- ಚಿಕ್ಕಣಿರಾಜ ಕೃತಿಯ ಜೀವಾಳ ಪುಟ್ಟ - ಸೆಪ್ಟೆಂಬರ್ 12, 2024
- ಹಾಲಾಡಿಯಲ್ಲಿ ಹಾರುವ ಓತಿ - ಜುಲೈ 20, 2024
- ನಾಡೋಜ ಕಮಲಾಮೇಡಂಗೆ ಅಂತಿಮ ನಮನಗಳು - ಜೂನ್ 22, 2024
‘ತನುವಾದ್ಯ ನಾಲಿಗೆ ವಾದನ ದಂಡ’ ಎಂಬಂತೆ ನಾಲಗೆ ಮನುಷ್ಯನ ಬಹುಮುಖ್ಯ ಅಂಗ. ಇಂಚುಗಳ ಅಳತೆಯಲ್ಲಿ ಅಳೆಸಿಕೊಳ್ಳುವ ಈ ನಾಲಗೆ ಅಡಿಗಳ ಅಳತೆಯ ದೇಹವನ್ನು ಆಳುತ್ತದೆ. ಅಲ್ಲದೆ ವ್ಯಕ್ತಿಯ ವ್ಯಕ್ತಿತ್ವದ ಅಳತೆಗೋಲು ಹೌದು! ಇದರ ಆಕಾರ ವಾಮನನಂತಾದರೂ ಇದರ ವ್ಯಾಪ್ತಿ ತ್ರಿವಿಕ್ರಮನಂಥದ್ದು. ಮನಸ್ಸಿನ ಭಾವನೆಗಳನ್ನು ಮಾತಾಗಿ ಪರಿವರ್ತಿಸುವುದು ನಾಲಗೆ.
ಈ ಮಾತು ಹೃದಯದ ಸಂವಾದವನ್ನು ಧ್ವನಿರೂಪದಲ್ಲಿ ಧ್ವನಿಯಾಗಿಸುತ್ತದೆ. ಅಮೂರ್ತ ರೂಪಗಳಿಗೆ ಮೂರ್ತ ರೂಪವನ್ನು ಕೊಡುತ್ತದೆ. ಅದನ್ನೆ ‘ನುಡಿ’, ‘ನುಡಿಮುತ್ತು’ಗಳು ಎಂದು ಕರೆಯುವುದು. ಮಾತು ಮಾತು ಮಥಿಸಿದರೆ ನಾದದ ನವನೀತವಾಗುತ್ತದೆ. ಅಂದರೆ ನಾಲಗೆಯಿಂದ ಹೊರಬೀಳುವ ಶಬ್ದ, ಆ ಶಬ್ದ ಮಾತುಗಳಾಗಿ ಆಕರ್ಷಿಣೀಯವಾಗಿರಬೇಕು, ಸುಶ್ರಾವ್ಯವಾಗಿರಬೇಕು ಅಂದರೆ ನಾಲಿಗೆಯನ್ನು ಚೆನ್ನಾಗಿ ಟ್ಯೂನ್ ಮಾಡಿಕೊಳ್ಳಬೇಕು. ಅರ್ಥಾಥ್ ಕಿವಿಗೆ ಮನಸ್ಸಿಗೆ ಇಂಪಾದ, ತಂಪಾದ ಒಳ್ಳೆಯ ನುಡಿಗಳನ್ನೆ ನುಡಿಯಬೇಕು.
‘ನಾಲಗೆ’, ‘ಜಿಹ್ವೆ’ ಇದು ದೇಹದ ಒಂದು ಅಂಗ ಮಾತ್ರವಲ್ಲ ಅದೊಂದು ನಂಬಿಕೆಯ ಪ್ರತೀಕ, ವ್ಯಕ್ತಿತ್ವದ ಪ್ರತೀಕ.
“ನುಡಿದಂತೆ ನಡೆಯಬೇಕು” ಅನ್ನುತ್ತಾರಲ್ಲ ಹಾಗೆ. “ಹಿಡಿದರೆ ಹಿಡಿ ತುಂಬ ಬಿಟ್ಟರೆ ಮನೆ ತುಂಬ” ಒಗಟನ್ನು ದೀಪದ ಬೆಳಕಿಗೆ ಅನ್ವಯಿಸಿ ಹೇಳುವುದಿದೆ. ಅಂದರೆ ಬೆಳಕನ್ನು ಬೊಗಸೆಯಲ್ಲಿ ಮರೆಮಾಚಿದರೆ ಯಾರಿಗೂ ಕಾಣದು ಬಿಟ್ಟರೆ ಸುತ್ತಮುತ್ತಲೆಲ್ಲ ಬೆಳಕಾಗುತ್ತದೆ. ಅಂತೆಯೇ ಈ ನಾಲಗೆಯಿಂದ ಒಳ್ಳೆಯದನ್ನು ಮಾತನಾಡಿದರೆ, ಒಳ್ಳೆಯ ಸಂದೇಶವನ್ನು ನೀಡಿದರೆ ಇತರರಿಗೆ ದಾರಿದೀಪವಾಗಬಹುದು ಅದನ್ನು ಹೊರತುಪಡಿಸಿ ಕೆಟ್ಟದಾಗಿ, ವ್ಯಂಗ್ಯ, ಕಟಕಿ, ವಿನೋದವನ್ನಾಡಿ ಇನ್ನೊಬ್ಬರ ನೋವಿಗೆ ಕಾರಣವಾಗುವುದು ತರವಲ್ಲ. ನಾಲಿಗೆಯ ಮೇಲೆ ಒಳ್ಳೆಯ ಪದಗಳು ನರ್ತಿಸಬೇಕು. ಮಾತು ಮಾ ‘ಥೂ’ ಅನ್ನಿಸಿಕೊಳ್ಳಬಾರದು. ಬೇಸರ ನೀಗುವ ವಿದ್ಯೆಯಾಗಬೇಕು.
ಬೈಬಲ್ನಲ್ಲಿ ಯೊಹೋವಾನ ವಾಕ್ಯದಲ್ಲಿ “ರುಚಿನೋಡಿ ತಿಳಿದುಕೊಂಡೆ ಉತ್ತಮನೆಂದು” ಎಂಬ ಪದಪಂಕ್ತಿ ಇದೆ. ರುಚಿ ಎಂದರೆ ಇಲ್ಲಿ ‘ಭಗವಂತನ ಕೃಪೆ’ ‘ಆಶೀರ್ವಾದ’ ಎಂದರ್ಥವಾಗುತ್ತದೆ. ‘ರುಚಿ’ ಎಂಬ ಪದಕ್ಕೆ ‘ವಿಷಯಾಸಕ್ತಿ’, ‘ಸ್ವಾದ’ ಇತ್ಯಾದಿ ಅರ್ಥಗಳೂ ಇವೆ. ‘ವಿಷಯಾಸಕ್ತಿ’ ಅಂದರೆ ಪ್ರಾಪಂಚಿಕ ಸುಖಭೋಗಗಳಲ್ಲಿ ಒಂದು ಎಂದರ್ಥ. ಕೇವಲ ಕಾಲಹರಣ ಮಾಡಲು ಮಾತನಾಡುವುದಲ್ಲ. ‘ಕೃತಿ’ ಇರಬೇಕು ‘ಕೃತಿ’ ಎಂದರೆ ಕೆಲಸ ಎಂದರ್ಥ. ಈ ಕೆಲಸವನ್ನು ಮಾತನಾಡದೆಯೇ ನಿಷ್ಠೆಯಿಂದ ಯಾರು ಮಾಡುವವನೋ ಅವನೆ ಉತ್ತಮನು. ಹಾಗಂತ ಮಾತೇ ಆಡದೆ ಮೌನವಾಗಿರಬೇಕೆಂದಲ್ಲ. ಆದಿಕವಿ ಪಂಪ ಹೇಳಿರುವಂತೆ ಹಿತಮಿತ ಮೃದು ವಚನಿಯಾಗಿರಬೇಕು. ‘ವಚನಿ’ ಎಂದರೆ ‘ವಾಚಾಳಿ’ ಎನ್ನುತಾರೆಂದು ಸುಮ್ಮನಿದ್ದು ಬಿಡುವುದೇ? ಅದೂ ಅಲ್ಲ! “ಒಡನೆ ನುಡಿದರೆ ಸಿರಹೊಟ್ಟೆಯೊಡೆಯುವುದೇ?” ಎಂದು ಬಸವಣ್ಣ ಹೇಳಿದ್ದಾರಲ್ಲ! ಅರ್ಥಾತ್ ಮನೆಗೆ ಯಾರಾದರೂ ಬಂದರೆ ಅವರು ನಮಗಿಷ್ಟವೋ ಇಲ್ಲವೋ, ಅವರು ಬಡವರೋ ಶ್ರೀಮಂತರೋ ನಮ್ಮ ಅತಿಥಿ. ತಕ್ಷಣ ಅವರ ಯೋಗಕ್ಷೇಮ ವಿಚಾರಿಸಿ ಅವರನ್ನು ಸತ್ಕರಿಸಿ ಎಂದು ಹೇಳಿದ್ದಾರೆ. ಅದರಿಂದ ಕಳೆದುಕೊಳ್ಳುವುದು ಏನೂ ಇಲ್ಲ. ಅಂದರೆ ಪ್ರೀತಿಯಿಂದ ಮಾತನಾಡಬೇಕೆಂದಾಯಿತಲ್ಲ.
ಒರಟುಮಾತು ವ್ಯಕ್ತಿತ್ವವನ್ನು ಹಾಳು ಮಾಡುತ್ತದೆ. “ಒಡಲೆಂಬ ಹುತ್ತಕ್ಕೆ ನುಡಿವ ನಾಲಗೆ ಸರ್ಪ” ಎಂದಿದ್ದಾರೆ ಸರ್ವಜ್ಞ. ನಾಲಗೆಯಿಂದ ಒಳಿತಾಗುವುದಾದರೂ ಇದೆ. ಕೆಡುಕಾಗುವುದೂ ಇದೆ. ಬೇರೆಯವರ ವಿಚಾರ ಮಾತನಾಡುವುದು ಬೇಡ “ಅಚಾರವಂತ ನಾಲಗೆ ಚಾಡಿ ಹೇಳಲು ಬೇಡ ನಾಲಗೆ,” “ರೂಢಿಯೊಳಗೆ ಶ್ರೀರಾಮನ ನಾಮವ ಪಾಡುತಲಿರು ನಾಲಗೆ” ಎಂದು ಪುರಂದರದಾಸರು ಎಂದು ಹೇಳಿದ್ದಾರೆ. ಇಲ್ಲಿ “ನರಜನ್ಮ ಬಂದಾಗ ನಾಲಗೆ ಇರುವಾಗ ಕೃಷ್ಣ ಎನಬಾರದೆ” ಎಂಬ ವಾಕ್ಯವನ್ನು ಇಲ್ಲಿ ಉದಾಹರಿಸಬಹುದು.
ನಾಗಮಂಗಲಕ್ಕೆ ದಾರಿ ಯಾವುದು? ಎಂದರೆ ನಾಲಗೆಯೇ ದಾರಿ ಎನ್ನುವುದಿದೆ. ಅಂದರೆ ನಾಲಗೆ ಮಾರ್ಗದರ್ಶಕ ಎಂದಾಯಿತಲ್ಲ. ದೇಶ,ಕಾಲ, ರುಚಿಗೂ ನಮ್ಮ ನಾಲಗೆ ಹೊಂದಿಕೊಂಡಿರುತ್ತದೆ. ನಾವಾಡುವ ಪದ ಧ್ವನಿ ವ್ಯತ್ಯಾಸಗಳು ನಮ್ಮ ಸ್ಥಳದ ಪರಿಚಯ ಮಾಡಿಕೊಡುತ್ತವೆ.
ವ್ಯಂಗ್ಯಕ್ಕೆ ಹೇಳುವುದಾದರೆ ಯಾರಾದರೂ ಏನೂ ಮಾತನಾಡುತ್ತಿಲ್ಲ.ಎಂದರೆ “ನಾಲಗೆ ಬಿದ್ದು ಹೋಗಿದೆಯೇ” ಎನ್ನುತ್ತಾರೆ. ಗಳಿಗೆಗೊಂದು ಅಭಿಪ್ರಾಯ ಬದಲಿಸುತ್ತಿದ್ದರೆ “ಎಷ್ಟು ನಾಲಿಗೆಗಳಿವೆ ? ಸೀಳು ನಾಲಿಗೆಯೇ ?” ಎನ್ನುತ್ತಾರೆ. ಅಸಂಬದ್ಧ ಮಾತುಗಳನ್ನಾಡಿದರೆ ಎದುರುತ್ತರ ಕೊಡಬೇಡ ಎನ್ನುವುದಕ್ಕೆ “ನಾಲಗೆ ಉದ್ದಮಾಡಬೇಡ”, “ನಾಲಗೆ ಮೇಲೆ ಹಿಡಿತವಿರಲಿ”, “ನಾಲಗೆ ಹರಿಯಬಿಡಬೇಡ” ಎಂದರೆ “ನಿನಗೆ ತಕ್ಕ ಪಾಠ ಕಲಿಸುತ್ತೇನೆ” ಎಂದು ಹೇಳಲು “ನಾಲಿಗೆ ಕತ್ತರಿಸುತ್ತೇನೆ” ಎನ್ನುತ್ತಾರೆ. ಕೋಪ ಬಂದಾಗ “ನಾಲಗೆ ತುಂಡಾಗಿ ಹೋಗಲಿ” ಎಂದು ಶಪಿಸುತ್ತಾರೆ. ಗ್ರಾಮೀಣರು ಬಯ್ಯುವಾಗ “ನಿನ್ನ ಸೊಲ್ಲು ಸೋಮವಾರ ಅಡಗಲಿ ಎನ್ನುತ್ತಾರೆ. ‘ಸೊಲ್ಲು’ ಎಂದರೆ ಮಾತು. ತಮಿಳಿನಲ್ಲಿ “ಚೊಲು”್ಲ ಎಂದರು ಮಾತು ಎಂದು ಅರ್ಥ. ಜೆ.ಪಿ.ರಾಜರತ್ನಂ “ನಾಲಿಗೆ ಸೀಳಿಸಿ ಬಾಯಿ ಹೊಲಿಸಿ ಹಾಕಿದ್ರೂನು ಮೂಗಿನಲ್ಲಿ ಕನ್ನಡ ಪದವಾಡುತ್ತೇನೆ” ಎನ್ನುತ್ತಾರೆ. ಅಂದರೆ ನಾಲಿಗೆ ಒಳ್ಳೆಯ ವಿಚಾರವನ್ನು ಪ್ರಚಾರಮಾಡಲು ಬಳಕೆಯಾಗಬೇಕು ಎಂದಲ್ಲವೇ?
ನಾಲಗೆಯ ವೃತ್ತಾಂತ ಇನ್ನೂ ಮುಗಿದಿಲ್ಲ ನಾಲಗೆಯ ವಿಶ್ವರೂಪ ಇನ್ನೂ ಇದೆ! ಲೋಕದಲ್ಲಿ ಬದುಕಬೇಕಾದರೆ ನಾಲಗೆ ಬೇಕು. ಬದುಕಬೇಕು ಎಂದರೆ ಪುಷ್ಠಿಕರವಾದ ಆಹಾರ ಸೇವನೆ ಮಾಡಬೇಕು. ಆಹಾರವನ್ನು ದೇಹದೊಳಕ್ಕೆ ಸಾಗಿಸುವ ರಹದಾರಿ ಈ ನಾಲಿಗೆನೆ ಅಲ್ಲವೆ! ಅಬ್ಬ!! ನಾಲಗೆಗೆ ಎಷ್ಟೊಂದು ಮಹತ್ವ . ಇದಕ್ಕೆ ರುಚಿ ಕಂಡು ಹಿಡಿಯುವ ಶಕ್ತಿ ಇದೆ ಬಹುಶಃ ಆ ಶಕ್ತಿ ಇಲ್ಲದಿದ್ದರೆ ಮನುಷ್ಯ ಇನ್ನೆಷ್ಟು ಆರೋಗ್ಯವಂತನಾಗಿರುತ್ತದ್ದನೊ. ಮನುಷ್ಯನ ವಿಮರ್ಶಾಗುಣಕ್ಕೂ ಈ ನಾಲಿಗೆಯ ರುಚಿ ನೋಡುವ ಶಕ್ತಿಗೂ ಅವಿನಾಭಾವತೆ ಇದ್ದೇ ಇದೆ.
ಏನಿಲ್ಲದಿದ್ದರೂ ಮನುಷ್ಯ ರುಚಿಕಟ್ಟಾದ ಊಟ ಬಯಸುತ್ತಾನೆ. ಸಿಹಿ, ಖಾರ, ಉಪ್ಪು, ಹುಳಿ, ಕಹಿ, ಒಗರು ಮುಂತಾದ ಷಡ್ರಸಗಳ ಹಿತಮಿತ ಮಿಶ್ರಣ ಬೇಕೇ ಬೇಕು. ಸ್ವಲ್ಪ ಕಡಿಮೆಯಾದರೂ ಈ ನಾಲಗೆ ಒಪ್ಪುವುದಿಲ್ಲ. ಒಂದಾನೊಂದು ಕಾಲದಲ್ಲಿ ಮನುಷ್ಯ ಬದುಕುವುದಕ್ಕಾಗಿ ತಿನ್ನುತ್ತಿದ್ದ. ಈಗ ತಿನ್ನಲೆಂದೇ ಬದುಕಿದಂತಿದೆ. “ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ!” ಕನಕದಾಸರು ಹೇಳಿದ್ದಾರೆ. ಆದರೆ ಫ್ಯಾಷನ್ ಎಂಬ ಮಾಯಾ ಜಗತ್ತಿನಲ್ಲಿ ಗೇಣು ಬಟ್ಟೆಗೆ ಹೆಚ್ಚಿನ ಪ್ರಾಶಸ್ತ್ಯ ಒಗ್ಗಿ ಹೋಗಿದೆ. ಆದರೆ ಹಸಿವು ತಾಳಲಾರದೆ ಎಷ್ಟೋ ಜನರು ನರಳುತ್ತಿದ್ದರೆ, ಅಪೌಷ್ಠಿಕತೆಯಿಂದ ಬಳಲುತ್ತಿದ್ದರೆ, ನಾಲಗೆ ಚಪಲಕ್ಕೆ ಅದನ್ನು ಇಂಗಿಸಿಕೊಳ್ಳಲೆಂದೇ ಅನೇಕರಿದ್ದಾರೆ.
ನಾಲಗೆಯ ಮೇಲೆ ಆಹಾರ ಇರುವರೆಗೂ ಅಷ್ಟೆ ಅದರ ರುಚಿಗೆ , ಬಣ್ಣಕ್ಕೆ, ಆಹಾರಕ್ಕೆ ಮಹತ್ವ ಅದರ ಕೆಳಗಿಳಿದ ಮೇಲೆ ಅದಕ್ಕೆಲ್ಲಿದೆ ಬೆಲೆ………….? ಆಹಾರ ನಾಲಗೆ ತುದಿ ತಲುಪುವವರೆಗೂ ಎಷ್ಟೆಲ್ಲಾ ಜೋಪಾನ ಮಾಡುತ್ತೇವೆ. ಪ್ರತೈಕ ಖಾದ್ಯಗಳನ್ನು ಪ್ತತ್ಯೆಕ ಬಟ್ಟಲಲ್ಲೇ ಇಡುತ್ತೇವೆ. ಇಂಥ ಖಾದ್ಯಕ್ಕೆ ಇಂಥದ್ದೆ ಆಕಾರ, ಗಾತ್ರ ಇರಬೇಕು ಎನ್ನುತ್ತೇವೆ. ಅದನ್ನು ಬಡಿಸುವ ಕ್ರಮಕ್ಕೆ ಪ್ರೆಸೆಂಟೇಷನ್ ಎನ್ನುತ್ತೇವೆ. ನಾಲಗೆಯಿಂದ ಜಾರಿ ಕೆಳಗಿಳಿದರೆ ಯಾವ ಪ್ರೆಸೆಂಟೇಷನ್ ಉಳಿಯುತ್ತೆ ಹೇಳಿ!! ಊಟಕ್ಕೆ ಉಪ್ಪು ಕಡಿಮೆಯಾದರೆ. ಸಿಹಿ ಕಡಿಮೆಯಾದರೆ ಮತ್ತಷ್ಟು ಹಾಕಿಸಿಕೊಳ್ಳುತ್ತೇವೆ. ಮಜ್ಜಿಗೆ ಹುಳಿಯಾಗಿದ್ದರೆ ನೀರು ಬೆರಸುತ್ತೇವೆ. ಖಾರವಿದ್ದರೆ ಊಟವನ್ನೇ ವರ್ಜಿಸುತ್ತೇವೆ.
ಹೆಚ್ಚು ಸಿಹಿ ತಿಂದು ಹೊಟ್ಟೆ ನೋವು(ವ್ಶೆಜ್ಞಾನಿಕವಾಗಿ ಸತ್ಯವೋ ತಿಳಿದಿಲ್ಲ) ಎಂದರೆ, ಖಾರ ತಿಂದಾಗ ಹೊಟ್ಟೆಹುರಿ ಎನ್ನುತ್ತೇವೆ. ಉಪ್ಪಾಗಿದ್ದರೆ ನೀರು ಕುಡಿಯುತ್ತೇವೆ. ಹುಳಿಯಿದ್ದರೆ ತೇಗು, ಎದೆಯುರಿ ಎನ್ನುತ್ತೇವೆ. ಕಹಿ ಇದ್ದರೆ ಊಟ ಬಿಟ್ಟು ಬಾಯಿಗಿಡದೆ ನಾವು ಅಂದರೆ ನಮ್ಮ ನಾಲಗೆ ಕಹಿಯಾದದ್ದು ಉದರಕ್ಕೆ ಯಾವಗಲೂ ಸಿಹಿಯಾಗಿರುತ್ತದೆ. ನಮ್ಮ ದೇಹದ ಸಮತೋಲನ ಆಹಾರದ ಮೇಲೆ ಸ್ಥಿತವಾಗಿದೆ ಅದನ್ನು ನಿಯಂತ್ರಿಸುವುದು ನಾಲಗೆ. ರುಚಿ ಏನೂ ಗೊತ್ತಾಗದು ಎಂದರೆ ಅರುಚಿಯನ್ನು ಹೋಗಲಾಡಿಸಲು ದಾಲ್ಚಿನ್ನಿ ತಿಂದಾದರೂ ರುಚಿಕಟ್ಟಾದ ಊಟ ಸೇವಿಸುತ್ತೇವೆ. ಇಂಥ ರುಚಿಗೆ ದರ್ಶಿನಿಗಳು, star hotel ಗಳು, ಡಾಬಗಳು, Chinese, Italian, North Indian, South Indian food ಎಂದು ವಿಭಾಗಿಸಿ ಅದನ್ನೇ ಹುಡುಕುತ್ತಾ ಹೋಗುತ್ತೇವೆ.
ನಾಲಗೆ ಸಾಮಾನ್ಯ ಎನ್ನಬೇಡಿ ವೈದ್ಯರ ಬಳಿ ಹೋದಾಗಾವರು “ಎಲ್ಲಿ ಆ…….. ಮಾಡಿ ನಾಲಿಗೆ ತೋರಿಸಿ ನಾಲಿಗೆ ಹೊರಹಾಕಿ” ಎನ್ನುತ್ತಾರೆ. ಕೊರೊನಾ ಕಾಲದಲ್ಲು ಗಂಟಲು ದ್ರವ ಪರೀಕ್ಷೆಗೆ ಕೊಡುವಾಗ ನಾಲಗೆ ಹೊರಚಾಚಲೇ ಬೇಕಲ್ವ! ಅಂದರೆ ನಾಲಗೆ ದೇಹದ ಆರೋಗ್ಯದ ಪರಿವಿಡಿ ಹೇಳುವ ಪರಿವೀಕ್ಷಕನೂ ಹೌದು! ಏನಿಲ್ಲ ಎಂದರೂ ಹದಿಮೂರು ರೀತಿಯ ಆರೋಗ್ಯ ಸಮಸ್ಯೆಯನ್ನು ನಾಲಿಗೆ ನೋಡಿಯೇ ಪತ್ತೆ ಹಚ್ಚುತ್ತಾರೆ ವೈದ್ಯರು ಕೊರೊನಾ ಹೊರತು ಪಡಿಸಿ. ನಾಲಿಗೆ ತಿಳಿಕೆಂಪಾಗಿದ್ದರೆ ಆರೋಗ್ಯವಂತರೆಂದೂ, ಸ್ವಲ್ಪ ಕೆಂಪಾಗಿದ್ದರೆ, ಯಾವುದೋ ಸೋಂಕು ತಗುಲಿದೆಯೆಂದೂ, ಇನ್ನೂ ಕಡುಕೆಂಪಾಗಿದ್ದರೆ ಹೃದಯ ತೊಂದರೆ ಇದೆ ಎಂದೂ ಅರ್ಥೈಸಿಕೊಳ್ಳುತ್ತಾರೆ. ಉದರ ಸಮಸ್ಯೆಗಳ ಉದರ ದರ್ಶಕ ನಾಲಗೆನೆ ನಾಲಗೆ ಹಳದಿ ಬಣ್ಣಕ್ಕೆ ತಿರುಗಿದ್ದರೆ, ಒಳ್ಳೆಯ ಮೇದೋಜೀರಕ ಗ್ರಂಥಿಯ ತೊಂದರೆ ಇದೆ ಎಂದು ನೀಲಿ, ಕಪ್ಪು ಬಣ್ಣಕ್ಕೆ ಇದ್ದರೆ ಮೂತ್ರಪಿಂಡದ ಸಮಸ್ಯೆ ಇದೆ ಎಂದೂ ನೇರಳೆ ಬಣ್ಣದಲ್ಲಿದೆ ಎಂದರೆ ಶ್ವಾಸಕೋಶಗಳ ತೊಂದರೆ ಎಂದೂ, ಪೇಲವತೆ ಇದ್ದರೆ ವಿಟಮಿನ್ ಮತ್ತು ಪೋಷಕಾಂಶಗಳ ಕೊರತೆ ಇದೆ ಎಂದೂ ಅದೇ ನಾಲಗೆ ಬಿಳಿಯದ್ದಾಗಿದ್ದರೆ ನಿರ್ಜಲೀಕರಣ, ಫ್ಲೂನಂತಹ ಸಮಸ್ಯೆ ಎಂದೂ, ಬೂದಿ ಬಣ್ಣಕ್ಕೆ ನಾಲಿಗೆಯೂ ತಿರುಗಿದೆ ಎಂದರೆ ಅಜೀರ್ಣ ಸಮಸ್ಯೆ ಎಂದೂ ಹೇಳುತ್ತಾರೆ. ನಾಲಗೆಯ ಮೇಲೆ ಮಚ್ಚೆ ಇದೆ ನಾವು ಹೇಳಿದಂತೆ ಎಲ್ಲವೂ ನೆರವೇರುತ್ತದೆ ಅಂದುಕೊಳ್ಳುವುದರ ಬದಲು ವೈದ್ಯರನ್ನು ಭೇಟಿಯಾಗುವುದು ಸೂಕ್ತ. ಅಲ್ಲದೆ ನಾಲಿಗೆಯ ಮೇಲೆ ಇರುವ ಮಚ್ಚೆಗಳನ್ನು ಬೇರೆ ಬೇರೆ ರೀತಿಯ ಆರೋಗ್ಯ ಅಸಮತೋಲನಕ್ಕೆ ಅನ್ವಯಿಸಿ ಹೇಳುವುದಿದೆ. ಒಟ್ಟಾರೆಯಾಗಿ ಹೇಳುವುದಾದರೆ “ಬಾಯಿ ಚಪಲ”, “ಮಾತಿನ ಚಪಲ” ಎರಡು ಹಾನಿಕಾರಕ.
ನಮ್ಮ ಹಿರಿಯರು ಮಾತಿಗೆ ಮೊದಲು ನಮಗೆಲ್ಲ “ನಾಲಗೆ ಮೇಲೆ ಹಿಡಿತ ಇರಲಿ”, “ನಿಗಾ ಇರಲಿ” ಎಂದು ಹೇಳೋರು ಅಂದರೆ ನಮ್ಮ ವ್ಯಕ್ತಿತ್ವ, ಆರೋಗ್ಯ ನಿಮ್ಮ ಅಂಕೆಯಲ್ಲೇ ಇರಲಿ ಜೋಪಾನ ಅಂತ ಅದನ್ನು ಬಿಟ್ಟು ನಾಲಗೆ ಹರಿದಂತೆ ನಾವು ಹರಿಯಬಿಟ್ಟರೆ ನಾವು ವೈಯಕ್ತಿಕವಾಗಿ, ದೈಹಿಕವಾಗಿ ಸೊರಗಬೇಕಾಗುತ್ತದೆ. ಸಂಸ್ಕರಿತ ಆಹಾರ, ಕರಿದ ಪದಾರ್ಥಗಳು, ಅತೀಮಸಾಲೆಯುಕ್ತ ಆಹಾರಗಳು, ತಂಪು ಪಾನೀಯಗಳು, ಸಿಗರೇಟು, ಧೂಮಪಾನ ಸೇವನೆಗಳಿಂದ ಇಂಥ ರೋಗಗಳು ಬರುವುದು. ಬ್ಯಾಕ್ಟೀರಿಯಗಳ ಸೋಂಕು ತಗುಲಿದಾಗ, ಸ್ವಯಂ ವೈದ್ಯ ಮಾಡಿಕೊಂಡಾಗ ನಾಲಗೆ ತನ್ನ ಬಣ್ಣ ಬದಲಿಸುವುದು ಸಾಮಾನ್ಯ. ನಾಲಗೆಯಲ್ಲಿ ನೋವು ತುರಿಕೆ ಇದ್ದರೆ ತಕ್ಷಣ ವೈದ್ಯರ ಸಲಹೆ ಪಡೆಯಬೇಕು.
“ಕಿರದರಲ್ಲಿ ಹಿರಿದು” ಎಂಬಂತೆ ನಾಲಗೆ ಚಿಕ್ಕದಾದರೂ ಪರಿಣಾಮ, ಪ್ರಭಾವ ಅಗಾಧ, ನಾಲಗೆ ಮನಸ್ಸಿನ ಭಾವನೆಗಳಿಗೆ ಮಧ್ಯವರ್ತಿಯಾಗಿ ವರ್ತಿಸುತ್ತದೆ. ಮಾತುಗಳು ಆತನ ಜ್ಞಾನವನ್ನು ಒರೆಗೆ ಹಚ್ಚುವ ಸಾಧನವೂ ಹೌದು. ಅದಕ್ಕೆ ಕುವೆಂಪು “ಸಜೀವ ಜಿಹ್ವೆಯ ಕಾರ್ಯವನ್ನು ನಿರ್ಜೀವ ಲೇಖನಿಯು ಸಮರ್ಪಕವಾಗಿ ಮಾಡಬಲ್ಲುದೆ?” ಎಂದಿರುವುದು. ನಿಜಕ್ಕೂ ಆಶ್ಚರ್ಯ ಎನಿಸುತ್ತದೆ. ಎಂಥವರಿಗೂ ಸೋಲದ ನಾವು ನಾಲಗೆಗೆ ಸೋಲುತ್ತೇವೆ. ಅದು ಬಯ್ಯುವ ಎದುರಾಳಿಯ ನಾಲಿಗೆಗಾಗಿ ಇರಬಹುದು! ರುಚಿ ಹೇಳುವ ನಮ್ಮ ನಾಲಗೆ ಇರಬಹುದು! ಒಟ್ಟಾರೆಯಾಗಿ “ಸರ್ವೇಂದ್ರೀಯಾಣಾಂ ಜಿಹ್ವಾಪ್ರಧಾನಂ” ಎನ್ನಬಹುದೇ………….. ? ಏನಂತೀರ ?.
ಆಚಾರವಂತ ನಾಲಗೆಯನ್ನು ಮುಡಿವಂತಿಕೆಯಿಂದ ಇರಿಸಿಕೊಳ್ಳಬೇಕಾಗಿದೆ.
ನಾಲಗೆ offline,online ರೀತಿ ಇರಬೇಕು. ಅಂದರೆ ಎದುರೊಂದು ಬೆನ್ನಹಿಂದೊಂದು ಮಾತನಾಡಬಾರದು. ಬೃಹತ ಹಡಗನ್ನು ಲಂಗರು ನಿಯಂತ್ರಿಸುವಂತೆ ಆಜಾನುಬಾಹು ಈ ಶರೀರವನ್ನು ನಿಯಂತ್ರಿಸುವುದು ಇಂಚುಗಳ ಆಳತೆಯ ನಾಲಗೆ. ನಾಲಗೆ ವಾಸಿಸುವುದು ಹಲ್ಲುಗಳು ಎಂಬ ದುಷ್ಟರೊಡನೆ. ನಾಲಗೆಯನ್ನು ವ್ಯಕ್ತಿಗೆ ಹೋಲಿಸಿದರೆ ದಂತಾವಳಿಯನ್ನು ಸಮಾಜಕ್ಕೆ ಹೋಲಿಸಬಹುದು. ಎಷ್ಟು ಸಂಯಮದಿಂದ ಇದ್ದರು ನಮಗೆ ಅನುಕೂಲ. ನಮ್ಮಲ್ಲಿ ಅತ್ಮವಿಶ್ವಾಸವಿದ್ದರೆ ಮಾತನಾಡುವಾಗ ಮಾತುಗಳು ತೊದಲುವುದಿಲ್ಲ. ಗಾಬರಿ, ಗೊಂದಲ ಅಪರಾಧಿಭಾವ ಇದ್ದರೆ, ವಿಚಾರ ತಿಳಿಯದೇ ಇದ್ದರೆ ಸಂಭಾಷಣೆಯಲ್ಲಿ ಅನವಶ್ಯ ನಗು, ಕೆಮ್ಮು, ದಮ್ಮು, ತಲೆ ತುರಿಕೆ ಎಲ್ಲಾ ಬರುತ್ತದೆ. ಇಲ್ಲವೆ ಎದುರಿದ್ದವರನ್ನು ಕನ್ವಿನ್ಸ್, ಕನ್ಫ್ಯೂಸ್ ಎರಡನ್ನು ಮಾಡುತ್ತದೆ. ಇಲ್ಲವಾದರೆ ಮಾಲಪ್ರೋಪಿಸಮ್ ಬರುತ್ತದೆ. ಅಂದರೆ ತರಕಾರಿ>ತಕರಾರಿ, ಚೀಟಿ>ಟೀಚಿ, ಬೆಳಗ್ಗೆ>ಬೆಳಗಡೆ ಇತ್ಯಾದಿ ಆಗುತ್ತದೆ. ಬಾಯನ್ನು ನಾಲಗೆಯನ್ನು ಕಾಯಬಲ್ಲವನು ತೊಂದರೆ ತಾಪತ್ರಯಗಳನ್ನು ಜಯಿಸಿಬಲ್ಲವನು ಎನ್ನುತ್ತಾರೆ. ಅಂದರೆ ನಮ್ಮ ನಾಲಗೆಯಿಂದ ಹೊರಬರುವ ಮಾತು ನಮ್ಮನ್ನು ನಲಿಸಬೇಕು ನಲುಗಿಸಬಾರದು. ಗೆಲಿಸಬೇಕು! ನಗಿಸಬೇಕು! ನಲಿವಿಗೆ ದಾರಿಮಾಡಿಕೊಡಬೇಕು! ಹೌದಲ್ವ!!
ಹೆಚ್ಚಿನ ಬರಹಗಳಿಗಾಗಿ
‘ಅಕ್ಷರ ಲೋಕ’ದ ಗಾರುಡಿಗ
ಕೊಡವರ ಆಷಾಢದ ವಿಶೇಷ ಹಬ್ಬಮತ್ತು ಮದ್ದುಪಾಯಸ
ವಡ್ಡಾರಾಧನೆಯ ಕಾರ್ತಿಕ ಋಷಿ ಮತ್ತು ‘ಈಡಿಪಸ್ ಕಾಂಪ್ಲೆಕ್ಸ್’