ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ವಿಷಾದ

ಯಮುನಾ ಜಿ
ಇತ್ತೀಚಿನ ಬರಹಗಳು: ಯಮುನಾ ಜಿ (ಎಲ್ಲವನ್ನು ಓದಿ)

ನಿನ್ನ ಬಸಿರಲಿ ಉಸಿರಾಗಿ ನಾ
ಮಣ ಭಾರ ನಿನ್ನ ಋಣ
ಹೊರಟೆಯಾ ಒಂಟಿಯಾಗಿ
ಮನದಲ್ಲಿ ಕಾರ್ಮುಗಿಲು
ಕಣ್ಣೀರ ಬೆಚ್ಚಗಿನ ಮಡಿಲು
ಕಾಡುವುದು ಕವನವಾಗಿ

ಚಿತ್ತದೊಳು ಕನಸ ಚಿತ್ತಾರ
ಅವ್ಯಕ್ತ ಮೌನದಲಿ ಮನ ಭಾರ
ತುಮುಲಗಳು ನಿರ್ಲಿಪ್ತವಾಗಿ
ಕೈ ತುತ್ತು ನೀಡಲು ಬಿಸಿಯಾದ ತಂಗಳು
ಫಲವಿಲ್ಲದೆ ಪರಹಿತಕೆ ದುಡಿದ ಕೈಗಳು
ನೋವುಂಡು ಬೆಂದು ಬದುಕು ಬರಡಾಗಿ
ಅಸ್ವಸ್ಥವಾಗಿರಲು ಅಪ್ಪಿದ್ದ ತೋಳುಗಳು
ನಿದ್ದೆಯಿಲ್ಲದೆ ಕಳೆದ ನೀರವ ರಾತ್ರಿಗಳು
ಮಮತೆ, ಮುಗ್ಧತೆಯ ಮೂರ್ತಿಯಾಗಿ
ಉಸಿರುಗಟ್ಟುವುದು ನೀನಿಲ್ಲದಿರುವಲ್ಲಿ

ಗಾಳಿಯಾಡುವುದಿಲ್ಲ, ಬೆಳಕು ಹರಿಯುವುದಿಲ್ಲ
ಒಮ್ಮೊಮ್ಮೆ ಉಕ್ಕುವುದು ದುಃಖ ಕಡಲಾಗಿ
ಹಾರಿಹೋಯಿತು ಹಕ್ಕಿ ಮತ್ತೆ ಬರಲಾರದೂರಿಗೆ
ಅದುಮಿಟ್ಟ ಪ್ರೀತಿ ಗೂಡನು ತೊರೆದು
ಏನೊಂದೂ ಉಲಿಯದೆ ಸ್ತಬ್ಧವಾಗಿ
ಕೊನೆಗೂ ಋಣವ ತೀರಿಸಲಾರದೆ
ಬೇಡುವೆನು ಕವಿದಿರುವ ಕತ್ತಲೆಯ
ಬೆಳಗಿ ಬರುವೆಯಾ ದೇವರಾಗಿ!