ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ತೆಲಂಗಾಣಾದ ಬತುಕಮ್ಮ ಹಬ್ಬ

ಚಂದಕಚರ್ಲ ರಮೇಶ ಬಾಬು
ಇತ್ತೀಚಿನ ಬರಹಗಳು: ಚಂದಕಚರ್ಲ ರಮೇಶ ಬಾಬು (ಎಲ್ಲವನ್ನು ಓದಿ)

ತೆಲಂಗಾಣಾ ರಾಜ್ಯದ ಎರಡು ಪ್ರಮುಖ ಹಬ್ಬಗಳಲ್ಲಿ ಬೋನಾಲು ಈಗಾಗಲೇ ನಸುಕು.ಕಾಮ್ ನ ಓದುಗರಿಗೆ ಪರಿಚಯ ಮಾಡಿದ್ದೇನೆ. ಇದೀಗ ಈ ತಿಂಗಳು 6 ನೆಯ ತಾರೀಕಿನಿಂದ ಪ್ರಾರಂಭವಾಗುವ ಮತ್ತೊಂದು ಪ್ರಮುಖ ಹಬ್ಬವಾದ “ಬತುಕಮ್ಮ ಹಬ್ಬ”ದ ಬಗ್ಗೆ ಸಂಕ್ಷಿಪ್ತ ಪರಿಚಯ ಇಂದಿನ ಲೇಖನ.

ಬತುಕಮ್ಮ ಹಬ್ಬ ಪ್ರತಿ ವರ್ಷವೂ ಭಾದ್ರಪದದ ಅಮಾವಾಸ್ಯೆಯಿಂದ ಅಶ್ವಯಿಜ ಮಾಸದಲ್ಲಿ ಬರುವ ದಸರಾ ಹಬ್ಬದ ಬರುವ ದುರ್ಗಾಷ್ಟಮಿಯ ವರೆಗೆ ಆಚರಿಸಲಾಗುತ್ತದೆ. ಆಂಧ್ರಪ್ರದೇಶದ ಕೆಲ ಜಿಲ್ಲೆಗಳಲ್ಲಿ, ವಿದರ್ಭ ಕ್ಷೇತ್ರದ ಕೆಲ ಜಿಲ್ಲೆಗಳಲ್ಲಿ ಸಹ ಇದರ ಆಚರಣೆ ಕಂಡು ಬಂದರೂ ಇದು ಮುಖ್ಯವಾಗಿ ತೆಲಂಗಾಣಾ ರಾಜ್ಯದಲ್ಲಿ ಆಚರಿಸಲಾಗುತ್ತದೆ ಮತ್ತು ರಾಜ್ಯದ ಹಬ್ಬವಾಗಿ ಘೋಷಿಸಲಾಗಿದೆ.

ಬತುಕಮ್ಮ ಹಬ್ಬ ತೆಲಂಗಾಣಾ ರಾಜ್ಯದ ಸಂಸ್ಕೃತಿಯ ಹಿನ್ನೆಲೆಯನ್ನು ತೋರುತ್ತದೆ. ಈ ಹಬ್ಬ ಶರದ್ ಋತುವಿನ ಆಗಮನವನ್ನು ಸೂಚಿಸುತ್ತದೆ. ಪ್ರಮುಖವಾಗಿ ಇದು ಹೂಗಳ ಹಬ್ಬ. ಸೆಗಣಿಯಿಂದ ಮಾಡಿದ ಬತುಕಮ್ಮನನ್ನು ಆ ಋತುವಿನಲ್ಲಿ ಸಿಗುವ ಅನೇಕ ಹೂಗಳಾದ ಆವರಿಕೆ, ಸೇವಂತಿಗೆ, ನಂದಿಬಟ್ಲು, ಮಲ್ಲಿಗೆ, ಸುಗಂಧರಾಜ, ಚೆಂಡು ಹೂ, ಗುಲಾಬಿ,ಕಣಗಲು ಹೂಗಳಿಂದ ಅಲಂಕಾರ ಮಾಡುತ್ತಾರೆ. ಒಂದೊಂದಾಗಿ ಹೂಗಳನ್ನು ಪೇರಿಸುತ್ತ, ಏಳು ಸುತ್ತುಗಳಾಗಿ ಮಾಡುತ್ತ ಗೋಪುರದಂತೆ ಮಾಡಿ ಅದರ ಮೇಲೆ ಅರಿಶಿಣದಿಂದ ಮಾಡಿದ ಗೌರಮ್ಮನನ್ನು ಇಟ್ಟು ಅದರ ಸುತ್ತ ಚಪ್ಪಾಳೆ ತಟ್ಟುತ್ತ, ಬತುಕಮ್ಮ ಹಾಡುಗಳನ್ನು ಹಾಡುತ್ತ ಹೆಂಗಸರು ನಲಿಯುತ್ತಾರೆ. ತರತರದ ಬಣ್ಣಗಳಲ್ಲಿ ಬಿರಿಯುವ ಈ ಹೂಗಳನ್ನು ಸುತ್ತ ಮುತ್ತಲಿರುವ ಕಾಡುಗಳಿಗೆ ಹೋಗಿ ಮನೆಯ ಗಂಡಸರು ಆರಿಸಿ ತರುತ್ತಾರೆ.

ಬತುಕಮ್ಮ ಮಾಡುವುದು ಒಂದು ಕಲೆ. ಮಧ್ಯಾಹ್ನ ಗಂಡಸರು ತಂದ ಹೂಗಳನ್ನು ಮನೆಯ ಹೆಂಗಸರು ಬೇಕಾದ ಆಕಾರಕ್ಕೆ ಕತ್ತರಿಸಿ ಅವಕ್ಕೆ ಸ್ವಲ್ಪ ಸುಗಂಧ ಅತ್ತರನ್ನು ಬೆರೆಸಿ ಒಂದು ದೊಡ್ಡ ಹರಿವಾಣದಲ್ಲಿಡುತ್ತಾರೆ. ಈ ಹರಿವಾಣವನ್ನು “ತಾಂಬಲಮ್” ಎನ್ನುತ್ತಾರೆ. ನಂತರ ಇದನ್ನು ಅಂಗಳದಲ್ಲಿಡುತ್ತಾರೆ. ಪ್ರತಿಯೊಬ್ಬರ ಮನೆಯ ಮುಂದಲ್ಲದೇ, ಹತ್ತಿರದ ಮನೆಗಳ ಹೆಂಗಸರೆಲ್ಲ ಸೇರಿ ತಾವು ಮಾಡಿತಂದ ಬತುಕಮ್ಮಗಳನ್ನು ಒಬ್ಬರ ವಿಶಾಲ ಅಂಗಳದಲ್ಲಿ ಅಥವಾ ಊರಿನ ಪ್ರಮುಖ ಸ್ಥಳಗಳಲ್ಲಿ ಇಟ್ಟು ಸುತ್ತ ದೀಪಗಳನ್ನು ಹಚ್ಚಿ, ಮಾಡಿ ತಂದ ನೈವೇದ್ಯಗಳನ್ನು ಅರ್ಪಿಸಿ ಸುತ್ತ ತಿರುಗುತ್ತ ಬತುಕಮ್ಮ ಹಾಡುಗಳನ್ನು ಹಾಡುತ್ತಾರೆ. ಹೆಂಗಸರೆಲ್ಲ ಬಣ್ಣ ಬಣ್ಣದ ಸೀರೆಗಳನ್ನುಟ್ಟು, ಆಭರಣಗಳನ್ನು ತೊಟ್ಟು ಆ ಒಂಬತ್ತು ದಿನಗಳು ಹಬ್ಬವೇ ತಮ್ಮ ಮೇಲೆ ಬಂದಂತೆ ನಲಿಯುತ್ತಾರೆ. ಮದುವೆಯಾಗ ಬೇಕಾದ ಹುಡುಗಿಯರು ತಮ್ಮ ಮದುವೆಗಾಗಿ, ಮದುವೆಯಾದ ಹೆಂಗಸರು ತಮ್ಮ ಕುಟುಂಬದ ಸಮೃದ್ಧಿಗಾಗಿ ಮತ್ತು ಸೌಭಾಗ್ಯಕ್ಕಾಗಿ ಪ್ರಾರ್ಥಸುತ್ತ ಈ ಹಬ್ಬದ ಸಡಗರಗಳಲ್ಲಿ ಪಾಲ್ಗೊಳ್ಳುತ್ತಾರೆ. ಇಡೀ ತೆಲಂಗಾಣಾ ರಾಜ್ಯದ ಪ್ರತಿ ಓಣಿಗಳಲ್ಲಿ, ಸಂದುಗಳಲ್ಲಿ ಈ ಒಂಬತ್ತು ದಿನಗಳೂ ರಾತ್ರಿ ಹೊತ್ತು ಬತುಕಮ್ಮ ಹಾಡುಗಳು ಕೇಳಿಬರುತ್ತಿರುತ್ತವೆ.
ಹಬ್ಬದ ಒಂಬತ್ತು ದಿನಗಳು ಅವರು ಪೂಜೆ ಮಾಡುವ ಪ್ರತಿ ದಿನದ ಬತುಕಮ್ಮಗಳಿಗೆ ಒಂದೊಂದು ಹೆಸರಿದೆ. ಅದು ಆ ದಿನ ಅವರು ನೈವೇದ್ಯವಿಡುವ ಪದಾರ್ಥವನ್ನನುಸರಿಸಿ ಇದೆಯೆಂದು ಹೇಳುತ್ತಾರೆ. ಕೊನೆಯ ದಿನ ಮಾತ್ರ ಐದು ತರದ ಅನ್ನದ ಪದಾರ್ಥಗಳನ್ನು ಮಾಡಿ ನೈವೇದ್ಯವಿಟ್ಟು ಅಂದು ಹೂಗಳನ್ನು ನೀರಿನಲ್ಲಿ ತೇಲಿ ಬಿಡುತ್ತಾರೆ. ಅರಿಶಿನದಲ್ಲಿ ಮಾಡಿದ ಗೌರಮ್ಮನನ್ನು ಸುವಾಸಿನಿಯರು ಮನೆಯಲ್ಲಿಟ್ಟುಕೊಳ್ಳುತ್ತಾರೆ. ಆ ದಿನ ವಿಶೇಷವಾಗಿ ಮಾಡಿದ ಮಲೇದಾ ಎಂಬ ಸಿಹಿ ತಿಂಡಿಯನ್ನು ಒಬ್ಬರಿಗೊಬ್ಬರು ವಿನಿಮಯ ಮಾಡಿಕೊಂಡು ಆನಂದಪಡುತ್ತಾರೆ.

ಅಂದಿನ ಬತುಕಮ್ಮನನ್ನು “ಸದ್ದುಲ ಬತುಕಮ್ಮ” ಅಂತ ಕರೆಯುತ್ತಾರೆ. ಉಳಿದ ದಿನಗಳ ಬತುಕಮ್ಮಗಳ ಹೆಸರುಗಳು ಕ್ರಮವಾಗಿ ಇಂತಿವೆ.

1. ಎಂಗಿಲಿ ಪೂಲ ಬತುಕಮ್ಮ.

2. ಅಟುಕುಲ ಬತುಕಮ್ಮ

3. ಮುದ್ದಪಪ್ಪು ಬತುಕಮ್ಮ

4. ನಾನ ಬಿಯ್ಯಂ ಬತುಕಮ್ಮ

5. ಅಟ್ಲ ಬತುಕಮ್ಮ

6. ಅಲಿಗಿನ ಬತುಕಮ್ಮ ( ಇವತ್ತು ದೇವಿ ಮುನಿಸಿಕೊಂಡಿರುತ್ತಾಳೆ. ಅದಕ್ಕೆ ಇವತ್ತು ನೈವೇದ್ಯವಿರುವುದಿಲ್ಲ.)

7. ವೇಪಕಾಯಲ ಬತುಕಮ್ಮ

8. ವೆನ್ನಮುದ್ದಲ ಬತುಕಮ್ಮ

9, ಸದ್ದುಲ ಬತುಕಮ್ಮ.

ಬತುಕಮ್ಮ ಹಬ್ಬದ ಆಚರಣೆಯ ಬಗ್ಗೆ ಒಂದು ಇತಿಹಾಸದ ಹಿನ್ನೆಲೆ ಹೇಳಲಾಗಿದೆ. ಈ ಹಬ್ಬದ ಹಿನ್ನೆಲೆಗೆ ಆಶ್ಚರ್ಯಕರವಾಗಿ ಕರ್ನಾಟಕದ ರಾಜ ವಂಶಗಳಾದ ರಾಷ್ಟ್ರಕೂಟರ ಮತ್ತು ಚಾಲುಕ್ಯರ ಸಂಬಂಧ ಇರುವುದು ಕನ್ನಡಿಗರಿಗೆ ಮಹತ್ವವೆನಿಸುತ್ತದೆ. ತೆಲಂಗಾಣಾ ರಾಜ್ಯದ ಪುಣ್ಯಕ್ಷೇತ್ರವಾದ ವೇಮುಲವಾಡದ ಚಾಲುಕ್ಯರು ರಾಷ್ಟ್ರಕೂಟರ ಸಾಮಂತರಾಗಿದ್ದರು. ( ಇದೇ ರಾಜ್ಯದ ಆಸ್ಥಾನದಲ್ಲಿ ಕನ್ನಡದ ಆದಿಕವಿ ಪಂಪನು ಇದ್ದ ಎನ್ನುವುದು ಇಲ್ಲಿ ಸ್ಮರಿಸಬಹುದಾಗಿದೆ.) ದಕ್ಷಿಣದ ಚೋಳ ರಾಜರ ಮತ್ತು ರಾಷ್ಟ್ರಕೂಟರ ಯುದ್ಧಗಳಲ್ಲಿ ಚಾಲುಕ್ಯರು ರಾಷ್ಟ್ರಕೂಟರ ಪರ ಹೋರಾಡುತ್ತಿದ್ದರು. ಕ್ರೀ.ಶ.973 ಇಸವಿಯಲ್ಲಿ ಚಾಲುಕ್ಯರಾಜ ತೈಲಪನು ರಾಷ್ಟ್ರಕೂಟ ರಾಜನಾದ ಕರ್ಕ-II ನನ್ನು ಸೋಲಿಸಿ ಕಲ್ಯಾಣಿ ಚಾಲುಕ್ಯ ರಾಜ್ಯವನ್ನು ಸ್ಥಾಪಿಸಿಕೊಂಡ. ತೈಲಪನ ಮರಣದನಂತರ ಕ್ರೀ.ಶ. 997 ಇಸವಿಯಲ್ಲಿ ಆತನ ಮಗ ಸತ್ಯಾಶ್ರಯ ರಾಜನಾದ.

ವೇಮುಲವಾಡದಲ್ಲಿರುವ ರಾಜರಾಜೇಶ್ವರನ ದೇವಸ್ಥಾನ ತುಂಬಾ ಹೆಸರುವಾಸಿಯಾಗಿತ್ತು. ಚೋಳರಾಜನಾದ ಪರಾಂತಕ ಸುಂದರ ಚೋಳನು ರಾಷ್ಟ್ರಕೂಟರ ಮೇಲೆ ಜಯ ಗಳಿಸಲು ಈ ದೇವರ ಭಕ್ತನಾದ. ತನ್ನ ಮಗನಿಗೆ ರಾಜರಾಜ ಚೋಳ ಎಂದು ಹೆಸರಿಟ್ಟ. ರಾಜರಾಜ ಚೋಳನು ತುಂಬಾ ಖ್ಯಾತಿ ಗಳಿಸಿದ ರಾಜನಾದ. ಅತನ ಮಗನಾದ ರಾಜೇಂದ್ರ ಚೋಳನು ಸತ್ಯಾಶ್ರಯನನ್ನು ಸೋಲಿಸಿ ತನ್ನ ಗೆಲುವಿನ ಚಿಹ್ನೆಯಾಗಿ ವೇಮುಲವಾಡ ದೇವಸ್ಥಾನದ ಬೃಹತ್ ಲಿಂಗವನ್ನು ತಾನು ತಂಜಾವೂರಿನಲ್ಲಿ ಕಟ್ಟಿಸುತ್ತಿದ್ದ ಬೃಹದೀಶ್ವರಾಲಯಕ್ಕೆ ಕೊಂಡು ಹೋಗಿ ಕ್ರೀ.ಶ. 1010 ಇಸವಿಯಲ್ಲಿ ಅಲ್ಲಿ ಸ್ಥಾಪಿಸಿದ. ಚೋಳರಾಜರ ತಮಿಳಿನಲ್ಲಿಯ ಶಾಸನ ಲಿಪಿಯಲ್ಲಿ ಇದರ ಉಲ್ಲೇಖ ಕಾಣುತ್ತದೆ.
ತಮ್ಮ ದೇವರನ್ನು ತೆಗೆದುಕೊಂಡು ಹೋದದ್ದು ಚಾಲುಕ್ಯ ಪ್ರಜೆಗಳಿಗೆ ತುಂಬಾ ದುಃಖವನ್ನುಂಟು ಮಾಡಿತು. ತಮ್ಮ ರೀತಿಯಲ್ಲೇ ದುಃಖಿಸುತ್ತಿದ್ದ ಶಿವನ ದೇವೇರಿಯಾದ ಪಾರ್ವತಿಯನ್ನು ಸಮಾಧಾನ ಮಾಡಲು ಇಲ್ಲಿಯ ಜನರು ಅರಿಶಿಣದಲ್ಲಿ ಗೌರಮ್ಮನನ್ನು ಮಾಡಿ ಅದಕ್ಕೆ ಹೂಗಳ ಸಿಂಗಾರ ಮಾಡಿ, ಅದರ ಸುತ್ತ ಹಾಡಿ ಅವಳನ್ನು ಸಮಾಧಾನ ಮಾಡುವ ಕ್ರಮವೇ ಮುಂದೆ ಒಂದು ಹಬ್ಬವಾಗಿ ರೂಪುಗೊಂಡಿತು ಎಂದು ಒಂದು ಕಥೆ ಇದೆ.
ಮತ್ತೊಂದು ಕಥೆಯ ಪ್ರಕಾರ ಈ ಪ್ರಾಂತದ ರಾಜನಾದ ಧರ್ಮಾಂಗದನೆಂಬ ಚೋಳ ರಾಜನು ತನ್ನ ಶತಪುತ್ರರನ್ನು ಯುದ್ಧಗಳಲ್ಲಿ ಕಳೆದುಕೊಂಡ ಮೇಲೆ ಲಕ್ಷ್ಮೀದೇವಿಯನ್ನು ಮಗಳಿಗಾಗಿ ಪ್ರಾರ್ಥಿಸಲು ಅವಳೇ ಮಗಳಾಗಿ ಹುಟ್ಟಿದ್ದಳು. ಅವಳಿಗೆ ಲಕ್ಷ್ಮಿ ಎಂತಲೇ ಹೆಸರಿಡಲಾಯಿತು.ಆದರೆ ಆ ಮಗಳು ಅನೇಕ ಅನಾಹುತಗಳನ್ನು ಎದುರಿಸಬೇಕಾಗಿ ಬಂದದ್ದು ಕಂಡ ರಾಜನು ತಮ್ಮ ಮಗಳಿಗೆ “ ಬದುಕು ಅಮ್ಮಾ”ಎನ್ನುತ್ತ “ ಬತುಕಮ್ಮ” ಎಂದು ಹೆಸರಿಟ್ಟ ಎಂದು ಹೇಳುತ್ತಾರೆ.
ಒಟ್ಟಾರೆ ಬಣ್ಣ ಬಣ್ಣದ ಹೂಗಳು ಮತ್ತು ಅಷ್ಟೇ ಬಣ್ಣಗಳಲ್ಲಿ ಕಂಗೊಳಿಸುತ್ತ ಬತುಕಮ್ಮಗಳ ಸುತ್ತ ಹಾಡುತ್ತ ನಲಿಯವ ಹಬ್ಬದ ಶೋಭೆಯನ್ನು ನೋಡಲು ಎರಡು ಕಂಗಳು ಸಾಲದಾಗುತ್ತವೆ.