- ಸಿದ್ಧಾಂತಗಳು ಬೆಳಕನ್ನು ಬಂಧಿಸಬಲ್ಲವೇ? - ಸೆಪ್ಟೆಂಬರ್ 4, 2022
- ಪಾತರಗಿತ್ತಿ ಪರಿಣಾಮ! - ಆಗಸ್ಟ್ 21, 2022
- ದೇಹ ಮತ್ತು ಮನಸ್ಸು ನಡುವೆ ಸಂಕ ಉಸಿರು - ಆಗಸ್ಟ್ 10, 2022
ಬೆಳಕಿನೊಡೆಯನ ಪ್ರೇಮಗೀತೆ
ನಿನ್ನ ಜಡೆ ಜಡೆಯಲ್ಲಿ
ಮಲ್ಲೆ ಹೂ ಮೊಗ್ಗುಗಳು
ಮಾಲೆ ತಂತಾನಾಗಿ
ನೇಯ್ದವೇ ಗೆಳತೀ
ನನ್ನುಸಿರ ಬಿಸಿಲಿನಲಿ
ಫಲಗಳನು ಮಾಗಿಸಿ
ಸಿಹಿ ಹಣ್ಣು ರಸಗಿಣ್ಣು
ತುಂಬಿದೆಯಾ ಗೆಳತೀ
ನಿನ್ನ ಹರಿತ್ತೊಳಗೆ
ನನ್ನ ಹರಿತವನೆಲ್ಲ
ಸಿಹಿಸಕ್ಕರೆಯನಾಗಿ
ಮಾಡಿದೆಯ ಗೆಳತಿ
ನನ್ನ ಬಿಸಿ ಕಿರಣಗಳ
ಕರಗಿಸುವ ಕಣ್ನೋಟ
ಒಳಗೆಷ್ಟು ತಂಪು ಗೆಳತಿ!
ನನ್ನ ಆಲಿಂಗನಕೆ
ಎಷ್ಟೊಂದು ಬಾಹುಗಳು
ನಿನ್ನ ತೊರೆ ತೊರೆಯೊಳಗೆ
ಕಳೆದು ಹೋದವು ಗೆಳತಿ
ಶಾಂತಹಿಮದೆದೆಯಲ್ಲಿ
ಶ್ವೇತ ಪವಡಿಕೆಯಲ್ಲಿ
ಉರಿವಾತ್ಮ ಜ್ವಾಲೆಯನು
ತಣಿಸುವೆಯ ಗೆಳತಿ
ನಿನ್ನ ಮಡಿಲಿನ ಬಿಸುಪು
ತಂಪು ತಂಪೆನಿಸುತಿದೆ
ತೇಜಪುಂಜದ ಕಿಚ್ಚು
ವಿಶ್ರಾಂತಿ ಬಯಸುತಿದೆ
ಮುಖಮುಚ್ಚಿ ಎದೆ ಬಿಚ್ಚಿ
ಮಲಗಲೇ ಗೆಳತಿ
ಇಳೆಯೊಲವ ಜೀವರಸ
ಮೈತುಂಬು ಗೆಳತಿ
ಹೊತ್ತು ಹೊತ್ತು ಹೊತ್ತಗೆ
ನಿಮ್ಮ ಪುಸ್ತಕದ ಹಾಳೆಗಳು
ಹರಿದಿರಬಹುದು ಹರಿಯದಿರಬಹುದು
ಹರಿಯುತ್ತಲೇ ಇರಬಹುದು
ಬಣ್ಣಕ್ಕೆ ವಯಸ್ಸಾಗಿ
ಕಂದು
ಆದರೂ ಕಂದಿಲ್ಲ ಹೊಳಪು
ಹಾಳೆಗೆ ಹಳೇ ನೆನಪು
ಪರಿಮಳದ ಅಂಚುಗಳು
ಹರಿದು ಸುತ್ತಲೂ
ಉದಾರವಾಗಿ ಹಂಚಿದರೂ
ನೇಗಿಲ ಭಾರ ಏಗಿದರೂ
ನಡು ನೇರ ಮೇರುದಂಡ
ನಿಮ್ಮ ಪುಸ್ತಕದ ಹಾಳೆಗಳಲ್ಲಿ
ಸಾಲುಗಳು ಮಲಗಿವೆ
ಸದಾ ಎಚ್ಚರ, ನಿದ್ರಿಸಿಲ್ಲ,
ಆಗಾಗ
ಕಣ್ಣು ಪೊರೆ ಮಸುಕಿದಾಗ
ದೃಷ್ಟಿಗೆ ದಿಕ್ಸೂಚೀ ಸಾಲುಗಳು
ಮುನ್ನುಡಿ ಹಿನ್ನುಡಿಯಿಲ್ಲದ ಪುಸ್ತಕ
ನಡುವಿನ ಹಾಳೆಗಳಲ್ಲಿ
ಅಕ್ಷರಗಳು,ಉರುಟು,ನೇರ
ತಿರುವುಗಳು, ಕೋಡುಗಳು
ಕಣ್ಣೀರ ಬಿಂದಿನಂತಹ ಸೊನ್ನೆಗಳು
ಅಚ್ಚರಿಯ ಚಿಹ್ನೆಗಳು
ಹ್ಹ ಹ್ಹಾ ಹಾಸ ಶಾಸನಗಳು
ಪುಸ್ತಕ ಬ್ರಹ್ಮಾಂಡ!
ಅಲ್ಲಲ್ಲಿ ಚಿತ್ರಿಸಿದ
ಅಕ್ಕರ ತಾರೆಗಳು
ಅಸಂಖ್ಯ ಕೇಂದ್ರಗಳು
ಸುತ್ತೀ ಸುತ್ತೀ ದಣಿಯದ
ಆಕಾಶ ಕಾಯಗಳು
ಅನಂತ ಕವಿತೆಯ
ಆಕಾಶ ಗಂಗೆಯ
ಹರಿವುಗಳು
ಅದೇಕೋ ನಿಮ್ಮ
ಪುಸ್ತಕದ ಕೆಲವು ಪುಟಗಳು
ಖಾಲಿ..ವ್ಯೋಮಾಕಾಶದ
ನಿರ್ವಾತದಂತೆ
ನೀಲ ಸಮುದ್ರದ ಆಳದ
ಪ್ರಶಾಂತ ನಿಸ್ವರದಂತೆ
ನಿಮ್ಮ ಹಳೇ ಪುಸ್ತಕದ
ವಾಸನೆ ನನ್ನ ಕರೆಯುತ್ತಿದೆ
ಆವರಿಸುತ್ತಿದೆ
ವಿಲೀನವಾಗಿಸಿ
ನನ್ನ ನಾನಿಲ್ಲದೇ
ನಿಮ್ಮೊಳಗೆ ಒಂದಾದ ಹಾಗೆ
ಅದರೊಳಗಿಂದ ನಾನು
ತಲೆಯೆತ್ತಿ
ನಿಮ್ಮ ಪುಸ್ತಕದಲ್ಲಿ
ಕೆಲವು ಅಕ್ಷರಗಳಾಗಿ
ಮೂಡಲೇ..
ಹೆಚ್ಚಿನ ಬರಹಗಳಿಗಾಗಿ
ಬೇಲಿಯೇ ಎದ್ದು…..
ಗಣೇಶನ ಕೈಯಲ್ಲಿಯ ಲಾಡು
ಮಹಾಸಾಗರವಾದಳು