- ಬೇಲಿಯೇ ಎದ್ದು….. - ಸೆಪ್ಟೆಂಬರ್ 29, 2024
- ಗಣೇಶನ ಕೈಯಲ್ಲಿಯ ಲಾಡು - ಸೆಪ್ಟೆಂಬರ್ 22, 2024
- ನೋ ಪಾರ್ಕಿಂಗ್ - ಆಗಸ್ಟ್ 29, 2024
ರಸಂ ಎನ್ನುವ ಅಪ್ಪಟ ಕನ್ನಡ “ಸಾರು” ಈ ಶೀರ್ಷಿಕೆಯ ಹೆಸರು ಓದುವಾಗಲೇ ನೀವು ಹಸಿದಿರುವುದಾದರೆ ಬಾಯಲ್ಲಿ ನೀರು ಬರಲು ಸುರುವಾದೀತು. ಈಗಾಗಲೇ ಊಟವಾಗಿದ್ದಲ್ಲಿ ನೀವೂ ಇದೇ ತಾನೇ ಉಂಡು ಬಂದ ನಿಮ್ಮ ಮನೆಯ ಘಮ್ಮೆನ್ನುವ ಸಾರಿನ ಸವಿ, ಪರಿಮಳ ಸ್ಮರಣೆಗೆ ಬರಬಹುದು. ಅಷ್ಟು ಬೆರೆತು ಹೋಗಿದೆ ನಮ್ಮ ಊಟದಲ್ಲಿ ಸಾರು ಎನ್ನುವ ಈ ವ್ಯಂಜನ. ಬೇಳೆ ಸಾರು, ತಿಳಿ ಸಾರು, ಮೆಣಸಿನ ಸಾರು, ಗೊಡ್ಸಾರು ( ಇದು ನಮ್ಮ ಬಳ್ಳಾರಿ ಕಡೆ ರಾತ್ರಿಗೆ ಮಾಡುವ ಭಾರೀ ತತ್ಕಾಲ ಸಾರು. ಇದಕ್ಕೆ ಬೇಳೆ ಹಾಕುವುದಿಲ್ಲ ) ಹೀಗೆ ಬಗೆಬಗೆಯ ಸಾರುಗಳಿವೆ. ಮಾಂಸಾಹಾರಿಗಳಿಗೂ ಕೋಳಿ ಸಾರು, ಮೀನಿನ ಸಾರು, ಶಿಗಡಿ ಸಾರು ಮುಂತಾದ ತರಹಗಳಿವೆ. ಅತ್ತ ರಾಗಿ ಮುದ್ದೆಗೂ ಇತ್ತ ಬಿಸಿ ಅನ್ನಕ್ಕೂ ಹೊಂದಿಕೊಳ್ಳುತ್ತಾ ಉಣುಗರಿಗೆ ಊಟದ ಸಂತೃಪ್ತಿ ನೀಡುವಲ್ಲಿ ಸಾರಿಗೆ ಸಾಟಿ ಬೇರೊಂದಿಲ್ಲವೆಂದರೇ ಅತಿಶಯೋಕ್ತಿಯಲ್ಲ.
ಈ ನನ್ನ ಲೇಖನ ಸಾರಿನ ಗುಣಗಳನ್ನು ಹೊಗಳಲಿಕ್ಕಲ್ಲ. ಕನ್ನಡಿಗರಾದ ನಾವೆಲ್ಲರೂ ಸಾರಿನ ಬಗ್ಗೆ ಇಷ್ಟು ಅಕ್ಕರತೆ ಬೆಳೆಸಿಕೊಂಡಿದ್ದರೂ, ನಮ್ಮ ರಾಜ್ಯದಲ್ಲೇ ಮನೆಯ ಹೊರಗೆ ಅದರ ಹೆಸರು ಮಾತ್ರ “ರಸಂ” ಎಂದು ಏಕೆ ಪ್ರಚಲಿತವಾಯಿತು ಎನ್ನುವ ಬಗ್ಗೆ ಸ್ವಲ್ಪ ಗಮನ ಹರಿಸೋಣ. ರಸಂ ಎನ್ನುವ ಪದ ಇದೇ ವ್ಯಂಜನಕ್ಕೆ ನಮ್ಮ ನೆರೆ ರಾಜ್ಯದವರಾದ ತಮಿಳನಾಡಿನವರು ಕರೆಯುವ ಹೆಸರು. ಹೆಚ್ಚು ಕಡಿಮೆ ನಮ್ಮದೇ ತರದ ತಯಾರಿ ಇದ್ದರೂ ಅದಕ್ಕೆ ಹಾಕುವ ಮಸಾಲೆ, ಮರಳಲು ಬಿಡುವ ಅವಧಿ ಬೇರೇ ಬೇರೇ ಆಗಿ ಅದರ ರುಚಿ ಬೇರೇನೇ ಇರುತ್ತದೆ. ನಮ್ಮ ಹಾಗೆ ಅವರಿಗೂ ಅದು ಊಟದಲ್ಲಿ ಅತ್ಯಗತ್ಯ ವ್ಯಂಜನವೇ. ಹಾಗಾಗಿ ಸಾರಿನ ಮೇಲಿನ ಸಾರ್ವಭೌಮತ್ವ ನಮ್ಮದೆಂದು ನಾವು ಹೇಳಲಾಗುವುದಿಲ್ಲ. ಸರಿ. ಅವರೂ ಅವರ ಹೋಟೆಲ್ ಗಳಲ್ಲಿ ಸಾರು ತಯಾರಿಸುತ್ತಾರೆ. ಬಡಿಸುತ್ತಾರೆ. ನಾವು ಸಹ ನಮ್ಮ ಉಡುಪಿ ಹೋಟೆಲ್ ಗಳ ಸರಣಿಯ ಮೂಲಕ ಸಾರು ಗ್ರಾಹಕರಿಗೆ ತಲುಪಿಸುತ್ತೇವೆ. ಆದರೂ ಹೋಟೆಲ್ ಗಳಲ್ಲಿ ಇದನ್ನು ಸಾರು ಎಂದು ಯಾರೂ ಕರೆಯುವುದಿಲ್ಲ. ಅದರ ಹೆಸರು ರಸಂ ಎಂದೇ ಬಳಕೆಯಾಗುತ್ತದೆ. ರಸಂ ಇಡ್ಲಿ, ರಸಂ ವಡೆ ಹೀಗೆ ಅದನ್ನೊಳಗೊಂಡ ತಿಂಡಿಗಳ ನಾಮಧೇಯ ಇರುತ್ತದೆ. ಯಾಕೆ ನಮ್ಮ ಹೋಟೆಲ್ ಗಳಲ್ಲಿ ಇವುಗಳನ್ನು ಇಡ್ಲಿ ಸಾರು, ವಡೆ ಸಾರು ಎಂದು ಪ್ರಚಲಿತಗೊಳಿಸಲಿಲ್ಲ? ಈಗ ಕೇಳುವಾಗ ಮುಜುಗರವೆನಿಸ ಬಹುದು. ಅದು ನಮ್ಮ ತಪ್ಪೇ ಮತ್ತೆ.
ನಮ್ಮ ಕನ್ನಡಿಗರ ಊಟದಲ್ಲಿ ಸಾರು ಅವಿಭಾಜ್ಯ ಅಂಗ. ಮೊದಲನೆಯ ಅಥವಾ ನಂತರದ ಐಟೆಮ್ ಆಗಿ ಎಲೆಗೆ ಬರುವ ಸಾರಿಗಿರುವಷ್ಟು ಮರ್ಯಾದೆ ಬೇರೇ ಯಾವ ಐಟೆಮ್ಮಿಗೂ ಇಲ್ಲ. ಪೂಜೆ, ವ್ರತ, ಆರತಕ್ಷತೆ ಮುಂತಾದ ಸಮಾರಂಭಗಳಲ್ಲಿ ಕಾರ್ಯಕ್ರಮ ಮುಗಿಯುವವರೆಗೂ ಕಾದು, ಇನ್ನು ಊಟದ ಎಲೆಗಳ ಮುಂದೆ ಕೂತವರು ಕಾಯುವುದೇ ಬಿಸಿ ಬಿಸಿ ಸಾರಿಗಾಗಿ. ( ಬಫೆ ಊಟ ಬಂದ ಮೇಲೆ ಸನ್ನಿವೇಶ ಬದಲಾಗಿದ್ದರೂ ಸಾರಿನ ಕಡೆ ನೋಡುವುದು ಕಮ್ಮಿಯಾಗಿಲ್ಲ.) ಅದೊಂದು ರುಚಿಕಟ್ಟಾಗಿದ್ದರೆ ಸಾಕು. ನಿಮ್ಮ ಊಟ ಅರ್ಧದಷ್ಟು ಮುಗಿದ ಹಾಗೆಯೇ. ಕೆಲ ಪ್ರಾಂತ್ಯಗಳಲ್ಲಿ ಅದು ಹುಳಿಯ ನಂತರ ಬರುತ್ತದೆ. ಆದರೇ ಅದರ ಆದ್ಯತೆ ಏನೂ ಕಮ್ಮಿಯಾಗುವುದಿಲ್ಲ. ಅಡುಗೆ ಮಾಡಿದವರ ಮಾನದಂಡ ಈ ಸಾರು ಎಂದರೇ ತಪ್ಪಲ್ಲ. ಸಾರು ಕೆಡಿಸಿದರೇ ಇಡೀ ಅಡುಗೆ ಕೆಟ್ಟ ಹಾಗೆ ! ಎಷ್ಟೂ ಜನರಿಗೆ ಸಾರಿಲ್ಲದಿದ್ದರೆ ಊಟ ಮಾಡಿದ ಹಾಗೆನಿಸುವುದಿಲ್ಲ. ಮನೆಯಲ್ಲಿ ತರಕಾರಿ ಕೊಳ್ಳುವಷ್ಟು ಚೈತನ್ಯವಿಲ್ಲದಿದ್ದವರಿಗೆ ಹುಣಸೇ ಹುಳಿ ಕುದಿಸಿದ ನೀರು ಸಾರೇ ಜೀವಾಧಾರವಾಗುತ್ತದೆ. ಕಾಯಿಲೆ ಬಿದ್ದವರಿಗೆ ಪತ್ಯದ ಐಟಮ್ ಇದು. ಬಿದ್ದು ಎದ್ದವರಿಗೆ ನಾಲಿಗೆಗ ಜೀವ ಚೈತನ್ಯ ತುಂಬುವ ಅಮೃತ ಸದೃಶ ದ್ರವ ಪದಾರ್ಥವಿದು. ಎಷ್ಟೋ ಮಠದ ಊಟಗಳಲ್ಲಿ ಈ ಸಾರಿನದೇ ಸ್ಪೆಶಲ್ ಅಟ್ರಾಕ್ಷನ್ !
ಇಷ್ಟೆಲ್ಲ ಇದ್ದರೂ ನಾವು ನಮ್ಮ ಸಾರಿನ ಹೆಸರನ್ನು ಏಕೆ ಪ್ರಚಲಿತ ಮಾಡಲಿಲ್ಲ ? ಕೀಳರಿಮೆಯೇ ಅಥವಾ ಮಾರಾಟದ ತಂತ್ರ ನಮ್ಮವರಿಗೆ ಗೊತ್ತಿಲ್ಲವೇ ? ದೇಶದಾದ್ಯಂತ ಮತ್ತು ಕೆಲ ಹೊರದೇಶದಲ್ಲೂ ಹರಡಿದ ಉಡುಪಿ ಹೋಟಲ್ ಗಳ ಸರಣಿಗಳ ಮಾಲೀಕರು ಇದರ ಬಗ್ಗೆ ಏಕೆ ಗಮನ ಹರಿಸಿಲ್ಲ ? ಉತ್ತರ ಭಾರತದವರೂ ಮತ್ತು ಹೊರದೇಶದವರೂ ಇದನ್ನು ರಸಂ ಎಂದೇ ಗುರುತಿಸುತ್ತಾರೆ. ನಾವು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ “ ಇದು ನಿಮ್ಮ ಸೂಪ್ ತರದ್ದು” ಎಂದು ಇದನ್ನು ಅವರ ಊಟದ ವ್ಯಂಜನಕ್ಕೆ ಹೊಂದಿಸುತ್ತೇವೇ ಹೊರತು ಇದನ್ನು ನಾವು ಸಾರು ಎನ್ನುತ್ತೇವೆ ರಸಂ ಅಲ್ಲ ಅಂತ ಹೇಳಲು ಹೋಗುವುದಿಲ್ಲ. ಬರೀ ನಾವು ಊಟ ಮಾಡಿ ಸಂತಸ ಪಡುವುದೇ ಆಗಬೇಕೇ ? ಇತರರಿಗೆ ಇದರ ಹೆಸರಿನ ಪರಿಚಯ ಮಾಡಬೇಡವೇ?
ಒಂದು ಕಾರಣ ಸಿಗಬಹುದು. ಉತ್ತರ ಭಾರತದವರು ನಮ್ಮ ದಾಕ್ಷಿಣಾತ್ಯ ಎಲ್ಲ ರಾಜ್ಯಗಳವರನ್ನು “ ಮದ್ರಾಸಿ” ಗಳೆಂದೇ ಕರಿಯುತ್ತಾರೆ. ಹಾಗೇ ಅವರು ಇಲ್ಲಿ ಸಿಗುವ ಎಲ್ಲಾ ಸಾರುಗಳಿಗೂ ರಸಂ ಎಂದು ಗಣನೆಗೆ ತೆಗೆದುಕೊಂಡಿರಬಹುದು ಎಂದು ಅನಿಸುತ್ತೆ. ಸರ್ಕಾರದ ವತಿಯಿಂದ ಇದರ ಬಗ್ಗೆ ವಿಚಾರಿಸಲು ಒಂದು ಕಮಿಟಿ ಹಾಕಬೇಕೆಂದು ಸೂಚಿಸಬಹುದು. ಇದು ನಮ್ಮ ಅಳಿವು ಉಳಿವಿನ ಪ್ರಶ್ನೆ ಅಲ್ಲವೇ ? ಏನೇ ಆಗಲಿ. ಇದರ ಬಗ್ಗೆ ಎಲ್ಲರೂ ಗಮನ ಹರಿಸಿ ಸಾರಿಗೆ ಸಾರು ಅಂತಲೇ ಕರೆಯುವುದು ಮತ್ತು ಎಲ್ಲರಿಂದ ಅದನ್ನು ಸಾರು ಎಂದೇ ಗುರುತಿಸಲ್ಪಡುವ ಹಾಗೆ ಮಾಡುವುದು ಎಷ್ಟಾದರೂ ಅಗತ್ಯ ಅಂತ ನನ್ನ ನಂಬಿಕೆ.
ಹೇಗೂ ಸಾರಿನ ಬಗ್ಗೆ ಒಂದು ಕಮಿಟಿಯನ್ನು ಹಾಕಬೇಕೆಂದು ಸಲಹೆ ಮಾಡುವಾಗ ಅದರ ಕಜಿನ್ ಆದ ನಮ್ಮ ಹುಳಿಯ ಬಗ್ಗೆ ಸಹ ಗಮನ ಹರಿಸಲು ಹೇಳಬಹುದು. ಇದರದು ಉಪಕಥೆ ಮಾತ್ರ. ಊಟ ಮಾಡುವವರಿಗೆ ಸಾರು ಇಲ್ಲದಿದ್ದರೇ ಆಗುವಷ್ಟು ನಿರಾಸೆ ಹುಳಿ ಇಲ್ಲದಿದ್ದರೇ ಆಗುವುದಿಲ್ಲ. ಅದಕ್ಕೆ ತಕ್ಕ ಪ್ರತ್ಯಾಮ್ನಾಯ ಪದಾರ್ಥಗಳನ್ನು ಮಾದಿ ಅದರ ಜಾಗವನ್ನು ತುಂಬಿ ಅದರ ಇಲ್ಲದಿರುವಿಕೆಯನ್ನು ಮರೆಯುವಂತೆ ಮಾಡಬಹುದು. ಆದರೆ ಇದರ ಪ್ರಚಾರದ ಬಗ್ಗೆ ಸಹ ಅಸಂತೋಷ ವಿದೆ. ಹುಳಿ ಅಂತ ಹೆಸರೇ ಕೇಳಿ ಬರುವುದಿಲ್ಲ. ಹೋಟೆಲ್ ಗಳಲ್ಲಿ ಸಾಂಬಾರ್ ಎಂತಲೇ ಕರೆಯುವುದು. ಇದರ ಸಾಂದ್ರತೆಯನ್ನೇ ಅಡಿಪಾಯವಾಗಿಸಿಕೊಂಡು ಗಟ್ಟಿ ಇದ್ದರೆ ಮಾತ್ರ ಹುಳಿ, ತೆಳುವಾಗಿದ್ದರೆ ಸಾಂಬಾರ್ ಅಲ್ಲವೇ ಎನ್ನಬಹುದು. ಮತ್ತೆ ಹೋಟೆಲ್ ಗಳಲ್ಲಿ ಸಿಗುವುದು ತೆಳು ಪದಾರ್ಥವಾದ್ದರಿಂದ ಅದನ್ನು ಸಾಂಬಾರ್ ಅಂತ ಕರೆಯುವುದೇ ಸರಿ ಎಂದು ಸಹ ಹೇಳಬಹುದು. ಆದರೂ ಹುಳಿ ಎಂಬ ಹೆಸರನ್ನು ಪ್ರಚಲಿತಗೊಳಿಸುವುದು ನಮ್ಮ ಕರ್ತವ್ಯವಾಗಿದೆ. ಇಷ್ಟು ಗಟ್ಟಿ ಇದ್ದರೆ ಮಾತ್ರ ಹುಳಿ ಎಂದು ಎಲ್ಲೂ ಅಳತೆಗೋಲಿಲ್ಲ. ಹಾಗಾಗಿ ನಮ್ಮವರು ನಮ್ಮ ಹೋಟೆಲ್ ಗಳಲ್ಲಿ ಸಿಗುವ ಸಾಂಬಾರನ್ನು ಹುಳಿ ಎಂದು ಕರೆಯುತ್ತ ಅದಕ್ಕೊಂದು ಗೌರವ, ಮರ್ಯಾದೆ ತರಬಹುದು. ಇದರ ಗುರುತರ ಹೊಣೆ ಮಾತ್ರ ನಮ್ಮ ಅತಿಥೆಯ ಬಂಧುಗಳಾದ ಹೋಟೆಲ್ಲಿನವರದ್ದು. ಬೇಕಾದರೆ ಹುಳಿಯ ಪ್ರಚಾರ ಮೊದಲ ಗುರಿಯಾಗಿಸಿಕೊಂಡು ನಂತರ ಸಾರಿನ ವಿಷಯಕ್ಕೆ ಕೈ ಹಾಕುತ್ತ ಈ ಎರಡೂ ಕನ್ನಡದ ಅಡುಗೆಗಳಿಗೆ ಅವುಗಳಿಗೆ ಸಿಗಬೇಕಾದ ಗೌರವ, ಮನ್ನಣೇ, ಮರ್ಯಾದೆ ಸಿಗುವ ಹಾಗೆ ಮಾಡಬೇಕು. ಎಲ್ಲರೂ ಅವುಗಳನ್ನು ಅವುಗಳ ಹೆಸರಿನಿಂದಲೇ ಕರೆದಾಗಲ್ಲವೇ ನಮ್ಮ ಕನ್ನಡಮ್ಮನ ಹೊಟ್ಟೆ ತಣ್ಣಗಾಗುವುದು. ನಮ್ಮೆಲ್ಲರ ಪ್ರಯತ್ನ ಇಂದಿನಿಂದಲೇ ಶುರುವಾಗಲಿ. ನನ್ನ ಶುಭ ಹಾರೈಕೆ ಇದೆ. ಜೈ ಕರ್ಣಾಟಕ!
ಹೆಚ್ಚಿನ ಬರಹಗಳಿಗಾಗಿ
ಬೇಲಿಯೇ ಎದ್ದು…..
ಗಣೇಶನ ಕೈಯಲ್ಲಿಯ ಲಾಡು
ನೋ ಪಾರ್ಕಿಂಗ್