ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಮಂಜುಳಾ ಡಿ. ಅವರ ಮೂರು ಕೃತಿಗಳ ಲೋಕಾರ್ಪಣೆ


ಬೆಂಗಳೂರು: ಬೆಳಗಿನಿಂದಲೇ ಹಿಡಿದಿದ್ದ ಜಿಟಿಜಿಟಿ ಮಳೆಯ ನಡುವೆಯೂ, ಮನಸ್ಸಿಗೆ ಮುದ ನೀಡಿದ ಮೂರು ಪುಸ್ತಕಗಳ ಲೋಕಾರ್ಪಣೆಯ ಕಾರ್ಯಕ್ರಮ. ತೇಜು ಪಬ್ಲಿಕೇಷನ್ಸ್ ಮತ್ತು ನ್ಯೂ ವೇವ್ ಪಬ್ಲಿಕೇಷನ್ ವತಿಯಿಂದ, ಕವಯಿತ್ರಿ ಹಾಗೂ ಅಂಕಣ ಬರಹಗಾರ್ತಿಯಾದ ಶ್ರೀಮತಿ. ದಿ. ಮಂಜುಳಾರವರ ಪವಿತ್ರ ಪ್ರವಾಹ ಮತ್ತು ಭೇಟಿಯಾಗದ ಭೇಟಿಗಳು ಎನ್ನುವ ಎರಡು ಕವನ ಸಂಕಲನಗಳು ಹಾಗೂ ಕೇದಿಗೆ ಗರಿ ಎನ್ನುವ ಅಂಕಣ ಬರಹಗಳ ಸಂಕಲನವು, ಸುಚಿತ್ರ ಸಿನೆಮಾ ಮತ್ತು ಸಾಂಸ್ಕೃತಿಕ ಅಕ್ಯಾಡೆಮಿಯ ನಾಣಿ ಅಂಗಳದಲ್ಲಿ ಲೋಕಾರ್ಪಣೆಗೊಂಡವು.

ಸಂಗೀತ ವಿದುಷಿ ಅನುರಾಧಾ ಆನಂದ್‍ರವರ ಸುಶ್ರಾವ್ಯವಾದ ಪ್ರಾರ್ಥನಾ ಗೀತೆಯೊಂದಿಗೆ ಆರಂಭವಾದ ಕಾರ್ಯಕ್ರಮದ ಅಧ್ಯಕ್ಷತೆಯನ್ನು, ಪ್ರಖ್ಯಾತ ಹಾಸ್ಯ ಲೇಖಕರಾದ ಶ್ರೀ. ಅಣಕು ರಾಮನಾಥ್ ವಹಿಸಿದ್ದರು. ಪವಿತ್ರ ಪ್ರವಾಹ ಕವನ ಸಂಕಲನವನ್ನು ಕುರಿತು ಕಿರುತೆರೆ ಸಂಭಾಷಣಕಾರ ಶ್ರೀ. ಅಭಿರುಚಿ ಚಂದ್ರುರವರು ಮಾತನಾಡಿ, ಮಂಜುಳಾರವರು ಕನ್ನಡದ ಗಟ್ಟಿ ಕವಿಗಳ ಸಾಲಿನಲ್ಲಿ ನಿಲ್ಲಬಲ್ಲವರು ಎಂದರು.

ಪ್ರಖ್ಯಾತ ಹಾಸ್ಯ ಲೇಖಕರಾದ ಶ್ರೀಮತಿ. ಭುವನೇಶ್ವರಿ ಹೆಗಡೆಯವರು ಮಂಜುಳಾರವರ ಅಂಕಣ ಬರಹಗಳ ಸಂಕಲನ ಕೇದಿಗೆ ಗರಿ ಕುರಿತು ಮಾತನಾಡುತ್ತಾ, ಅಂಕಣ ಬರಹಗಳಲ್ಲೂ ಮಂಜುಳಾರವರ ಸೂಕ್ಷ್ಮ ಸಂವೇದನೆಯ ಕವಿಮನಸ್ಸು ಕೆಲಸ ಮಾಡಿರುವುದು ಸ್ಪಷ್ಟವಾಗಿ ಕಾಣಿಸುತ್ತದೆ ಎಂದರು.

ಭೇಟಿಯಾಗದ ಭೇಟಿಗಳು ಕವನ ಸಂಕಲನವನ್ನು ಕುರಿತು ಕವಿ ಶ್ರೀ. ವಾಸುದೇವ ನಾಡಿಗ್ ಮಾತನಾಡಿ, ಇಲ್ಲಿ ಮಂಜುಳಾರವರು ಕವನಗಳನ್ನು ಹೊಸ ಚೌಕಟ್ಟಿನಲ್ಲಿ ಅಭಿವ್ಯಕ್ತಿಗೊಳಿಸುವ ಮೂಲಕ, ಹೊಸ ದಾರಿ ತೋರಿಸಿದ್ದಾರೆ ಎಂದು ಹೇಳಿದರು. ಮಂಜುಳಾರವರ ಕಾವ್ಯ ಹೇಗೆ ಯಾವುಯಾವುದೋ ಸುಮಧುರ ನೆನಪುಗಳನ್ನು ತರುವಂತಿದೆ ಎಂದು ಅಧ್ಯಕ್ಷ ಶ್ರೀ. ಅಣಕು ರಾಮನಾಥ್ ವಿವರಿಸಿದರಲ್ಲದೆ, ಹಲವು ಮಧುಮಧುರ ಹಿಂದಿ ಚಿತ್ರಗೀತೆಗಳನ್ನೂ ಪ್ರೇಕ್ಷಕರಿಗೆ ನೆನಪಿಸುವುದರ ಮೂಲಕ ಹೊರಗಿನ ಮಳೆ ಮತ್ತು ಒಳಗಿನ ಚಳಿಯಲ್ಲೂ ಪುಳಕ ಹುಟ್ಟಿಸಿದರು. ಖ್ಯಾತ ಹಾಸ್ಯ ಭಾಷಣಕಾರರಾದ ಶ್ರೀ. ಅಚ್ಯುತರಾವ್ ಪದಕಿಯವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು.

ಲೇಖಕರು ಶ್ರೀಮತಿ ಮಂಜುಳಾ ಡಿ.