- ಮಾರೇಹಳ್ಳಿಯ ಸುಂದರ ನೆನಪುಗಳು - ಏಪ್ರಿಲ್ 9, 2023
ಪ್ರವಾಸ ಕಥನ ಅಂದರೆ ಅದು ಕೇವಲ ರಸ್ತೆಗಳಿಗೆ, ದುಡ್ಡಿನ ಲೆಕ್ಕಾಚಾರಕ್ಕೆ ಸೀಮಿತವಾದ ಸಂಗತಿಯಲ್ಲ. ಅದು ನಮ್ಮ ಪ್ರಕೃತಿ, ಬದುಕು, ಜನ, ಸಂಸ್ಕೃತಿಯ ಕತೆ. ಅದು ನೆಲದ ಕತೆ. ಅಂಥ ಹಲವು ಅನುಭವಗಳನ್ನು ದಾಟಿಸಬಲ್ಲ ಅಂಕಣ ಮಾಲಿಕೆ ‘ಟೂರ್ ಡೈರೀಸ್’ನ ಆರನೇ ಸಂಚಿಕೆ ನಿಮ್ಮ ಮುಂದೆ…
ಮಂಡ್ಯ ಜಿಲ್ಲೆಯ ಮಳವಳ್ಳಿಯಿಂದ ಕೊಳ್ಳೇಗಾಲಕ್ಕೆ ಹೋಗುವ ದಾರಿಯಲ್ಲಿ ಬಲಗಡೆಯಲ್ಲಿ ಕಾಡಿನಂತಿರುವ ಕಿರಿದಾದ ಈ ರಸ್ತೆಯಲ್ಲಿ ಸುಮಾರು ಎರಡು ಕಿಮೀ ಕ್ರಮಿಸಿದರೆ ಈ ದೇವಾಲಯ ಸಿಗುತ್ತದೆ. ಸುತ್ತಲೂ ಹಸಿರು ಹೊದ್ದಿರುವಂತಿರುವ, ಹೊಲಗದ್ದೆಗಳಿಂದ ಸುತ್ತುವರೆದಿರುವ ಮರಗಳ ಗುಂಪಿನಲ್ಲಿ ಈ ದೇವಾಲಯವಿದೆ. ಕೇಂದ್ರ ಪ್ರಾಚ್ಯವಸ್ತು ಇಲಾಖೆಯ ಅಧೀನಕ್ಕೆ ಒಳಪಟ್ಟಿರುವ ಇದು ಸುಮಾರು ಒಂದು ಸಾವಿರ ವರ್ಷಗಳಿಗೂ ಮಿಗಿಲಾದ ಐತಿಹ್ಯ ಹೊಂದಿದೆ. ಪ್ರತಿ ವರುಷ ಮೇ ಮಾಹೆಯ ಕಡೆಯ ವಾರದಲ್ಲಿ ಅಥವಾ ಜೂನ್ ಮೊದಲ ವಾರದಲ್ಲಿ ಇಲ್ಲಿ ರಥೋತ್ಸವ. ಅದೇ ಕಡೆಯ ತೇರೂ ಹೌದು. ಇಲ್ಲಿ ಒಂದು ಸಾವಿರ ವರುಷಗಳ ಇತಿಹಾಸವಿರುವ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯವಿದೆ.
ಮಾರೇಹಳ್ಳಿ ಎಂದಾಕ್ಷಣ ನನ್ನ ಮನ ಐದು ದಶಕಗಳ ಹಿಂದಕ್ಕೆ ಓಡುತ್ತದೆ. ಬಹುಶಃ ೧೯೭೦ ರಿಂದಲೂ ಈ ರಥೋತ್ಸವಕ್ಕೆ ಹೋಗಿ ಬರುತ್ತಿರುವೆ. ನಾವಾಗ ಮೈಸೂರಿನ ಒಂಟಿಕೊಪ್ಪಲಿನ ರೈಲ್ವೆ ಕ್ವಾಟರ್ಸ್‌ನಲ್ಲಿದ್ದೆವು. ಶ್ರೀನಿವಾಸ ದೇವಾಲಯದ ಹತ್ತಿರವೇ ನಮಗೆ ಮಳವಳ್ಳಿಗೆ ಹೋಗಲು ಖಾಸಗಿ ಬಸ್ಸು. ಕೊಡಗಹಳ್ಳಿ ೧, ಇದು ಬೆ.೮.೧೫ ಕ್ಕೆ ಬರುತ್ತಿತ್ತು. ಆಗ ತಾನೇ ಮೈಸೂರಿಗೆ ದಾಂಗುಡಿ ಇಡುತ್ತಿದ್ದ ಕೆ.ಆರ್.ಎಸ್ ರಸ್ತೆಯಲ್ಲಿನ ಹಲವಾರು ಕಾರ್ಖಾನೆಗಳಿಗೆ ಹೋಗುವ ಸಿಬ್ಬಂದಿ ಈ ಬಸ್ಸನ್ನೇ ಅವಲಂಬಿಸುತ್ತಿದ್ದರು. ಹೀಗಾಗಿ ಕಾಲಿಡುವುದಕ್ಕೂ ಅಲ್ಲಿ ಜಾಗವಿರುತ್ತಿರಲಿಲ್ಲ. ಕ್ಲೀನರ್ ಅರ್ಧ ಬಾಗಿಲು ತೆರೆದು ನೇತಾಡುತ್ತಾ ಜನರನ್ನು ಒಳನೂಕುತ್ತಿದ್ದ. ಇನ್ನು ನಂತರ ೧೦.೪೫ ಕ್ಕೆ ಮತ್ತೊಂದು ಕೊಡಗಹಳ್ಳಿ. ಈ ಬಸ್ಸುಗಳು ಶ್ರೀರಂಗಪಟ್ಟಣ, ಕರಿಘಟ್ಟ, ಹೀಗೆ ಬಳಸು ದಾರಿ ಹಿಡಿದು ಮಳವಳ್ಳಿಗೆ ಎರಡೂವರೆ ಗಂಟೆ ಕಾಲ ಪ್ರಯಾಣ ಮಾಡುತ್ತಿದ್ದವು. ಈಗಿರುವ ಬನ್ನೂರು ಸೇತುವೆ ಇನ್ನೂ ಇರಲಿಲ್ಲ. ನಂತರದ ವರುಷಗಳಲ್ಲಿ ಬನ್ನೂರು ನದಿಗೆ ಸೇತುವೆಯಾದ ಮೇಲೆ ಸರ್ಕಾರಿ ಬಸ್ಸುಗಳು ಅಲ್ಲಿಂದಲೇ ಹೋಗಿ ಬರುತ್ತಿದ್ದವು.
ಮಾರೇಹಳ್ಳಿ ಎಂದರೆ ಮೂರು ದಿನಗಳ ಕಾರ್ಯಕ್ರಮ. ನಮ್ಮ ತಂದೆಯವರು, ತಾಯಿ, ನಾವೆಲ್ಲರೂ ಮೂರ್ನಾಲ್ಕು ದಿನಗಳಿಗೆ ಬೇಕಾದ ಬಟ್ಟೆ, ಬೆಡ್‌ಶೀಟುಗಳು, ಪಾತ್ರೆ, ಕುರುಕು ತಿಂಡಿಗಳನ್ನು ಪ್ಯಾಕ್ ಮಾಡಿಕೊಂಡು ಹೋಗುತ್ತಿದ್ದೆವು. ಮೈಸೂರಿನಿಂದ ನಮ್ಮ ಕುಟುಂಬ, ಮೋಳೆ ಕುಟುಂಬ, ಚೊಕ್ಕಜ್ಜಿಯವರ ಕುಟುಂಬ, ಹೀಗೆ ಬರುತ್ತಿದ್ದರು. ಬೆಂಗಳೂರಿನಿಂದ ನಮ್ಮ ಕಮಲಾ ಚಿಕ್ಕಮ್ಮ, ರಾಜು ಚಿಕ್ಕಮ್ಮ, ಬಳಗೆರೆ ಕುಟುಂಬ ಬರುತ್ತಿದ್ದರು. ಮಳವಳ್ಳಿಯಲ್ಲಿ ಇಳಿದ ತಕ್ಷಣ ಆಗೆಲ್ಲಾ ಜಟಕಾ ಒಂದೋ ಎರಡೋ ಇರುತ್ತಿದ್ದವು. ತಲೆ ದರ ಹೇಳುವ ಜಟಕಾವಾಲಾನ ಸಹವಾಸ ಬೇಡವೆಂದು ಬಸ್ ಸ್ಟಾಂಡಿನಲ್ಲಿ ಇಳಿದು, ಒಬೊಬ್ಬರು ತಲೆ, ಹೆಗಲಿನ ಮೇಲೆ ಭಾರವಾದ ಲಗೇಜುಗಳನ್ನು ಎತ್ತಿಕೊಂಡು, ಕಾಡು ದಾರಿಯ ಮೂಲಕ ಮಾರೇಹಳ್ಳಿ ದೇವಾಲಯ ತಲುಪುತ್ತಿದ್ದೆವು. ಮೇಲೆ ಉರಿಯುವ ಬಿಸಿಲು, ಕುಡಿಯಲು ನೀರು ಇಲ್ಲ. ಅಂದಹಾಗೆ ಆಗೆಲ್ಲಾ ಕುಡಿಯಲು ನೀರಿನ ಬಾಟಲುಗಳಿರಲಿಲ್ಲ. ರೈಲ್ ಚೊಂಬು ಎನ್ನುವ ಅಥವಾ ಕೂಜಾ ಎಂದು ಕರೆಯಲ್ಪಡುವ ಹಿತ್ತಾಳೆಯ ಪಾತ್ರೆಯಲ್ಲಿ ನೀರನ್ನು ಕೊಂಡೊಯ್ಯಬೇಕಾಗಿತ್ತು. ಕಾಡು ರಸ್ತೆಯ ಇಕ್ಕೆಲಗಳಲ್ಲಿ ಮಂಗರವಳ್ಳಿ ಬಳ್ಳಿ ಎನ್ನುವ ಕಾಡು ಬಳ್ಳಿಯನ್ನು ನೋಡಿದೊಡನೆ ಅಮ್ಮ, ಚಿಕ್ಕಮ್ಮನಿಗೆ ಹುರುಳಿ ಹಪ್ಪಳ ನೆನಪಾಗುತ್ತಿತ್ತು. ಅದನ್ನು ಮಾಡಲು ಅದನ್ನು ಬಳಸುತ್ತಿದ್ದರಂತೆ. ಅದು ಅಲ್ಲಿ ಇಕ್ಕೆಲಗಳ ಕಳ್ಳಿ ಮುಳ್ಳುಗಳ ಮೇಲೆ ಹಬ್ಬಿತ್ತು. ಮುಟ್ಟಿದರೆ ಮೈ ಕಡಿತವೂ ಆಗುತ್ತಿತ್ತು.
ಇಷ್ಟೆಲ್ಲಾ ಬಸವಳಿದು ಹೋಗುವ ನಮಗೆ ದೂರದಿಂದಲೇ ಮರಗಳ ಗುಂಪು ಕಂಡೊಡನೆಯೇ ನಮ್ಮ ಆನಂದ ಅಷ್ಟಿಷ್ಟಲ್ಲ. ನಮ್ಮ ಚಪ್ಪಲಿಗಳನ್ನು ಒಂದು ಬ್ಯಾಗನೊಳಗೆ ತುರುಕಿ, ದೇವಾಲಯದ ಪಕ್ಕದ ದಿಡ್ಡಿ ಬಾಗಿಲ ಮೂಲಕ ಪ್ರವೇಶಿಸಿದ ತಕ್ಷಣವೇ, ಗರ್ಭಗುಡಿಗೆ ಹೊಂದಿಕೊಂಡಂತಿರುವ ಎಂಟು ಕಂಬಗಳಿಗೂ ನಮ್ಮ ತಂದೆ ಊರಿನಿಂದ ತಂದಿದ್ದ, ಹಗ್ಗವನ್ನೋ (ಕ್ರಮೇಣ ಪ್ಲಾಸ್ಟಿಕ್ ದಾರ ಬಂದಿತೆನ್ನಿ) ಕಟ್ಟಿ ಅದರ ಮೇಲೆ ಒಂದೆರಡು ಬೆಡ್ ಶೀಟು ಮತ್ತು ಟವಲ್ ಇಳಿಬಿಟ್ಟರೆ ಸಾಕು, ನಮ್ಮ ಬಿಡಾರ ಸಿದ್ದ. ಒಳಗೆ ನಮ್ಮೆಲ್ಲರ ಲಗೇಜು ಇಟ್ಟು, ಮುಂದೆ ಹರಿಯುವ ಕಿರು ನಾಲೆಯಲ್ಲಿ ಕಾಲು ತೊಳೆದು ಒಳಗೆ ಬರುವಾಗ ಮಧ್ಯಾಹ್ನ ಒಂದೂವರೆ ಆಗುತ್ತಿತ್ತು. ಅದಾಗಲೇ ಪ್ರಾಂಗಣದ ಸುತ್ತ ಊಟಕ್ಕೆ ಎಲೆ ಹಾಕುತ್ತಿದ್ದರು. ಅಷ್ಟು ಹೊತ್ತಿಗೆ ಬೆಂಗಳೂರಿನವರು, ಇತರರೂ ಬಂದು ಸೇರಿ, ಕಂಬದ ಡೇರೆಯೊಳಗೆ ಇಣುಕಿ, ನೋಡಿ, ಉಭಯ ಕುಶಲೋಪರಿ ವಿಚಾರಿಸುತ್ತಿದ್ದರು. ಇನ್ನು ನಮ್ಮ ಚಿಕ್ಕಮ್ಮ ಬಂದ ಕೂಡಲೇ, ತಂದಿದ್ದ ಸೀಮೇಣ್ಣೆ ಸ್ಟೌವ್ ಅನ್ನು ಕಾಫಿ ಕಾಯಿಸುವ ಸಲುವಾಗಿ ತಯಾರು ಮಾಡಿ ಇಡುತ್ತಿದ್ದರು.
ಮೊದಲ ದಿನದ ಮಧ್ಯಾಹ್ನದ ಊಟದ ನಂತರ, ಎಲ್ಲರೂ ವಿಶ್ರಾಂತಿ ಪಡೆದು ಸಂಜೆ ಆರರ ಹೊತ್ತಿಗೆ ಮುಖ ತೊಳೆದು ಸಿದ್ಧವಾಗುತ್ತಿದ್ದರು. ಅಂದಿನ ಮಧ್ಯಾಹ್ನದ ಊಟ ಚಾಮರಾಜನಗರದ ಭಕ್ತಾದಿಗಳದ್ದು. ಅವರು ತರುತ್ತಿದ್ದ ಅಮಟೆಕಾಯಿ ಉಪ್ಪಿನಕಾಯಿ ಬಲು ವಿಶೇಷ.
ಸಂಜೆ ಐದರ ನಂತರ, ಹೆಣ್ಣು ಮಕ್ಕಳು ತಲೆ ಬಾಚಿ, ಹೂ ಮುಡಿದು, ಕಿಲ ಕಿಲ ಎಂದು ಪ್ರಾಂಗಣದ ಸುತ್ತ ಪ್ರದಕ್ಷಿಣೆ ಹಾಕುತ್ತಿದ್ದರೆ, ಪಡ್ಡೆ ಹುಡುಗರು, ದೇವಾಲಯದ ಮುಂದಿನ ಗರುಡ ಗಂಬದ ಕಟ್ಟೆಯ ಬಳಿ ಕುಳಿತು ಹರಟೆ ಹೊಡೆಯುತ್ತಿದ್ದರು. ಕಲ್ಯಾಣೋತ್ಸವ ಪ್ರಾರಂಭವಾಗುತ್ತಿದ್ದು ಸಂಜೆಯ ಏಳರ ನಂತರವೇ. ಒಳಗೆ ಅಸಾಧ್ಯ ಶೆಕೆ. ಕೆಲವರಂತೂ ಕೈ ಬೀಸಣಿಗೆ ತರುತ್ತಿದ್ದರು. ಅದರಲ್ಲಿ ಬೀಸಿಕೊಂಡು ಹಿರಿಯರು ಹೊರಗೆ ಕೂರುತ್ತಿದ್ದರು. ಕಲ್ಯಾಣೋತ್ಸವದ ಪ್ರಕ್ರಿಯೆಗಳು ಸುಮಾರು ಏಳೂವರೆಗೆ ಪ್ರಾರಂಭವಾಗತೊಡಗಿದ ಕೂಡಲೇ, ಈ ಹುಡುಗರು ನಾನು ಅಮ್ಮನವರ ಕಡೆ, ನಾನು ಗಂಡಿನ ಕಡೆ ಎಂದು ಭಾಗವಾಗಿ, ಉತ್ಸವವನ್ನು ಹೊರಲು ಸಿದ್ಧವಾಗುತ್ತಿದ್ದರು. ಸಂಬಂಧಿ ಮಾಲೆ, ಮೂರು ಸಾರಿ ಅಲ್ಲೇ ಪ್ರಾಕಾರದ ಮುಂದೆ. ಹೋ ಎಂದು ಕಿರುಚುವ ಮಂದಿ. ಇಲ್ಲೊಂದು ವಿಶಿಷ್ಟವಿದೆ. ಅದುವೇ ಅಲ್ಲಿಯ ವಾದ್ಯ. ಅದು ದುಡಿ. ಡುಂ ಡುಂ ಡುಂಡುಂಡುಂ ಎಂದು ನಾದ ಹೊರಡಿಸುವ ದುಡಿಗಾರನ ಕಲೆಗಾರಿಕೆಗೆ ತಲೆದೂಗಲೇಬೇಕು. ಗಂಟೆ ಶಬ್ದ. ಇವುಗಳ ನಡುವೆ ಗಂಡು ಹೆಣ್ಣು ದೇವರ ಮಾಲೆ ವಿನಿಮಯ ನಡೆದು ಒಟ್ಟಿಗೆ ದೇವರನ್ನ ಮುಂದೆ ಬಿಜಯಗೊಳಿಸಿದ ನಂತರ, ಎಲ್ಲರೂ ಪ್ರಾಂಗಣದಲ್ಲಿ ಅಲ್ಲಲ್ಲೇ ಹಾಗೇ ಕುಳಿತುಕೊಳ್ಳುವರು. ರಾತ್ರಿಯ ಭೋಜನ ೧೧.೩೦ ಆಗಬಹುದು. ಬಹುತೇಕರು ಊಟವೇ ಬೇಡ ಎಂದು ಮಲಗಿಕೊಂಡರೆ, ಊಟ ಮಾಡಿಯೂ ಮಲಗಿಕೊಳ್ಳುತ್ತಿದ್ದರು. ಮೊದಲೇ ಕಾಡಿನ ದೇವಾಲಯ. ಅಸಾಧ್ಯ ಸೊಳ್ಳೆಗಳು. ಬಟ್ಟೆಗಳ ಮೇಲಿನಿಂದಲೇ ಕಡಿಯುತ್ತಿದ್ದವು. ಈ ಕೆಲವು ಪಡ್ಡೆ ಹುಡುಗರು ದೇವಾಲಯದ ತಾರಸಿಯ ಮೇಲೆ ಮಲಗಲು ಹೋಗುತ್ತಿದ್ದುಂಟು. ಆದರೆ ಮಳೆ ಬಂದಾಗ ಫಜೀತಿಯೂ ಆಗಿ ಹೋಗಿದ್ದ ದಿನಗಳು ಇದೆ. ಇವಿಷ್ಟು ಮೊದಲ ದಿನ.
ಮಾರನೇ ದಿನ. ಬೆಳಿಗ್ಗೆ ಆರೂವರೆ ಇಂದ ಏಳಲು ತೊಡಗುವ ಈ ಮಂದಿ, ತಮ್ಮ ಗುಡಾರಗಳಿಗೆ ಬಂದು ಬ್ರಶ್ಸುಗಳಿಗೆ ಪೇಸ್ಟ್ ಅನ್ನು ಹಾಕಿಕೊಂಡು, ಕಾಲುವೆ ಬಳಿಗೆ, ಅನತಿ ದೂರದ ಕಲ್ಯಾಣಿಯ ಬಳಿಗೆ ನಡೆದುಕೊಂಡು ಹೋಗಿ ನಿತ್ಯ ಕ್ರಮ ಮುಗಿಸಿ ಬರುವುದರೊಳಗೆ, ಚಿಕ್ಕಮ್ಮ ಕಾಫಿ ರೆಡಿ ಮಾಡಿಡುತ್ತಿದ್ದರು. ಅಲ್ಲೇ ಕಂಬಕ್ಕೆ ಒರಗಿ ಕಾಫಿ ಕುಡಿದು, ಮತ್ತಷ್ಟು ಹರಟೆ ಹೊಡೆದು, ನಿನ್ನೆ ಬಂದಿದ್ದ ಮಾತಾಡಿಸಲು ಆಗದವರನ್ನು ನೋಡಿ ಮಾತಾಡಿಸುವ ವೇಳೆಗೆ ಎಂಟೂವರೆ ಆಗುತ್ತಿತ್ತು. ಇದೀಗ ಸ್ನಾನದ ಸಮಯ. ಈ ಬಳಗೆರೆ ಕುಟುಂಬ ಎಂದು ತಿಳಿಸಿದೆನಲ್ಲಾ, ಅದೊಂದು ವಿಶಿಷ್ಟ ಕುಟುಂಬ. ಅವರ ಎರಡು ಮಕ್ಕಳು ದೂರದ ಅಮೆರಿಕೆಯಲ್ಲಿದ್ದರು. ಅಮೆರಿಕೆಯಿಂದ ಯಾವುದೇ ಉತ್ಪನ್ನ ಬಂದರೂ ಅದನ್ನು ಅವರ ಮನೆಯವರು ಇಲ್ಲಿಗೆ ತರುತ್ತಿದ್ದುಂಟು. ಈಗ ಸ್ನಾನಕ್ಕೆ ಹೋಗುವ ಸಮಯಕ್ಕೆ ಟೇಪ್ ರೆಕಾರ್ಡರ್, ಶೇವ್ ಮಾಡುವ ಕ್ರೀಂ, ಹೀಗೆ ವಿದೇಶಿ ಪರಿಕರಗಳನ್ನು ಕೇಳಿಯೂ ಇಲ್ಲದ, ನೋಡಿಯೂ ಇಲ್ಲದ ನಮಗೆ ಅದೊಂದು ವಿಶೇಷವಾಗಿತ್ತು.
ಪಡ್ಡೆ ಹುಡುಗರ ಬಗ್ಗೆ ಒಂದಿಷ್ಟು ಹೇಳಲೇಬೇಕು. ಮೂರ್ನಾಲ್ಕು ತಂಡಗಳು. ಪ್ರತಿ ತಂಡದಲ್ಲಿ ಸುಮಾರು ೪ರಿಂದ ೮ ಮಂದಿ. ಹದಿನೈದರಿಂದ ಹದಿನೆಂಟು ಇಪ್ಪತ್ತು ವಯಸ್ಸಿನ ಕೆಲವು ತಂಡ. ಮತ್ತೆ ಕೆಲವರು ಸೀನಿಯರ್ಸ್, ಅಂದರೆ, ಇಪ್ಪತ್ತೆರಡರಿಂದ ಇಪ್ಪತ್ತೈದು ಮೂವತ್ತರವರೆಗೆ. ಹೀಗೆ ಅವರೇ ಅಲ್ಲಿಗೆ ಒಂದು ಕಳೆ. ಎರಡೂ ಮೂರು ಸ್ಕೂಟರಿನಲ್ಲಿ ಅಲ್ಲಿಗೆ ಬೆಂಗಳೂರು, ಮೈಸೂರಿನಿಂದ ಬರುತ್ತಿದ್ದರು. ಉತ್ಸವ ಬಿಜಯ ಮಾಡಲು, ಊಟ ಬಡಿಸಲು, ನೀರು ಹೊರಲು, ದೂರದ ಊರಿನಿಂದ ಬೆಳಿಗ್ಗೆ ಹಾಲು ತರಲು, ಇತ್ಯಾದಿ ಕೆಲಸಗಳಿಗೆ ಅವರ ನೆರವು ಇದ್ದೇ ಇತ್ತು.
ಈ ಪಡ್ಡೆ ಹುಡುಗರು ಸ್ನಾನಕ್ಕೆ ಹೋಗುವಾಗ, ಟೇಪ್ ರೆಕಾರ್ಡರ್ ಹಾಕಿಕೊಂಡು, ಭತ್ತದ ಗದ್ದೆಯ ಜಾರುವ ತೆವರಿಯ ಮೇಲೆ ಒಬ್ಬರ ಹಿಂದೊಬ್ಬರು ನಡೆದು ನಂತರ ಅಲ್ಲಿನ ಕೊಳದ ಕಟ್ಟೆಯ ಮೇಲೆ ಶೇವ್ ಮಾಡಿ, ದುಡುಂ ಎಂದು ನೀರಿಗೆ ಬಿದ್ದು, ಮನಸೋ ಈಜಿ, ನಂತರ ಬರುತ್ತಿದ್ದರು. ಅಷ್ಟು ಹೊತ್ತಿಗಾಗಲೇ ಈ ಪಡ್ಡೆ ಹುಡುಗರ ಅಪ್ಪಂದಿರು, ತಾತಂದಿರು, ಸ್ನಾನ ಮಾಡಿ ಕಟ್ಟೆ ಮೇಲೆ ನಾಮಧಾರಿಗಳಾಗುತ್ತಿದ್ದರು. ಕೊಳದಲ್ಲಿ ಮೀಯುವುದೂ ಒಂದು ಕಾರ್ಯಕ್ರಮವೇ ಆಗಿತ್ತು.
ಜಳಕ ಮುಗಿಸಿ ದೇವಾಲಯದ ಒಳಗೆ ಬಂದ ತಕ್ಷಣ ಪೊಂಗಲ್, ಉಪ್ಪಿಟ್ಟು ಸಿದ್ಧವಾಗಿರುತ್ತಿತ್ತು. ಅದನ್ನು ತಿನ್ನುವ ವೇಳೆಗೆ ಸುತ್ತಮುತ್ತಲಿನ ಜನ ನೆರೆಯತೊಡಗುತ್ತಿದ್ದರು. ದೇವಾಲಯದ ಮಹಡಿಯ ಮೇಲೆ ಬಿಸಿಲಿನ ಝಳ ಪ್ರಖರವಾಗುತ್ತಿದ್ದಂತೆ, ಅಜ್ಜಿಯಂದಿರು ಒಣಗಿಹಾಕಿದ ಸೀರೆಗಳನ್ನು ಕಾಯ್ದುಕೊಂಡು, ತಲೆ ಕೂದಲು ಒಣಗಿಸಿಕೊಳ್ಳುವುದು ಸಾಮಾನ್ಯವಾಗಿತ್ತು. ಪೀಪಿಗಳ ಶಬ್ದ, ಜನರ ಜೈಕಾರ, ಮಾವಿನಕಾಯಿ ಮಾರುವವರು, ಐಸ್‌ಕ್ಯಾಂಡಿ, ಹೀಗೆ ಜಾತ್ರೆಯ ಎಲ್ಲಾ ಜನಗಳೂ ಹತ್ತು ಗಂಟೆಯೊಳಗೆ ದೇವಾಲಯದ ಸುತ್ತ ಹಾಜರಿರುತ್ತಿದ್ದರು.
ಅಲ್ಲೆಲ್ಲಾ ದಿಢೀರ್ ಮದುವೆಗಳು ಕೂಡಾ ನಡೆಯುತ್ತಿದ್ದವು. ದೇವರು ಯಾತ್ರಾದಾನ ಮುಗಿಸಿ ತೇರು ಏರುವುದರೊಳಗೆ ಹಿರಿಯರುಗಳು ಅಲ್ಲೇ ಸುತ್ತಮುತ್ತ ಜನಜಂಗುಳಿ ವೀಕ್ಷಿಸುತ್ತಿದ್ದರು. ಚಿಕ್ಕಮ್ಮ ದೊಡ್ಡಮ್ಮನವರುಗಳು ಮಾವಿನಕಾಯಿ, ಹಣ್ಣು, ಅಲ್ಲಿನ ಚಾಪೆ ಖರೀದಿಸುವುದರಲ್ಲಿ ನಿರತರಾಗಿದ್ದರೆ, ವಯಸ್ಸಿನ ಹುಡುಗರು ಹುಡುಗಿಯರ ಕಣ್ ನೋಟ, ಹಾವಭಾವಗಳು ಒಂದೇ ಎರಡೇ. ಜೊತೆಗೆ ನಮ್ಮ ತಂದೆ, ಚಿಕ್ಕಪ್ಪನವರ ಮತ್ತೊಂದು ಸೀನಿಯರ್ ಗ್ಯಾಂಗ್ ತೋಪಿನಲ್ಲಿ ಇಸ್ಪೀಟು ಆಡುತ್ತಾ ಸಮಯದ ಪರಿವೆಯೇ ಇಲ್ಲದಂತೆ ಇರುತ್ತಿದ್ದರು.
ತೇರು ಹೊರಟ ನಂತರ ದೇಗುಲದ ಒಳಗೆ ಊಟಕ್ಕೆ ಎಲೆ ಹಾಕುತ್ತಿದ್ದುದುಂಟು. ಹಿರಿ ಮಡಿವಂತರು ಮೊದಲೇ ಕುಳಿತರೆ, ಇತರರು ತಮಗೂ ತಮ್ಮ ಕಡೆಯವರಿಗೂ ಜಾಗ ಹಿಡಿದು ಕೂರುತ್ತಿದ್ದರು. ಪಡ್ಡೆ ಹುಡುಗರು, ನೀರು, ಎಲೆ, ಊಟ ಬಡಿಸಲು ಸಿದ್ದವಾಗುತ್ತಿದ್ದರು. ಅಡಿಗೆ ಮನೆ ಹೊಗೆ ಹೇಳತೀರದು. ಕಣ್ಣುಗಳಲ್ಲಿ ನೀರು, ಅಸಾಧ್ಯ ಶೆಕೆ, ಬೆವರುತ್ತಾ, ಕಣ್ಣುಗಳನ್ನು ಒರೆಸುತ್ತಾ, ಬಕೆಟುಗಳಿಗೆ, ಬೇಸಿನ್‌ಗಳಿಗೆ ಊಟದ ಪದಾರ್ಥಗಳನ್ನು ಹಾಕಿಕೊಂಡು ಬಗ್ಗಿ ಬಗ್ಗಿ ಬಡಿಸುತ್ತಾ ಇರಬೇಕೆಂದರೆ, ಗಟ್ಟಿ ಬೆನ್ನುಮೂಳೆಯೇ ಇರಬೇಕು. ಸಾಂಬಾರು, ಸಾರು, ಪಾಯಸ, ಮಜ್ಜಿಗೆ ಇವುಗಳನ್ನು ಬಡಿಸಲು ತೆಂಗಿನ ಚಿಪ್ಪಿಗೆ ಕೊರೆದು ಕಡ್ಡಿ ಸಿಗಿಸಿ ಸೌಟನ್ನು ಮಾಡಿರುವ ದಿನಗಳೂ ಇದ್ದವು. ಹೀಗೆ ಮೂರು ನಾಲ್ಕು ಪಂಕ್ತಿಗಳು ಮುಗಿದ ನಂತರ, ಬಡಿಸಿ ಬಡಿಸಿ ಆಯಾಸವಾಗಿರುವ ಈ ಹುಡುಗರಿಗೆ ಅಡುಗೆ ಮನೆಯ ಒಳಗೆ ಒಬ್ಬ ಅನ್ನ ಸಾಂಬಾರ್ ಕಲೆಸಿ, ಅದನ್ನೇ ನೀಡುತ್ತಿದ್ದ. ಬೆವರೊಡೆದು ಆಯಾಸವಾಗಿದ್ದ ಇವರು ಅದನ್ನು ತಿಂದು ನಂತರ ಕೈ ತೊಳೆಯಲು ನಾಲೆಗೆ ಹೋದರೆ, ಇನ್ನು ಬರುತ್ತಿದ್ದುದು ಸಂಜೆಗೆ. ಅಂದರೆ ಅವರು ನಾಲೆಯಲ್ಲಿಯೇ ಬಿದ್ದು ದೇಹವನ್ನು ತಂಪಾಗಿಸಿಕೊಂಡು, ಘಟನೆಗಳನ್ನು ಅವಲೋಕಿಸುತ್ತಾ ಸಂಜೆ ಆರಕ್ಕೆ ವಾಪಸ್ಸು ಬಂದಾಗ ಚಿಕ್ಕಮ್ಮ ದೊಡ್ಡಮ್ಮ ಕೋಡುಬಳೆ, ನಿಪ್ಪಟ್ಟು, ರವೆಉಂಡೆ ನೀಡಿ, ಕಾಫಿ ಕೊಡುತ್ತಿದ್ದಳು. ಅದರ ಮಜವೇ ಬೇರೆ. ಇನ್ನು ಕೆಲವರು ನಾಲೆಯ ಮೇಲ್ಭಾಗದಲ್ಲಿಯೇ ಕೊಂಡ ಮಾವಿನ ಹಣ್ಣನ್ನು ಕವರಿ ಚೀಪಿ ತಿಂದು ಓಟೆ ಬಿಸಾಕಿ ಕೈ ತೊಳೆಯುತ್ತ ಬರುತ್ತಿದ್ದುದುಂಟು.
ಅಷ್ಟು ಹೊತ್ತಿಗೆ ಕೆಲ ಹಿರಿಯರು ಸಂಜೆಯ ವಿಷ್ಣು ಸಹಸ್ರನಾಮ ಪಾರಾಯಣಕ್ಕೆ ಅಣಿಯಾಗಿ, ಗರ್ಭಗುಡಿಯ ಕಂಬಗಳ ಪ್ರಾಂಗಣದ ಸುತ್ತಲೂ ಪಠಿಸುತ್ತಾ ಪ್ರದಕ್ಷಿಣವಾಗಿ ಬರುತ್ತಿದ್ದರೆ, ಆ ಸಮೂಹ ಕ್ರಮೇಣ ಹತ್ತು ಇಪ್ಪತ್ತು, ಮೂವತ್ತು ಹೀಗೆ ದೊಡ್ಡದಾಗುತ್ತಾ ಬಂದು, ನಂತರ ʼವನಮಾಲೀ ಗದೀಶಾಂಗೀ..ʼ ಎನ್ನುವ ಹೊತ್ತಿಗೆ ಹೆಂಗಸರು, ಗಂಡಸರು, ಮಕ್ಕಳು ಹೀಗೆ ಎಲ್ಲರೂ ಇರುತ್ತಿದ್ದರು. ಇದಾದ ನಂತರ ವಾರ್ಷಿಕ ಮಹಾ ಸಭೆಗೆ ಸದಸ್ಯರು ಅಣಿಯಾಗುತ್ತಿದ್ದರು. ಸಭೆ ಎಂದರೆ ಅಲ್ಲೇ ಜಮಖಾನ ಹಾಸಿ ಎಲ್ಲರೂ ಕೂತು ವರುಷದ ಆಯವ್ಯಯ, ಇತ್ಯಾದಿಗಳ ಚರ್ಚೆ ಮತ್ತು ಮುಂದಿನ ಸಾಲುಗಳಿಗೆ ಸದಸ್ಯರ ಆಯ್ಕೆ. ಆದರೆ ಈ ಸಭೆ ಶುರುವಾದೊಡನೆಯೇ ಗದ್ದಲ, ಗಲಾಟೆಯೇ ಜಾಸ್ತಿ. ಹೇಗೋ ಸಭೆ ನಡೆದ ನಂತರ, ದೇವರಿಗೆ ಶಾಂತ್ಯುತ್ಸವ. ನಂತರ ಪ್ರಸಾದ ವಿನಿಯೋಗ. ಇಲ್ಲಿಗೆ ಎರಡನೆಯ ದಿನ ಸಂಪನ್ನ.
ಮೂರನೆಯ ದಿನ. ಗರುಡೋತ್ಸವ. ಎಂದಿನಂತೆಯೇ ಪ್ರಾತಕರ್ಮಗಳು. ನಂತರ ಬಂದೊಡನೆಯೇ ಪೊಂಗಲ್, ಪುಳಿಯೊಗರೆ ಸಿದ್ಧ. ತಿಂದ ನಂತರ, ಗರುಡೋತ್ಸವಕ್ಕೆ ಸಿದ್ಧತೆ. ಇದಕ್ಕಾಗಿ ಚೀಟಿ ಬರೆಸಬೇಕು. ಮೊದಲು ಒಂದು ಪ್ರದಕ್ಷಿಣೆ ಹನುಮಂತೋತ್ಸವ. ನಂತರ ಮೂರು ಪ್ರದಕ್ಷಿಣೆಗಳ ಬಳಿಕ ಗರುಡೋತ್ಸವ. ಉತ್ಸವದ ಮುಂದೆ ಹಾಡು, ಶ್ಲೋಕ, ಹೀಗೆ ವೈವಿಧ್ಯತೆಗಳು. ದೇವರು ನೆಲೆ ಸೇರಿದ ಬಳಿಕ, ನೈವೈದ್ಯ ಮತ್ತು ಭೋಜನ. ಬಹುಶಃ ಸಂಜೆಯ ಮೂರೂವರೆ ಅಥವಾ ನಾಲ್ಕಾದರೂ ಆಗಬಹುದು. ಅಷ್ಟು ಹೊತ್ತಿಗೆ ಬಿಸಿಲಿಗೆ ಬೆಂದಿರುವ ನೆಲಕ್ಕೆ ಧೋ ಎನ್ನುವ ಮಳೆಯೂ ಒಮ್ಮೊಮ್ಮೆ ಬರುವುದುಂಟು. ಹೊಟ್ಟೆ ಬಿರಿಯುವಂತೆ ಊಟ ಮಾಡಿದ ನಂತರ, ನಮ್ಮ ನಮ್ಮ ಬಿಡಾರಗಳನ್ನು ತೆರವುಗೊಳಿಸಿ, ಒಬ್ಬೊಬ್ಬರೇ, ಬಸ್ ಸ್ಟಾಂಡಿನ ಕಡೆಗೆ ಹೆಜ್ಜೆ ಹಾಕುತ್ತಿದ್ದೆವು. ಊಟದ ನಂತರ ಸುಡುವ ಬಿಸಿಲಲಿ ಬೇಯುತ, ಕಿಟ್ಟುಗಳ ಹ್ಯಾಂಡಲ್‌ಗಳಿಗೆ ಕಡ್ಡಿ ತೂರಿಸಿ, ಎರಡೂ ಕಡೆಗಳಲ್ಲಿ ಇಬ್ಬರು ಹಿಡಿದು, ಹೆಗಲ ಮೇಲೆ ಹೋಲ್ಡಾಲ್, ಪಾತ್ರೆ ಚೊಂಬು, ಸ್ಟೌವ್‌ಗಳ ಚೀಲ, ಹೀಗೆ ಅಗಾಧ ಲಗೇಜು ಹೊತ್ತು, ಬೆಂಗಳೂರಿನ ಕಡೆಯ ಬಸ್ಸು ಬಂದರೆ, ನಮ್ಮ ಈ ಪಡ್ಡೆಗಳು ಕಿಟಕಿಯಿಂದ ಬಟ್ಟೆ, ಚಾಪೆ ಹಾಕಿ ಸೀಟು ಹಿಡಿಯುತ್ತಿದ್ದವು. ಮೈಸೂರಿನ ಕಡೆಯ ಬಸ್ಸಿಗೆ ಅಲ್ಲಿಯವರು ಸಾಹಸ ಪಟ್ಟು ಏರುತ್ತಿದ್ದರು. ಅಂದಿನ ಕಾಲದಲ್ಲಿ ಬಸ್ಸುಗಳು ಬಹಳ ವಿರಳ. ಇದ್ದ ಒಂದೆರಡು ಬಸ್ಸು ಬಂದಾಗಲೇ ಏರಿಕೊಳ್ಳಬೇಕಿತ್ತು. ಇನ್ನು ಬಸ್‌ಸ್ಟಾಂಡಿನ ಕರ್ಮಕಾಂಡ. ಅಲ್ಲಲ್ಲಿ ತಿಂದು ಬಿಸುಟ ಮಾವಿನ ಓಟೆಗಳಿಗೆ ಮುತ್ತುವ ನೊಣಗಳು, ಗಲೀಜು ಮಣ್ಣಿನ ನೆಲ, ಮೂತ್ರದ ಘಾಟು ವಾಸನೆಯ ನಡುವೆ ಬಿಸಿಲಲ್ಲಿ ಬಸ್ಸಿಗೆ ಕಾಯಬೇಕಾದಾಗ, ಮೂರು ದಿನದ ಆನಂದ ಸಾಕಪ್ಪ ಸಾಕು ಎನಿಸಿಬಿಡುತ್ತಿತ್ತು. ಆದರೆ ಒಮ್ಮೆಲೆ ಬಸ್ಸು ಬಂದಾಗ, ಕಿಟಕಿಯೋ, ಬಾಗಿಲೋ, ಸಾಹಸಪಟ್ಟು ಒಳಹೊಕ್ಕು ಸೀಟು ಹಿಡಿದ ಮೇಲೆ, ಅವೆಲ್ಲವೂ ಮರೆತೇ ಹೋಗುತ್ತಿತ್ತು.
ಹೀಗೆ ಬಸ್ಸಿನಲ್ಲಿ ಬರುವಾಗ ನಡೆದ ಘಟನೆಗಳನ್ನು ಅವಲೋಕಿಸುತ್ತಾ, ಕಳೆದ ಒಂದೊಂದು ಕ್ಷಣದ ಬಗ್ಗೆ ಆನಂದ ಪಡುತ್ತಾ, ಇದನ್ನು ಮದುವೆ ಸಮಾರಂಭಕ್ಕೆ ಹೋಲಿಸುತ್ತಿದ್ದುಂಟು. ಮೊದಲ ದಿನ ವರಪೂಜೆ, ಎರಡನೆಯ ದಿನ ಧಾರೆ ಮತ್ತು ಮೂರನೆಯ ದಿನ ಬೀಗರೌತಣದ ರೀತ್ಯ. ಇನ್ನು ಓದುವ ಹುಡುಗರು, ಶಾಲಾ ಕಾಲೇಜಿನಲ್ಲಂತೂ, ಮುಂಬರುವ ಮಾರೇಹಳ್ಳಿಯವರೆಗೂ ಕಾದು ಕುಳಿತವರೆಷ್ಟೋ.
ರಥೋತ್ಸವದ ಐದನೆಯ ದಿನ ಕಾರ್ಯಕ್ರಮಗಳ ಕಡೆಯ ದಿನ. ಅಂದು ಸ್ಥಳೀಯ ಭಕ್ತಾದಿಗಳಿಂದ ದೇವರಿಗೆ ಮುದ್ದೆ ಸೊಪ್ಪಿನ ಸಾರಿನ ಸೇವೆ ನಡೆಯುತ್ತದೆ. ದೇಶದ ಯಾವುದೇ ದೇವಾಲಯದಲ್ಲಿರುವ ಸಾಮರಸ್ಯ ಇಲ್ಲಿದೆ. ಎಲ್ಲಾ ವರ್ಗದ ಜನರಿಗೆ ಒಟ್ಟಾಗಿಯೇ ಕೂರಿಸಿ ಊಟಕ್ಕೆ ಹಾಕುವ ಏಕೈಕ ಶ್ರೀವೈಷ್ಣವ ದೇವಾಲಯ ಇದು ಮಾತ್ರ. ಇದೀಗ ಕೇಂದ್ರ ಪ್ರಾಚ್ಯವಸ್ತು ಇಲಾಖೆ ದೇವಾಲಯದ ಸುತ್ತಲಿನ ಅನಧಿಕೃತವೆಂದು ಹೇಳುವ ಕೆಲವು ವಸತಿ ವ್ಯವಸ್ಥೆಗಳನ್ನು ಕೆಡವಿದೆ. ಸುತ್ತಲೂ ಕಬ್ಬಿಣದ ಬೇಲಿ ಹಾಕಿ ಅದಕ್ಕೊಂದು ಗೇಟ್ ಇಟ್ಟು ಸಂರಕ್ಷಣೆ ಮಾಡಲಾಗಿದೆ. ಸೋಮನಾಥಪುರ, ಬೇಲೂರು ಹಳೇಬೀಡು ದೇವಾಲಯಗಳ ಪ್ರಾಂಗಣದಂತೆ ಇಲ್ಲಿಯೂ ಉದ್ಯಾನವನ ಮಾಡಲಾಗುವುದಂತೆ. ವಿಪರ್ಯಾಸವೆಂದರೆ ಹಾಲಿ ಇದ್ದ ಫಲ ನೀಡುತ್ತಿದ್ದ ಹದಿನೈದು ತೆಂಗಿನ ಮರಗಳನ್ನು ಕಡಿದು ಉರುಳಿಸಿದ್ದಾರೆ. ಅದೆಲ್ಲಾ ಇರಲಿ, ನೀವು ಎಲ್ಲೇ ಮುದ್ದೆ ಮುರಿದಿದ್ದರೂ, ಇಲ್ಲಿನ ಸೊಪ್ಪಿನ ಸಾರು ಮುದ್ದೆ ರುಚಿಯೇ ಬೇರೆ.
ಮಾರೇಹಳ್ಳಿ ಬರೀ ಅಧ್ಯಾತ್ಮ, ಧಾರ್ಮಿಕ ಚಿಂತನಗೆ ಸೀಮಿತವಾಗಿರಲಿಲ್ಲ. ಅದು ಲವರ್ಸ್ ಪ್ಯಾರಡೈಸ್ ಕೂಡಾ ಎನಿಸುವಂತಿತ್ತು. ಅದೆಷ್ಟು ಕುಟುಂಬಗಳು ಅಲ್ಲಿ ಮದುವೆ ಪ್ರಸ್ತಾಪ ನಡೆಸಿ, ಮದುವೆ ಮಾಡಿ, ಇದೀಗ ಅವರಿಗೆ ಮಕ್ಕಳು, ಮೊಮ್ಮಕ್ಕಳು ಆಗಿವೆ. ಕಾಲ ಬದಲಾದಂತೆಲ್ಲಾ, ಇಲ್ಲೂ ಬದಲಾವಣೆ ಬಂದಿತು, ಅಡುಗೆ ಮನೆಯ ಸೌದೆ ಹೋಗಿ ಗ್ಯಾಸ್ ಬಂದಿತು. ಬಡಿಸಲು ಟ್ರಾಲಿ ಬಂದಿತು. ಕಾಡಿನ ಕಚ್ಚಾ ರಸ್ತೆಯ ಬದಲಿಗೆ ಟಾರು ರಸ್ತೆ ಬಂತು. ದೇವಾಲಯಕ್ಕೆ ಜನರೇಟರ್ ಬಂತು. ದೇವಾಲಯ ಕೇಂದ್ರ ಸರ್ಕಾರದ ಪುರಾತತ್ವ ಇಲಾಖೆಗೆ ಒಳಪಟ್ಟ ಕಾರಣ ಸುತ್ತಮುತ್ತಲೂ ತಂತಿ ಬೇಲಿ ಹಾಕಲಾಯಿತು. ವರುಷಕ್ಕೊಮ್ಮೆ ತೆರೆಯುತ್ತಿದ್ದ ದೇವಾಲಯ ಇದೀಗ ದಿನವೂ ತೆರೆಯುತ್ತಿದೆ. ಆದರೆ ಈ ವೈಭವಗಳನ್ನು ನೋಡಲು ಬಹಳಷ್ಟು ಅಂದಿನ ಹಿರಿಯರಿಲ್ಲ.
ಇದೀಗ ಎಲ್ಲರ ಬಳಿ ಕಾರುಗಳಿವೆ. ರಸ್ತೆಗಳೋ ಒಂದೆರಡು ಗಂಟೆ ಸಾಕು. ಬೇಕೆನಿಸಿದಾಗ ಹೋಗಿ ಬರಬಹುದು. ಈ ಕಾಡಿನ ವಾಸದ, ಏಕಾಂತದ ಸುಖ, ಭತ್ತದ ಗದ್ದೆಗಳ ಮೇಲಿನ ಗಾಳಿಯ ವಾಸನೆ ಮತ್ತು ಶಬ್ಧ, ಕಾಲುವೆಯಲ್ಲಿ ಕಾಲಿಳಿಬಿಟ್ಟುಕೊಂಡು ನೀರು ಎರಚುವ ಪರಿ, ಭಕ್ತ ಜನರಿಗೆ ಊಟ ಬಡಿಸುವ ವೈಖರಿ, ಎಲ್ಲಕ್ಕಿಂತ ಮುಖ್ಯವಾಗಿ ದುಡಿಯ ಶಬ್ದ ಕಿವಿಯಲ್ಲಿ ಅನುರಣಿಸುವ ಮಜಗಳು ಮಾತ್ರ ನಮ್ಮ ಮಕ್ಕಳಿಗೆ ದೊರಕಲಾರದು. ನಗರವಾಸಕ್ಕೆ ಹೊರತಾಗಿ, ಕಾಡಿನ ಮಧ್ಯೆ ನಗರೀಕರಣದ ಜಂಜಾಟ ಗದ್ದಲಗಳಿಲ್ಲದೇ, ಸುತ್ತಮುತ್ತ ಕಾಲುವೆ ಕೊಳ, ಹಸಿರು ಗದ್ದೆಗಳ ನಡುವೆ, ಜನಜಂಗುಳಿಯೇ ಇಲ್ಲದ ಆ ಪ್ರಶಾಂತ ಸ್ಥಳದಲ್ಲಿ ಮೂರು ದಿನಗಳು ನಗರವಾಸದಿಂದ ಹೊರಗಿರುವ, ಕಾಲದ ಮಿತಿಯೇ ತಿಳಿಯದ, ಬಸ್ಸು, ಕಾರು, ವಾಹನಗಳ ಶಬ್ಧಗಳಿಲ್ಲದೇ, ಗಾಳಿ, ಬಿಸಿಲು, ಮಳೆಯ ಶಬ್ಧಗಳ, ಮಣ್ಣಿನ ವಾಸನೆ ಅನುಭವಿಸುವ, ಮಳೆ ಬಂದಾಗ ಕಲ್ಲಿನ ಮಂಟಪಗಳಲ್ಲಿ ಮೊರೆಹೋಗುವ, ಡಮ್ ಡಕ್ಕ ಎನ್ನುವ ಚರ್ಮದ ದುಡಿ ಶಬ್ಧವೇ ಅನೂಹ್ಯ, ಅನನ್ಯ ಮತ್ತು ಅವಿಸ್ಮರಣೀಯ. ಒಟ್ಟಾರೆ ಮಾರೇಹಳ್ಳಿ, ಇತರೆ ರಥೋತ್ಸವಗಳಂತಲ್ಲ, ಅದೊಂದು ಅಪೂರ್ವ ಮರೆಯಲಾಗದ ನೆನಪುಗಳೆಂದರೆ ಅತಿಶಯೋಕ್ತಿಯೇನಿಲ್ಲ.
ಹೆಚ್ಚಿನ ಬರಹಗಳಿಗಾಗಿ
‘ಒಬ್ಬಂಟಿಕರಣ’ ದ ಲೋಕಾರ್ಪಣೆ
ವಿಶ್ವ, ವಿಶಾಲೂ ಮತ್ತು ಅಧ್ಯಾತ್ಮ
ರೇಟಿಂಗ್ ಗಳ ಧೋರಣೆ