- ಚಿಕ್ಕಣಿರಾಜ ಕೃತಿಯ ಜೀವಾಳ ಪುಟ್ಟ - ಸೆಪ್ಟೆಂಬರ್ 12, 2024
- ಹಾಲಾಡಿಯಲ್ಲಿ ಹಾರುವ ಓತಿ - ಜುಲೈ 20, 2024
- ನಾಡೋಜ ಕಮಲಾಮೇಡಂಗೆ ಅಂತಿಮ ನಮನಗಳು - ಜೂನ್ 22, 2024
ಶಾಯಿ (ಇಂಕ್ ಪೆನ್) ಲೇಖನಿಯ ಮಹಿಮೆ ಓದುವುದು ಬಯಕೆಯಾದರೆ ಹುಟ್ಟುವುದು ಮಗುವಾಗುತ್ತದೆ. ಅಂತಹ ಬಯಕೆಯ ಕೂಸನ್ನು ಒಡಮೂಡಿಸುವುದು ಲೇಖನಿ ಅಥವಾ ಪೆನ್. ಭಾವನೆಗಳನ್ನು ಹಾಳೆಯ ಮೇಲೆ ನಿಲ್ಲಿಸಿ ಬರವಣಿಗೆಯ ರೂಪವನ್ನು ತಾಳಿಸಿ ಕತೆ, ಕಾವ್ಯವಾಗಿಸಿ ಜನರ ಮನದಂಗಳದಲ್ಲಿ ದಾಖಲು ಮಾಡುವುದು ಈ ಲೇಖನಿ. ಸೌಹಾರ್ದಯುತ ಸಮಾಜಕ್ಕೆ ದಿಕ್ಸೂಚಿ ಮತ್ತು ಜನಪರ ಆಶಯಗಳ ಬೆಂಗಾವಲುಗಾರ ಲೇಖನಿ. “ತೇನ ವಿನಃ ತೃಣ ಮಪಿ ನಃ ಚಲತಿ” ಎಂಬಂತೆ “ಲೇಖನಿ ವಿನಃ ಅಕ್ಷರ ಲೋಕಂ ಮಪಿ ನಃ ಚಲತಿ” ಎಂದರೆ ತಪ್ಪಲ್ಲ. ನಮ್ಮ ಬರಹಗಳ ಸಾಕಾರಮೂರ್ತಿ ಎಂದರೆ ಈ ಲೇಖನಿಯೇ. ಹಾಗಿದ್ದರೆ ಲೇಖನಿ ಎಂದರೆ ಹಾಳೆಯ ಮೇಲೆ ಬರೆಯಲು ಉಪಯೋಗಿಸುವ ಯಾವುದೇ ವಸ್ತು ಎನ್ನಬಹುದು. ಪ್ರಾಚೀನದಿಂದ ಅರ್ವಾಚೀನದವರೆಗೆ ಈ ಲೇಖನಿಗಳು ಬೆಳೆದು ಬಂದಿರುವ ರೀತಿ ಅದ್ಭುತ. ಕ್ರಿ,ಶ ೧೦ನೇ ಶತಮಾನದಿಂದ ೧೯ನೇ ಶತಮಾನದವರೆಗೂ ಅಸ್ತಿತ್ವದಲಿದ್ದು ಆನಂತರ ಹೆಚ್ಚು ಪ್ರಚಾರ ಹಾಗು ವೈವಿಧ್ಯವನ್ನು ಕಂಡ ಸಾಧನ ಇದು.
ಮೊದಲು ಶಾಯಿ(ಇಂಕ್)ಪೆನ್ಗಳು ಮಾತ್ರವಿದ್ದವು ಕೇವಲ ಲೇಖನಿಗಳ ತುದಿಯನ್ನು ಇಂಕಿನಲ್ಲಿ ಅದ್ದಿ ಬರೆಯುವುದು.ಇದಕ್ಕೆ ಕ್ವಿಲ್ ಲೇಖನಿ ಅಥವಾ ಡಿಪ್ ಲೇಖನಿ ಎಂದು ಕರೆಯುತ್ತಿದ್ದರು. ನಂತರ ಇಂಕ್ ಪೆನ್ಗಳು ಅಂದರೆ ಪೆನ್ನಿನ ತುದಿಯನ್ನು ಕಳಚಿ ಒಳಗೆ ಇಂಕ್ ಸೇರಿಸಿ ನಂತರ ಬರೆಯುವುದು. ಅದನ್ನೇ ಫೌಂಟನ್ ಪೆನ್ ಎಂದು ಕರೆಯುವುದು. ಇತ್ತೀಚೆಗೆ ಬಾಲ್ ಪಾಯಿಂಟ್ ಪೆನ್, ರೋಲರ್ ಬಾಲ್ ಪೆನ್ ಮುಂತಾದವುಗಳು ಬಂದಿವೆ.
ಲೇಖನಿಗಳ ವಿಧಾನಗಳಿಗೆ ಬಂದಾಗ,
- ೧. ಇಂಕ್ ಪೆನ್: ಈ ಲೇಖನಿಯಿಂದ ಬರೆದ ಹಾಳೆಗಳ ಮೇಲೆ ನೀರು ಚೆಲ್ಲಿದರೆ ಬರಹ ಅಳಿಸಿಹೋಗುವ ಅಪಾಯವಿದೆ. ಆದರೆ ಚುನಾವಣ ಸಮಯದಲ್ಲಿ ಬಳಸಲಾಗುವ ಇಂಕನ್ನು ಅಷ್ಟು ಸುಲಭದಲ್ಲಿ ಅಳಿಸಲಾಗದು.
- ೨. ಫೌಂಟನ್ ಲೇಖನಿ: ಇದು ನೀರಿಂದ ಸುರಕ್ಷತೆ ಹೊಂದಿದೆ. ಮೇ ೨೫.೧೯೨೭ ರಲ್ಲಿ ರೋಮಿನ ಪೀಟ್ರಿಕ್ ಪಿನೋರ ಎಂಬುವವರು ಈ ಲೇಖನಿಯನ್ನು ಕಂಡು ಹಿಡಿದರು. ಈ ಲೇಖನಿ ಕೊಳ್ಳುವವರಿಗೆ ಕೊಂಚ ದುಬಾರಿ. ಇದಕ್ಕೆ ಬಳಸುವ ಕಚ್ಚಾ ಪದಾರ್ಥಗಳು ದುಬಾರಿ ಬೆಲೆಯವು ಹಾಗು ಇತರೆ ಲೇಖನಿಗಳಿಗೆ ಅಂದರೆ ಜೆಲ್ ಮತ್ತು ಬಾಲ್ ಪೆನ್ನುಗಳಿಗೆ ಹೋಲಿಸಿಕೊಂಡರೆ ಈ ಪೆನ್ನಿನ ಬಿಡಿಭಾಗಗಳು ಅಧಿಕವಾಗಿರುತ್ತವೆ.
- ೩. ಬಾಲ್ ಪಾಯಿಂಟ್ ಲೇಖನಿ:ಈ ಲೇಖನಿಯಲ್ಲಿ ಬರೆದ ಕೂಡಲೆ ಒಣಗಿ ಹೋಗುತ್ತದೆ. ಅಕ್ಟೋಬರ್ ೩೦ ೧೯೮೫ ರಲ್ಲಿ ಝನ್ ಲೌಡ್ ಬಾಲ್ ಪಾಯಿಂಟ್ ಪೆನ್ ಕಂಡು ಹಿಡಿಯುತ್ತಾರೆ.
- ೪. ರೋಲರ್ ಬಾಲ್ ಲೇಖನಿ: ಇದನ್ನು ಜೆಲ್ ಪೆನ್ ಎಂದೂ ಕರೆಯಲಾಗುತ್ತದೆ.
- ೫. ಬ್ರಾಸ್ ಪೆನ್: ಇದರ ಸೊಗಸೇ ಬೇರೆ ಇದರ ನಿಬ್ ತುಂಬಾ ಚೆನ್ನಾಗಿರುತ್ತದೆ. ಸಹಿ ಹಾಗು ಸಂಗ್ರಹ ಯೋಗ್ಯ ಲಕ್ಷಾಂತರ ರುಪಾಯಿ ಬೆಲೆಬಾಳುವ ಚಿನ್ನ, ಬೆಳ್ಳಿಯ ಪೆನ್ನುಗಳು ಮಾರುಕಟ್ಟೆಯಲ್ಲಿವೆ,ಉಡುಗೊರಗೆಂದೇ ವಿಶೇಷವಾಗಿ ತಯಾರಿಸಿದ ಪೆನ್ನುಗಳು ನಮ್ಮ ನಡುವಿವೆ.
ನಾವೆಲ್ಲಾ ನಾಲ್ಕನೆ ತರಗತಿಗೆ ಬಂದಾಗ ಪೆನ್ಗಳಲ್ಲಿ ಬರೆಯುವ ಸುಯೋಗ ಪ್ರಾಪ್ತಿಯಾಗಿತ್ತು. ಅಂದರೆ ಇಂಕ್ ಪೆನ್ಗಳಲ್ಲಿಯೇ ಬರೆಯಬೇಕಾಗಿತ್ತು. ಇಂಕಿನ ಕಡು ನೀಲಿ ಬಣ್ಣ ನಮ್ಮ ಬೆರಳುಗಳನ್ನು ತಾಗಬೇಕಿತ್ತು. ಅದೇ ಖುಷಿ ಪೆನ್ಗಳನ್ನು ಬೀಳಿಸಿ ಒಡೆದುಕೊಂಡರೆ ಮುರಿದುಕೊಂಡರೆ ಆಗುತ್ತಾ ಇದ್ದ ಅವಾಂತರಗಳು ಹೇಳತೀರದು. ಗೆಳತಿಯರೆಲ್ಲಾ “ಪೆನ್ ವಾಂತಿ ಮಾಡಿಕೊಳ್ಳುತ್ತದೆಯಾ, ಲೀಕ್ ಆಗುತ್ತದೆಯಾ? ಕಕ್ಕುತ್ತದೆಯಾ” ಎಂದೆಲ್ಲಾ ಹಾಸ್ಯ ಮಾಡಿಕೊಳ್ಳುತ್ತಾ ಇದ್ದೆವು.ಅಕಸ್ಮಾತಾಗಿ ಸೋರಿದ ಇಂಕನ್ನು ತಲೆಗೆ ಒರೆಸಿಕೊಳ್ಳುವುದು, ತರಗತಿಗಳಲ್ಲಿ ನೋಟ್ಸ್ ಬರೆಸುವಾಗ ಇಂಕ್ ಖಾಲಿಯಾದರೆ ಆಗುತ್ತಿದ್ದ ಪಜೀತಿ ಅಷ್ಟಿಷ್ಟಲ್ಲ. ಪೆನ್ಸಿಲ್ಗಳಲ್ಲಿ ಬರೆದುಕೊಂಡು ನಂತರ ಮನೆಯಲ್ಲಿ ಪೂರ್ತಿಗೊಳಸಿಬೇಕಿತ್ತು. ಇಲ್ಲವೆ ಪಕ್ಕದವರ ಪೆನ್ನಿಂದ ಇಂಕನ್ನು ಸಾಲ ಕೇಳಬೇಕಿತ್ತು. ಬಿಸಿಲಿಗೆ ಈ ಪೆನ್ನನ್ನು ಹಿಡಿದರಂತೂ ಮಿತಿಮೀರಿ ತಿಂದವರಂತೆ ವಾಂತಿ ಮಾಡುತ್ತಿತ್ತು. ಈ ಇಂಕ್ ವಾಂತಿಯನ್ನು ತಹಬದಿಗೆ ತರುವುದು ನಿತ್ಯ ಸಾಹಸವಾಗಿತ್ತು. ಇಂಕ್ ಒರೆಸಲೆಂದೇ ಬೇರೆ ಬಟ್ಟೆ ಇಟ್ಟುಕೊಳ್ಳುತ್ತದ್ದೆವು, ಇಲ್ಲವಾದರೆ ನೋಟ್ಸನ ಕಡೆಯ ಹಾಳೆ ಹರಿದು ಒರೆಸುವುದು ಸಾಮಾನ್ಯವಾಗಿತ್ತು. ಇಲ್ಲವಾದರೆ ಇಂಕ್ ಒರೆಸಲು ನಮ್ಮ ಕೈಗಳು ನೇರ ತಲೆಯನ್ನೇ ತಲುಪುತ್ತಿದ್ದವು, ಅದೂ ಬಿಟ್ಟರೆ ಉದ್ದ ಜಡೆಗಳನ್ನು ಮುದ್ದಿಸುವಂತೆ ನಮ್ಮ ಜಡೆಗಳನ್ನೇ ಹಿಡಿದುಕೊಂಡು ಇಂಕನ್ನು ಒರೆಸುವುದು ಸಾಮಾನ್ಯವಾಗಿತ್ತು. ಕುವೆಂಪುರವರು ಉತ್ತರ ಪತ್ರಿಕೆಗಳನ್ನು ಮೌಲ್ಯ ಮಾಪನ ಮಾಡಲು ಕೆಂಪು ಇಂಕ್ ಬಾಟಲಿಯನ್ನು ತಂದಿರುತ್ತಾರೆ.ಕೈಗಾದ ಇಂಕನ್ನು ತಲೆಗೆ ಒರೆಸಿಕೊಂಡಿದ್ದನ್ನು ನೋಡಿದ್ದ ಅವರ ಮಗ ಚೈತ್ರ ಇಂಕ್ ಬಾಟಲಿಯನ್ನು ಒಡೆದು ಚೆಲ್ಲಿದ ಇಂಕನ್ನು ತಲೆಗೆ ಒರೆಸಿಕೊಂಡು, ಹೇಮಾವತಿಯವರು ಅದನ್ನು ಸ್ನಾನ ಮಾಡಿಸುವಾಗ ರಕ್ತವೆಂದು ತಿಳಿದು ವಿಶೇಷ ಉಪಚಾರ ಮಾಡಿದಾಗ ಮಕ್ಕಳಿಂದ ಆ ವಿಷಯವನ್ನು ಕುವೆಂಪು ಅವರೇ ಬಾಯಿ ಬಿಡಿಸುವ ಪ್ರಸಂಗವನ್ನು ತೇಜಸ್ವಿಯವರು ‘ಅಣ್ಣನ ನೆನಪು’ ಪುಸ್ತಕದಲ್ಲಿ ಬಹಳ ಚೆನ್ನಾಗಿ ವಿವರಿಸಿದ್ದಾರೆ.
ನಮ್ಮ ಕ್ಲಾಸಿನಲ್ಲಿ ಲೀಕ್ ಆದ ಇಂಕನ್ನು ಒರೆಸಿಕೊಳ್ಳಲು ಸ್ಥಿತಿವಂತರ ಮನೆ ಮಕ್ಕಳು ಕನ್ನಡಕ ಒರೆಸಲು ಬಳಸುವ ವೆಲ್ವೆಟ್ ಬಟ್ಟೆಯನ್ನೂ ತರುತ್ತಿದ್ದರು. ಈಗ ಟಿಶ್ಯು ಪೇಪರ್ ಇದೆ ಬಿಡಿ ಆದರೆ ವಿಪರ್ಯಾಸ ಅಂದರೆ ಇಂಕ್ ಪೆನ್ನಿಲ್ಲ. ಸೋರುವ ಇಂಕ್ ಪೆನ್ ಇರಿಸಿಕೊಂಡು ಮುಜುಗರ ಅನುಭವಿಸಿದ ಸನ್ನಿವೇಶವನ್ನು ಎಂ.ಎಸ್. ಸುಂಕಾಪುರವರು ‘ಮಾವ ಕೊಡಿಸಿದ ಕೋಟು’ ಲೇಖನದಲ್ಲಿ ಬಹಳ ಚೆನ್ನಾಗಿ ಬರೆದಿದ್ದಾರೆ. ಇಂಕ್ ಪೆನ್ನನ್ನು ಷರ್ಟ ಜೇಬಲ್ಲಿ, ಕೋಟ್ ಜೇಬಲ್ಲಿ ಬಿಟ್ಟರೆ ಕಂಡಕ್ಟರ್, ಬಡಗಿ,ಅಕ್ಕಸಾಲಿಗರು,ಬಾಣಸಿಗರು, ಸೇಲ್ಸ್ಮನ್ಗಳು,ವ್ಯಾಪಾರಿಗಳ ಹಾಗೆ ಕಿವಿಯಲ್ಲಿ ಸಿಕ್ಕಿಸಿಕೊಳ್ಳಲು ಸಾಧ್ಯವಿಲ್ಲ. ಕೋಟುಗಳಿಗೆ,ಸಮವಸ್ತ್ರಗಳಿಗೆ ಇಂಕ್ ಪೆನ್ನುಗಳೇ ಭೂಷಣ. ಕೆಲವರಿಗೆ ಪೆನ್ ತೆಗೆದುಕೊಂಡು ಹೋಗುವುದು ಮರೆತು ಹೋಗಿ ಅಲ್ಲೆಲ್ಲೋ ಬೇಕಾದಾಗ “ಸ್ವಲ್ಪಪೆನ್ ಕೊಡ್ತೀರ”, “ಒಂಚೂರು ಕೊಡ್ತೀರ” ಎಂದು ಕೇಳುತ್ತಿರುತ್ತಾರೆ ಪೆನ್ ಕೊಡುವವರು ಕ್ಯಾಪ್ ತೆಗೆದು ಕೊಡುತ್ತಾರೆ. ಬುಕ್,ಝೆರಾಕ್ಸ್, ಔಷಧಿ ಅಂಗಡಿ ಇಲ್ಲೆಲ್ಲಾ ಕೇಳುವವರ ಸಲುವಾಗಿ ಪೆನ್ಗಳನ್ನು ದಾರ ಕಟ್ಟಿ ಇಳಿ ಬಿಟ್ಟಿರುತ್ತಾರೆ.
ನಮ್ಮ ಕ್ಲಾಸಲ್ಲಿ ಇಂಕ್ ಪೆನ್ನಿನ ಬ್ರಾಂಡ್ ಮೇಲೆ ಅದನ್ನು ಬಳಸುವವರ ಗ್ರೇಡ್ ನಿರ್ಧಾರವಾಗಿತ್ತು. ಮೇಡ್ ಇನ್ ಚೈನ ಪೆನ್ ಆಗ ೨೫ ರುಪಾಯಿಗಳು ಆ ಪೆನ್ ತಂದರೆ ಅವರೇ ಬುದ್ಧಿವಂತರು, ಜೊತೆಗೆ ಸ್ಥಿತಿವಂತರು ಹಾಗೆ ಫೌಂಟೆನ್ ಪೆನ್ ತಂದರೆ ಅತೀ ಸ್ಥಿತಿವಂತರು. ಮಾಮೂಲು ಇಂಕ್ ಪೆನ್ ತಂದರೆ ಆವರೇಜ್, ಬಿಲೋ ಆವರೇಜ್ ಎಂದು. ಮದ್ಯಾಹ್ನ ಊಟದ ವೇಳೆಯಲ್ಲಿ 5೦ ಪೈಸೆ ಕೊಟ್ಟು ಇಂಕ್ ಹಾಕಿಸಲೆಂದೇ ಶಾಲಾ ಆವರಣದ ಹೊರಗೆ ಇದ್ದ ಅಂಗಡಿಗೆ ಹೋಗುತ್ತಿದ್ದೆವು. ಇಂಕ್ ನೆಪ ಮಾತ್ರ ಕಡಲೆ ಮಿಠಾಯಿ, ಹಾಲ್ಕೋವ, ಉಪ್ಪಲ್ಲಿ ನೆನೆಸಿದ ನೆಲ್ಲಿಕಾಯಿ, ಕತ್ತರಿಸಿ ಉಪ್ಪು ಹುಳಿ ಸೇರಿಸಿದ ಕಿತ್ತಳೆ ಹುಳಿ ನಮ್ಮ ಬೇಡಿಕೆಯಾಗಿತ್ತು.
ಯಾವುದೇ ಇಂಕ್ ಪೆನ್ ಆಗಲಿ ಕ್ಯಾಪ್ ಹಾಕಿ ಅಚ್ಚುಕಟ್ಟಾಗಿ ಇಟ್ಟುಕೊಂಡರೆ ಸರಿ ಇಲ್ಲವಾದರೆ ಪೆನ್ನುಗಳ ನಿಬ್ ತುಂಡಾಗಿ ಅರ್ಧಕ್ಕೆ ನಿಂತು ಕಟ್ ಕಟ್ ಆಗಿ ಬರೆಯುವ ಪೆನ್ನುಗಳನ್ನು ಸಂಭಾಳಿಸುವುದು ರೇಜಿಗೆಯ ಕೆಲಸವಾಗಿತ್ತು. ಎಲ್ಲೋ ನಿಬ್ನಲ್ಲಿ ಕಸ ಸೇರಿಕೊಂಡಿದೆ ಎಂದು “ಬ್ಲೇಡ್ ಹಾಕಿ ಇಲ್ಲ ಇಲ್ಲ ಎಲ್ಲಾದರೂ ಉಂಟೇ….!” ಬ್ಲೇಡ್ ಹಿಡುದು ನಿಬ್ ಮಧ್ಯದಲ್ಲಿ ತೂರಿಸಿ ಕಸ ತೆಗೆದು ಸರಿ ಮಾಡಿಕೊಳ್ಳುತ್ತಿದ್ದೆವು. ಮತ್ತೂ ಬರೆಯುತ್ತಿಲ್ಲ ಎಂದರೆ ಪೆನ್ ಹಿಡಿದು ಕೊಡಹುವುದು ಆ ಇಂಕ್ ತರಗತಿಯ ಗೋಡೆಗೆ, ನೆಲಕ್ಕೆ, ಬೆಂಚಿಗೆ ತಾಗುತ್ತಾ ಇತ್ತು. ಅಷ್ಟಾದರೆ ನಮ್ಮ ಪುಣ್ಯ ಎದುರಿದ್ದವರ ಬೆನ್ನಿಗೆ ಹಾರಿಬಿಟ್ಟರೆ ಜಟಾಪಟಿ ಪ್ರಾರಂಭವಾಗುತ್ತಿತ್ತು. “ ಯಾಕೆನೆ ಇಂಕ್ ಹಾಕಿದು ಸ್ವಯ ಇಲ್ಲವ ಟೀಚರಿಗೆ ಹೇಳಿ ಕೊಡ್ತೆನೆ ಏನು ಸ್ವಲ್ಪ ಲೂಸ” ಎಂದು ಬಯ್ಯ್ಯುತ್ತಿದ್ದರು. “ಲೂಸ್ ನಾನಲ್ಲ ಪೆನ್” ಅಂದುಕೊಂಡು ಸುಮ್ಮನೆ ಆಗಬೇಕಿತ್ತು. ಊಟದ ಸಮಯದಲ್ಲಿ ಸರಿಯಾಗಿ ಕೈ ತೊಳೆಯದೆ ಬಾಕ್ಸ್ ತೆರೆದರೆ ಆಗ ತಿಳಿಯುತ್ತಿತ್ತು ನಮ್ಮ ಕೈ ಎಷ್ಟರ ಮಟ್ಟಿಗೆ ಶುದ್ಧವಾಗಿದೆ ಎಂದು . ಹಾಗೆ ಕೈ ಹಾಕಿದರೆ ಮೊಸರನ್ನ , ಇಡ್ಲಿ ಎಲ್ಲಾ ನೀಲಾಕಾರವಾಗುತ್ತಿತ್ತು. ಎಲ್ಲಾ ನಮ್ಮಿಂಕ್ ಪೆನ್ನಿನ ಮಹಿಮೆ !
ಪಿ.ಯು.ಸಿ ಯಲ್ಲಿ ವ್ಯಾಸಂಗ ಮಾಡುವಾಗೊಮ್ಮೆ ಹೊಸದಾಗಿ ಬಂದ ಉಪನ್ಯಾಸಕರನ್ನು ಪರೀಕ್ಷಿಸಲು ಹೋಗಿ ನಮ್ಮ ತರಗತಿಯ ಹುಡುಗಿಯರು ಪೇಚಿಗೆ ಸಿಲುಕಿದ್ದರು ಅದಕ್ಕೆ ಕಾರಣ ಈ ಇಂಕ್ ಪೆನ್ನು. ಹೊಸದಾಗಿ ಬಂದಿದ್ದ ಆ ಸರ್ ಪ್ರತಿ ನಿತ್ಯ ಬಿಳಿ ಶರ್ಟ್ ಧರಿಸಿ ಬರುತ್ತಿದ್ದರು. ಈ ಹುಡುಗಿಯರಿಗೆ ಅದೇ ಸಂದೇಹ. ಒಂದೇ ಶರ್ಟ್ ಹಾಕುತ್ತಾರೊ ಇಲ್ಲ ಬೇರೆ ಬೇರೆ ಹಾಕತ್ತಾರೊ ನೋಡಬೇಕೆಂದು ಅವರಿಗೆ ಗೊತ್ತಾಗದಂತೆ ಇಂಕ್ ಹಾಕಿಬಿಟ್ಟರು. ಮರು ದಿನ ಉಪನ್ಯಾಸಕರು ಬಂದವರು “ನಿಮ್ಮಂತಹ ಅದೆಷ್ಟೋ ಮಂದಿಯನ್ನು ನೋಡಿ ಬಂದಿದ್ದೇನೆ ಶರ್ಟಿನ ಕುರಿತ ಸಂದೇಹ ನನ್ನಲ್ಲಿಯೇ ನೇರವಾಗಿ ಕೇಳಬಹುದಿತ್ತು ” ಎಂದರು. “ಇಂಕ್ ಹಾಕಿ ಸಂದೇಹ ಕ್ಲಿಯರ್ ಮಾಡಿಕೊಳ್ಳುವುದರ ಬದಲು ಇಂಕ್ ಬಳಸಿ ನಿಮ್ಮ ಎಕ್ಸಾಮ್ಸ್ ಕ್ಲಿಯರ್ ಮಾಡಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಿ” ಎಂದು ಬುದ್ಧಿ ಹೇಳಿ ಇಂಕ್ ಪೆನ್ ಮುಖೇನ ನಡೆದ ಗೂಢಾಚಾರಿಕೆಗೆ ವಿರಾಮ ಇಟ್ಟರು.
ಏನೇ ಆಗಲಿ ಪೆನ್ ಮತ್ತು ಕಾಗದದ ನೈಸರ್ಗಿಕ ಅನುಭವವೇ ಬೇರೆ. ಪರೀಕ್ಷೆಗೆ ತೆರಳುವ ಮೊದಲು ಎರಡೆರಡು ಪೆನ್ಗೆ ಇಂಕ್ ಹಾಕಿಕೊಂಡು ಹೋಗುತ್ತ ಇದ್ದೆವು. ನನ್ನ ಅನುಭವದಲ್ಲಿ ಪೆನ್ನಿಗೆ ಹಾಕಿ ಉಪಯೋಗಿಸಿದ ಇಂಕಿಗಿಂತ ನೆಲಕ್ಕೆ ಚೆಲ್ಲಿದ ಇಂಕೇ ಹೆಚ್ಚು. ಇಂಕ್ ಪೆನ್ನುಗಳಲ್ಲಿ ಬರೆಯುವಾಗ ಅದು ಕರಕರ ಸದ್ದು ಮಾಡಬಾರದು, ನಯವಾಗಿ,ಬೆಣ್ಣೆಯಂತೆ ಕಾಗದದ ಮೇಲೆ ನಿರಾತಂಕವಾಗಿ ಬರೆದರೆ ಅದರ ಮಜಾನೆ ಬೇರೆ ಇತ್ತು. ಈ ಇಂಕ್ ಪೆನ್ನುಗಳಲ್ಲಿ ಬರೆದರೆ ಎಂತಹ ಬ್ರಹ್ಮ ಲಿಪಿಯೂ, ಕೋಳಿ ಕಾಲಿನ ಅಕ್ಷರವೂ ಸ್ಪಷ್ಟವಾಗಿ ಕಾಣಿಸುತ್ತಿತ್ತು ಇದೇ ಇಂಕ್ ಪೆನ್ನಿನ ಮಹಿಮೆ.ಪೆನ್ ಹಾಳಾಗಬಾರದು ಎಂದರೆ ಇಂಕ್ ಪೆನ್ನಗಳನ್ನು ಬೇರೆ ಯಾರಿಗೂ ಕೊಡಬಾರದು ಅರ್ಥಾತ್ ಸಿಂಗಲ್ ಹ್ಯಾಂಡ್ ಮೇಯ್ನ್ಟೆನೆನ್ಸ್ ಇದ್ರೆ ಬಾಳಿಕೆ ಬರುತ್ತದೆ ಅಂತ. ಈಗ ಹೇಗಾಗಿದೆ ಎಂದರೆ ಇಂಕ್ ಪೆನ್ನಲ್ಲಿ ಬರೆಯುವವರು ಶಿಲಾಯುಗದವರು, ಫೌಂಟೆನ್ ಪೆನ್ನಿನಲ್ಲಿ ಬರೆಯುವವರು ಹಳೆಕಾಲದವರು, ಬಾಲ್ ಪೆನ್ನಿನ್ನಲ್ಲಿ ಬರೆದರೆ ನವೀನ ಯುಗದವರು ಎಂದು ಆಘೋಷಿತವಾಗಿದೆ.
ಆವಂತಿ, ಪಾರ್ಕರ್, ಬೀನಾ ಫೈಲೆಟ್ , ಸ್ಟಾನಿಯಂ, ಬಟರ್ಫ್ಲೈ, ವೆರಾನಿಕ ಪೆನ್ ಕಂಪೆನಿಗಳು ಅತ್ಯಂತ ಹೆಸರು ಮಾಡಿದ ಪೆನ್ನುಗಳು. ಪಾರ್ಕರ್ ಪೆನ್ನಿಗೆ ನಿಬ್ ತಯಾರಿಸಿ ಕೊಡುತ್ತ ಇದ್ದ ಹೆಗ್ಗಳಿಕೆ ಭಾರತದ ಪಾಲಿಗಿತ್ತು ಈಗ ಇಲ್ಲ.ಇಂಕ್ ಪೆನ್ ಉಪಯೋಗಿಸುವವರು ಎಂದರೆ ಶಿಸ್ತಿನ ಸಿಪಾಯಿಗಳೆಂದೇ ಸರಿ ಪ್ರತಿನಿತ್ಯ ಇಂಕ್ ತುಂಬಿಸಿ ಒರೆಸಿ ಇಂಕ್ ಸೋರದಂತೆ ಇರಿಸಿಕೊಳ್ಳುವುದು ಒಂದು ನಿಯಮವೇ ಸರಿ. ನಂತರ ರೆನಾಲ್ಡ್ಸ್, ರೊಟೋಮ್ಯಾಕ್,ಜೆಟರ್ ಪೆನ್ ಇತ್ಯಾದಿಗಳಿಂದ ಪ್ಲಾಸ್ಟಿಕ್ ಪೆನ್ನುಗಳ ಯುಗ ಶುರುವಾಯಿತು. ಎರಡು ಕಡೆ ಬರೆಯುವ ಪೆನ್ನು ನೀಲಿ,ಕೆಂಪು,ಹಸಿರು, ಕಪ್ಪು ಲೆಡ್ಗಳು ಒಂದೇ ಪೆನ್ನನಲ್ಲಿ ಇರುವುದು ಬಂದವು ಆಮೇಲೆ ಸ್ಪಿçಂಗ್ ಪೆನ್ನುಗಳು ಅದನ್ನ ರಿಪೇರಿ ಮಾಡಲು ಹೋಗಿ ಸ್ಪಿçಂಗ್ ಹಾರಿ ಹೋಗಿ ಅದೊಂದು ಪಜೀತಿ “ಇದನೆ ನನ್ನ ಪೆನ್ನುದು ಸ್ಪ್ರಿಂಗ್ ಆಚೆ ಬಂದಿದೆಯಾ ನೋಡ್ತೀಯಾ” ಎಂದು ಕೇಳಬೇಕಾಗಿತ್ತು. ಇವಾಗೇನಿದ್ದರೂ ಸುಲಭದ ಕ್ಯಾಪ್ ಹಾಕಿ ತೆಗೆಯುವ ಪೆನ್. ಮನುಷ್ಯ ತಾನಾಗಯೇ ಭೂಗರ್ಭದ ಮೇಲೆ ನಡೆಸುವ ಅತ್ಯಾಚಾರ , ದೌರ್ಜನ್ಯದಿಂದ ಸ್ವತಃ ಪ್ರಕೃತಿಯ ಶಾಪಕ್ಕೆ ಗುರಿಯಾಗುತ್ತಾ ಇದ್ದಾನೆ. ಪ್ರತಿ ತಿಂಗಳು ಲಕ್ಷ ಎರಡು ಲಕ್ಷ ಪೆನ್ನಿನ ತ್ಯಾಜ್ಯ ಪ್ರಕೃತಿಯ ಒಡಲನ್ನು ಸೇರುತ್ತಿದೆ. ಇದನ್ನು ಮರು ಬಳಕೆ ಹಾಗು ಉಪಯೋಗಿಸಲು ಸಾಧ್ಯವಿಲ್ಲವಾದ್ದರಿಂದ ಪರಿಸರದ ಮೇಲೆ ಬಹಳ ಹಾನಿಯಾಗುತ್ತಿದೆ. ಇದನ್ನು ತಡೆಯುವ ನಿಟ್ಟಿನಲ್ಲಿ ಜಾಗೃತಿ ಮೂಡಿಸಬೇಕಾಗಿರುವುದು ಪರಿಸರವಾದಿಗಳು ವಿಚಾರವಾದಿಗಳ ಕರ್ತವ್ಯವಾಗಿದೆ. ವಿದ್ಯಾರ್ಥಿಗಳಲ್ಲಿ ಶಿಸ್ತು,ಅವರ ಅಕ್ಷರಗಳನ್ನು ಇನ್ನಷ್ಟು ಸುಂದರವಾಗಿಸಬೇಕಾದರೆ ಇಂಕ್ ಪೆನ್ ಬಳಸುವಮತೆ ಜಾಗೃತಿ ಮೂಡಿಸಬೇಕಾಗಿದೆ.
ಆಸ್ತಿ ಮುಂತಾದ ಪ್ರಮುಖ ದಾಖಲಾತಿ ಪತ್ರಗಳ ನಕಲು ಮಾಡಲು ಇಂಕ್ ಪೆನ್ನಗಳ ಬರಹವನ್ನು ದುರುಪಯೋಗ ಮಾಡಿಕೊಳ್ಳಲಾಗುತ್ತಿತು ಇದೊಂದೇ ಇಂಕ್ ಪೆನ್ನಿನ ದೌರ್ಬಲ್ಯ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕಪ್ಪು ಅಥವಾ ನಿಲಿ ಬಾಲ್ ಪಾಯಿಂಟ್ ಪೆನ್ ತರಬೇಕೆಂಬ ನಿಯಮವಿದೆ. ಆಧಾರ್ ಕಾರ್ಡ್, ಒ.ಎಮ್.ಆರ್. ಹಾಳೆಗಳನ್ನು ಭರ್ತಿಮಾಡಲು ಬಾಲ್ ಪಾಯಿಂಟ್ ಪೆನ್ ಬಳಸುವುದು ಕಡ್ಡಾಯ. ತೀರಾ ಅಗತ್ಯತೆಯನ್ನು ಹೊರತು ಪಡಿಸಿ ಮಿಕ್ಕಕಡೆ ಇಂಕ್ ಪೆನ್ನನ್ನು ಬಳಸಬಹುದು. ಇಂಕಿನಲ್ಲ್ಲಿ ಸುಲಭವಾಗಿ ಅಳಿಸಿ ಹೋಗದ ಇಂಕ್ ಕಂಡು ಹಿಡಿಯಬಹುದು. ಭೂಮಿಯ ಮೇಲೆ ಬರೆದಂತೆ ಅಂತರಿಕ್ಷದಲ್ಲಿ ಸಾಮಾನ್ಯ ಪೆನ್ನುಗಳಲ್ಲಿ ಬರೆಯಲಾಗದು. ಅಲ್ಲಿನ ಗುರುತ್ವದಿಂದ ಇಂಕ್ ಪೆನ್ ಚಲಿಸುವುದಿಲ್ಲ. ೧೯೬೫ರಲ್ಲಿ ಫಿರ್ಮನ್ ಕಂಪೆನಿಯು ನೈಟ್ರೋಜನ್ ಇರುವ ವಿಶೇಷ ಪೆನ್ನನ್ನು ಗಗನಯಾತ್ರಿಗಳಿಗೆ ತಯಾರಿಸಿಕೊಟ್ಟಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.ಇಂಕ್ ಎಂದಾಗ ಚೆಲ್ಪಾರ್ಕ್, ಬ್ರಿಲ್, ಕ್ಯಾಮಲ್, ಡೇಟೋನ್ ಇತ್ಯಾದಿ ಕಂಪೆನಿಗಳ ಹೆಸರನ್ನು ಇಲ್ಲಿ ಹೇಳಬಹುದು. ಪ್ರಮುಖವಾಗಿ ಬ್ರಿಲ್ ಕಂಪೆನಿಯಲ್ಲಿ ಏಳು ಬಣ್ಣಗಳಲ್ಲಿ ಅಂದರೆ ರೆಡ್, ರಾಯಲ್ಬ್ಲೂ, ಗ್ರೀನ್, ವೈಲೆಟ್, ಟರ್ಕಿಶ್ ಬ್ಲೂ,ಲಾರೆಯಲ್ ರೋಸ್ ಬಣ್ಣಗಳಲ್ಲಿ ದೊರೆಯುತ್ತಿತ್ತು,. ಡೇಟೋನ್ ಕಂಪೆನಿಯ ಇಂಕ್ ಕಲರ್ಗಳಲ್ಲಿ ಬ್ಲೂಬ್ಲ್ಯಾಕ್, ವಾಷೆಬಲ್ ಬ್ಲೂ, ಕ್ರಿಮಸನ್ ವೈಲೆಟ್, ರೂಬಿರೆಡ್, ಎಮೆರಾಲ್ಡ್ ಗ್ರೀನ್,ಸಫಾಯರ್ ಬ್ಲೂ, ಎಂಬ ಕಲರ್ಗಳಲ್ಲಿ ದೊರೆಯುತ್ತಾ ಇತ್ತು. ಇದಲ್ದೆ ಸ್ಟ್ಯಾಂಪ್ ಪ್ಯಾಡ್, ರಬ್ಬರ್ ಸ್ಟ್ಯಾಂಪ್ ಇಂಕ್ ಇತ್ಯಾದಿ ಇವೆ. ಆದರೆ ಸ್ಕೆಚ್ಪೆನ್,ಗ್ಲಿಟರ್ ಪೆನ್ಗಳಲ್ಲಿ ತರಾವರಿ ಕಲರ್ಗಳನ್ನು ನೋಡಬಹುದು. ಈಗ ಕಾಟ್ರಿಡ್ಜ್ ಮಾದರಿಯಲ್ಲಿ ಇಂಕ್ ಪೆನ್ನುಗಳಿವೆ. ಈಗ ಇಂಕ್ ಪಾಟ್ಗಳು, ಕನ್ನಡದಲ್ಲಿ ಹೇಳುವುದಾದರೆ ಮಸಿಕುಡಿಕೆಗಳು ಮಗ್ಗಿಪುಸ್ತಕಗಳಲ್ಲಿ ಇರುವುದನ್ನುಹೊರತುಪಡಿಸಿ ಇನ್ನೆಲ್ಲಾ ನೇಪಥ್ಯಕ್ಕೆ ಸರಿದಿವೆ.ನನಗೂ ಬಣ್ಣ ಬಣ್ಣದ ಇಂಕ್ ನಲ್ಲಿ ಬರೆಯುವ ಖಯಾಲಿ ಇತ್ತು. ಎಲ್ಲ ಕಲರ್ ಇಂಕ್ ಸಿಗದಾಗ ಮಾಂಟೆಕ್ಸ್ ಕಂಪೆನಿಯ ಚಿಕ್ಕ ಹನ್ನೆರಡು ಕಲರ್ ಬಾಲ್ ಪೆನ್ಗಳನ್ನು ಈಗಲೂ ಟಿಪ್ಪಣಿಗಳನ್ನು ಮಾಡಲು ಉಪಯೋಗಿಸುತ್ತೇನೆ. ಕಂಪ್ಯೂಟರಿನಲ್ಲಿ ಬರಹಗಳನ್ನು ಟೈಪಿಸುವಾಗಲೂ ಇಷ್ಟದ ಬಣ್ಣಗಳನ್ನು ಉಪಯೋಗಿಸಿಕೊಂಡು ಸಂಪಾದಕರಿಗೆ ಕಿರಿಕಿರಿ ಮಾಡಿದ್ದಿದೆ ಅನ್ನಿಸುತ್ತದೆ. ಆದರೆ ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಲು ಕಲರ್ ಫಾಂಟ್ಸ್ ಸಹಕಾರಿಯಾಗುತ್ತವೆ ಎಂದು ನನ್ನ ಅನುಭವ.
ಇನ್ನು ಇಂಕ್ ಪೆನ್ನುಗಳ ಬಣ್ಣಗಳ ಬಗ್ಗೆ ಗಮನ ಹರಿಸುವುದಾದರೆ,
೧. ನೀಲಿ ಇಂಕ್:- ಸಾಮಾನ್ಯ ಲೇಖನ, ಪತ್ರವ್ಯವಹಾರಗಳಲ್ಲಿ ವಿದ್ಯಾರ್ಥಿಗಳು ಹೆಚ್ಚು ಬಳಸುತ್ತಾರೆ.
೨. ಕಪ್ಪು ಇಂಕ್:- ವ್ಯಾಪಾರ ಒಪ್ಪಂದಗಳನ್ನು ಮಾಡಿಕೊಳ್ಳುವಾಗ, ಸಾಲ ಮತ್ತು ಅದರ ಹಿಂಬಾಕಿಯನ್ನು ನಮೂದು ಮಾಡುವಲ್ಲಿ , ಶೀರ್ಷಿಕೆ ಬರೆಯುವಲ್ಲಿ ಬಳಕೆ ಮಾಡುವುದಿದೆ.
೩. ಕೆಂಪು ಶಾಯಿ:- ಮೌಲ್ಯ ಮಾಪನಕ್ಕೆ, ಸಾಲದ ಬಾಕಿ ಬರೆಯಲು, ಷರಾ ಬರೆಯಲು ಅಧಿಕಾರಿಗಳು ಬಳಸುತ್ತಾರೆ. ಹಾಗೆ ತಪ್ಪುಗಳನ್ನು ತಿದ್ದಲು, ಪ್ರಮುಖ ವಿಚಾರಗಳನ್ನು ನಮೂದು ಮಾಡಲು ಬಳಸುತ್ತಾರೆ.
೪. ಹಸಿರು ಇಂಕ್ :- ಗೆಝೆಟೆಡ್, ಪೋಲೀಸ್ ಅಧಿಕಾರಿಗಳು, ರಕ್ಷಣಾ ಇಲಾಖೆಯ ಮುಖ್ಯಸ್ಥರು, ಎಂ.ಎಲ್.ಎ. ಎಂ.ಪಿಗಳು ಸರ್ಕಾರಿ ಪ್ರಾಂಶುಪಾಲರುಗಳು ಬಳಸುತ್ತಾರೆ.
ಹಣ ಮಂಜೂರಾತಿ ಮಾಡುವ ಸಂದರ್ಭದಲ್ಲಿ, ಸರ್ಕಾರಿ ಕಡತಗಳನ್ನು ಕಳುಹಿಸಲು, ನೈಜತೆಯನ್ನು ಪರಿಶೀಲಿಸಿವ ಸಂದರ್ಭದಲ್ಲಿ ಹಸಿರು ಇಂಕ್ ಬಳಸಬಹುದು. ವಿಳಾಸ ಬರೆಯಲು, ಸ್ವಂತ ಉಪಯೋಗಕ್ಕೆ ಹಸಿರು ಇಂಕ್ ಬಳಸುವಂತಿಲ್ಲ ಇದು ಕ್ರಿಮಿನಲ್ ಅಪರಾಧವಾಗುತ್ತದೆ. ಮೋದಿಯವರು ಸೆಂಟ್ರಲ್ ಸೆಕ್ರೆಟೇರಿಯೇಟ್ ಮ್ಯಾನುಯೆಲ್ ಆಫ್ ಆಫೀಸು ಪ್ರೊಸೀಜರ್ ತಂದು ಜಂಟಿ ಕಾರ್ಯದರ್ಶಿ ಅದಕ್ಕಿಂತ ಮೇಲಿನ ಹುದ್ದೆಯವರು ನೋಟ್ಸ್ಗಳನ್ನು ಗ್ರೀನ್ ಹಾಗು ರೆಡ್ ಇಂಕ್ಗಳಲ್ಲಿ ಬರೆಯಬಹುದು ಎಂದಿದ್ದಾರೆ.
ನ್ಯಾಯಾಧೀಶರು ಗಲ್ಲು ಶಿಕ್ಷೆ ಹಾಗು ಸಮಾಜ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾದವರಿಗೆ ಶಿಕ್ಷೆ ನೀಡಿದ ನಂತರ ಪೆನ್ನಿನ ನಿಬ್ಬನ್ನು. ಮುರಿಯುತ್ತಾರೆ. ಕಾರಣ ಇಂತಹ ಘಟನೆಗಳು ಮರುಕಳಿಸದಿರಲಿ ಎಂದು.
ಅಧಿಕಾರಿವರ್ಗ, ವಿದ್ಯಾವಂತರನ್ನು “ಪೆನ್ನಿನಿಂದ ಅನ್ನ ತಿನ್ನುವವರು” ಎಂದು ಉಲ್ಲೇಖಿಸುವುದಿದೆ ಇದು ಅವರ ಜೀನನೋಪಾಯದ ಮಾರ್ಗವನ್ನು ಸೂಚಿಸುವಂತದ್ದು.
ಲೇಖನಿಯನ್ನು ಖಡ್ಗಕ್ಕಿಂತ ಹರಿತವಾದ್ದು ಎನ್ನುವುದಿದೆ. “ನಿಂದಿರೆ ಮಂತ್ರಿ, ಕುಳ್ಳಿರೆ ದಂಡಾಧೀಶ, ತೊಡರಿಕೆ ಕವಿ” ಎಂದು ಕವಿ ಜನ್ನನಿಗೆ ಹೇಳಿದ್ದಾರೆ.ಅರ್ಥಾತ್ ಖಡ್ಗ ,ಲೇಖನಿಯನ್ನು ಸಮರ್ಥವಾಗಿ ಬಳಸಿದವನು ಎಂದು. ಕನಕದಾಸ ಹಿಂಸೆಯನ್ನು ತಾಳಲಾರದೆ ಖಡ್ಗ ತ್ಯಜಿಸಿ ಲೋಕಶಾಂತಿ ಬಯಸಿದ್ದು, ಕೀರ್ತನೆಗಳನ್ನು ರಚಿಸಿದ್ದು ಇತಿಹಾಸ. ಲೇಖನಿ ಸಾಹಿತಿಗಳ ಭಾವಾಭಿವ್ಯಕ್ತಿಯ, ಅನುಭವದ ಖನಿ. ಪತ್ರಕರ್ತ ಹಾಗು ಮಾಧ್ಯಮದವರಿಗೆ ಮುಖ್ಯ ಆಸ್ತಿ. ಶಿಕ್ಷಕರ ಜೀವಾಳ ತುಸು ಎಡವಿದರೆ ವಿದ್ಯಾರ್ಥಿಗಳ ಪಾಲಿನ ಶೂಲ.ಛಾಯಾಗ್ರಾಹಕರಿಗೆ ಬೆಳಕೇ ಲೇಖನಿ. ಖಡ್ಗಕ್ಕಿಂತ ಆಧುನಿಕ ಗನ್ಗಳಿಗಿಂತ ವೆಪನ್ಗಳಿಗಿಂತ ಲೇಖನಿ ಪ್ರಮುಖವಾದದ್ದು. ಈ ಲೇಖನಿ ಧುರ್ಯೋಧನನ ಗದೆಯಾಗಿರದೆ ಅರ್ಜುನನ ಬಿಲ್ಲಾಗಿರಬೇಕು ಅಂದರೆ ನ್ಯಾಯ ಸಮಾನತೆಯ ತತ್ವಕ್ಕೆ ಸದಾ ಸಿದ್ಧವಾಗಿರುವ ವೆಪನ್ ಆಗಬೇಕು. ಮತ್ತೆ ಇಂಕ್ ಪೆನ್ನುಗಳು ಹೆಚ್ಚು ಚಾಲ್ತಿಗೆ ಬರಲಿ ಪ್ಲಾಸ್ಟಿಕ್ ಪೆನ್ನುಗಳ ಉಪಯೋಗಕ್ಕೆ ಕಡಿವಾಣ ಬೀಳಲಿ ಅಲ್ಲವೇ!
ಹೆಚ್ಚಿನ ಬರಹಗಳಿಗಾಗಿ
‘ಅಕ್ಷರ ಲೋಕ’ದ ಗಾರುಡಿಗ
ಕೊಡವರ ಆಷಾಢದ ವಿಶೇಷ ಹಬ್ಬಮತ್ತು ಮದ್ದುಪಾಯಸ
ವಡ್ಡಾರಾಧನೆಯ ಕಾರ್ತಿಕ ಋಷಿ ಮತ್ತು ‘ಈಡಿಪಸ್ ಕಾಂಪ್ಲೆಕ್ಸ್’