- ಬೆರಳ ತುದಿಯಲ್ಲಿ ಹಣಪಾವತಿ - ಜನವರಿ 13, 2025
- ಸಾಜಿದಾ ಅಲಿಯಾಸ್ ಸಲ್ಮಾ - ಅಕ್ಟೋಬರ್ 29, 2024
- ರೇಟಿಂಗ್ ಗಳ ಧೋರಣೆ - ಅಕ್ಟೋಬರ್ 20, 2024
ನನ್ನ ದೈನಂದಿನ ಸ್ತೋತ್ರಗಳಲ್ಲಿ ಒಂದು ಸಾಲು ಹೀಗೂ ಬರುತ್ತದೆ. “ರಾಜ ಚೋರ ಮಹಾ ವ್ಯಾಘ್ರ ಸರ್ಪನಕ್ರಾದಿ ಪೀಡನಮ್” ಅಂದರೆ ಇವೆಲ್ಲದರಿಂದ ನನ್ನನ್ನು ಈ ಸ್ತೋತ್ರ ಕಾಪಾಡಲಿ ಎಂದು ಪ್ರಾರ್ಥನೆ ಇರುತ್ತದೆ. ಅವುಗಳಲ್ಲಿಯ ಚೋರ, ವ್ಯಾಘ್ರ, ಸರ್ಪ, ನಕ್ರ(ಜಲಚರ) ಇವುಗಳಿಂದ ಕಾಪಾಡಬೇಕು ಎಂದು ಭಕ್ತ ಕೇಳಿಕೊಳ್ಳುವುದರಲ್ಲಿ ಆಶ್ಚರ್ಯವೇನಿಲ್ಲ. ಅವುಗಳಲ್ಲಿ ಚೋರನನ್ನು ಬಿಟ್ಟರೆ ಉಳಿದವು ಪ್ರಕೃತಿಗೆ ಸಂಬಂಧ ಪಟ್ಟವು. ಚೋರನಿಂದ ಕಾಪಾಡು ಎನ್ನುವಾಗ ಸಹ ಅದು ನ್ಯಾಯವೇ ಎನಿಸುತ್ತದೆ. ಯಾಕೆ ಅಂದರೆ ನಾವು ಕೊಂಚ ಅಜಾಗ್ರತೆಯಿಂದ ಇದ್ದರೂ ಸಹ ಚೋರರು ನಮ್ಮ ಸ್ವತ್ತನ್ನು ಲಪಟಾಯಿಸುತ್ತಾರೆ. ಅದು ತೀರ ಆಕಸ್ಮಿಕವಾಗಿರುತ್ತದೆ. ಆದರೆ ರಾಜನಿಂದ ಕಾಪಾಡು ಎನ್ನುವುದು ನನಗೆ ಸ್ವಲ್ಪ ಯಾಕೋ ಚಿಂತನೆಗೆ ಹಚ್ಚುವ ವಿಷಯ ಎನಿಸಿತು. ಯಾಕೆ ಎಂದರೆ ರಾಜನೇ ಪ್ರಜಾ ಪೀಡಕನಾಗಿದ್ದರೆ ಇನ್ನು ಜನ ಯಾರಲ್ಲಿ ಮೊರೆ ಹೋಗಬೇಕು? ಆ ದೇಶದ ನಾಗರಿಕರಾಗಿರುವುದು ಅವರ ತಪ್ಪಾಗಿರುವುದಿಲ್ಲ. ಅವರು ತಮ್ಮ ಆಯ್ಕೆಯಿಂದ ಆ ದೇಶದಲ್ಲಿ ಹುಟ್ಟೊರಿವಿದಿಲ್ಲ. ಆದರೆ ಅವರು ಕಷ್ಟಗಳನ್ನು ಅನುಭವಿಸ ಬೇಕಾಗುತ್ತದೆ. ಗಮ್ಮತ್ತೆಂದರೆ ಒಂದು ಶತಮಾನದ ಹಿಂದಿನ ಈ ತರದ ಒಂದು ಶ್ಲೋಕದಲ್ಲಿ ರಾಜರ ಉಲ್ಲೇಖವಿಲ್ಲ. ಅಂದರೆ ಆಗ ರಾಜರ ಕಾಟ ಇಲ್ಲ ಎಂದು ತಿಳಿಯಬೇಕಾ? ಒರೆಗೆ ಹಚ್ಚುವ ವಿಚಾರವೇ ಎನಿಸಿ ಮುಂದುವರೆದೆ.
ಒಂದಾನೊಂದು ಕಾಲದ ವರೆಗೆ ರಾಜ ಆ ರಾಜ್ಯದ ಜನರಿಂದ ಭೂಮಿಗಿಳಿದ ದೇವರು ಎಂತಲೇ ಪೂಜಿಸಲ್ಪಡುತ್ತಿದ್ದ. ತನ್ನ ರಾಜ್ಯದ ಜನರನ್ನು ರಕ್ಷಿಸುವುದು ಅವನ ಕರ್ತವ್ಯವಾಗಿತ್ತು. ಇತರೆ ರಾಜರು ದಂಡೆತ್ತಿ ಬಂದಾಗ ಮಾಮೂಲಿ ಜನರನ್ನು ತನ್ನ ಕೋಟೆಯೊಳಗಿರಿಸಿ, ಜನ ನಷ್ಟವಾಗದ ಹಾಗೆ ನೋಡಿಕೊಳ್ಳುವುದು ಅವನ ಹೊಣೆಯಾಗಿತ್ತು. ಮತ್ತು ತನ್ನ ಆಡಳಿತ ಪ್ರಜಾರಂಜಕವಾಗಿ ಇರಿಸುವುದು ಅವನ ಪ್ರಥಮ ಕರ್ತವ್ಯವಾಗಿತ್ತು. ಕುರುಕ್ಷೇತ್ರದ ಯುದ್ಧದ ನಂತರ ಧರ್ಮರಾಜ ಆಡಳಿತ ಮತ್ತು ರಾಜಧರ್ಮದ ಬಗ್ಗೆ ಶ್ರೀಕೃಷ್ಣ ಮತ್ತು ಭೀಷ್ಮರಿಂದ ಉಪದೇಶ ಪಡೆಯುತ್ತಾನೆ. ತಮ್ಮ ಜನರಂಜಕ ಆಡಳಿತದಿಂದಲೇ ಅನೇಕ ರಾಜರು ಹೆಸರು ಪಡೆದು ಅಮರರಾಗಿರುವುದು ನಮಗೆ ಗೊತ್ತು. ಹೈದರಾಬಾದಿನ ನಟ್ಟನಡುವೆ ಹರಿಯುವ ಮೂಸಿ ನದಿಗೆ ೧೯೦೮ ರಲ್ಲಿ ಅದುವರೆಗೆ ಕಾಣದ ನೆರೆ ಬಂದು ಸುಮಾರು ೬೦,೦೦೦ ಜನರು ಮನೆ ಮಠ ಕಳೆದುಕೊಂಡಾಗ ಅಂದಿನ ನಿಜಾಮರು ಒಂದು ವಾರದ ಮಟ್ಟಿಗೆ ಅವರನ್ನು ತಮ್ಮ ಕೋಟೆಯೊಳಗೆ ಕರೆಸಿಕೊಂಡು ಅವರ ಅನ್ನ ಪಾನಾದಿಗಳನ್ನು ನೋಡಿಕೊಂಡಿದ್ದಂತೆ. ಹಾಗಿರುವಾಗ ರಾಜನಿಂದ ಕಾಪಾಡು ಎನ್ನುವುದರಲ್ಲಿ ಏನು ಅಂಥಾ ವಿಶೇಷ?
ಮನುಷ್ಯನೆಂದ ಮೇಲೆ ಒಳ್ಳೆಯವನು ಮತ್ತು ಕೆಟ್ಟವನು ಎನ್ನುವ ಎರಡು ಜಾತಿಗಳು ಇವೆ ಅಂತ ನಮಗೆ ಗೊತ್ತೇ ಇದೆ. ನಮ್ಮ ದೈನಂದಿನ ಜೀವನದಲ್ಲಿ ಮನುಷ್ಯರ ಈ ಎರಡು ಮುಖ ನಮಗೆ ಸಿಕ್ಕೇ ಸಿಗುತ್ತವೆ. ಎದುರಿನ ಮನುಷ್ಯನ ವರ್ತನೆ, ನಮ್ಮ ವರ್ತನೆಯ ಪರಾವರ್ತನೆ ಎಂದು ಸುಭಾಷಿತ ಹೇಳಿದರೂ, ತಮ್ಮದೇ ಆದ ವಿಶಿಷ್ಟ ಗುಣಗಳಿಂದ ನಮ್ಮ ಎದುರಿನ ವ್ಯಕ್ತಿಗಳು ನಮಗೆ ಒಳ್ಳೆಯವರು ಅಥವಾ ಕೆಟ್ಟವರು ಎನಿಸುತ್ತಾರೆ. ಕಷ್ಟಗಳಲ್ಲಿರುವಾಗ ಮತ್ತೊಬ್ಬರಿಗೆ ಸಹಾಯ ಮಾಡುವುದು ಒಳ್ಳೆಯತನವೆನಿಸಿಕೊಳ್ಳುತ್ತದೆ. ಅದಕ್ಕಿಂತ ಸ್ವಲ್ಪ ಕೆಳಮಟ್ಟದ್ದು ಒಳ್ಳೆಯದನ್ನು ಮಾಡದಿದ್ದರೂ ಕೆಟ್ಟದ್ದನ್ನು ಮಾಡದಿದ್ದರೆ ಸಾಕು ಎನ್ನುವಂಥ ಪ್ಯಾಸಿವ್ ಒಳ್ಳೆಯತನ. ಅಲ್ಲವೇ? ಇನ್ನು ಎರಡನೆಯ ಸ್ವಭಾವ. ಮುಂದೆ ಹೋಗುವವರಿಗೆ ಕಾಲು ಕೊಡುವ ಸ್ವಭಾವ, ಕುಹಕ ಮಾಡಿ ನಗುವ ಸ್ವಭಾವ, ಅವಹೇಳನೆ ಮಾಡಿಕೊಂಡು ಖುಶಿ ಪಡುವ ಸ್ವಭಾವ ಈ ಕೆಟಗರಿಯಲ್ಲಿ ಬರುತ್ತವೆ. ಯಾವ ಡಿಗ್ರಿಯಲ್ಲಿ ಇವು ಕಾಣುತ್ತವೆ ಎನ್ನುವುದರ ಮೇಲೆ ನಾವು ಅತಿ ಒಳ್ಳೆಯವರು ಅಥವಾ ತುಂಬಾ ಕೆಟ್ಟವರು ಎನ್ನುವುದನ್ನು ನಿರ್ಣಯಿಸುತ್ತೇವೆ.
ರಾಜರು ಸಹ ಮನುಷ್ಯರೇ! ಅವರಲ್ಲೂ ಒಳ್ಳೆಯವರು ಕೆಟ್ಟವರು ಇರುತ್ತಾರೆ. ಆದರೆ ಅವರ ಆ ಗುಣಗಳಿಂದ ಇಡೀ ರಾಜ್ಯದ ಪ್ರಜೆ ಪ್ರಭಾವಿತವಾಗುತ್ತದೆ. ರಾಜ್ಯ ಸುಭಿಕ್ಷವಾಗಿತ್ತು ಎಂದು ನಾವು ಕತೆಗಳಲ್ಲಿ ಕೇಳುತ್ತೇವೆ. ಅಂದರೆ ಅದು ರಾಜರ ಆಡಳಿತವನ್ನು ಸೂಚಿಸುತ್ತದೆ. ವ್ಯವಸ್ಥಿತ ಆಡಳಿತದ ಸೂತ್ರಗಳೇನು? ರಾಜನು ಉದಾರ ಮನಸ್ಸಿನವನಾಗಿರಬೇಕು, ಪ್ರಜೆಗಳ ಕಷ್ಟಗಳನ್ನು ಲಕ್ಷಗೊಟ್ಟು ಕೇಳಿ ಅವುಗಳಿಗೆ ಪರಿಹಾರಗಳನ್ನು ಕಂಡುಕೊಂಡು ಕಾರ್ಯಾಚರಣೆಗೆ ತರಬೇಕು. ರಾಜ್ಯದಲ್ಲಿಯ ಕಲಾಕಾರರನ್ನು ಗುರುತಿಸಿ ಅವರಿಗೆ ಪ್ರೋತ್ಸಾಹ ಕೊಡಬೇಕು. ತಾನು ಯೋಧನಾಗಿದ್ದು ಸೈನ್ಯಕ್ಕೆ ಮತ್ತು ಸೇನಾಧಿಕಾರಿಗಳಿಗೆ ಮಾದರಿಯಾಗಿರಬೇಕು. ಕಂದಾಯ ವಸೂಲಾತಿಯಲ್ಲಿ ತುಂಬಾ ಕಠಿನವಾಗಿ ವರ್ತಿಸಬಾರದು. ಇತ್ಯಾದಿ ಇತ್ಯಾದಿ ಎಂದು ಯಾದಿ ಇರುವ ಅನೇಕ ಗುಣಗಳಿಂದ ರಾಜ ಜನರಿಗೆ ಹತ್ತಿರವಾಗುತ್ತಾನೆ.
ಇದಕ್ಕೆ ವಿರುದ್ಧವಾಗಿ ವರ್ತಿಸಿದಾಗ ರಾಜನೇ ಪ್ರಜರ ಪಾಲಿಗೆ ಕಂಟಕನಾಗುತ್ತಾನೆ. ಕಂಡಾಬಟ್ಟೆ ಕಂದಾಯ ವಸೂಲಿ ಮಾಡುವುದು, ಕೆಳಗಿನ ನೌಕರರ ಭ್ರಷ್ಟಾಚಾರ, ಅನುಚಿತ ವರ್ತನೆಯನ್ನು ಖಂಡಿಸದಿರುವುದು, ನೆರೆ ರಾಜ್ಯಗಳ ಮೇಲೆ ಅನಗತ್ಯವಾಗಿ ದಾಳಿ ಮಾಡಿ ಜನ ನಷ್ಟ ಮತ್ತು ಧನ ನಷ್ಟಕ್ಕೆ ಕಾರಣವಾಗುವುದು, ವ್ಯಸನಗಳಲ್ಲಿ ಮುಳುಗಿ ಆಡಳಿತವನ್ನು ಕಡೆಗಾಣಿಸುವುದು ಈ ಪಟ್ಟಿಯಲ್ಲಿ ಬರುವ ಕೆಟ್ಟ ಗುಣಗಳು. ಒಂದು ವರ್ಗದ ಜನರನ್ನು ಅಥವಾ ಒಂದು ಲಿಂಗದ ವ್ಯಕ್ತಿಗಳನ್ನು ಶೋಷಣೆಗೆ ಒಳಪಡಿಸುವುದು ಸಹ ಪ್ರಜಾಪೀಡನೆಯ ಕೆಳಗೇ ಬರುತ್ತದೆ. ರಾಜ ಹೀಗಿರುವಾಗ ಅದರ ಪ್ರಜೆ ಬಳಲುತ್ತಾರೆ, ಶಪಿಸುತ್ತಾರೆ.
ಇದು ಬರೀ ರಾಜರಿಕದ ವ್ಯವಸ್ಥೆಯಲ್ಲೇ ಅಲ್ಲ. ಯಾವುದೇ ಆಡಳಿತ ವ್ಯವಸ್ಥೆಯಲ್ಲಿ ಈ ರೀತಿಯಾದ ದುರ್ಗುಣಗಳು ಕಾಣಬರುತ್ತವೆ. ಇಲ್ಲಿ ಆಡಳಿತದಲ್ಲಿದ್ದ ನಾಯಕರು ಅಥವಾ ಅಧಿಕಾರಿಗಳು ರಾಜನ ಪಾತ್ರ ಧರಿಸುತ್ತಾರೆ. ಪ್ರಜಾ ಪ್ರಭುತ್ವದಲ್ಲೂ ಸಹ ಈ ರೀತಿಯ ಕುಂದು ಕೊರತೆಗಳು ಕಂಡುಬಂದು ಜನರಿಗೆ ಉಪದ್ರ ಕೊಡಬಹುದು. ಧಾರ್ಮಿಕ ಚಿಂತನೆಯ ಆಡಳಿತದಲ್ಲೂ ಬೇಡದ ನಿರ್ಬಂಧಗಳನ್ನು ಹೇರಿ ಒಂದು ವಿಭಾಗದ ಜನರನ್ನು ಅಥವಾ ಒಂದು ಲಿಂಗದ ವ್ಯಕ್ತಿಗಳನ್ನು ಪೀಡೆಗೆ ಒಳಪಡಿಸಬಹುದು. ಉದಾ: ಶಿವಾರಾಧನೆ ಅನುಸರಿಸುತ್ತಿದ್ದ ರಾಜರು ವೈಷ್ಣವ ಭಕ್ತರಿಗೆ ತೊಂದರೆ ಕೊಡುತ್ತಿರುವುದನ್ನು ದಶಾವತಾರಂ ಚಿತ್ರದಲ್ಲಿ ತೋರಿಸಲಾಗಿದೆ. ಅದೇ ರೀತಿ ಆಫ್ಘನಿಸ್ಥಾನ್ ಮತ್ತು ಇರಾನ್ ಗಳಲ್ಲಿ ಹೆಣ್ಣು ಮಕ್ಕಳ ಮೇಲೆ ಅನೇಕ ವಿಧಗಳಾದ ನಿರ್ಬಂಧಗಳನ್ನು ಹೇರಲಾಗಿದೆ. ಒಬ್ಬ ನಿರಂಕುಶ ಆಡಳಿತಗಾರನಾದ ಹಿಟ್ಲರ್ ತನ್ನ ಒಂದು ಜನಾಂಗದ ಹಿರಿಮೆಯನ್ನು ಸಾರುತ್ತ ಮತ್ತೊಂದು ಜನಾಂಗದ ಹುಟ್ಟಡಿಗಿಸುವಂತೆ ಕರೆಯನ್ನು ಕೊಟ್ಟು ಸುಮಾರು ೨೦ ಲಕ್ಷದಷ್ಟು ತನ್ನದೇ ದೇಶದ ಆ ಜನಾಂಗದ ಪ್ರಜೆಯನ್ನು ಅತಿ ಅಮಾನುಷ ರೀತಿಯಲ್ಲಿ ಕೊಲ್ಲುವುದರಿಂದ ಎರಡನೆಯ ಪ್ರಪಂಚ ಯುದ್ಧವನ್ನೇ ಈ ಜಗತ್ತಿನ ಮೇಲೆ ತಂದದ್ದನ್ನು ಇಲ್ಲಿ ಮರೆಯಬಾರದು.
ಆಫ್ರಿಕಾ ದೇಶಗಳಲ್ಲಿ ಒಂದಾದ ಉಗಾಂಡದಲ್ಲಿ ಹಿಂದೆ ಒಬ್ಬ ನಿರಂಕುಶ ಅಧ್ಯಕ್ಷನಾದ ಇದಿ ಅಮಿನ್ ಭಾರತೀಯ ಜನಾಂಗಕ್ಕೆ ೨೪ ಗಂಟೆಗಳ ಸಮಯ ಕೊಟ್ಟು ತನ್ನ ದೇಶವನ್ನು ಬಿಟ್ಟು ಹೋಗಬೇಕೆಂದು ಆಜ್ಞೆ ನೀಡಿ ಪಡಬಾರದ ಕಷ್ಟಗಳ ಪಾಲು ಮಾಡಿದ್ದ. ಮತ್ತೊಂದು ಆಫ್ರಿಕಾ ದೇಶದ ನಿರಂಕುಶ ಅಧ್ಯಕ್ಷ ಅತಿ ಬಡವ ವಿದ್ಯಾರ್ಥಿಗಳು ಸಮವಸ್ತ್ರ ಧರಿಸದೇ ಬಂದ ತಪ್ಪಿಗೆ ಅವರನ್ನು ಸೆರೆಯಲ್ಲಿರಿಸಿ ತನ್ನ ಸಮಕ್ಷಮದಲ್ಲಿ ಅವರನ್ನು ಕೊಲ್ಲುವಂತೆ ಮಾಡಿದ್ದ.
ಈ ತರದ ದುರಾಡಳಿತಗಳ ಪಟ್ಟಿಗೆ ರೋಮನ್ ಚಕ್ರವರ್ತಿಗಳ ಧೋರಣೆಯನ್ನು ಸೇರಿಸಬಹುದು. ಇತಿಹಾಸದಲ್ಲೇ ಹೆಸರಾದ ರೋಮನ್ ಚಕ್ರವರ್ತಿ ನೀರೋ ಮಾಡಿದ ಘನಕಾರ್ಯವೇನು? ಇಡೀ ರೋಮ್ ನಗರ ಹತ್ತಿ ಉರಿಯುತ್ತಿದ್ದಾಗ ತನಗೇನೂ ಹಿಡಿಸದಂತೆ ವಯೊಲಿನ್ ಬಾರಿಸುತ್ತ ಕೂತಿದ್ದ ಎಂದು ಇತಿಹಾಸ ಹೇಳುತ್ತದೆ. ಅವರ ಕ್ರೂರ ಮನಃಸ್ಥಿತಿಯನ್ನು ಪ್ರತಿಫಲಿಸುವ ಗ್ಲಾಡಿಯೇಟರ್ ಗಳ ಪ್ರಹಸನ ಇಲ್ಲಿ ನೆನೆಸಿಕೊಳ್ಳ ಬಹುದು. ಅವರು ತಮ್ಮ ಮನರಂಜನೆಗಾಗಿ ಸೆರೆಯಾಳುಗಳನ್ನು ಪರಸ್ಪರ ಕಾದಾಡಲು ಮೈದಾನಕ್ಕೆ ತರುತ್ತಿದ್ದರಂತೆ. ದ್ವಂದ್ವ ಯುದ್ಧದಲ್ಲಿ ಯಾರೋ ಒಬ್ಬರು ಮಡಿಯುವವರೆಗೆ ಅವರಿಬ್ಬರೂ ಕಾದಾಡಬೇಕು. ಅದು ರಾಜರಿಗೆ ಮನರಂಜನೆ. ಇನ್ನು ರಾಜ್ಯಗಳನ್ನು ಗೆಲ್ಲುವ ದಂಡಯಾತ್ರೆಗಳ ಸಮಯದಲ್ಲಿ ಗೆದ್ದ ಅನೇಕ ರಾಜರು ತಾವು ಗೆದ್ದ ರಾಜ್ಯದ ರಾಜರನ್ನು, ಅವರ ಪರಿವಾರವನ್ನು, ಆಸ್ಥಾನ ಉದ್ಯೋಗಿಗಳನ್ನು, ಪ್ರಜೆಗಳನ್ನು ಅನೇಕ ವಿಧಗಳಲ್ಲಿ ಹಿಂಸಿಸಿರುವ ಅನೇಕ ದಾಖಲೆಗಳು ಕಂಡುಬರುತ್ತವೆ. ನಮ್ಮ ದೇಶದ ಮೇಲೆ ದಾಳಿ ಮಾಡಿದ ತೈಮೂರ್ ದೆಹಲಿಯಲ್ಲಿ ಕಪಾಲಗಳ ಗೋಪುರ ನಿಲ್ಲಿಸಿದ್ದನಂತೆ.
ಪ್ರಜಾಪ್ರಭುತ್ವವಿರುವ ಕೆಲ ದೇಶಗಳ ಆಡಳಿತಗಾರರು ತಮ್ಮ ದೇಶಕ್ಕಾಗಿ ತಾವು ನಂಬಿದ ಒಂದು ಕಥನವನ್ನು ತಮ್ಮ ದೇಶದ ಪ್ರಜೆಗಳಲ್ಲಿ ಬಿತ್ತುವ ಮೂಲಕ ಆ ದೇಶದ ಪ್ರಜೆ ಮತ್ತೊಂದು ದೇಶ ಅಥವಾ ಜನಾಂಗ ಅಥವಾ ಭಾಷೆಗಳ ಬಗ್ಗೆ ಬೇಡದ ವಿರೋಧ ಮತ್ತು ದ್ವೇಷಗಳನ್ನು ಬೆಳೆಸಿಕೊಳ್ಳುವುದು ಸಹ ರಾಜರ ಕರಾಮತ್ತಿನ ಕೆಳಗೇ ನಾವು ವಿಂಗಡಿಸಬಹುದು. ನಮ್ಮ ನೆರೆ ದೇಶ ಇಂಥದ್ದೊಂದು ಕಥನವನ್ನು ತಾನು ಜನ್ಮತಾಳಿದ ದಿನದಿಂದ ಅಳವಡಿಸಿಕೊಂಡು ವಿನಾಕಾರಣ ನಮ್ಮ ದೇಶದ ಮೇಲೆ ದ್ವೇಷ ಬೆಳೆಸಿಕೊಂಡು ಆಗಾಗ ತಾನು ಪೋಷಿಸುತ್ತಿರುವ ತೀವ್ರವಾದಿಗಳಿಂದ ನಮಗೆ ಕಿರುಕುಳ ಕೊಡುತ್ತಿದೆ. ಇದರ ಪರಿಣಾಮವಾಗಿ ಆ ದೇಶವೇ ಈಗ ದಿವಾಳಿಯ ಅಂಚಿನಲ್ಲಿರುವುದು ನಮಗೆ ಕಾಣುತ್ತದೆ. ಮತ್ತೊಂದು ಪುಟ್ಟ ದೇಶ ತಮ್ಮ ಅಧ್ಯಕ್ಷರು ತಾಳಿದ “ಭಾರತ ವಿರುದ್ಧ” ನಿಲುವಿನ ಕಥನದ ಫಲವಾಗಿ ವಿನಾಕಾರಣ ನಮ್ಮ ದೇಶದ ಸರಕಾರದ ಮೇಲೆ, ಪ್ರಧಾನಿಗಳ ಮೇಲೆ ನಿಂದಾತ್ಮಕ ಹೇಳಿಕೆಗಳನ್ನು ನೀಡಿದ್ದರು. ಇದರ ಫಲವಾಗಿ ಬರೀ ಪ್ರವಾಸದ ಆದಾಯದ ಮೇಲೆ ಬದುಕುತ್ತಿದ್ದ ಆ ದೇಶದ ಆದಾಯ ಪ್ರವಾಸಿಗರ ವಿಮುಖತೆಯಿಂದ ಬುಡಮೇಲಾಗುವ ಪರಿಸ್ಥಿತಿ ಬಂದು ಈಗ ಹುಳ್ಳಗೆ ನಮ್ಮ ದೇಶದೊಂದಿಗೆ ದೌತ್ಯ ಸಂಬಂಧ ಬೆಳೆಸುತ್ತಿದೆ.
ನಮ್ಮ ಸೇನೆಯ ನೆರವಿನಿಂದ ಮುಕ್ತಿ ಪಡೆದ ಮತ್ತೊಂದು ಅಕ್ಕಪಕ್ಕದ ದೇಶ ಈಗ ನಮ್ಮ ದೇಶವನ್ನು ತನ್ನ ವಿರೋಧಿಗಳ ಗುಂಪಿಗೆ ಸೇರಿಸುತ್ತಿದೆ. ಈ ಕಥನವನ್ನು ಅನುಸರಿಸಿದ ತಮ್ಮ ದೊಡ್ಡಣ್ಣನ ಪರಿಸ್ಥಿತಿಯನ್ನು ಕಣ್ಣಾರ ಕಂಡಿದ್ದರೂ ಅವರಿಗೆ ತಮ್ಮ ಧರ್ಮದ ಮೂಲವೇ ಸರಿಯೆನಿಸಿ ದೊಡ್ಡಣ್ಣನ ಹಾದಿಯನ್ನು ಹಿಡಿಯುವಲ್ಲಿದೆ. ಇವೆಲ್ಲವೂ ಪಾಲಕರ ಹ್ರಸ್ವದೃಷ್ಟಿಯ ಫಲಗಳಾಗಿವೆ. ಇದರಿಂದ ದೇಶದ ಪ್ರಜೆ ಧನ, ಸಂಪತ್ತು, ಆಸ್ತಿಗಳನ್ನು ಕಳೆದುಕೊಳ್ಳುವುದಲ್ಲದೇ ಅವರ ಮಾನಸಿಕ ಸ್ವಾಂತತ್ರ್ಯವನ್ನು ಸಹ ಕಳೆದುಕೊಂಡದ್ದು ಕಾಣುತ್ತದೆ.
ಒಮ್ಮೊಮ್ಮೆ ದೇಶದ ಭಾರೀ ಸಂಪನ್ಮೂಲಗಳು ಸಹ ಆಡಳಿತಗಾರರನ್ನು ತಪ್ಪು ಹಾದಿ ಹಿಡಿಸುತ್ತವೆ. ದಕ್ಷಿಣ ಅಮೆರಿಕಾದ ವೆನೆಜುವೆಲಾ ದೇಶ ಇದಕ್ಕೆ ಹೊಂದುವ ಉದಾಹರಣೆ ಎನ್ನಬಹುದು. ಆ ದೇಶದಲ್ಲಿ ಭಾರೀ ಪ್ರಮಾಣದಲ್ಲಿ ಪೆಟ್ರೋಲಿಯಂನ ನಿಧಿಗಳಿದ್ದವು. ಬಗೆದು ತೆಗೆದಷ್ಟೂ ಹಣ ದೇಶಕ್ಕೆ. ಅದನ್ನು ಕಂಡ ಅಂದಿನ ದೇಶದ ಅಧ್ಯಕ್ಷರು ದೇಶದ ಪ್ರಜೆಗಳಿಗೆ ಎಲ್ಲವನ್ನೂ ಬಿಟ್ಟಿಯಾಗಿ ಬಿಟ್ಟುಕೊಟ್ಟರು. ಯಾವುದಕ್ಕೂ ಏನೂ ಕೊಡಬೇಕಾಗಿರಲಿಲ್ಲ. ವಿದ್ಯುತ್, ನೀರು, ವಾಹನಗಳಿಗೆ ಇಂಧನ, ತರಕಾರಿ, ಪಡಿತರ ಎಲ್ಲ ಫ್ರೀ. ಪ್ರಜೆಗಳು ಅದ್ಗ್ಯಕ್ಷರನ್ನು ಹಾಡಿ ಹೊಗಳಿದರು. ದೇವರ ಪ್ರತಿರೂಪ ಎಂದರು. ಕೆಲ ವರ್ಷಗಳು ಹೀಗೇ ನಡೆಯಿತು. ಕೊಳವೆ ಬಾವಿಗಳಲ್ಲಿಯ ತೈಲ ನಿಧಿಗಳು ಕುಗ್ಗುತ್ತ ಬಂದವು. ದೇಶಕ್ಕೆ ಬರುವ ಆದಾಯ ಕಡಿತಗೊಳ್ಳ ತೊಡಗಿತು. ಆಗ ಅಧ್ಯಕ್ಷರಾದರೂ ಏನು ಮಾಡಿಯಾರು? ಕೆಲ ಕಂದಾಯಗಳು, ಸುಂಕಗಳು ಹೇರಲಾರಂಭಿಸಿದರು. ಅಲ್ಲಿಯವರೆಗೆ ಬಿಟ್ಟಿ ಊಟಕ್ಕೆ ಅಭ್ಯಾಸವಾಗಿರುವ ದೇಶದ ಪ್ರಜೆ ದಂಗೆದ್ದಿತು. ಇದು ಸಹ ಆಡಳಿತದ ಹ್ರಸ್ವದೃಷ್ಟಿಯ ಉದಾಹರಣೆ ಎನ್ನಬಹುದು.
ಇವೆಲ್ಲವೂ ರಾಜರ ಅಥವಾ ನಮ್ಮ ಆಡಳಿತಗಾರರ ದುರಾಡಳಿತ ಅಥವಾ ಮುನ್ನೋಟವಿಲ್ಲದ ಸರ್ಕಾರ ನಡೆಸುವ ವಿಧಾನದ ಫಲಗಳೇ. ಇದರಲ್ಲಿ ಪ್ರಜೆಗಳ ಹಸ್ತಕ್ಷೇಪವಿರುವುದಿಲ್ಲ. ಅವರು ನೇರವಾಗಿ ಕಷ್ಟಗಳನ್ನು ತಂದುಕೊಂಡಿರುವುದಿಲ್ಲ. ಆದರೆ ವ್ಯಥೆಗೊಳಗಾಗುವುದು ಅವರೇ. ಅದಕ್ಕೇ ದೇವರಲ್ಲಿ ಇತರೆ ಪೀಡೆಗಳಾದ ಚೋರ, ವ್ಯಾಘ್ರ, ಸರ್ಪ, ನಕ್ರಗಳ ಜೊತೆಗೆ ರಾಜನ ಕಾಟವೂ ಇರದಂತೆ ಮಾಡು ಸ್ವಾಮೀ ಎಂದು ಬೇಡಿಕೂಳ್ಳುವುದು ಸರಿಯೇ ಅಲ್ಲವೇ ?
Dear Ramesh ….
Your analytical mind is sparkling…the totality of the analysis, the accuracy and precision both are concurrent . The inferences drawn are flawless and leading to corrective thoughts It is very very opt to the present times . ಸಂತಾನ ಸಂಪತ್ ಪರಿಶುದ್ಧ ಭಕ್ತಿ ವಿಜ್ಞಾನ ವಾಗ್ದೆ ಹಸು ಪಾಠವಾದೀನ್.. ತತ್ವಾ ಶರೀರೋತ್ತ ಸಮಸ್ತ ದೋಷಾನ್ ಹತ್ವಾಸನೋವ್ಯಾದ್ಗುರುರಾಘವೇಂದ್ರ…
Gopinath Hubli Bangalore
ಧನ್ಯವಾದ ಗೋಪಿ.
ಬೆಳಗ್ಗಿನ ಸ್ತೋತ್ರದ ಸರ್ವಕಾಲೀನತೆ ಮತ್ತು ಸಾರ್ವತ್ರಿಕತೆಯನ್ನು crystal clear ಆದ ವಿಶ್ಲೇಷಣೆ ಯೊಂದಿಗೆ ಪರಿಣಾಮಕಾರಿಯಾಗಿ ಸಾರಿದ್ದೀರಿ. ನಿಮ್ಮ ಬರಹದ ಆಳಕ್ಕೆ ದಂಗಾದೆ. ನಿಮಗೆ ನಮೋ ನಮಃ
ಇನ್ನೂ ಇಂತಹ ಲೇಖನಗಳು ನಿಮ್ಮ ಲೇಖನಿಯಿಂದ ಹೊರಹೊಮ್ಮಲಿ ಎಂದು ಆಶಿಸುತ್ತೇನೆ. ಆ ಸ್ತೋತ್ರವು ಅಂತವ ರಿಂದ ನಮ್ಮೆಲ್ಲರನ್ನು ರಕ್ಷಿಸಲಿ.
.
ಧನ್ಯವಾದ ಸ್ನೇಹಿತರೇ!