- ಬದುಕಿನ ಶಾಲೆ ಮತ್ತು ಮಾಂಟೆಸರಿ - ನವೆಂಬರ್ 22, 2023
- ಸಣ್ಣದೆಲ್ಲಾ ಸಣ್ಣದಲ್ಲ… - ಜೂನ್ 24, 2023
- ‘ಪಾಕಶಾಲೆ’ಯ ನಳ! - ಮೇ 22, 2022
ಅದೊಂದು impromptu ಮಾತುಕತೆ.
ಯಾವುದೇ ಪೂರ್ವ ನಿರ್ಧರಿತ ಪ್ರಶ್ನೆಗಳಿಲ್ಲದೇ ಸುಮ್ಮನೆ ಲೋಕಾಭಿರಾಮವಾಗಿ ಮಾತಾಡುತ್ತಾ ಹೋದರು ವಾಸುದೇವ ಅಡಿಗರು.. ಕುತೂಹಲಭರಿತ ಕಂಗಳಿಂದ ಆ ಮಾತುಗಳನ್ನು ಕೇಳಿಸಿಕೊಳ್ಳುವುದಷ್ಟೇ ನನ್ನ ಕೆಲಸವಾಗಿತ್ತು.
‘ಬ್ರಾಹ್ಮಣರ ಕಾಫಿ ಕೇಂದ್ರ’ದ ಅಂಗಳದಲ್ಲೇ ಬೆಳೆದ ವಾಸುದೇವ ಅಡಿಗರು ಹೋಟೆಲ್ ಉದ್ಯಮವನ್ನು ಸ್ವಂತವಾಗಿ ಆರಂಭಿಸಿದ್ದು ೧೯೯೩ ರಲ್ಲಿ. ಹಲವಾರು ಹೊಸ ಹೊಸ ಆಲೋಚನೆಗಳು ವಿನೂತನ ಪ್ರಯೋಗಗಳಿಗೆ ತಮ್ಮನ್ನು ತಾವು ಒಡ್ಡಿಕೊಂಡು ‘ಅಡಿಗಾ’ಸ್ ಗ್ರೂಪ್ ಆಫ್ ಹೋಟೆಲ್ ಬೆಂಗಳೂರಿನ ಮನೆ ಮಾತಾಗುವಂತೆ ಬೆಳೆದು ನಿಂತ ಕಥೆ ಒಂದು ಪುಸ್ತಕವಾಗಬಲ್ಲದು. ಎಲ್ಲದಕ್ಕಿಂತ ವಿಶಿಷ್ಟ ಎನಿಸಿದ್ದು ಹೆಸರಿನ ಹಿಂದೆ ಅವರಿಗಿದ್ದ ಚಿಂತನೆ. ‘ ಟಾಟಾ ಬಿರ್ಲಾ ‘ ಎಂಬ ಹೆಸರುಗಳು ಹೇಗೆ ವಿಶ್ವ ಖ್ಯಾತಿ ಹೊಂದಿದೆಯೋ ಹಾಗೆಯೇ ನಮ್ಮ ಮನೆತನದ ಹೆಸರೂ ಪ್ರಸಿದ್ಧವಾಗಬೇಕು ಅನ್ನೋ ಹಠವಿತ್ತು ನನಗೆ ಎಂದ ಅವರ ಮುಖದಲ್ಲಿ ಕಂಡಿದ್ದು ಅವರೊಳಗಿದ್ದ ಅಭಿಮಾನ.. ಹಾಗೆ ಕಟ್ಟಿ ಬೆಳೆಸಿದ ಸಾಮ್ರಾಜ್ಯವನ್ನು ಹಸ್ತಾಂತರಿಸಬೇಕಾದರೆ ಹೇಗನ್ನಿಸಿತು ನಿಮಗೆ ಎಂದಾಗ ಅವರದ್ದು ಅತಿ ಕೂಲ್ ಅನ್ನಿಸೋ ಉತ್ತರ ‘ It was an experiment’. ಅರ್ರೇ ಹೌದಲ್ವಾ.. ಕಟ್ಟಿ ಬೆಳೆಸೋ ಸಾಮರ್ಥ್ಯ ಮತ್ತು ಶಕ್ತಿ ಇರುವ ಯಾರೂ ಆಗಿಹೋಗಿದ್ದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡ ಇತಿಹಾಸವೇ ಇಲ್ಲ.
ಅಂತೆಯೇ ಉತ್ತರವಾಗಿ ಎದ್ದು ನಿಂತದ್ದು ‘ಪಾಕಶಾಲ’.
“ಪಾಕಶಾಲ ನನ್ನ ಎರಡನೇ ಇನ್ನಿಂಗ್ಸ್. ಹೋಟೆಲ್ ಇಂಡಸ್ಟ್ರಿ ಗೆ ತನ್ನದೇ ಆದ ಏರು ಪೇರುಗಳಿವೆ. ಅವೆಲ್ಲವನ್ನೂ ಸರಿದೂಗಿಸಿಕೊಂಡು ಹೋಗೋದು ಸುಲಭದ ಮಾತಲ್ಲ. ಅದರಲ್ಲೂ ವಿಶೇಷವಾಗಿ ಈಗಿನ ಕಾಲಘಟ್ಟದಲ್ಲಿ, ಈ ಇಂಟರ್ನೆಟ್ ಯುಗದಲ್ಲಿ ಅದೊಂದು ಸಾಹಸವೇ ಸರಿ” ಎನ್ನುತ್ತಾ ಒಂದೊಂದೇ ಎಳೆಗಳನ್ನು ಬಿಡಿಸಿಟ್ಟರು.
“ನೀವು ಕುಡಿಯೋ ೧೦ ರೂಪಾಯಿ ಕಾಫಿಗೆ ೯ ರೂಪಾಯಿ ಖರ್ಚಾಗುತ್ತದೆ ಅನ್ನೋ ವಿಷಯ ನಿಂಗೆ ಗೊತ್ತಾ” ಅಂದಾಗ ನಾನೊಮ್ಮೆ ಅವಾಕ್ಕಾದೆ. ಕಾಫಿ ಪುಡಿ, ಹಾಲು, ಗ್ಯಾಸ್, ಕಾಫಿ ಮಾಡೋ ಹುಡುಗನ ಸಂಬಳ, ಆ ಪಾತ್ರೆ, ಮತ್ತದನ್ನ ಕ್ಲೀನ್ ಮಾಡೋ process ಎಲ್ಲವೂ ಸೇರಿ ಅದರ ಬೆಲೆ ಅಷ್ಟಾಗುತ್ತದೆ ಅನ್ನೋ ಸತ್ಯ ಬಹಳಷ್ಟು ಜನರಿಗೆ ತಿಳಿಯೋದಿಲ್ಲ. ಬೇರೆ ಎಲ್ಲಾದರೂ ಕೆಲವು ಅಡಚಣೆಗಳು ಬಂದಾಗ ಜನ ಸಹಿಸಿಕೊಳ್ಳುತ್ತಾರೆ, ಆದರೆ ಊಟದ ವಿಷಯದಲ್ಲಿ ಮಾತ್ರ ಎಲ್ಲವೂ ಅಚ್ಚುಕಟ್ಟಾಗಿರಬೇಕು. ಉದಾಹರಣೆಗೆ ಶಿಫ್ಟ್ ಬದಲಾವಣೆ ಆಗೋ ಸಮಯದಲ್ಲಿ ಒಂದೈದು ನಿಮಿಷ ವ್ಯತ್ಯಾಸ ಆಗೋ ಸಾಧ್ಯತೆಗಳಿರುತ್ತವೆ. ಕೆಲವೊಮ್ಮೆ ರಾತ್ರಿ ಇನ್ನೇನು ಹೋಟೆಲ್ ಮುಚ್ಚೋ ಸಮಯದಲ್ಲೂ ಗಡಿಬಿಡಿಗಳಾಗೋದಿದೆ. ಆಗೆಲ್ಲ ನಿಭಾಯಿಸೋದು ಬಹಳ ಕಷ್ಟ. ಎಲ್ಲರಂತೆಯೇ ಇಲ್ಲಿಯೂ ಕೆಲಸ ಮಾಡೋರು ಮನುಷ್ಯರೇ ತಾನೇ! ಸಮಸ್ಯೆಗಳು ಇದ್ದೇ ಇರುತ್ತೆ. ಸರಿ ಮಾಡ್ಕೊಂಡು ಹೋಗ್ಬೇಕಷ್ಟೇ..
ಈಗಂತೂ Zomato, Swiggy ಕಾಲ ಈ ತರಹದ ಸಮಸ್ಯೆಗಳೆಲ್ಲಾ ಉದ್ಭವಿಸೋದು ಕಮ್ಮಿ ಅಲ್ಲವಾ ಅನ್ನೋ ನನ್ನ ಪ್ರಶ್ನೆಗೆ ಅಡಿಗರು ನಗುತ್ತಾ ಬೇರೆಯದೇ ಆಯಾಮವನ್ನು ನೀಡಿದರು. “ಆನ್ಲೈನ್ ವ್ಯವಸ್ಥೆ ಎಲ್ಲವನ್ನೂ ಮನೆಬಾಗಿಲಿಗೇ ತಂದಿರೋದು ಎಲ್ಲರಿಗೂ ಖುಷಿಯ ವಿಷಯ ಅನ್ನೋದರಲ್ಲಿ ಎರಡು ಮಾತಿಲ್ಲ. ಆಹಾರ ಬಿಸಿ ಬಿಸಿ ಇದ್ದಾಗ ಸಿಗೋ ರುಚಿಗೂ ಐದಾರು ಕಿಮೀ ಬೆಂಗಳೂರಿನ ರಸ್ತೆಯಲ್ಲಿ ಹಾದಿ ಸವೆಸಿದ ಮೇಲಿನ ರುಚಿಗೂ ಒಂದಷ್ಟು ವ್ಯತ್ಯಾಸ ಉಂಟಾಗೋದು ಸಹಜ… ಅಲ್ಲಿ ರಿವ್ಯೂ ಬರೆದ ಜನರನ್ನು ನಾವು ತಲುಪಲು ಸಾಧ್ಯವಾದರೆ ಸಮಸ್ಯೆಯ ಆಳ ಅಗಲ ಅರ್ಥ ಮಾಡಿಕೊಂಡು ಇನ್ನಷ್ಟು ಸಮರ್ಥವಾಗಿ ಸೇವೆ ಕೊಡಬಹುದು. ನೀವು ಈಗಿನ ಯುವ ಜನಾಂಗ ಇದ್ದೀರಲ್ಲ ನಿಮ್ಮ ಜೊತೆ ಏಗೋದು ಸ್ವಲ್ಪ ಕಷ್ಟವೇ.. ಸಹನೆ ಕಮ್ಮಿ ಅಲ್ಲವಾ ನಿಮಗೆ” ಎಂದು ಕಾಲೆಳೆಯುವಂತೆ ನಕ್ಕರು. “ಹಾಗೇನಿಲ್ಲ ಅಂಕಲ್” ಅಂದವಳಿಗೆ ಒಂದರ್ಧ ಘಂಟೆಯ ಹಿಂದೆ ತಾನೇ Ola ಆಟೋದವರು Gpay ಬದಲು ಹಣ ಕೇಳಿದರು ಎಂದು ಮೂರು ಸ್ಟಾರ್ ಕೊಟ್ಟು ರಿವ್ಯೂ ಬರೆದದ್ದು ನೆನಪಾಯ್ತು.
ಇದೆಲ್ಲಾ ಹೊರಗಿನವರದ್ದಾಯ್ತು. ಒಳಗಿನವರ ಕಥೆ ಏನು ಎಂದೆ.. “ನಿನಗೆ ಜನರನ್ನು ನಿಭಾಯಿಸಲು ಬಂದರೆ ಆರಾಮಾಗಿ ಹೋಟೆಲ್ ಶುರು ಮಾಡಬಹುದು ನೋಡು.. ಹೊರಗಿನಂತೆಯೇ ಒಳಗೂ ಒಂದಿಷ್ಟಿರತ್ತೆ. ಅದು ಎಲ್ಲ ಉದ್ಯೋಗದಾತರಿಗೂ ಇರುವಂಥದ್ದು. ಹಾಗೆ ನೋಡಿದರೆ Service Industry ಅಲ್ಲಿ ಕೆಲಸಗಾರರನ್ನು ಉಳಿಸಿಕೊಳ್ಳೋದು ಕಷ್ಟದ ವಿಷಯವೇ.. ಇಲ್ಲಿ ನಿಮ್ಮ ಕಂಪ್ಯೂಟರ್ ಕಂಪನಿಗಳ ಹಾಗೆ Notice period ಇರೋದಿಲ್ಲ. ಸಾಕೆನಿಸಿದಾಗ ಬಿಟ್ಟು ಹೋಗೋ ಸ್ವಾತಂತ್ರ್ಯ ಅವರು ತೆಗೆದುಕೊಳ್ಳುತ್ತಾರೆ. ಆಮೇಲಿನದ್ದು ನಾವು ನಿಭಾಯಿಸಬೇಕಷ್ಟೇ.. ಇದರ ಜೊತೆಗೆ ಹೋಟೆಲ್ ನಲ್ಲಿ ಕೆಲಸ ಮಾಡುವವರಿಗೆ ಸರಿಯಾದ ಚುಚ್ಚುಮದ್ದುಗಳು ಆಗಬೇಕು. ಆರೋಗ್ಯದ ಬಗ್ಗೆ ನಿಗಾ ವಹಿಸಬೇಕು. ಆಹಾರಕ್ಕೆ fcciನಿಂದ ಪ್ರಮಾಣ ಪತ್ರ ತೆಗೆದುಕೊಳ್ಳಬೇಕು. ಇಷ್ಟೆಲ್ಲಾ ಹಂತಗಳನ್ನು ದಾಟಿದಾಗ ಮಾತ್ರ ಶುಚಿ ರುಚಿಯಾದ ಆಹಾರವನ್ನು ಕೊಡಲು ಸಾಧ್ಯ. ಸುಮಾರು ೪೦೦೦ ಕ್ಕೂ ಹೆಚ್ಚು ಜನರಿಗೆ ಪಾಕಶಾಲ ಜೀವನೋಪಾಯವಾಗಿದೆ. ಅದರ ಬಗ್ಗೆ ನಮಗೆ ಹೆಮ್ಮೆಯಿದೆ”.
ಅಷ್ಟು ಹೊತ್ತಿಗೆ ಇದನ್ನೆಲ್ಲಾ ಕೇಳಿಯೇ ಉಸ್ಸಪ್ಪಾ ಎನಿಸಿದ್ದ ನಂಗೆ ತಕ್ಷಣವೇ ಹೊಳೆದಿದ್ದು ಇಂಜಿನಿಯರಿಂಗ್ ಕಥೆ. ಅಡಿಗರು ಓದಿದ್ದು ಇಂಜಿನಿಯರಿಂಗ್, ಮಾಡಬೇಕೆಂದುಕೊಂಡಿದ್ದು MS, ಆಗಿದ್ದು ಹೋಟೆಲ್ ಉದ್ಯಮಿ. ಇದು ಹೇಗೆ ಎಂದು ವಿಷಯಾಂತರಿಸಿದೆ.
“ಅದೆಲ್ಲಾ ಹಾಗೇ. ಆಸೆ ಇದ್ದದ್ದು ಅಮೆರಿಕಾದಲ್ಲಿ ಎಂ.ಎಸ್ ಮಾಡಬೇಕು ಎಂದು.. ಆ ಕಾಲಕ್ಕೆ ನಮ್ಮ ಆರ್ಥಿಕ ಸ್ಥಿತಿ ಗತಿಗಳನ್ನು ಪರಾಮರ್ಶಿಸಿದ ಅವರು ವೀಸಾ ಕೊಡಲಿಲ್ಲ. ನಾನು ಹೋಟೆಲ್ ಉದ್ಯಮವನ್ನು ಆರಂಭಿಸಿದೆ. ಈಗ ಇದೇ ಉಸಿರಾಗಿದೆ”. ಹಾಗಾದರೆ ನಿಮ್ಮ ತಂತ್ರಜ್ಞಾನದ ಬಗ್ಗೆಯಿದ್ದ ಒಲವು ಏನಾಯಿತು ಅನ್ನೋ ನನ್ನ ಮನಸ್ಸಲ್ಲಿದ್ದ ಕುತೂಹಲ ತಣಿಸುವಂತೆ ಅವರು ಮುಂದುವರಿಸಿದರು.
“ಒಂದಷ್ಟು ತಂತ್ರಜ್ಞಾನವನ್ನು ಹೋಟೆಲ್ ನಲ್ಲಿಯೂ ಅಳವಡಿಸಿಕೊಳ್ಳಬೇಕು ಅನ್ನೋ ಮನಸ್ಸಿದೆ. ಆ ವಿಷಯದಲ್ಲಿ ಒಂದಷ್ಟು ಸಂಶೋಧನೆನೂ ನಡೀತಿದೆ. ಎಲ್ಲಾ ನಾವಂದುಕೊಂಡ ಹಾಗೆಯೇ ಆದರೆ ಮುಂದಿನ ದಿನಗಳಲ್ಲಿ ಕಾಫಿ ಮತ್ತು ದೋಸೆಗೆ ಹೊಸದೇ ರೂಪ ಬರಲಿದೆ” ಎಂದರು. ನನ್ನೊಳಗಿದ್ದ ಇಂಜಿನಿಯರ್ ಗೆ ಸಮಾಧಾನವೆನಿಸಿತು.
ಈಗ ಸದ್ಯಕ್ಕೆ ೧೩ ಬ್ರಾಂಚ್ ಗಳಿವೆ ಮತ್ತು ಎರಡು ನಂದಿ ಉಪಚಾರ್ ಹೆಸರಿನ ಹೋಟೆಲ್ ಇವೆ. ಮೇ ಒಂದಕ್ಕೆ ಹುಟ್ಟೂರು ಕುಂದಾಪುರದಲ್ಲಿ ಇನ್ನೊಂದು ಬ್ರಾಂಚ್ ಉದ್ಘಾಟನೆ ಆಗಿದೆ. ಅದೊಂಥರಾ ಖುಷಿ. ಒಂದು ಆವೃತ್ತದ ಹಾಗೆ.. ಅಲ್ಲಿಯ ತಿಂಡಿಗಳನ್ನ ಇಲ್ಲಿ ಪರಿಚಯಿಸಬೇಕು ಇಲ್ಲಿಯ ವಿಶೇಷತೆಗಳನ್ನ ಅಲ್ಲಿಯ ಜನರಿಗೆ ಕೊಡಬೇಕು. ಇದೊಂದು Cultural exchange of food. ಎರಡು ಪಾರ್ಟಿ ಹಾಲ್, ಸುಮಾರು ಎಂಬತ್ತು ಜನರಿಗೆ ಡೈನಿಂಗ್ ಸೌಲಭ್ಯಗಳನ್ನು ಅಲ್ಲಿ ಕಲ್ಪಿಸಿದ್ದೀವಿ. ಯಶಸ್ಸು ಕಾಣ್ತೇವೆ ಅನ್ನೋ ವಿಶ್ವಾಸ ಇದೆ ಎಂದರು.
ಹಿಂದೆ ಸಾಹಿತ್ಯ ಸಮ್ಮೇಳನಗಳಿಗೆ, ದೊಡ್ಡ ದೊಡ್ಡ ಸಮಾರಂಭಗಳಿಗೆ ಆಹಾರ ತಯಾರಿಸಿದ ಅನುಭವವಿದೆ. ನಾರಾಯಣ ಮೂರ್ತಿ, ಡಾ.ರಾಜ್ ಕುಮಾರ್ ಇನ್ನೂ ಹಲವು ಗಣ್ಯರು ನಮ್ಮ ಊಟವನ್ನು ಸವಿದು ಮೆಚ್ಚಿ ಸೇವೆ ಪಡೆದಿದ್ದಾರೆ. ಇವೆಲ್ಲವೂ ಕಿರೀಟದ ಗರಿಗಳೆಂದೇ ಹೇಳಬಹುದು. ಬೇರೆ ದೇಶಗಳಿಗೂ ವಿಸ್ತರಿಸಬೇಕು ಅನ್ನೋ ಕನಸಿತ್ತು. ಮುಂದಿನ ದಿನಗಳಲ್ಲಿ ಸಾಧ್ಯವಾಗಬಹುದೇನೋ..
ದಿನಕ್ಕೆ ಸಾವಿರಾರು ಜನರ ಜೊತೆ ಒಡನಾಟ, ನೂರಾರು ಬಗೆಯ ಸಮಸ್ಯೆಗಳು, ಭವಿಷ್ಯ ಹತ್ತಾರು ಪ್ರಾಜೆಕ್ಟ್ ಗಳು, ಇಷ್ಟೆಲ್ಲಾ ಹೇಗೆ ಸಾಧ್ಯವಾಗತ್ತೆ ಅನ್ನೋದು ನನ್ನ ಕೊನೆಯ ಪ್ರಶ್ನೆಯಾಗಿತ್ತು. ಮತ್ತದಕ್ಕೆ ಅವರು ಕೊಟ್ಟ ಉತ್ತರವನ್ನು ಈ ಕ್ಷಣಕ್ಕೂ ಮೆಲುಕು ಹಾಕುತ್ತಿದ್ದೇನೆ.
“ಎಲ್ಲವೂ ಸುಲಭ. ಪ್ರಪಂಚ ವಿಸ್ಮಯಗಳ ಆಗರ. ನೋವು ನಲಿವು ಒಂದಕ್ಕೊಂದು ಹೊಂದಿಕೊಂಡೇ ಇರುತ್ತೆ. ಸಮಸ್ಯೆಯನ್ನ ಪರಿಹಾರ ಮಾಡೋ ಶಕ್ತಿ ಇದೆ ಅಂದ್ರೆ ಮಾಡ್ತಾ ಹೋಗಬೇಕು. ಅದೇ ಜೀವನ. ಹಾಗಾಗಿ ಪ್ರತಿ ದಿನವೂ ಖುಷಿಯೇ.. ಪ್ರತಿ ಕ್ಷಣವನ್ನೂ ಪೂರ್ತಿಯಾಗಿ ಅನುಭವಿಸಬೇಕು. ಏನಂತೀಯಾ?” ಎಂದು ಮಾತು ಮುಗಿಸಿದರು.
ಪಾಕಶಾಲದ ಗುಣಮಟ್ಟದ ಹಿಂದಿನ ಗುಟ್ಟು ಇವರ ಸತತ ಪರಿಶ್ರಮ ಮತ್ತು ಶ್ರದ್ಧೆ.
ಸುಮಾರು ಮೂವತ್ತು ವರ್ಷಗಳ ಅನುಭವ ಪ್ರತಿ ಮಾತಿನಲ್ಲೂ ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಇಷ್ಟೆಲ್ಲಾ ಮಾತು ಕಥೆಯ ನಂತರ “ಹೇಗನ್ನಿಸ್ತು ನಿನಗೆ ನನ್ನ ಜೊತೆ ಮಾತಾಡಿದ್ದು” ಅಂತ ಕೇಳೋ ಅಡಿಗರ ವಿನಯತೆಯ ಮುಂದೆ ಉಳಿದಿದ್ದೆಲ್ಲಾ ಗೌಣ ಎನಿಸಿದ್ದು ಮಾತ್ರ ಸುಳ್ಳಲ್ಲ.
ಹೆಚ್ಚಿನ ಬರಹಗಳಿಗಾಗಿ
ಬೇಲಿಯೇ ಎದ್ದು…..
ಗಣೇಶನ ಕೈಯಲ್ಲಿಯ ಲಾಡು
ನೋ ಪಾರ್ಕಿಂಗ್