- ಲೇಟಪ್ಪನ ಸುಪ್ರಭಾತವು - ಡಿಸಂಬರ್ 6, 2020
ನನಗೆ ಟ್ರಾನ್ಸಫರ್ ಆದಾಗ… “ಓ! ಒಳ್ಳೆ ಪೋಸ್ಟಿಂಗೇ ಸಿಕ್ಕಿದೆ. ಅಲ್ಲಿ ಕೆಲಸ ಮಾಡದೆ ತಪ್ಪಿಸಿಕೊಂಡು ಒಳ್ಳೆ ಹೆಸರು ತೊಗೊಳುದು ಹೇಗೆ ಅನ್ನೋಕೆ ಒಳ್ಳೆ ಟ್ರೈನಿಂಗ್ ಸಿಕ್ಕುತ್ತೆ…” ಅಂತ ಎಲ್ಲರೂ ನನ್ನ ಕೈಕುಲುಕಿದ್ದರು.
ಹೊಸ ಆಫೀಸಿಗೆ ಬಂದು ರಿಪೋರ್ಟ್ ಮಾಡಿಕೊಂಡೆ. ಹೊಸ ಆಫೀಸಿನಲ್ಲಿ ಎಲ್ಲರ ಪರಿಚಯವೂ ಆಯಿತು.
“ಅಲ್ಲಿ ಎರಡು ಕುರ್ಚಿ ಖಾಲಿ ಇದೆಯಲ್ಲ, ಅದರಲ್ಲಿ ಬಲಗಡೆ ಕುರ್ಚಿ, ಟೇಬಲ್ಲು ನಿಮ್ಮದು. ನಿಮ್ಮ ಪಕ್ಕ ಮಿ. … ಕೂತ್ಕೋತಾರೆ… ಇನ್ನೇನು ಬಂದ್ಬಿಡ್ತಾರೆ…” ಅಂತ ಹೊಸ ಬಾಸ್ ಹೇಳಿದರು. ಹೋಗಿ ನನ್ನ ಹೊಸ ಟೇಬಲ್ ಮುಂದೆ ಕುರ್ಚಿಲಿ ಕುಳಿತೆ.
ಅರ್ಧಗಂಟೆ ಆದ ಮೇಲೆ, ಹೆಲ್ಮೆಟ್ಟನ್ನು ಹೊರಗೆ ಬರಲು ಹವಣಿಸುತ್ತಿದ್ದ ಹೊಟ್ಟೆಯ ಮೇಲಿನ ಗುಂಡಿಯ ಪಕ್ಕ ಎಡಗೈಯಲ್ಲಿ ಅಮರಿಕೊಂಡು, ಐದು ಮಹಡಿಯ ಊಟದ ಡಬ್ಬಿಯನ್ನು ಬಲಗೈಯಲ್ಲಿ ಹಿಡಿದ ವ್ಯಕ್ತಿಯ ಪ್ರವೇಶವಾಯಿತು. ಅವನ ಎತ್ತರಕ್ಕೆ ಸ್ವಲ್ಪ ದಪ್ಪ ಎನ್ನಬಹುದಾದ ಆ ವ್ಯಕ್ತಿ ಬಂದು ನನ್ನ ಪಕ್ಕದ ಕುರ್ಚಿಯಲ್ಲಿ ಕುಳಿತುಕೊಂಡಿತು.
ನನ್ನನ್ನು ನೋಡಿ “…ಹಿ ಹಿ ಹೀ… ನೀವೇನಾ ಹೊಸ ಟ್ರಾನ್ಸ್ಫರ್ ಕೇಸು…? ಸುಸ್ವಾಗತ. ಡೋಂಟ್ ವರಿ ಮಾಡ್ಕೊಬೇಡಿ… ನಾನಿದ್ದೀನಿ… ನಿಮಗೆ ಏನು ಬೇಕಾದರೂ ನನ್ನನ್ನೇ ಕೇಳಿ, ಎಲ್ಲದಕ್ಕೂ ಬಾಸ್ ಹತ್ರ ಓಡಬೇಡಿ… ಅವರು ವಾಪಸ್ ನನ್ನ ಹತ್ರಾನೇ ಬರ್ತಾರೆ…” ಅಂತ ಪರಿಚಯ ಭಾಷಣ ಮಾಡಿ ಅಭಯ ಹಸ್ತ ತೋರಿಸಿದ.
“ತುಂಬ ಥ್ಯಾಂಕ್ಸ್… ನಿಮ್ಮಂಥೋರು ಸಿಕ್ಕಿಬಿಟ್ರೆ ನಮ್ಮಂಥ ಹೊಸಬ್ರು ಹೇಗೋ ನಿಭಾಯಿಸಿಬಿಡ್ತವೆ… ಐ ಆಮ್ ವೆರಿ ಲಕ್ಕಿ…” ಅಂದೆ.
ನಾಲ್ಕೇ ದಿನದಲ್ಲಿ ಗೊತ್ತಾಯ್ತು. ಅವರನಿಗೆ ಬಾಸ್ ಯಾವ ಕೆಲಸವನ್ನೂ ಕೊಡುವುದಿಲ್ಲ ಅಂತ. ಜೊತೆಗೆ ಮುಖ್ಯವಾಗಿ ಅವನು ಆಫೀಸಿಗೆ ಬರುವುದು ಆಫೀಸ್ ಪ್ರಾರಂಭವಾದ ಅರ್ಧಗಂಟೆಯ ನಂತರ – ಒಂದು ಗಂಟೆಯ ಒಳಗೆ ಅನ್ನುವುದು! ಅದರ ಬಗ್ಗೆ ಬಾಸ್ ಸೇರಿದಂತೆ, ಯಾರೂ ತಲೆ ಕೆಡೆಸಿಕೊಂಡಂತೆ ಕಾಣಿಸಲಿಲ್ಲ.
ಅವತ್ತು ಬಾಸ್ ಬೆಳಿಗ್ಗೆ ಬಂದ ತಕ್ಷಣ ಕರೆದು, ಒಂದು ಫೈಲ್ ಕೊಟ್ಟು… “ನೋಡ್ರಿ ಇದನ್ನು ಇನ್ನು ಅರ್ಧಗಂಟೇಲಿ ಹೆಡ್‌ಆಫೀಸ್‌ಗೆ ಕಳುಹಿಸಬೇಕು… ಬೇಗ ಅಟೆಂಡ್ ಮಾಡಿ ತನ್ನಿ… ಆ ಲೇಟಪ್ಪನಿಗೆ ಕಾಯ್ತಾ ಕೂತುಕೊಳ್ಳಬೇಡಿ…” ಅಂದ್ರು.
ಅಂದೇ ನನಗೆ, ನನ್ನ ಪಕ್ಕದ ಕುರ್ಚಿಯ ಮೇಲೆ ಕೂರುವ ಆಸಾಮಿಯ “ಅನ್ವರ್ಥನಾಮ” ಗೊತ್ತಾಗಿದ್ದು! ‘ಲೇಟಪ್ಪ’ – ಎಂಥ ಹೆಸರು ಆಸಾಮಿಗೆ!
ತಕ್ಷಣವೇ, ಯಾಕೋ ಕಾಣೆ, “ಏನಾದ್ರು ಮಾಡಿ ಅವನು ಪ್ರತಿದಿನ ಆಫೀಸ್ ವೇಳೆಗೆ ಸರಿಯಾಗಿ ಬರುವಂತೆ ಮಾಡಲೇಬೇಕು” ಎಂದು ಪ್ರತಿಜ್ಞೆ ಮಾಡಿದೆ. ಕೆಲವು ಸಲ ಲೈಫಲ್ಲಿ ಇಂಥಾ ಮಿಸ್ಟೇಕ್‌ಗಳು ಆಗುತ್ತವೆ!
ಅಂದು ಮಿ. ಲೇಟಪ್ಪ ಬರುತ್ತಿದ್ದಂತೆಯೇ ನಾನು “… ಏನ್ಸಾರ್ ತುಂಬ ಲೇಟು… ಬಾಸ್ ಕಾಯ್ತ ಇದ್ರು… ಕೊನೆಗೆ ನಾನೇ ರಿಪೋರ್ಟು ಮಾಡಿಕೊಟ್ಟೆ” ಅಂದೆ. ಲೇಟಪ್ಪನಿಗೆ ಆಶ್ಚರ್ಯವೋ ಆಶ್ಚರ್ಯ, ಬಹುಶಃ ಅವನ ಜನ್ಮದಲ್ಲಿ ಇದುವರೆಗೆ ಅವನಿಗಿಂತ ಚಿಕ್ಕವರು ಯಾರೂ ಆ ರೀತಿ ಪ್ರಶ್ನೆ ಮಾಡಿರಲಿಲ್ಲವೇನೋ. ತಕ್ಷಣ ಸಾವರಿಸಿಕೊಂಡು “…ಓ ಅದಾ… ಇವತ್ತು ಬೇಗಲೇ ಹೊರಟೆ… ಹಾಳದ್ದು ಗಡಿಯಾರಾನೇ ನಿಂತುಹೋಗಿತ್ತು. ಟೈಂ ಆಗಿದ್ದೇ ಗೊತ್ತಾಗಲಿಲ್ಲ…. ನೀವು ಇರೋ ಹೊತ್ತಿಗೆ ಆಯ್ತು. ನಾನು ನಾಲ್ಕು ದಿನದಲ್ಲಿ ಹೇಳಿಕೊಟ್ಟಿದ್ದನ್ನ ಬಹಳ ಬೇಗ ಕಲಿತುಬಿಟ್ರಿ. ನೋಡಿ, ಅದು ಇವತ್ತು ಉಪಯೋಗಕ್ಕೆ ಬಂತು… ಹಿ… ಹಿ… ಹೀ…” ಅಂತ ಹೇಳಿದ. ಜಟ್ಟಿ ಬಿದ್ದರೂ ಮಿಸೆ ಮಣ್ಣಾಗಲಿಲ್ಲ ಅಂದ್ರೆ ಏನು ಅಂತ ನನಗೆ ಸ್ಪಷ್ಟವಾಗಿ ಗೊತ್ತಾಯ್ತು!
ನಾನು ಅಂದು ಕೇಳಿದ್ದೇ ಮೊದಲಾಯ್ತು. ಪ್ರತಿದಿನ ಬೆಳಗ್ಗೆ ಆತ ಬರುತ್ತಿದ್ದಂತೆಯೇ ‘ಅಂದು ಯಾಕೆ ಲೇಟ್ ಆಯ್ತು’ ಅನ್ನುವುದಕ್ಕೆ ಎಕ್ಸ್‌ಪ್ಲನೇಶನ್ ಬರಲು ಪ್ರಾರಂಭವಾಯಿತು – ನಾನು ಕೇಳದೇ ಇದ್ದರೂ!
ಮಾರನೆಯ ದಿನ… “ಹಿ… ಹಿ… ಹೀ… ಇವತ್ತು ನನ್ನ ಮಿಸೆಸ್ಸು ಅಡಿಗೆ ಮಾಡೋದೇ ಲೇಟಾಗೋಯ್ತು..!”
ಮೂರನೆಯ ದಿನ “ಹಿ… ಹಿ… ನಮ್ಮ ಪಾಪುನ ಕ್ಲಾಸ್‌ಟೀಚರ್ ಅರ್ಜೆಂಟಾಗಿ ಬನ್ನಿ ಅಂತ ಹೇಳಿ ಕಳಿಸಿದ್ದರು… ತುಂಬಾ ಒಳ್ಳೆಯೋರು ಸಾರ್ ಅವರು. ತುಂಬ ಇಂಟೆಲಿಜೆಂಟು, ಅವರನ್ನ ನೋಡಿದರೆ ಮಾತಾಡಿಸ್ತಾನೆ ಇರಬೇಕು ಅನ್ನಿಸುತ್ತೆ. ಮುಂದಿನ ಸಲ ನಿಮ್ಮನ್ನೂ ಕರೆದುಕೊಂಡು ಹೋಗಿ ಪರಿಚಯ ಮಾಡಿಸ್ತೀನಿ. ಸ್ಕೂಲಲ್ಲಿ ಸೀಟು ಗೀಟು ಬೇಕಾದ್ರೆ ಅನುಕೂಲ ಆಗುತ್ತೆ.”
ಲೇಟಪ್ಪನಿಗೆ ತಾನು ಲೇಟಾಗಿ ಬಂದಿದ್ದನ್ನು ಇತರರ ದೃಷ್ಟಿಯಿಂದ ಮರೆಯಾಗಿಸಿ ಬೇರೆಡೆಗೆ ಹರಿಸುವ ಕಲೆಯೂ ಕರಗತವಾಗಿತ್ತು.
ನಾಲ್ಕನೆಯ ದಿನ… “ಇವತ್ತು ಏನಾಯ್ತು ಅಂತೀರ, ನಮ್ಮ ಮನೆಯಿಂದ ಮೂರನೇ ಮನೆಯೋರು ಬೆಳಗ್ಗೆ ಅಷ್ಟು ಹೊತ್ತಿಗೆ ನಮ್ಮ ಮನೆಗೆ ಬಂದು… ‘ನಂಗೆ ಬೇರೆ ಡಿಪಾರ್ಟ್‌ಮೆಂಟ್‌ಗೆ ವರ್ಗ ಆಯ್ತು. ಹೊಸ ಡಿಪಾರ್ಟುಮೆಂಟು ನಿಮ್ಮ ಆಫೀಸ್ ಪಕ್ಕದಲ್ಲೇ ಇದೆ. ಈ ಏರಿಯಾ ಎಲ್ಲ ನಂಗೆ ಹೊಸದು. ದಯವಿಟ್ಟು ನನ್ನ ಸ್ಕೂಟರ್ ಮೇಲೆ ಒಂದು ಸ್ವಲ್ಪ ರೋಡ್ ತೋರಿಸಿಬಿಡಿ ಸಾರ್’ ಅಂದ್ರು. ಸರಿ ಅಂತ ಕಾಯ್ತಾ ಇದ್ದೆ. ಎಷ್ಟೊತ್ತಾದ್ರೂ ಆಸಾಮಿ ಪತ್ತೆನೇ ಇಲ್ಲ! ಹೊಸ ಆಫೀಸ್‌ಗೆ ಹೋಗೋವಾಗ ಮೊದಲನೇ ದಿನವೇ ಹೀಗಾದ್ರೆ ಹ್ಯಾಗೆ ಹೇಳಿ. ಜೊತೆಗೆ ನಂಗೂ ಲೇಟಾಯ್ತು. ಇನ್ನೊಬ್ರಗೆ ತೊಂದ್ರೆ ಆಗುತ್ತೆ ಅನ್ನೋ ಪರಿಜ್ಞಾನವೇ ಇರೊಲ್ಲ ನೋಡಿ…”
ಐದನೆಯ ದಿನ “ಸಾರ್… ಇವತ್ತು ಏನಾಯ್ತು ಗೊತ್ತಾ…?…” ಲೇಟಪ್ಪ ಬಂದು ತನ್ನ ಕುರ್ಚಿಯ ಮೇಲೆ ಕೂರುತ್ತಾ ನನ್ನ ಕಡೆ ತಿರುಗಿ ಕೇಳಿದ.
“ಏನು…?” ಎಂದು ಪ್ರಶ್ನಿಸುವಂತೆ ಅವನ ಮುಖ ನೋಡಿದೆ.
“ನಿನ್ನೆ ರಾತ್ರಿ ಡೇ ಅಂಡ್ ನೈಟ್ ಕ್ರಿಕೆಟ್ ಮ್ಯಾಚ್ ನೋಡಿ ಮಲಗಿದಾಗ ರಾತ್ರಿ ೨ ಗಂಟೆ. ನಿದ್ದೆ ಸಾಲ್ದು ನೋಡಿ… ಬೆಳಿಗ್ಗೆ ಬಸ್ಸಲ್ಲಿ ಬಂದು ಕುಳಿತುಕೊಂಡರೆ ಇನ್ನೂ ಮಂಪರು… ಹಾಗೇ ನಿದ್ದೆ ಬಂದು ಬಿಡ್ತು.. ತಕ್ಷಣ ಎಚ್ಚರವಾಯ್ತು. ನೋಡಿದ್ರೆ ನಾನು ಇಳಿಬೇಕಾಗಿದ್ದ ಸ್ಟಾಪ್ ಆಗಿ ಎರಡು ಸ್ಟಾಪ್ ಮುಂದೆ ಬಂದಿದ್ದೆ. ಅಲ್ಲೇ ಇಳಿದು ಧಡಧಡಾಂತ ಬೇಗ ಬೇಗ ನಡೆದುಕೊಂಡು ಬಂದೆ…”
ನನ್ನ ಕಣ್ಣು ಅವನ ಹೆಲ್ಮೆಟ್ ಹುಡುಕುತ್ತಿತ್ತು. ಆತ ಬುದ್ಧಿವಂತ, ನನ್ನ ನೋಟವನ್ನು ಅರಿತು, “ಸ್ಕೂಟರ್ ತಂದಿಲ್ಲ, ಬಸ್‌ನಲ್ಲಿ ಬಂದೆ” ಎಂದು ವಿಜಯ ಸಾಧಿಸಿದವನಂತೆ ಬೀಗಿದ.
“ಸರಿ ಬಿಡಿ… ರಾತ್ರಿ ನಿದ್ದೆಗೆ ಬಸ್ಸಲ್ಲೇ ಕಾಂಪನ್ಸೇಟ್ ಆಯ್ತು…” ನಾನು ಹೇಳಿದೆ. “ಎಲ್ಲಿ ಬಂತು. ಹೇಗಿದ್ರೂ ಬಾಸ್ ಟೂರ್‌ನಲ್ಲಿದ್ದಾರೆ… ನಾನು ಈ ಫೈಲ್ ತಗೊಂಡು ಅವರ ರೂಂನಲ್ಲಿ ಇರ್ತೀನಿ. ತುಂಬಾ ಅರ್ಜೆಂಟ್ ಆಗಿ, ಅಂದ್ರೆ ಪ್ರಾಣ ಹೋಗೋ ಸ್ಥಿತಿ ಬಂದ್ರೆ ಎಬ್ಬಿಸಿಬಿಡಿ…” ಎಂದು ಹೇಳಿ ಆಕಳಿಸುತ್ತಾ, ಬಾಸ್ ರೂಂನೊಳಕ್ಕೆ ಹೋದ.
ಹಾಗೆ ನೋಡಿದ್ರೆ ಲೇಟಪ್ಪ ನಿಜಕ್ಕೂ ಅದೃಷ್ಟವಂತ. ದಿನದ ಯಾವುದೇ ವೇಳೆಯಲ್ಲಿ ಬೇಕಾದರೂ ನಿದ್ದೆ ಮಾಡಬಹುದಾದ ವರ ಪಡೆದುಕೊಂಡು ಬಂದಿದ್ದ.
ಲೇಟಪ್ಪನ ನೆಂಟರಿಷ್ಟರ ಹುಟ್ಟು ಸಾವುಗಳನ್ನೆಲ್ಲ ನುಂಗಿ ನೀರು ಕುಡಿದು `ಲೇಟ್’ ಕತೆಗಳು ಹಿಗ್ಗುತ್ತಿದ್ದುವು. ಲೇಟಪ್ಪ ಪ್ರತಿದಿನ ಲೇಟಾಗಿ ಬಂದುದಕ್ಕೆ ಕೊಡುತ್ತಿದ್ದ ಕಾರಣಗಳು ನಿತ್ಯನೂತನ. ಕವಿಯ ಮನಸ್ಸಿನಂತೆ ಪ್ರತಿದಿನ ಹೊಸ ಸೃಷ್ಟಿ! ವಿಜ್ಞಾನಿಯಂತೆ ಹೊಸ ಕಾರಣಗಳ ಅವಿಷ್ಕಾರ! ಯಾರಿಗಾದರೂ ಬೇಕಾದರೆ, ನನ್ನ ಬಳಿ, ಆಫೀಸಿಗೆ ಲೇಟಾಗಿ ಬಂದುದಕ್ಕೋ ಅಥವಾ ರಜೆ ತೆಗೆದುಕೊಳ್ಳಬೇಕಾದರೋ ಕೊಡಬಹುದಾದ ಇನ್ನೂರ ನಲವತ್ತೊಂಬತ್ತು ಸಖತ್ ಕಾರಣಗಳ ಪಟ್ಟಿ ಇದೆ. ಇಷ್ಟರಲ್ಲೇ ಇದಕ್ಕಾಗಿ ವೆಬ್‌ಸೈಟ್ ಮಾಡಿ ಅದರಲ್ಲಿ ಅವುಗಳ ಪಟ್ಟಿ ಕೊಡುತ್ತೇನೆ. ಜೊತೆಗೆ ತೆಗೆದುಕೊಳ್ಳಬೇಕಾದ ಎಚ್ಚರಿಕೆಯನ್ನೂ ನೀಡುತ್ತೇನೆ. ಕಾದು ನೋಡಿ… ಇರಲಿ ಇದಕ್ಕೆ ಮೂಲಪುರುಷ ನಮ್ಮ ಲೇಟಪ್ಪ.
ಆದರೂ ಎಲ್ಲಕ್ಕೂ ಒಂದು ಇತಿಮಿತಿ ಇರುತ್ತೆ ಅಲ್ವೆ. ಹಾಗೆಯೇ ‘ ಲೇಟಪ್ಪನ ಕಾರಣಗಳು ಯಾವತ್ತಾದರೂ ಮುಗಿದು ಹೋದಾವು’ ಎಂದುಕೊಂಡು ಅಂದಿನ ಕಾರಣ ಕೇಳಲು ತವಕದಿಂದ ಕಾಯುತ್ತಿದ್ದೆ. ಶ್ರೀಕೃಷ್ಣನು ಶಿಶುಪಾಲನ ನೂರು ಅಪರಾಧಗಳನ್ನು ಮನ್ನಿಸಿದ ನಂತರ, ಅವನ ಪಾಪದ ಕೊಡ ತುಂಬಿದಾಗ, ಅವನನ್ನು ಶಿಕ್ಷಿಸಿದನಲ್ಲ – ಅವನಿಗೆ ಮೋಕ್ಷ ಕೊಟ್ಟನಲ್ಲ; ಹಾಗೆಯೇ ನಮ್ಮ ಲೇಟಪ್ಪನ ‘ಲೇಟ್’ ಕಾರಣಗಳ ಕೊಡ ತುಂಬಿ, ಅವನ ಸಮಯ ಪರಿಪಾಲನಾ ಪ್ರಜ್ಞೆ ಜಾಗೃತವಾಗಿ…. “ಪರಮಾತ್ಮಾ ಅಪರಾಧಂಗಳ ಮನ್ನಿಸೋ” ಎಂದುಕೊಂಡು… “ನಾಳೆಯಿಂದ ಸರಿಯಾದ ಟೈಂಗೆ ಬಂದೇ ಬರಬೇಕು…” ಎಂದು ಸ್ವನಿರ್ಧಾರ ತೆಗೆದುಕೊಳ್ಳುವಂತೆ ಆಗೇ ಆಗುತ್ತದೆ… ಇಂದೇ ಆ ಸುದಿನವಾಗಿರುತ್ತದೆ… ಎಂದು ಎದುರು ನೋಡುತ್ತಿದ್ದೆ.
ನಾನು ಈ ಆಫೀಸಿಗೆ ಬಂದು ವರ್ಷವಾಗುತ್ತಾ ಬಂದಿತ್ತು. ಅಂದು ಲೇಟಪ್ಪ ತಾನು ಲೇಟಾಗಿ ಬರಲು ಕಾರಣಗಳನ್ನು ಹೇಳಲು ಪ್ರಾರಂಭಿಸಿದ ನಂತರ ಇನ್ನೂರ ಐವತ್ತನೆಯ ದಿನ…
“ಪ್ರತಿದಿನ ಆಫಿಸ್‌ಗೆ ಬರ್ತೀವಿ… ಇವತ್ತು ‘ಜಸ್ಟ್ ಲೈಕ್ ದಟ್’,… ಒಂದು ದಿನ ಲೇಟಾಗಿ ಹೋಗೋಣ ಅಂತ ಡಿಸೈಡ್ ಮಾಡ್ಬಿಟ್ಟೆ ಸಾರ್!…” ಲೇಟಪ್ಪ ಅಂದಿನ ಕಾರಣ ಹೇಳಿದಾಗ ನಾನು ಬಿಟ್ಟ ಬಾಯಿ ಬಿಟ್ಟುಕೊಂಡು ಅವನನ್ನೇ ನೋಡುತ್ತಿದ್ದೆ.
ಅಂದೇ ನನ್ನ ಪ್ರತಿಜ್ಞಾ ಭಂಗ ಮಾಡಿದೆ. ಪ್ರಾಯಶ್ಚಿತ್ತ ಇನ್ನೂ ಯೋಚಿಸಿಲ್ಲ.
ಒಟ್ಟಿನಲ್ಲಿ ಲೇಟಪ್ಪನದು ಸವೆದ ಪಥದಲ್ಲಿ ಮೂಡುವ ರೆಕಾರ್ಡ್ ಸಂಗೀತವಲ್ಲ… ನಿತ್ಯ ನೂತನ ಸುಪ್ರಭಾತ!
ಹೆಚ್ಚಿನ ಬರಹಗಳಿಗಾಗಿ
ಚಿಕ್ಕಣಿರಾಜ ಕೃತಿಯ ಜೀವಾಳ ಪುಟ್ಟ
ನೋ ಪಾರ್ಕಿಂಗ್
ಪುತಿನ ರ ವಸಂತ ಚಂದನ