- ನಿಗೂಢ ಹಸ್ತಗಳು.. - ಸೆಪ್ಟೆಂಬರ್ 14, 2021
- ಮೃಗಗಳ ನಡುವೆ - ಜುಲೈ 20, 2021
- ಮೌನಸಾಕ್ಷಿ - ಮಾರ್ಚ್ 2, 2021
ತೆಲುಗು ಮೂಲ: ನಕ್ಷತ್ರಂ ವೇಣುಗೋಪಾಲ್
ಕನ್ನಡಕ್ಕೆ: ಎಂ.ಜಿ. ಶುಭಮಂಗಳ
‘ಓ ದೂರ್ ಜಾನೇ ವಾಲೇ- ವಾದಾ ನ ಭೂಲ್ಜಾನಾ’ ಈಗ ಹಿಂದಿ ಹಾಡು ಶುರುಮಾಡಿದಳು. ಅವಳು ಸುರಯ್ಯಳನ್ನು ಕೇಳಿದ್ದಾಳೋ ಇಲ್ಲವೋ ನನಗೆ ಮಾತ್ರ ಈ ಹಾಡೇ ಇಂಪಾಗಿದೆ. ವಿದ್ಯೆ, ಸಂಗೀತ ಜ್ಞಾನವಿಲ್ಲದಿದ್ದರೂ ಎಷ್ಟು ಮಧುರವಾಗಿ ಹಾಡುತ್ತಿದ್ದಾಳೆ. ಇಂಪಾದ ಹಾಡಿನ ನಡುವೆ ಕರ್ಕಶ ಧ್ವನಿಯೊಂದು ಕೇಳಿಸಿತು.
ಸೆಪ್ಟೆಂಬರ್ ಆದರೂ ಉರಿಯುವ ಬೇಸಿಗೆಯಂತೆ ಸಂಜೆ ಐದಾದರೂ ಸೂರ್ಯ ಪ್ರಖರವಾಗಿದ್ದಾನೆ. ಸಿಕಿಂದ್ರಾಬಾದ್ ರೈಲ್ವೇಸ್ಟೇಷನ್ ಗಜಿಬಿಜಿಯಾಗಿದೆ. ಒಂದನೇ ಪ್ಲ್ಯಾಟ್ ಫಾರ್ಮ್ಗೆ ರೈಲು ಬರುತ್ತಿದ್ದಂತೆ, ಅದುವರೆಗೂ ತಮ್ಮವರೊಂದಿಗೆ ಅದೂ ಇದೂ ಹರಟುತ್ತಿದ್ದವರು ಹಠಾತ್ತನೆ ಲಾಠಿ ಚಾರ್ಜ್ ಆದಂತೆ ಕಿರುಚಾಡುತ್ತ ತಮ್ಮ ತಮ್ಮ ಲಗೇಜಿನೊಂದಿಗೆ ಟ್ರೈನಿಗೆ ಹತ್ತಲು ಓಟ ಕಿತ್ತರು. ನಾನು ಮೊದಲೇ ಸೀಟ್ ರಿಸರ್ವೇಷನ್ ಮಾಡಿಸಿದ್ದರಿಂದ ಸೀಟಿಗಾಗಿ ಓಟದ ಸ್ಪರ್ಧೆ ತಪ್ಪಿತು. ಕೋಚ್ ಹುಡುಕಿಕೊಂಡು ನನ್ನ ಸೀಟಿನಲ್ಲಿ ಕುಳಿತೆ.
ನನ್ನದು ಸೇಲ್ಸ್ಮನ್ ಉದ್ಯೋಗ. ಬೆಳಗಿನಿಂದ ಸಿಕಿಂದ್ರಾಬಾದಿನ ಎಲ್ಲ ಅಂಗಡಿಗಳಿಗೆ ಸುತ್ತಾಡಿ ಆರ್ಡರ್ ಬುಕ್ ಮಾಡಿದ್ದಾಗಿದೆ. ಸುತ್ತಾಟದಿಂದ ಬಹಳ ಆಯಾಸವಾಗಿದ್ದರಿಂದ ವಿಶ್ರಾಂತಿಗಾಗಿ ಸ್ವಲ್ಪಹೊತ್ತು ಕಣ್ಣುಮುಚ್ಚಿ ಕುಳಿತೆ. ಅಷ್ಟರಲ್ಲಿ ರೈಲು ಹಾರನ್ ಹಾಕಿ ಹೊರಡಲು ಸಿದ್ಧವಾಯಿತು. ಜನರಿನ್ನೂ ಗಡಿಬಿಡಿಯಾಗಿ ಓಡಾಡುತ್ತಿದ್ದಾರೆ. ಪ್ರಯಾಣಿಕರನ್ನು ಬಿಡಲು ಬಂದವರು ಶೇಕ್ ಹ್ಯಾಂಡ್, ಟಾಟಾ, ಬೈಬೈ ಮಾಡಿಕೊಳ್ಳುತ್ತಿದ್ದಾರೆ. ರೈಲು ಹೊರಟು, ನಿಧಾನವಾಗಿ ವೇಗ ಪಡೆಯುತ್ತಿದೆ. ಕ್ರಮವಾಗಿ ಸ್ಟೇಷನ್, ಪ್ಲಾಟ್ಫಾರ್ಮ್ ಅದೃಶ್ಯವಾದವು. ಕತ್ತಲಾಗುತ್ತಿರುವಂತಿದೆ. ಲೈಟುಗಳ ಬೆಳಕಿನಿಂದ ನಗರ ಹೊಳೆಯುತ್ತಿದೆ. ಏನೋ ಗದ್ದಲ, ಆಗಾಗ ಕಣ್ಣು ತೆರೆದು ರೈಲಿನ್ನೂ ನಗರ ದಾಟದಿರುವುದನ್ನು ಗಮನಿಸಿ ಆಯಾಸದಿಂದಾಗಿ ಮತ್ತೆ ಕಣ್ಣು ಮುಚ್ಚುತ್ತಿದ್ದೇನೆ!
ಅಷ್ಟರಲ್ಲಿ ಎಲ್ಲಿಂದಲೋ “ನಮೋಭೂತನಾತ, ನಮೋ ದೇವದೇವ” ಒಂದು ಎಳೆಯ ಕಂಠ ಇಂಪಾಗಿ ಗಾಳಿಯಲ್ಲಿ ತೇಲಾಡಿಕೊಂಡು ಬೆಚ್ಚಗೆ ನನ್ನ ಕಿವಿ ತಾಕಿತು. ಹಾಡು ಹಾಗೇ ಕಂಪಾರ್ಟ್ಮೆಂಟಿನ ಗಲಾಟೆಯನ್ನು ದಾಟಿ ಬರುತ್ತಿದ್ದಾಗ ಅಪ್ರಯತ್ನವಾಗಿ ಬಗ್ಗಿ ಹಾಡು ಕೇಳಿಬರುತ್ತಿರುವತ್ತ ನೋಡಿದೆ. ಹಾಡುತ್ತಿರುವುದು ಒಬ್ಬ ಚಿಕ್ಕ ಹುಡುಗಿ.
ಅಬ್ಬಬ್ಬಾ ಅಂದರೆ ವಯಸ್ಸು ಹನ್ನೊಂದಿರಬಹುದು. ಹಿಂದೆ ಇನ್ನಿಬ್ಬರು ಚಿಕ್ಕ ಮಕ್ಕಳಿದ್ದಾರೆ. ಅವರಿಗೂ ಹೆಚ್ಚೆಂದರೆ ಮೂರರಿಂದ ಐದು ವರ್ಷವಿರಬಹುದು. ಆ ಹುಡುಗಿ ಹಾಡುವಾಗ ಒಬ್ಬ ಸೊಟ್ಟ ಬಟ್ಟಲೊಂದನ್ನು ತಮಟೆಯಂತೆ ಬಡಿಯುತ್ತಿದ್ದಾನೆ. ಮತ್ತೊಬ್ಬ ಕೊಳೆಯಾಗಿದ್ದ ಪುಟ್ಟ ಕೈ ಚಾಚಿ ಹಣ ಬೇಡುತ್ತಿದ್ದಾನೆ- ಅವರನ್ನು ನೋಡಿ ಕರುಳು ಚುರುಕ್ ಎಂದಿತು. ಹೃದಯ ವಿಲವಿಲ ಒದ್ದಾಡಿತು. ಬೆಳಗಿನಿಂದ ಹಾಡಿ ಹಾಡಿ ಬೇಡಿಕೊಂಡು ಸುಸ್ತಾದಂತಿದ್ದಾರೆ. ಕಣ್ಣು ನಿಸ್ತೇಜವಾಗಿದೆ. ಏನು ತಿಂದಿದ್ದಾರೋ ಇಲ್ಲವೋ, ಹಾಡುತ್ತಿರುವ ಉತ್ಸಾಹ ನಡಿಗೆಯಲ್ಲಿ ಕಾಣುತ್ತಿಲ್ಲ. ಹಾಯಾಗಿ ಕಾನ್ವೆಂಟಿಗೋ, ಶಾಲೆಗೋ ಹೋಗಿ ಓದಬೇಕಿರುವ ವಯಸ್ಸಿನಲ್ಲಿ ಹೀಗೆ ಭಿಕ್ಷೆ ಬೇಡುವುದು ನೋಡಿ ಬಹಳ ನೋವಾಯಿತು. ಅವರ ಎಣ್ಣೆ ಕಾಣದ ಕೂದಲು, ಕೊಳೆಯಾಗಿ ಹರಿದ ಬಟ್ಟೆಗಳು, ಮುಖದಲ್ಲಿ ಎದ್ದು ಕಾಣುತ್ತಿರುವ ಅಮಾಯಕತೆ, ಮುಗ್ಧತೆಗಳ ಸುತ್ತ ನನ್ನ ಮನಸ್ಸು ಗಿರಕಿ ಹೊಡೆಯುತ್ತಿದೆ.
ಅಬ್ಬಾ- ಏನು ಗಲಾಟೇನಪ್ಪ- ಒಂದು ನಿಮಿಷ ಪ್ರಶಾಂತವಾಗಿ ಕುಳಿತುಕೊಳ್ಳಲು ಬಿಡುವುದಿಲ್ಲ. ಈ ಭಿಕ್ಷುಕರನ್ನೆಲ್ಲ ಅಂಡಮಾನ್ನಲ್ಲಿ ದಬ್ಬಿದ ಹೊರತು ನೆಮ್ಮದಿಯಿಲ್ಲ! ಹೋಗೋ ಎಳೆ ಪಿಶಾಚಿ, ಚಿಲ್ಲರೆಯಿಲ್ಲವೆಂದರೆ ಕೇಳಿಸೋದಿಲ್ಲವಾ! ‘ಬಾಯಲ್ಲಿರುವ ತಾಂಬೂಲ ಸುತ್ತಲಿರುವ ಜನರ ಮೇಲೆ ಎಗರುತ್ತಿದ್ದರೆ.. ದೇಹವನ್ನಾವರಿಸಿರುವ ಡೊಳ್ಳು ಹೊಟ್ಟೆ ಕದಲಿಸುತ್ತ ಬಡಿದುಕೊಳ್ಳುತ್ತಿದ್ದಾನೆ ಶುದ್ಧಶ್ರೋತ್ರೀಯ. ಹಣೆಗೆ ವಿಭೂತಿ. ಭುಜದ ಮೇಲೆ ‘ಹರೇರಾಮ ಹರೇಕೃಷ್ಣದ ಹಳದಿ ಶಾಲು ನೋಡಿದರೆ ತಿಳಿಯುತ್ತಿದೆ ಬ್ರಾಹ್ಮಣೋತ್ತಮನೆಂದು! ಜನಿವಾರದಿಂದ ಬೆನ್ನು ಕೆರೆದುಕೊಳ್ಳುತ್ತ ಪಕ್ಕದವನಿಗೆ ಉಪನ್ಯಾಸ ನೀಡುತ್ತಿದ್ದಾನೆ! ಆ ನೀನು ಮಾತ್ರ ಕೇಳಿಕೊಳ್ಳುತ್ತಿಲ್ಲವಾ-ತಿಥಿ, ಶ್ರಾದ್ಧ, ಪಿಂಡಾಕೂಡು ಎಂದು.. ನನಗೆ ಗಂಟಲವರೆಗೂ ಬಂದ ಮಾತು ಹಾಗೇ ನಿಂತುಹೋಯಿತು. ಬೇಡಿಕೊಳ್ಳುತ್ತಿದ್ದ ಚಿಕ್ಕ ಹುಡುಗ ಅವನ ಮಾತಿಗೆ ಬೆದರಿ ಪೆಚ್ಚುಮೋರೆ ಹಾಕಿದಾಗ ಅವನನ್ನು ಸಮಾಧಾನ ಮಾಡುತ್ತ ಹಾಡು ಮುಂದುವರಿಸಿ ಮತ್ತೊಂದು ಸೀಟಿನತ್ತ ಕರೆದೊಯ್ದಳು ಆ ಹುಡುಗಿ.
‘ಓದೂರ್ ಜಾನೇ ವಾಲೇ- ವಾದಾನಭೂಲ್ಜಾನಾ’ ಈಗ ಹಿಂದಿ ಹಾಡು ಶುರುಮಾಡಿದಳು. ಅವಳು ಸುರಯ್ಯಳನ್ನು ಕೇಳಿದ್ದಾಳೋ ಇಲ್ಲವೋ ನನಗೆ ಮಾತ್ರ ಈ ಹಾಡೇ ಇಂಪಾಗಿದೆ. ವಿದ್ಯೆ, ಸಂಗೀತ ಜ್ಞಾನವಿಲ್ಲದಿದ್ದರೂ ಎಷ್ಟು ಮಧುರವಾಗಿ ಹಾಡುತ್ತಿದ್ದಾಳೆ. ಇಂಪಾದ ಹಾಡಿನ ನಡುವೆ ಕರ್ಕಶ ಧ್ವನಿಯೊಂದು ಕೇಳಿಸಿತು.
“ಚೀಚೀ ತೆಲುಗು ರಾಜ್ಯವಾದರೂ ಎಲ್ಲಿ ಹೋದರೂ ಹಿಂದಿಮಯ- ಹೈದರಾಬಾದಿಗೆ ಬಂದು ಸತ್ತಿದ್ದೇನೆ- ಮೂರು ದಿನದಿಂದ ಯಾವ ಆಟೋದವನನ್ನು ಕೇಳಿದರೂ ಕಿದರ್ಜಾನಾ, ಅಂಗಡಿಗೆ ಹೋದರೆ ಕ್ಯಾಹೋನಾ? ಇನ್ನು ಸ್ವಲ್ಪ ದಿನ ಹೀಗೇ ಸಾಗಿದರೆ ಹಿಂದೀನೇ ರಾಜ್ಯದಲ್ಲಿ ರಾರಾಜಿಸುವಂತಿದೆ. ಏಯ್ ನಿಲ್ಸೀ! ತಗೋ ಹತ್ತು ಪೈಸೆ ಮತ್ತೆ ಆ ಹಾಡು ಹಾಡಿದರೆ ಚರ್ಮ ಸುಲಿದುಬಿಡ್ತೀನಿ! ಆವೇಶದಿಂದ ಗೊಗ್ಗರು ಧ್ವನಿಯಲ್ಲಿ ಕಿರುಚುತ್ತಿದ್ದಾನೊಬ್ಬ ಹಿಂದಿ ದ್ವೇಷಿ.
ಹಸಿದ ಹೊಟ್ಟೆಯ ಆ ಪುಟ್ಟ ಮಕ್ಕಳ ಚರ್ಮ ಸುಲಿಯುತ್ತೇನೆಂದು ಹೇಳಲು ನಿನಗೆ ಹಕ್ಕು ನೀಡಿದ್ದು ಯಾರು? ಯಾವ ಭಾಷೆಯಲ್ಲಿ ಹೇಳಿದರೇನು-ಹಸಿವಿನ ಬಾಧೆ ಒಂದೇ ಅಲ್ಲವಾ? ನನ್ನೊಳಗೆ ಕೋಪ ಉಕ್ಕಿ ಬರುತ್ತಿದೆ, ಬಲವಂತವಾಗಿ ತಡೆಹಿಡಿದೆ.
“ನ್ಯೂಸೆನ್ಸ್! ಅಬ್ಬಾ ಈ ದೇಶದಲ್ಲಿ ನ್ಯೂಸೆನ್ಸ್ ತುಂಬಾ ಹೆಚ್ಚಾಗುತ್ತಿದೆ! ಪಿಳ್ಳೆಗಳನ್ನು ಹೆರುವುದು, ರಸ್ತೆಗೆ ಎಸೆಯುವುದು ಇವರು ಭಿಕ್ಷೆಬೇಡಿದ ಹಣದಲ್ಲಿ ಕುಡಿಯುವ ಚಟ ಛೇ! ಯಾವಾಗ ಸರಿಹೋಗುತ್ತದೋ ಈ ದೇಶ” ಕಿವಿಯಲ್ಲಿದ್ದ ವಾಕ್ಮನ್ ತೆಗೆದ ಒಬ್ಬ ಷೋಕೀಲಾಲ ಇವರ ಮೇಲೆ ಎಗರಿಬೀಳುತ್ತಿದ್ದಾನೆ. ಸುತ್ತಲೂ ಜನರಿದ್ದಾರೆಂಬ ಪರಿಜ್ಞಾನವಿಲ್ಲದೆ ತನ್ನ ಹೆಂಡತಿಯೊಂದಿಗೆ ಸಲ್ಲಾಪ ಹೊಡೆಯುತ್ತಿರುವ ಮೂರ್ಖನಿಗೆ ಚಿಕ್ಕಮಕ್ಕಳ ಹಸಿದ ಹೊಟ್ಟೆಯ ಗೋಳು ಅವಿವೇಕವಾಗಿ ಕಾಣುತ್ತಿದೆ!
ಮಕ್ಕಳು ಕಂಪಾರ್ಟ್ಮೆಂಟಿನ ಆ ತುದಿಯಿಂದ ನನ್ನತ್ತ ಬರುತ್ತಿದ್ದಾರೆ. ಯಾವ ಹಾಡು ಹಾಡಿದರೆ ಯಾವ ನಾಗರಿಕಮೃಗ ಗರ್ಜಿಸುತ್ತದೋ ಎಂದು ಬೆದರುತ್ತಿದ್ದಾರೆ ಜಿಂಕೆಮರಿಗಳಂತೆ! ಅದುವರೆಗೆ ಐವತ್ತು ಪೈಸೆಯೂ ಸಂಗ್ರಹವಾಗಿರಲಿಲ್ಲ. ಆ ಮಕ್ಕಳಲ್ಲಿ ಚಿಕ್ಕ ಹುಡುಗಿಯನ್ನು ಕರೆದು ಹಿಂದಿ ದ್ವೇಷಿ ಹಾಗೂ ಮತ್ತಿಬ್ಬರನ್ನು ಕೆಣಕುವಂತೆ ‘ಓದೂರ್ಜಾನ್ ವಾಲೇ’ ಹಾಡು ಜೋರಾಗಿ ಹಾಡುವಂತೆ ಹೇಳಿ ಜೇಬಿನಿಂದ ಎರಡು ರುಪಾಯಿ ತೆಗೆದು ಅವಳ ಕೈಲಿಟ್ಟೆ. ಹಾಡಲು ಹುಡುಗಿ ಭಯಪಡುತ್ತಿದ್ದಾಳೆ. ಪರವಾಗಿಲ್ಲ ಹಾಡು ಎಂದು ಭರವಸೆ ತುಂಬಿದ ನಂತರ ಹಾಡಲಾರಂಭಿಸಿದಳು.
ಹಾಡು ಮುಗಿದ ಮೇಲೆ ನಿಮ್ಮೂರು ಯಾವುದು ಎಂದು ಕೇಳಿದೆ. ‘ಮಹಬೂಬ್ ನಗರ್ ಸಾರ್’ ಹೇಳಿದಳು. ಅಪ್ಪ ಅಮ್ಮ ಇಲ್ಲವಾ?
ಯಾಕಿಲ್ಲ- ಅಗೋ ಆ ಹಳಿಗಳ ಹಿಂದೆ ಕೆಟ್ಟುನಿಂತ ಬೋಗಿಯಲ್ಲೇ ಇರುತ್ತಾರೆ. “ಮತ್ತೆ ಹೀಗೇಕೆ ಭಿಕ್ಷೆ ಬೇಡುತ್ತಿದ್ದೀರಿ?” “ಬಹಳ ದಿನಗಳ ಹಿಂದೆ ಊರಿನಲ್ಲಿದ್ದ ಜಮೀನಿನಲ್ಲಿ ಬೇಸಾಯ ಮಾಡುತ್ತಿದ್ದ ಅಪ್ಪ. ಅದು ಹೇಗೆ ಕೆಟ್ಟ ಅಭ್ಯಾಸಕ್ಕೆ ಬಿದ್ದನೋ ಇರುವ ಭೂಮಿಯನ್ನು ಆ ಹಾಳು ಸಾರಾಯಿ ಕುಡಿಯಲು ಒತ್ತೆಯಿಟ್ಟನು. ಇನ್ನು ಅಲ್ಲಿ ಕೂಲಿ ಕೆಲಸ ಸಿಗಲಿಲ್ಲ. ಅದಕ್ಕೇ ಇಲ್ಲಿ ಬಂದು ಕೂಲಿ ಮಾಡಿ ಬದುಕುತ್ತಿದ್ದೇವೆ. ಕೂಲಿ ಹಣವೆಲ್ಲ ಕುಡಿಯುವುದಕ್ಕೇ ಸುರಿಯುತ್ತಾನೆ. ಕುಡಿದು ನಮ್ಮನ್ನು, ಅಮ್ಮನನ್ನೂ ಪ್ರಾಣಿಗಳಿಗೆ ಹೊಡೆಯುವಂತೆ ಬಡಿಯುತ್ತಾನೆ. ಎಷ್ಟು ದಿನ ನಾವು ಹೊಟ್ಟೆ ಒಣಗಿಸಿಕೊಂಡು ಇರುವುದಕ್ಕಾಗುತ್ತದೆ? ನಮಗೆ ಊಟ ಯಾರು ಕೊಡುತ್ತಾರೆ? ಏನೋ ನಮ್ಮ ಹೊಟ್ಟೆ ತುಂಬಿಸಿಕೊಳ್ಳಲು ಹೀಗೆ ಭಿಕ್ಷೆ ಬೇಡುತ್ತಿದ್ದೇವೆ” ಚಿಕ್ಕ ವಯಸ್ಸಾದರೂ ಜೀವನ ಹೊರಿಸಿದ ದೊಡ್ಡಸ್ತಿಕೆಯನ್ನು ಹೊತ್ತಿರುವ ಮಗು ಕೈಯಿ ಬಾಯಿ ಆಡಿಸುತ್ತ ಹೇಳಿದಾಗ ಒಂದು ಕ್ಷಣ ನನಗೆ ಮಾತು ಹೊರಡಲಿಲ್ಲ.
ಅಷ್ಟರಲ್ಲಿ ಚಿಕ್ಕ ತಮ್ಮ, ಪುಟ್ಟ ಹೆಜ್ಜೆ ಹಾಕುತ್ತ ತನ್ನ ಕೈಲಿದ್ದ ಚಿಲ್ಲರೆಯನ್ನೆಲ್ಲ ನನ್ನ ಕೈಗೆ ಸುರಿದ. ನನಗೇನೂ ಅರ್ಥವಾಗಲಿಲ್ಲ. ನಂತರ ನೆನಪಾಯಿತು. ನಾನು ಕೊಟ್ಟ ಎರಡು ರುಪಾಯಿಗೆ ಚಿಲ್ಲರೆ ತಂದಿದ್ದಾನೆ. ಎಲ್ಲ ಎಣಿಸಿದೆ. ಮೂರೂವರೆ ರುಪಾಯಿದೆ. ಹೃದಯ ಭಾರವಾಯಿತು. ಎರಡು ರುಪಾಯಿಗೆ ಚಿಲ್ಲರೆ ಎರಡು ರುಪಾಯಿಗಿಂತಲೂ ಜಾಸ್ತಿ ಎಂದು ಅರಿಯದ ಎಳೆತನ, ಅಮಾಯಕತೆ. ರೈಲ್ವೆ ಕಂಪಾರ್ಟ್ಮೆಂಟ್ನ ಧೂಳು, ಲೋಹ ವಾಸನೆಯ ಕರ್ಕಶ ಕೂಪದಲ್ಲಿ ಜೀವಗಳು ಹೇಗೆ ಬಲಿಯಾಗುತ್ತಿದೆಯೆಂದು ಯೋಚಿಸುತ್ತಲೇ ಕಣ್ಣು ತುಂಬಿಬಂತು. ಒಂದು ಮಗು ಬೇಡಿಕೊಳ್ಳುತ್ತಿರುವಾಗ ಸಹಾಯ ಮಾಡಬೇಕಿರುವ ಒಂದಿಷ್ಟು ಮಾನವೀಯ ಕರ್ತವ್ಯವನ್ನು ಪಕ್ಕಕ್ಕಿಟ್ಟು ಬೈಯ್ಯುತ್ತಿರುವ ಈ ಕಪಟ ಮನುಷ್ಯರ ಮೇಲೆ ರೋಷ ಉಕ್ಕಿಬರುತ್ತಿದೆ.
ಮಕ್ಕಳು ನನ್ನನ್ನು ದಾಟಿ ಪಕ್ಕದ ಕಂಪಾರ್ಟ್ಮೆಂಟಿಗೆ ಹೋದರು. ಅಷ್ಟರಲ್ಲಿ ಟಿ.ಸಿ. ಕೂಗಾಟ ಕೇಳಿಸಿತು. “ಏಯ್ ಪಿಳ್ಳೆಗಳಾ ಎಷ್ಟು ಸಲ ಹೇಳಬೇಕು ನಿಮಗೆ- ಇಳಿದುಹೋಗಿ, ರಂಪಾಟ ಮಾಡ್ತಿದ್ದೀರಿ” ಎನ್ನುತ್ತ ಗಂಟಲು ಹರಿದುಕೊಳ್ಳುತ್ತಿದ್ದಾನೆ. ‘ನೀವು ಕೊಟ್ಟ ಸಲುಗೆಯಿಂದಲೇ ಅವರು ತಲೆಮೇಲೆ ಕೂತುಕೊಂಡಿದ್ದಾರೆ. ತಳ್ಳಿಬಿಡಿ ಕಂಪಾರ್ಟ್ಮೆಂಟಿನಲ್ಲಿರುವವರು ಧ್ವನಿಗೂಡಿಸುತ್ತಿದ್ದಾರೆ! ತಮ್ಮ ಮಾತಿಗೆ ಟಿ.ಸಿ ಸುಮ್ಮನಿರುವುದನ್ನು ಗಮನಿಸಿ ಒರಟಾಗಿ ಒಬ್ಬೊಬ್ಬರೂ ಒಂದೊಂದು ರೀತಿ ಬೈಯ್ಯುತ್ತಿದ್ದಾರೆ ಚಿಕ್ಕ ಮಕ್ಕಳೆಂಬ ಅನುಕಂಪವಿಲ್ಲದೆ! ಪಕ್ಕದ ಸ್ಟೇಷನ್ನಿನಲ್ಲಿ ನಿಂತ ರೈಲು ನಿಧಾನವಾಗಿ ಕದಲುತ್ತಿದೆ. “ಏಯ್ ಟಿ.ಸಿ ಈ ಮಕ್ಕಳದು ಒಂದೇ ಗಲಾಟೆ. ಡಾಮ್ ನ್ಯೂಸೆನ್ಸ್!” ಬಡಾಯಿ ಇಂಗ್ಲಿಷ್ ಕೊಚ್ಚುತ್ತಿರುವವನಿಗೆ ಗೊತ್ತಿರುವ ಒಂದೇ ಮಾತು ನ್ಯೂಸೆನ್ಸ್ ಇರಬಹುದು, ಸವೆದುಹೋದ ರೆಕಾರ್ಡಿನಂತೆ ಅದೇ ಹಾಡುತ್ತಿದ್ದಾನೆ.
“ಏಯ್ ಪಿಳ್ಳೆಗಳಾ ಇಳೀತೀರಾ ನೂಕಿಬಿಡಲಾ!” ತುಕ್ಕುಹಿಡಿದ ಕಬ್ಬಿಣದಂತೆ ಕರ್ಕಶವಾಗಿ ಧ್ವನಿಸುತ್ತಿದೆ ಟಿ.ಸಿ.ಯ ಕಂಠ. ಚಿಕ್ಕವನು ಟಿ.ಸಿಯನ್ನು ನೋಡಿ ಭಯದಿಂದ ನಡುಗುತ್ತಿದ್ದಾನೆ. ಓಡಿ ರೈಲಿನ ಬಾಗಿಲ ಬಳಿ ನಿಂತ. ರೈಲು ಚಲಿಸುತ್ತಿರುವುದು ಗೊತ್ತಿಲ್ಲ ಅವನಿಗೆ, ಅರಚುತ್ತಿರುವ ಟಿ.ಸಿ ಯಿಂದ ತಪ್ಪಿಸಿಕೊಳ್ಳಬೇಕಷ್ಟೆ! ಹೊರಗೆ ಹೆಜ್ಜೆಯಿಟ್ಟನು. ಎಲ್ಲರೂ ನೋಡುತ್ತಲೇ ಇದ್ದಾರೆ. ಕ್ಷಣಮಾತ್ರದಲ್ಲಿ ನಡೆದುಹೋಯಿತು. ಟಿ.ಸಿ ತಡೆಯಲಿಲ್ಲ. ಹಿಂದಿ ದ್ವೇಷಿ ತಡೆಯಲಿಲ್ಲ. ಸಂಪ್ರದಾಯಸ್ಥ ಬ್ರಾಹ್ಮಣ ತಡೆಯಲಿಲ್ಲ. ಅವನ ಅಕ್ಕ ಜೋರಾಗಿ ಕಿರುಚಿದಳು ತಮ್ಮಯ್ಯಾ! ಬೀಳುತ್ತೀಯ ಆ ಮಗುವಿನ ಕೇಕೆ ರೈಲಿನ ಶಬ್ದದಲ್ಲಿ ಬೆರೆತುಹೋಯಿತು. ಇನ್ನೊಬ್ಬ ತಮ್ಮ ಭೀತಿಯಿಂದ ಟಿ.ಸಿ ಗೆ ಭಯಪಡಬೇಕೋ, ತಮ್ಮನನ್ನು ರಕ್ಷಿಸಬೇಕೋ ಅರ್ಥವಾಗದೆ ಬೆವರುತ್ತಿದ್ದಾನೆ.
ಅದನ್ನು ನೋಡಿ ಯಾರೂ ಕದಲಿದಂತಿಲ್ಲ-ಒಂದಿಬ್ಬರು ಮಾತ್ರ ಅಯ್ಯಯ್ಯೋ ಎಂದರು. ಮಿಕ್ಕವರು ತಮ್ಮ ಪ್ರಪಂಚದಲ್ಲಿ ತಾವು ಮುಳುಗಿ ಅರಚಿಕೊಂಡು-ಆ ವೇಳೆಗೆ ಪರಿಸ್ಥಿತಿ ಕೈ ಮೀರಿತ್ತು. ಮಗು ಮೆಟ್ಟಿಲಿನಿಂದ ಜಾರಿ ತಲೆ ನೆಲಕ್ಕೆ ತಗಲುತ್ತಿದೆ-ದೇಹ ರಕ್ತಮಾಂಸದ ಮುದ್ದೆಯಾಗಿ ಜಾರಿಬಿತ್ತು. ಚಿಕ್ಕ ಹುಡುಗಿಯ ಕೇಕೆ ಯಾರಿಗೂ ಕೇಳುತ್ತಿಲ್ಲ-ಮೂರು ವರ್ಷಕ್ಕೇ ನೂರು ವರ್ಷ ತುಂಬಿದ ಚಿಕ್ಕವನ ಕೇಕೆ ಯಾರಿಗೂ ಕೇಳಿಸಲಿಲ್ಲ. ಟಿ.ಸಿ ಬಾಯಲ್ಲಿ ಮಾತು ಹೊರಡುತ್ತಿಲ್ಲ-ಪ್ರಯಾಣಿಕರಿಗೆ ಆಗ ಅರ್ಥವಾಯಿತು. ಬಾಗಿಲ ಬಳಿ ಬಂದು ಸಿನಿಮಾ ನೋಡಲು ಓಡಿಬರುವಂತೆ ಒಬ್ಬರನ್ನೊಬ್ಬರು ತಳ್ಳಿಕೊಂಡು ಓಡಿ ಬರುತ್ತಿದ್ದಾರೆ.
ಈಗ ನನಗೆ ತಡೆಯಲಾಗಲಿಲ್ಲ- ಮೈಮೇಲೆ ಬಂದವನಂತೆ-ನಾನೇನು ಮಾಡುತ್ತಿರುವೆನೋ ತಿಳಿಯದ ಸ್ಥಿತಿಯಲ್ಲಿ ಟಿ.ಸಿಯ ಕಾಲರ್ ಹಿಡಿದುಕೊಂಡು ಜಗ್ಗಿಬಿಟ್ಟೆ-ಎಳೆಮಗುವಿನ ಪ್ರಾಣ ತೆಗೆದುಬಿಟ್ಟೆಯಲ್ಲೋ! ಎಂದು ಕಿರುಚಿದ್ದು ಜ್ಞಾಪಕ. ಚೈನ್ ಎಳೆದೆ. ರೈಲು ನಿಂತಿತು. ಎಲ್ಲರೂ ಇಳಿದು ಮಾಂಸದ ಮುದ್ದೆಯ ಬಳಿ ಓಡುತ್ತಿದ್ದಾರೆ.
ಹುಡುಗಿ ಅಳುತ್ತ ಎರಡನೆಯ ತಮ್ಮನನ್ನು ಎತ್ತಿಕೊಂಡು ಓಡಿದಳು. ಮುಗಿಯಿತು-ಎಲ್ಲ ಮುಗಿಯಿತು. ಒಳ್ಳೆಯ ಕಾನ್ವೆಂಟಿನಲ್ಲಿ ಓದಿಕೊಳ್ಳಬೇಕಿದ್ದ ಬಾಲ್ಯ, ಜೀವನ ದಾರಿದ್ರ್ಯ ಸುತ್ತಿಕೊಳ್ಳದಿದ್ದರೆ ಖುಷಿಯಾಗಿ ನಲಿದಾಡಬೇಕಿದ್ದ ಬಾಲ್ಯ, ವ್ಯವಸ್ಥೆ ವಿಷಸರ್ಪದಂತೆ ಕಡಿಯದಿದ್ದಿದ್ದರೆ ಜಿಂಕೆಮರಿಯಂತೆ ಆಡುತ್ತ, ಓಡುತ್ತ ಇರಬೇಕಿದ್ದ ಬಾಲ್ಯ ಈಗ ಭಯಾನಕ ಬೀಭತ್ಸ ಮಾಂಸದಮುದ್ದೆ-ಎರಡು ರುಪಾಯಿಯ ಚಿಲ್ಲರೆ ಮೌಲ್ಯ ಕೂಡ ಅರಿಯದ ಅಮಾಯಕತೆ ರಕ್ತಸಿಕ್ತ ಮೃತ್ಯುವಿನ ಮಡಿಲಿಗೆ ಕ್ರೂರವಾಗಿ ತಳ್ಳಲ್ಪಟ್ಟ ದೃಶ್ಯ ನೋಡಲಾಗಲಿಲ್ಲ. ಎರಡು ಕೈಯಲ್ಲಿ ಮುಖ ಮುಚ್ಚಿಕೊಂಡೆ, ಅಳು ಬರುತ್ತಿದೆ.
ಏನೂ ಮಾಡಲಾಗದ ಅಸಹಾಯಕತೆ! ಅಷ್ಟರಲ್ಲಿ ಚೆಕಿಂಗ್ ಸ್ಕ್ವಾಡ್ ಬಂದಿತು. ಏನು ನಡೆಯಿತಿಲ್ಲಿ! ಜರುಗಿ. ಯಾರೋ ಚೈನ್ ಎಳೆದದ್ದು ಎಂದು ಗರ್ಜಿಸುತ್ತಿದ್ದರೆ-ಪ್ರಯಾಣಿಕರೆಲ್ಲ ಚೆಲ್ಲಾಪಿಲ್ಲಿಯಾಗಿದ್ದವರು ತಂತಮ್ಮ ಬೋಗಿಗಳಿಗೆ, ಯಾರ ಸೀಟಿಗೆ ಅವರು, ಯಾರ ಜೀವನಕ್ಕೆ ಅವರು, ತಂತಮ್ಮ ಪರಿಧಿಗೆ ಸೇರಿಕೊಂಡರು. ಮಕ್ಕಳು ಟಿಕೆಟ್ ಇಲ್ಲದೆ ಹತ್ತಿದ್ದು, ಟಿಕೆಟ್ ಕೇಳಿದಾಗ ಓಡಿ ಹೊರಗೆ ಹಾರಿ ಕೆಳಗೆ ಬಿದ್ದು ಸತ್ತುಹೋಗಿದ್ದಾಗಿ ಅದರಲ್ಲಿ ತನ್ನ ತಪ್ಪೇನಿಲ್ಲವೆಂದು ನಂಬಿಕೆ ಬರುವಂತೆ ಟಿ.ಸಿ ಹೇಳುತ್ತಿದ್ದಾನೆ.
ಒಂದಿಬ್ಬರು ಟಿ.ಸಿ ಯನ್ನು ಸಮರ್ಥಿಸುತ್ತಿದ್ದಾರೆ- ಚಿಕ್ಕ ಹುಡುಗಿ ಕಣ್ಣಲ್ಲಿ ಧಾರಾಕಾರವಾಗಿ ಕಣ್ಣೀರು ಹರಿಯುತ್ತಿದೆ-ತಮ್ಮನ ದೇಹವನ್ನು ಮುಟ್ಟಿ ಮುಟ್ಟಿ ದುಃಖಿಸುತ್ತಿದ್ದಾಳೆ-ಕೆಳಗೆ ಹೊರಳಾಡುತ್ತ ಗೋಳಾಡುತ್ತಿದ್ದಾಳೆ-ಹಾಡಿದ್ದಕ್ಕೆ ಸಿಕ್ಕಿದ ಚಿಲ್ಲರೆಯನ್ನು ತಮ್ಮ ದೇಹದ ಮೇಲೆ ಹಾಕಿ ರೋದಿಸುತ್ತಿದ್ದಾಳೆ. ಕಾನ್ಸ್ಟೇಬಲ್ಸ್ ಮಗುವಿನ ಶವವನ್ನು ತೆಗೆದುಕೊಂಡರು- ಹುಡುಗಿ, ಅವಳ ತಮ್ಮನನ್ನು ಬಿಡುತ್ತಿಲ್ಲ- ಕಾನ್ಸ್ಟೇಬಲ್ ಅವರನ್ನು ರಟ್ಟೆ ಹಿಡಿದು ದರದರನೆ ಎಳೆದುಕೊಂಡು ಹೋಗುತ್ತಿದ್ದಾನೆ-ಕೆಳಗೆ ಜಲ್ಲಿಕಲ್ಲುಗಳ ನಡುವೆ ಅವರ ಕಾಲುಗಳು ಸೊಟ್ಟಗಾಗುತ್ತಿವೆ. “ನಮ್ಮನ್ನು ಬಿಟ್ಟುಬಿಡಿ-ನಮ್ಮ ತಮ್ಮನ ಶವವನ್ನು ನಮಗೆ ಕೊಟ್ಟುಬಿಡಿ” ಎನ್ನುತ್ತ ಅಳುತ್ತಿದ್ದರೂ ಕೇಳಿಸಿಕೊಳ್ಳದೆ ಪೊಲೀಸರು ಶವವನ್ನು, ಅಳುತ್ತಿರುವ ಇನ್ನಿಬ್ಬರು ಮಕ್ಕಳನ್ನು ಎಳೆದುಕೊಂಡು ಹೋಗುತ್ತಿದ್ದಾರೆ-ನಿರ್ದಾಕ್ಷಿಣ್ಯವಾಗಿ- ಕ್ರೂರವಾಗಿ-ಕರ್ತವ್ಯ ನಿರ್ವಹಿಸುತ್ತಿದ್ದೇವೆಂಬ ಧಿಮಾಕಿನಿಂದ..
ಅನ್ಯಾಯ.. ಅನ್ಯಾಯ ಎಂದು ಕಿರುಚುತ್ತಿದ್ದ ನನ್ನತ್ತ ನೋಡಿದ ರೈಲ್ವೆ ಇನ್ಸ್ಪೆಕ್ಟರ್ ಮುಂದೆ ಬಂದು “ಏಯ್ ಮಿಸ್ಟರ್ ಷಟಪ್! ಕಮಾನ್ ನಮ್ಮೊಂದಿಗೆ ಬಾ. ಕಾನ್ಸ್ಟೇಬಲ್ಸ್- ಇವನನ್ನು ಹಿಡಿದುಕೊಂಡು ಹೋಗಿ-ಇವನ್ಯಾರೋ ಮಾನವೀಯತೆ ಕುರಿತು ಬೊಬ್ಬೆಯಿಡುತ್ತಿದ್ದಾನೆ-ಮಾನವೀಯತೆಯಂತೆ ಮಾನವೀಯತೆ-ನಮಗೆ ಗೊತ್ತಿಲ್ಲವಾ? ನೆನಪಿಸಕ್ಕೆ ಬರ್ತಾನೆ ದೊಡ್ಡ ಮನುಷ್ಯ” ಎನ್ನುತ್ತ ನನ್ನನ್ನು ಬಾಯಿಗೆ ಬಂದಂತೆ ಬೈಯ್ಯುತ್ತ ಮುಂದೆ ಹೋದ. ಕಾನ್ಸ್ಟೇಬಲ್ಸ್ ಓಡಿಬಂದು ನನ್ನನ್ನು ನಿಯಂತ್ರಣಕ್ಕೆ ತೆಗೆದುಕೊಂಡರು.
ನನಗೆ ನಗಬೇಕೋ ಅಳಬೇಕೋ ಅರ್ಥವಾಗಲಿಲ್ಲ-ಪ್ರಯಾಣಿಕರು ಅವರವರ ಮಧ್ಯಮವರ್ಗದ ಭಯಭೀತಿಗಳಿಂದ, ರಗಳೆ ನಮಗೇಕೆಂದು ನಿರ್ಲಿಪ್ತವಾಗಿ ತಲೆಯೆತ್ತಿ ವಿಚಿತ್ರವಾಗಿ ನನ್ನನ್ನ ನೋಡಿ ಮತ್ತೆ ತಂತಮ್ಮ ಲೋಕದಲ್ಲಿ ಮುಳುಗಿದರು.
ಭದ್ರತೆ ಹುಡುಕುತ್ತಿರುವ ಅವರನ್ನು ನೋಡಿ ಅನುಕಂಪ ಪಡಬೇಕೋ, ಜೀವನಕ್ಕಾಗಿ ಬಾಲ್ಯವನ್ನೇ ಬಲಿಗೊಟ್ಟ ಮಕ್ಕಳನ್ನು ನೋಡಿ ದುಃಖ ಪಡಬೇಕೋ..
ಕರ್ತವ್ಯವೆಂದು ಲವಲೇಶ ಮಾನವೀಯತೆ ಮರೆತ ಟಿ.ಸಿ, ರೈಲ್ವೆ ಪೊಲೀಸರನ್ನು ಖಂಡಿಸಬೇಕೋ.. ಇವೆಲ್ಲವನ್ನು ನೋಡಿ ನಿಸ್ಸಹಾಯವಾಗಿದ್ದ ನನ್ನನ್ನು ನಾನು ನಿಂದಿಸಿಕೊಳ್ಳಬೇಕೋ ತಿಳಿಯದೆ ಮೌನವಾಗಿದ್ದೆ.
ರೈಲು ಕೂಗುಹಾಕಿ ಓಡಲು ಸಿದ್ಧವಾದಂತೆ ಮುಂಗಾಲ ಮೇಲೇಳುತ್ತಿದೆ. ಪೊಲೀಸರು ನನ್ನನ್ನು ಬೋಗಿಯೊಳಕ್ಕೆ ತಳ್ಳಿದರು. ರೈಲು ಕದಲುತ್ತಿದೆ-ಚಿಮ್ಮಿದ ರಕ್ತಕ್ಕೆ ಸಾಕ್ಷಿಯಾಗಿ, ಹೋದ ಪ್ರಾಣಕ್ಕೆ ಸಾಕ್ಷಿಯಾಗಿ, ಮೌನಕ್ಕೆ ಸಾಕ್ಷಿಯಾಗಿ! ಎಳೆ ಕಂದಮ್ಮಗಳ ಮೇಲೆ ರಾಕ್ಷಸೀಯವಾಗಿ ನಡೆದುಕೊಳ್ಳುತ್ತಿರುವ ರಾಜ್ಯದಲ್ಲಿ.. ಸೂರಿಲ್ಲದ.. ಹೊತ್ತಿನ ಕೂಳಿಲ್ಲವರ ಮೇಲೆ ಕನಿಕರ ತೋರದ ಒರಟು ಲೋಕದಲ್ಲಿ.. ರೈಲು ಓಡುತ್ತಿದೆ, ಅದರೊಂದಿಗೆ ಮನುಷ್ಯರೂ…
ಹೆಚ್ಚಿನ ಬರಹಗಳಿಗಾಗಿ
ಮಹಾಸಾಗರವಾದಳು
ಮಗುಚಿತೊಂದು ಮೀನು ಬುಟ್ಟಿ
ಶೂಟಿಂಗ್ ಅನ್ಯಾಯ