ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

"....ಮಾನವ ಹದ್ದು ಮೀರಿದ ಹದ್ದು..." ನೀವು ಕೇಳದ, ಕಾಣದ ಮನುಕುಲದ ಕ್ರೂರ ಅಟ್ಟಹಾಸದ ಲೆಕ್ಕ ಕೊಟ್ಟು ಬರೆದ ವಿಶ್ವಾಸ್ ಭಾರದ್ವಾಜ್, ಮನುಕುಲದ ಮುಖಕ್ಕೆ ಕನ್ನಡಿ ಹಿಡಿದಿದ್ದು ಹೀಗೆ...
ವಿಶ್ವಾಸ್ ಭಾರದ್ವಾಜ್
ಇತ್ತೀಚಿನ ಬರಹಗಳು: ವಿಶ್ವಾಸ್ ಭಾರದ್ವಾಜ್ (ಎಲ್ಲವನ್ನು ಓದಿ)

ಕ್ರೂರ ಮನುಷ್ಯ ಸ್ವಾರ್ಥಕ್ಕೆ ಸೃಷ್ಟಿಯ ಅಸಂಖ್ಯ ಜೀವ ವೈವಿಧ್ಯತೆಯ ಮಾರಣಹೋಮ; ಈ ಜೀವಗಳು ಉಳಿಯಬೇಕಿದ್ದರೆ ಮನುಷ್ಯನೇ ನಾಶವಾಗಬೇಕೇನೋ!:

ವಿಶ್ವಾಸ್ ಭಾರದ್ವಾಜ್, ಲೇಖಕ, ಪತ್ರಕರ್ತ

ಜಗತ್ತಿನ ಒಟ್ಟು ಜೀವರಾಶಿಗಳ ಪ್ರಮಾಣದಲ್ಲಿ ಸರಿಸುಮಾರು ಅರ್ಧದಷ್ಟು ಜೀವಿಗಳು ಕಳೆದ 40 ವರ್ಷಗಳಲ್ಲಿ ನಾಶ ಹೊಂದಿವೆ. ಇದಕ್ಕೆ ನೇರ ಕಾರಣ ಮನುಷ್ಯನ ಹಸಿವು, ಸ್ವಾರ್ಥ, ಮೋಜು, ಜಾಗತೀಕರಣದ ಮಾಂಸ ದಂಧೆ, ಕಾನೂನು ಬಾಹಿರ ಬ್ಲಾಕ್ ಮಾರ್ಕೆಟ್ ಮತ್ತು ವೈಲ್ಡ್ ಟ್ರೇಡ್, ಕಲುಷಿತ ಗಾಳಿ, ನೀರು ಮತ್ತು ವಾತಾವರಣ, ಕಾಡಿನ ಬೆಂಕಿ, ಆವಾಸ ಸ್ಥಾನಗಳ ನಾಶ, ಡ್ಯಾಂ ನಿರ್ಮಾಣ, ಕೈಗಾರಿಕಾಭಿವೃದ್ಧಿ ಮತ್ತು ಅರಣ್ಯನಾಶ. ಮುಂದಿನ 10 ವರ್ಷಗಳಲ್ಲಿ ಹೀಗೆಯೇ ನಾಶವಾಗುವ ಅಳಿವಿನಂಚಿನಲ್ಲಿರುವ ಜೀವಪ್ರಭೇಧಗಳ ಸಂಖ್ಯೆಯೂ ಗಾಬರಿ ಹುಟ್ಟಿಸುವಂತಿದೆ. ಹೀಗಂತ ದಿ ಗಾರ್ಡಿಯನ್ ಸೇರಿದಂತೆ ಜಗತ್ತಿನ ಮುಖ್ಯ ಸುದ್ದಿ ವಾಹಿನಿಗಳು ಐಯುಸಿಎನ್ (ಇಂಟರ್ ನ್ಯಾಷನಲ್ ಯೂನಿಯನ್ ಆಫ್ ಕನ್ಸರ್ವೇಷನ್ ಆಫ್ ನೇಚರ್) ವರದಿಯನ್ವಯ ಎಚ್ಚರಿಕೆ ಕೊಟ್ಟು 6 ವರ್ಷಗಳ ಮೇಲಾಯಿತು. ಈ ಆರು ವರ್ಷಗಳಲ್ಲಿ ವೈಲ್ಡ್ ಟ್ರೇಡ್, ಅರಣ್ಯ ಜೀವಿಗಳ ಮಾಂಸ ಭಕ್ಷಣೆ, ವ್ಯಾಪಕ ಅರಣ್ಯ ನಾಶ, ಸಮುದ್ರ, ನದಿ ಮತ್ತು ಕಾಡುಗಳ ಜೈವಿಕ ಪೂರಕ ಪರಿಸರ ನಾಶದ ಕಾರಣದಿಂದ ಸತ್ತ ಜೀವಿಗಳ ಸಂಖ್ಯೆ ಲಕ್ಷಗಳಲ್ಲಿ ಅಲ್ಲ, ಕೋಟಿಗಳನ್ನು ಮುಟ್ಟಿ ಸಾಗುತ್ತದೆ.

ಲೀವಿಂಗ್ ಪ್ಲಾನೆಟ್ ಇಂಡೆಕ್ಸ್ ಪ್ರಕಾರ ಗುರುತು ಹಚ್ಚಲಾಗಿರುವ ಸುಮಾರು 45 ಸಾವಿರ ಕಶೇರುಕಗಳಿವೆ, ಇವುಗಳನ್ನು ಸೇರಿಸಿ ಒಟ್ಟು ಜೀವ ವೈವಿಧ್ಯಗಳ ಪಟ್ಟಿಯಲ್ಲಿ ಬರೋಬ್ಬರಿ 10 ಸಾವಿರ ಜೀವಿಗಳು ಈಗಾಗಲೇ ನಾಶ ಹೊಂದಿವೆ. ವಾತಾವರಣದಲ್ಲಿ ಹೆಚ್ಚುತ್ತಿರುವ ಕಾರ್ಬನ್ ಡೈ ಆಕ್ಸೈಡ್ (ಇಂಗಾಲ)ದ ಪ್ರಮಾಣ ಸೂಕ್ಷ್ಮ ಜೀವಕೋಶಗಳನ್ನು ಹೊಂದಿರುವ ಜಲಚರ ಮತ್ತು ಹಕ್ಕಿಗಳ ಅವಸಾನ ಹೆಚ್ಚಿಸುತ್ತಿದೆ. ಭೂಮಿಯ ಮೇಲಿನ ಕಲುಷಿತ ವಿಷ ನದಿ, ಸರೋವರ, ಸಮುದ್ರಗಳನ್ನು ಸೇರಿ ಅಸಂಖ್ಯ ಜಲಚರಗಳ ಬದುಕನ್ನೇ ಸರ್ವನಾಶ ಮಾಡುತ್ತಿದೆ.

1970ರಿಂದೀಚೆಗೆ ಸಿಹಿನೀರಿನ ಜಲಚರಗಳ ಸಂಖ್ಯೆಯಲ್ಲಿ ಶೇ.75ರಷ್ಟು ಕುಸಿತ ಕಂಡಿದೆ. ಗಾಳ ಹಾಕಿ, ಬಲೆ ಬೀಸಿ ಮೀನು ಹಿಡಿಯುವ ಸಂದರ್ಭಕ್ಕಿಂತ ಯಂತ್ರದ ಸಹಾಯದಿಂದ ಮೀನುಗಾರಿಕೆ ನಡೆಸುವುದು ಜಲಪರಿಸರದ ಜೀವಿಗಳ ಪಾಲಿಗೆ ಮರಣಶಾಸನವಾಗಿ ಪರಿಣಮಿಸಿದೆ. ವಿಶ್ವದಲ್ಲಿ 15 ಮೀಟರ್ ಮತ್ತು ಅದಕ್ಕಿಂತ ಎತ್ತರದ ಸರಿಸುಮಾರು 45 ಸಾವಿರ ಡ್ಯಾಂಗಳಿವೆ. ಈ ಡ್ಯಾಂಗಳ ನಿರ್ಮಾಣದಿಂದ ಒಂದು ಕಡೆ ವ್ಯಾಪಕವಾಗಿ ಅರಣ್ಯಗಳ ಮುಳುಗಡೆಯಾಗುತ್ತಿದ್ದರೆ, ಇನ್ನೊಂದು ಕಡೆ ಸಿಹಿನೀರಿನ ಸಹಜ ಪರಿಸರಕ್ಕೂ ಧಕ್ಕೆಯಾಗುತ್ತಿದೆ ಎಂದು ಐದಾರು ವರ್ಷಗಳ ಹಿಂದೆಯೇ ಡಬ್ಲ್ಯೂ ಡಬ್ಲ್ಯೂ ಎಫ್ (ವರ್ಲ್ಡ್ ವೈಲ್ಡ್ ಲೈಫ್ ಫಂಡ್) ಆತಂಕ ವ್ಯಕ್ತಪಡಿಸಿತ್ತು. ಇದರಿಂದ ಮೊದಲು ಹಾನಿಗೊಳಗಾಗಿದ್ದು ಅಮೇರಿಕಾದಲ್ಲಿ ಯುರೋಪಿಯನ್ ಈಲ್, ಹೆಲ್ ಬೆಂಡರ್, ಸಾಲಮಂಡರ್ ನಂತಹ ಹಾವು ಮೀನುಗಳು ಮತ್ತು ಇಂಗ್ಲೆಂಡಿನಲ್ಲಿ ಒಟ್ಟರ್ಸ್ ಎಂಬ ಪ್ರಭೇದದ ಸೀಲ್ ಅಥವಾ ನೀರುನಾಯಿಗಳು. ಆದರೆ ಆಶ್ಚರ್ಯಕರ ರೀತಿಯಲ್ಲಿ ಯುರೋಪಿಯನ್ ಈಲ್, ಹೆಲ್ ಬೆಂಡರ್, ಸಾಲಮಂಡರ್ ಗಳು ಬದುಕಿಕೊಂಡವು, ವಿಶ್ವ ಪ್ರಾಣಿಪ್ರಿಯರ ಒತ್ತಾಸೆಯ ಪ್ರಯತ್ನದಿಂದ ಒಟ್ಟರ್ಸ್ ಗಳ ಸಂಖ್ಯೆಯೂ ಹೆಚ್ಚಾಯಿತು. ಆದರೆ ಉಳಿದ ಅಳಿದು ಹೋದ ಮತ್ತು ಕುಟುಕು ಜೀವ ಹಿಡಿದುಕೊಂಡ ಜಲಚರಗಳು ನಿಜಕ್ಕೂ ನತದೃಷ್ಟ ಜೀವಿಗಳು.

ಸಮುದ್ರ ವಾತಾವರಣದ ಜೀವಿಗಳೂ ಕಳೆದ ಇಪ್ಪತ್ತು ಮೂವತ್ತು ವರ್ಷಗಳಲ್ಲಿ ಶೇ.40ರಷ್ಟು ಕುಸಿತ ಕಂಡಿವೆ. ಮೀನುಗಾರಿಕೆಯ ಬಲೆಯಲ್ಲಿ ಸಿಕ್ಕಿ ಬೀಳುವ ಅಪರೂಪದ ಪ್ರಭೇದದ ಆಮೆಗಳು ಸಹ ಮನುಷ್ಯನ ಹೊಟ್ಟೆ ಸೇರುತ್ತಿವೆ. ಒಂದು ಮೂಲದ ಪ್ರಕಾರ ಶೇ.80ರಷ್ಟು ಆಮೆಗಳ ಪ್ರಭೇದದ ಸಂಖ್ಯೆ ಕುಸಿತ ಕಾಣುತ್ತಿದೆ. 1970ರಿಂದ ಈಚೆಗೆ ಇಂಗ್ಲೆಂಡಿನಲ್ಲಿ ಗ್ರೇ ಪಾರ್ಟ್ ರಿಡ್ಜಸ್ ಎನ್ನುವ ಜಾತಿಯ ಹಕ್ಕಿಗಳು ಶೇ 50ಕ್ಕೂ ಹೆಚ್ಚು ಭಾಗ ನಾಶವಾಗಿದೆ. 1995ರ ಈಚೆಗೆ ಇಂಗ್ಲೆಂಡಿನ ಸುಮಾರು 107 ಹಕ್ಕಿಗಳ ಪ್ರಭೇದದಲ್ಲಿ ಸುಮಾರು 16ರಷ್ಟು ವಿಶಿಷ್ಟ ಹಕ್ಕಿಗಳು ಮೂರನೆಯ ಒಂದು ಭಾಗದಷ್ಟು ನಾಶ ಹೊಂದಿವೆ. ಆಸ್ಟ್ರೇಲಿಯಾದಲ್ಲಿ 2005ರ ವರೆಗೆ 20 ವರ್ಷಗಳಲ್ಲಿ ಕರ್ಲೀವ್ ಸ್ಯಾಂಡ್ ಪೈಪರ್ ಎನ್ನುವ ಖಗಸಂತತಿ ಶೇ.80-ರಷ್ಟು ನಾಶವಾಗಿದೆ. ಇಂಗ್ಲೆಂಡಿನಲ್ಲಿ 1970ರ ನಂತರ ತೋಳಗಳ ಕುಟುಂಬವೂ ಅವ್ಯಾಹತವಾಗಿ ನಾಶವಾಗುತ್ತಾ ಸಾಗಿದೆ.

ಕೇಂದ್ರ ಆಫ್ರಿಕಾದ ಕಾಡಾನೆಗಳು, ಘೇಂಡಾಗಳು, ಬೇಟಗಾರರ ಕಾಕದೃಷ್ಟಿಗೆ ತುತ್ತಾಗಿ ದಿನೇ ದಿನೇ ಅವಸಾನದಂಚಿಗೆ ಸರಿಯುತ್ತಿವೆ. ಬಾಂಗ್ಲಾದೇಶದಲ್ಲಿ ಮಾತ್ರ ಹೆಚ್ಚಾಗಿ ಕಾಣಸಿಗುವ ಹುಲೋಕ್ ಗಿಬ್ಬನ್ ಎನ್ನುವ ಮಂಗಗಳ ಪ್ರಭೇದ, ನೈರುತ್ಯ ಯುರೋಪಿನ ಹುಲ್ಲುಗಾವಲುಗಳಲ್ಲಿ ಜೀವಿಸುವ ಪಟ್ಟೆ ಹಾವು ಆಸ್ಪ್ ವೈಪರ್ಸ್, ನೇಪಾಳದಲ್ಲಿ ಹುಲಿಗಳು ಹೀಗೆ ಕೆಲವು ವರ್ಗಗಳೂ ತಮ್ಮ ಹೆಬಿಟೇಟ್ ಲಾಸ್ ಕಾರಣದಿಂದ ಅಳಿವಿನಂಚಿಗೆ ಸಾಗುತ್ತಿದ್ದವು. ಜಾಗತಿಕ ವನ್ಯಜೀವಿ ರಕ್ಷಣಾ ಆಗ್ರಹ ಮತ್ತು ಪರಿಣಾಮಕಾರಿ ಕ್ರಮಗಳಿಂದ ಅವುಗಳ ನಾಶವನ್ನು ಹಿಡಿದು ನಿಲ್ಲಿಸಿದೆ.

ಐಯುಸಿಎನ್ ಮತ್ತಷ್ಟು ಜೀವ ಪ್ರಭೇಧಗಳ ಪಟ್ಟಿ ಮುಂದಿಟ್ಟು ಶೀಘ್ರದಲ್ಲೇ ಅವುಗಳ ನಾಶ ನಿಶ್ಚಿತ ಎನ್ನುವ ಎಚ್ಚರಿಕೆ ನೀಡಿದೆ. ಐಯುಸಿಎನ್ ಪಟ್ಟಿ ಮಾಡಿರುವ ರೆಡ್ ಲಿಸ್ಟ್ ನ ಅಳಿವಿನಂಚಿನಲ್ಲಿರುವ ಜೀವಿಗಳು ಇವು:
1) ಅಮೇರಿಕಾದ ಕಡಲ ತೀರದ ಸ್ಟೀಲರ್ ಸೀ ಲಯನ್ ಅಥವಾ ಸಮುದ್ರ ಸಿಂಹಗಳು ಸಮುದ್ರ ಸೇರುವ ಕಾರ್ಖಾನೆಗಳ ಮಾಲಿನ್ಯದ ಕಾರಣ ಸಾಯಲಿವೆಯಂತೆ.
2) ಹೆಬಿಟೇಟ್ ಲಾಸ್ ಕಾರಣದಿಂದ ಅಳಿವಿನಂಚಿಗೆ ಬಂದು ನಿಂತಿರುವ ಗೈಂಟ್ ಪಾಂಡಾಗಳನ್ನು ಉಳಿಸಿಕೊಳ್ಳುವುದು ಕನ್ಸರ್ವೇಷನ್ ಸೊಸೈಟಿಗಳಿಗೆ ತಲೆನೋವಾಗಿದೆ.
3) ಕಾಂಗೋ ರಿಪಬ್ಲಿಕ್ ನ ಲೋಲ್ಯಾಂಡ್ ಗೊರಿಲ್ಲಾಗಳ ಸಂಖ್ಯೆ 1990ರ ನಂತರ ಶೇ 50ರಷ್ಟು ನಾಶವಾಗಿದೆ. ಕಾಂಗೋದ ಈ ಬೋನೋಬೋಸ್ ಗೋರಿಲ್ಲಾಗಳಲ್ಲಿ ಮನುಷ್ಯನ 98.7% ಜೀವತಂತುಗಳು ಕಂಡು ಬಂದಿವೆ ಎಂದು ಜೀವವಿಜ್ಞಾನಿಗಳು ನಿರೂಪಿಸಿದ್ದಾರೆ. ಆದರೆ ಬೇಟೆಗಾರರ ಸಂಚಿನಿಂದ ಈ ಗೊರಿಲ್ಲಾಗಳನ್ನು ಉಳಿಸಿಕೊಳ್ಳುವುದು ಸವಾಲಾಗಿ ಪರಿಣಿಮಿಸಿದೆ.
4) ಸಮುದ್ರದ ಹಸಿರು ಕವಚದ ಆಮೆಗಳನ್ನು ಮೊಟ್ಟೆಗಳಿಗಾಗಿ ಆವಾಸ ಸ್ಥಾನ ನಾಶ ಮಾಡುವ, ಮಾಂಸಕ್ಕಾಗಿ ಬಲೆ ಬಿಸಿ ಹಿಡಿದು ತಿನ್ನುವ ಕೃತ್ಯಗಳು ಹೆಚ್ಚಾಗುತ್ತಲೇ ಇವೆ.
5) ಉತ್ತರ ಅಟ್ಲಾಂಟಿಕಾದ ರೈಟ್ ವೇಲ್ ಗಳು ಸಮುದ್ರ ಮಾಲಿನ್ಯ ಕಾರಣದಿಂದ ನಾಶವಾಗುತ್ತಿವೆ. ಈಗ ಒಂದು ಅಂದಾಜಿನ ಪ್ರಕಾರ ಬದುಕಿರುವುದು ಕೇವಲ 400 ರೈಟ್ ವೇಲ್ ತಿಮಿಂಗಿಲಗಳು ಮಾತ್ರ. ಇವುಗಳನ್ನೂ ಸಹ ಮೀನುಗಾರಿಕೆಯ ಸಂದರ್ಭದಲ್ಲಿ ಹಿಡಿದು ಮಾಂಸಕ್ಕಾಗಿ ಉಪಯೋಗಿಸುತ್ತಾನೆ ಧೂರ್ತ ಮಾನವ.
6) ಮಧ್ಯೆ ಆಫ್ರಿಕಾದಲ್ಲಿ ಚಿಂಪಾಂಜಿಗಳನ್ನೂ ಕೂಡಾ ಮಾಂಸಕ್ಕಾಗಿ ಬೇಟೆಯಾಡಲಾಗುತ್ತಿದೆ. ಕ್ರಮೇಣ ಚಿಂಪಾಂಜಿಗಳ ಸಂಖ್ಯೆಯೂ ಕುಸಿಯುತ್ತಿದೆ.
7) ವಾಸಸ್ಥಾನ ನಾಶ ಮತ್ತು ಶಿಕಾರಿಗಳಿಂದ ನೇಟಿವ್ ಆಫ್ರಿಕಾದ ಎರಡು ಅಪರೂಪದ ತಳಿಗಳಾದ ಕೊರ್ಡೋಫನ್ ಮತ್ತು ನುಬಿಯನ್ ಜಿರಾಫೆಗಳು ಕ್ರಿಟಿಕಲಿ ಎಂಡೇಂಜರ್ಡ್ ಎಂದಿದೆ ಐಯುಸಿಎನ್.
8) ಉತ್ತರ ಅಮೇರಿಕಾ ಖಂಡದಲ್ಲಿ ಈಗ ಕೇವಲ 300 ಮಾತ್ರ ಉಳಿದಿರುವ ಬ್ಲಾಕ್ ಫೂಟೆಡ್ ಫೆರ್ರೇಟ್ ಹೆಚ್ಚಿನ ಅಪಾಯದಲ್ಲಿರುವ ಸಸ್ತನಿಗಳು ಎಂದು ಡಬ್ಲ್ಯು ಡಬ್ಲ್ಯೂ ಎಫ್ ಹೇಳಿದೆ. ಇವುಗಳಲ್ಲಿ ಬಹುಪಾಲು ನಾಶವಾಗಲು ಕಾರಣ ಮಾನವನ ದುಷ್ಕೃತ್ಯಗಳಿಂದ ಸಂಭವಿಸಿದ ರೋಗ ಮತ್ತು ಹೆಬಿಟೇಟ್ ನಾಶ.
9) ಇನ್ನು ವಿಶ್ವದಲ್ಲಿ ಕೇವಲ 10 ಸಾವಿರ ಸಂಖ್ಯೆಯಲ್ಲಿರುವ ರೆಡ್ ಪಾಂಡಾದ ಬೇಟೆಗಾರಿಕೆಯೂ ಅನಿಯಂತ್ರಿತವಾಗಿ ಸಾಗಿದೆ.
10) ನಿರಂತರ ಬೇಟೆ ಮತ್ತು ವಾಸಸ್ಥಾನ ನಾಶದಿಂದಾಗಿ ದಕ್ಷಿಣ ಮತ್ತು ಮಧ್ಯೆ ಅಮೇರಿಕಾ ಹಾಗೂ ಆಗ್ನೇಯ ಏಷ್ಯಾದಲ್ಲಿ ಕಾಣಸಿಗುವ ಟಾಪಿರ್ ಎನ್ನುವ ವಿಶಿಷ್ಟ ಜೀವಿಗಳು ಐಯುಸಿಎನ್ ನ ಅಳಿವಿನಂಚಿನಲ್ಲಿರುವ ಜೀವಿಗಳ ಪಟ್ಟಿಯಲ್ಲಿವೆ. ಇವುಗಳ ವಿಶೇಷತೆಯಿಂದರೆ ಇವು ತಮ್ಮ ಮರಿಯನ್ನು 13ರಿಂದ 14 ತಿಂಗಳ ಉದರದಲ್ಲಿಟ್ಟುಕೊಂಡಿರುತ್ತವೆ.
11) 2014ರಲ್ಲಿ ಐಯುಸಿಎನ್ ಪ್ರಕಟಿಸಿದ ರೆಡ್ ಲಿಸ್ಟ್ ನಲ್ಲಿ ಪೆರುವಿಯನ್ ಬ್ಲಾಕ್ ಸ್ಪೈಡರ್ ಮಂಗಗಳ ಹೆಸರೂ ಇತ್ತು. ಅಮೇಜಾನಿಯನ್ ಮಾಂಸ ದಂಧೆಯಿಂದಾಗಿ ಇವುಗಳ ಸಂಖ್ಯೆ ಕಳೆದ 45 ವರ್ಷಗಳಲ್ಲಿ ಅರ್ಧಕ್ಕಿಂತ ಹೆಚ್ಚು ಕಡಿಮೆಯಾಗಿದೆ.
12) ಕಲುಷಿತ ಪರಿಸರ ಮತ್ತು ವಾತಾವರಣ ಬದಲಾವಣೆಯಿಂದಾಗಿ ಭೂಮಿಯ ಮೇಲಿನ ಅತ್ಯಂತ ಅಪೂರ್ವ ಜೀವವೈವಿಧ್ಯ ಪ್ರಭೇದವಾದ ಗೆಲಪಗೋಸ್ ಪೆಂಗ್ವಿನ್ ಗಳು ಕೇವಲ 2000ಕ್ಕಿಂತ ಕಡಿಮೆ ಉಳಿದುಕೊಂಡಿವೆ.
13) 2013ರಲ್ಲಿ ಅಳಿವಿನಂಚಿನ ಜೀವಿಗಳೆಂದು ಗುರುತಿಸಲಾದ ನೇಟಿವ್ ಕಾಂಗೋದ ಕಾಡು ಜಿರಾಫೆಗಳು ಅಥವಾ ಒಕಾಪಿಗಳು ಕಳೆದ 18 ವರ್ಷಗಳಲ್ಲಿ ಶೇ. 50ಕ್ಕಿಂತ ಹೆಚ್ಚು ನಾಶವಾಗಿವೆ. ಕೇವಲ ಮಾಂಸಕ್ಕಾಗಿ ಈ ಚೆಂದದ ಪ್ರಾಣಿಗಳನ್ನು ಹತ್ಯೆ ಮಾಡಲಾಗುತ್ತಿದೆ.
14) ಇಂಡಿಯನ್, ಪೆಸಿಫಿಕ್ ಮತ್ತು ಅಟ್ಲಾಂಟಿಕ್ ಮಹಾಸಾಗರದಲ್ಲಿ ವಾಸಿಸುವ ಹಾಕ್ಸ್ ಬಿಲ್ ಆಮೆಗಳು 100 ಮಿಲಿಯನ್ ವರ್ಷಗಳಿಂದ ಭೂಮಿಯ ಮೇಲೆ ವಾಸಿಸುತ್ತಿವೆ ಎನ್ನುತ್ತದೆ ಜೀವ ವಿಜ್ಞಾನ ವಲಯ. ಆದರೆ ಇದರ ಮೊಟ್ಟೆ ಮತ್ತು ಶೆಲ್ ಗಳಿಗೆ ಬ್ಲಾಕ್ ಮಾರುಕಟ್ಟೆಯಲ್ಲಿ ಸಾಕಷ್ಟು ಬೇಡಿಕೆ ಇರುವುದರಿಂದ ಇವುಗಳ ಬೇಟೆ ನಿರಂತರವಾಗಿ ಸಾಗಿದೆ. ಈಗ ಇವುಗಳ ಸಂಖ್ಯೆ ಕೇವಲ 15 ಸಾವಿರದಷ್ಟು ಮಾತ್ರ.
15) 1999ರಲ್ಲಿ ರೆಡ್ ಲಿಸ್ಟ್ ಗೆ ಸೇರ್ಪಡೆಯಾದ ಗೈಂಟ್ ಒಟ್ಟರ್ ಸದ್ಯ ಉಳಿದಿರುವುದು 5000ಕ್ಕಿಂತ ಕಡಿಮೆ.
16) ಆತಂಕಕಾರಿಯಾಗಿ ನಾಶ ಹೊಂದಿದೆ ಇನ್ನೊಂದು ಜೀವಿ ಟಸ್ಮಾನಿಯನ್ ಡೆವಿಲ್ ಎನ್ನುವ ಹೆಸರು ಹೊತ್ತ ಮಾಂಸಾಹಾರಿ ಹೊಟ್ಟೇಚೀಲದ ಮುಂಗುಸಿಯಂತಹ ಪ್ರಾಣಿ. ಮುಖದ ಕ್ಯಾನ್ಸರ್ ನಿಂದ ಸಾವಿಗೀಡಾದ ಈ ಜೀವಿಗಳು 90ರ ದಶಕದಲ್ಲಿ 130000-150000ದಷ್ಟಿದ್ದಿದ್ದು 90ರ ದಶಕದ ನಂತರ ಸಾವಿನ ಸರಣಿ ಮುಂದುವರೆದು ಈಗ ಕೇವಲ 10000ದಿಂದ 15000ದಷ್ಟು ಮಾತ್ರ ಉಳಿದುಕೊಂಡಿವೆ.
17) ನ್ಯೂಜಿಲ್ಯಾಂಡ್ ಮೂಲದ ಕಕಾಪು ಅಥವಾ ಗೂಬೆ ಗಿಳಿ ಸದ್ಯ ಉಳಿದಿರುವುದು ಕೇವಲ 50 ಮಾತ್ರ.
18) ಮೂವೈ ಫಾರೆಸ್ಟ್ ಬರ್ಡ್ ರಿಕವರಿ ಪ್ರಾಜೆಕ್ಟ್ ಅಡಿಯಲ್ಲಿ ಅತ್ಯಂತ ತ್ವರಿತಗತಿಯಲ್ಲಿ ನಾಶ ಹೊಂದುತ್ತಿರುವ ಹನಿಕ್ರೀಪರ್ ಗಳನ್ನು ಬದುಕಿಸಿಕೊಳ್ಳಲು ಹೆಣಗಾಡಲಾಗುತ್ತಿದೆ.
19) ಬೇಟೆಗಾರಿಕೆಯಿಂದ ಬಹುಪಾಲು ನಾಶವಾಗಿರುವ ರಷ್ಯನ್ ತಳಿ ಅಮೂರ್ ಚಿರತೆಗಳು ಈಗ ಬದುಕುಳಿದಿರುವುದು 100ಕ್ಕಿಂತ ಕಡಿಮೆ.
20) ಅಟ್ಲಾಂಟಿಕ್ ಪೆಸಿಫಿಕ್ ಸಾಗರದಲ್ಲಿ ವಾಸಿಸುವ ಸುದೀರ್ಘ 40 ವರ್ಷಗಳ ಕಾಲ ಬದುಕುವ ಬ್ಲೂಫಿನ್ ಟುನಾ ಶೇ.96ರಷ್ಟು ಸರ್ವನಾಶ ಹೊಂದಿವೆ.
21) ದಂತಗಳಿಗೆ ಕೊಲ್ಲಲ್ಪಡುತ್ತಿರುವ ಸುಮಾತ್ರ ದ್ವೀಪದ ಕಾಡಾನೆಗಳು ಈಗ ಉಳಿದುಕೊಂಡಿರುವುದು ಕೇವಲ 2000 ಮಾತ್ರ.
22) ಕ್ಯಾಲಿಫೋರ್ನಿಯಾದ ಎರ್ರೋಯ್ ಟೋಡ್ ಕಪ್ಪೆಗಳು ಕೇವಲ 3000 ಬದುಕಿವೆ.
23) 1946ರಿಂದ 2006ರವರೆಗೆ ಶೇ.98ರಷ್ಟು ನಾಶ ಹೊಂದಿರುವ ಘೇರಿಯಲ್ ಮೊಸಳೆಗಳು ಈಗ 300ರಷ್ಟು ಮಾತ್ರ ಇವೆ.
24) ಸಹರಾ ಪ್ರಾಂತ್ಯದಲ್ಲಿ ಮಾತ್ರ ಕಾಣಸಿಗುವ ಅಡೆಕ್ಸ್ ಹೆಸರಿನ ಸುರುಳಿ ಕೊಂಬಿನ ಮಿಕವೂ ಬೆರಳಣಿಕೆಯ ಸಂಖ್ಯೆಯಲ್ಲಿವೆ.
25) ನೇಟಿವ್ ಸಬ್ ಸಹರನ್ ಆಫ್ರಿಕಾದ ಕಪ್ಪು ಖಡ್ಗಮೃಗಗಳು ಬದುಕಿರುವುದು 2500 ಅಷ್ಟೆ.
26) ಇನ್ನು ಚೀನಾ ಮತ್ತು ವಿಯೇಟ್ನಾಮ್ ವೈಲ್ಡ್ ಟ್ರೇಡ್ ರ್ಯಾಕೆಟ್ ಗೆ ಸಿಕ್ಕು ನರಳುತ್ತಿರುವ ಪೆಂಗೋಲಿನ್ ಅಥವಾ ಚಿಪ್ಪು ಹಂದಿ ಕೆಲವೇ ವರ್ಷಗಳಲ್ಲಿ ಸೃಷ್ಟಿಯಿಂದಲೇ ಕಣ್ಮರೆಯಾಗಲಿದೆ.
27) ಗಂಟೆಗೆ 44 ಕಿಲೋಮೀಟರ್ ಕ್ರಮಿಸುವ ಸಾಮರ್ಥ್ಯ ಹೊಂದಿರುವ ಆಫ್ರಿಕನ್ ಕಾಡುನಾಯಿಗಳ ಈಗಿನ ಸಂಖ್ಯೆ 5000 ಮಾತ್ರ.
28) ದಕ್ಷಿಣ ಅಮೇರಿಕಾ ಮೂಲದ ಸಮುದ್ರಜೀವಿ ಫ್ಲಾಟ್ ವುಡ್ಸ್ ಸಾಲಮಂಡರ್ಸ್ ಸಹ ಕ್ರಿಟಿಕಲಿ ಎಂಡೇಜರ್ಡ್ ಜೀವಪ್ರಭೇಧ.
29) ಸಮುದ್ರ ಹಸು ಅಥವಾ ಡುಗೊಂಗ್ ಗಳನ್ನು ಮಾಂಸಕ್ಕಾಗಿ ಮತ್ತು ಎಣೆಗಾಗಿ ಕೊಂದು ಅವುಗಳೂ ಈಗ ರೆಡ್ ಲಿಸ್ಟ್ ಸೇರಿಕೊಂಡಿವೆ.
30) ಬಿಗ್ ವೈಲ್ಡ್ ಕ್ಯಾಟ್ ಸುಮಾತ್ರದ ಹುಲಿಯ ಸಂಖ್ಯೆಯೂ 400ಕ್ಕೆ ಕುಸಿತ ಕಂಡಿದೆ.
31) ಮಲಯದ ಮ್ಯಾನ್ ಆಫ್ ಫಾರೆಸ್ಟ್ ಎಂದು ಕರೆಸಿಕೊಳ್ಳವ ಓರಂಗೂಟನ್ 2017ರಲ್ಲಿ ಉಳಿದಿರುವುದು 800 ಮಾತ್ರ.
32) ಆರ್ಕೆಟಿಕ್ ವಾತವರಣದಲ್ಲಿ ಬದುಕಬಲ್ಲ ದೈತ್ಯ ಜಲಚರ ಚೂಪು ಮೂತಿಯ ನಾರ್ವಲ್ ಸಂಖ್ಯೆಯೂ ಕ್ಷೀಣಿಸುತ್ತಿದೆ.
33) ಬೋರ್ನಿಯೋ ಮತ್ತು ಸುಮಾತ್ರದಲ್ಲಿ ಕಾಣಸಿಗುವ ಪುಟ್ಟ ಗಾತ್ರದ ಪಿಗ್ಮಿ ಆನೆಗಳ ಸಂಖ್ಯೆ ಕೇವಲ 1500 ಅಷ್ಟೆ.
34) ಆಗ್ನೇಯ ಏಷ್ಯಾದ ಫಿಶ್ ಟ್ರೇಡ್ ಜಾಲಕ್ಕೆ ಸಿಕ್ಕು ನರಳುತ್ತಿರುವ ಇಂಡೋ ಪೆಸಿಫಿಕ್ ಹವಳದ ದಂಡೆಯಲ್ಲಿ ಬದುಕುವ ಹಂಫೇಡ್ ವ್ರಾಸ್ಸೆ ಜಲಚರಗಳಲ್ಲೆ ಅತ್ಯಂತ ಸುಂದರ ಮೀನು ಮತ್ತು ಅಳಿವಿನಂಚಿನಲ್ಲಿರುವ ಪ್ರಭೇದ.
ಇವಿಷ್ಟನ್ನು ಹೊರತುಪಡಿಸಿಯೂ ನೀಚ ಮಾನವನ ಸ್ವಾರ್ಥಕ್ಕೆ ಬಲಿಯಾಗುತ್ತಿರುವ ಮತ್ತು ಸೃಷ್ಟಿಯಿಂದಲೇ ನಾಪತ್ತೆಯಾಗುತ್ತಿರುವ ಜೀವ ಪ್ರಭೇದಗಳ ಸಂಖ್ಯೆ ದೊಡ್ಡದಿದೆ. ಇಲ್ಲಿರುವುದು ನೇರವಾಗಿ ಮನುಷ್ಯನಿಂದ ಕೊಲ್ಲಲ್ಪಡುತ್ತಿರುವ ಜೀವಿಗಳಾದರೆ ಪರೋಕ್ಷವಾಗಿ ನಾಶ ಹೊಂದುತ್ತಿರುವ ಜೀವಿಗಳ ಸಂಖ್ಯೆ ಇದರ ದುಪ್ಪಟ್ಟು. ತಾನು ಬದಕಲು ಇಡೀ ಸೃಷ್ಟಿಯ ಜೀವ ವಿನ್ಯಾಸವನ್ನೇ ನಾಶ ಮಾಡುತ್ತಿರುವ ಮನುಷ್ಯ ನಾಶವಾಗಿ ಈ ಅಮಾಯಕ ಜೀವಿಗಳು ಬದುಕುತ್ತವೆಯೆಂದರೆ; ಮನುಷ್ಯ ನಾಶವಾಗುವುದೇ ಉತ್ತಮ.