ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ವಿಜಯಲಕ್ಷ್ಮೀ ಬಸ್ವಾ ಗಜಲ್ ಮತ್ತು ಕವಿತೆಗಳು

ವಿಜಯಲಕ್ಷ್ಮೀ ಬಸ್ವಾ
ಇತ್ತೀಚಿನ ಬರಹಗಳು: ವಿಜಯಲಕ್ಷ್ಮೀ ಬಸ್ವಾ (ಎಲ್ಲವನ್ನು ಓದಿ)

ಗಜಲ್

ಸಿಟ್ಟು ಮಾಡತಿರ್ರ್ತೀ ಯಾಕ ನೀ ಸುಮ್ಮ್ – ಸುಮ್ನ?
ಮನಸ್ಸು ಮುರೀತಿರ್ರ್ತೀ ಯಾಕ್ ನೀ ಸುಮ್ ಸುಮ್ನ?

ಎಷ್ಟು ದೂರಿದರೂ ನೀ ನಿನ್ನಿಂದ ದೂರಾಗಲಾರೆ…
ಹುಸಿಯಾಗಿ ದೂರತೀರ್ರ್ತೀ ಯಾಕ್ ನೀ ಸುಮ್-ಸುಮ್ನ…

ಗೆಳೆತನದಾಗ ಹೆಚ್ಚು ಕಮ್ಮಿ ಆದರ ಆಗಲಿ ಬಿಡು..
ಎಲ್ಲಾ ತಲೀಗೆ ಹಚ್ಛ್ಕೋತೀ ಯಾಕ್ ನೀ ಸುಮ್ -ಸುಮ್ನ

ಸಿಟ್ಟು ಬಂದಾಗ ವದರಿಕೊಂಡು ಹಳವಾರಾಗಿ ಬಿಡು..
ಒಳಗೊಳಗೇ ಕುದೀತೀ ಯಾಕ್ ನೀ ಸುಮ್ -ಸುಮ್ನ

ನಿನ್ನ ಹೃದಯದ ಖೊಲ್ಯಾಗ ಬೆಚ್ಚಗ ಇರ್ರ್ತೆನೆ ಬಿಡು..
ಆ ಖೋಲಿ ಖಾಲಿ ಇಡ್ತೀ ಯಾಕ್ ನೀ ಸುಮ್ -ಸುಮ್ನ

ವಾದ-ವಿವಾದ, ಮೀನ-ಮೇಷ ಇದ್ದರ ಇರಲಿ ಬಿಡು…
ನಡಬರಕ ತುಲಾ ತೂಕಡಸ್ತೀ ಯಾಕ್ ನೀ ಸುಮ್ -ಸುಮ್ನ ..

ನಮ್ಮ ಗೆಳೆತನದಾ ಹಾದೀಲೀ, ವಿಜಯವೇ ವಿಜಯಾ..
ಏನರ ಆಗಲೀಗ ನನ್ನ ಬಿಡಬ್ಯಾಡ ನೀ ಸುಮ್-ಸುಮ್ನ
…. ಸುಮ್-ಸುಮ್ನ…

ಶೀರ್ಷಿಕೆ : ಬದುಕುವ ಕಲೆ /ಬದುಕು ಬಂಗಾರ

ಬದುಕೇ ಒಂದು ಪಾಠ.
ಬದುಕುವುದೇ ಒಂದು ಕಲೆ.
ಬದುಕುತ್ತಾ ಹೋದಂತೆ ಬದುಕುವುದ ಕಲಿಸುವುದು ಬದುಕು
ಓದಿ ಕಲಿಯುವ ಕಲೆಯೇ…. ಬದುಕು?

1)ನಡೆದರೆ ಓಡುವುದ…
ಓಡಿದರೆ ಜಿಗಿಯುವುದ…
ಜಿಗಿದರೆ ಹಾರುವುದ… ಕಲಿಸುವುದು ಬದುಕು
ಬದುಕುತ್ತಾ ಹೋದಂತೆ ಬದುಕುವುದ ಕಲಿಸುವುದು ಬದುಕು

2)ಜಡತ್ವಕ್ಕೆ ಕ್ರಿಯಾಶೀಲತೆ….
ಕ್ರಿಯಾಶೀಲತೆಗೆ ದಿಶೆ…..
ದಿಶೆಗೆ ಗುರಿಯತ್ತ…
ಸಾಗಿಸುವುದು ಬದುಕು.
ಬದುಕುತ್ತಾ ಹೋದಂತೆ ಬದುಕುವುದ ಕಳಿಸುವುದು ಬದುಕು

3)ತೊಡರುಗಳಲ್ಲಿ ಚೇತರಿಕೆ..
ಏರುಪೇರುಗಳಲ್ಲಿ ಎಚ್ಚರಿಕೆ..
ಆಲಸ್ಯಕ್ಕೆ ಬೆದರಿಕೆ ನೀಡುವುದು ಬದುಕು
ಬದುಕುತ್ತಾ ಹೋದಂತೆ ಬದುಕುವುದ ಕಲಿಸುವುದು ಬದುಕು

4)ದೇಹಕ್ಕೆ ಕರ್ಮದ ಬೆಲೆ..
ಮೋಹಕ್ಕೆ ಭಕ್ತಿಯ ಅಲೆ..
ಸ್ನೇಹಕ್ಕೆ ನಿಸ್ವಾರ್ಥತೆಯ ಸೆಲೆ ಚಿಮ್ಮಿಸುವುದು ಬದುಕು
ಬದುಕುತ್ತಾ ಹೋದಂತೆ ಬದುಕುವುದ ಕಲಿಸುವುದು ಬದುಕು

5)ಮೌನದಲಿ ಅಡಗಿದ ಪ್ರೀತಿಯ ಸದ್ದು
‘ಮಾಡು ಇಲ್ಲ ಮಡಿ’ ಎಂಬ ಸಾಧಕನ ಜಿದ್ದು
ಹಿತ್ತಲ ಗಿಡದಲ್ಲಿ ಅಡಗಿದ ಮದ್ದು ಗುರುತಿಸುವುದ ಕಲಿಸುವುದು ಬದುಕು
ಬದುಕುತ್ತಾ ಹೋದಂತೆ ಬದುಕು ವುದ ಕಲಿಸುವುದು ಬದುಕು .

6)ಜನ-ಜನದಲಿ ಜನಾರ್ಧನನ,
ಕಣ-ಕಣದಲಿ ಮುಕ್ಕಣ್ಣನ,
ಕ್ಷಣ-ಕ್ಷಣದಲಿ ಕ್ಷೀಣಿಸುವುದಿದು ಎಂದು ಕಣ್ತೆರೆಸುವುದು ಬದುಕು
ಬದುಕುತ್ತಾ ಹೋದಂತೆ ಬದುಕುವುದ ಕಲಿಸುವುದು ಬದುಕು.
ಓದಿ ಕಲಿಯುವ ಕಲೆಯೇ..ಬದುಕು?(2)