- ಮತ್ತೆ ಮತ್ತೆ ರಾಗಿಗುಡ್ಡ - ನವೆಂಬರ್ 1, 2020
ಇನ್ ಮೇಲೆ ನನ್ನನ್ನು ರಾಗಿಗುಡ್ಡ ದೇವಸ್ಥಾನದಲ್ಲಿ ಸೇರಿಸ್ಕೊಳಲ್ಲ ಅನ್ಸುತ್ತೆ!!
ಕೆಲ ದಿನಗಳ ಹಿಂದೆ ಶನಿವಾರ ರಾಗಿಗುಡ್ಡ ದೇವಸ್ಥಾನಕ್ಕೆ ಹೋದಾಗ ಒಂದು ಘಟನೆ ನಡೆಯಿತು.
ನಾನು ಅಷ್ಟೇನೂ ಕಡುಸಂಪ್ರದಾಯನಿಷ್ಟ ಅಲ್ಲದಿದ್ದರೂ ನನಗೆ ದೇವಸ್ಥಾನಗಳೆಂದರೆ ಒಂಥರಾ ಖುಷಿ! ಅದೇನೋ ಧನಾತ್ಮಕ ಶಕ್ತಿಯ ಅನುಭವ ಆಗುತ್ತೆ. ಇನ್ನೂ ಜಾಸ್ತಿ ಖುಷಿಯ ವಿಷಯ ಎನಂದ್ರೆ ಬೆಂಗಳೂರಿನ ಮಂದಿರಗಳನ್ನು ಬಹಳ ಚೆನ್ನಾಗಿ ನಿರ್ವಹಿಸುತ್ತಾರೆ! ಧನಾತ್ಮಕ ಶಕ್ತಿಯ ಜೊತೆ ರುಚಿಯ ಅನುಗ್ರಹವೂ ಆಗುತ್ತೆ!
ನನಗೆ ಚಿಕ್ಕಂದಿನಿಂದಲೂ ದೇವಸ್ಥಾನಗಳಲ್ಲಿ ಈ ಕೋರಸ್ನಲ್ಲಿ ಸಂಸ್ಕೃತ ಮಂತ್ರಗಳನ್ನ ಹೇಳ್ತಾ ದೇವರಿಗೆ ಅಭಿಷೇಕ ಮಾಡ್ತಾರಲ್ಲ, ಅದೆಂದರೆ ಎನೋ ಸೆಳೆತ! ದೇವರನ್ನ ಸ್ತುತಿಸಿ, ಹೊಗಳಿ ಹೇಳುವ ಆ ಪದಗಳನ್ನ ಸ್ವತಃ ದೇವರುಗಳೇ ಎಷ್ಟು ಖುಷಿ ಪಡ್ತಾರೋ ಗೊತ್ತಿಲ್ಲ, ಆದ್ರೆ ನಾನಂತೂ ಫುಲ್ ಖುಷಿ ಪಡ್ತೀನಿ! ನಾನೇನಾದ್ರೂ ದೇವರಾಗಿದ್ದರೆ ಈ ಮುದ್ದಾದ ಮಂತ್ರಗಳನ್ನ ಹೇಳಿದವ್ರಿಗೆಲ್ಲ ಟಕ-ಟಕಾ ಅಂಥಾ ವರ ಕೊಟ್ಟಬಿಡ್ತಿದ್ದೆ! 😉
ಆದರೆ, ನನ್ನ ಈ ದೇವಸ್ಥಾನದ ಪ್ರೀತಿಗೆ ಇನ್ನೊಂದು ವಿಶೇಷ ಕಾರಣ ಇದೆ. ಅದು ಫುಲ್ ಟಾಪ್ ಸೀಕ್ರೆಟ್ ! ನೀವು ಯಾರಿಗೂ ಹೇಳೊಲ್ಲ ಅಂಥಾ ಪ್ರಾಮಿಸ್ ಮಾಡಿದಿರಿ ಅನ್ಕೊಂಡು ಹೇಳ್ತಾ ಇದ್ದೀನಿ 😉
ಅದುವೇ ದೇವಸ್ಥಾನಗಳ “ಪ್ರಸಾದ”! ನಾನು ಯಾವಾಗಲೂ ಹೇಳುವ ಹಾಗೆ ಅದರಲ್ಲೇನೋ ಜಾದೂ ಇರುತ್ತೆ! “ಭಕ್ತಿ”, “ಪ್ರೀತಿ”, “ಆಶೀರ್ವಾದ”ಗಳ ಒಗ್ಗರಣೆ ಇರುತ್ತೆ!
ಎಷ್ಟೋ ಸಲ ದೇವರನ್ನೂ ನೋಡದೇ, ಕೈಯನ್ನೂ ಮುಗಿಯದೇ ಸೀದಾ ಪ್ರಸಾದ ಕೊಡುವ ಕ್ಯೂನಲ್ಲಿ ನಿಂತಿದ್ದೂ ಇದೆ! ಅದಕ್ಕೇ ಹೇಳಿದ್ದು ಈ ಸೀಕ್ರೆಟನ್ನ ಯಾರಿಗೂ ಹೇಳ್ಬೇಡಿ ಅಂಥಾ!
ಹಾ, ಅದೇ ಮೊನ್ನೆ ಘಟನೆ ಆಯ್ತು ಅಂಥಾ ಹೇಳ್ದೆ ಅಲ್ಲಾ…ಏನಾಯ್ತು ಅಂದ್ರೆ, ಮಗಳ ಜೊತೆ ದೇವಸ್ಥಾನಕ್ಕೆ ಹೋಗಿದ್ದೆ. ಪ್ರತಿ ಸಲದ ಹಾಗೆ, ಸೀದಾ ಪ್ರಸಾದ ಲೈನ್ ಗೆ ಹೋಗಿ ಪುಳಿಯೋಗರೆ ತಿಂದಿದ್ದಾಯ್ತು. ನಾವು ಮಾಡೋದನ್ನೇ ಮಕ್ಕಳು ಅನುಕರಣೆ ಮಾಡುತ್ತವಂತೆ. ಈ ನನ್ನ ಪ್ರಸಾದದ ಆಸೆಯಿಂದ “ಮೊದಲು ಪ್ರಸಾದ ತಗೊಂಡು ಆಮೇಲೆ ದೇವರಿಗೆ ಕೈ ಮುಗಿಯೋದೇ ಸರಿಯಾದ ಕ್ರಮ” ಅನ್ಕೊಂಡ್ ಬಿಟ್ಟಿದ್ದಾಳೆ! ಜೊತೆಗೆ ಯಾರಾದ್ರೂ ಇದ್ರೆ ಏನ್ ಅನ್ನಕೋಳಲ್ಲ ಹೇಳಿ! ಅವಳಾ…ನಮ್ಮ ಅಪ್ಪಾನೇ ಹೇಳ್ಕೊಟ್ಟಿದ್ದು ಅಂಥಾ ಹೇಳಿ ನನ್ನ ಒಳ್ಳೆ ಪೇಚಿಗೆ ಸಿಗಿಸ್ತಾಳೆ!
ಪ್ರಸಾದ ತಗೊಂಡ್ ಆದ್ಮೇಲೆ “ನಾನ್ ಇಲ್ಲೇ ಕೂತ್ಕೋತೀನಿ, ನೀನು ಬೆಟ್ಟ ಹತ್ತಿ ದೇವ್ರಿಗೆ ನಮಸ್ಕಾರ ಮಾಡಿ ಬಾ” ಅಂಥಾ ಹೇಳ್ದೆ. ನಾನು ಆವಾಗೀವಾಗ ಹಾಗೆ ಮಾಡೋದ್ರಿಂದ ಅವ್ಳಿಗೆ ಅದು ರೂಢಿಯಾಗಿದೆ. ಸರಿ ಅಂಥಾ ಅವ್ಳು ಬೆಟ್ಟಕ್ಕೆ ಹೋದ್ಲು. ನಾನು ಅದೇ ಗ್ಯಾಪ್ಅಲ್ಲಿ ಇನ್ನೊಂದ್ ಸಾರಿ ಪ್ರಸಾದ ಲೈನ್ ಗೆ ಸರದಿಯಲ್ಲಿ ನಿಂತೆ!
ನಾನು ಎರಡನೇ ಸಾರಿ ಪ್ರಸಾದ ತಗೊಂಡು ಬರೋವಾಗ ಅಲ್ಲೇ ಕುಳಿತಿದ್ದ ಸ್ವಾಮಿಗಳೊಬ್ಬರು ನನ್ನ ಕಡೆ ಕೈ ಮಾಡಿ ಕರೆದರು. ನಾನು ನನಗಲ್ಲಾ ಅನ್ಕೊಂಡು ನಿರ್ಲಕ್ಷ ಮಾಡಿದೆ. “ನೀನೇನಪ್ಪಾ, ಬಾ ಇಲ್ಲಿ” ಅಂದ್ರು. ನಾನು ಎರಡೆರಡು ಸಾರಿ ಪ್ರಸಾದ ತಗೋಳೋದನ್ನ ಎಲ್ಲಿ ನೋಡ್ ಬಿಟ್ಟರಾ…ಸಿಕ್ಕಾಕೊಂಡ್ ಬಿಟ್ಟನಾ ಅಂಥಾ ಎದೆ ಝಲ್ ಅಂದ್ ಬಿಟ್ಟಿತು!!
ಹಿರಿಯರು ಬೇರೆ, ಅದರಲ್ಲೂ ಸ್ವಾಮೀಜಿಗಳು ಬೇರೆ…ಕರೀತಾ ಇದಾರೆ ಅಂದ್ರೆ ಹೋಗ್ಲೇ ಬೇಕಾಯ್ತು. ಸ್ವಲ್ಪ ನಯ-ವಿನಯದ ಮುಖ ಮಾಡ್ಕೊಂಡು ಏನೂ ಗೊತ್ತಿಲ್ದೇ ಇರೋ ತರಹ ಹೋದೆ!
ಪಕ್ಕದಲ್ಲಿ ಕೂರಿಸ್ಕೊಂಡು ನನ್ನ ಬಗ್ಗೆ ಕೇಳಿ, ಮಾತು ಶುರು ಮಾಡಿದ್ರು. “ಪ್ರಸಾದ ಅನ್ನೋದು ಭಕ್ತನಿಗೂ ದೇವರಿಗೂ ನಡುವೆ ಇರುವ ಒಂದು ಸಿಹಿಯಾದ ಕೊಂಡಿ ಇದ್ದಂಗೆ. ಪ್ರಸಾದ ಸಿಗೋಕೂ ಪುಣ್ಯ ಮಾಡಿರ್ಬೇಕು. ನೀನಿವತ್ತು ಪುಣ್ಯವಂತ! ನಿನ್ನ ಕೈಯಲ್ಲಿ ಸಾಕ್ಷಾತ್ ಅನ್ನಪೂರ್ಣೆಯೇ ನೆಲೆಸಿದ್ದಾಳೆ ನೋಡು” ಅಂಥಾ ಹೇಳಿದಾಗ ನಾನು ನನ್ನ ಕೈ ನೋಡ್ಕೊಂಡೆ. ಘಮ್ ಅಂಥಾ ಪುಳಿಯೋಗರೆ ಸುವಾಸನೆ ಬರ್ತಾ ಇತ್ತು 🙂
ನನ್ನ ತಲೆ ಮೇಲೆ ಕೈ ಸವರಿ, “ನನಗೊಂದು ಸಹಾಯ ಮಾಡಪ್ಪಾ” ಅಂದ್ರು. ನಾನು “ಧಾರಾಳವಾಗಿ ಸ್ವಾಮೀಜಿ, ಏನು ಹೇಳಿ” ಅಂದೇ. “ಅಲ್ಲಿ ಕ್ಯೂ ನಲ್ಲಿ ಹೋಗಿ ನನಗೊಂದ್ ಸ್ವಲ್ಪ ಪ್ರಸಾದ ತಗೊಂಡ್ ಬಾರಪ್ಪ” ಅಂದ್ರು!
ಅಯ್ಯೋ ದೇವ್ರೇ, “ಆಗ್ಲೇ ಎರಡು ಸಾರಿ ಪ್ರಸಾದ ತಗೊಂಡಿರೋ ನನ್ನ ಮೇಲೆ ಎಷ್ಟು ಪ್ರೀತಿಯಪ್ಪ ನಿನಗೆ ! ಒಳ್ಳೆ ಪೇಚಿಗೆ ಸಿಕ್ಕಿಸಿಬಿಟ್ಟೆಯಲ್ಲ ನನ್ನ ” ಅನ್ಕೊಂಡು ಮೂರನೇ ಸಾರಿ ಕ್ಯೂನಲ್ಲಿ ಹೋಗಿ ನಿಂತ್ಕೊಂಡೆ!! ಎಂತಾ ಮುಜುಗರದ ಸಂಗತಿ!!
ನಾನು ಮತ್ತೊಮ್ಮೆ ಕ್ಯೂನಲ್ಲಿ ನಿಂತಿರೋದನ್ನ ಮಗಳು ನೋಡಿ, “ಅಪ್ಪ, 2-2 ಟೈಮ್ಸ್? ಶೇಮ್ ಶೇಮ್” ಅಂದ್ಲು. ಅವಳು ಎರಡನೇ ಬಾರಿ ಅನ್ಕೊಂಡಿದ್ಲು…ಮೂರನೇ ಬಾರಿ ಅಂಥಾ ಗೊತ್ತಾಗಿದ್ರೆ ಮೈಕ್ ನಲ್ಲೇ ಘೋಷಿಸಿರೋಳು ಎನೋ!!
ಮೂರ್ ಮೂರ್ ಸಾರಿ ಪ್ರಸಾದ ಸರದಿಯಲ್ಲಿ ನಿಂತಿರೋದನ್ನ ಸಿಸಿಟಿವಿ ರೆಕಾರ್ಡ್ ಅಲ್ಲಿಏನಾದ್ರು ನೋಡಿ, ಈ ಬಸ್-ಸ್ಟಾಂಡ್, ರೈಲ್ವೆ-ಸ್ಟೇಷನ್ ಗಳಲ್ಲಿ “ಜೇಬು ಕಳ್ಳರಿದ್ದಾರೆ” ಅಂಥಾ ಹಾಕಿರ್ತಾರಲ್ಲ, ಹಾಗೆ ದೇವಸ್ಥಾನದಲ್ಲಿ ನನ್ನ ಫೋಟೋ ಹಾಕಿ “ಪ್ರಸಾದ ಕಳ್ಳರಿದ್ದಾರೆ” ಅಂಥಾ ಹಾಕ್ತಾರೆ ಅನ್ನೋ ಭಯ ಶುರುವಾಗಿದೆ ನನಗೆ!!
“ದೇವರು ಪ್ರಸಾದದ ರೂಪದಲ್ಲಿ ಹಸಿದವನಿಗೆ ಸಿಗುತ್ತಾನಂತೆ”; ಕೆಲವೊಮ್ಮೆ ಮೂರು ಮೂರು ಬಾರಿ….. ಜೈ ಆಂಜನೇಯ!
ಹೆಚ್ಚಿನ ಬರಹಗಳಿಗಾಗಿ
ನಂಬಿಕೆಯ ವರ್ಷಧಾರೆ
ನಮ್ಮಲ್ಲೇ ಇಹುದೇ ನಮ್ಮ ಸುಖ!
ಹುಚ್ಚು ಅಚ್ಚುಮೆಚ್ಚಾದಾಗ