- ಸಾಜಿದಾ ಅಲಿಯಾಸ್ ಸಲ್ಮಾ - ಅಕ್ಟೋಬರ್ 29, 2024
- ರೇಟಿಂಗ್ ಗಳ ಧೋರಣೆ - ಅಕ್ಟೋಬರ್ 20, 2024
- ಬೇಲಿಯೇ ಎದ್ದು….. - ಸೆಪ್ಟೆಂಬರ್ 29, 2024
ಗ್ರೀಷ್ಮ ಋತು ಅಂದ್ರೆ ಬಿಸಿಲುಗಾಲನೇ. ಅದಕ್ಕೆ ಬಿಸಿಲುಗಾಲದ ಜತಿಗೆ ಬಳ್ಳಾರಿಯ ಭಾಷೆ ಕೂಡಾ ಒಂದಿಷ್ಟು ಪರಿಚಯ ಮಾಡೇಬಿಡೋಣ ಅಂತ ಅಂದುಕೊಂಡು ಈ ಲೇಖನ ಸುರುಮಾಡೀನಿ.
ಬಳ್ಳಾರಿ ಮಾತಿನ ವಿಲಕ್ಷಣತೆ ಏನಪಾ ಅಂದ್ರೆ ಆಕಡಿ ಧಾರವಾಡದ ಭಾಷಾನೂ ಪೂರ್ಣ ಅಲ್ಲ, ಈಕಡಿ ಬೆಂಗಳೂರು ಮಾತೂನೂ ಅಲ್ಲ. ಅದರದ್ದೇ ಕೆಲ ಪ್ರತ್ಯೇಕ ಮಾತುಗಳು ಬಳಕೆ ಆಗ್ತಾವ್ರಿ. ಅದಕ್ಕೆ ಆ ಭಾಷೆ ನಿಮಗೆ ಪರಿಚಯ ಮಾಡೋ ಪ್ರಯತ್ನ ನಂದು. ಬಳ್ಳಾರಿ ಅಂದ್ರೂ ಅಥವಾ ಬಿಸಿಲುಗಾಲ ಅಂದ್ರೂ ಮೊದಲಿಗೆ ನೆನಪಿಗೆ ಬರೋದು ಬೀಚಿ ಅವರು ಹೇಳಿದ ಮಾತು “ಬಳ್ಳಾರಿಯಲ್ಲಿರೋದು ಎರಡೇ ಕಾಲ: ಬಿಸಿಲುಗಾಲ ಮತ್ತು ಭಾರೀ ಬಿಸಿಲುಗಾಲ” ಅನ್ನೋದು. ಯಾಕೆ ಬರೇ ಬಳ್ಳಾರಿಗೆ ಅಪಖ್ಯಾತಿ ತರೋ ಮಾತು ಅವರ ಲೇಖನಿಯಿಂದ ಬಂತು ಅಂತ ಯಾರಾರು ಯೋಚನಿ ಮಾಡೀರೇನ್ರೀ ? ಅಲ್ಲ. ರಾಯಚೂರು, ಕಲ್ಬುರ್ಗಿ ಕೂಡ ಅಷ್ಟೇ ಬಿಸಿಲಿನ ಝಳ ಹೊಡಿತಿದ್ರೂ ಬೀಚಿಯವರು ಬರೀ ಬಳ್ಳಾರಿಯ ಬಗ್ಗೆ ಮಾತ್ರ ಯಾಕೆ ಈ ಮಾತು ಬರದಾರೆ ಅಂತ ಒಮ್ಮೆ ಯೋಚನಿ ಮಾಡಿದಾಗ ನನ್ ಮಂದಬುದ್ಧಿಗೆ ಹೊಳದದ್ದು ಏನು ಅಂದ್ರೆ ಉಳಿದ ಆ ಎರಡು ಜಿಲ್ಲೆ ಆಗ ನಿಝಾಮರ ಕೈಯಾಗಿದ್ವು. ಅವುಗಳ ಬಗ್ಗೆ ಬೀಚಿಯವರಿಗೆ ಅಂದಾಜಿರಲಿಲ್ಲ ಅಂತ ಕಾಣತ್ತೆ. ಅದಕ್ಕೆ ಬರೇ ಬಳ್ಳಾರಿಯ ಬಗ್ಗೆ ಮಾತ್ರ ಬರ್ದು ನಡೀ ಅಂದ್ರು. ಮತ್ತೆ ಇನ್ನೊಂದು ವಿಷಯ ಇರ್ತದಲ್ರಿ. ನಮ್ಮ ದೇಶಾನ್ನ ನಾವು ಬಯ್ತೀವಿ, ನಮ್ಮ ಮನೆಯೋರ್ನ ನಾವು ವಿಮರ್ಶೆ ಮಾಡ್ತೀವಿ. ಹಾಗೇ ಬೀಚಿಯವರು ಕೂಡ ಬಳ್ಳಾರಿ ಜಿಲ್ಲೆಯವರು. ಅದಕ್ಕೆ ಅದರ ವಿಶೇಷತೆ ಹೇಳಿದ್ರು.
ಆದ್ರೆ ಒಂದು ಮಾತದರಿ. ಅವ್ರು ಹೇಳಿದ್ದು ಮಾತು ಮಾತ್ರ ಖರೇವು ನೋಡ್ರಿ. ಮಾರ್ಚ್ ತಿಂಗಳಿನಿಂದ ಸುರುವಾದ ರಣಬಿಸ್ಲು ಜೂನ್ ನಡುವಿನ ತನಕ ಮಖಕ್ಕೆ ರಪ್ ಅಂತ ಹೊಡದಿದ್ದೇ ಹೊಡದಿದ್ದು. ಅಲ್ಲಿಗೂ ಪ್ರತಿ ಮೇ ತಿಂಗಳಿನಾಗೆ ಜಿಲ್ಲಾ ಕಮಿಷನರ್ ಒಂದು ಪತ್ರ ಹೊರಡಸ್ತಾರ್ರಿ. “ ಮಧ್ಯಾಹ್ನ ಹನ್ನೆರಡರಿಂದ ನಾಲಕ್ಕು ಗಂಟಿವರೆಗೆ ಯಾರೂ ಹೊರಗೆ ತಿರಗಬ್ಯಾಡ್ರಿ. ಆರೋಗ್ಯ ಕೆಡ್ತದೆ” ಅಂತ. ಆದರೆ ಕೇಳೋರು ಯಾರು? ಅದೂ ಅಲ್ದಾಗಿ ಕೇಳ್ತಾ ಕೂತ್ರೆ ಕೆಲಸ ಆಗೋದು ಹ್ಯಾಗರೀ ? ಅದಕ್ಕೆ ಆ ಟೈಮು ಬೆಳದಿಂಗಳು ಅಂತ ತಿರುಗಾಡೋದು ಅಭ್ಯಾಸ ನಮಗೆಲ್ಲ. ಏನಾಗ್ತದೆ ? ತೆಲುಗಿನ್ಯಾಗ ಹೇಳ್ತಾರಲ್ಲ, “ವಡದೆಬ್ಬ” ಅಂತ. ಇದನ್ನ ಕನಡದಾಗೆ ಏನಂತಾರೆ ಅಂತ ಕೇಳಬ್ಯಾಡ್ರಿ ನೀವು. ಅಲ್ರೀ ಭಾಷೆ ಉದ್ದೇಶ ಏನು? ಅರ್ಥ ಆಗೋದು. ನಮ್ ಬಳ್ಳಾರ್ಯಾಗೆ ತೆಲುಗು ಎಲ್ರಿಗೂ ಅರ್ಥ ಆಗ್ತದರೀ. ವಡದೆಬ್ಬ ಅಂದ್ರೆ ಅರ್ಥ ಆದ್ರೆ ಸಾಕು. ಅದನ್ನ ಕನಡದಾಗೆ ಹೇಳಿದ್ರೆ ಅದು ಏನಾದ್ರೂ ಕಮ್ಮಿ ಆಗ್ತದಾ ? ಇಲ್ಲ. ಮತ್ತೆ ಆಯ್ತು, ಅಷ್ಟೇ.
“ಅಯ್ಯಪ್ಪ ಏನ್ ಬಿಸಿಲಪ್ಪ ಏನ್ ಬಿಸ್ಲು “ ಅಂದ್ಕೋತಾನೇ ಓಡಾಡೋದು. ಮದಿವಿ, ಮುಂಜಿ, ಗೃಹಪ್ರವೇಶ, ವೈದೀಕ ಎಲ್ಲ ನಡದೇ ನಡಿತಾವೆ. ಯಾವುದೋ ನಿಲ್ಲಂಗಿಲ್ಲ. ವಲಿ ಮುಂದು ಕೂತು ಅಡಿಗಿ ಮಾಡೋರು ಮಾಡ್ತಾರೆ. ಊಟ ಮಾಡೋರು ಬೆವರು ಸುರಿಸ್ಕೋತಾನೇ ಊಟ ಮುಗಿಸ್ತಾರೆ. ಆಗಾಗ ಹಣಿಯಿಂದ ಹರಿದು ಬರೋ ಬೆವರಿನ ಧಾರೆ ಊಟದ ಜತಿಗೆ ಸೇರಿ “ಯಾಕೋ ಪಲ್ಯಕ್ಕೆ ಉಪ್ಪು ಜಾಸ್ತಿ ಆದಂಗದೆ” ಅಂದ್ರೆ ಪಕ್ಕಿಗೆ ಕೂತವನು “ ಏ ನಿನ್ನ ಬೆವರು ಕಲ್ತು ಉಪ್ಪು ಆಗ್ಯದ ಹೋಗಲೇ” ಅಂತಾನೆ ಅವ್ನು. ಅದೊಂದು ಮಜಾ.
ಬಳ್ಳಾರಿ ಹತ್ರ ಹಗರಿ ನದಿ ಹರಿತದರೀ. ಅದು ಮಳಿ ಬಂದಾಗ ಮಾತ್ರ ಹರ್ದು, ನೀರೆಲ್ಲ ಆಗೋದ್ ಮ್ಯಾಲೆ ಬರೀ ಉಸುಗು ಉಳಿತದಲ್ರೀ. ಅಲ್ಲಿ ಕಲ್ಲಂಗಡಿ ಬೆಳಿತಾರ್ರಿ. ಆ ಹಣ್ಣು ಈ ಬಿಸಿಲಿಗಾಲದಾಗ ಮಾರ್ಕೆಟ್ಟಿಗೆ ಬರ್ತಾವ್ರಿ. ಒಳ್ಳೆ ರುಚಿ ಇರ್ತಾವ್ರಿ. ಅವು. ಅದೇ ರೀತಿ ನೀವೇನು ಶಿಷ್ಟ ಭಾಷೆದಾಗ “ತಾಳೆ ಹಣ್ಣು” ಅಂತೀರಿ, ಅವುನ್ನ ತೆಲುಗಿನ್ಯಾಗ “ತಾಟಮುಂಜಲು” ಅಂತಾರ್ರಿ. ನಾವು ಎರಡೂ ಭಾಷೆ ಪದಗಳ್ನ ಕೂಡ್ಸಿ ಅವುನ್ನ “ತಾಟಿನಂಜಲು” ಅಂತೀವ್ರೀ. ಅವೂ ಮಾರ್ಕೆಟ್ ಗೆ ಬರ್ತಾವೆ. ಆದರೆ ಇವನ್ನ ಮನಿಗೆ ತರೋಂಗಿಲ್ಲ. ತಿಂದೀವಿ ಅಂತಲೂ ಹೇಳಂಗಿಲ್ಲ. ಬಯಸ್ಕೊತೀವಿ. ಅದಕ್ಕೆ ಗಪ್ ಚಿಪ್ ತಿಂದು ಬಾಯಿ ವರಿಸ್ಕೊಂಡು ಕಲ್ಲಂಗಡಿ ಹಣ್ಣು ತಿಂದೋರ್ಗತಿ ಬರೋದು.
ಮತ್ತೆ ಬಿಸ್ಲಾಗ ತಿರುಗಾಡಿ ಬಂದ್ರೆ ಇವಾಗಿನ ತರ ಜೂಸು, ಮಾಜಾ ಇರಿತಿದ್ವೇನ್ರಿ ಆಗ. ಮೊಸರು ಮಜ್ಜಿಗೀನೂ ಇರ್ತಿದ್ದಿಲ್ರಿ. ಫ್ರಿಜ್ ಅಂತೂ ಕೇಳ್ಳೇಬ್ಯಾಡ್ರಿ. ತಣ್ನನ್ನೀರು ಬೇಕಿದ್ರೆ ಕೂಜಾನೋ ಗಡಿಗಿನೋ ಮನ್ಯಾಗಿರ್ತಿತ್ತು. ಅದರಾಗಿನ ತಣ್ಣನ್ನೀರು ಕುಡಿಯೋದು ಅಷ್ಟೇ. ಅದೂ ಲೋಟ ಕಚ್ಚಿ ಕುಡಿಬಾರ್ದು. ಎತ್ತಿ ಕುಡದ್ರೆ ನಮಗಾ ನೀರಡಿಕಿ ಕಮ್ಮಿ ಆಗಂಗಿಲ್ಲ. ಮೆಲ್ಲಕ್ಕೆ ಆಕಡಿ ಈಕಡಿ ನೋಡೋದು ಕಚ್ಚಿ ಕುಡಿಯೋದೇ. ತೊಳ್ಕೊಂಬರೋದು, ಮತ್ತೆ ಕಚ್ಚಿ ಕುಡಿಯೋದು. ಹೀಗೆ ಎರಡು ಮೂರು ಲೋಟ ನೀರು ಕುಡದ್ರೆ ಆಗ ನೀರಡಿಕಿ ಕಮ್ಮಿಯಾಗೋದು.
ಅಲ್ರೀ. ಬಿಸಿಲಿಗೆ ಅಂಜಿ ಆಟ ಬಿಡ್ಲಿಕ್ಕಾಗತ್ತೇನ್ರಿ. ಅದರ ದಾರಿ ಅದರ್ದೇ ಇದರ ದಾರಿ ಇದರ್ದೇ. ಅದೂ ಅಲ್ದಾಗಿ ಬ್ಯಾಸಗೀ ರಜಾ ಬೇರೇ. ನಾವು ಬೇರೇ ಊರಿಗಂದ್ರೆ ಎಲ್ಲಿ ಹೋಗ್ತೀವ್ರೀ. ನಮ್ಮೋರೆಲ್ಲ ಈ ಬಿಸ್ಲು ಸೀಮ್ಯಾಗೇ ಇದ್ದಿದ್ದು. ನಾವು ರಜೆಗೆ ಅಂತ ಎಲ್ಲಿಗ್ಹೋದ್ರೂ ಅಲ್ಲೆಲ್ಲ ಬಿಸ್ಲೇ. ಮತ್ತೆ ಬ್ಯಾರೇ ಅಂತ ಹೆಂಗನಸ್ತದೆ ? ಗೋಲಿ, ಬಗರಿ, ಚಿಲ್ಲ ಕಾಮ (ಗಿಲ್ಲಿದಾಂಡಕ್ಕೆ ಇಲ್ಲಿಯ ಹೆಸರು) ಮುಟ್ಯಾಕೋ ಆಟ (ಜೂಟಾಟ) ಎಲ್ಲಾ ಆಡ್ತಿದ್ವಿ. ಬಿಸ್ಲೆಲ್ಲ ನಮ್ ಪಾಲೇ. ನಮ್ಮಪ್ಪ ಏಪ್ರಿಲ್ ತಿಂಗಳಿನಾಗೇ ಸೆಲೂನ್ ಗೆ ಕರ್ಕೊಂಡು ಹೋಗಿ “ಇವ್ನಿಗೆ ಸಮ್ಮರ್ ಕಟ್ ಹೊಡಿ” ಅಂತ ಹೇಳಿ ಬರೋರು. ಅವನು ಬಾಳ ಉತ್ಸಾಹದಿಂದ “ಸಾರು ಹೇಳೋಗ್ಯಾರೆ ನೀ ಸುಮ್ನಿರು” ಅಂತ ನನ್ನ ಗದರಿದ್ರು ಸ್ಚಲ್ಪ ಚೌಕಾಶಿ ಮಾಡಿ ಅಷ್ಟು ಸಣ್ಣಕ್ಕೆ ಮಾಡದಾಗೆ ನೋಡ್ಕೋತಿದ್ದೆ. ಕ್ರಾಪು ಕಾಣ್ಸ್ ಬೇಕಲ್ರೀ ಸಿನಿಮಾ ಸ್ಟೈಲಿನಾಗೆ.
ಮತ್ತೆ ಸಿನಿಮಾ ನೋಡೋ ಸುಗ್ಗಿ. ರಜಗುಳು. ಓದೋದೇನಿಲ್ಲ. ಮನಿಗೆ ಯಾರಾದರೂ ಬಂದ್ರೆ ಅವರ್ನ ಸಿನಿಮಾಕ್ಕೆ ಹೊರಡ್ಸೋದು. ಅವರ ಜತಿಗೆ ನನ್ಗೂ ಛಾನ್ಸ್ ಸಿಗತ್ತಲ್ಲ. ಆ ರಜೆಗಳಾಗ ನೋ ರಿಸ್ಟ್ರಿಕ್ಷನ್. ಇಲ್ಲಾಂದ್ರೆ ನಮ್ಮಪ್ಪ ತಿಂಗಳಿಗೊಂದೇ ಸಿನಿಮಾ ಅಂತ ಕಂಡಿಷನ್ ಇಟ್ಟಿದ್ರು. ಕ್ಯಾರೀ ಒವರ್ ಇರ್ತಿತ್ತು. ಬ್ಯಾರೇ ಊರಾಗ ನೋಡಿದ ಸಿನಿಮಾಗಳಿಗೆ ರಿಯಾಯ್ತಿ ಇತ್ತು. ಅವು ಲೆಕ್ಕಕ್ಕೆ ಬರ್ತಿರ್ಲಿಲ್ಲ. ಬ್ಯಾಸಿಗಿ ರಜಾದಾಗೇ ಮ್ಯಾಕ್ಸಿಮಮ್ ಸಿನಿಮಾ ನೋಡ್ತಿದ್ವು. ಮತ್ತೆ ಸ್ಕೂಲಿಗೆ ಬಂದ್ಮ್ಯಾಲೆ ನೋಡ್ಲಿದ್ದ ಸಿನಿಮಾಗಳ ಕಥಿ ಅದು ನೋಡಿದವರಿಂದ ಹೇಳಿಸ್ಕೊಳ್ಳೋದು ಒಂದು ಮಜಾ. ಮೇಸ್ಟ್ರು “ ಈ ರಜೆಗಳಲ್ಲಿ ನೀವು ಕೈಗೊಂಡಿರುವ ಪ್ರವಾಸದ ಬಗ್ಗೆ ಪ್ರಬಂಧ ಬರೆಯಿರಿ” ಅಂದಾಗ ಸುಗ್ಗಿ ನೋಡ್ರಿ. ಬರ್ದದ್ದೇ ಬರ್ದದ್ದು. ಹಂಪಿನೋಡಿದ್ವಿ. ಟಿಬಿಡ್ಯಾಮ್ ನೋಡಿದ್ವಿ. ತಿರುಪತಿಗೆ ಹೋಗಿದ್ವಿ. ಬೆಂಗಳೂರಿಗೆ ಹೋಗಿದ್ವಿ. ಹೀಗೆ ತರತರಾ ಕಥಿಗಳು ಬರೋವು.
ಅಂತೂ ಬಳ್ಳಾರಿಯ ಬಿಸಿಲಿಗಾಲದ ಬಗ್ಗೆ ನನಗನಿಸಿದ್ದು ನನ್ನ ಭಾಷೆ ಒಳಗೆ ನಿಮಗೆ ತಿಳಿಸೋ ಪ್ರಯತ್ನ ಮಾಡೀನಿ. ಹೆಂಗನಿಸ್ತು ಅಂತ ಹೇಳ್ರಿ. ಅಂಧಾಂಗೆ ಕೊನೀಗೆ ಒಂದು ಬೇಶಿರೋ ಬಳ್ಳಾರಿ ಹಾಡು ನಿಮಗೆ ಹೇಳಿ ಮುಗಿಸ್ತೀನ್ರೀ. “ಬೆಸುಗೆ” ಅಂತ ಪಿಕ್ಚರ್ ಬಂದಿತ್ತು ನೆನಪಿರ್ಬೇಕು ನಿಮ್ಗೆ. ಅದರಾಗಿನ ಒಂದು ಹಾಡು “ ಬೆಸುಗೆ, ಬೆಸುಗೆ ಜೀವನವೆಲ್ಲ ಸುಂದರ ಬೆಸುಗೆ” ಅಂತ. ಅದಕ್ಕೆ ನಾನು ಬಳ್ಳಾರಿ ಬ್ಯಾಸಿಗೆಗೆ ಹೊಂದಿಸಿ ಹಾಡು ಕಟ್ಟಿದ್ದೆ. “ಬ್ಯಾಸಿಗಿ, ಬ್ಯಾಸಿಗಿ, ಬಳ್ಳಾರಿಯಲ್ಲಿ ಬಿಸಿ ಬಿಸಿ ಬ್ಯಾಸಿಗಿ” ಅಂತ.
ನಗುವು ಬಂತಿಲ್ರೀ !! ನಕ್ಕು ಬಿಡ್ರಿ. ಬರ್ತೀನ್ರೀ, ನಮಸ್ಕಾರ.
ಹೆಚ್ಚಿನ ಬರಹಗಳಿಗಾಗಿ
‘ಒಬ್ಬಂಟಿಕರಣ’ ದ ಲೋಕಾರ್ಪಣೆ
ವಿಶ್ವ, ವಿಶಾಲೂ ಮತ್ತು ಅಧ್ಯಾತ್ಮ
ರೇಟಿಂಗ್ ಗಳ ಧೋರಣೆ