- ಕನ್ನಡ ಕವಿಗಳಲ್ಲಿ ಪ್ರಜ್ವಲಿಸುತ್ತಿರುವ ದೀಪಮಾಲೆ - ಅಕ್ಟೋಬರ್ 27, 2024
- ಚಿಕ್ಕಣಿರಾಜ ಕೃತಿಯ ಜೀವಾಳ ಪುಟ್ಟ - ಸೆಪ್ಟೆಂಬರ್ 12, 2024
- ಹಾಲಾಡಿಯಲ್ಲಿ ಹಾರುವ ಓತಿ - ಜುಲೈ 20, 2024
ನಾವೆಲ್ಲಾ ಚಿಕ್ಕವರಿರುವಾಗ ಅಮ್ಮನ ನಂತರ ಆರೈಕೆ ಮಾಡಿಸಿಕೊಂಡ ಹಿತೈಷಿಯ ಬಗ್ಗೆ ಮಾತನಾಡೋಣ ! ಯಾರೀ ಹಿತೈಷಿ ಅಂತೀರ? ಅದೇ ಕರವಸ್ತ್ರ! ಕೈವಸ್ತ್ರ,ಕೈಬಟ್ಟೆ,ಕರ್ಚೀಫ್,ಹ್ಯಾಂಡ್ ಕರ್ಚೀಫ್, ನ್ಯಾಫ್ಕಿನ್,ಚೌಕ ಎಂದೆಲ್ಲಾ ಕರೆಸಿಕೊಂಡಿರುವ ಬಟ್ಟೆಯ ತುಣುಕಿನ ಬಗ್ಗೆ! ಆಗ ತಾನೆ ಅಮ್ಮನ ಮಡಿಲಿನಿಂದ ಇಳಿದು ಬಾಲವಾಡಿಗೆ ಹೊರಟ ಮಗು ತ್ರಿಕೋನಕಾರವಾಗಿ, ಚೌಕಾಕಾರವಾಗಿ ಮಡಿಸಿದ ವಸ್ತ್ರವನ್ನು ಷರ್ಟಿಗೋ ಇಲ್ಲ ಫ್ರಾಕಿಗೋ ಪಿನ್ ಮಾಡಿಸಿಕೊಂಡು ಅದನ್ನೇ ಜೀಕುತ್ತಾ, ಬಾಯಲ್ಲಿ ಕಚ್ಚುತ್ತ ನಡೆದ ಸಂದರ್ಭ ನಮಗೆಲ್ಲಾ ನೆನಪಿದೆ ಅಂದು ಕೊಂಡಿದ್ದೇನೆ. ಪೋಷಕರು ಕರವಸ್ತ್ರ ಕಳುಹಿಸಿದೆ ಮರೆತಾಗ ಮಕ್ಕಳು “ಕಪೀಚ್ ಬೇಕು! ಕಪೀಚ್ ಬೇಕು!” ಎಂದು ತೊದಲಿದ ಮುದ್ದು ಮಕ್ಕಳ ಮಾತನ್ನೂ ಮಕ್ಕಳನ್ನು ನೋಡಿರುತ್ತೇವೆ. ನಮಗಿಂತ ಹಿರಿಯರೂ ಹೀಗೆ ಕರವಸ್ತ್ರಧಾರಿಯಾದ ಮೊಮ್ಮಕ್ಕಳನ್ನೂ, ಮುಮ್ಮಕ್ಕಳನ್ನೂ ನೋಡಿರಬಹುದು.ಇದಂತೂ ಸುಖೋಲ್ಲಾಸದ ದೃಶ್ಯ ಅಲ್ಲವೆ! ‘ಕರವಸ್ತ್ರ’ ಎಂದೊಡನೆ ಇಲ್ಲಿ ಚಿಕ್ಕದೊಂದು ಕತೆ ನೆನಪಾಗುತ್ತಿದೆ.
ಒಂದು ಅನಾಥ ಹುಡುಗಿ ಶ್ರೀಮಂತರ ಮನೆಯಲ್ಲಿ ಕೆಲಸ ಮಾಡಿಕೊಂಡಿರುತ್ತಾಳೆ. ಎಷ್ಟೇ ನಿಷ್ಟೆಯಿಂದ ಕೆಲಸ ಮಾಡಿದರೂ ಆ ಹುಡುಗಿಯನ್ನು ಮನೆಯ ಯಜಮಾನರು ಚೆನ್ನಾಗಿ ನೋಡಿಕೊಳ್ಳುತ್ತಿರುವುದಿಲ್ಲ. ಚಿಕ್ಕ ಹುಡುಗಿ ಒಂದು ದಿನ ಈ ಬಂಧನದಿಂದ ಹೇಗಾದರೂ ಮಾಡಿ ಬಿಡುಗಡೆ ಪಡೆಯಬೇಕೆಂದು ಹಂಬಲಿಸುತ್ತಿರುತ್ತಾಳೆ. ದೇವರಲ್ಲಿ “ಈ ಕಾಟದಿಂದ ಮುಕ್ತಿ ಕೊಡು, ಸಹಿಸಲಾರೆ!” ಎಂದು ಬೇಡಿಕೊಳ್ಳುತ್ತಿರುತ್ತಾಳೆ. ಒಮ್ಮೆ ಮನೆಯವರೆಲ್ಲಾ ದೇವಸ್ಥಾನಕ್ಕೆ ಹೋಗಿರುವಾಗ ಬಾಲಕಿಯ ಪ್ರಾರ್ಥನೆಯನ್ನು ಕೇಳಿಸಿಕೊಂಡಿದ್ದ ಶಿವ ಭಿಕ್ಷುಕನ ವೇಷದಲ್ಲಿ ಆ ಬಾಲಕಿ ಇರುವ ಮನೆಗೇ ಬಂದು ಭಿಕ್ಷೆ ಕೇಳುತ್ತಾನೆ.ಆ ಬಾಲಕಿ ಏನಾದರೂ ಭಿಕ್ಷೆ ಕೊಡಬೇಕು ಅನ್ನಿಸಿ ನೋಡಿದರೆ ಎಲ್ಲವೂ ಅವಳ ಯಜಮಾನರು ಯಜಮಾನತಿಯವರಿಗೆ ಸೇರಿದ್ದೆ ಆಗಿರುತ್ತದೆ ಹಾಗಾಗಿ ಬೇಡ ಎಂದು ಮದ್ಯಾಹ್ನಕ್ಕೆ ತನಗೇ ಇಟ್ಟುಕೊಂಡಿದ್ದ ಒಣ ರೊಟ್ಟಿಯನ್ನೇ ನೀಡುತ್ತಾಳೆ.ಮಾರುವೇಷದ ಶಿವ ರೊಟ್ಟಿ ತೆಗೆದುಕೊಂಡು ಹರಿದ,ಮಾಸಿದ ಕರವಸ್ತ್ರವೊಂದನ್ನು ಆ ಹುಡುಗಿಗೆ ನೀಡಿ “ಇದರಿಂದಲೇ ಯಾವಾಗಲೂ ಮುಖ ಒರೆಸಿಕೊ….!” ಎನ್ನುತ್ತಾನೆ. ಹುಡುಗಿಯೂ ಹಾಗೆ ಮಾಡುತ್ತಾಳೆ.ಅವಳ ಮುಖ ದಿನ ಕಳೆದಂತೆ ಕಾಂತಿಯಿಂದ ಕಂಗೊಳಿಸುತ್ತಿರುತ್ತದೆ.ಅದನ್ನು ಕಂಡ ಆ ಹುಡುಗಿಯ ಯಜಮಾನ ಹಾಗು ಯಜಮಾನತಿ ಅದರ ಗುಟ್ಟನ್ನು ಹೇಗೋ ಬಾಯಿ ಬಿಡಿಸಿ ಆ ಕರವಸ್ತ್ರವನ್ನು ತಾವೂ ಬಳಸಲು ಪ್ರಾರಂಭಿಸುತ್ತಾರೆ. ಅವರೂ ದಿನ ಕಳೆದಂತೆ ಹೊಳೆಯಲಾರಂಭಿಸುತ್ತಾರೆ.ದುರಾಸೆ ಎಂಬ ದುರಾಲೋಚನೆಯಿಂದ ಕರವಸ್ರವನ್ನು ಕಾಂತಿಹೀನರಿಗೆ ಬಾಡಿಗೆ ಕೊಟ್ಟು ಹಣ ಮಾಡಬೇಕೆಂದು ಆಲೋಚಿಸುತ್ತಾರೆ. ಏನೋ ಕಾರಣಕ್ಕೆ ಆ ದುರಾಸೆಯ ದಂಪತಿಗಳು ಕನ್ನಡಿ ನೋಡಿಕೊಂಡರೆ ಮೈಮೇಲ್ಲಾ ರೋಮ ಬೆಳೆದು ವಿಚಿತ್ರವಾಗಿ ಕಾಣುತ್ತಾರೆ.ಇನ್ನು ಊರಲ್ಲಿ ಇದ್ದರೆ ಮರ್ಯಾದೆ ಇರುವುದಿಲ್ಲ ಎಂದು ಯೋಚಿಸಿ ಕಾಡಿಗೆ ಓಡಿಹೋಗುತ್ತಾರೆ.ನಂತರರ ಅವರು ಜಿಪುಣತನ ಮಾಡಿ ಕೂಡಿಟ್ಟ ಹಣವೆಲ್ಲಾ ಆ ಕೆಲಸದ ಹುಡುಗಿ ಕೈಸೇರುತ್ತದೆ ಆಕೆ ಸಂತಸದಿಂದ ಇರುತ್ತಾಳೆ.ಇಷ್ಟೆಲ್ಲಾ ಆಗುವುದು ಶಿವ ನೀಡಿದ ಹರಿದ ಕರವಸ್ತ್ರದಿಂದ.
ಇದು ಕತೆ! ಆದರೆ ಕರವಸ್ತ್ರದ ಮೂಲಕ ಹೇಳಿಸಿದ “ಶೋಷಣೆ” ಮಾಡಬಾರದು,“ದುರಾಸೆ” ಪಡಬಾರದೆಂಬ ನೀತಿ ಸಾರ್ವಕಾಲಿಕವಾದದ್ದು.
ಹಿಂದಿನ ಮದುವಣಗಿತ್ತಿಯರ ಕೈಯಲ್ಲಿ ಕರವಸ್ತ್ರವನ್ನು ಕಡ್ಡಾಯವಾಗಿ ಕೊಡುತ್ತಿದ್ದರು ಮದುವೆಗೆ ಮೊದಲು ಹಸೆ ಇತ್ಯಾದಿ ಹಾಕುವಾಗ ಮುತ್ತೈದೆಯರು ನಾಚಿಕೆಯಿಂದಲೋ,ಫೊಟೊಗೆ ಬೀಳಬೇಕೋ ಎಂದೋ ತಡವರಿಸಿ ಇಟ್ಟ ಕುಂಕುಮವನ್ನು ಸರಿಮಾಡಿಕೊಳ್ಳಲು,ಗಂಡನ ಮನೆಗೆ ಹೋಗುವಾಗ ಬರುವ ಅಳುವನ್ನು ಒರೆಸಿಕೊಳ್ಳಲು. ಈಗ ಕರ್ಚಿಫಿನ ಅವಶ್ಯಕತೆ ಯಿಲ್ಲ ಬಿಡಿ.ಅವಶ್ಯಕತೆ ಇದ್ದರೂ ಟಿಶ್ಯೂ ಪೇಪರ್ ಇದೆಯಲ್ಲಾ!
ವಯೋಮಾನ, ಜಾಯಮಾನಕ್ಕೆ ಕರವಸ್ತ್ರಗಳು ಬಳಕೆಯಾಗುತ್ತವೆ. ಇನ್ನು ಮಕ್ಕಳ ಕರವಸ್ತ್ರಗಳೇ ಬೇರೆ. ಆರೋಗ್ಯದ ಬಗ್ಗೆ ಕಾಳಜಿ ಎಂಬಂತೆ ಹತ್ತಿಯಿಂದ ತಯಾರಾದ ಕರವಸ್ತ್ರಗಳನ್ನೇ ಹೆಚ್ಚಾಗಿ ಬಳಸುವುದಿದೆ. ಮಕ್ಕಳ ಅಭಿಲಾಷೆಗೆ ತಕ್ಕಂತೆ ಕರವಸ್ತ್ರದ ಮೇಲೆ ಬೊಂಬೆಗಳು, ಕಾರ್ಟೂನುಗಳು ಹೂವಿನ ಚಿತ್ರ ಇತ್ಯಾದಿಗಳು ಇರುತ್ತವೆ. ಮೂಗು ಒರೆಸಲು ಒಂದಾದರೆ , ಮದ್ಯಾಹ್ನದ ಊಟದ ಬ್ಯಾಗಿಗೆ ಇಡುವ ಕರವಸ್ತ್ರ ಆಯತಾಕಾರದ್ದಾಗಿರುತ್ತದೆ. ಟೇಬಲ್ ಮ್ಯಾನರಸ್ ಎಂದು ಬಡಬಡಿಸುವ ಒಂದಷ್ಟು ಜನರು ಊಟಕ್ಕೆ ಕುಳಿತಾಗ ಒಂದು ಕರವಸ್ತ್ರವನ್ನು ಕುತ್ತಿಗೆಯಿಂದ ಎದೆಯವರೆಗೂ ಇಳಿಬಿಟ್ಟುಕೊಂಡು ಇನ್ನೊಂದನ್ನು ತೊಡೆಯ ಮೇಲೂ ಹರಡಿಕೊಂಡು ಕುಳಿತುಕೊಳ್ಳುವುದಿದೆ.
ಪರ್ಸ್, ಪೌಚುಗಳು ಇಲ್ಲದೇ ಇದ್ದಾಗ ಹೆಂಗಸರು ಹಣವನ್ನು ಹೆಂಗಸರು ಕರವಸ್ತ್ರದಲ್ಲಿಯೇ ಗಂಟು ಹಾಕಿ ಇಟ್ಟುಕೊಳ್ಳುತ್ತಿದ್ದರು. ಅಷ್ಟೇ ಏಕೆ ಚಿಲ್ಲರೆನಾಣ್ಯ, ದೇವಸ್ಥಾನದಲ್ಲಿ ಕೊಟ್ಟ ಪ್ರಸಾದ, ಕೀ, ಮಾತ್ರೆ ಚೀಟಿ ಇತ್ಯಾದಿಗಳನ್ನು ಕರವಸ್ತ್ರಗಳಲ್ಲಿಯೇ ಭದ್ರವಾಗಿ ಇರಿಸಿಕೊಳ್ಳುತ್ತಿದ್ದರು. ಕರವಸ್ತ್ರವೊಂದನ್ನು ಯಾವಾಗಲೂ ಸೊಂಟಕ್ಕೆ ಸಿಕ್ಕಿಸಿಕೊಳ್ಳುವವರೂ ಈಗಲೂ ಇದ್ದಾರೆ. ಆದರೆ ಯಾವ ವಯೋಮಾನದವರು ಎನ್ನುವುದು ಪ್ರಶ್ನೆಯೇ….? ಇಗ ಹಗಲೆಲ್ಲಾ ಸೀರೆ ಎಲ್ಲಿ ಉಡುತ್ತಾರೆ? ಅಲ್ವ!! ರಾತ್ರಿ ತೊಡುವ ನೈಟಿಯೇ ಈಗ ವಿಶಾಲಾರ್ಥ ಪಡೆದುಕೊಂಡು ಡೈಟೀಯೂ ಆಗಿದೆ…….! ಎಲ್ಲಿ ಹೋಗಲಿಕ್ಕೂ ನೈಟಿಯೇ … ತರಕಾರಿ ತರಲು, ಮಕ್ಕಳನ್ನು ಶಾಲೆಗೆ ಬಿಡ್ಲಿಕ್ಕೆ ಅದರ ಮೇಲೊಂದು ಮೇಲುದ ಅರ್ಥಾತ್ ವೇಲೊಂದನ್ನು ಹಾಕಿ , ಇಲ್ಲವೇ ಸ್ವೆಟರ್ ಹಾಕಿ ಬಿಡುವುದು. ಇದೆಲ್ಲಾ ಪ್ರಾಂತ್ಯದಲ್ಲೂ ಇದೆಯೇ ಅಂದ್ರೆ ನನ್ನಲ್ಲಿ ಉತ್ತರ ಇಲ್ಲ! ಗೊತ್ತಿಲ್ಲ ! ಇದ್ದರೂ ಇರಬಹುದು ಆದರೆ ನೈಟಿ ಡೈಟಿ ಆಗಿರುವುದಂಥೂ ಸತ್ಯ. ಬಳಸಿ ಬೇಜಾರಾದರೆ ಅದೇ ನೈಟಿಗಳಿಗೆ ಬೇಡವಾದ ಬಟ್ಟೆ ತುಂಬಿಸಿಡಲು ಇಡಲು ಇದೊಂದು ಪೇಯ್ಡ್, ಯೂಸ್ಡ್ ಚೀಲಗಳಂತೆ ಕೆಲಸ ಮಾಡುತ್ತದೆ. ಈ ನೈಟಿಗಳ ಬೆಲೆ ಕಡಿಮೆ ಅಂದ್ಕೋಬೇಡಿ . ಇದರೆ ಬೆಲೆಯೂ ದುಬಾರಿ… ಬ್ರಾಂಡೆಡ್ ನೈಟಿಗಳು ಕನಿಷ್ಟ 800-850 ಇಲ್ಲದೆ ಸಿಗುವುದಿಲ್ಲ. ಸಾವಿರ ಒಂದೂವರೆ ಸಾವಿರದವೆರಗೂ ಇರುತ್ತವೆ. ಇಂಥ ನೈಟಿ ಹಾಕೊಂಡ ಮೇಲೆ ಕರವಸ್ತ್ರ ಸಿಕ್ಕಿಸಿಕೊಳ್ಳಬಹುದೇ ಖಂಡಿತಾ ಇಲ್ಲ! ಹಾಗಾಗೆ ನೈಟಿಯ ಬಲ ಬದಿ ಯಾವಾಗಲೂ ಒಂದಷ್ಟು ಅಗಲ ಕಪ್ಪಾಗಿರುತ್ತದೆ. ಚಂಡಿ ಕೈಯೊರೆಸಿ…. ಒರೆಸಿ… . ಹೋಗಲಿ ಬಿಡಿ !
ಹೆಣ್ಣು ಮಕ್ಕಳು ಬಳಸುವ ಕರವಸ್ತ್ರಗಳು ಬಿಳಿಯ ಇಲ್ಲವೆ ತಿಳಿ ಬಣ್ಣಗಳದ್ದೇ ಆಗಿರುತ್ತವೆ. ಕೆಲವರು ಬಿಳಿ ಬಣ್ಣದ ಕರವಸ್ತ್ರಗಳನ್ನೇ ಬಳಸಿದರೆ ಇನ್ನು ಕೆಲವರು ಗಾಢ ಬಣ್ಣದ ಕರವಸ್ತ್ರಗಳನ್ನು ಆದ್ಯತೆಯ ಮೇಲೆ ಬಳಸುವುದಿದೆ. ಇನ್ನು ಹಳೆಯ ಬಟ್ಟೆಗಳಿಗೆ ಕಸೂತಿ ಹಾಕಿ ಜಿಗ್ ಜ್ಯಾಗ್ ಮಾಡಿ ಚೌಕಾಕಾರದ, ವೃತ್ತಾಕಾರವಾಗಿ ಬಳಸಿದ ಉದಾಹರಣೆಗಳು ಇವೆ. ಅದೇ ಕರವಸ್ತ್ರದ ಮೂಲೆಯಲ್ಲಿ ಯಾವುದೋ ಚಿತ್ತವಿರುವ ಇನ್ನೊಂದು ಚಿಕ್ಕ ಪೀಸಿಗೆ ಜಿಪ್ ಅಳವಡಿಸಿದ ಕರ್ಚಿಫ್ಗಳನ್ನು ಹಿಂದೆ ನೋಡಿದ ನೆನಪು.
“ ರಾಯರು ಬಂದರು ಮಾವನ ಮನೆಗೆ” ಗೀತೆಯಲ್ಲಿ “ಪದುಮಳು ಹಾಕಿದ ಹೂವಿನ ಚಿತ್ರ” ಎಂಬಂತೆ ಉತ್ತರಕರ್ನಾಟಕದ ಹೆಣ್ಣುಮಕ್ಕಳು ಕಸೂತಿ ಹಾಕಿ ತಮ್ಮ ಕರವಸ್ತ್ರಗಳನ್ನು ತಾವೇ ಮಾಡಿಕೊಳ್ಳುತ್ತಾರೆ . ಇವುಗಳಲ್ಲಿ ನಾನಾ ಉಪಯೋಗ ಕಣ್ಣೀರು ಬಂದಾಗ ಒರೆಸಿಕೊಳ್ಳಲು, ಸಿಂಬಳ ಬಂದಾಗ ತೆಗೆಯಲು ಕರವಸ್ತ್ರಗಳು ಬೇಕು. ಮನುಷ್ಯನ ನಿಜವಾದ ಸೇವಕ ಎಂದರೆ ಕರವಸ್ತ್ರವೇ. ಗಂಡಸರು ಬಳಸುವ ಕರವಸ್ತ್ರಗಳು ಅಗಲವಾಗಿ ಚೌಕುಳಿಗಳಿಂದ ಕೂಡಿರುತ್ತವೆ. ಅಳತೆಯಲ್ಲಿ ಹೆಂಗಸರ ಕರವಸ್ತ್ರಗಳಿಗಿಂತ ದೊಡ್ಡವಾಗಿರುತ್ತವೆ. ವಯಸ್ಸಾದವರಿಗೆ ಕಿವಿ ಕ್ಲೀನ್ ಮಾಡಿಕೊಳ್ಳಲು, ನಶ್ಯ ಹಾಕಿ, ಬೀಡ ತಿಂದು ಮೂತಿ ಒರೆಸಲು ಕರವಸ್ತ್ರಗಳು ಸಹಾಯಕ. ಈಗಂತೂ ಮಾಸ್ಕ್ ಮರೆತು ಹೋಗಿದ್ದರೆ ಕರವಸ್ತ್ರಗಳನ್ನೇ ಬಳಸಬಹುದು ಹಾಗೆ ಕಟ್ಟಿಕೊಳ್ಳುವವರು ಇಲ್ಲದಿಲ್ಲ.
ಈಗೆಲ್ಲಾ ನಮ್ಮದೇ ಸ್ವಂತ ಕಾರುಗಳಲ್ಲಿ ಊರಿಂದೂರಿಗೆ ಹೋಗುತ್ತೇವೆ. ಅದಕ್ಕೂ ಮೊದಲು ಕಡುಕೆಂಪು ಕೆ.ಎಸ್.ಆರ್.ಟಿ.ಸಿ. ಬಸ್ಗಳಲ್ಲೇ ಅಲ್ವೇ ನಾವು ಹೋಗುತ್ತಿದ್ದುದು. ಬಸ್ ಯಾವ ಸ್ಟ್ಯಾಂಡಿನಲ್ಲಿ ನಿಲ್ಲಿಸಿದರೂ ಅಲ್ಲಿನ ಪೇಪರ್,ಕ್ಯಾಂಡಿಮೆಂಟ್ಸ್ ಅಂಗಡಿಗಳಲ್ಲಿ ಛತ್ರಿಯಾಕಾರದ ಹ್ಯಾಂಗರ್ಗಳಲ್ಲಿ ಲೇಡಿಸ್ , ಜೆಂಟ್ಸ್ ಕರ್ಚಿಫ್ಗಳು ಹಾರಾಡುತ್ತಿದ್ದುದನ್ನು ನಾವೆಲ್ಲಾ ಕಂಡಿರುತ್ತೇವೆ. ಮನೆಯಿಂದ ಮರೆತು ಹೋಗಿ ಅಲ್ಲಿ ಕರವಸ್ತ್ರಗಳನ್ನು ಕೊಂಡಿರುತ್ತೇವೆ. ಈ ಕರ್ಚೀಫ್ಗಳು ಹತ್ತಿಯವಾದರೆ ಆರೋಗ್ಯಕ್ಕೆ ಅನುಕೂಲ ಮೂಗು ಒರೆಸಿದರೂ ಕ್ಷೇಮ. ಇಲ್ಲ ನೈಲಾನ್ ಮಿಶ್ರಿತವಾಗಿದ್ದರೆ ಮೂಗು ಒರೆಸಿಕೊಳ್ಳಲಾಗದು ಅಷ್ಟು ಸರಿಹೋಗುವುದಿಲ್ಲ! ಈ ಸಾಮಾನ್ಯ ಅನುಭವ ಎಲ್ಲರದ್ದೂ ಎಂದು ತಿಳಿಯುವೆ. . ಇನ್ನು ಸೀರೆ ಅಂಗಡಿಗಳಲ್ಲಿ ಚೆನ್ನಾಗಿರುವ ಸೀರೆಗಳನ್ನು ಚೌಕಾಸಿ ಮಾಡದೆ ತೆಗೆದುಕೊಂಡರೆ ಬಿಲ್ ಮಾಡುವಾಗ ಹೆಂಗಸರ ಕರವಸ್ತ್ರವನ್ನು ಕೊಡುತ್ತಾರೆ .ಹಾಗೆ ನಾನೂ ನನ್ನೂರು ಮಡಿಕೇರಿಯ ‘ಜವಹರ್’ ಬಟ್ಟೆ ಅಂಗಡಿಯಲ್ಲಿ ತಂದಿದ್ದು ನೆನಪಿದೆ. ಕ್ಷಮಿಸಿ ಬ್ರಾಂಡೆಡ್ ಪಂಚೆ -ಶಲ್ಯ ತೆಗೆದುಕೊಂಡರೂ ಗಂಡಸರ ಕರ್ಚೀಫ್ ಕೊಡುತ್ತಿದ್ದರು. ಈಗ ಗಂಡಸರು ಹೆಂಗಸರಿಬ್ಬರಿಗೂ ಮಾಸ್ಕ್ ಕೊಡುತ್ತಾರೆ . ಕೊರೊನಾ ಮಹಿಮೆ ಏನಂತೀರಿ! ಕರವಸ್ತ್ರಗಳಲ್ಲಿ ನಾನಾ ಬ್ರಾಂಡ್ಗಳಿವೆ ಅದರಲ್ಲಿ ಶೇಕ್ಸ್ಪಿಯರ್ ಬ್ರಾಂಡ್ ಎಂದೇ ಹೇಳುವ ಬಿಳುಪು ಮತ್ತು ಕಪ್ಪಿನ ಕರವಸ್ತ್ರಗಳೂ ಇವೆ.
ವಿಲಿಯಮ್ ಶೇಕ್ಸ್ಪಿಯರನ ‘ಒಥೆಲೋ’ ನಾಟಕದಲ್ಲೂ ಕರವಸ್ತ್ರ ಪ್ರಸಂಗ ಬರುತ್ತದೆ. ‘ಒಥೆಲೋ’ ಇಡೀ ನಾಟಕವನ್ನು ಆಳುವ ಪ್ರತಿಮೆ ಎಂದರೆ ‘ಕರವಸ್ತ್ರ’ ಎನ್ನಬಹುದು. ಪರಂಪರೆ, ಪ್ರೀತಿ, ಅನುಮಾನ, ಸೌಶೀಲತೆ, ನೈತಿಕತೆ, ಪಶ್ಚಾತ್ತಾಪ ಇತ್ಯಾದಿಗಳ ಪ್ರತೀಕವಾಗಿ ಬಂದಿದೆ ಎನ್ನಬಹುದು. ನಾಟಕದ ನಾಯಕ ಒಥೆಲ್ಲೋನ ತಾಯಿಗೆ ಈಜಿಪ್ಟಿನ ಮಾಟಗಾತಿ ತನ್ನ ಗಂಡನ ಪ್ರೀತಿಯನ್ನು ಉಳಿಸಿಕೊಳ್ಳಲು ಕೊಟ್ಟಿರುತ್ತಾಳೆ. ಆಕೆಯ ಮಾತಿನಂತೆ ಒಥೆಲೊನ ತಾಯಿ ಕರವಸ್ತ್ರವನ್ನು ಜತನದಿಂದ ಕಾಪಾಡಿಕೊಂಡು ಬಂದಿರುತ್ತಾಳೆ. ಒಂದರ್ಥದಲ್ಲಿ ಆ ಕರವಸ್ತ್ರ ಅವರ ಕುಂಟುಂಬದ ಪಾಲಿಗೆ ಚರಾಸ್ಥಿಯೇ ಆಗಿರುತ್ತದೆ. ನಂತರ ಒಥೆಲೊ ಅದನ್ನು ತನ್ನ ಮಡದಿ ಡೆಸ್ಡಿಮೊನಾಗೆ ನೀಡುತ್ತಾನೆ. ಅದಕ್ಕೆ ಅತಿಮಾನುಷ ಶಕ್ತಿಯನ್ನೂ ಅನ್ವಯಿಸಿ ಕರವಸ್ತ್ರ ಕಳೆದರೆ ನಮ್ಮಿಬ್ಬರ ಅನುಬಂಧವೇ ಕಳೆದುಹೋಗುತ್ತದೆ ಎಂದು ಇಬ್ಬರೂ ನಂಬಿರುತ್ತಾರೆ. ಇಲ್ಲಿ ಶೇಕ್ಸ್ಪಿಯರ್ ಕರವಸ್ತ್ರದಲ್ಲಿ ಕಸೂತಿ ಮಾಡಿ ಬಳಸಿರುವ ಸ್ಟ್ರಾಬೆರಿ ಹಣ್ಣಿನ ಚಿತ್ರ ಸೌಶೀಲ್ಯತೆಯ ಸಂಕೇತವಾಗಿದೆ.
ನಾಟಕದಲ್ಲಿ ಬರುವ ವೆನಿಸಿನ ಇಯಾಗೋಗೆ ತಾನು ಬಯಸಿದ ಉಪಸೇನಾನಿಯ ಹುದ್ದೆ ಕ್ಯಾಸಿಯೋಗೆ ಸಿಕ್ಕಿದ್ದಕ್ಕೆ ವಿಷಾದವಿರುತ್ತದೆ. ಜೊತೆಗೆ ಬಿಳಿಯವನಾದ ನಾನು ನೀಗ್ರೋ ಒಥೆಲೊಗೆ ಸಹಾಯಕನಾಗಿರಬೇಕಲ್ಲ ಎಂಬ ಕೀಳರಿಮೆ ,ಬಿಳಿಯಳಾದ ಡೆಸ್ಡಿಮೊನಾ ಒಥೆಲೋನ ಕೈಹಿಡಿದದ್ದು ಕೂಡ ತೀವ್ರ ಅಸಮಾಧಾನಕ್ಕೆ ಕಾರಣವಾಗಿರುತ್ತದೆ. ಇಯಾಗೊ ಮೊದಲು ತನ್ನ ಕುತಂತ್ರವನ್ನು ಪ್ರಯೋಗಿಸುವುದು ಡೆಸ್ಡಿಮೊನಾಳನ್ನ ಮೊದಲು ಮದುವೆಯಾಗ ಬಯಸಿದ್ದ ರೊಡ್ರಿಗೋನ ಮೇಲೆ. ಡೆಸ್ಡಿಮೊನಾ ತಂದೆಯಲ್ಲಿ ತೆರಳಿ “ನಿನ್ನ ಮಗಳನ್ನು ಕರಿಯ ಅಪಹರಿಸಿದ್ದಾನೆ” ಎನ್ನುತ್ತಾನೆ. ಡೆಸ್ಡಿಮೊನಾ “ನಾನೆ ಒಥೆಲೋನನ್ನು ಮನಸ್ಸಾರೆ ಒಪ್ಪಿದ್ದೇನೆ” ಎಂದ ಮೇಲೆಯೂ ಅವರೀರ್ವರ ಮದುವೆ ಮುರಿಯಲು ಇಯಾಗೊ ಸತತ ಪ್ರಯತ್ನ ಮಾಡುತ್ತಾನೆ. “ಸಂಚು ಜೀವಿ” ಎಂದೇ ಕರಸಿಕೊಂಡ ಇಯಾಗೊ ಒಥೆಲೋ ಕ್ಯಾಸಿಯೋನನ್ನು ಕೆಲಸದಿಂದ ತೆಗೆದು ಹಾಕುವ ಸಂಚು ಮಾಡುತ್ತಾನೆ. ಮತ್ತೆ ಏನೂ ತಿಳಿಯದವನಂತೆ ನಾಟಕವಾಡಿಕೊಂಡು ನೊಂದ ಕ್ಯಾಸಿಯೋನಲ್ಲಿ ಹೋಗಿ “ಮತ್ತೆ ನೀನು ಡೆಸ್ಡಿಮೊನಾಳ ಬಳಿ ಹೋಗಿ ಬೇಡಿಕೊ ಅವಳು ಸಹಾಯ ಮಾಡುತ್ತಾಳೆ” ಎನ್ನುತ್ತಾನೆ. ಇನ್ನೊಂದೆಡೆ ಡೆಸ್ಡಿಮೊನಾಳ ಕರವಸ್ತ್ರ ಕ್ಯಾಸಿಯೊನ ಬಳಿ ಸಿಕ್ಕಿತೆಂದು ಒಥೆಲೊವನ್ನು ನಂಬಿಸುತ್ತಾನೆ. ಕುಟಿಲ ಮಾತು, ಕಪಟ ಪುರಾವೆ, ಕೃತಕ ಸನ್ನಿವೇಶ ಒಥೆಲೊನನ್ನು ಸಿಟ್ಟಿಗೇಳುವಂತೆ ಮಾಡುತ್ತದೆ. ನಾಟಕದಲ್ಲಿ ಒಥೆಲೋ ಮತ್ತು ಡೆಸ್ಡಿಮೋನಾಗೆ ಕರವಸ್ತ್ರ ಕುರಿತಂತೇ ಭಿನ್ನಾಭಿಪ್ರಾಯಗಳು ಬರುತ್ತವೆ. ಕ್ಯಾಸಿಯೋ, ಇಯಾಗೋ ಇಲ್ಲಿ ಪಾತ್ರಧಾರಿಗಳಾಗಿ ಬರುತ್ತಾರೆ. ತಪ್ಪು ತಿಳಿವಳಿಕೆಗಳು ಇಲ್ಲಿ ಪ್ರೀತಿ ಮತ್ತು ನಿಷ್ಠೆಯನ್ನು ದ್ರೋಹದ ಸಂಕೇತಗಳನ್ನಾಗಿಸುತ್ತವೆ. ಸಂಭವಿಸದ ತಪ್ಪು ಇಲ್ಲಿ ಪ್ರಮಾದವಾಗಿ ಕಂಡು ಡೆಸ್ಡಿಮೋನ ಮತ್ತು ಒಥೆಲೊನಾ ನಡುವೆ ನಂಬಿಕೆಯ ಮಧ್ಯೆ ಕಂದಕವೇರ್ಪಡಿಸುತ್ತದೆ. ಇಲ್ಲಿ ಶೇಕ್ಸ್ಪಿಯರ್ ಒಥೆಲೋನ ಬದುಕಲ್ಲಿ ಚಿಕ್ಕ ಬಟ್ಟೆಯ ತುಣುಕು ಸಂತಸದ ಕುಟುಂಬದ ನಡುವೆ ಬಿರುಗಾಳಿ ಬೀಸುವಂತೆ ಮಾಡುತ್ತದೆ. ಒಥೆಲೋ ಇಲ್ಲಿ “ಕರವಸ್ತ್ರ” ಮಾತ್ರವಲ್ಲ ಆ ಮೂಲಕ “ಅಧಿಕಾರ” ಮತ್ತು “ಪರಂಪರೆ”ಯೂ ತಾಯಿಯಿಂದ ವರ್ಗವಾಗಿ ಬಂದಿತ್ತು ಎಂದೇ ನಂಬಿ ಅದರ ಮೂಲಕವೇ ದುರಂತನಾಯಕನೆ ಆಗಿದ್ದಾನೆ.. ನಂತರ ಒಥೆಲೊ ಕತ್ತು ಹಿಸುಕಿ ಡೆಸ್ಡಿಮೊನಾಳನ್ನು ಕೊಲ್ಲುತ್ತಾನೆ. ಇಯಾಗೊನ ಹೆಂಡತಿ ಎಮಿಲಿಯಾ ಗಂಡನ ಕುತಂತ್ರವನ್ನು,ಸಂಚನ್ನು ಬಯಲು ಮಾಡಿದ ಮೇಲೆ ಒಥೆಲೊನ ದ್ವೇಷ ಅಸಹ್ಯಕ್ಕೆ ತಿರುಗುತ್ತದೆ. ಪಶ್ಚಾತ್ತಾಪದಿಂದ, ಪಾಪಪ್ರಜ್ಞೆಯಿಂದ ದಗ್ಧ ಒಥೆಲೋ ತನ್ನನ್ನು ಇರಿದುಕೊಳ್ಳುತ್ತಾನೆ. ದುರಂತ ನಾಯಕನಾಗುತ್ತಾನೆ. ಹೀಗೆ ಚಾಡಿ ಹೇಳುವುದು ,ಕೇಳುವುದು ದುರಂತವನ್ನಲ್ಲದೇ ಮತ್ತಿನ್ನೇನನ್ನು ಸೃಷ್ಟಿಸಲು ಸಾಧ್ಯ ಅಲ್ಲವೆ!. ಡೆಸ್ಡಿಮೋನಾಳ ಕರವಸ್ತ್ರವನ್ನು ಇಯಾಗೊ ವಶಪಡಿಸಿಕೊಳ್ಳುವುದರ ಮೂಲಕ ಆಕೆಯ ನಂಬಿಕೆ ಪರಿಶುದ್ಧತೆಯ ಬಗ್ಗೆ ಅನುಮಾನ ಮೂಡುವಂತೆ ಮಾಡುತ್ತಾನೆ.
ಒಥೆಲೋ ನಾಟಕದಲ್ಲಿ ಡೆಸ್ಡಿಮೋನಾ ಹೊಂದಿದ್ದ ಕರವಸ್ತ್ರ ವಿಶೇಷವಾಗಿತ್ತು(ಹಳೆಯ ಸಿಬಿಲ್ ಅಥವಾ ಸ್ತ್ರೀಪ್ರವಾದಿ, ಪವಿತ್ರ ಹುಳುಗಳ ರೇಷ್ಮೆ ಬಳಸಿ ಮತ್ತು ಮಮ್ಮಿಫೈಡ್ ಕನ್ಯೆಯರ ಹೃದಯದಿಂದ ಹೊರತೆಗೆದ ಬಣ್ಣವನ್ನು ಕರವಸ್ತ್ರದಲ್ಲಿ ಬಳಸಲಾಗಿತ್ತು. ಹಾಗು ಇಲ್ಲಿ ಬಳಸಿರುವ ಸ್ಟ್ರಾಬೆರಿಯ ಮಾದರಿಗಳು ಕನ್ಯೆಯ ವಿವಾಹದ ಮೊದಲ ರಾತ್ರಿಯಲ್ಲಿ ಬಟ್ಟೆಯಲ್ಲಿ ಉಳಿಯುವ ರಕ್ತದ ಕಲೆಗಳನ್ನು ಸೂಚಿಸುತ್ತದೆ) ಆ ಕಾರಣದಿಂದ ಒಥೆಲೋ ನಾಟಕದಲ್ಲಿ ಕರವಸ್ತ್ರ ದಾಂಪತ್ಯ ನಿಷ್ಟೆಯ ಸಂಕೇತವಾಗಿ ಪ್ರಾಮುಖ್ಯತೆ ಪಡೆದಿದೆ.
ಇಯಾಗಿವನ್ನು ಚಾಡಿಕೋರ ಎಂದಿರುವ ಕಾರಣದಿಂದ ‘ದೂರು’ ಮತ್ತು ‘ಚಾಡಿ’ ಈ ಪದಗಳನ್ನು ಸ್ವಲ್ಪ ಅವಲೋಕಿಸಬೇಕು. ‘ದೂರು’ ಎಂದರೆ ಮಾಡಿದ ತಪ್ಪನ್ನು ಸರಿಪಡಿಸಿಕೊಳ್ಳಲು ಅನುಕೂಲವಾಗುವಂತೆ ,ಇಲ್ಲವೆ ಮಾಡಿದ ತಪ್ಪುಗಳಿಗೆ ಶಿಕ್ಷೆ ಆಗುವಂತೆ ಹೇಳುವ, ಕಣ್ಣಿಗೆ ಕಂಡ, ಕಿವಿಗೆ ಕೇಳಿದ ಸಂಗತಿಗಳು. ಇಲ್ಲಿಯೂ ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡಿಯೇ ಹೇಳಬೇಕಾಗುತ್ತದೆ. ಚಿಕ್ಕ ಚಿಕ್ಕ ವಿಚಾರಗಳಿಗೂ ದೂರು ಹೇಳುವುದು ಸರಿಯಲ್ಲ! ಅದನ್ನೆ ನಮ್ಮಲ್ಲಿ “ಕಂಫ್ಲೆಂಟ್ ಬಾಕ್ಸ್” ಅರ್ಥಾತ್ “ದೂರು ಪೆಟ್ಟಿಗೆ” ಎನ್ನುವುದು ಮೂಲತಃ ದೂರು ಪೆಟ್ಟಿಗೆ ಎಂದರೆ ಬರೆ ದೂರುಗಳನ್ನು ಹಾಕುವುದಕ್ಕೆ ಇರುವುದು. ಬೇಡದ್ದು ಬೇಕಾಗಿರುವುದೆಲ್ಲ ಸೇರಿ ಈಗ ಸಂಕುಚಿತ ಅರ್ಥವನ್ನು ಪಡೆದುಕೊಳ್ಳುತ್ತಿದೆ. ಇನ್ನು ‘ಚಾಡಿ’ ಎಂದರೆ ನಮ್ಮ ಅಸಮಾಧಾನಗಳನ್ನು ನಮಗಾಗದವರ ಮೇಲೆ ಆರೋಪಿಸಿ ಹೇಳುವುದು ಅವರನ್ನು ತೇಜೋವಧೆಗೆ ಗುರಿಮಾಡುವುದು.
ಆಧುನಿಕರು ಕಛೇರಿ, ಬಿಸಿನೆಸ್, ಮನೋರಂಜನೆ ಸಮಾರಂಭ ಮೊದಲಾದೆಡೆ ಕೋಟ್ಗಳಲ್ಲಿ, ಶೇರ್ವಾನಿಗಳಲ್ಲಿ ಬಳಸುವ ಕರವಸ್ತ್ರಗಳು ಹೊಂದಿಕೆಯಾಗುವ ಬಣ್ಣಗಳಲ್ಲಿ ಕರವಸ್ತ್ರಗಳನ್ನು ಇರಿಸಿಕೊಂಡಿರುತ್ತಾರೆ. ಹಿಂದಿನವರು ಬಳಸಿ ಹಳತಾದ ಬಟ್ಟೆಗಳನ್ನು ಚೌಕಾಕಾರದಲ್ಲಿ ಕತ್ತರಿಸಿ ಹೆಮ್ಮೆಯಿಂದ ಸುತ್ತಲೂ ಹೆಮ್ಮಿಂಗ್ ಮಾಡಿ ಬಳಸಿದ್ದಿದೆ ಈಗ ಅದುವೆ ಓರ್ಲಾಕ್ ಆಗಿದೆ. ಇರಲಿ ಜನಸ್ನೇಹಿ ಪ್ರಧಾನಮಂತ್ರಿಗಳಾಗಿದ್ದ ಲಾಲ್ ಬಹಾದ್ದೂರ್ ಶಾಸ್ತ್ರಿಯವರು ತಮ್ಮ ಮಗನಿಗೆ ಒಮ್ಮೆ ಹರಿದ ಕುರ್ತಾವನ್ನು ಎಸೆಯುವ ಬದಲು ಸರಿಯಾದ ಆಳತೆಯಲ್ಲಿ ಕತ್ತರಿಸಿಕೊಂಡು ಕರವಸ್ತ್ರವಾಗಿ ಉಪಯೋಗಿಸಬಹುದು ಎಂದಿದ್ದರಂತೆ ಎಂಥಾ ಸರಳತೆಯಲ್ಲವೆ….?
“ಕರವಸ್ತ್ರ” ಎಂದರೆ ಹಾಗೆ ನನಗೇನೋ ಅದೊಂದು ಧೈರ್ಯದ ಸಂಕೇತವೇ. ಕೈಯಲ್ಲಿ ಸಣ್ಣಗೆ ಮಡಿಸಿದ ಕರವಸ್ತ್ರವಿರಲೇ ಬೇಕು! ಇಲ್ಲವಾದರೆ ಮನೆಯಿಂದ ಕಾಲು ತೆಗೆಯಲು ಸಾದ್ಯವೇ ಇಲ್ಲ ಅನ್ನುವ ಮಟ್ಟಿಗೆ . ಆಧುನಿಕರಾಗುತ್ತಿದ್ದಂತೆ ಕರ ವಸ್ತ್ರಹೋಗಿ ಟಿಶ್ಯೂ ಪೇಪರ್ ಬಂದಿದೆ. ಬೇಸರ ಅಲ್ವ! ಯಾರದಾದರು ಮನೆಗೆ ಹೋದಲ್ಲಿಂದ ಹಿಡಿದು ದೊಡ್ಡ ದೊಡ್ಡ ಸಮಾರಂಭಗಳಲ್ಲೂ ಇದೇ ಟಿಶ್ಯೂ ಪೇಪರ್ ಕೊಟ್ಟು ಬಿಡುತ್ತಾರೆ. ಹಿಂದೆ ಸ್ಟಾರ್ ಹೋಟೇಲುಗಳಲ್ಲಿ ಅವರದ್ದೇ ಆದ ಅವರ ಹೊಟೇಲಿನ, ಕಂಪೆನಿಯ ಹೆಸರನ್ನು ಮುದ್ರಿಸಿದ ಕರವಸ್ತ್ರಗಳನ್ನು ಟೇಬಲ್ ಮೇಲೆ ಇಡುತ್ತಿದ್ದರೆ ಈಗ ಟಿಶ್ಯೂ ಪೆಪರ್ಗಳನ್ನೇ ಇಡುತ್ತಾರೆ. ಅಂಥ ಟಿಶ್ಯೂ ಪೇಪರಗಳನ್ನು ಇಡುವ ಹಿಡಿಕೆಗಳನ್ನು ಟಿಶ್ಯೂ ಹೋಲ್ಡರ್ಸ್ ಎನ್ನುತ್ತಾರೆ. ರೆಸಾರ್ಟ್ಗಳಲ್ಲಿಯೂ ಊಟದ ಟೇಬಲ್ಗಳನ್ನು ಕಾಯ್ದಿರಿಸಿದಾಗ ಕರವಸ್ತ್ರಗಳನ್ನು ನಾನಾಕೃತಿಯಲ್ಲಿ ಮಡಿಸಿ ಇಟ್ಟಿರುತ್ತಾರೆ. ತ್ರಿಕೋನವಾಗಿ, ಹೂವಿನ ದಳಗಳಂತೆ, ಬೀಸಣಿಗೆಯ ಆಕಾರದಲ್ಲಿ, ನೆರಿಗೆ ಹಿಡಿದ ಹಾಗೆ ಇತ್ಯಾದಿ ಇತ್ಯಾದಿ…….. ದುಡ್ಡು ಕೊಡುವ ಗ್ರಾಹಕರನ್ನು ತಣಿಸುವ ವಿಧಾನಗಳಲ್ಲಿ ಇದೂ ಒಂದು.ಇದೇನ್ ಮಹಾ! ನಾವು ಶಾಲೆಯಲ್ಲಿ ಕಲಿಯುವಾಗ ಕರ್ಚೀಫ್ಗಳನ್ನು ಹಿಡಿದು ಅದರಲ್ಲಿಯೇ ಉಯ್ಯಾಲೆ, ತೊಟ್ಟಿಲು, ದೋಣಿ ಇತ್ಯಾದಿಗಳನ್ನು ಮಾಡುತ್ತಿದ್ದ ನಾವೇನು ಕಡಿಮೆಯಲ್ಲ. ಈಗ ನೆನಪಿಸಿಕೊಂಡರೆ ನಗು ಬರುತ್ತದೆ. ಅದರ ಬದಲಿಗೆ ಬಂದಿರುವ ಟಿಶ್ಯೂ ಪೇಪರ್ ನೋಡಿದರೆ ವಿಷಾದವೆನಿಸುತ್ತದೆ.
ಟಿಶ್ಯೂ ಪೇಪರ್ ಬಂದು ಪಕೃತಿಯ ಮೇಲೆ ವ್ಯತಿರಿಕ್ತವಾದ ಪರಿಣಾಮ ಬೀರಿದೆ. ಇವುಗಳನ್ನು ಮರದ ತಿರುಳುಗಳಿಂದ ಮಾಡುತ್ತಾರೆ. ಮರದ ತಿರುಳು ಬಿಳಿ ಬಣ್ಣಕ್ಕೆ ಇರಲ್ಲ ಅದನ್ನು ಬ್ಲೀಚ್ ಮಾಡಲು ರಾಸಾಯನಿಕಗಳನ್ನು ಹಾಕಬೇಕು ಪರಿಸರಕ್ಕೆ ಹಾನಿಯಲ್ಲ ಎಷ್ಟೇ ಹೇಳಿದರೂ ಮರಗಳ ಹನನವಾಗುತ್ತಿದೆಯಲ್ಲ! ಎಮಬ ವಿಷಾದವಿದೆ.
ಕರವಸ್ತ್ರಗಳು ಮತ್ತೆ ಮತ್ತೆ ವಿವಿಧ ರೂಪಗಳಲ್ಲಿ ಬಹುಪಯೋಗಿಯಾಗಿ ಬರಬೇಕು. ಉದಾಹರಣೆಗೆ ಆಮಂತ್ರಣ ಪತ್ರಿಕೆಗಳಾಗಿ ಪೇಪರ್ ಬದಲಿಯಂತೆ. ದುಬಾರಿ ಕಾಗದಗಳಲ್ಲಿ ಮದುವೆಯ ಆಮಂತ್ರಣ ಪತ್ರಿಕೆಗಳನ್ನು ಅಚ್ಚು ಹಾಕುವುದಕ್ಕಿಂತ ಕೈ ಮಗ್ಗದಲ್ಲಿ ನೇಯ್ದ ವಸ್ತ್ರಗಳಲ್ಲಿ ಅಚ್ಚು ಹಾಕಿದರೆ ಪೇಪರ್ಗಳ ದುರುಪಯೋಗ ತಡೆಯಬಹುದು. ಎಷ್ಟು ಹಣ ಹಾಕಿ ಆಮಂತ್ರಣ ಪತ್ರಿಕೆ ಮಾಡಿಸಿದರೂ ಅದು ಉಪಯೋಗಕ್ಕೆ ಬರುವುದು. ಮದುವೆ ಯಾವಾಗ? ಎಲ್ಲಿ , ಊಟ ಎಷ್ಟು ಹೊತ್ತಿಗೆ ಹೆಚ್ಚೆಂದರೆ ಬಸ್ ರೂಟ್ ನೋಡಲು ಇಷ್ಟೆ. ಇದರ ಬದಲು ಕರವಸ್ತ್ರಕ್ಕೆ ಮುದ್ರಿಸಿ ಕೊಟ್ಟರೆ ಚೆನ್ನಾಗಿರುತ್ತದೆ. ಅಲ್ಲದೆ ಕೊಟ್ಟ ವಸ್ತ್ರದ ಪ್ರಿಂಟ್ ಎಲ್ಲಾ ಹೋದ ನಂತರ ಅಡುಗೆ ಮನೆಯ ವಸ್ತ್ರವಾಗಿಯಾದರೂ ಒಂದಷ್ಟು ದಿನಗಳ ಕಾಲ ಉಳಿಯುತ್ತದೆಯಲ್ಲಾ! . ಹೀಗೆ ಮಾಡುವುದರಿಂದ ಪರಿಸರ ಮತ್ತು ಪರಂಪರೆಯ ವೃತ್ತಿ ನಂಬಿ ಕಂಗೆಟ್ಟಿರುವ ನೇಕಾರರಿಗೆ ಇದರಿಂದ ಸಹಾಯವಾಗುತ್ತದೆ. ನವೋದ್ಯಮವಾಗಿಯೂ ನೆಲೆ ಒದಗಿಸಬಹುದು.
ಈಗಂತೂ ಆನ್ಲೈನ್ ಖರೀದಿಯೇ ಜೋರು ಉಡುಗೊರೆಗಳಿಗೂ, ಪ್ರತಿ ಉಡುಗೊರೆಗಳಿಗೂ ಅಂದ ಹಾಗೆ ಉಡುಗೊರೆ ಈಗ ಸಂಕುಚಿತ ಅರ್ಥ ಪಡೆದುಕೊಂಡಿರುವುದು . ನಮ್ಮ, ಪರಂಪರೆಯಲ್ಲೂ ಶುಭ ಸಂದರ್ಭದಲ್ಲಿ ಕಾಣಿಕೆಯಾಗಿ ಉಡುವ ಬಟ್ಟೆಯನ್ನೇ ಕೊಡುತ್ತಿದ್ದರು ‘ಉಡು’ ಎಂದರೆ ‘ಧರಿಸುವುದು’ ಎಂದರ್ಥ ‘ಕೋರಿ’ ಎಂದರೆ ಸೀರೆ ಎಂದರ್ಥ ಹಾಗಿದ್ದಲ್ಲಿ ಉಡುವ ಬಟ್ಟೆ ಅಥವಾ ‘ಉಡುಗೆ’ ಎಂದಾಯಿತಲ್ಲ ಕ್ರಮೇಣ ಏನಾದರೂ ವಸ್ತುವನ್ನು ಕೊಡುತ್ತಿದ್ದುದು ಈಗ ‘ಗಿಫ್ಟ್’ ಎನ್ನುವ ಸಂಕುಚಿತ ಅರ್ಥಕ್ಕೆ ಬಂದು ನಿಂತಿದೆ. ಇರಲಿ ನಮ್ಮಿಷ್ಟದವರಿಗೆ ಏನಾದರೂ ಪ್ರೀತಿಯಿಂದ ಕೊಡಬೇಕೆಂದರೆ ಕರವಸ್ತ್ರಗಳನ್ನೇ ವಿನ್ಯಾಸ ಗೊಳಿಸಿ ಕೊಡಬಹುದು.
ಕರವಸ್ತ್ರಗಳು ಮಾತ್ರ ಯಾರೂ ಯಾರನ್ನೂ ಕೇಳಲಾರದ ವಸ್ತು! ಅದೆಷ್ಟೇ ಚೆನ್ನಾಗಿದ್ದರೂ ಇನ್ನೊಬ್ಬರ ಕರವಸ್ತ್ರ ಬೇಕೆನಿಸುವುದಿಲ್ಲ. ಕರವಸ್ತ್ರ ಬೇರೆಯವರಿಗೆ ಕೊಡಬಾರದು ತೆಗೆದುಕೊಳ್ಳಬಾರದು ಎಂಬುದರಲ್ಲಿ ನೈರ್ಮಲ್ಯವೂ ಒಂದು ಸುಭಗ ಕಾರಣವಾಗಿದೆ. ಸಂಪ್ರದಾಯಸ್ಥರು ಕೊಳಕಾಗಿರುವ ಕರವಸ್ತ್ರಗಳಿಂದ ಏಳಿಗೆ ಇಲ್ಲ ,. ಗಾಢ ವರ್ಣದ ಕರವಸ್ತ್ರಗಳನ್ನು ಬಳಸಬಾರದು. ಕರವಸ್ತ್ರಗಳ ಮೇಲೆ ಏನನ್ನೂ ಬರೆಯದಿರಿ ಇತ್ಯಾದಿ ಹೇಳುವುದಿದೆ.
ಇಷ್ಟು ಕರವಸ್ತ್ರಗಳ ಬಗ್ಗೆಯೇ ! ಕರವಸ್ತ್ರ ಇದ್ದರಾಯಿತು! ಇಲ್ಲದಿದ್ದರಾಯಿತು! ಎನ್ನುವಂತಿಲ್ಲ. ಕರವಸ್ತ್ರ ಕೈಯಲ್ಲಿ ಇದ್ದರೆ ಅದೊಂದು ಆತ್ಮವಿಶ್ವಾಸದ ಸಂಕೇತ .ಕಣ್ಣೀರು ಒರೆಸಿ ಸಿಂಬಳ ತೆಗೆಯುವ ದಾದಿ. ಬೆವರು ಒರೆಸುವ ಸೇವಕ . ಇದಕ್ಕಿಂತ ಹೆಮ್ಮೆಯ ವಸ್ತು ಇನ್ನೊಂದಿಲ್ಲ ಅನ್ನಿಸುತ್ತದೆ. ಬಡತನದಲ್ಲಿದ್ದುಕೊಂಡೇ ಕನ್ನಡಿಗರನ್ನು ಭಾವಗೀತೆಗಳಿಂದ ಶ್ರೀಮಂತಗೊಳಿಸಿದ ಕೆ.ಎಸ್. ನರಸಿಂಹಸ್ವಾಮಿಯವರು “ನೋವು ಹಾಗು ಕಂಬನಿ ಬದುಕಾದರೆ ಕರವಸ್ತ್ರ ಕವಿತೆಯಾಗುತ್ತದೆ” ಎಂದಿದ್ದಾರೆ. ಅಂದರೆ ನೊಂದ ಬದುಕಿನ ಕಣ್ಣೀರನ್ನು ಕವಿತೆ ಎಂಬ ಸಾಂತ್ವನದ ಕರವಸ್ತ್ರ ಒರೆಸುತ್ತದೆ ಎಂಬುದಾಗಿ ಇಂಥದೊಂದು ಅದ್ಭುತ ಮಾತುಗಳು ಅಲ್ವೆ!
ಮನೆ ದೊಡ್ಡದೋ, ಚಿಕ್ಕದೋ ಇಡೀ ಮನೆಯ ಭದ್ರವಾಗಿರಿಸಲು ಅಂಗೈ ಅಗಲ ಬೀಗ ಹಾಕುತ್ತೇವೆ. ಅದನ್ನು ನಿಯಂತ್ರಿಸಲು ಕೀಯನ್ನು ಹಾಕುತ್ತೇವೆ. ‘ಕೀ’ಯನ್ನು ನಮ್ಮ ಹಿರಿಯರು ‘ಬೀಗದ ಸಿಗುರು’, ‘ಬೀಗದ ಎಸಳು’ ಎಂದೂ ಕರೆಯುತ್ತಾರೆ. ಕಿಲುಬು ಹಿಡಿದ ನಮ್ಮ ಅಂತರಂಗದ ಲಾಕನ್ನು ತೆಗೆಯಲು ಸಹೃದಯತೆ ಎಸಳು, ಸಂವೇದನೆಯ ಸಿಗುರು ಮೊದಲಾದ ಕರವಸ್ತ್ರಗಳು ಬೇಕು ಅನ್ನಿಸುತ್ತದೆ. ಅಂಥಾ ಆನೆಯಂಥಾ ಆನೆಯನ್ನು ನಿಯಂತ್ರಿಸುವುದು “ಸನ್ನೆಗೋಲು”, ಬಂಡೆಯಂಥಾ ಬಂಡೆ ಒಡೆಯಲು ಇನ್ನೊಂದು ಬಂಡೆ ತರಲಾಗದು ಬೇಕಿರುವುದು “ಉಳಿ” ಮತ್ತು “ಸುತ್ತಿಗೆ”. ಹಾಗೆ ನಮ್ಮ ಬದುಕು ಬಂಧವಾಗರಬೇಕು ಸುಮಧುರ ಭಾಂದವ್ಯದಿಂದ ಕೂಡಿರಬೇಕು ಎಂದರೆ ಹಿರಿಯರ, ಸ್ನೇಹಿತರ ಹಿತೈಷಿಗಳ ಹಾರೈಕೆ ಅನ್ನುವುದು ಬೇಕು ಇದೇ ಬದುಕಿನ ಕರವಸ್ತ್ರ. ಕಾಪಾಡುವ ವಸ್ತ್ರ . ಹಿರಿಯರ ಮಾತುಗಳನ್ನು ಕೇಳಿ ಅಳವಡಿಸಿಕೊಂಡರೆ ಅಮೂಲ್ಯ ವಸ್ತ್ರ. ಹಾಗೆ ಕೇಳಿ ನಿರ್ಲಕ್ಷಿಸಿದರೆ ಬಳಸಿ ಬಿಸಾಡಿದ ವಸ್ತ್ರ. ಹೇಳಿದ್ದನ್ನೆಲ್ಲಾ ಕೇಳಿ ಒಂದನ್ನೂ ಅಳವಡಿಸಿಕೊಳ್ಳದೇ ಇದ್ದರೆ ತೊಳೆಯದೆ ಹಾಗೆ ತೆಗೆದಿರಿಸಿದ ಕರವಸ್ತ್ರ. ಮತ್ತೆ ಮತ್ತೆ ತೆಗೆದು ಒರೆಸಿ ಹೇಳಿ- ಕೇಳಿ ಮಾಡಿದರೆ ಸ್ವಚ್ಛವಾಗಿ ಇರಿಸಿಕೊಂಡ ಅಂದರೆ ನಮ್ಮನ್ನು ನಾವು ಪರಿವರ್ತನೆಗೆ ಒಳಗುಮಾಡಿಕೊಂಡಂತೆ ಮರುಬಳಕೆ ಮಾಡುವ ಕರವಸ್ರ, ನಿಯಮದ ವಸ್ತ್ರ,ನೇಮದ ವಸ್ತ್ರ ,ನೆಮ್ಮದಿಯ ವಸ್ತ್ರ.
ಹೆಚ್ಚಿನ ಬರಹಗಳಿಗಾಗಿ
‘ಒಬ್ಬಂಟಿಕರಣ’ ದ ಲೋಕಾರ್ಪಣೆ
ವಿಶ್ವ, ವಿಶಾಲೂ ಮತ್ತು ಅಧ್ಯಾತ್ಮ
ರೇಟಿಂಗ್ ಗಳ ಧೋರಣೆ