ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ತೂತುಗಳ ತಲೆಮಾರು

ಕೆ.ಆರ್.ಎಸ್. ಮೂರ್ತಿ
ಇತ್ತೀಚಿನ ಬರಹಗಳು: ಕೆ.ಆರ್.ಎಸ್. ಮೂರ್ತಿ (ಎಲ್ಲವನ್ನು ಓದಿ)

ಬದುಕು…
ತೂತುಗಳ ನಡುವೆ
ಕುಪ್ಪಳಿಸಿ ಸಾಗಿತ್ತು,
ದೇಶ ಸ್ವಾತಂತ್ರ್ಯದ ಸಮಯ, ಅತ್ತಲಿತ್ತಲ
ಹಲಮನೆಯ ಕತೆಯದುವೆ
ನೀಳ್ಗತೆ, ಕಾದಂಬರಿಯಂತೆ…
ನಮ್ಮಪ್ಪ, ನಮ್ಮಮ್ಮ
ನಿಮ್ಮಪ್ಪ, ನಿಮ್ಮಮ್ಮ
ನಾಯಕ, ನಾಯಕಿಯರಿರುವಂತೆ,
ತೂತು…
ಖಳನಾಯಕನು ಆದಂತೆ!

ಎಲ್ಲ …
ಗೇಣು, ಮೊಳ, ಮಾರುಗಳ
ಲೆಕ್ಕಾಚಾರದಲಿದ್ದ ಅದು…
ತೂತುಗಳ ತಲೆಮಾರು!

ಅಂದು…
ಉಟ್ಟ ಪಂಚೆಯು ತೂತು
ತೊಟ್ಟ ಸೀರೆಯು ತೂತು
ಹಾಕು ಬನಿಯನ್ನುಗಳಲಿ
ಜಾಲರದ ತೂತು

ಮನೆಯ ಹೆಂಚುಗಳಲಿ
ಅಲ್ಲಲ್ಲಿ ಹಲ ತೂತು
ಮಳೆನೀರು ಸೋರುವೆಡೆ
ಇಡು ಪಾತ್ರೆ-ಪರಡಿಯು ತೂತು

ಸಂಬಳಕೆ ಪಡೆದ
ತುಸು ಕಾಸಿನಲು ಇರು ತೂತು
ಅದು ನಿಂತೀತು ಹೇಗೆ?
ಜೇಬಿನಲಿ ತೂತು!

ಆಗ…
ನಿದ್ರೆಯೂ ಕಡಿಮೆ…ಕಷ್ಟ..
ಜೊತೆಗೆ… ತಿಗಣೆಗಳು ಹೆಚ್ಚಿತ್ತು!
ರಕ್ತ ಹೀರಿದ ಮೇಲೆ ಅವಿತಿರಲು
ಗೋಡೆ ಗೋಡೆಯಲಿ ತೂತು
ಬದುಕು ಬೆಚ್ಚಗಿದ್ದೀತು ಎಂತು?
ಹೊದ್ದ ಕಂಬಳಿಯೂ ತೂತು!

ಗುಡುಗು ಮಿಂಚಿನ ಮಳೆಗೆ
ಹಿಡಿದ ಛತ್ರಿಯು ತೂತು
ತೂತಿತ್ತು ಸವೆದ ಚಪ್ಪಲಿಗೆ
ಆದರೂ ನಡೆಯಬೇಕಿತ್ತು!

ತೂತುಗಳ ನಡುವೆಯೇ
ನುಸುಳಿ, ಬವಳಿ
ಅಂತೂ ಸೋಲದೆಯೆ
ಬದುಕು ಗೆದ್ದಾಗಿತ್ತು…

ಮುಗಿಲೇರು ತಲೆಮಾರು
ಬರಿಗೈಯ್ಯಲಿರಲಿಲ್ಲ!
ಸಾಗಿ ನಡೆದಿದ್ದರು ನಕ್ಕು
ತೂತುಗಳ ಹಿಡಿದು!