- ಹಸಿವು - ಮೇ 28, 2022
- ಮಹೇಶ್ ಹೆಗಡೆ ಗಝಲ್ಸ್ - ನವೆಂಬರ್ 28, 2021
ಗಝಲ್ ೧
ಅರಳಿ ಉದುರುವ ಮೊದಲು ಮುಡಿಯ ಏರುವ ಬಯಕೆಯಿಲ್ಲವೇ ನಿನಗೆ
ಹೊರಳಿ ತೆರಳುವ ಮುನ್ನ ಗುಡಿಯ ಸೇರುವ ಬಯಕೆಯಿಲ್ಲವೇ ನಿನಗೆ
ಹಳಸಿದ ಸಂಬಂಧಕೆ ಹೊಸತು ಹೊಳಪು ನೀಡಲು ಆಗದೇನು ಹೇಳು
ಕಳಚಿದ ದಳಗಳು ಕೊಳೆಯುತಿರಲು ಕಂಪು ಬೀರುವ ಬಯಕೆಯಿಲ್ಲವೇ ನಿನಗೆ
ಕಾಡುವ ಸ್ವರಗಳ ಮೀಟಲು ಇಂಪಾದ ರಾಗವು ಹೊಮ್ಮಿದೆಯಲ್ಲ ಇಂದು
ನೋಡುವ ನೋಟದಲಿ ಬೆರೆತು ತಂಪು ತೋರುವ ಬಯಕೆಯಿಲ್ಲವೇ ನಿನಗೆ
ಬೀದಿಯಲಿ ನಡೆದು ಗೆಜ್ಜೆಯ ನಾದವ ಆಲಿಸುತ ಹಿಂಬಾಲಿಸಿದೆ ನಾನು
ಎದೆಯಲಿ ಉಕ್ಕಿ ಹರಿಯುತ ಪ್ರೀತಿಯ ಸಾರುವ ಬಯಕೆಯಿಲ್ಲವೇ ನಿನಗೆ
ಕದವನು ತೆರೆದು ಕನಸುಗಳ ಸ್ವಾಗತಕೆ ಅಣಿಯಾಗಿ ನಿಂತಿಹನು ಶಿವ
ಹೃದಯದ ಆಗಸದಲಿ ಸ್ವಚ್ಛಂದದಿ ನಲಿದು ಹಾರುವ ಬಯಕೆಯಿಲ್ಲವೇ ನಿನಗೆ
ಗಝಲ್ ೨
ಹೆಪ್ಪುಗಟ್ಟಿದ ನೋವು ಕರಗಿ ಹರಿಯಬೇಕೆಂದರೆ ಅತ್ತುಬಿಡು ಒಮ್ಮೆ
ತಪ್ಪುಮಾಡಿದ ಮನ ಮನ್ನಿಸಿ ಬೆರೆಯಬೇಕೆಂದರೆ ಅತ್ತುಬಿಡು ಒಮ್ಮೆ
ಬದುಕು ಭಾರವಾಗಿ ಮುಳುಗುವುದ ನೋಡಿ ನಗುವವರಿಹರು ಜಗದಲಿ
ಹೃದಯ ಹಗುರವಾಗಿ ಕವಿತೆ ಬರೆಯಬೇಕೆಂದರೆ ಅತ್ತುಬಿಡು ಒಮ್ಮೆ
ಸಿಹಿಯಾದ ಜೇನು ಕೈಗೆಟುಕದಿರೆ ಅದೃಷ್ಟವನು ಹಳಿಯುವೆ ಏಕೆ
ಕಹಿಯಾದ ನೆನಪುಗಳ ಮರೆಯಬೇಕೆಂದರೆ ಅತ್ತುಬಿಡು ಒಮ್ಮೆ
ಬೀದಿಯಲಿ ಹಚ್ಚಿದ ದೀಪವು ದಾರಿತೋರಲು ಭೇದವ ಎಣಿಸುವುದೇನು
ಎದೆಯಲಿ ಹೊತ್ತಿದ ಉರಿಯು ಆರಬೇಕೆಂದರೆ ಅತ್ತುಬಿಡು ಒಮ್ಮೆ
ಭಾವನೆಗಳ ತಿಳಿಯುತ ಬದುಕಿನಲಿ ಬೆಳಕನು ಹುಡುಕಬೇಕಿದೆ ಶಿವ
ಭವ ಬಂಧನದ ಸೂತ್ರವ ಅರಿಯಬೇಕೆಂದರೆ ಅತ್ತುಬಿಡು ಒಮ್ಮೆ
ಗಝಲ್ ೩
ಕಲ್ಲು ಹೃದಯಕೆ ಒಲವಿನ ಪೆಟ್ಟು ಕೊಡುತ ಸುಂದರ ಮೂರ್ತಿಯ ಮಾಡಿದೆಯಲ್ಲ
ಚೆಲ್ಲದ ಭಾವಕೆ ಬೆಂಕಿಯ ಇಟ್ಟು ಉಕ್ಕಿಸುತ ನಾಳಿನ ಕೀರ್ತಿಯ ನೋಡಿದೆಯಲ್ಲ
ಹುದುಗಿದ ಪ್ರತಿಭೆಗೆ ನಯವಾಗಿ ಚುಚ್ಚಿ ಪರದೆ ಹರಿದು ಜಗಕೆ ತೋರಿದೆಯೇಕೆ
ಎದೆಯ ತಂಬೂರಿಗೆ ಪ್ರೇಮದ ತಂತಿ ಬಿಗಿದು ರಾಗವ ಶೃತಿಯಲಿ ಹಾಡಿದೆಯಲ್ಲ
ಭಯವ ಓಡಿಸಿ ಬದುಕಿನಲಿ ದಿಟ್ಟ ನಿರ್ಧಾರ ತಳೆಯಲು ಜೊತೆಯಲಿ ನಿಂತೆ
ಬಯಕೆ ಮೂಡಿಸಿ ಭವಿಷ್ಯದ ಕನಸು ಕಟ್ಟಲು ಮನದಲಿ ಬಿಡದೆ ಕಾಡಿದೆಯಲ್ಲ
ಹಾರ ತುರಾಯಿಗಳ ತೊರೆದು ನೆಲದ ಋಣವ ತೀರಿಸಲು ಬದ್ಧತೆಯ ತೋರಿದೆ
ಭಾರವ ಹೊರಲು ಹಗಲಿರುಳು ಹೆಗಲು ಕೊಟ್ಟು ಬಂಡಿಯ ಎಳೆಯುತ ಬಾಡಿದೆಯಲ್ಲ
ಮಾಯೆ ಆವರಿಸಿ ತಪ್ಪು ಹಾದಿಯಲಿ ನಡೆದು ಪತನವಾಗಲು ಬಿಡಲಿಲ್ಲ ನೀನು
ಲಯ ತಿಳಿದು ಹೆಜ್ಜೆಯಿಡುತ ಹುಚ್ಚು ಪ್ರೀತಿಯ ಹರಿಸಿ ಶಿವನಲಿ ಕೂಡಿದೆಯಲ್ಲ
ಹೆಚ್ಚಿನ ಬರಹಗಳಿಗಾಗಿ
ಬೇಲಿಯೇ ಎದ್ದು…..
ಗಣೇಶನ ಕೈಯಲ್ಲಿಯ ಲಾಡು
ನೋ ಪಾರ್ಕಿಂಗ್