ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಮೀನು ಬೇಟೆಗೆ ನಿಂತ ದೋಣಿ ಸಾಲು; ಈ ಅಲ್ಪ ಕಂಡಂತೆ.

ಮೃತ್ಯುಂಜಯ ಸಾಲಿಮಠ
ಇತ್ತೀಚಿನ ಬರಹಗಳು: ಮೃತ್ಯುಂಜಯ ಸಾಲಿಮಠ (ಎಲ್ಲವನ್ನು ಓದಿ)

ಕವಿತೆ ಅಂದುಕೊಂಡು ಕೆಲ ರಚನೆಗಳ ನಾನು ಮಾಡಿದ್ದೇನಾದರೂ “ನಾನೂ ಕೂಡ ಒಬ್ಬ ಕವಿ” ಅನ್ನುವ, ಅಂದುಕೊಳ್ಳುವ ಧೈರ್ಯ ಇನ್ನೂ ನನಗಿಲ್ಲ. ಹಾಗಾಗಿ ನಾನೊಬ್ಬ ಸಾಹಿತ್ಯಾಸಕ್ತ. ನನ್ನ ಅಧ್ಯಯನ, ಅನುಭವದ ಹರಹು ಬಹಳ ಚಿಕ್ಕದು. ಈ ಹಿನ್ನೆಲೆಯ ನಾನು ಒಬ್ಬ ಓದುಗನಾಗಿ ಡಿ. ಎಸ್. ರಾಮಸ್ವಾಮಿ  ಅವರ ಮೀನು ಬೇಟೆಗೆ ನಿಂತ ದೋಣಿ ಸಾಲು ಕವನ ಸಂಕಲನ ಓದಿದೆ. ಒಂದಲ್ಲ ನಾಲ್ಕು ಬಾರಿ ಓದಿದೆ. ಎಲ್ಲಾ ಕವಿತೆಗಳು ಮೊದಲ ಓದಿಗೆ ದಕ್ಕದ ಕಾರಣಕ್ಕೂ, ಓದಿದ ಕೆಲ ಕವಿತೆಗಳು ಮತ್ತೆ ಮತ್ತೆ ಕೈ ಹಿಡಿದು ಮತ್ತೊಮ್ಮೆ ನನ್ನ ಓದು ಅನ್ನುವ ಹಠಕ್ಕೆ ಬಿದ್ದ ಕಾರಣಕ್ಕೂ ಮತ್ತೂ ನನ್ನ ಗ್ರಹಿಕೆಯ ಮಿತಿಯ ಹಿಗ್ಗಿಸಿಕೊಳ್ಳುವ ಸ್ವಾರ್ಥದ ನನ್ನ ಆ ಆಸೆಯ ಕಾರಣಕ್ಕೂ ಮತ್ತೆ ಮತ್ತೆ ನಿಮ್ಮ ಕವಿತೆಗಳ ಓದಿದೆ.

ಶ್ರೀ ಡಿ. ಎಸ್. ರಾಮಸ್ವಾಮಿ

ಮೀನು ಬೇಟೆಗೆ ನಿಂತ ದೋಣಿ ಸಾಲು.. ಅನ್ನುವ ಶ್ರೀಯುತರ ಕವನ ಸಂಕಲನದ ಶೀರ್ಷಿಕೆ ಓದಿದ ತಕ್ಷಣ ಮೊದಲಿಗೆ ನನ್ನಲ್ಲಿ ಒಂದು ಸಣ್ಣ ಋಣಾತ್ಮಕ ಭಾವ ಮೂಡಿಸಿದ್ದು ಸುಳ್ಳಲ್ಲ. ಗಾಂಧೀ ಜಯಂತಿಯ ಆಸು ಪಾಸಿನಲ್ಲಿ ಕೂತು ಗಂಭೀರವಾಗಿ ನಿಮ್ಮ ಕವನ ಸಂಕಲನ ಓದಿದ ಕಾರಣಕ್ಕೋ, ಬೇಟೆ ಅನ್ನುವುದೇ ಹಿಂಸೆಯ ಚಿತ್ರ ಮೂಡಿಸುವ  ಕಾರಣಕ್ಕೋ ಸಣ್ಣದೊಂದು ಋಣಾತ್ಮಕ ಭಾವ ನನ್ನೊಳಗೆ ಸುಳಿದು ಹೋಯ್ತು. ಮುನ್ನುಡಿ ಬೆನ್ನುಡಿಗಳ ಓದದೇ ಪುಸ್ತಕ ಓದುವ ಪರಿಪಾಠ ಇಟ್ಟುಕೊಂಡಿರುವ ಕಾರಣ, ಅವುಗಳ ಮೇಲೆ ಕಣ್ಣಾಡಿಸದೇ ನಿಮ್ಮ ಕವಿತೆಗಳ ಅಂಗಳಕ್ಕೆ ಇಳಿಯ ಹೊರಟೆ. ಒಟ್ಟು ಐವತ್ತಾರು ಕವಿತೆಗಳು. ಐವತ್ತಾರು ಕವಿತೆಗಳ ಒಟ್ಟಾರೆಯಾಗಿ ನೋಡಿದಾಗ ಅನ್ನಿಸಿದ್ದು, ಇಲ್ಲಿಯ ಬಹುತೇಕ ಕವಿತೆಗಳು ಚಿತ್ರ ಕಾವ್ಯಗಳು. ಒಂದೊಂದು ಕವಿತೆಯಲ್ಲಿ ಒಂದೊಂದು ಚಿತ್ರ. ಪೂರ್ಣ ಚಿತ್ರ. ಪೂರ್ಣವಾಗುವ ಹಂಬಲ ಇಟ್ಟುಕೊಂಡ ಚಿತ್ರ. ಕವಿಯ ಈ ಚಿತ್ರಕ ಶಕ್ತಿಯ ಕಾರಣದಿಂದ ಕವಿತೆಗಳು ಓದಲು ಶುರು ಮಾಡುವ ಶುರುವಿನಲ್ಲಿಯೇ ಕೈ ಹಿಡಿದು ಮೆಲ್ಲಗೆ ಒಳಗೆ ಎಳೆದುಕೊಳ್ಳುತ್ತಾವೆ. ಆ ಕಾರಣಕ್ಕೆ ಈ ಕವಿತೆಗಳ ಓದುತ್ತಾ ಓದುತ್ತಾ …. ಕವಿಯೊಂದಿಗೆ ನಾವೂ ಆ ಕವಿತೆಗಳ ಆಂತರ್ಯದ ಚಿತ್ರಗಳಲ್ಲಿ ಭಾಗಿಯಾಗಿ, ಸಾಕ್ಷಿಯಾಗಿ, ಕವಿತೆಯೊಳಗೆ ನಡೆದುಕೊಂಡು ಹೋಗಿ.. ಕವಿತೆಗಳ ಒಳಗೆ ಇಳಿಸಿಕೊಳ್ಳುವ ಆಸೆಯಿಂದ ಓದಲು ಹೊರಟು, ಕವಿತೆಗಳ ಒಳಗೆ ಇಳಿದು ಕಳೆದುಹೋಗುತ್ತೇವೆ. ಇಲ್ಲಿನ ಕವಿತೆಗಳು ಏಕಾಂತದ ಕತೆ ಹೇಳದೇ ಲೋಕಾಂತದ ಕತೆ ಹೇಳುತ್ತಾ, ಆ ಲೋಕಾಂತವನ್ನ ಏಕಾಂತದ ಭಾಗವಾಗಿಸುವ ಗುಣ ಹೊಂದಿದ್ದಾವೆ ಅಂದರೆ ತಪ್ಪಾಗಲಾರದು. ಲೋಕಾಂತದ ವಾಸ್ತವದ ಚಿತ್ರಣ, ಗಾಢ ಛಾಯೆ ಅನೇಕ ಕವಿತೆಗಳ ಆವರಿಸಿದೆ. ಕೆಲವು ಕವಿಗಳಿಗೆ ಕವಿತೆ ಏಕಾಂತದ ಕತೆ ಹೇಳಲು  ಮಾತ್ರ ಇರುವ ಸಾಧನ ಅನ್ನಿಸಿದರೆ, ಕೆಲವು ಕವಿಗಳಿಗೆ ಲೋಕಾಂತದ ಕತೆ ಹೇಳಲು, ಸುತ್ತಲಿನ ಜಗತ್ತಿಗೆ ಸ್ಪಂದಿಸಲು, ಕಾಣಲು, ಕಾಣಿಸಲು, ತಿದ್ದಲು, ತಿಳಿಯಲು, ತಿಳಿಸಲು ಇರುವ ಸಾಧನವಾಗಿ ಕಾಣುತ್ತೆ. ಇಲ್ಲಿನ ಕವಿತೆಗಳು ಸುತ್ತಲಿನ ಜಗತ್ತ ಪ್ರತಿ ಬಿಂಬದಂತೆ ಗೋಚರಿಸಿದರೂ ಯಾವುದೇ ಕವಿತೆ ಯಾವುದೇ ಘೋಷಣೆ ಮಾಡುವುದಿಲ್ಲ.. ಇದೇ ಸರಿ.. ಇದೇ ತಪ್ಪು ಅಂತ ಹೇಳ ಹೊರಡುವುದಿಲ್ಲ.. ಹಾಗೆ ಮಾಡಹೊರಡುವುದು ಬಹುಶಃ ಕವಿತೆ ಆಗುವುದಿಲ್ಲ. ರೂಪಕಗಳ ಭಾರಕ್ಕೆ ಬೆನ್ನು ಬಾಗಿಸಿಕೊಳ್ಳುವ ತ್ರಾಸು ಇಲ್ಲಿಯ ಯಾವುದೇ ಕವಿತೆ ಅನುಭವಿಸಿಲ್ಲ. ತಾನಿರುವ ಜಗತ್ತನ್ನ ಅದು ಇರುವ ಹಾಗೆ ಕಂಡು ಅರ್ಥೈಸಿಕೊಂಡು ಅದಕ್ಕೆ ಪೂರಕವಾಗಿ ಸ್ಪಂದಿಸುವ ಕೆಲಸವನ್ನ ಇಲ್ಲಿಯ ಬಹುತೇಕ ಕವಿತೆಗಳು ಮಾಡಿದ್ದಾವೆ. ಹಾಗೆ ತನ್ನ ಸುತ್ತಲಿನ ಜಗತ್ತನ್ನ ಆಗು ಹೋಗನ್ನ ತೆರೆದ ಕಣ್ಣುಗಳಿಂದ ನೋಡುತ್ತಾ ಕಟ್ಟಿಕೊಡುತ್ತಾ.. ಸ್ಪಂದಿಸುತ್ತಲೇ ಕವಿತೆಗೆ ಬೇರೆಯದೇ ಆಯಾಮ ಕೊಡುವ, ಕವಿತೆಯನ್ನು ಮತ್ತೂ ಓದುಗನನ್ನು ಬೇರೆಯದೇ ಜಗತ್ತಿಗೆ, ಸ್ತರಕ್ಕೆ ತೆರೆದುಕೊಳ್ಳುವ ಹಾಗೆ ಮಾಡುವ ಒಂದು ಮಾಯಾವಿ ಶಕ್ತಿ ಕೂಡ ಇಲ್ಲಿನ ಅನೇಕ ಕವಿತೆಗಳ ಸಹಜ ಗುಣವಾಗಿರುವ ಕಾರಣ ಈ  ಕವಿತೆಗಳು ವರ್ತಮಾನದ ವಾಸ್ತವಕ್ಕೂ, ಸರ್ವ ಕಾಲಕ್ಕೂ ಸಂದುತ್ತಾ ಸಾರ್ವಕಾಲಿಕವಾಗುವ ಕವಿತೆಗಳಾಗಿವೆ.

ಈ ಸಂಕಲನದ ಎಲ್ಲಾ ಕವಿತೆಗಳು ಇಷ್ಟವಾದವು ಅಂದರೆ ಸುಳ್ಳು ಹೇಳಿದ ಹಾಗೆ ಆಗುತ್ತೆ. ಕೆಲವು ಕವಿತೆಗಳು ಇಷ್ಟ ಆದವು ಅಂದರೆ ಆತ್ಮ ಸಾಕ್ಷಿ ಒಪ್ಪುವ ಮಾತಾಗುವುದಿಲ್ಲ. ಬಹುತೇಕ ಕವಿತೆಗಳು ಆಪ್ತವಾದವು ಇಷ್ಟವಾದವು ಅನ್ನುವುದು ಮಾತ್ರ ಸತ್ಯದ ಮತ್ತು ನನ್ನ ಹೃದಯದ ಮಾತು. ಮಿಕ್ಕ ಕವಿತೆಗಳು ನನ್ನ ಗ್ರಹಿಕೆಯ ಮಿತಿಯ ಕಾರಣ, ನನ್ನ ಅನುಭವದ, ಅಧ್ಯಯನದ ಹರಹು ಕಡಿದಾಗಿರುವ ಕಾರಣ ನನಗೆ ಅರ್ಥವಾಗಿಲ್ಲ ಅಂತಲೇ ನಾನು ಭಾವಿಸಿರುವೆ.

ಅಪ್ಪ ಮತ್ತು ಅಲ್ಜೈಮರ್, ಅಪ್ಪ ಬದುಕಿರುತ್ತಿದ್ದರೆ, ಅನುಸಂಧಾನ, ಕಲಕುವ ಚಿತ್ರಗಳು… ಕವಿತೆಗಳು ಬಹಳ ಆಪ್ತವೆನಿಸಿ ಅಂತರಂಗ ಕಲಕಿದವು. ಬೆಂಗಳೂರು ಪದ್ಯಗಳು ಬದುಕು ಕಟ್ಟಿಕೊಳ್ಳಲು ನನ್ನ ಹಾಗೆ ಬೆಂಗಳೂರಿಗೆ ಬರುವ ಜನಗಳ ಬೆಂಗಳೂರ ಕಣ್ಣಿಗೆ ಕಟ್ಟುವ ಹಾಗೆ ಕಟ್ಟಿ ಕೊಟ್ಟಿದೆ. ಬೆಂಗಳೂರಿನ ಎಲ್ಲಾ ಫ್ಲೇವರ್ಗಳ ಚಿತ್ರಣ ಅಲ್ಲಿದೆ. ಪ್ರಾರ್ಥನೆ, ಅಡಿಗರ ಸ್ಮರಣೆ ಕವಿತೆಗಳು ಶಿಲ್ಪದ ದೃಷ್ಟಿಯಿಂದ ಅಡಿಗರ ಕವಿತೆಗಳ ನೆನಪು ತಂದರೆ, ಚಿಟ್ಟೆ ಮತ್ತು ನಾನು, ಸೀರೆ ಮತ್ತು ಅವಳು, ದ್ವಂದ್ವ ಕವಿತೆಗಳು ಒಟ್ಟಾರೆಯಾಗಿ ಬಹಳ ಇಷ್ಟವಾಗುತ್ತವೆ. ಹೆಣ್ಣು ಮತ್ತು ಅವಳು, ಸೀತೆಯ ಸ್ವಗತ, ಅವಳು(ನು) ಹೊರಸೂಸುವ ಧ್ವನಿಯ ದೃಷ್ಟಿಯಿಂದ ಮುಖ್ಯ ಕವಿತೆಗಳಾಗಿ ಕಾಣುತ್ತಾವೆ.

ಲೌಕಿಕಕ್ಕೆ ಸ್ಪಂದಿಸುತ್ತಲೇ ಇಲ್ಲಿನ ಕೆಲ ಕವಿತೆಗಳು ಪಾರಮಾರ್ಥಿಕದತ್ತ ಮುಖ ಮಾಡಿವೆ. ಲೌಕಿಕದ ಪ್ರಶ್ನೆಗಳಿಗೆ ಅಲೌಕಿಕದಲ್ಲಿ ಉತ್ತರ ಹುಡುಕಿವೆ.

“ಹುಟ್ಟಿದ ಮನೆಯನ್ನು ಹಾಗೇ ಬಿಟ್ಟು ಬಂದೆ
ಹೋಗುವಾಗ ನೀನೇನೇನು ಒಯ್ದೆಯೋ ನನ್ನ ತಂದೆ?”

(ಪಿತ್ರಾರ್ಜಿತದ ಮನೆಯಲ್ಲಿ, ಒಂದು ಹಗಲು)

“ಈಗ ಸ್ಥಾವರ ಮರದ ಧ್ಯಾನ
ಹಾಗೇ ಜಂಗಮ ಹಕ್ಕಿಯ ಜ್ಞಾನ

ಎರಡೂ ಹಣ್ಣಾದವರಿಗೆ ಅರ್ಥವಾಗುತ್ತದೆ”
(ಕಾಲ ಕಲಿಸಿದ ಪಾಠ)

“ಅಂತರ್ಜಲ ಕುಸಿದಿದೆ ಎಲ್ಲರೆದೆಯಲ್ಲಿ
ಸಂಬಂಧಗಳ ಮರುಪೂರಣಕ್ಕೆ ಯಾರಿಗೂ ವ್ಯವಧಾನವಿಲ್ಲ”

(ಅನುಸಂಧಾನ)

ಅನೇಕಾನೇಕ ಕಾಡುವ ಸಾಲುಗಳಲ್ಲಿ ಇವು ಕೆಲವಷ್ಟೇ. 

ಪುರಾಣ, ಇತಿಹಾಸ, ವರ್ತಮಾನದ ವಾಸ್ತವ ಚಿತ್ರಣಗಳು… ಲೌಕಿಕದ ಹಾದಿಯ ಅಲೌಕಿಕದ ಹಾದಿಗೆ ಬೆಸೆವ ಕೊಂಡಿಗಳು.. ಏನಿಲ್ಲ ಇಲ್ಲಿಯ ಕವಿತೆಗಳಲ್ಲಿ ಎಲ್ಲಾ ಇದೆ. ಸುಮ್ಮನೆ ಆ ಕವಿತೆಗಳ ಮೆಲ್ಲಗೆ ಮಾತಾಡಿಸಿದರೆ ಸಾಕು. ನಿಮ್ಮ ಕಿರು ಬೆರಳ ಹಿಡಿದುಕೊಂಡು ನಿಮ್ಮನ್ನ ಅವುಗಳ ಒಳ ತೋರುತ್ತಾ ಅವುಗಳ ಒಳಗೆ ನಿಮ್ಮನ್ನ ಅವುಗಳು ಎಳೆದುಕೊಳ್ಳದೇ ಇದ್ದರೆ ಕೇಳಿ.