- ಚಿಕ್ಕಣಿರಾಜ ಕೃತಿಯ ಜೀವಾಳ ಪುಟ್ಟ - ಸೆಪ್ಟೆಂಬರ್ 12, 2024
- ಹಾಲಾಡಿಯಲ್ಲಿ ಹಾರುವ ಓತಿ - ಜುಲೈ 20, 2024
- ನಾಡೋಜ ಕಮಲಾಮೇಡಂಗೆ ಅಂತಿಮ ನಮನಗಳು - ಜೂನ್ 22, 2024
ಬ್ಯಾಗಿಗೆ ಜಿಪ್ ಇರುತ್ತವೆ ನಮ್ಮ ಮನಸೆಂಬ ಬ್ಯಾಗಿಗೆ ಬಾಯಿಯೇ ಜಿಪ್ ,ಕಿವಿ ಕಣ್ಣುಗಳೇ ಪಾಕೆಟ್ಗಳು ಬೇಕಾದಾಗ ನೋಡುವುದು, ಕೇಳಿಸಿಕೊಳ್ಳುವುದು, ಹೇಳುವುದು ಇಲ್ಲವಾದಾಗ ಸದ್ದಿಲ್ಲದೆ ಇದ್ದು ಬಿಡುವಂಥದ್ದು. ಈ ಪಾಕೆಟ್ಗಳು ಪಿಕ್ಪಾಕೆಟ್ ಗಳಾಗುತ್ತವೆ. ನಿಜವಾದ ಅರ್ಥದಲ್ಲಿ ಬ್ಯಾಗಿಗೇ ಕನ್ನ ಹಾಕಿದರೆ, ಮನಸ್ಸೆಂಬ ಬ್ಯಾಗಿಗೆ ಅದರಲ್ಲಿರುವ ಭಾವನೆಗಳಿಗೇ ಕೆಲವರು ಕನ್ನ ಹಾಕುತ್ತಾರೆ.
ಮುಂದೆ ಓದಿ…
ಒಂದಷ್ಟು ವರ್ಷಗಳ ಹಿಂದೆ ಬಯಸಿದ ಕಾಲೇಜಿನಲ್ಲಿ ಒಂದು ಸೀಟು, ಫ್ಯಾಷನ್ ಬಟ್ಟೆ, ಹೀಲ್ಡ್ ಚಪ್ಪಲಿ, ಒಳ್ಳೆಯದೊಂದು ವ್ಯಾನಿಟಿ ಬ್ಯಾಗ್ ಸಿಕ್ಕರೆ ಗಾಳಿಗೆ ಗರಿ ಮೂಡಿದಂತೆ ವ್ಯಾನಿಟಿ ಬ್ಯಾಗ್ ಹಾಕಿ ತೂಗುವ ವಯ್ಯಾರದಿಂದ ನಡೆಯುವ ವನಿತೆಯರ ಆ ಕಾಲದ ನಡಿಗೆಯನ್ನು ವಿವರಿಸಲು ಅಸಾಧ್ಯವೇ ಸರಿ! “ತುಂಬಿವಿಂಡಿನಂತೆ ಪಾಡಿ ಜಕ್ಕವಕ್ಕಿಯಂತೆ ಕೂಡಿ” ಎಂಬ ಪದ್ಯದ ಸಾಲಿನಂತೆಯೆ ನಮ್ಮ ವನಿತೆಯರ ವಿಹಾರ ಲೋಕವಿರುತ್ತಿತ್ತು . ಈಗ ಬ್ಯಾಕ್ ಪ್ಯಾಕ್ಗಳು ಬಹುಪಾಲು ವನಿತೆಯರ ವ್ಯಾನಿಟಿ ಬ್ಯಾಗಿನ ಸ್ಥಳವನ್ನು ಆಕ್ರಮಿಸಿವೆ. ವನಿತೆಯರ ಬ್ಯಾಗ್ ಆಗಿರುವ ವ್ಯಾನಿಟಿ ಬ್ಯಾಗ್ ಅಥವಾ ಈ ಕೈಚೀಲ ಲಲನಾ ಲೋಕದ ಅದ್ಭುತ ಮನೋಭೂಮಿಕೆಯೂ ಹೌದು! ಏನಂತೀರಿ!
ಬಹಳ ಬಹಳ ವರ್ಷಗಳ ಹಿಂದೆ ನನ್ನ ಸೋದರತ್ತೆ ಮದುವೆ ಸಂದರ್ಭದಲ್ಲಿ ನಡೆದ ಒಂದು ಘಟನೆ. ಆ ಮದುವೆಯ ಅರತಕ್ಷತೆಗೆ ಹೋದ ನೆನಪು ಇನ್ನೂ ಗಾಢವಾಗಿಯೇ ಇವೆ. ನನ್ನ ತಮ್ಮ ಹರಿ ತೊಟ್ಟಿಲ ಮಗು ಅನ್ನುವ ಕಾರಣಕ್ಕೆ ನನ್ನಮ್ಮ ಆರತಕ್ಷತೆಗೆ ಬರಲೇ ಇಲ್ಲ. ನಾನು ನನ್ನಪ್ಪ ಇಬ್ಬರೂ ಇತರೆ ಬಂಧುಗಳ ಜೊತೆ ಹೊರಟೆವು. ಆ ಗುಂಪಿನಲ್ಲೊಬ್ಬ ನನ್ನ ವಯಸ್ಸಿನವಳೇ ಆದ ಭಾಮೆಯೂ ಇದ್ದಳು. ಅವಳ ಕೈಯಲ್ಲಿ ಒಂದು ವ್ಯಾನಿಟಿ ಬ್ಯಾಗ್. ಆ ಬ್ಯಾಗನ್ನು ಅವಳು ಹಾಕಿಕೊಳ್ಳುವ ಸ್ಟೈಲಿಗೆ, ನನ್ನನ್ನು ಅಣಕಿಸಿದ ಆ ಸ್ಮೈಲಿಗೆ, ಆ ಕಡೆ- ಈ ಕಡೆ ಅವಳು ಹೆಗಲು ಬದಲಾಯಿಸುವ, ವಯ್ಯಾರದ ಬಾಗು ಬಳಕಿಗೆ ನನಗೂ ವ್ಯಾನಿಟಿ ಬ್ಯಾಗ್ ಬೇಕೇ ಬೇಕೆನ್ನಿಸಿತು. ನಯವಾಗಿ , ಓಲೈಸಿ, ನಿಂದತ್ತು, ಮುನಿದತ್ತು ಕೇಳಿದರೂ ಆಕೆ ಕೊಡಲೇ ಇಲ್ಲ! ಹಿರಿಯರೂ ‘‘ಒಂದು ಗಳಿಗೆ ಕೊಡು’’ ಎಂದರೂ ಅವಳು ಬ್ಯಾಗ್ ಮಾತ್ರ ಕೊಡಲಿಲ್ಲ. ನನಗೂ ಬೇಸರವಾಗಿ ಇನ್ನು ಕೇಳಬಾರದೆಂದು ಅನ್ನಿಸಿದರೂ ಆಕೆ ಮತ್ತೆ ಮತ್ತೆ ಆ ವ್ಯಾನಿಟಿ ಬ್ಯಾಗು ಹಾಕಿ ನನ್ನ ಮುಂದೆಯೇ ನಾನು ನೋಡಲಿ ಎಂದು ಅಡ್ಡಾಡಿ ಚೇಡಿಸುತ್ತಿದ್ದಳು. ನನಗೋ ಸ್ವಾಭಿಮಾನ. “ನನಗೆ ಆ ಬ್ಯಾಗ್ ಬೇಕು ಇಲ್ಲವೇ ಅದೇ ರೀತಿಯ ಇನ್ನೊಂದು ವ್ಯಾನಿಟಿ ಬ್ಯಾಗ್ ಬೇಕೇ…. ಬೇಕು!” ಅನ್ನುವ ಹಠಕ್ಕೆ ಬಿದ್ದೆ. ಎಷ್ಟು ಎಂದರೆ ನಿಮ್ಮಹತ್ರ ಈಗ ಹೇಳಿಕೊಳ್ಳಲು ಮುಜುಗರವೇನಿಲ್ಲ! ನನ್ನಪ್ಪನಿಗೂ ಊಟ ಮಾಡಲು ಬಿಡದಂತೆ ಅತ್ತೆ. ನನ್ನ ಸೋದರತ್ತೆ ಸಂತೈಸಿದರೂ, ಹೊಸ ಮಾವ ಸಮಾಧಾನ ಮಾಡಿದರೂ ನನ್ನ ಅಳು ನಿಲ್ಲಲಿಲ್ಲ. ನನ್ನಪ್ಪ ತಾಳ್ಮೆ ತಪ್ಪಿ ನನ್ನನ್ನು ಗದರಿ, ಒಂದೆರಡು ಗುದ್ದನ್ನು ಜೋರಾಗಿಯೇ ಕೊಟ್ಟರು. ಅದನ್ನು ಗಮನಿಸಿದ ಭಾಮೆ ಮತ್ತೆ ಕಿಸಕ್ಕನೆ ನಕ್ಕಳು. ಹೀಗೆ ಆ ಬ್ಯಾಗಿಗೋಸ್ಕರ ಬೇಡಿಕೆ-ನಿರಾಕರಣೆಗಳು ಮುಂದುವರೆದವು. ಮನೆಗೆ ಬಂದರೂ ಎಲ್ಲರಲ್ಲಿ ಅದೇ ಚರ್ಚೆ.
ಆ ಚರ್ಚೆ ಅಂತೂ ಮುಕ್ತಾಯ ಕಂಡು ಮರು ದಿನ ನನ್ನ ಕೈಗೂ ಕೆಂಪು ಬಣ್ಣದ ವ್ಯಾನಿಟಿ ಬ್ಯಾಗ್ ಬಂದೇ ಬಿಟ್ಟಿತು. ಇನ್ನು ತಾತನ ಮನೆಯ ಜಗುಲಿಯಲ್ಲಿ ಕುಳಿತು ಅಣಕಿಸುವ ಸರದಿ ನನ್ನದಾಯಿತು. ಭಾಮೆಗೆ ವಿಷಯ ಗೊತ್ತಾಗಿ “ಕೊಡೆ ನನ್ಗೂನೂ….. ನೋಡ್ತೀನಿ!” ಅಂದರೆ “ನೀನ್ ನಿನ್ನೆ ಏನಾದ್ರು ಕೊಟ್ಯಾ ?ನೋಡು ನಿನ್ನ ಬ್ಯಾಗ್ ಹಳತು ನನ್ನ ಬ್ಯಾಗ್ ಹೊಸತು ಈಗಷ್ಟೇ ತಂದದ್ದು” ಎಂದು ನಾನು ಅಣಕಿಸುತ್ತಿರುವಷ್ಟರಲ್ಲೆ ಜುಟ್ಟು ಹಿಡಿದು ಜಗಳಕ್ಕೆ ನಿಲ್ಲುವ ಪ್ರಸಂಗ ಬಂದಿತು. ಅಷ್ಟರಲ್ಲಿ ನಾವೇ ಊರಿಗೆ ಹೊರಟಿದ್ದರಿಂದ ವ್ಯಾನಿಟಿ ಜಗಳ ಮುಗಿಯಿತು.
ಇಲ್ಲೂ ಒಂದು ತರ್ಕವಿದೆ. ಇಲ್ಲಿ ಭಾಮೆಯದ್ದು ತಪ್ಪಿಲ್ಲ ಅವಳ ಬ್ಯಾಗ್ ನನಗೇಕೆ ಕೊಡಬೇಕಿತ್ತು ಅಲ್ವ! ರಾಘವಾಂಕನ ‘ಹರಿಶ್ಚಂದ್ರ ಕಾವ್ಯ’ದ ಮುತ್ತಿನ ಸತ್ತಿಗೆಯ ಪ್ರಸಂಗದ “ಅನುನಯದೊಳೆಲ್ಲವಂ ಕೊಡಬಹುದು ಬಿಡಬಹುದು”. ಎಂಬ ಮಾತಿನಂತೆ ಕೊಟ್ಟರೆ ಕೊಡಬಹುದಿತ್ತು ಅಲ್ವೆ! ಅವಳಿಗೆ ಅದುವೇ ಅಪ್ರತಿಮ ಅನ್ನಿಸಿ ಕೊಡಲೇ ಇಲ್ಲ! ಈಗ ಬಹಳ ಸಿಲ್ಲಿ ಅನ್ನಿಸುತ್ತದೆ ಆದರೆ ಆ ವಯಸ್ಸಿನಲ್ಲಿ ಹಾಗೆ ಅನ್ನಿಸಿರಲಿಲ್ಲ. ಈಗಿನ ಹಾಗೆ ಆಗಿದ್ದರೆ “ಹೋಗೆ ಅಮ್ಮ ನಿನ್ ಬ್ಯಾಗ್ ನೀನೆ ಹಾಕ್ಕೋ” ಅಂತಿದ್ದೆ. ಆದರೆ ವ್ಯಾನಿಟಿ ಬ್ಯಾಗ್ ಕುರಿತ ಮಾತು ಕತೆ ಇಲ್ಲಿಗೆ ಮುಗಿಯಲಿಲ್ಲ ಈಗ ಪ್ರಾರಂಭವಾಗುತ್ತಿದೆ. ನಮ್ಮ ಸಮಾಜ ಹೆಣ್ಣು ಮಕ್ಕಳನ್ನು ಗಮನಿಸುವುದು ಇದೇ ಬ್ಯಾಗಿನಿಂದ ಯಾವ ಕಂಪೆನಿ , ಮೆಟೀರಿಯಲ್ ಯಾವುದು ಇತ್ಯಾದಿ . ಇವುಗಳ ನಡುವೆ ನಮ್ಮ ಕಸೂತಿ ಬ್ಯಾಗುಗಳಿಗೆ ಬೆಲೆ ಅಷ್ಟಕ್ಕಷ್ಟೇ ಅನ್ನುವಂಥಾಗಿದೆ. ಕೆಲವರಿಗೆ ಕಾಟನ್ ಬ್ಯಾಗ್ ಅದರಲ್ಲಿ ಎಂಬ್ರಾಯ್ಡರಿ,ಸ್ವಲ್ಪ ಮಿರರ್ ವರ್ಕ್ ಇರುವ ಬ್ಯಾಗುಗಳೆಂದರೆ ಇಷ್ಟ ಅವರವರ ಅಭಿರುಚಿಗೆ ತಕ್ಕ ಕೈ ಚೀಲಗಳನ್ನು ಅವರವರು ಹಿಡಿದಿಡುತ್ತಾರೆ.
ಬ್ಯಾಗ್ ಯಾವುದಾದಾದರೆ ಏನಂತೆ ? ಇಂಗ್ಲೆಂಡ್ ರಾಣಿ ಹಿಡಿಯುವ ವ್ಯಾನಿಟಿ ಬ್ಯಾಗೇ ಆಗಲಿ, ಅತ್ಯಂತ ದುಬಾರಿ ಹ್ಯಾಂಡ್ ಬ್ಯಾಗ್ ಬಳಸುವ ಭಾರತದ ನೀತಾ ಅಂಬಾನಿ, ಪಾಕಿಸ್ತಾನದ ಹೀನಾ ರಬ್ಬಾನಿಕರ್ ಇವರುಗಳ ಬ್ಯಾಗೇ ಆಗಲಿ ನಮ್ಮ ಹಳ್ಳಿಯ ಸೀತಕ್ಕ , ಕಮಲಕ್ಕ, ಭಾಗ್ಯಕ್ಕರು ಹಿಡಿಯುವ ಬ್ಯಾಗ್ಗಳೇ ಆಗಲಿ ಅದರಲ್ಲಿ ಇಟ್ಟು ಕೊಳ್ಳುವ ವಸ್ತುಗಳು ಒಂದೇ ಬಗೆಯವಾಗಿರುತ್ತವೆ. ಮಾತಿಗೆ ಹೇಳುವುದಾದರೆ ರಾಣಿ ಐಷಾರಾಮಿ ಮೊಬೈಲ್ ಇರಿಸಿಕೊಂಡರೆ ಸೀತಕ್ಕ,ಭಾಗ್ಯಕ್ಕ, ಕಮಲಕ್ಕರು ಕೀಪ್ಯಾಡ್ ಇರಿಸಿಕೊಳ್ಳುತ್ತಾರೆ ಅಷ್ಟೇ ವ್ಯತ್ಯಾಸ.ಯಾವ ಕರೆ ಸ್ವೀಕರಿಸಿದರೂ “ಹಲೋ ಎಂದೇ ಹೇಳುವುದು ಅಲ್ಲವೇ! ಇಲ್ಲಿ ಬೆಲೆ ಹೊರ ಕವಚಕ್ಕೆ ಮಾತ್ರ ಒಳಗೆ ಇರುವ ವಸ್ತುವಿಗೆ ಅಲ್ಲ. ಇದು ನಮ್ಮ ಹೊರಮೈ ಮತ್ತು ಒಳಮನಸ್ಸಿಗೂ ಅನ್ವಯವಾಗುತ್ತದೆ.
ಗುಚಿ, ಕೋಚ್, ಫ್ಯಾಕ್ಟರಿ, ಮುಂತಾದ ವಿದೇಶಿ ಬ್ಯಾಗ್ ಹಿಡಿದರೂ ಮನಸ್ಸು ಆಲೋಚಿಸುವುದು ದೇಸೀಯತೆಯನ್ನೇ……..
ನನಗೆ ಇಲ್ಲಿ ಬ್ಯಾಗು ಅಂದರೆ ವನಿತೆಯರ ಮನಸ್ಸೇ ಅನ್ನಿಸುತ್ತದೆ. ನಮ್ಮ ಮನಸ್ಸಿನಲ್ಲಿ ಇರಿಸಿಕೊಂಡ ವಿಷಯಗಳಂತೆ ನಮ್ಮ ವಯೋಮಾನಕ್ಕೆ ,ಜಾಯಮಾನಕ್ಕೆ ತಕ್ಕಂತೆ ವಸ್ತುಗಳನ್ನು ಇರಿಸಿಕೊಳ್ಳುತ್ತೇವೆ. ಅಲಂಕಾರ ಪ್ರಿಯರಾದರೆ ಕಾಮ್ಪ್ಯಾಕ್ಟ್ ಆಗಿ ಅಲಂಕಾರಿಕ ವಸ್ತುಗಳನ್ನೇ ತುಂಬಿಸಿಕೊಂಡಿರುತ್ತಾರೆ ಬ್ಯಾಗ್ ತೆರೆದರೆ ಲಿಪ್ಸ್ಟಿಕ್, ಪರ್ಫ್ಯೂಮ್ ಪರಿಮಳ ಒಮ್ಮೆಲೆ ಪಸರಿಸುವಂತೆ.ಟೀನ್ ಏಜಿನ ಹುಡುಗಿಯರು ಆದರೆ ಬರೇ ಚಾಕಲೇಟ್ಗಳನ್ನೇ ಇರಿಸಿಕೊಂಡಿರುತ್ತಾರೆ. ತಿಂಡಿಪೋತರಾದರೆ ತಿಂಡಿ ಪೊಟ್ಟಣಗಳೇ, ಕೆಲಸ ಹುಡುಕುವವರಾದರೆ ರೆಸ್ಯೂಮ್ಗಳು ,ಪಾಸ್ಪೋರ್ಟ್ ಸೈಜಿನ ಫೋಟೊಗಳು ಇರುತ್ತವೆ. ಓದುವುದರಲ್ಲಿ ಆಸಕ್ತಿಯಿರುವುದಾದರೆ ಪುಸ್ತಕಗಳೇ ಇರುತ್ತವೆ. ಮಗಳಿಗೆ ಅಳಿಯನನ್ನು, ಮಗನಿಗೆ ಸೊಸೆಯನ್ನು ಹುಡುಕುವ ತಾಯಂದಿರಾದರೆ ಹುಡುಗ- ಹುಡುಗಿಯರ ಜಾತಕಗಳು ಫೋಟೊಗಳೆ ತುಂಬಿರುತ್ತವೆ. ಇನ್ನು ಪೇಶೆಂಟ್ಗಳಾದರೆ ಔಷಧಿ ಮಾತ್ರೆಗಳೇ ತುಂಬಿ ಹೋಗಿರುತ್ತವೆ. ಎಲ್ಲಾ ಅವರವರ ಭಾವಕ್ಕೆ ತಕ್ಕಂತೆ,ಅವಶ್ಯಕತೆಗೆ ತಕ್ಕಂತೆ ಇರಿಸಿದ ವಸ್ತುಗಳೇ. ಇನ್ನೊಬ್ಬರ ಬ್ಯಾಗನ್ನು ಇಣುಕಿ,ಏನೆಲ್ಲಾ ಇದೆ ಎಂದು ಕೆದಕಿ ನೋಡುವುದೂ ಒಂದೇ ಅವರ ಮನಸ್ಸಿನ ವಿಚಾರಗಳನ್ನು ಇಣುಕಿ, ಕೆದಕಿ ರಾಡಿಗೊಳಿಸಿ, ಅದಕ್ಕೊಂದಷ್ಟು ಸೇರಿಸಿ ಇತರರಲ್ಲಿ ಹೇಳಿಅಣಕಿಸಿ ನೋಡುವುದೂ ಒಂದೇ. ಬ್ಯಾಗೋ -ಮನಸ್ಸೋ ಸಂಬಂಧಪಟ್ಟವರು ತೋರಿಸಿದರೆ ನೋಡಬಹುದು ಹೇಳಿಕೊಂಡರೆ ತಿಳಿಯಬಹುದು ಇಲ್ಲವಾದರೆ ಏಕೆ ಅನಗತ್ಯ ಕುತೂಹಲ ಅಲ್ವೆ?
ನಾವು ಧರಿಸುವ ಬ್ಯಾಗ್ ನಮ್ಮ ಯೋಗ್ಯತೆಯ ಸಂಕೇತವಲ್ಲ ನಮ್ಮ ವ್ಯಕ್ತಿತ್ವದ ಸಂಕೇತ .ಕೆಲವರು ಬ್ಯಾಗ್ ಬೇಕಂತೆಲೆ ಅದರ ಹಿಡಿಯನ್ನು ಬಲಗೈಯಲ್ಲಿ ಹಿಡಿಯುತ್ತಾರೆ. ಇನ್ನು ಕೆಲವರು ಹೆಗಲಿಗೆ ಹಾಕಿಕೊಂಡೆರೆ ಇನ್ನು ಕೆಲವರು ಎಡಗೈಗೆ , ಮೊಣಕೈಗೆ ಬರುವಂತೆ ಹಿಡಿದುಕೊಂಡಿರುತ್ತಾರೆ. ಯಾವುದೇ ಭಂಗಿಯಲ್ಲಿ ಹಿಡಿದರೂ ಅಲ್ಲೊಂದು ಆತ್ಮವಿಶ್ವಾಸ,ಭಯ, ಸಂತೃಪ್ತಿ, ತಹತಹ, ಗತ್ತುಗಮ್ಮತ್ತು ಎಲ್ಲಾ ಇರುತ್ತದೆ. ಕೆಲವೊಮ್ಮೆ ಎಷ್ಟು ದುಬಾರಿ ಬ್ಯಾಗಗಳನ್ನು ತೆಗೆದುಕೊಂಡರೂ ಅದನ್ನು ಹಿಡಿಯುವವರು ಮ್ಯಾನೇಜರ್ಗಳು, ಬಾಡಿ ಗಾರ್ಡ್ಗಳೆ ಆಗಿರುತ್ತಾರೆ, ಅದನ್ನು ವಜ್ರ- ವೈಢೂರ್ಯಗಳಿಂದ ಅಲಂಕರಿಸಿದ್ದರೂ ಮನಸ್ಸು ಮಾತ್ರ ಲವಲವಿಕೆ ಇಲ್ಲದೆ ಇದ್ದರೆ ಇದ್ದಿಲ ಮಸಿಯಂತಾಗಿಬಿಡುತ್ತದೆ ಹೀಗಾದರೆ ಪ್ರಯೋಜನವಾದರೂ ಏನು? ಅಂಥ ಬ್ಯಾಗುಗಳ ಅವಶ್ಯಕತೆಯಾದರೂ ಏಕೆ? ಅನ್ನಿಸುತ್ತದೆ ಅಲ್ಲವೆ!
ವ್ಯಾನಿಟಿ ಬ್ಯಾಗ್ನಲ್ಲಿಯೂ ಅನೇಕ ಪದರುಗಳಿರುವಂತೆ ನಮ್ಮ ಮನಸ್ಸಿಲ್ಲು ಅನೇಕ ವಿಷಯಗಳ ಮಡಿಕೆ ಇದ್ದೇ ಇರುತ್ತದೆ. ಬ್ಯಾಗಿಗೆ ಜಿಪ್ ಇರುತ್ತವೆ ನಮ್ಮ ಮನಸೆಂಬ ಬ್ಯಾಗಿಗೆ ಬಾಯಿಯೇ ಜಿಪ್ ,ಕಿವಿ ಕಣ್ಣುಗಳೇ ಪಾಕೆಟ್ಗಳು ಬೇಕಾದಾಗ ನೋಡುವುದು, ಕೇಳಿಸಿಕೊಳ್ಳುವುದು, ಹೇಳುವುದು ಇಲ್ಲವಾದಾಗ ಸದ್ದಿಲ್ಲದೆ ಇದ್ದು ಬಿಡುವಂಥದ್ದು. ಈ ಪಾಕೆಟ್ಗಳು ಪಿಕ್ಪಾಕೆಟ್ ಗಳಾಗುತ್ತವೆ. ನಿಜವಾದ ಅರ್ಥದಲ್ಲಿ ಬ್ಯಾಗಿಗೇ ಕನ್ನ ಹಾಕಿದರೆ, ಮನಸ್ಸೆಂಬ ಬ್ಯಾಗಿಗೆ ಅದರಲ್ಲಿರುವ ಭಾವನೆಗಳಿಗೇ ಕೆಲವರು ಕನ್ನ ಹಾಕುತ್ತಾರೆ. ಇದುವೆ ನಮ್ಮ ಮನಸ್ಸಿಗಾಗುವ ಮಾಸದ, ಮಾಯದ ಗಾಯ ಮರೆಯಲು ಸಾಧ್ಯವಿಲ್ಲ. ಇದೊಂದು ಮೈಗಂಟಿದ ಬ್ಯಾಗ್ ನೆರಳಂತೆ ಬಿಸಿಲಂತೆ ನಮ್ಮನ್ನು ಕಾಯುತ್ತದೆ , ಕಾಡುತ್ತದೆ. ವ್ಯಾನಿಟಿ ಎಂದರೆ ಅದರಲ್ಲಿ ಲೈಟ್ವೇಟ್ ಸಾಮಾಗ್ರಿಗಳನ್ನಷ್ಟೇ ಹಾಕುವುದು ಉಚಿತ, ಇಲ್ಲವಾದರೆ ಜಿಪ್ಗಳು ಪರ್ ಅಂತಾ ಒಡೆದುಹೋಗಿ ಅದರಲ್ಲಿರುವ ವಸ್ತುಗಳು ಎಲ್ಲರಿಗೂ ಕಾಣುತ್ತವೆ ಅದರಂತೆಯೇ ನಮ್ಮ ಮನಸ್ಗಸೆಂಬ ಬ್ಯಾಗಿಗೂ ಬೇಕಾಗಿರುವುದು ಅನವಶ್ಯಕವಾಗಿರುವುವಲ್ಲ ,ಎಷ್ಟೋ ವರ್ಷ ಹಳೆಯದ್ದು ಎಲ್ಲವನ್ನೂ ತುಂಬಿ ತುರುಕಿದರೆ ಅದು ನಮ್ಮ ಮನಸ್ಸಿನ ಮೇಲೆ ಅಗಾಧ ಪರಿಣಾಮ ಬೀರುತ್ತದೆ. ಹೇಗೆ ಮೊಬೈಲ್ನಲ್ಲಿರುವ ಅನಗತ್ಯ ಸ್ಟೋರೇಜನ್ನು ಆಗಾಗ ಡಿಲಿಟ್ ಮಾಡುವಂತೆ ಅನಗತ್ಯ ಅನ್ನಿಸಿದ್ದನ್ನು ಉದಾಸೀನ ಮಾಡಿ ಬಿಟ್ಟು ಬಿಡುವುದು ಉಚಿತ. ನಮಗೆ ಯಾವ ವಸ್ತುವೂ ಅನಗತ್ಯ ಅನ್ನಿಸುವುದಿಲ್ಲ ಎಲ್ಲವೂ ಬೇಕೇನಿಸುತ್ತದೆ ವ್ಯಾನಿಟಿ ಬ್ಯಾಗಿಗೆ ತುಂಬುವಾಗ ಅದರಲ್ಲಿ ಯಾವುದು ಮುಖ್ಯವೋ ಅದನ್ನು ಮಾತ್ರ ತೆಗೆದುಕೊಳ್ಳುವಂತೆ ನಡೆದ ಎಲ್ಲಾ ಘಟನೆಗಳನ್ನೂ ಯೋಚಿಸುತ್ತಾ ಕೂರುವುದು, ಕೊರಗುವುದು ಮಾಡಬಾರದು. ಮಾರುಕಟ್ಟೆಯಲ್ಲಿ ಮಾರುವ ವಸ್ತುಗಳು ಎಲ್ಲವೂ ಗ್ರಾಹಕರಿಗೇ ಬೇಕಾಗಿರುವಂಥದ್ದು ಹಾಗಂತ ಎಲ್ಲವನ್ನು ಕೊಂಡುಕೊಳ್ಳಲಾಗುತ್ತದೆಯೇ ? ಖಂಡಿತಾ ಇಲ್ಲ! ಹಣವಿದ್ದಷ್ಟು ನಮ್ಮ ಕೈಯಲ್ಲಿ ಸಾಗಿಸುವಷ್ಟು ಮಾತ್ರ ನಾವು ಖರೀದಿ ಮಾಡುತ್ತೇವೆ.
ಮನುಷ್ಯನ ಸುತ್ತಲೂ ನಡೆಯುವ ಘಟನೆಗಳೆಲ್ಲಾ ಮನುಷ್ಯ ಸಂಕುಲಕ್ಕೇ ಅನ್ವಯಿಸುವಂಥದ್ದು ಆದರೆ ಎಲ್ಲಾ ಘಟನೆಗಳು ಎಲ್ಲರಿಗಲ್ಲ. ವಸ್ತುಗಳನ್ನು ಖರೀದಿ ಮಾಡುವಾಗ ಒಳ್ಳೆಯದನ್ನು ಮಾತ್ರ ಖರೀದಿಸುವಂತೆ ನಮ್ಮ ಮನಸ್ಸಿಗೂ ಹಿತವಾಗುವಂಥ ಸನ್ನಿವೇಶಗಳನ್ನು ಸ್ಫೂರ್ತಿ ತರುವಂತಹ ಮಾತುಗಳನ್ನು,ಘಟನೆಗಳನ್ನು ಮೆಲುಕುಹಾಕುವುದು ಜಾಣತನ.
ಹೀಗೆ ಒಮ್ಮೆ ವ್ಯಾನಿಟಿಯಲ್ಲಿ ಹಣವಿರಬೇಕು ಎನ್ನುತ್ತಲೇ ನನ್ನ ಸಂಬಂಧಿಯೊಬ್ಬರು ನನ್ನ ಬ್ಯಾಗನ್ನು ಶೋಧಿಸತೊಡಗಿದರು ಸಿಕ್ಕಿದ್ದು ಎಟಿಎಮ್ ಕಾರ್ಡ್, ಕಾಲೇಜಿನ ಐಡೆಂಟಿಟಿ ಕಾರ್ಡ್. ಬೆಳ್ಳಿ ಕುಂಕುಮ ಬಟ್ಟಲು. ಮುನ್ನುರು- ನಾನೂರು ರೂಗಳು ಅಷ್ಟೆ. ಇಷ್ಟೇನಾ….? ಅಂದರು “ ಕಾರ್ಡ್ ಇದ್ದ ಮೇಲೆ ಎಲ್ಲಿ ಬೇಕಾದರೂ ಸ್ವೈಪ್ ಮಾಡಬಹುದು ಅಲ್ವೆ!” ಅಂದೆ ಆದರೆ ಅವರಂದುಕೊಂಡಂತೆ ಬ್ಯಾಗಿನಲ್ಲಿ ಹಣವಿರಬೇಕಾದುದು ಒಂದು ಹೆಚ್ಚುಗಾರಿಕೆ ಅಲ್ಲವೇ ಅಲ್ಲ! ಮನಸ್ಸೆಂಬ ವ್ಯಾನಿಟಿಗೆ ನಿಜವಾಗಿಯೂ ಬೇಕಾಗಿರುವುದು ಗುಣ, ಸದ್ಭಾವ , ಈರ್ಷೆಗಳಿಂದ ಹೊರತಾದ ನುಡಿ, ಪ್ರತಿಯೊಬ್ಬರನ್ನು ಆದರದಿಂದಲೇ ಕಾಣುವ ಸಂಕಲ್ಪ. ಅರ್ಥಾತ್ ವ್ಯಾನಿಟಿ ಬ್ಯಾಗ್ ಕೇವಲ ಮನಿ ಬ್ಯಾಗಲ್ಲ ಭಾವದೀಪ್ತಿಯನ್ನೊಳಗೊಂಡ ಮನೋಬ್ಯಾಗ್ ಕೂಡ ಹೌದು!
ಇನ್ನೊಮ್ಮೆ ಮೈಸೂರಿನಿಂದ ಅರಸೀಕೆರೆ ಹೊರಡುವ ರೈಲಿಗೆ ಹತ್ತಿದೆ ಆ ರೈಲು ಸರಿಯಾಗಿ 6.20ಕ್ಕೆ ಹೊರಡುವುದಿತ್ತು. ನನ್ನೆದುರ ಸೀಟಿನಲ್ಲಿ ಮಂದಗೆರೆ ಎಂಬ ಊರಿನ ಹಿರಿಯ ದಂಪತಿಗಳು ಕುಳಿತಿದ್ದರು. ಅವರ ಹಾವ ಭಾವ ಹಾಕಿದ್ದ ಬಟ್ಟೆ ಧರಿಸಿದ ಆಭರಣ ನೋಡಿದರೆ ಅವರು ಬಹಳ ಶ್ರೀಮಂತರು ಅನ್ನಿಸುತ್ತಿತ್ತು . ಆ ಹಿರಿಯ ಮಹಿಳೆಯೂ ಚಂದದ ವ್ಯಾನಿಟಿ ಬ್ಯಾಗ್ ಹಿಡಿದಿದ್ದರು . ನನ್ನನ್ನು ನೋಡಿ ಮಾತನಾಡಿಸಿ ಪರಿಚಯ ಮಾಡಿಕೊಂಡು ರೈಲು ಹೊರಡುವ ಸಮಯಕ್ಕೆ ಚಾಕಲೇಟ್ ಒಂದನ್ನು ಆ ಬ್ಯಾಗಿನಿಂದ ತೆಗೆದು ಕೊಟ್ಟಿದ್ದರು. ಮತ್ತೆ ಮಾತುಕತೆ ತೆಳ್ಳಗೆ ಪ್ರಾರಂಭವಾಯಿತು, ಅಂತೂ ಮಂದಗೆರೆ ಬರುವಷ್ಟರಲ್ಲಿ ಇಷ್ಟು ಬೇಗ ಬಂದೇ ಬಿಟ್ಟಿತೇ ಊರು ಅನ್ನಿಸಿತು. ಅವರು ರೈಲಿನಿಂದ ಕೆಳಗೆ ಇಳಿಯುವಾಗ ಚಂದದ ವ್ಯಾನಿಟಿ ಬ್ಯಾಗನ್ನು ಆ ವ್ಯಾನಿಟಿಯೊಳಗೇ ಇದ್ದ ಇನ್ನೊಂದು ಕಾಟನ್ ಬ್ಯಾಗಿನೊಳಕ್ಕೆ ಹಾಕಿ ಆ ಕಾಟನ್ ಬ್ಯಾಗಿನ ಹಿಡಿಕೆ ಹಿಡಿದು ನನಗೆ ಟಾಟಾ ಹೇಳಿ ಮುಂದೆ ಸರಿದರು. ಏಕೆ ಹಿಗೆ? ಆ ಚಂದದ ಬ್ಯಾಗನ್ನು ಇತರರ ಇದಿರು ಹಿಡಿಯಲು ಮುಜುಗರವೇ? ಹಿಂಜರಿಕೆಯೆ? ಇಲ್ಲ! ನಮಗೇನೂ ತಿಳಿದಿಲ್ಲ! ಎನ್ನುತ್ತಾ ಆದಷ್ಟೂ ಸರಳವಾಗಿಯೇ ಇದ್ದು ಬಿಡುವ ಮನಸ್ಥಿತಿ ಅವರಿಗಿತ್ತೆ ನನಗೆ ತಿಳಿಯಲಿಲ್ಲ. ಕೆಲವರು ಹಾಗೆಯೇ ಏನಿಲ್ಲದಿದ್ದರೂ ಹೊರನೋಟಕ್ಕೆ ಒಳ್ಳೆಯ ಬ್ಯಾಗ್ ಹಿಡಿದು ತಳುಕು ಬಳುಕು ಮಾಡುತ್ತಾರೆ. ಇನ್ನು ಕೆಲವರು ಸಾಧಾರಣ ಅನ್ನುವ ಕೈಚೀಲದಲ್ಲಿಯೇ ಬೇಕಾದಷ್ಟು ಬೆಲೆಬಾಳುವ ವಸ್ತುಗಳನ್ನು ಹಿಡಿದು ಹೋಗುತ್ತಾರೆ. ಕೆಲವರಿಗೆ ತೋರಿಕೆ ಮಾಡುವುದೇ ಪ್ರತಿಷ್ಟೆಯಾದರೆ, ಸಾಧಾರಣದವರಿಗೆ ಎಲ್ಲವೂ ಓ.ಕೆ ,ಓ.ಕೆ ಅಗಿರಬೇಕು ಎಲ್ಲವೂ ಸರಿಹೋಗಬೇಕು , ಸರಿಹೋಯಿತು ಎನ್ನುವ ಸುಖಮನಃಸ್ಥಿತಿಯಲ್ಲಿರಬೇಕು ಎಂದು ಬಯಸುತ್ತಾರೆ. ಎಲ್ಲವೂ ಅವರವರ ಭಾವಕ್ಕೆ ತಕ್ಕಂತೆ.
ಒಮ್ಮೆ ಹಾಸನದಿಂದ ಬೆಂಗಳೂರಿಗೆ ಮದುವೆಗೆ ಹೊರಟ ಮಹಿಳೆಯೊಬ್ಬರು ಸಿಂಪಲ್ ಆಗಿ ಆಭರಣ ಹಾಕಿ ಉಳಿದ ಎಲ್ಲಾ ಆಭರಣಗಳನ್ನು ಬ್ಯಾಗಲ್ಲಿಯೇ ಹಾಕಿ ಹೋಗುತ್ತಾರೆ. ಜಯನಗರ ಬಸ್ ಹತ್ತಿ ಲಾಲ್ಬಾಗ್ ಮೇನ್ ಗೇಟ್ ಬರುವ ಹೊತ್ತಿಗೆ ಆ ಬ್ಯಾಗೇ ಮಿಸ್ ಆಗಿರುತ್ತದೆ. ಜಾಗೃತೆ ವಹಿಸಬೇಕು ನಿಜ ಆದರೆ ಜಾಗರೂಕತೆಯಲ್ಲೂ ಮೈಮರೆತರೆ ಈ ರೀತಿಯ ಘಟನೆಗಳಾಗುತ್ತವೆ. ಇನ್ನು ಚೂಡಿದಾರ್ ಹಾಕಿ ಸಿಟಿ ಬಸ್ ಹತ್ತಿ ನಮ್ ಸ್ಟಾಪ್ ಲಾಸ್ಟ್ ಎಂದು ತುಸು ನಿದ್ರೆಗೆ ಜಾರಿದರೆ ಅಷ್ಟೇ.. ವೇಲನ್ನು ಬ್ಯಾಗಿನ ಮೇಲೆ ಹಾಕಿ ಗೊತ್ತಿಲ್ಲದಂತೆ ಜಿಪ್ ತೆಗದು ಬೇಕಾದದ್ದನ್ನೆಲ್ಲ ತೆಗೆಯುವವರು ಇರುತ್ತಾರೆ. ಬುದ್ಧಿವಂತರಾದರೆ ಅಷ್ಟೇ ಸೂಕ್ಷ್ಮವಾಗಿ ಕಳ್ಳತನದಿಂದ ಹುಡುಕುವ ಕಳ್ಳಕೈಗಳನ್ನು ಹಾಗೆ ಹಿಡಿದು ಬುದ್ಧಿ ಕಲಿಸಬಹುದು .
ಒಂದೊಂದು ವ್ಯಾನಿಟಿ ಬ್ಯಾಗ್ ಕೂಡ ಒಂದೊಂದು ಆತ್ಮಕಥನವೇ. ವನಿತೆಯರ ಮನೋಲೋಕದಲ್ಲಿ ಅಡಗಿರುವ ಭಾವಸಂಭ್ರಮ, ಭಾವಕಲ್ಪ-ವಿಕಲ್ಪಗಳ ವಿಭ್ರಮ ಲೋಕ. ಅದರಲ್ಲಿ ಇರಿಸಿಕೊಂಡ ಡೈರಿ,ಪಾಸ್ಬುಕ್, ಆಸ್ಪತ್ರೆ ಚೀಟಿ ಮೊದಲಾದ ವಸ್ತುಗಳೇ ಅವರ ಕಥನವನ್ನು ಎಳೆಎಳೆಯನ್ನಾಗಿ ಬಿಚ್ಚಿಡುತ್ತವೆ ಬ್ಯಾಗ್ ಇಲ್ಲಿ ಒಂದು ಹೊರ ಕವಚ ಅಷ್ಟೇ ಮಕ್ಕಳ ತಾಯಿ ಬಡವರಾದರೂ ಶ್ರೀಮಂತರಾದರೂ ಇಡುವುದು ಸ್ಯಾನಿಟರಿ ಪ್ಯಾಡ್ಗಳನ್ನೇ ಅದೇ ಹಾಲಿನ ಬಾಟಲಿಯನ್ನೇ. ಅಜ್ಜಿಯರಾದರೆ ಅದೇ ಚಾಕಲೇಟ್ ,ಆಟಿಕೆಳು ಅವುಗಳ ಗುಣಮಟ್ಟ ಯಾವುದೇ ಆಗಿರಲಿ ಆ ವಸ್ತುಗಳ ಹೆಸರಿನಲ್ಲಿ ವ್ಯತ್ಯಾಸವಿರುವುದಿಲ್ಲ.
ಮನೆಯಿಂದ ಆಚೆ ಹೋಗುವಾಗ ಏನು ಮರೆತರೂ ಬ್ಯಾಗ್ ಮಾತ್ರ ಮರೆಯಲಾರೆವು. ನಾವೆಲ್ಲೇ ಹೋದರೂ ನಮ್ಮ ಜೊತೆಗಿರುವ ಆಪ್ತಕಾರ್ಯದರ್ಶಿ ಎಂದರೆ ಈ ಬ್ಯಾಗ್ ಎಷ್ಟೇ ಭಾರ ತುಂಬಿದರೂ ಯಾಕಿಷ್ಟು? ಎನ್ನುವುದಿಲ್ಲ ಭಾರ ಹಾಕದೆ ಇದ್ದರೂ ಯಾಕಿಲ್ಲ? ಅನ್ನುವುದಿಲ್ಲ. ಹಣವಿಟ್ಟಾಗ ಹಿಗ್ಗಿಹೀರೆಕಾಯಿಯಾಗದ, ಇಲ್ಲದೆ ಇದ್ದಾಗ ನಗ್ಗಿ ನುಗ್ಗೇಕಾಯಿಯಾಗದ ಸದಾ ಸಮಾಧಾನಿ. ಇದರಂತೆ ನಾವೂ ಕೂಡ ಬದುಕಿನಲ್ಲಿ ಸೋಲುಗೆಲುವುಗಳು ಬಂದಾಗ ಕಷ್ಟಕೋಟಲೆಗಳು ಬಂದಾಗ ಚಿತ್ತಸಮಾಧಾನಿಯಾಗಬೇಕು. ಜೀವನ ಎಂದರೆ ನಿತ್ಯ ಹೋರಾಟ . ನಿತ್ಯ ಗೆಲ್ಲಲೇ ಬೇಕು ಎಂಬ ತಹತಹವಿರುತ್ತದೆ ಆ ಭರದಲ್ಲಿ ಪಾಪ –ಪುಣ್ಯಗಳ ಲೆಕ್ಕ ಜಮಾ ಆಗುತ್ತಲೇ ಇರುತ್ತದೆ ಇದನ್ನು ಪಾಪ ಪುಣ್ಯದ ಜೋಳಿಗೆ ಎನ್ನುತ್ತಾರೆ ಇದು ಹೊರಲೋಕಕ್ಕೆ ಅಗೋಚರವಾಗಿದ್ದು ಆದರೆ ತೊಟ್ಟವರಿಗೆ ಮಾತ್ರ ತನ್ನ ಇರುವಿಕೆಯನ್ನು ಅರ್ಥೈಸುತ್ತಿರುತ್ತದೆ . ತಾ ಮಾಡಿದ ಅಡುಗೆಯನ್ನು ತಾವೇ ಊಟಮಾಡಬೇಕು ಎನ್ನುವಂತೆ ತಾವು ಮಾಡಿದ ಕರ್ಮದ ಅಡುಗೆ ಅದರಲ್ಲಿ ಸೇರಿತ್ತಿರುತ್ತದೆ ಅಡಿಗಡಿಗೆ ಮತ್ತದೆ ಕರ್ಮದ ಬುತ್ತಿಯನ್ನು ಇನ್ನಷ್ಟು ಭಾರವಾಗಿಸಿಕೊಳ್ಳುವುದರ ಬದಲು ಸೂಕ್ಷ್ಮ ಸಂವೇದಿಯಾದವನು ತನ್ನನ್ನು ತಾನು ತಿದ್ದಿಕೊಳ್ಳಬಹುದು, ಹಗುರಾಗಬಹುದು.
ಬ್ಯಾಗಿಗೂ ಬದುಕಿಗೂ ಅವಿನಾಭಾವ ಸಂಬಂಧವಿದೆ, ಅನ್ಯೋನತೆ ಇದೆ. ವ್ಯಾನಿಟಿ ಬ್ಯಾಗ್ಗಳು ಒಂದೊಂದು ಅನುಭವದ ಜೋಳಿಗೆಗಳೆ. ಅಸಮಾಧಾನ, ಕೊರೆತೆ ಅನ್ನುವ ‘ಬಗ್’ ಗಳನ್ನು ಅಂದರೆ ಮನಸ್ಸಿನ ಆರೋಗ್ಯಕ್ಕೆ ಮಾರಕವಾಗುವ ಕೀಟಗಳೇ ತುಂಬಿಸಿಕೊಂಡ ಬ್ಯಾಗ್ಗಳೇ ಆಗಿರುತ್ತವೆ.. ಎಲ್ವೂ ಒಂದೇ ಎಂದಮೇಲೆ ಯಾವ ಬ್ರ್ಯಾಂಡ್ ಆದರೆ ನಮಗೇನಂತೆ. ದುಬಾರಿ ಬೆಲೆ ತೆತ್ತು ಒರಟಾದ ಬ್ಯಾಗುಗಳಂತೆ ಮುಗುಮ್ಮಾಗಿ ಇರುವುದಕ್ಕಿಂತ, ಮೃದುಲತೆಯಂತೆ , ಮೃದುವಾದ ಬಟ್ಟೆಯ ಮೇಲೆನ ಮೃದು ಸ್ಪರ್ಶದಂತೆ ನಮ್ಮ ಬ್ಯಾಗಿನಂತೆಯೇ ಇರುವ ಮನಸ್ಸುಗಳೂ ಸುಕೋಮಲವಾಗಿರಬೇಕು, ಸಂವೇದನಾಶೀಲತೆಯನ್ನೂ ಸ್ಪಂದಕ ಶೀಲತ್ವವನ್ನೂ ಹೊಂದಿರಬೇಕು. ಬ್ಯಾಗಿನಲ್ಲಿ ಇರಿಸಬಹುದಾದ ವಸ್ತುಗಳನ್ನು ಮಾತ್ರ ಇರಿಸುವಂತೆ ನಮ್ಮ ಮನಸ್ಸೆಂಬ ಬ್ಯಾಗಿನಲ್ಲಿ ಉತ್ಕೃಷ್ಟ ಆಲೋಚನೆ, ಗಹನವಾದ ಚಿಂತನೆಗಳನ್ನು ತುಂಬಿಕೊಳ್ಳಬೇಕು. ಮಾಸಿದ ಬ್ಯಾಗ್ ಸ್ವಚ್ಛಗೊಳಿಸುವಂತೆ ಮಸ್ಸನ್ನೂ ಸ್ವಚ್ಛಗೊಳಿಸಿಕೊಂಡು ಅರಾಮಬೇಕು ಮನಸ್ಸೆಂಬ ಬ್ಯಾಗಿನ ಸ್ವಚ್ಛತೆಗೆ ಕ್ಷಮೆ,ದಯೆ, ಪ್ರೀತಿ,ಸಹನೆಗಳೆ ಡಿಟರ್ಜೆಂಟ್ಗಳು.
ವ್ಯಾನಿಟಿ ಹ್ಯುಮ್ಯಾನಿಟಿಯ ಸಂಕೇತವೂ ಕೂಡ. “ಹೊಟ್ಟೆ ಹಸಿವು ಏನಾದರೂ ಕೊಡಿ” ಎಂದು ಗೋಗರೆಯುವ ಮಕ್ಕಳನ್ನು ಹಿಂದಕ್ಕೆ ತಳ್ಳಿ ದುಬಾರಿ ಬ್ಯಾಗ್ ಹಿಡಿದು ಕಾರು ಹತ್ತಿ ಹೋಗುವ ಮಾನವೀಯತೆ ಮರೆತ ಅನೇಕರೂ, ತನಗೇ ಇಲ್ಲದಿದ್ದರೂ ಸಾಧಾರಣ ಬಟ್ಟೆಯ ಕೈಚೀಲದಲ್ಲಿದ್ದ ತುಂಡು ರೊಟ್ಟಿಯನ್ನೇ ಮಕ್ಕಳಿಗೆ ತೆಗೆದು ಕೊಡುವ ಕಷ್ಟಕ್ಕೆ ಸ್ಪಂದಿಸುವ ಅದೆಷ್ಟು ಪ್ರಸಂಗಗಳು ನಮ್ಮ ನಡುವೆ ನಡೆದಿಲ್ಲ. ಇನ್ನು ಹಲವು ಬ್ಯಾಗುಗಳಿದ್ದವರು, ಧಿರಿಸಿಗೆ ತಕ್ಕಂತೆ ಬದಲಾಯಿಸಿ ಬ್ಯಾಗುಗಳನ್ನು ತೆಗೆದುಕೊಂಡು ಹೋಗುವಾಗ ಹಳೆಯ ಬ್ಯಾಗಿನಲ್ಲಿ ಇರಿಸಿದ್ದ ಹಣ, ಎಟಿಮ್ ಕಾರ್ಡ್ ಇತ್ಯಾದಿಗಳನ್ನು ಮರೆತು ಮುಜುಗರ ಅನುಭವಿಸುವುದಿದೆ. ಸರಿಯಾದ ಪ್ಲ್ಯಾನ್ ಇಲ್ಲದಿದ್ದರೆ ಹೀಗಾಗಾಗುತ್ತದೆ. ಇನ್ನು ಅನಗತ್ಯ ಅನ್ನಿಸಿದ್ದನ್ನು ತುಂಬಿಸಿಕೊಂಡರೆ ಬ್ಯಾಗ್ ಗೊಜಲು-ಗೋಜಲೆ ಹಾಗೆ ಮನಸ್ಸಿನಲ್ಲಿ ಅನಗತ್ಯ ಅನ್ನಿಸಿದ್ದನ್ನು ತುಂಬಿಸಿಕೊಳ್ಳದೆ ಅಗತ್ಯ ಅನ್ನಿಸಿದ್ದನ್ನು ಮಾತ್ರ ಇರಿಸಿಕೊಂಡು ಮನಸ್ಸನ್ನು ತಿಳಿಗೊಳದಂತೆ ಇರಿಸಿಕೊಳ್ಳಬೇಕು.
ವ್ಯಾನಿಟಿ ಬ್ಯಾಗನ್ನು “ಜಂಭದ ಚೀಲ” ಎಂದು ಕರೆಯುತ್ತಾರೆ ನಿಜ ಆದರೆ ಅದನ್ನೇ ‘ಮಾನವೀಯ ಚೀಲ’ ಎಂದು ಮಾಡಬಾರದೇಕೆ? ಬಟ್ಟೆಯ, ಚರ್ಮದ ವ್ಯಾನಿಟಿ ಬ್ಯಾಗನ್ನು ಬದಲಾಯಿಸಬಹುದು, ಹೊಸದನ್ನು ಕೊಂಡು ಉಪಯೋಗಿಸಬಹುದು. ಮನಸ್ಸೆಂಬ ಬ್ಯಾಗನ್ನು ಕದಲಿಸಲಾಗದು. ನಮ್ಮ ಮನಸ್ಸೆಂಬ ಬ್ಯಾಗಿಗೆ ನಾವೇ ಭಾಗಿಗಳು . ತುಸು ಮಿಸುಕಿದರೂ ಕೂಡಿಸಲು, ಕಳೆಯಲಾಗದ ಅನುಭವ ಆನುಭಾವಗಳನ್ನೇ ತೂಗುವ ಮನೋಬ್ಯಾಗ್ಗಳು. ಏನಾದರೂ ಸರಿ ಹೆಗಲಮೇಲೇರುವ ಬ್ಯಾಗ್ಗಳೇ ಆಗಲಿ, ಮನೋಭೂಮಿಕೆಯೆಂಬ ಬ್ಯಾಗೇ ಆಗಲಿ ಸಂಭ್ರಮವೇ ತುಂಬಿರಲಿ.
ಸುಮಾವೀಣಾ
ಹೆಚ್ಚಿನ ಬರಹಗಳಿಗಾಗಿ
ಬೇಲಿಯೇ ಎದ್ದು…..
ಗಣೇಶನ ಕೈಯಲ್ಲಿಯ ಲಾಡು
ನೋ ಪಾರ್ಕಿಂಗ್