ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಆಚೀಚಿನ ಆಯಾಮ ೫: ನೆರೆ ಹೊರೆ

ಚಂದಕಚರ್ಲ ರಮೇಶ ಬಾಬು
ಇತ್ತೀಚಿನ ಬರಹಗಳು: ಚಂದಕಚರ್ಲ ರಮೇಶ ಬಾಬು (ಎಲ್ಲವನ್ನು ಓದಿ)

ಈ ನೆರೆ ಹೊರೆ ಎಂಬ ಜಂಟಿ ಪದಗಳು ಅದು ಹೇಗೆ ಪಕ್ಕದ ಮನೆಗೆ ಅನ್ವಯವಾದವೋ ಗೊತ್ತಿಲ್ಲವಾಗಲಿ ಅವುಗಳ ಬಿಡಿ ಅರ್ಥಗಳ ಪ್ರಭಾವವಂತೂ ಈ ಜಂಟೀಪದದ ಮೇಲೆ ಬೀಳುವುದು ಕಾಣುತ್ತದೆ. ಅದು ಹೇಗೆ ಅಂತ ಅಂತೀರಾ! ಸ್ವಂತ ಅನುಭವಕ್ಕಿಂತ ಬೇರೇನು ಬೇಕು. ಕೊರೋನಾ ಲಸಿಕೆ ಕಂಡುಹಿಡಿದವನು ತನ್ನವರ ಮೇಲೆ ಪ್ರಯೋಗಿಸಿದ ಹಾಗೆ ನನ್ನ ಅನುಭವಗಳನ್ನೇ ಒರೆಗೆ ಹಚ್ಚಿ ಕಂಡುಕೊಂಡಿದ್ದೇನೆ.

ಮನುಷ್ಯ ಒಬ್ಬ ಸಮಾಜ ಜೀವಿ. ಸಮಾಜದಿಂದ ತನ್ನನ್ನು ಹೊರತುಪಡಿಸಲಾರ. ಈ ಸಮಾಜದ ಚೌಕಟ್ಟಿನಲ್ಲಿ ಬಂಧು ಬಳಗ ಸ್ನೇಹಿತರ ಜೊತೆಗೆ ಅಕ್ಕ ಪಕ್ಕದ ಮನೆಯವರೂ ಸೇರುತ್ತಾರೆ. ಒಬ್ಬ ಮನುಷ್ಯನ ನಡಾವಳಿ ಮತ್ತು ವ್ಯಕ್ತಿತ್ವದ ಮೇಲೆ ಇವರೆಲ್ಲರ ಪ್ರಭಾವ ಇದ್ದೇ ಇರುತ್ತದೆ. ಕೆಲವೊಮ್ಮೆ ಸಮಾಜದ ಕಠೋರ ಕಟ್ಟಳೆಗಳಿಗೆ ಕಟ್ಟುಬಿದ್ದು ತನ್ನತನವನ್ನು ಕಳೆದುಕೊಳ್ಳುವುದೂ ಆಗುತ್ತದೆ.

ಹಳೆಯ ಕಾಲದಲ್ಲಿ ಮನೆಗಳಿಗೆ ವಿಶಾಲ ಆವರಣವಿರುತ್ತಿತ್ತು. ಹಾಗಾಗಿ ಪಕ್ಕದ ಮನೆಯವರು ಎನ್ನುವವರು ಸ್ವಲ್ಪ ದೂರವೇ ಇರುತ್ತಿದ್ದರು. ಜನಸಂಖ್ಯೆ ಜಾಸ್ತಿಯಾಗುತ್ತಾ ಮನೆಗಳು ಚಿಕ್ಕವಾಗುತ್ತ ಮನುಷ್ಯರು ಹತ್ತಿರವಿರುವುದು ಪ್ರಾರಂಭವಾಯಿತು. ಆದರೆ ಹತ್ತಿರವಾಗಲಿಲ್ಲ. ಮನುಷ್ಯರ ನಡುವಿನ ಸ್ಪೇಸ್ ಕಮ್ಮಿಯಾಗುತ್ತ ಹೋಯಿತು. ತಮ್ಮದಲ್ಲದ ಜಾಗದ ಸಲುವಾಗಿ ಕಚ್ಚಾಟ ಶುರುವಾಯಿತು. ಆಗ ಪ್ರಾರಂಭವಾಯಿತು ಈ ನೆರೆ ಹೊರೆಯವರು ಏಕೆ ನೆರೆ ಅಥವಾ ಏಕೆ ಹೊರೆ ಎಂದು.

ಈಗಂತೂ ಪಟ್ಟಣಗಳಲ್ಲಿ, ನಗರಗಳಲ್ಲಿ ಅಪಾರ್ಟ್ ಮೆಂಟ್ ಗಳೇ ಜಾಸ್ತಿ. ಅವುಗಳಲ್ಲಿಯ ಫ್ಲಾಟ್ ಗಳೆಂಬ ಗುಬ್ಬಿಗೂಡುಗಳಲ್ಲಿ ವಾಸ. ಅಲ್ಲಿಯ ಸವಲತ್ತುಗಳನ್ನು ಎಲ್ಲರೂ ಸೇರಿ ಹಂಚಿಕೊಳ್ಳಬೇಕು. ನಾವು ಭಾರತೀಯರು ಹಂಚಿಕೊಳ್ಳುವುದರಲ್ಲಿ ಹಿಂದೆಯೇ. ಮುಗಿಬೀಳುವುದರಲ್ಲಿ ಮುಂದೆ. ಹಾಗಾಗಿ ಕಚ್ಚಾಟ. ನಾವಾಯಿತು ನಮ್ಮ ಮನೆಯಾಯಿತು ಎನ್ನುವ ಯೋಚನೆಯೊಂದಿಗೆ ನಮ್ಮ ಮನೆಯ ಹೊಲಸನ್ನು ಪಕ್ಕದ ಮನೆಗೆ ಹಾಕಲು ಹಿಂದೆಮುಂದೆ ನೋಡುವುದಿಲ್ಲ. ಹಾಗಾಗಿ ಈ ಸಮನಾಗಿ ಹಂಚಿಕೊಳ್ಳುವ ಕಾರ್ಯಕ್ರಮ ಆಗಾಗ ಎಡವುತ್ತಿರುತ್ತದೆ. ಈ ಸಂದರ್ಭದಲ್ಲಿ ನೆರೆ ಹೊರೆಯವರ ಪಾತ್ರ ಎದ್ದು ತೋರುತ್ತದೆ.

ಅಕ್ಕ ಪಕ್ಕದ ಮನೆಯವರೊಂದಿಗೆ ಹೊಂದಿಕೊಂಡು ಹೋಗಬೇಕೆನ್ನುವುದು ಸಮಾಜದ ನಿಯಮ ಮತ್ತು ಹಿರಿಯರ ಉಪದೇಶ. ಯಾರ ಜೊತೆಗೂ ಬೆರೆಯದೇ ಇದ್ದವನ ಪಾಡು ಏನಾಯಿತು ಎನ್ನುವುದು ನಮಗೆ “ಬೂತಯ್ಯನ ಮಗ ಅಯ್ಯು” ಚಿತ್ರದಲ್ಲಿ ತೋರಿಸಲಾಗಿದೆ. ಈಗೀಗಂತೂ ಎಮೋಷನಲ್ ಕೋಷೆಂಟ್ ಎನ್ನುವ ಪದದೊಂದಿಗೆ ತಯಾರಾದ ಸಮಾಜ ಶಾಸ್ತ್ರಜ್ಞರು, ಒಬ್ಬ ಮನುಷ್ಯನ ನೆಮ್ಮದಿಯ ಜೀವನದ ಸಂಕೇತ ಈ ಕೋಷೆಂಟ್ ಎನ್ನುತ್ತಾರೆ. ಸುತ್ತಮುತ್ತಲಿನವರೊಂದಿಗೆ ಮತ್ತೆ ಹತ್ತಿರದವರೊಂದಿಗೆ ಸತ್ಸಂಬಂಧಗಳಿಲ್ಲದಲ್ಲಿ ಈ ಪೇಪರಿನಲ್ಲಿ ತುಂಬಾ ಕಮ್ಮಿ ಅಂಕಗಳು ಸಿಕ್ಕು ಮುಂದಿನ ಪೀಳಿಗೆಯವರಾದ ಜೆನ್ ಎಕ್ಸ್ ನವರಿಂದ ಕೋರೆನೋಟಗಳನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ನೆರೆಹೊರೆಯವರೊಂದಿಗೆ ಸತ್ಸಂಬಂಧಗಳಿರಿಸಿಕೊಳ್ಳುವುದು ನಮ್ಮ ಸಾಮಾಜಿಕ ಹೊಣೆಯಾಗುತ್ತದೆ.

ಈ ಸೂತ್ರವನ್ನು ತುಂಬಾ ನಿಯತ್ತಿನಿಂದ ಅನುಸರಿಸಲು ಹೋದ ನನಗೆ ಕೆಲ ಕಹಿ ಅನುಭವಗಳು ಎದುರಾಗಿದ್ದು ಅದು ನಿಮ್ಮ ಮುಂದಿಡುತ್ತಿದ್ದೇನೆ. ನಾವಿರುತ್ತಿರುವುದು ನಗರದ ಒಂದು ಬಡಾವಣೆಯಲ್ಲಿಯ ಒಂದು ಫ್ಲಾಟಿನಲ್ಲಿ. ಅದೂ ಐದನೆಯ ಅಂತಸ್ತಿನಲ್ಲಿ. ಆ ಅಪಾರ್ಟ್ ಮೆಂಟಿನ ಇತರೆ ಅಂತಸ್ತುಗಳ ಫ್ಲಾಟುಗಳವರು ಸಾಮಾನ್ಯ ನೆರೆಹೊರೆಯವರೆನ್ನಬಹುದು. ನನ್ನ ಪಕ್ಕದ ಫ್ಲಾಟಿನವರು ಅತ್ಯಂತ ನೆರೆಹೊರೆಯಾಗುತ್ತಾರೆ; ಅಲ್ಲವೇ ! ನನ್ನ ಪಕ್ಕದ ಫ್ಲಾಟಿನಲ್ಲಿ ಒಬ್ಬ ನಿವೃತ್ತ ಸರ್ಕಾರಿ ನೌಕರರ ಕುಟುಂಬವಿತ್ತು. ಅವರು ಪಟ್ಟಣದಲ್ಲಿ ತಮ್ಮ ಸರ್ವೀಸ್ ಮುಗಿಸಿ ಮಕ್ಕಳ ಸಲುವಾಗಿ ಈ ನಗರಕ್ಕೆ ಬಂದಿದ್ದರು. ಎರಡು ಗಂಡು, ಎರಡು ಹೆಣ್ಣು ಅವರಿಗೆ. ಇಬ್ಬರ ಹೆಣ್ಣು ಮಕ್ಕಳಿಗೆ ಮದುವೆಯಾಗಿದ್ದು, ಅವರು ನಮ್ಮ ಅಪಾರ್ಟ್ ಮೆಂಟಿನ ಹತ್ತಿರದ ಬಿಲ್ಡಿಂಗ್ ಗಳಲ್ಲಿದ್ದರು. ( ಆ ಕಾರಣದಿಂದಲೇ ಈ ಮನೆ ಆರಿಸಿದ್ದು ಅಂತ ಅವರು ಹೇಳಿದ್ದರು). ಅವರೆಲ್ಲಾ ಕೆಲಸಕ್ಕೆ ಹೋಗುವವರಾಗಿದ್ದು ಅವರ ಮಕ್ಕಳು ಇವರ ಮನೆಯಲ್ಲೇ ಇರುತ್ತಿದ್ದವು.

ಹುಡುಗರಲ್ಲಿ ಒಬ್ಬರಿಗೆ ಮದುವೆಯಾಗಿದ್ದು ಅವರಿಗೂ ಮಕ್ಕಳು. ಅಂತೂ ಇಂತೂ ಅವರ ಮನೆಯಲ್ಲಿ ಸದಾ ಒಂದು ಅರ್ಧಡಜನ್ ಮಕ್ಕಳ ನೆರೆ ಇರುತ್ತಿತ್ತು. ಅದು ಈಚೆಗೆ ಚೆಲ್ಲಿ ನಮಗೆ ಹೊರೆಯಾಗುತ್ತಿತ್ತು. ಈ ಬೆಂಕಿಪೆಟ್ಟಿಗೆ ಫ್ಲಾಟುಗಳು ಒಂದು ನಮೂನಿ ಸೈಜಿನ ಕುಟುಂಬಕ್ಕೆ ಸರಿಯಾಗುತ್ತವೆ. ದೊಡ್ಡದಾದಲ್ಲಿ ಬೆಂಕಿಪಟ್ಟಣದಿಂದ ಕಡ್ಡಿ ಹೊರಬೀಳುತ್ತವೆ. ಅದೇ ನಮಗಾದದ್ದು. ನಮ್ಮ ಮನೆ ಮುಂದೆ ಸದಾ ಮಕ್ಕಳ ಗಲಾಟೆ, ಧಾಂಧಲೆ, ಆಗಾಗ ಚಿಕ್ಕ ಮಕ್ಕಳ ಹೇಸಿಗೆ ಆಗುತ್ತಿತ್ತು. ನಮ್ಮ ಮನೆಯ ಮುಂದೆ ಅವರ ಚಪ್ಪಲಿಗಳು, ಬೇಡದ ಸಾಮಾನುಗಳು ಚಿಲ್ಲಾಪಿಲ್ಲಿಯಾಗಿ ಬಿದ್ದಿರುತ್ತಿದ್ದವು. ಇದು ನೆರೆ ಅಲ್ಲದೇ ಮತ್ತೇನು ಹೇಳಿ ?

ಇನ್ನು ಹೊರೆ ಹೇಗೆ ಎನ್ನುವುದು. ಇವರ ಕುಟುಂಬ ಹತ್ತಿರದ ಊರೇ ಆದ ಕಾರಣ ನೆಂಟರಿಷ್ಟರ ನೆರೆ ಅವರಿಗೆ ಇದ್ದೇ ಇರುತ್ತಿತ್ತು. ಆ ನೆರೆಯ ಭರ ಅವರಿಗೆ ಹೆಚ್ಚಾದಾಗ ನಮ್ಮ ಮೇಲೂ ದಾಳಿಯಾಗುತ್ತಿತ್ತು. ನಮ್ಮ ಕೆಲ ಸಂಪನ್ಮೂಲಗಳು ಅವರಿಗೆ ಹಂಚಬೇಕಾಗುತ್ತಿತ್ತು. ಅವರ ಮನೆಯಲ್ಲಿ ಸಣ್ಣ ಫಂಕ್ಷನ್ ( ಮಕ್ಕಳಿದ್ದ ಮನೆ. ಸಣ್ಣ ಪುಟ್ಟ ಆಗುತ್ತಲೇ ಇದ್ದವು) ಗಳಿಗೆ ನಮ್ಮ ಮನೆ ಅವರ ಮನೆಯ ಎಕ್ಸ್ ಟೆನ್ಶನ್ ಆಗುತ್ತಿತ್ತು. ಮೊದಲಿಗೆ ಕೇಳುವಾಗ ಸಂಕೋಚದಿಂದಲೇ ಕೇಳಿದರು ಪಾಪ. ನಾವು ಸಹ ಸಮಾಜದ ಹೊಣೆಗಾರಿಕೆಯ ಅಂಕಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಆಯಿತು ಎಂದೆವು. ಅಂದಿನಿಂದ ನಂತರ ಅದು ಅವರ ಮೂಲಭೂತ ಹಕ್ಕುಗಳಲ್ಲಿ ಸೇರಿಹೋಗಿ ಪರವಾನಿಗೆಯ ಅಗತ್ಯ ಅವರಿಗೆ ಕಾಣದಾಯಿತು. ಬರೀ ಪ್ರಕಟಣೆ ಅಷ್ಟೇ. ನಾಳೆ ನಮ್ಮಮನೆಯಲ್ಲಿ ಫಲಾನೆ ಫಂಕ್ಷನ್ ಇದೆ ಅಂತ. ನಾವು ರೆಡಿಯಾಗಬೇಕಷ್ಟೇ. ಈಗ ಅವರಿಲ್ಲವೆನ್ನಿ.

ಇದು ಬರೀ ಫ್ಲಾಟುಗಳಲ್ಲಿ ನಮಗೆ ಕಾಣುವ ಸನ್ನಿವೇಶವಾದರೆ ಜಮೀನಿನ ಮೇಲಿನ ಸ್ವಂತ ಮನೆಯಲ್ಲಿದ್ದ ನನ್ನ ಸ್ನೇಹಿತನ ಅನುಭವ ಕೇಳಿ. ಇಪ್ಪತ್ತು ವರ್ಷಗಳ ಕೆಳಗೆ ನಗರದಿಂದ ದೂರ ಆಗಷ್ಟೇ ಹೊಸದಾಗಿ ತಯಾರಾದ ಬಡಾವಣೆಯಲ್ಲಿ ಅವನು ಒಂದು ಸೈಟ್ ಖರೀದಿಸಿ ತುಂಬಾ ಕಷ್ಟದಲ್ಲಿ ಒಂದು ಮನೆ ಕಟ್ಟಿದ. ಅಲ್ಲಿರಲು ಪ್ರಾರಂಭಿಸಿದ. ಮನೆ ಸುತ್ತ ತೋಟ ಬೆಳೆಸಿದ. ಪುಷ್ಕಲ ನೀರು ಬರುತ್ತಿತ್ತು ಕೊಳವೆ ಬಾವಿಯಲ್ಲಿ. ನಾವೆಲ್ಲ ಅವನ ಮನೆಗೆ ಹೋಗಿ ಅಭಿನಂದಿಸಿ ಬಂದೆವು. ನಗರ ಎಂದ ಮೇಲೆ ಬೆಳೆಯುವುದು ಸಹಜವಲ್ಲವೇ ! ಇವರ ಬಡಾವಣೆಯ ಹತ್ತಿರಕ್ಕೆ ನಗರ ಸರಿದು ಬಂದಿತು. ಬಿಲ್ಡರ್ ಗಳು ಸುಳಿದಾಡಲು ಶುರುಮಾಡಿದರು. ಕೆಲ ಅಪಾರ್ಟ್ ಮೆಂಟ್ ಗಳು ಎದ್ದವು. ಇವರ ಮನೆಯ ಪಕ್ಕದಲ್ಲಿದ್ದ ದೊಡ್ಡ ಸೈಟು ಈ ತರದ ಅಪಾರ್ಟ್ ಮೆಂಟ್ ಗಾಗಿ ಖರೀದಿ ಆಯಿತು. ಮತ್ತೆ ಶುರುವಾಯ್ತು ಇವನಿಗೆ ಗೋಳು. ಅದು ಕಟ್ಟಿದಷ್ಟು ದಿನ ಗಲಾಟೆ, ಗದ್ದಲ, ಕಿವಿ ತೂತು ಬೀಳುವ ಶಬ್ದಗಳು ಧೂಳು. ಇದರ ಜೊತೆಗೆ ಆ ಬಿಲ್ಡಿಂಗ್ ಗಾಗಿ ಹಾಕಿದ ಆಳವಾದ ಕೊಳವೆ ಬಾವಿಯಿಂದಾಗಿ ಇವನ ಮನೆಯ ನೀರಿಗೆ ಖೋತಾ. ಮುಂಚೆ ವರ್ಷವಿಡೀ ಬರುತ್ತಿದ್ದ ನೀರು ಈಗ ಬೇಸಿಗೆಯ ಸೂರ್ಯ ಕಾಣುತ್ತಲೇ ಬರಿದಾಗಲು ಶುರುವಾಯ್ತು. ಹಾಗೂ ಹೀಗೂ ಒಂದೆರಡು ವರ್ಷ ತಡೆದುಕೊಂಡ. ಮತ್ತೆ ಆ ಮನೆ ಮಾರಿ ಒಂದು ಫ್ಲಾಟೇ ಖರೀದಿಸಿ ಈಗ ನಮ್ಮಂತೆ ನೆರೆ ಹೊರೆಯ ಕಾಟ ಎದುರಿಸುತ್ತಿದ್ದಾನೆ. ಅದಕ್ಕೆ ನಾನು ಹೇಳುವುದು. ನೆರೆ ಹೊರೆ ಎಂದರೆ ಬರೀ ಜನ ಆಗಬೇಕಿಲ್ಲ. ಹೊರೆಯಾಗುವ ಪರಿಸ್ಥಿತಿಗಳು ಸಹ ಈ ಪಟ್ಟಿಯಲ್ಲಿ ಬರುತ್ತವೆ.

ಈಗೀಗ ಮಾಹಿತೀ ತಂತ್ರ ಜ್ಞಾನ ಸ್ಫೋಟದಿಂದಾಗಿ ಬರುವ ವರಮಾನಗಳು ಹಿಗ್ಗಿ ಕೈಗಡಗಳು ಕಮ್ಮಿಯಾಗಿವೆ ಅಂತ ನನ್ನ ಅನಿಸಿಕೆಯಾಗಿತ್ತು. ಕೆಲ ಯುವ ಪೀಳಿಗೆಯವರು ಹೇಳಿದ್ದ ಸಂಗತಿ ಬೇರೇನೇ ಇದೆ. ಕೈಗಡಗಳು ನಿಂತಿಲ್ಲ. ಸಾಲದ ಮೊತ್ತಗಳು ಜಾಸ್ತಿಯಾಗಿವೆಯಂತೆ. ನಮ್ಮ ಸಮಯದಲ್ಲಿ ಕೈಗಡಗಳು ನೂರುಗಳಲ್ಲಿದ್ದು ಸಾವಿರಗಳು ಯಾರಾದರೂ ಕೇಳಿದರೆ ಕೊಡಲು ನಮ್ಮ ಹತ್ತಿರವೂ ಇರುತ್ತಿರಲಿಲ್ಲ. ಈಗ ಹಾಗಲ್ಲ .ಹ್ಯಾಂಡ್ ಲೋನ್ಸ್ ಎಂದು ಮುದ್ದಾಗಿ ಕರೆಯಲ್ಪಡುವ ಕೈಗಡಗಳು ಲಕ್ಷಗಳಲ್ಲಿ ಹರಿದಾಡುತ್ತವೆಯಂತೆ. ಕೊಡದಿದ್ದರೆ ನೆರೆಹೊರೆ ಎಂಬ ಮುಲಾಜು, ಜುಗ್ಗ ಅಂತ ಹಣೆಪಟ್ಟಿ. ಎಲ್ಲರಲ್ಲೂ ಮರ್ಯಾದೆಯ ಪ್ರಶ್ನೆ. ಕೊಟ್ಟರೆ ಎಂದಿಗೆ ಬರುತ್ತದೋ ಗೊತ್ತಿಲ್ಲದ ಅನಿಶ್ಚಿತ ಸ್ಥಿತಿ. ನಮ್ಮ ಯೋಜನೆಗಳೆಲ್ಲಾ ಏರುಪೇರಾಗುವ ದುಃಸ್ಥಿತಿ.

ಮತ್ತೆ ಗಾಡಿ ಕೇಳುವುದು. ನಮ್ಮ ಬೈಕಾಗಬಹುದು ಅಥವಾ ಕಾರಾಗಬಹುದು. ಅದೂ ಯಾರಾದರೂ ಹುಷಾರಿಲ್ಲ ಎಂದು ಕೇಳಿದರೆ ಕೊಡದೇ ಇರಲಾಗದು. ಹಾಗಂತ ಕೊಟ್ಟರೆ ಮುಗಿಯಿತು. ಅದು ಯಾವ ಸ್ಥಿತಿಯಲ್ಲಿಯಾದರೂ ನಿಮಗೆ ಸಿಗಬಹುದು. ಮಾರ್ಗ ಮಧ್ಯದಲ್ಲಿ ಅಪಘಾತಕ್ಕೀಡಾಗಿ ನೀವು ಸಹ ಕೋರ್ಟು ಕಚೇರಿಗಳಿಗೆ ರಜೆ ಹಾಕಿ ಹಾಜರಾಗುವ ಸ್ಥಿತಿಯೂ ಬರ ಬಹುದು. ಅಥವಾ ಅವರ ಮನೆಯ ಯಾವುದೋ ಸಮಾರಂಭಕ್ಕೆ ನೀವು ಅತ್ಯಂತ ಪ್ರೀತಿಯಿಂದ ಕೊಂಡ ಡಿಜಿಟಲ್ ಎಸ್ ಎಲ್ ಆರ್ ಕೆಮೆರಾ ಕೇಳಬಹುದು. ನಂತರ ವಾರವಾದರೂ ಬಾರದಾದಾಗ ನೀವೇ ಕೇಳಿದರೆ “ ಹೌದು ಮರೆತೇ ಹೋಗಿದ್ದೆ ಯಾರ್ ! ನನ್ನ ಬಾವ ಮೈದುನ ತೊಗೊಂಡು ಹೋಗಿದ್ದ. ತಂದೇ ಕೊಟ್ಟಿಲ್ಲ ಇನ್ನೂ. ಇವತ್ತು ಅವನಿಗೆ ಫೈರ್ ಮಾಡಿ ತರಿಸಿ ನಾಳೆ ಕೊಡ್ತೀನಿ. ಆಯ್ತಾ “ ಎನ್ನುವ ಪೂಸಿ ಮಾತು. ಆ ನಾಳೆ ತುಂಬಾ ದಿನಗಳ ನಂತರ ಬರುತ್ತದೆ ಮತ್ತು ಹತ್ತಾರು ಸಲ ನೆನಪಿಸಿದ ಮೇಲೆ ಬರುತ್ತದೆ ಎನ್ನುವುದು ಅನುಭವದ ಮಾತು.

ಹೀಗೆ ನೆರೆ ಹೊರೆ ಎನ್ನುವ ಈ ಜಂಟಿ ಪದ ನಮ್ಮ ಪಕ್ಕದ ಮನೆಯವರನ್ನು ಪ್ರತಿನಿಧಿಸುತ್ತಾ ಬಿಡಿ ಪದಗಳು ಅವರು ಕೊಡುವ ಕಿರುಕುಳಕ್ಕೆ ಈಡು ಮಾಡುವುದನ್ನು ಕಂಡಾಗ ಈ ಜಂಟಿ ಪದವನ್ನು ಕಂಡು ಹಿಡಿದವರು ತುಂಬಾ ಅನುಭವದಿಂದ ಈ ಪದಗಳನ್ನು ಸರಿಯಾಗಿ ಜೋಡಿಸಿರಬೇಕು ಎಂದು ಮನದಲ್ಲಿ ನುಸುಳಿ ಒಂದು ಬಲವಂತದ ನಗೆ ತುಟಿಗಳ ಮೇಲೆ ಹಾದು ಹೋಯಿತು. ಅಷ್ಟರಲ್ಲಿ ಕಾಲಿಂಗ್ ಬೆಲ್ ಸದ್ದು ಮಾಡಿತು. ಇನ್ನು ನೆರೆಯೋ ಹೊರೆಯೋ ನೋಡಬೇಕಷ್ಟೇ.