- ಸಾಜಿದಾ ಅಲಿಯಾಸ್ ಸಲ್ಮಾ - ಅಕ್ಟೋಬರ್ 29, 2024
- ರೇಟಿಂಗ್ ಗಳ ಧೋರಣೆ - ಅಕ್ಟೋಬರ್ 20, 2024
- ಬೇಲಿಯೇ ಎದ್ದು….. - ಸೆಪ್ಟೆಂಬರ್ 29, 2024
ಹೊಸ ವರ್ಷದಲ್ಲಿಯ ಜ್ಯೇಷ್ಠಮಾಸ ಕಳೆದು ಆಷಾಢಮಾಸ ಪ್ರಾರಂಭವಾಗುತ್ತಲೇ ಇಡೀ ತೆಲಂಗಾಣಾ ರಾಜ್ಯದಲ್ಲಿ ಹಬ್ಬದ ವಾತಾವರಣ ಆವರಿಸಿಕೊಳ್ಳುತ್ತದೆ. ತೆಲಂಗಾಣಾ ರಾಜ್ಯದ ಎರಡು ಬಹು ಮುಖ್ಯ ಹಬ್ಬಗಳಾದ “ಬೋನಾಲು” ಮತ್ತು “ಬತುಕಮ್ಮ” ಹಬ್ಬಗಳಲ್ಲಿ ’ಬೋನಾಲು’ ಈ ಮಾಸದಲ್ಲಿ ಅತ್ಯಂತ ಸಡಗರದಿಂದ ಆಚರಿಸಲಾಗುತ್ತದೆ. ಬೋನಾಲು ಎನ್ನುವ ಪದ ತೆಲುಗಿನ ಭೋಜನಾಲು( ಊಟ) ಪದದ ಅಪಭ್ರಂಶ ರೂಪ ಎನ್ನುತ್ತಾರೆ. ಹೆಸರಿಗೆ ತಕ್ಕಂತೆ ಈ ಹಬ್ಬದ ದಿನ ಹೆಂಗಸರು ಸಾಲಂಕೃತರಾಗಿ ಮನೆಯಲ್ಲಿ ಅಕ್ಕಿ, ಹಾಲು ಮತ್ತು ಬೆಲ್ಲ ಬೆರೆಸಿದ ಅನ್ನವನ್ನು ಮಾಡಿ ಅದನ್ನು ಮಣ್ಣಿನ ಪಾತ್ರೆಗಳಲ್ಲಿಟ್ಟು ಅದರ ಮುಚ್ಚಳದ ಮೇಲೆ ಒಂದು ದೀಪ ಇಟ್ಟು ತಲೆಯ ಮೇಲೆ ಹೊತ್ತು ದೇವಿಯ ಸನ್ನಿಧಾನಕ್ಕೆ ಹೋಗಿ ಸಮರ್ಪಣೆ ಮಾಡಿ ಬರುತ್ತಾರೆ. ಈ ರೀತಿ ಹೊತ್ತು ನಡೆಯುವ ಹೆಂಗಸರೆಲ್ಲರೂ ಅಮ್ಮನವರ ಅವತಾರಗಳೇ ಎಂದು ಭಾವಿಸಿ, ಅವರು ಹೋಗುವ ರಸ್ತೆಯಲ್ಲಿ ಅವರನ್ನು ಶಮನಗೊಳಿಸಲು ನೀರು ಚಲ್ಲುತ್ತಾರೆ. ಹಾಗೆ ಹೊತ್ತು ಸಾಗುವ ಗುಂಪುಗಳು ತಮ್ಮ ಹರಕೆ ಸಲ್ಲಿಸಲು ತೊಟ್ಟೆಲುಗಳನ್ನು ಅಮ್ಮನವರಿಗೆ ಅರ್ಪಿಸುತ್ತಾರೆ.
ಈ ಹಬ್ಬದ ಆಚರಣೆಯ ಬಗ್ಗೆ ಐತಿಹಾಸಿಕ ಮತ್ತು ಪೌರಾಣಿಕಗಳ ಹಿನ್ನೆಲೆಗಳು ಹೀಗಿವೆ. 1813ರ ಇಸವಿಯಲ್ಲಿ ಜಂಟಿನಗರಗಳಾದ ಹೈದ್ರಾಬಾದ್ ಮತ್ತು ಸಿಕಿಂದ್ರಾಬಾದ್ ಗಳಲ್ಲಿ ಪ್ಲೇಗ್ ಹರಡಿತ್ತು. ಇದು ಆಂಗ್ಲರು ತಮ್ಮ ಸೇನಾ ತುಕಡಿಗಳನ್ನಿಡುತ್ತಿದ್ದ ಛಾವಣಿಪ್ರದೇಶ. ಅಲ್ಲಿಯ ಕೆಲ ಸೈನಿಕರು ಮಧ್ಯಪ್ರದೇಶದ ಉಜ್ಜಿನಿಗೆ ಕಳಿಸಲ್ಪಟ್ಟಿದ್ದರು. ಅವರುಗಳು ತಮ್ಮ ಊರಿಗೆ ಬಂದ ರೋಗವನ್ನು ಹೋಗಲಾಡಿಸಲು ಉಜ್ಜಿನಿಯ ಮಹಾಕಾಳಿಗೆ ಪೂಜೆ ಸಲ್ಲಿಸಿದರಂತೆ. ನಂತರ ರೋಗ ಕಮ್ಮಿಯಾಗಿತ್ತಂತೆ. ಅವರ ಜೊತೆಯಲ್ಲಿ ಹೋದ ಗಾರೆ ಕೆಲಸಗಾರ “ಸುರಿಟಿ ಅಪ್ಪಯ್ಯ” ಈ ಪ್ರದೇಶದಲ್ಲಿ ಅಮ್ಮನವರ ದೇವಸ್ಥಾನ ಕಟ್ಟಿಸುವ ಹರಕ ಹೊತ್ತನಂತೆ. ತನ್ನ ಹರಕೆ ಪ್ರಕಾರ ಸಿಕಿಂದ್ರಾಬಾದಿನಲ್ಲಿ ಮರದ ಉಜ್ಜಿನಿಯ ಮಹಂಕಾಳಿಯ ಮೂರ್ತಿಯನ್ನು ಪ್ರತಿಷ್ಠಾಪಿಸಿದನಂತೆ. ನಂತರ ಮರದ ಮೂರ್ತಿಯ ಸ್ಥಾನದಲ್ಲಿ ಕಲ್ಲಿನ ಮೂರ್ತಿ ಮತ್ತು ದೇವಸ್ಥಾನದ ಆವರಣದಲ್ಲಿರುವ ಬಾವಿಯಲ್ಲಿ ಸಿಕ್ಕಿದ ಮತ್ತೊಂದು ಅಮ್ಮನವರ ಮೂರ್ತಿಯನ್ನು( ಮಾಣಿಕ್ಯಾಲಮ್ಮ) ಪಕ್ಕದಲ್ಲೆ ಪ್ರತಿಷ್ಠಾಪಿಸಿದ್ದಾರೆ. ಬೋನಾಲು ಒಯ್ಯುವ ರಿವಾಜು ಇಂದಿಗೂ ಆ ದೇವಸ್ಥಾನದಲ್ಲಿ ಮತ್ತೆ ಇಡೀ ರಾಜ್ಯದ ಅಮ್ಮನವರುಗಳ ದೇವಸ್ಥಾನಗಳಲ್ಲಿ ಬೋನಾಲು ಹೊತ್ತೊಯ್ಯುವುದು ನಡೆದು ಬಂದಿದೆ. ಪೌರಾಣಿಕ ಹಿನ್ನೆಲೆಯಲ್ಲಿ ಆಷಾಢ ಮಾಸದಲ್ಲಿ ಮಹಂಕಾಳಿ ಅಮ್ಮನವರು ಎಲ್ಲ ಮದುವೆಯಾದ ಹೆಂಗಸರಂತೆ ತವರಿಗೆ ಬಂದು ತವರಿನ ಅಕ್ಕರತೆ ಪಡೆಯುತ್ತಾಳೆ ಎಂದು ನಂಬಿಕೆ. ಹಾಗಾಗಿ ಆ ಮಾಸದಲ್ಲಿ ಈ ಹಬ್ಬ ಆಚರಣೆಗೆ ಬಂದಿದೆ.
ಜಂಟಿನಗರಗಳ ಅನೇಕ ಅಮ್ಮನವರ ದೇವಸ್ಥಾನಗಳಲ್ಲಿ ಬೋನಾಲು ಆಚರಿಸಲಾಗುತ್ತದೆ. ಆದರೆ ಹಬ್ಬ ಪ್ರಾರಂಭವಾಗುವುದು ಮಾತ್ರ ಆಷಾಢದ ಮೊದಲ ಭಾನುವಾರ ಗೋಲ್ಕೊಂಡ ಕೋಟೆಯಲ್ಲಿರುವ ಜಗದಾಂಬಿಕಾ ಅಮ್ಮನವರ ದೇವಸ್ಥಾನದಿಂದ . ನಂತರದ ಭಾನುವಾರ ಸಿಕಿಂದ್ರಾಬಾದ್ ನ ಮಹಂಕಾಳಿ ದೇವಸ್ಥಾನದ ಅಮ್ಮನವರ “ಎದುರುಕೋಲು” ಹಬ್ಬದ ಆಚರಣೆಯ ಭಾಗವಾಗಿ ಅಮ್ಮನವರನ್ನು ತವರಿಗೆ ಕರೆತರುತ್ತಾರೆ. ಆ ದಿನ ಒಂದು ತಾಮ್ರದ ಪಾತ್ರೆಯನ್ನು ಅಮ್ಮನವರ ಮುಖದೊಂದಿಗೆ ಸಿಂಗರಿಸಿ ಸಂಪ್ರದಾಯಕ ವಸ್ತ್ರತೊಟ್ಟ ಒಬ್ಬ ಅರ್ಚಕನು ತಲೆಯ ಮೇಲೆ ಹೊತ್ತು ತಮ್ಮಟೆಗಳ ಮತ್ತು ವಾದ್ಯಗಳ ಮೆರವಣಿಗೆಯಲ್ಲಿ ದೇವಸ್ಥಾನಕ್ಕೆ ತರುತ್ತಾನೆ. ಈ ಮೆರವಣಿಗೆಯನ್ನು “ಘಟಂ” ಎನ್ನುತ್ತಾರೆ.
ಮೂರನೆಯ ಭಾನುವಾರ ಸಿಕಿಂದ್ರಾಬಾದಿನ ಉಜ್ಜಿನಿ ಮಹಂಕಾಳಿಯ ದೇವಸ್ಥಾನದಲ್ಲಿ ಬೋನಾಲು ಹಬ್ಬವನ್ನು ಆಚರಿಸಲಾಗುತ್ತದೆ. ಸಿಕಿಂದ್ರಾಬಾದ್ ಮಿಲಿಟರಿ ಇದ್ದ ಪ್ರದೇಶ ಆದ ಕಾರಣ ಅದನ್ನು ಉರ್ದುವಿನಲ್ಲಿ “ಲಷ್ಕರ್” ಎಂದು ಕರೆಯುತ್ತಿದ್ದರು. ಹಾಗಾಗಿ ಇಲ್ಲಿಯ ಬೋನಾಲು ಹಬ್ಬ “ ಲಷ್ಕರ್ ಬೋನಾಲು” ಎಂತಲೇ ಪ್ರಸಿದ್ಧಿಯಾಗಿದೆ. “ಮಹಂಕಾಳಿ ಜಾತರ” ಅಂತಲೂ ಕರೆಯುತ್ತಾರೆ. ಅಲಂಕೃತರಾದ ಹೆಂಗಸರು ಬೋನಾಲು ಹೊತ್ತು ತರುವಾಗ ಕೆಲವರಿಗೆ ಅಮ್ಮನವರು ಮೈ ಮೇಲೆ ಬಂದ ಹಾಗೆ ತಲೆಯ ಮೇಲಿನ ಮಡಕೆಯನ್ನು ಹೊತ್ತು ನೃತ್ಯ ಮಾಡುತ್ತ ಬರುತ್ತಾರೆ. ಇವರು ಹೊತ್ತು ತರುವ ಮಡಕೆಗಳ ಜೊತೆಯಲ್ಲಿ ಸಿಂಗಾರಗೊಂಡ “ಫಲಹಾರಂ ಬಂಡಿ” ಅಂತ ವಿಧವಿಧವಾಗ ತಿನಿಸುಗಳ ಬಂಡಿ ಬರುತ್ತಿರುತ್ತದೆ. ಇವರ ಮುಂದುಗಡೆ ಇವರಿಗೆಲ್ಲ ರಕ್ಷಕನೆನಿಸುವ “ಪೋತರಾಜು” ಮೈಯೆಲ್ಲ ಅರಿಶಿಣ ಬಳಿದುಕೊಂಡು ಕೈಯಲ್ಲಿ ಚಾವಟಿಯನ್ನಾಡಿಸುತ್ತ ಬರುತ್ತಿರುತ್ತಾನೆ.
ಈ ಪೋತರಾಜು ಅಕ್ಕಂದಿರನ್ನು ಮನೆಗೆ ಕರೆದು ತರುವ ತಮ್ಮನಂತೆ ಪರಿಗಣಿಸುತ್ತಾರೆ. ಬೋನಾಲು ಮೆರವಣಿಗೆ ಮಲ್ಲಣ್ಣನ ದೇವಸ್ಥಾನದಂದ ಪ್ರಾರಂಭವಾಗುತ್ತದೆ. ಆತ ಅಮ್ಮಂದಿರುಗಳ ಅಣ್ಣನೆನಿಸಿಕೊಳ್ಳುತ್ತಾನೆ. ಇದರ ಮಾರನೆಯ ದಿನ ದೇವಸ್ಥಾನಕ್ಕೆ ನಡೆದುಕೊಳ್ಳುವ ಒಂದು ಪರಂಪರೆಯ ಮಾತಂಗಿ ಆ ವರ್ಷದ ಭವಿಷ್ಯ ಹೇಳುತ್ತಾಳೆ. ಇದನ್ನು “ರಂಗಂ” ಎನ್ನುತ್ತಾರೆ. ಮಾರನೆಯ ದಿನ ಮೊದಲನೆಯ ದಿನ ಹೊತ್ತು ತಂದ ಘಟಂ ಅನ್ನು ದೇವಸ್ಥಾನದ ಸುತ್ತ ಅಂಬಾರಿಯ ಮೇಲೆ ಮೆರವಣಿಗೆ ಮಾಡಿ ವಿಸರ್ಜನೆ ಮಾಡುವುದರ ಜೊತೆಗೆ ಹಬ್ಬ ಮುಗಿಯುತ್ತದೆ.
ನಂತರದ ಭಾನುವಾರಗಳಲ್ಲಿ ರಾಜ್ಯದ ಇತರೆ ಅಮ್ಮನವರ ದೇವಸ್ಥಾನಗಳಲ್ಲಿ ಸಂಭ್ರಮದಿಂದ ಆಚರಿಸುತ್ತಾರೆ. ಇವುಗಳಲ್ಲಿ ಲಾಲ್ ದರ್ವಾಜಾ ಬೋನಾಲು, ಅಕ್ಕನ್ನ ಮಾದನ್ನ ಬೋನಾಲು, ಚಾರ್ ಮೀನಾರ್ ಕಟ್ಟಡವನ್ನು ತಾಗಿಕೊಂಡೇ ಇರುವ ಭ್ಯಾಗ್ಯಲಕ್ಷ್ಮಿ ಅಮ್ಮನ ಬೋನಾಲು ಮುಖ್ಯವಾದವು.
ಶ್ರಾವಣ ಮಾಸದ ಎರಡನೆಯ ಭಾನುವಾರದವರೆಗೂ ರಾಜ್ಯದ ಎಲ್ಲಾ ಕಡೆಗಳಲ್ಲೂ ಅಮ್ಮನವರ ದೇವಸ್ಥಾನಗಳಲ್ಲಿ ಬೋನಾಲು ಹಬ್ಬ ನಡೆದೇ ಇರುತ್ತದೆ. ಈ ಹಬ್ಬಕ್ಕೆ ತೆಲಂಗಾಣಾ ರಾಜ್ಯ, ರಾಜ್ಯ ಹಬ್ಬದ ದರ್ಜೆ ಕೊಟ್ಟಿದೆ. ಹಬ್ಬದ ಆಚರಣೆಯ ಖರ್ಚಿಗಾಗಿ ರಾಜ್ಯದ ಖಜಾನೆಯಿಂದ ಪ್ರತಿ ವರ್ಷವೂ ಹಣ ನಿಗದಿಪಡಿಸಲಾಗುತ್ತದೆ. ಸಿಕಿಂದ್ರಾಬಾದಿನ ಮಹಂಕಾಳಿ ದೇವಸ್ಥಾನಕ್ಕೆ ರಾಜ್ಯದ ಮುಖ್ಯಮಂತ್ರಿಯವರು ರೇಶ್ಮೆ ವಸ್ತ್ರ ಹೊತ್ತು ತಂದು ಅಮ್ಮನವರಿಗೆ ಸಮರ್ಪಿಸಿ ,ದರ್ಶನ ಮಾಡಿಕೊಂಡು ಆಶೀರ್ವಾದ ಪಡೆಯುತ್ತಾರೆ.
ಹೆಚ್ಚಿನ ಬರಹಗಳಿಗಾಗಿ
‘ಒಬ್ಬಂಟಿಕರಣ’ ದ ಲೋಕಾರ್ಪಣೆ
ವಿಶ್ವ, ವಿಶಾಲೂ ಮತ್ತು ಅಧ್ಯಾತ್ಮ
ರೇಟಿಂಗ್ ಗಳ ಧೋರಣೆ