- ಮತ್ತೆ ಹುಟ್ಟುವುದಾದರೆ ಮೊದಲೇ ಹೇಳಿಬಿಡು - ಮೇ 26, 2021
- ಬೇಬಿ ಶ್ಯಾಮಿಲಿ ಮತ್ತು ಸಂಕ್ರಾಂತಿ ಕಾಳು - ಜನವರಿ 14, 2021
ಸಂಕ್ರಾಂತಿಯೆಂದರೆ ರೈತರಿಗೆ ಹಬ್ಬ, ಸೂರ್ಯ ತನ್ನ ಪಥ ಬದಲಿಸುವ ಶುಭಕಾಲ ಎಂಬ ಪ್ರೌಢ ವಿಚಾರಗಳೆಲ್ಲ ತಲೆಗೂದಲ ಬಳಿಯೂ ಬಾರದಷ್ಟು ಮುಗ್ಧ ವಯಸ್ಸದು. ಸಂಕ್ರಾಂತಿಯಿಂದರೆ ಈಗಲೂ ನನಗೆ ನೆನಪಾಗುವುದು ಬಣ್ಣ ಬಣ್ಣದ ಸಂಕ್ರಾಂತಿ ಕಾಳುಗಳು ಮತ್ತು ಗ್ರೀಟಿಂಗ್ ಕಾರ್ಡ್.
ಸಂಕ್ರಾಂತಿಗೆ ವಾರದ ಮೊದಲೇ ಕುಮಟೆಯ ‘ಕಾಮತ್ ಬುಕ್ ಡಿಪೋ’ದಿಂದ ಹಿಡಿದು, ಆಲದಕಟ್ಟೆಯ ‘ಶಿರಿ ಅಂಗ್ಡಿ’ ತನಕ ಪ್ರತೀ ಕಾರ್ಡುಗಳನ್ನೂ ಜಾಲಾಡಿ ಮುದ್ದಾದ ಕಾರ್ಡುಗಳನ್ನು ಆರಿಸಿದರೆ ಅಂಗೈಯಲ್ಲಿ ನವಿಲು ಕುಣಿದಂತ ಸಡಗರ. ಆಪ್ತೇಷ್ಟರಿಗೆ ಕಳುಹಿಸಲು ಎರಡ್ಮೂರು ಪುಟವಿರುವ ಸ್ವಲ್ಪ ತುಟ್ಟಿಯಾದ ಹೂವು, ನಿಸರ್ಗದ ಚಿತ್ರವಿರುವ ಮತ್ತು ಕನ್ನಡ ಇಂಗ್ಲೀಷಿನಲ್ಲಿ ಶುಭಾಶಯ ಸಾಲು ಕೆತ್ತಿರುವ ಕಾರ್ಡುಗಳಾದರೆ, ಮಕ್ಕಳ ಬಳಗಕ್ಕಾಗಿ ಎಂಟಾಣೆ ಒಂದು ರೂಪಾಯಿಯೊಳಗಿನ ಒಂದೇ ಪುಟದ ಬೇಬಿ ಶ್ಯಾಮಿಲಿ, ದೇವರ ಚಿತ್ರವಿರುವ ಕಾರ್ಡುಗಳು. ಅದರಲ್ಲಿಯೂ ಮನಸಿಗೆ ಹತ್ತಿರವಾದ ಗೆಳತಿಯರಿಗೆ ಮಾತ್ರ ಎರಡು ಜುಟ್ಟಿನ, ತಲೆಮೇಲೆ ಕೋಳಿ ಮರಿಗಳನ್ನಿಟ್ಟುಕೊಂಡ, ಗಲ್ಲದ ಮೇಲೆ ಕೈಯೂರಿ ತುಂಟ ನಗು ಸೂಸುವ, ಕೋತಿ ಮರಿಯ ಜೊತೆ ನಲಿವ, ಚೆಂದನೆಯ ಫ್ರಾಕ್ ಧರಿಸಿದ ಬೇಬಿ ಶ್ಯಾಮಿಲಿಯ ತರೇವಾರಿ ಚಿತ್ರಗಳು. ಬೇರೆ ಗುಂಪಿನ, ಸದಾ ಕಿರಿಕ್ ಮಾಡುವವರಿಗೆ ದೇವರ ಚಿತ್ರವಿರುವ ಕಾರ್ಡು ಮತ್ತು ಒಳ್ಳೊಳ್ಳೆ ಮಾತಾಡಿ ಎಂಬ ಒಕ್ಕಣೆ. ಗೆಳತಿಯ ಮೇಲೆ ತುಂಬಾ ಪ್ರೀತಿ ಇದ್ದರಷ್ಟೇ ನಲ್ಮೆಯ, ಆತ್ಮೀಯ ಎಂಬಂತಹ ಶಬ್ಧಗಳು ಕಾರ್ಡಿನ ಹಿಂಬದಿಯಿರುತ್ತಿತ್ತು. ಸಂಕ್ರಾಂತಿ ಸಮಯದಲ್ಲಿ ಚೂರು ಮುನಿಸಿದ್ದರೂ ಕಾರ್ಡು ಮತ್ತು ಒಕ್ಕಣೆ ಬದಲಾಗಬಲ್ಲ ಸಾಧ್ಯತೆ ಬಹಳವಿತ್ತು. ಬೇಬಿ ಶ್ಯಾಮಿಲಿ ಕಾರ್ಡು ಪಡೆದ ಗೆಳತಿ ಚೂರು ಸೊಣಕು ತೋರಿಸಿದರು ‘ನಿಂಗ್ ಸೊಕ್ಕ್ ಜಾಸ್ತಿ ಆಗದೆ, ನಾ ಕೊಟ್ಟದ್ ನಂಕೊಡು’ ಎಂದು ಈಗ ಬಾಲಿಶವೆನಿಸುವ ಘನಘೋರ ಯುದ್ಧ ನಡೆಯುತ್ತಿತ್ತು. ಒಂದು ವೇಳೆ ನಮ್ಮಿಂದ ಬೇಬಿ ಶ್ಯಾಮಿಲಿ ಕಾರ್ಡು ಪಡೆದವಳು ತಿರುಗಿ ನಮಗೆ ಹೂವು ಅಥವಾ ದೇವರ ಚಿತ್ರ ಕೊಟ್ಟರಂತೂ ಕಂಡಾಪಟ್ಟೆ ಕೋಪವುಕ್ಕಿ ಬರುತ್ತಿತ್ತು. ಮನೆಗೆ ಬಂದು ಅಮ್ಮನ ಬಳಿ ಕೆಂಡಕಾರಿ ಇನ್ಯಾವತ್ತೂ ಅವಳಿಗೆ ಕಾರ್ಡೇ ಕೊಡುವುದಿಲ್ಲ ಎಂಬಂತಹ ಮಳ್ಳ್ ಶಪಥವನ್ನೂ ಗೈಯುವುದಿತ್ತು. ಸಂಕ್ರಾಂತಿ ಮುಗಿಯುವುದರೊಳಗೆ ಯಾರ ಬಳಿ ಎಷ್ಟು ಬೇಬಿ ಶ್ಯಾಮಿಲಿ ಕಾರ್ಡಿದೆ ಎಂಬುದರ ಮೇಲೆ ಅವರ ವ್ಯಕ್ತಿತ್ವದ ತೂಕವೂ ಗುಂಪಿನಲ್ಲಿ ಹೆಚ್ಚುತ್ತಿತ್ತು. ಅಕಸ್ಮಾತ್ ಒಂದೇ ರೀತಿಯ ಎರಡು ಕಾರ್ಡು ಕೈಯಲ್ಲಿದ್ದರೆ ಅದರ ಹಿಂಬದಿಯ ಹೆಸರು ಬದಲಿಸಿ ಬೇರೆಯವರ ಕೈದಾಟಿಸುತ್ತಿದ್ದೆವು. ಪ್ರತೀ ಸಂಕ್ರಾಂತಿಗೂ ಅತೀ ಹೆಚ್ಚು ಬೇಬಿ ಶ್ಯಾಮಿಲಿಯ ಕಾರ್ಡು ನಮಗೇ ಸಿಗುವಂತಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುವಷ್ಟು ಮುಗುದತೆ ಅಲ್ಲಿತ್ತು.
ಸಂಕ್ರಾಂತಿ ದಿನ ಶಾಲೆಗೆ ರಜೆಯಾದರೂ ಬೆಳಿಗ್ಗೆಯೇ ಎದ್ದು ಸ್ನಾನ ಮಾಡಿ ಸಂಕ್ರಾಂತಿ ಕಾಳಿನ ಬಟ್ಟಲನ್ನು ಜೋಡಿಸಿಟ್ಟುಕೊಳ್ಳುವ, ಹೊಸಬಟ್ಟೆಗೆ ಅದೇ ಬಣ್ಣದ ಬಳೆ, ಕಿವಿಯೊಲೆ ಹೊಂದಿಸಿಕೊಳ್ಳುವ ಗಡಿಬಿಡಿ. ಮಧ್ಯಾಹ್ನ ಹಬ್ಬದೂಟ ಮುಗಿಯುವುದರೊಳಗೆ ಅಮ್ಮನ ಸೀರೆಯಿಂದ ಹೊಲಿಸಿದ ಉದ್ದಲಂಗ ದಾವಣಿ ಹಾಕಿಕೊಂಡು, ಅರಿಶಿನ ಕುಂಕುಮ ಬಣ್ಣದ ಕಾಳಿನ ಡಬ್ಬಿಯಿಂದ ಅಲಂಕರಿಸಿಟ್ಟ ಸಂಕ್ರಾಂತಿ ಬಟ್ಟಲು ಹಿಡಿದು ತಯಾರಾಗುತ್ತಿದ್ದೆವು. ಶಾಂಚಿಕ್ಕಿ ಮನೆಯಿಂದ ಗಣಪಿಚಿಕ್ಕಿ ಮನೆ ತನಕ, ಸೂರಿಯಣ್ಣ ಮತ್ತು ಶೆಟ್ರು ಮನೆಯನ್ನೂ ಬಿಡದೇ ಎಲ್ಲರ ಮನೆಗೂ ತೆರಳಿ ಹಿರಿಯರಿಗೆ ನಮಸ್ಕರಿಸಿ ಸಂಕ್ರಾಂತಿ ಕಾಳು ಹಂಚಿ ಸಂಭ್ರಮಿಸುತ್ತಿದ್ದೆವು. ನಾವು ಅರ್ಧ ಮುಷ್ಟಿ ಕಾಳು ಕೊಟ್ಟರೆ ಒಂದೆರಡು ಕಾಳನ್ನು ಮೆದ್ದು ಉಳಿದದ್ದನ್ನು ನಮ್ಮ ಡಬ್ಬಿಗೆ ಹಾಕುವವರನ್ನು ಕಂಡರೆ ನಮಗೆ ಅಪರಿಮಿತ ಅಕ್ಕರೆ. ಅದೇ ನಾವು ಕೊಟ್ಟ ಕಾಳನ್ನೆಲ್ಲಾ ತಾವಿಟ್ಟುಕೊಂಡು ತಿರುಗಿ ನಮಗೆರಡು ಕಾಳನ್ನಷ್ಟೇ ಕೊಡುವ ಜುಗ್ಗಪ್ಪರನ್ನು ಕಂಡರೆ ಒಂಥರಾ ಕಸಿವಿಸಿ. ಮುಂದಿನ ವರುಷ ಇವರಿಗೆ ಚೂರು ಕಮ್ಮಿ ಕಾಳು ಕೊಡಬೇಕು ಎಂಬ ಲೆಕ್ಕಾಚಾರ. ಕಾಳು ಕೊಟ್ಟು ಕಾಲಿಗೆ ಬಿದ್ದ ಮಕ್ಕಳಿಗೆ ಐದೋ-ಹತ್ತೋ ಪುಡಿಗಾಸು ಕೊಡುವ ಅಜ್ಜಂದಿರ ಮೇಲೆ ಮುದ್ದುಕ್ಕುವಷ್ಟು ಪ್ರೀತಿ. ಸಂಕ್ರಾಂತಿ ಕಳೆದ ನಾಕು ದಿನದ ನಂತರ ಬರುವ ಧಾರೇಶ್ವರ ತೇರಿಗೆ ನಾಕು ಕಾಸಾಯ್ತು ಎಂಬ ಪುಟ್ಟ ಖುಶಿ. ಹೀಗೆ ಎಲ್ಲರ ಮನೆಗೂ ಪೇರಿ ತಿರುಗಾದ ಮೇಲೆ ಮನೆಗೆ ಬಂದು ನಮ್ಮನಮ್ಮ ಡಬ್ಬಿಯಿಂದ ಬಣ್ಣದ ಕಾಳನ್ನಷ್ಟೇ ಆರಿಸುವ ದಣಿವಿರದ ಕೆಲಸವೊಂದು ಇರುತ್ತಿತ್ತು. ಯಾಕೆಂದರೆ ಸಂಕ್ರಾಂತಿಯ ಮರುದಿನ ಶಾಲೆಯಲ್ಲಿ ಸಂಕ್ರಾಂತಿ ಕಾಳು ಹಂಚುವ ಗೌಜಿ. ಅಕ್ಕೋರಿಗೆ,ಮಾಸ್ತರಿಗೆ ಕಾಳು ಹಂಚಾದ ಮೇಲೆ ಪಾಠದ ಮಧ್ಯೆ ಬಿಡುವ ‘ರಿಸೆಸ್’ ಸಮಯದಲ್ಲಿ ಯಾರ ಹತ್ತಿರ ಹೆಚ್ಚು ಬಣ್ಣ ಬಣ್ಣದ ಸಂಕ್ರಾಂತಿ ಕಾಳುಗಳಿವೆ ಎಂಬುದರ ಮೇಲೂ ಗುಂಪಿನಲ್ಲಿ ನಮ್ಮ ವಜನು ಹೆಚ್ಚುತ್ತಿತ್ತು. ಅದ್ಕೆ ಅಂಗೈಯಲ್ಲಿ ಅವಿತಿಡಿಸಿಕೊಂಡ, ಹಿಂದಿನ ದಿನ ಆರಿಸಿಟ್ಟ ಬಣ್ಣದ ಕಾಳನ್ನು ನಮ್ಮ ಡಬ್ಬಿಯಲ್ಲಿ ಸೇರಿಸಿ ಕಳ್ಳನಗು ಬೀರುವಾಗ ಸಾಕ್ಷಿ ಅಡಗಿಸಿಕೊಂಡ ಅಂಗೈ ಬಣ್ಣಗೆಟ್ಟಿರುತ್ತಿತ್ತು.
ನಂತರದ ಸಂಕ್ರಾಂತಿಗೆ ಅದೆಷ್ಟೋ ಮಜಲುಗಳಿವೆ. ಆದರೆ ನನಗೆ ಮಾತ್ರ ಅಂಗೈಯಲ್ಲಿ ಬೆವೆತು ಕುಳಿತಂತ ಬಾಲ್ಯದ ಸವಿ ನೆನಪೇ ಬಹಳ ಆಪ್ತ.
ಹೆಚ್ಚಿನ ಬರಹಗಳಿಗಾಗಿ
ಬೇಲಿಯೇ ಎದ್ದು…..
ಗಣೇಶನ ಕೈಯಲ್ಲಿಯ ಲಾಡು
ನೋ ಪಾರ್ಕಿಂಗ್