- ಸಾಜಿದಾ ಅಲಿಯಾಸ್ ಸಲ್ಮಾ - ಅಕ್ಟೋಬರ್ 29, 2024
- ರೇಟಿಂಗ್ ಗಳ ಧೋರಣೆ - ಅಕ್ಟೋಬರ್ 20, 2024
- ಬೇಲಿಯೇ ಎದ್ದು….. - ಸೆಪ್ಟೆಂಬರ್ 29, 2024
“ ಸರ್ವೇಂದ್ರಿಯಾಣಾಂ ನಯನಂ ಪ್ರಧಾನಂ “ ಎನ್ನುತ್ತದೆ ಗಾದೆ. ಕಣ್ಣು ಕಾಣದಿದ್ದಲ್ಲಿ ಜಗತ್ತೇ ಕಾಣದೇ ಕುರುಡಾಗಿ ಮನುಷ್ಯ ತನ್ನ ಜೀವನದ ಅತಿ ಮಹತ್ವದ ಕ್ಷಣಗಳನ್ನು ರಸಹೀನವಾಗಿ ಕಳೆಯಬೇಕಾಗುತ್ತದೆ ಎನ್ನುವುದು ಸತ್ಯವಾದರೂ ಮುಖದಲ್ಲಿ ಅತಿ ಮುಖ್ಯವಾಗಿ ಕಾಣುವ ಮೂಗಿನದು ಸಹ ಅಷ್ಟೇ ಮಹತ್ವವಿದೆ ಎಂದು ನನ್ನ ಭಾವನೆ. ಕಣ್ಣಿನ ಬಗ್ಗೆ ಕವಿಗಳು ಅದೆಷ್ಟೋ ಕವಿತೆಗಳು ಬರೆದಿದ್ದಾರೆ. ಕಮಲಗಳಿಗೆ ಹೋಲಿಸಿದ್ದಾರೆ. ಅವುಗಳ ಆಳವನ್ನು ಬಣ್ಣಿಸಿದ್ದಾರೆ. ಬೆಳ್ಳಿ ಬಟ್ಟಲಿನಂಥ ಕಂಗಳು, ಹರಿಣನಯನೆ, ವಿಶಾಲನಯನೆ, ರಾಜೀವ ಲೋಚನ ಹೀಗೆ ಅನೇಕ ವಿಶೇಷಣಗಳು ಕೂಡ ಹುಟ್ಟುಕೊಂಡಿವೆ.
ಹಾಗಾದರೆ ಮೂಗಿನ ಸ್ಥಾನವೇನು ಎಂದು ನೋಡೋಣ. ಪಂಚಪಾಂಡವರಲ್ಲಿ ಒಬ್ಬೊಬ್ಬರದೂ ಒಂದೊಂದು ವಿಶೇಷ ಯುದ್ಧ ಕಲೆ. ಅತಿ ಶ್ರೇಷ್ಠ ಬಿಲ್ಲುಗಾರನಾದ ಅರ್ಜುನನ್ನು ನಾವು ಕಣ್ಣಿಗೆ ಪ್ರತೀಕವೆಂದೆಣಿಸಿದರೆ, ಅತಿ ಶ್ರೇಷ್ಠ ಗದಾವಿದ್ಯ ಸಂಪನ್ನನಾದ ಭೀಮಸೇನನ್ನು ನಾವು ಮೂಗಿಗೆ ಹೋಲಿಸಬಹುದು (ಈ ಹೋಲಿಕೆ ಇತ್ತೀಚೆಗೆ ಪ್ರಸಾರವಾದ ಮಹಾಭಾರತ್ ಧಾರಾವಾಹಿಯ ಪ್ರಭಾವ)
ಮೂಗಿನಿಂದ ಮುಖಕ್ಕೆ ಅಂದ ಎಂಬುದು ನಿರ್ವಿವಾದ. ಕಣ್ಣುಗಳಿಲ್ಲದವರನ್ನು ನಾವು ನೋಡಿದ್ದೇವೆ. ಮೂಗಿಲ್ಲದವನನ್ನು ? ಊಹಿಸಲಾರೆವು. ಮೂಗು ಎರಡು ವಿಧದ ಕೆಲಸ ಮಾಡುತ್ತದೆ. ಅಂದರೆ ಟೂ ಇನ್ ಒನ್.
ಅದು ಉಸಿರಾಡುತ್ತದೆ ಮತ್ತು ಮೂಸುತ್ತದೆ. ಅಂದರೆ ಕಾರ್ಯನಿರ್ವಹಣೆಯಲ್ಲಿ ಮೂಗಿಗೊಂದು ಮಾರ್ಕು ಜಾಸ್ತಿಯೇ.
ಮೂಗು ಉಸಿರಾಟದ ಬಾಗಿಲು. ಅದರ ಹೊಳ್ಳೆಗಳಲ್ಲಿ ಸದಾ ಇರುವ ಪಸೆ ಒಳಹೋಗಲೆತ್ನಿಸುವ ಧೂಳಿನ ಕಣಗಳನ್ನು ಸಮರ್ಥವಾಗಿ ತಡೆದು ಶುದ್ಧ ಆಮ್ಲಜನಕವನ್ನು ಒಳಕಳಿಸುತ್ತದೆ. ಉಸಿರಿಲ್ಲದ ಬದುಕಿದೆಯೇ ? ಉಸಿರು ವಾಯುದೇವರ ಪ್ರತೀಕ. ಅಂದರೆ ಮೂಗಿನ ಪ್ರಾಮುಖ್ಯತೆ ಎಷ್ಟು ಎಂದು ನೀವೇ ಊಹಿಸಿ.
ಮೂಗು ತನ್ನ ಮೂಸುವ ಗುಣದಿಂದ ಕೆಲ ಪದಾರ್ಥಗಳ ನಾತವನ್ನು ಪತ್ತೆ ಹಚ್ಚಿ ಅವುಗಳೆಡೆಗೆ ಹೋಗದೆ, ಅಥವಾ ಕೆಲ ಪದಾರ್ಥಗಳನ್ನು ತಿನ್ನದೇ ತಡೆದು ನಮ್ಮ ಸ್ವಾಸ್ಥ್ಯಕ್ಕೆ ಸಹಾಯವಾಗುತ್ತದೆ. ಕೆಟ್ಟವಾಸನೆ ಬಂದಾಗ ನಾವು ಮೂಗು ಮುರಿಯುತ್ತೇವೆ. ಹಾಗೇ ಅಸಹನೆ ತೋರಿಸುವುದನ್ನು “ಮೂಗು ಮುರಿಯುವುದು” ಎನ್ನುವುದು ಒಂದು ನುಡಿಗಟ್ಟಾಗಿ ನಮ್ಮ ಭಾಷಾ ಸಂಪತ್ತನ್ನು ಹಿರಿದಾಗಿಸಿದೆ. ಹಾಗೆಯೇ ಸುವಾಸನೆ ಎಲ್ಲಿಂದಲಾದರೂ ಬಂದಾಗ ಅದನ್ನು ಘ್ರಾಣಿಸಿದ ಮೂಗು ಅದರೆಡೆಗೆ ಹೋಗುವಂತೆ ಪ್ರೇರೇಪಿಸುತ್ತದೆ. ಅದು ಸ್ವಾದಿಷ್ಟ ಪದಾರ್ಥವಾದರೆ ಅದರ ಸುಳಿವನ್ನು ಮೆದಳಿಗೆ ಕೊಟ್ಟು ಬಾಯಲ್ಲಿ ನೀರು ತರಿಸಿ ಹಸಿವೆಯನ್ನು ಹೆಚ್ಚಿಸುತ್ತದೆ. ಮತ್ಯಾವುದರದ್ದೋ ಪರಿಮಳ ಅಂತಾದರೆ ಅದಕ್ಕೆ ತಕ್ಕ ಹಾಗೆ ಮೈಯನ್ನು ಪ್ರಚೋದಿಸುತ್ತದೆ.
ಇನ್ನು ನಾವು ಮುಖದ ಅಂದವನ್ನು ಹೆಚ್ಚಿಸುವ ಮೂಗು ಯಾವ ರೀತಿಯಾಗಿ ಹೊಗಳಲ್ಪಡುತ್ತದೆ ನೋಡೋಣ. ಸಂಪಿಗೆ ಎಸಳಿನಂಥ ಮೂಗು ಎನ್ನುವದು ಕವಿಗಳು ಸಾಮಾನ್ಯವಾಗಿ ಬಳಸುವ ವಿಶೇಷಣ. ಹೆಂಗಸರ ವರ್ಣನೆಯಲ್ಲಿ ಮೂಗಿಗೆ ಹೇಳಿ ಮಾಡಿಸಿದಂಥ ವಿಶೇಷಣವಿದು. ಇಂಥ ಚೆಂದದ ಮೂಗಿಗೆ ತರತರದ ಮೂಗುತಿಗಳನ್ನು ಹಾಕಿಕೊಂಡು ಮೆರಯುತ್ತಾರೆ ಹೆಂಗಳೆಯರು. ಮೂಗಿನಿಂದಾಗಿ ಅವರಿಗೊಂದು ಎಕ್ಸ್ಟ್ರಾ ಒಡವೆಯಂತೂ ಸಿಕ್ಕಿದ್ದು ನಿಜ. ಅದರ ಜೊತೆ “ಮೂಗಿಗಿಂತ ಮೂಗುತಿ ಭಾರ” ಎನ್ನುವ ಗಾದೆಯು ಸಹ ಪ್ರಚಲಿತಕ್ಕೆ ತಂದಿದ್ದಾರೆ ಅನ್ನಿ.
ಹಾಗಂತ ಎಲ್ಲರದ್ದೂ ಇಂಥ ಚೆಂದ ಮೂಗೇ ಇರಬೇಕೆಂದಿಲ್ಲ. ಮನುಷ್ಯರು ಭಿನ್ನ ಭಿನ್ನವಾಗಿರುವ ಹಾಗೆ ಮೂಗಿನ ಸ್ವರೂಪ ಸಹ ಭಿನ್ನ. ಡೊಣ್ಣ ಮೆಣಸಿನಕಾಯಿ ಮೂಗು, ಮೊಂಡು ಮೂಗು, ಗಿಣಿ ಮೂಗು ಹೀಗೆ ಮೂಗಿನ ಆಕಾರಕ್ಕೆ ತಕ್ಕ ಹಾಗೆ ಅದಕ್ಕೆ ಬೇರೇ ಬೇರೇ ಹೆಸರಿವೆ. ಒಮ್ಮೊಮ್ಮೆ ಅದು ಆ ವ್ಯಕ್ತಿಯನ್ನು ಗುರ್ತು ಹಿಡಿಯುವ ಅತಿ ದೊಡ್ಡ ಸುಳಿವಾಗಿರುತ್ತದೆ. ಇಂಥ ವಿಲಕ್ಷಣ ಮೂಗುಗಳು ವ್ಯಂಗ್ಯ ಚಿತ್ರಕಾರರಿಗೆ ಸಮರ್ಥ ವಿಷಯವನ್ನೊದಗಿಸುತ್ತವೆ. ಉದಾ: ತೆಲಂಗಾಣದ ಮುಖ್ಯಮಂತ್ರಿಗಳಿಗಿರುವ ಮೊಂಡು ಮೂಗು ಅವರ ವ್ಯಂಗ್ಯ ಚಿತ್ರಗಳಲ್ಲಿ ಅತಿ ಪ್ರಮುಖವಾಗಿ ಕಾಣುವುದನ್ನು ನೆನೆಸಿಕೊಳ್ಳಬಹುದು. ಹಾಗೆ ಜಗತ್ತಿನ ಅನೇಕ ರಾಜಕೀಯ ವ್ಯಕ್ತಿಗಳು ತಮ್ಮ ಮೂಗಿನಿಂದ ವ್ಯಂಗ್ಯ ಚಿತ್ರಕಾರರ ಕುಂಚಕ್ಕೆ ಬಲಿಯಾಗಿದ್ದಾರೆ.
ಮೂಗಿನ ಮಹತ್ವ ಅಂಥಿಂಥದಲ್ಲ. ಇಡೀ ರಾಮಾಯಣದಲ್ಲಿ ಅತಿ ಮುಖ್ಯ ತಿರುವಿಗೆ ಕಾರಣವಾದ ಸೀತೆಯ ಅಪಹರಣಕ್ಕೆ ನಾಂದಿಯಾದದ್ದು ಮೂಗಿನ ಪ್ರಕರಣವೇ. ಶೂರ್ಪಣಖೆ ಮೋಹಿಸಿ ಬಂದು ರಾಮನಿಗೆ ಹೇಳಲು ಆತ ಅವಳನ್ನು ಲಕ್ಷ್ಮಣನ ಕಡೆಗೆ ಕಳಿಸುವುದು, ಕೋಪಗೊಂಡ ಸೌಮಿತ್ರಿ ಅವಳ ಮೂಗು, ಕಿವಿ ಕೊಯ್ದು ಅಟ್ಟುವುದು ನಮಗೆ ತಿಳಿದಿರುವುದೇ. ಅವಳು ರಾವಣನ ಹತ್ತಿರ ಹೋಗಿ ತನ್ನ ಅಳಲನ್ನು ತೋಡಿಕೊಳ್ಳುವಾಗ ರಾವಣನಿಗೆ ಅತೀವ ಕೋಪ ತರಿಸಿದ್ದು ಮೂಗಿಲ್ಲದ ಶೂರ್ಪಣಖೆಯ ಮುಖವೇ ಎಂದು ನನ್ನ ಅಂದಾಜು. ಕಿವಿ ಮುಖದ ಹಿಂದೆ ಇದ್ದು ಅವು ಮುಖದ ಅಂದಕ್ಕೆ ಮೂಗಿನಷ್ಟು ಕಾರಣವಾಗುವುದಿಲ್ಲ. ಬರೀ ಕಿವಿ ಮಾತ್ರ ಕೊಯ್ದಿದ್ದರೆ ರಾವಣ ಹಾಗೆ ರಿಯಾಕ್ಟ್ ಆಗುತ್ತಿದ್ದನೇ ಎನ್ನುವುದು ಆಲೋಚಿಸ ಬೇಕಾದ ವಿಷಯವೇ. ಆದಕಾರಣ ನಾವು ಮೂಗಿನ ಪ್ರಾಮುಖ್ಯತೆಯನ್ನು ಕಡೆಗಾಣಿಸಲಾಗುವುದಿಲ್ಲ.
ಇನ್ನು ಯೋಗದಲ್ಲಿ ಮೂಗು ಅತಿ ಮುಖ್ಯ. ಮೂಗಿನ ಹೊಳ್ಳೆಗಳನ್ನು ಮುಚ್ಚಿ, ತೆಗೆದು ಮಾಡುವ ಅನೇಕ ಶ್ವಾಸ ಸಂಬಂಧೀ ಪ್ರಕ್ರಿಯೆಗಳು ಯೋಗದಲ್ಲಿ ಹೇಳಲಾಗಿವೆ. ಪ್ರಾಣಾಯಾಮದಲ್ಲಿನ ಅತಿ ಪ್ರಧಾನವಾದ ಶ್ವಾಸ ನಿಯಂತ್ರಣಕ್ಕೆ ಬೇಕಾದ ಮತ್ತು ನಮ್ಮ ಕೈಗೆ ಸಿಗುವ ಒಂದೇ ಅಂಗವೆಂದರೆ ಮೂಗು ಮಾತ್ರ. ಕಪಾಲಭಾತಿ, ಭ್ರಾಮರಿ, ಭಸ್ತ್ರಿಕ, ಅನುಲೋಮ ವಿಲೋಮ ಶ್ವಾಸ, ನೇತಿಗಳು ಹೀಗೆ ಯೋಗಶಾಸ್ತ್ರದಲ್ಲಿ ಮೂಗಿನ ವಿಶೇಷ ಸ್ಥಾನ ಹೇಳತೀರದು.
ಮೂಗಿನಿಂದ ಉಚ್ಚರಿಸಲ್ಪಡುವ ಅಕ್ಷರಗಳಿಗೊಂದು ವರ್ಗವನ್ನೇ ಮಾಡಿ ಅವುಗಳಿಗೆ ನಾಮಕರಣ ಸಹ ಮಾಡಲಾಗಿದೆ. ವರ್ಗಾಕ್ಷರಗಳ ಕೊನೆಯ ಅಕ್ಷರಗಳೆಲ್ಲವನ್ನೂ ಅನುನಾಸಿಕಗಳು ಎಂದು ವರ್ಗೀಕರಣ ಮಾಡಿದ್ದಾರೆ. ಹಾಗಾಗಿ ಭಾಷೆಯ ಬೆಳವಣಿಗೆಯಲ್ಲೂ ಮೂಗಿನ ಪಾತ್ರ ಪ್ರಶಂಸನೀಯ.
ಮೂಗಿನ ಬಗ್ಗೆ ಇರುವ ಗಾದೆಗಳು ಭಾಷಾ ಸಂಪತ್ತನ್ನು ಹೇಗೆ ಹೆಚ್ಚಿಸಿವೆ ಎಂದು ಒಮ್ಮೆ ನೋಡೋಣ. “ಮೂಗಿಗೆ ತುಪ್ಪ ಸವರುವುದು” “ ಮೂಗು ತೂರಿಸುವುದು “ “ಮೂಗೆಳೆಯುವುದು” ಇಲ್ಲಿ ಉಲ್ಲೇಖಿಸಬಹುದು. ಕೆಲ ಗಾದೆಗಳ ರೂಪಾಂತರಗಳು ಪಾಶ್ಚಾತ್ಯರ ಬಳಕೆಯಲ್ಲೂ ಸಿಗುತ್ತವೆ. “ಪೋಕಿಂಗ್ ದಿ ನೋಸ್” ಉದಾಹರಣೆ. ಇನ್ನು “ಮೂಗಿನ ತುದಿಯ ಕೋಪ” ದ ಬಗ್ಗೆ ನಾವು ಪುರಾಣಗಳಲ್ಲಿ ತಿಳಿದಿದ್ದೇವೆ ಶೀಘ್ರ ಕೋಪಿಗೆ ಇದು ಅನ್ವರ್ಥ ನಾಮ. ಏನಾದರೂ ಅವಮಾನವಾದಲ್ಲಿ ಹಿಂದಿಯವರು “ ನಾಕ್ ಕಟ್ ಗಯೀ’ ಎನ್ನುತ್ತಾರೆ. ಯಾರದ್ದಾದರು ವ್ಯಕ್ತಿಗತ ವಿವರಗಳಲ್ಲಿ ತೀರ ಆಸಕ್ತಿ ತೋರಿಸುವವರಿಗೆ “ ಹಿ ಈಸ್ ಟೂ ನೋಸೀ” ಎನ್ನುತ್ತಾರೆ ಇಂಗ್ಲೀಷಿನ ಜನ. ಸುತ್ತಮುತ್ತ ಏನು ನಡೆಯುತ್ತಿದ್ದರು ತನಗೇನು ಸಂಬಂಧವಿಲ್ಲದಂತಿರುವವನ್ನು ತೆಲುಗಿನವರು “ ಮುಕ್ಕು ಮೂಸುಕುನಿ ತಪಸ್ಸು ಚೇಸ್ತುನ್ನಾಡು “ ಎನ್ನುತ್ತಾರೆ. ಹೆಸರಾಂತ ಕತೆಗಾರರಾದ ಯಶ್ವಂತ ಚಿತ್ತಾಲರು ತಮ್ಮ ಕತೆಗಳಲ್ಲಿ ಪಾರಸೀ ಜನವನ್ನು “ ನಾಸಿಕಾ ಪ್ರಧಾನ ಜನಾಂಗ “ ಎಂದು ವರ್ಣಿಸಿದ್ದಾರೆ. ಅವರ ಮೂಗಿನ ಲಕ್ಷಣದ ಮೇಲೆಯೇ ಅವರನ್ನು ಗುರುತಿಸಬಹುದಂತೆ.
ತನ್ನ ಮೂಗನ್ನೇ ವಿಶಿಷ್ಟವಾಗಿ ಬಳಸಿ ಹೆಸರಾಗಿರುವ ಪ್ರಾಣಿ ಎಂದರೆ ನಾಯಿ. ಅದು ಮೂಸುವುದರ ಮೂಲಕವೇ ತನ್ನ ಅಥವಾ ಪರರನ್ನು ಗುರುತಿಸಿಕೊಳ್ಳುತ್ತದೆ. ಮತ್ತೆ ಅದೇ ಗುಣದಿಂದಲೇ ಅಪರಾಧಿಗಳನ್ನು ಹಿಡಿದುಕೊಡುತ್ತದೆ. ಹಾಗೆ ನೋಡಿದರೆ ಪ್ರಾಣಿಗಳ ಜೀವನದಲ್ಲಿ ಅವುಗಳ ಮೂಗು ಮನುಷ್ಯರ ಮೂಗಿನಂತೆ ಎರಡನೆಯ ದರ್ಜೆಯ ಸ್ಥಾನವಲ್ಲದೇ ಪ್ರಧಾನ ಸ್ಥಾನ ಪಡೆಯುತ್ತದೆ. ಅವುಗಳೆಲ್ಲ ತಮ್ಮ ಮೂಗಿನ ಗುಣವನ್ನು ಉಪಯೋಗಿಸಿಕೊಂಡು ತಮ್ಮ ಆಹಾರವನ್ನು ಹುಡುಕಿಕೊಳ್ಳುತ್ತವೆ ಮತ್ತು ವೈರಿಗಳಿಂದ ತಪ್ಪಿಸಿಕೊಳ್ಳುತ್ತವೆ.
ಇದೀಗಂತೂ ಕೊರೋನಾ ವೈರಸ್ ಬಂದೆರಗಿದ ಮೇಲೆ ಮೂಗಿನ ಉಲ್ಲೇಖ ತುಂಬಾ ಆಗುತ್ತಿದೆ. ಆ ರೋಗಾಣು ಮೂಗಿನ ಮತ್ತು ಗಂಟಲಿನ ಒದ್ದೆಯಲ್ಲೇ ಬೆಳೆದು ಶ್ವಾಸಕೋಶಕ್ಕೆ ದಾಳಿ ಮಾಡುತ್ತದೆ ಎಂದು ಗೊತ್ತಾಗಿ ಮೂಗಿಗೆ ಗವುಸು (ಮಾಸ್ಕ್) ಹಾಕಿ ತಿರುಗಬೇಕಾಗಿ ಬರುತ್ತಿದೆ.
ಕೊನೆಯಲ್ಲಿ ನಾಸಿಕದ ಪ್ರಾಮುಖ್ಯತೆಗೆ ಮರುಳಾದ ನಮ್ಮ ಆಧುನಿಕ ಕನ್ನಡ ಸಾಹಿತ್ಯದ ಅಶ್ವತ್ಥ ವೃಕ್ಷವೆಂದು ಪ್ರಸಿದ್ಧಿಯಾದ ಶ್ರೀಮಾನ್ ಡಿವಿಜಿ ಯವರು ತಮ್ಮ ಕಗ್ಗದಲ್ಲಿ ಒಂದು ಪದ್ಯ ಇದನ್ನು ವರ್ಣಿಸುವುದಕ್ಕೇ ಮೀಸಲಾಗಿಸಿದ್ದಾರೆ.
ನಾಸಿಕದ ಮಾಟದಿಂದಾ ಕ್ಲಿಯೋಪಾಟ್ರಳಿಗೆ |
ದಾಸರಾದರು ಶೂರ ಸೀಸರ್ ಆಂಟನಿಗಳ್ ||
ದೇಶಚರಿತೆಗಮವರ ಜಸಮಮಂಕುಶವಾಯ್ತು |
ನಾಸಾಪುಟದ ರೇಖೆ – ಮಂಕುತಿಮ್ಮ ||
ಇತಿ ನಾಸಿಕಾ ಪುರಾಣಃ ?
ಹೆಚ್ಚಿನ ಬರಹಗಳಿಗಾಗಿ
ವಿಶ್ವ, ವಿಶಾಲೂ ಮತ್ತು ಅಧ್ಯಾತ್ಮ
ರೇಟಿಂಗ್ ಗಳ ಧೋರಣೆ
ಬೇಲಿಯೇ ಎದ್ದು…..