- ಬೇಲಿಯೇ ಎದ್ದು….. - ಸೆಪ್ಟೆಂಬರ್ 29, 2024
- ಗಣೇಶನ ಕೈಯಲ್ಲಿಯ ಲಾಡು - ಸೆಪ್ಟೆಂಬರ್ 22, 2024
- ನೋ ಪಾರ್ಕಿಂಗ್ - ಆಗಸ್ಟ್ 29, 2024
ಗಂಡಸರಿಗಿರುವ ಬಹು ಮುಖ ಸಮಸ್ಯೆ ಎಂದರೆ ತಲೆ ಬೋಳಾಗುತ್ತ ಹೋಗುವುದು. ಹೆಂಗಸರಿಗೆ ತಮ್ಮ ನೀಳವಾದ ವೇಣಿಯು ಚೋಟುದ್ದವಾಗುವ ಸಮಸ್ಯೆ ಕಾಡಿದರೆ, ಗಂಡಸರಿಗೆ ಪಾಪ ಕೂದಲಿನ ಕುರುಹೇ ಕಾಣದಾಗುವ ಈ ಚಿಂತೆಯಂತೂ ಬಲು ಗಂಭೀರ. ಇದರ ಚಿಂತಾಜನಕ ಅಂಶವೆಂದರೆ ಒಮ್ಮೆ ಕೂದಲು ಉದುರುವುದಕ್ಕೆ ಪ್ರಾರಂಭಾವಾಯಿತೆಂದರೆ ಏನೂ ಮಾಡಲಾಗದ ಹತಾಶ ಸ್ಥಿತಿ. ಪೂರ್ವಜರ ಫೋಟೋಗಳಲ್ಲಿ ಬಕ್ಕತಲೆಗಳಿದ್ದರಂತೂ ಸರಿ, ಅವರ ಕೊಡುಗೆಯನ್ನು ಹಳಿದುಕೊಳ್ಳುವುದೇ ಸರಿ. ವೈದ್ಯರು ಸಹ ಅನುವಂಶಿಕದ ನೆಪ ಹೇಳಿ ಏನೋ ಕೇವಲ ಅಲಂಕಾರಿಕ ಚಿಕಿತ್ಸೆ ಕೊಟ್ಟು ಸಮಾಧಾನ ಪಡೆಸುವ ಪ್ರಯತ್ನ ಮಾಡುತ್ತಾರೆ. ಬತ್ರಾ ಡಾಕ್ಟರ್, ಪಾಸಿಟಿವ್ ಹೋಮಿಯೋಪತಿ ಮತ್ತೊಂದು, ಮಗುದೊಂದು ಎನ್ನುತ್ತಾ ಮಾರುಕಟ್ಟೆಗಳಲ್ಲಿ ಸಿಗುವ, ಜಾಹೀರಾತಿನಲ್ಲಿ ಪ್ರಕಟವಾಗುವ ಚಿಕಿತ್ಸೆಗಳಿಗೆ ತಲೆಯನ್ನು ಒಡ್ಡುವುದು, ಅವರಿವರ ಸಲಹೆಯಂತೆ ನಕಲೀ ವೈದ್ಯರ ತೈಲಗಳನ್ನು, ಕ್ರೀಮುಗಳನ್ನು ಹಚ್ಚಿ ಅವುಗಳ ಪರಿಣಾಮವನ್ನು ಕಾದು ನೋಡುವುದು ನಡೆದಿರುತ್ತದೆ. ಅವರ ಜಾಹೀರಾತುಗಳು ತೋರುವ ನಟರ, ಕ್ರಿಕೆಟಿಗರ ಗುಂಗುರು ಕೂದಲಿನ ಕನಸು ಹೊತ್ತವರಿಗೆ ಕೊನೆಗೆ ಹಣ ಹಾಳು, ತಲೆ ಬೋಳು. ಇದು ಪರಿಸ್ಥಿತಿ.
ತಮ್ಮ ತಲೆಯ ಕೇಶರಾಶಿಗೆ ಬಂದ ಶಿಶಿರದ ಬಗ್ಗೆ ಅದರ ಮಾಲೀಕರು ಚಿಂತಿಸುತ್ತಿದ್ದರೆ, ಚುಟುಕು ಹಾಕುವವರು ಆ ವಿಷಯದ ಮೇಲೊಂದು ಚುಟುಕು ಹಾರಿಸುತ್ತಾರೆ. ಹೊಸದಾಗಿ ತಲೆ ಬೋಳಾದವರನ್ನು ಯಾರೋ ಕೇಳಿದರಂತೆ. ’ಬಕ್ಕತಲೆಯಾದ ಮೇಲೆ ನಿಮಗಾಗಿರುವ ಅನಾನುಕೂಲ ಏನು’ ಅಂತ. ಅದಕ್ಕವರು”ಅನಾನುಕೂಲ ಏನೂ ಇಲ್ಲ, ಎಲ್ಲಿಯವರೆಗೆ ಮುಖ ತೊಳಿಯೋದು ಅಂತ ಅರ್ಥವಾಗುವುದಿಲ್ಲ’ ಅಂದರಂತೆ. ಅಲ್ಲವೇ? ತಲೆಗೆ ತಲೆತನ ಕಮ್ಮಿಯಾದ ಹಾಗಾಯಿತು.
ಒಂದಂಶವಂತೂ ನಿಜ. ಇದು ನಮ್ಮ ದೇಶದ ಅಥವಾ ಪ್ರಾಂತ್ಯದ ಸಮಸ್ಯೆಯಲ್ಲ. ಇಡೀ ಮನುಕುಲದಲ್ಲಿಯ ಗಂಡುಜಾತಿಯ ಸಮಸ್ಯೆ. ಎಲ್ಲ ದೇಶಗಳಲ್ಲೂ ಬಕ್ಕತಲೆಯವರು ಕಾಣ ಸಿಗುತ್ತಾರೆ. ಕೂದಲು ಉದುರಿದ ನಂತರ ಬಯಲಾಗುವ ಬಣ್ಣಗಳ ವ್ಯತ್ಯಾಸ ಅಷ್ಟೇ. ನನಗನಿಸುವುದು ಈ ಸಮಸ್ಯೆ ತಮಗೆ ಶುರುವಾದಾಗ ಎಲ್ಲರೂ ತಮ್ಮ ತಮ್ಮ ಭಾಷೆಗಳಲ್ಲಿ ಚಿಂತಿಸಿರುತ್ತಾರೆ, ವ್ಯಥೆ ಪಟ್ಟಿರುತ್ತಾರೆ. ಕೂದಲು ಉದುರುವುದನ್ನು ತಡೆಗಟ್ಟಲು ವೈದ್ಯ ಬೃಂದಗಳು ಸಂಶೋಧನೆ ಕೈಗೆತ್ತಿಕೊಂಡಿರುತ್ತವೆ. ಆದರೆ ಆ ಬೃಂದಗಳಲ್ಲಿ ಕಾಣುವುದು ಬಕ್ಕತಲೆಯವರೇ ಆಗಿರುವುದು ಅಚ್ಚರಿಯನ್ನು ಮೂಡಿಸುತ್ತದೆ. ಒಂದು ಮಾತು ಹೇಳಿ ! ಸಮಸ್ಯೆಯಿಂದ ಬಾಧಿತರಲ್ಲದೇ ಮತ್ಯಾರು ಪರಿಹಾರ ಹುಡುಕುತ್ತಾರೆ ! ಆದರೆ ಈ ಸಮಸ್ಯೆ ಚೀನೀಯರನ್ನು, ಜಪನೀಯರನ್ನು ಅಷ್ಟು ಕಾಡಿದಂತೆ ಕಾಣುವುದಿಲ್ಲ. ಅಥವಾ ನಮಗೆ ಕಾಣಸಿಗುವ ನಾಯಕರು ಆ ಕೆಟಗರಿಯಲ್ಲಿಲ್ಲವೋ ಏನೋ ?
ಬಕ್ಕತಲೆಯ ಬಗ್ಗೆ ಒಂದು ಘಟನೆ. ೧೯೬೨ ರಲ್ಲಿ ಚೀನಾದವರು ನಮ್ಮ ಈಶಾನ್ಯ ಪ್ರಾಂತ್ಯದ ಮೇಲೆ ದಾಳಿ ನಡೆಸಿದ್ದಾರೆ. ನಮ್ಮ ಭೂಭಾಗವನ್ನು ಕಬಳಿಸುತ್ತಿದ್ದಾರೆ ಎಂದು ವರದಿ ಬಂದಿದೆ. ಇದರ ಬಗ್ಗೆ ಸಂಸತ್ತಿನಲ್ಲಿ ಚರ್ಚೆ ನಡೆಯುವಾಗ ಅಂದಿನ ನಮ್ಮ ಪ್ರಧಾನಿಯಾದ ನೆಹರೂ ಅವರು “ ಹೋಗಲಿ ಬಿಡಿ. ಅಲ್ಲಿ ಒಂಚೂರು ಹುಲ್ಲೂ ಬೆಳೆಯುವುದಿಲ್ಲ.” ಎಂದಿದ್ದಾರೆ. ಅದಕ್ಕೆ ಕೋಪಗೊಂಡ ಅಂದಿನ ರಕ್ಷಾ ಮಂತ್ರಿಯಾದ ಕೃಷ್ಣ ಮೆನನ್ ಅವರು
“ ಮಿಸ್ಟರ್ ಪ್ರೈಮ್ ಮಿನಿಸ್ಟರ್ ನಿಮ್ಮ ತಲೆಯ ಮೇಲೆ ಸಹ ಒಂಚೂರೂ ಬೆಳೆ ಇಲ್ಲ. ಅಂದರೆ ಅದು ನಿರರ್ಥಕವೇ “ ಎಂದು ವ್ಯಂಗೋಕ್ತಿಯನ್ನಾಡಿದ್ದರಂತೆ.
ಬಕ್ಕತಲೆಯವರು ತಮ್ಮನ್ನು ಬುದ್ಧಿಜೀವಿಗಳೆಂದು ಸಮರ್ಥಿಸಿಕೊಳ್ಳುತ್ತಾರೆ. ಅನೇಕ ಬಕ್ಕತಲೆಯ ಬುದ್ಧಿಜೀವಿಗಳನ್ನು ಉದಾಹರಣೆಗಳಾಗಿ ತೋರಿಸುತ್ತಾರೆ. ಆದರೆ ಬುದ್ಧಿಜೀವಿಗಳಿಗೆ ಬಕ್ಕತಲೆ ಇದೆಯೋ ಅಥವಾ ಅವರು ಬುದ್ಧಿಜೀವಿಗಳಾದ ಮೇಲೆ ಬಕ್ಕತಲೆಯವರಾದರೋ ಗೊತ್ತಾಗುವುದಿಲ್ಲ. ಆದರೆ ಆ ವಾದವನ್ನು ಸ್ವಲ್ಪ ಮಟ್ಟಿಗೆ ಒಪ್ಪಬಹುದಾಗಿದೆ. ಆದರೆ ತುಂಬು ಕೂದಲಿಗ ಬುದ್ಧಿಜೀವಿಗಳಿಗೇನು ಕಮ್ಮಿ ಇಲ್ಲ. ನಮ್ಮ ಮಾಜೀ ರಾಷ್ಟ್ರಪತಿಗಳಾದ ಶ್ರೀ ಅಬ್ದುಲ್ ಕಲಾಂ ಅವರು ಬುದ್ಧಿಜೀವಿಗಳಾಗಿದ್ದರು ಮತ್ತು ಇತರರು ಈರ್ಷ್ಯೆ ಪಡುವ ಹಾಗೆ ಕೇಶವಿನ್ಯಾಸ ಹೊಂದಿದ್ದರು.
ಕೆಲವರಿಗಂತೂ ತೀರ ಚಿಕ್ಕ ವಯಸ್ಸಿನಲ್ಲೇ ಬಕ್ಕ ತಲೆ ಕಾಣಿಸಿಕೊಳ್ಳುತ್ತದೆ. ಮಿತ್ರರೆಲ್ಲಾ ತರತರದ ಕೇಶಾವಳಿಗಳಿಂದ ಮೆರೆವಾಗ ಇವರುಗಳು ತಮ್ಮ ಇದ್ದ ಬದ್ದ ಕೂದಲನ್ನೇ ಮುಂದಕ್ಕೆ ಹಾಕಿಕೊಂಡು ಅಲ್ಲಿಯ ಖಾಲೀ ಪ್ರದೇಶವನ್ನು ತುಂಬುವ ಪ್ರಯತ್ನ ಮಾಡುತ್ತಾರೆ. ನೋಡುವವರಿಗೆ ಗೊತ್ತಾಗುತ್ತದೆ ಅಂತ ಗೊತ್ತಾದರೂ ಅದೇನೂ ಸಮಾಧಾನ ಅಷ್ಟೇ.
ಇನ್ನು ಬಕ್ಕತಲೆಗಳಲ್ಲಿ ಬಗೆಗಳನ್ನು ನೋಡೋಣ. ಮೊದಲನೆಯದು ಮುಖಕ್ಕೆ ಅಂದ ಕೊಡುತ್ತಾ ಮುಂಗುರುಳ ನೃತ್ಯದೊಂದಿಗೆ ಶೋಭಿತವಾದ ಕೂದಲಗುಂಪು ಮೆಲ್ಲನೆ ಹಿಂದೆ ಸರಿಯುವುದು. ಎರಡನೆಯ ಬಗೆ ಫಳಫಳನೆ ಹೊಳೆಯುವ ತಾಮ್ರ ವರ್ಣದ ತಗಡುಗಳು ಎರಡೂ ಕಡೆಗಳಲ್ಲಿ ಹೊಳೆಯುತ್ತಾ ಕಾಣುವುದು. ಮೂರನೆಯ ಬಗೆ. ಮುಂದೇನೂ ಕಾಣುವುದಿಲ್ಲ. ಮುಖದ ಅಂದವು ಮಾಸುವುದಿಲ್ಲ. ಅದರೆ ಹಿಂದುಗಡೆ ಮುನ್ಸೂಚನೆ ಏನೂ ಇಲ್ಲದೆ ಕಮ್ಮಿಯಾಗುವ ಕೇಶರಾಶಿ. ಹಿಂದೆ ಮುಂದೆ ಕೂದಲು, ನಡುವೆ ಮಾತ್ರ ಥಳಥಳ ಹೊಳೆಯುವ ದ್ವೀಪ. ಇದು ಕ್ರಮೇಣ ವಿಸ್ತರಿಸಿ ಮುಂದಿನ ಕೂದಲಿಗೂ ಕುತ್ತಾಗಿ ಪೂರಾ ಬಕ್ಕತಲೆಯೇ ಆಗುತ್ತದ ಎನ್ನಿ. ಯಾವ ಬಗೆಯದ್ದಾದರೂ ಇದೊಂದು ಮನಸ್ಸಿಗೆ ನೋವುಂಟು ಮಾಡುವುದೇ. ಮುದುಡಿಕೊಳ್ಳುವ ಹಾಗೆ ಮಾಡುತ್ತದೆ.
ಸರಿ. ಇನ್ನು ಬಕ್ಕತಲೆಯಿಂದಾಗುವ ಪ್ರಯೋಜನಗಳು. ಹೆಂಡಂದಿರ ಕೈಗಳಿಗೆ ಜುಟ್ಟು ಸಿಗುವುದಿಲ್ಲ. ಸಿಗುವುದಿಲ್ಲ ಅಲ್ಲ ಇರುವುದಿಲ್ಲ. ಗುಂಪಿನಲ್ಲಿ ಎಲ್ಲಿದ್ದರೂ ಫಕ್ಕನೆ ಗುರ್ತು ಸಿಗಬಹುದಾದ ವಿಶೇಷಗುಣ. ದಿನಾಲೂ ಒಪ್ಪವಾಗಿ ಬಾಚಬೇಕಿಲ್ಲ. ನಿದ್ದೆ ಮಾಡಿ ಎದ್ದ ತಕ್ಷಣ ಭಯಂಕರವಾಗಿ ಚೆಲ್ಲಾಪಿಲ್ಲಿಯಾಗಿರುವುದಿಲ್ಲ. ಗಾಳಿಗೆ ಹಾರಿ ಆಚೆ ಈಚೆ ಹರಡುವ ಗೋಜಿಲ್ಲ. ಬಣ್ಣ ಹಚ್ಚುವ ಗೋಜಿಲ್ಲ. ಮಳೆಗಾಲದಲ್ಲಿ ಒದ್ದೆಯಾದಾಗ ತಲೆ ಒರೆಸಬೇಕಿಲ್ಲ. ಗುಡ್ಡದ ಇಳಿಜಾರಿನಂತೆ ನೀರೆಲ್ಲ ಜಾರಿ ಹೋಗುವುದರಿಂದ ಮಳೆಯಲ್ಲಿ ನೆಂದರೂ ಶೀತದ ಬಾಧೆ ಕಮ್ಮಿ. ಕೊನೆಯದಾಗಿ ಹಜಾಮನ ಹತ್ತಿರ ಹೋಗುವುದು ಕಮ್ಮಿಯಾಗುತ್ತದೆ. ಮತ್ತೆ ಇದ್ದ ಬದ್ದ ಕೂದಲನ್ನು ತೋರಿಸಿ ಚೌಕಾಶಿ ಮಾಡಬಹುದು. ಕೂದಲು ನೆರೆಯುವ ಹೆದರಿಕೆ ಇಲ್ಲ. ಇದ್ದರೆ ತಾನೇ ನೆರೆಯುವುದು.
ನಾವು ಕಾಲೇಜಿನಲ್ಲಿ ಓದುವಾಗ ಅಂತರ್ ತರಗತಿಯ ಕ್ರಿಕೆಟ್ ಸ್ಪರ್ಧೆ ಇರುತ್ತಿತ್ತು. ನಮ್ಮ ಪ್ರಾಂಶುಪಾಲರೇ ಅದರ ಉದ್ಘಾಟಕರು. ಅವರು ಬ್ಯಾಟ್ ಹಿಡಿದು ನಿಂತ ಆ ಓವರ್ ನಲ್ಲಿ ಬೌಲರ್ ಕಕ್ಕಾಬಿಕ್ಕಿಯಾಗಿ ಎಲ್ಲಂದರಲ್ಲಿ ಬಾಲ್ ಎಸೆಯುತ್ತಿದ್ದ. ಇದರ ಕಾರಣ ಅವರ ಬೋಳುತಲೆಯ ಮೇಲೆ ಬಿದ್ದ ಬೆಳಕು ಪರಾವರ್ತನೆಗೊಂಡು ಬೌಲರ್ ನ ಕಣ್ಣು ಕುಕ್ಕುತ್ತಿತ್ತು. ಆಗಿನ್ನೂ ಹೆಲ್ಮಿಟ್ ಗಳ ಬಳಕೆ ಬಂದಿರಲಿಲ್ಲ. ಈ ತರದ ಪ್ರಯೋಜನಗಳು ತೀರ ವಿರಳ.
ಅನಾನುಕೂಲಗಳ ಬಗ್ಗೆ ಗಮನ ಹರಿಸೋಣ. ಮಳೆ ಬಂದಾಗ ಯಾವ ತರದ ಕವರ್ ಇಲ್ಲದಿರೆ ಹನಿಗಳ ಪ್ರಹಾರ ನೇರ ನೆತ್ತಿಗೆ. ಒಂದೊಂದು ಹನಿಯೂ ಸುತ್ತಿಗೆಯ ಪೆಟ್ಟಿನ ತರ ಇರುತ್ತದೆ ಎಂದು ಅನುಭವಸ್ತರ ಅಂಬೋಣ. ಬಿಸಿಲಿನ ಪ್ರಖರತೆಯೂ ಅಷ್ಟೇ. ತಡೆಗಟ್ಟಲು ದಟ್ಟವಾದ ಕೂದಲ ಕಾಡಿರುವುದಿಲ್ಲ. ಕೂತಲ್ಲಿಂದ ಏಳುವಾಗಲೂ, ಧಬಕ್ಕೆಂದು ಮಲಗುವಾಗಲೂ ಶಿರದ ಕೂದಲ ಶೂನ್ಯತೆಯ ಬಗ್ಗೆ ಗಮನವಿಟ್ಟರಬೇಕು. ಇಲ್ಲದಿದ್ದರೆ ಬಕ್ಕತಲೆ ಬಲಿಯಾಗುತ್ತದೆ. ಹೆಂಡತಿಗೆ ಜುಟ್ಟು ಸಿಕ್ಕದಿರುವುದರ ಬಗ್ಗೆ ಸಂಭ್ರಮಿಸಿದರೂ, ಲಟ್ಟಣಿಗೆಯ ಪೆಟ್ಟು ಮಾತ್ರ ಜೋರಾಗಿ ಬಡಿಯುವುದು ಖಂಡಿತ. ಶಿರಸ್ತ್ರಾಣ ಹಾಕಿ ಗಾಡಿ ನಡೆಸುವಾಗ ಅದರ ಏಳುಬೀಳುಗಳೆ ಜೋರೆಲ್ಲ ಬಡ ನೆತ್ತಿಗೇ. ಮೊಮ್ಮಗನ ಹುಮ್ಮಸ್ಸಿನ ತಬಲಾ ಆಗುತ್ತದೆ ಅಜ್ಜನ ಬೋಳುತಲೆ.
ಇತ್ತೀಚೆಗಂತೂ ತೀರ ಚಿಕ್ಕ ವಯಸ್ಸಿನಲ್ಲೇ ಬಕ್ಕ ತಲೆಯಾಗುತ್ತಿರುವುದು ತೀರ ಸಾಮಾನ್ಯವಾಗಿದೆ. ದೈನಂದಿನ ಬದುಕಿನಲ್ಲಿ ಕಾಣುತ್ತಿರುವ ಅನಿಶ್ಚಿತತೆ. ಹಣದ ಬಿಸಿಲುಗುದುರೆಯ ಹಿಂದೆ ಓಟ, ಏರುತ್ತಿರುವ ಖರ್ಚಿನ ಪಟ್ಟಿ, ಸಮಾಜದಲ್ಲಿನ ಹುಸಿ ಸ್ಥಾನಮಾನಕ್ಕಾಗಿ ಹಾಗಬೇಕಾಗಿ ಬರುವ ಸೋಗಿನ ಸಲುವಾಗಿ ಬೇಕಾಗುವ ಹಣದ ಗಂಟು, ವೈವಾಹಿಕ ಜೀವನಗಳಲ್ಲಿ ಕಾಣುತ್ತಿರುವ ಬಿರುಕುಗಳು ಇವೆಲ್ಲವೂ ಇಂದಿನ ಯುವ ಪೀಳಿಗೆಗೆ ಸವಾಲಾಗಿ ನಿಂತಿದ್ದು, ಅವುಗಳ ಬಗ್ಗೆ ತಲೆ ಕೆಡಸಿಕೊಳ್ಳುತ್ತಾ, ತಲೆ ಕಾದ ಕಾವಲಿಯಾಗಿ ಅದೆಷ್ಟು ಹವಾ ನಿಯಂತ್ರಿತ ಕೋಣೆಗಳಲ್ಲಿ ಕೆಲಸ ಮಾಡುತ್ತಿದ್ದರೂ ಆಂತರಿಕ ಶಾಖದಿಂದ ಯುವಕರ ತಲೆ ಬರಡಾಗುತ್ತಿದೆ. ಒಂದು ಸಂತಸದ ಸಂಗತಿ ಎಂದರೇ ಇದು ಹುಡುಗಿಯರಿಗೆ ಅನರ್ಹತೆಯಾಗಿ ಕಾಣುತ್ತಿಲ್ಲ. ಹಾಲಿವುಡ್ ನ ಯುಲ್ ಬ್ರಿನ್ನರ್, ಬಾಲಿವುಡ್ ನ ಅನುಪಮ್ ಖೇರ್ ತರ ಎಂದು ಸಮಾಧಾನ ಪಟ್ಟುಕೊಂಡು ಬಾಯ್ ಫ್ರೆಂಡಾಗಿಸಿಕೊಳ್ಳುತ್ತಾರೆ. ಮದುವೆಗೂ ತಲೆ ಬಿಸಿ ಇಲ್ಲ.
ಕಷ್ಟನಷ್ಟಗಳೇನೇ ಇದ್ದರೂ ಒಮ್ಮೆ ಕೂದಲು ಉದುರುವುದು ಪ್ರಾರಂಭವಾಯಿತೆಂದರೇ ಅದನ್ನು ತಡೆಯಲು ಹುಲುಮಾನವರಿಂದ ಸಾಧ್ಯವಿಲ್ಲ. ಅದೇನು ಮದ್ದುಗಳು, ಕ್ರೀಮುಗಳು ಬಳಸಿದರೂ ಅಷ್ಟೇ. ಕೀರ್ತಿ ಶಿಖರವನ್ನೇರಿದ ಬಕ್ಕತಲೆಯ ಮಹನೀಯರನ್ನು ನೆನೆಯುತ್ತಾ, ಅವರ ಹಾಗೇ ಎಂದಿಗಾದರೂ ಅವರ ಮಟ್ಟಕ್ಕೇರಲು ಒಂದು ಅರ್ಹತೆಯಾದರೂ ಇದೆ ಎಂದು ಸಮಾಧಾನ ಪಟ್ಟುಕೊಳ್ಳುವುದು. ಅಷ್ಟೇ ಅಲ್ಲ. ಇವರಿಗೆ ಸಮಾಜದಲ್ಲಿ ಬುದ್ಧಿಜೀವಿಗಳೆಂಬ ಮರ್ಯಾದೆ ಸಿಗುತ್ತದೆ, ಅಲ್ಲ ಎಂದು ಸಾಬೀತಾಗುವವರೆಗೂ. ಹೆಂಗಸರು ನಿಸ್ಸಂಕೋಚವಾಗಿ ಸಲಹೆಗಳಿಗೆ ಬರುತ್ತಾರೆ. ಇದೊಂದು ರೊಮ್ಯಾಂಟಿಕ್ ಅನುಭವ ಸಿಗುತ್ತದೆ. ಆದರೆ ಇರುಸು ಮುರಿಸೆಂದರೆ ನೋಡಿದ ತಕ್ಷಣ ಹೆಂಗೆಳೆಯರು ಹಿರಿಯರ ದರ್ಜೆಗೆ ಏರಿಸಿಬಿಡುವ ಕಿರಿಕಿರಿ.
ಆದಕಾರಣ, ತಲೆ ಬೋಳಾಯಿತಲ್ಲಾ ಎಂದು ಚಿಂತಿಸುತ್ತಾ, ಇದ್ದ ಬದ್ದ ನಾಲ್ಕು ಕೇಶಗಳಿಗೂ ಸಂಚಕಾರ ತಾರದೇ, ಅದರಿಂದಾಗುವ ಹಲವಾರು ಫಾಯಿದೆಗಳನ್ನು ನೆನೆದು ತೃಪ್ತಿ ಪಟ್ಟುಕೊಳ್ಳುವುದೇ ಸಜ್ಜನರ ಲಕ್ಷಣ. ಅಲ್ಲವೇ?
ಇಷ್ಟೆಲ್ಲಾ ನಾನು ಬರೆದದ್ದು ಯಾಕೆಂದು ನಿಮಗೆ ತಿಳಿಯಿತೇ ? ನನ್ನದೂ ಮೂರನೆ ಬಗೆಯ ಬಕ್ಕತಲೆ. ಮುಂದೆ ಕಾಣುವುದಿಲ್ಲ. ಹಿಂದೆ ಇಲ್ಲವೇ ಇಲ್ಲ.
ನಮಸ್ಕಾರ.
ಹೆಚ್ಚಿನ ಬರಹಗಳಿಗಾಗಿ
ಬೇಲಿಯೇ ಎದ್ದು…..
ಗಣೇಶನ ಕೈಯಲ್ಲಿಯ ಲಾಡು
ನೋ ಪಾರ್ಕಿಂಗ್