾಪ, ಶಾಪ ಇತ್ಯಾದಿಗಳು ಬಂದು , ಬೆವರು, ಶೋಕ ಕಣ್ಣೀರು ಇದರಿಂದ ಉಂಟಾಗುತ್ತದೆ. ‘ಉತ್ತರ ರಾಮಚರಿತ’ದ ‘ಸಿತಾವಿಯೋಗ’ ಹಾಗೂ ರನ್ನನ‘ಗದಾಯುದ್ಧ’ದ ‘ದುರ್ಯೋಧನ ವಿಲಾಪ’ ಪದ್ಯಗಳನ್ನು ಇಲ್ಲಿ ಉದಾಹರಿಸಬಹುದು. ಇದನ್ನು ಮಾನವೀಯತೆಯ ಪ್ರತೀಕಾರ ಎನ್ನಬಹುದು. ಈ ರಸಕ್ಕೆ ‘ಪೂರ್ವಿ ಕಲ್ಯಾಣಿ’ ರಾಗದ ‘ವೇಣೀ ಸಂಹಾರೆ’ ಗೀತೆಯ “ ವೇಣೀ ಸಂಹಾರೆ ಏಕಾಂಕ ಗೌರೇ’ ಎಂಬ ಗೀತೆಯನ್ನೂ ಉದಾಹರಿಸಬಹುದು.

ರೌದ್ರ ರಸ” ಇದರ ಸ್ಥಾಯಿಭಾವ ‘ಕ್ರೋಧ’. ಕ್ರೋಧ ಪ್ರಕೃತಿ ಉಳ್ಳವರಲ್ಲಿ ಇದು ಬೇಗ ಉದ್ರೇಕಗೊಳ್ಳುತ್ತದೆ. ಇದಕ್ಕೆ ಮಹಾಭಾರತ ಕಥೆಯಲ್ಲಿ ಭೀಮ ದುಶ್ಯಾಸನನ್ನು ಕೊಂದು ರಕ್ತವನ್ನು ಕುಡಿಯುವ ಸಂದರ್ಭವನ್ನು ವಿವರಿಸಬಹುದು. ‘ಆನಂಧಭೈರವಿ ರಾಗ’ಇಲ್ಲಿ ಪ್ರಸ್ತುತ. ಭಾವನಾತ್ಮಕತೆ, ಉತ್ಸಾಹ ವಿಜೃಂಭಣೆ ಮುಂತಾದವುಗಳನ್ನು ಇದು ಪ್ರಚೋದಿಸಿ, ಆಧ್ಯಾತ್ಮಿಕ ಭಾವನೆಗಳನ್ನು ತರಿಸಿ, ಸಾರ್ಥಕತೆಯ ಭಾವವನ್ನು ಮೂಡಿಸುತ್ತದೆ. ‘ಶಕುನ ಶಾರದೆ’ ಕವಿತೆಯ “ಶಾರದೆ ತತ್ವಾರ್ಥ ನೃತ್ಯವಿಶಾರದೆ’ ಎಂಬ ಗೀತೆ ಇಲ್ಲಿ ಉಲ್ಲೇಖನೀಯ.

ವೀರ’ ರಸ ಇದರ ಸ್ಥಾಯಿಭಾವ “ಉತ್ಸಾಹ’. ಕ್ರೋಧವು ಉದ್ಧಟರ ಸ್ವಭಾವವಾದರೆ ಉತ್ತಮರ ಸ್ವಭಾವ ಉತ್ಸಾಹವಾಗುತ್ತದೆ. ರಾಜ ತಾಂತ್ರಿಕ ಕೌಶಲ್ಯ, ಆಕ್ರಮಣ ಬಲಪ್ರಯೋಗ ಮುಂತಾದವುಗಳನ್ನು ಕುರಿತು ಇದು ಹೇಳುತ್ತದೆ. ಪಂಪಭಾರತದ ಅರ್ಜುನನನ್ನು ಇಲ್ಲಿ ಉದಾಹರಿಸಬಹುದು. ಭಕ್ತಿ, ಶೃಂಗಾರ ವಾತ್ಸಲ್ಯ, ಭಯದಿಂದ ಆಚೆ ಬರಲು ಸಹಾಯ ಮಾಡುತ್ತದೆ. ಡಿವಿಜಿಯವರ ಅಂತಃಪುರ ಗೀತೆಯ ಅಠಾಣ ರಾಗದಲ್ಲಿ ರಚನೆಯಾಗಿರುವ “ಮುರಜಾಮೋದೆ ಏನೀ ಮಹಾನಂದವೇ ಈ ಭಾಮಿನೀ ಏನಿ ಸಂಭ್ರಮದಂದವೇ” ಗೀತೆಯನ್ನು ಇಲ್ಲಿ ಉದಾಹರಿಸಬಹುದು.

ಭಯಾನಕ’ ರಸ ಇದರ ಸ್ಥಾಯಿ ಭಾವ “ಭಯ” . ಕೆಟ್ಟ ದ್ವನಿ ಕೈಕಾಲುಗಳಲ್ಲಿ ನಡುಕ ಉಂಟಾಗುವುದು ಇದರ ಲಕ್ಷಣವಾಗಿರುತ್ತದೆ. ‘ಶಾಕುಂತಲ’ ನಾಟಕದಲ್ಲಿ ದುಷ್ಯಂತನ ರಥವನ್ನುಕಂಡು ಗಾಬರಿಯಾಗಿ ಓಡುವ ಜಿಂಕೆಯ ವರ್ಣನೆಯನ್ನು ಇಲ್ಲಿ ಉದಾಹರಿಸಬಹುದು. ಸಂಗೀತದ ರಾಗಗಳಿಗೆ ಬಂದಂತೆ ಭೈರವಿ ರಾಗವನ್ನಿಲ್ಲಿ ಹೆಸರಿಸಬಹುದು. “ಭೈರವ ವೇಷದಿಂ. ದಾರ ನೀನಂಜಿಪೆ”ಎಂಬ ಡಿವಿಜಿಯರ ಗೀತೆಯು ಇಲ್ಲಿ ಸಮಯೋಚಿತವಾಗಿದೆ.
ಭೀಭತ್ಸ’ ರಸ ಇದರ ಸ್ಥಾಯಿ ಭಾವ ‘ಜಿಗುಪ್ಸೆ’ ಲೋಕದಲ್ಲಿ ಪ್ರತ್ಯಕ್ಷವಾಗಿ ಕಂಡು ಅನುಭವಿಸುವಾಗ ಆಗುವ ವೈರಾಗ್ಯವನ್ನು ಇಲ್ಲಿ ಹೇಳಬಹುದು . ಕೆಟ್ಟ ಸಮಾಚಾರ, ರೇಗಿಸುವಿಕೆ, ಕೃಕಾಲು ನಡುಕಗಳು ಇದರ ಲಕ್ಷಣಗಳು. ಪಂಪನ ‘ಆದಿಪುರಾಣ’ದ “ನೀಲಾಂಜನೆಯ ನೃತ್ಯ”ದ ಸಂದರ್ಭವನ್ನು ಇಲ್ಲಿ ಉದಾಹರಿಸಬಹುದು. ‘ದೂರನದೇಂ ತಂದಿಹಳೀ ಕೀರವಾಣಿ ತಾಂ ನಿನಗೆ” ಎಂಬ ಸಾಹಿತ್ಯವಿರುವ ‘ಕೀರವಾಣಿ’ ರಾಗದಲ್ಲಿ ರಚನೆಯಾದ ಈ ಗೀತೆಯನ್ನು ಇಲ್ಲಿ ಹೆಸರಿಸಬಹುದು.

ಅದ್ಭುತ’ ರಸ ಇದರ ಸ್ಥಾಯಿ ಭಾವ ‘ವಿಸ್ಮಯ’. ಸಚೇತನ ಹಾಗು ಅಚೇತನ ಪ್ರಪಂಚದಲ್ಲಿ ಮನುಷ್ಯ ಅನುಭವಿಸುವ ಚೈತನ್ಯವನ್ನು ಸಂಕೇತಿಸುತ್ತದೆ ರೋಮಾಂಚನ, ಕಣ್ಣರಳಿಸುವುದು ಮುಂತಾದ ದೈಹಿಕ ಚಲನೆಗಳು ಇದರಿಂದ ಉಂಟಾಗುತ್ತವೆ.. ಹರಿರನ ‘ಕುಂಬಾರ ಗುಂಡಯ್ಯನ ರಗಳೆ’, ಕುಮಾರವ್ಯಾಸನಲ್ಲಿ ಬರುವ ‘ಕೀರತಾರ್ಜುನೀಯ ವಿಜಯ’ವನ್ನು ಇಲ್ಲಿ ಉದಾಹರಿಸಬಹುದು. ಹಿಂದೋಳ ರಾಗದಲ್ಲಿ ರಚನೆಯಾದ “ಪಾದಾಂಗುಳೀಯೆ’ ಗೀತೆಯ “ಕಾಲುಂಗುರ ನೆವ ಲೊಲಾಂಗಕಾಯಿತೇ” ಸಾಲುಗಳನ್ನು ಹೆಸರಿಸಬಹುದು.

ಶಾಂತ ರಸ’ ಇದರ ಸ್ತಾಯಿ ಭಾವ ‘ಶಮ’ . ತೃಪ್ತಿ,ಪ್ರಾರ್ಥನೆ ಮತ್ತು ಗಾಂಭೀರ್ಯವನ್ನು ಇದು ಸೂಚಿಸುತ್ತದೆ. ಬುದ್ಧ ರಚಿತ ನಾಟಕಗಳನ್ನು ಹಾಗು ಹರ್ಷನ ನಾಗಾನಂದ ನಾಟಕಗಳನ್ನು ಇಲ್ಲಿ ಉದಾಹರಿಸಬಹುದು. ಇರುತ್ತದೆ . ‘ಕಾನಡ ರಾಗವನ್ನು ಇಲ್ಲಿ ಉದಾಹರಿಸಿ ಡಿವಿಜಿಯವರ “ಸರ್ವಹಸ್ತೆ ಕವಿತೆಯ ಭಾವವಿದೇನೇ ಸಖೀ ನರ್ತನಸುಖಿ” ಎಂಬ ಸಾಲುಗಳನ್ನು ಇಲ್ಲಿ ನೆನಪಿಸಿಕೊಳ್ಳಬಹುದು
ಇವಿಷ್ಟಲ್ಲದೆ ಬೇಹಾಗ್ ರಾಗದಲ್ಲಿ ಸಂಯೋಜನೆಯಾಗಿರುವ ‘ಶುಕಭಾಷಿಣಿ’, ಗೀತೆಯ “ಏನೇ ಶುಕಭಾಷಿಣಿ”, ಶಂಕರಾಭರಣ ರಾಗದ “ಆರ ನಗಿಸುವೆ ಮತ್ತಾರನಳಿಸುವೆ”, ಕಾನಾಡಾ ರಾಗದ “ಭಾವವಿದೇನೇ ಸಖೀ ನರ್ತನ ಸುಖೀ”, ಹುಸೇನಿ ರಾಗದ “ನಟನವಾಡಿದಳ್ ತರುಣಿ ನಟನವಾಡಿದಳ್’ ಕಾಂಬೋಜಿ ರಾಗದ “ರೋಷವಿದೇನೆ ಸಖೀ ಓ ಸುಮುಖೀ”, ಶ್ರೀರಂಜನಿ ರಾಗದ” ನೃತ್ತ ಹಾಸಿನಿ ಮತ್ತಕಾಶಿನೀ”, ಚಕ್ರವಾಕ ರಾಗದ “ಇನ್ನು ಮೇಕೇ ಬಾರೆನೇ ಏನುಪೇಕ್ಷೇ ಧೋರಣೆ” ಮುಂತಾದ ಜನಪ್ರಿಯ ಗೀತೆಗಳನ್ನು ನೆನಪಿಸಿಕೊಳ್ಳಬಹುದು. ಅಲ್ಲದೆ ಒಂದೆರಡು ಗೀತೆಗಳನ್ನು ಮೋಹನ,ಕಲ್ಯಾಣಿ, ತೋಡಿ ರಾಗಗಳಲ್ಲಿ ಅಳವಡಿಸಿ ರಾಗಮಾಲಿಕದಲ್ಲಿ ತಂದಿದ್ದಾರೆ.
“ಇಂಪಿಲ್ಲದೆ ಕೇದಗೆಯಂ ಕಂಪಿಲ್ಲದ, ಪೆಂಪಿಲ್ಲದ ಕುಲವಧುವನು ಒಪ್ಪಗುವೇಂ”? ಎಂಬ ರನ್ನನ ಮಾತಿನಂತೆ ಈ ಎಲ್ಲಾ ಪರಿಭಾಷೆ ನವರಸಗಳಲ್ಲಿ, ,ಶಿಲಾಬಾಲಿಕೆಯರಲ್ಲಿದೆ ಅದನ್ನು ಶಾಸ್ತ್ರೀಯ ರಾಗಗಳಿಗೆ ಹೊಂದಿಸಿ ಬರೆದ ಕವಿಯ ಪಾಂಡಿತ್ಯ ಮೇರುಸದೃಶವೇ ಸರಿ!