ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಸದಾ ಕಾಲ ಅಮರ ಅಜರಾಮರ-ಡಾ.ರಾಜ್

ಪ್ರೊ.ಸಿದ್ದು ಯಾಪಲಪರವಿ

ಬಾಲ್ಯದ ರಂಗನ್ನು ಅರ್ಥಪೂರ್ಣಗೊಳಿಸಿ ಸಾವಿರಾರು ಕನಸುಗಳಿಗೆ ನಾಂದಿ ಹಾಡಿದ್ದು ನಾ ನೋಡಿದ ಸಿನೆಮಾಗಳು.
ಸಿನೆಮಾ ನನ್ನ ಪಾಲಿನ ಬಹುದೊಡ್ಡ ಮನೋರಂಜನೆ.
ಇಷ್ಟವಾದ ಸಿನೆಮಾಗಳನ್ನು ಹತ್ತಾರು ಬಾರಿ ವೀಕ್ಷಿಸಿ ಸಂಭಾಷಣೆಯನ್ನು ಕಂಠ ಪಾಠ ಮಾಡುವ ಹುಮ್ಮಸ್ಸು ಬೇರೆ!
ನೆಲದ ಮೇಲೆ ಕುಳಿತು ಸಿನೆಮಾ ನೋಡುವ ಕಾಲವದು.
ಬೆಂಚು ಮತ್ತು ಕುರ್ಚಿಗಳ‌ ಮೇಲೆ ಕುಳಿತು ನೋಡುವವರು ಮಾತ್ರ ಉಳ್ಳವರು, ಕ್ಲಾಸ್ ಆಡಿಯನ್ಸ್.
ನಮಗೆ ಆ ಭಾಗ್ಯ ಸಿಕ್ಕಿದ್ದು ತುಂಬಾ ದೊಡ್ಡವರಾದ ಮೇಲೆ.

ಎರಡೆರಡು ಬಾರಿ ಇಂಟರ್ವಲ್ ಬಿಟ್ಟು ಸಿನೆಮಾ ತೋರಿಸುತ್ತಿದ್ದ ಆಪರೇಟರ್ ಬಗ್ಗೆ ಕೂಡ ಅದೇನೋ ಕುತೂಹಲ, ಅವನೊಬ್ಬ ಮಹಾ ದೇವರು ಎಂಬ ಪೂಜ್ಯ ಭಾವನೆ.
ಬದಲಾದ ಸಿನೆಮಾ ತಂತ್ರಜ್ಞಾನ ಮತ್ತು ಸೌಲಭ್ಯಗಳನ್ನು ನೋಡಿದಾಗ ಹಳೆಯ ನೆನಪು ಮರುಕಳಿಸುತ್ತದೆ.

ಈಗ ಕಾಲ ಬದಲಾಗಿದೆ ಅದಕ್ಕೆ ತಕ್ಕಂತೆ ಪ್ರೇಕ್ಷಕರು ಬದಲಾಗಿದ್ದಾರೆ.
ಅನೇಕ ಮಿತಿಗಳ ಮಧ್ಯೆ ಅಂದಿನ ಕಲಾವಿದರು ಮತ್ತು ತಂತ್ರಜ್ಞರು ಅದ್ಭುತವಾದ ಸಿನೆಮಾಗಳನ್ನು ತಯಾರಿಸಿ ಪ್ರೇಕ್ಷಕರ ಮನ ತಣಿಸಿದರು.
ಆ ಕಾಲದ ಎಲ್ಲ ಸವಾಲುಗಳನ್ನು ಎದುರಿಸಿ ಕೊನೆ ಉಸಿರು ಇರುವವರೆಗೆ ಸಿನೆಮಾ ಲೋಕದ ಮಿನುಗು ತಾರೆಯಾಗಿ ಮಿಂಚಿದ ಮೇರು ನಟ ಡಾ.ರಾಜಕುಮಾರ್ ಸದಾ ಸ್ಮರಣೀಯರು.

ನಮ್ಮ ಬಾಲ್ಯದ ಬಹು ಮುಖ್ಯವಾದ ಐಕಾನ್, ರೋಲ್ ಮಾಡೆಲ್ ಎನಿಸಿಕೊಳ್ಳಲು ಕಾರಣ ಅವರು ಆಯ್ದುಕೊಳ್ಳುತ್ತಿದ್ದ ಕತೆಗಳು ಮತ್ತು ಭಾವಪೂರ್ಣ ತನ್ಮಯತೆಯ ಅಭಿನಯ.
ಅವರ ನಟನೆಯನ್ನು ಕೊಂಚ ನಾಟಕೀಯ ಎಂದು ಹೇಳುತ್ತಿದ್ದರಾದರೂ ಅದು ಪಾತ್ರಗಳಿಗೆ ಜೀವ ತುಂಬುವ ಅನನ್ಯತೆ.

ಕಪ್ಪು ಬಿಳುಪು, ಕಲರ್, ಸಿನೆಮಾಸ್ಕೋಪ್ ಮತ್ತು ಡಿಜಿಟಲ್ ತಂತ್ರಜ್ಞಾನ ಬಳಕೆಯವರೆಗೂ ರಾಜ್ ಅಭಿನಯದ ಅನುಭವ ಸಾಗಿಯೇ ಇತ್ತು.
ಅವರು ನಟಿಸಿದ ಯಶಸ್ವಿ ಸಿನೆಮಾ ಮತ್ತು ಪಾತ್ರಗಳ ಕುರಿತು ಬರೆಯುವ ಉದ್ದೇಶ ನನ್ನದಲ್ಲ.

ಒಬ್ಬ ಸೆಲೆಬ್ರಿಟಿಯನ್ನು ನಾವು ಎರಡು ನೆಲೆಯಲ್ಲಿ ಗುರುತಿಸುತ್ತೇವೆ.
ಅವನ ವೃತ್ತಿ ಬದುಕಿನ ಯಶಸ್ಸು ಮತ್ತು ಖಾಸಗಿ ಬದುಕಿನ ನಡೆ.
ಆದರೆ ನಮಗೆ ಅವರ ವೃತ್ತಿ ಬದುಕಿನ ಯಶಸ್ಸು ಮಾತ್ರ ಗಣನೀಯವೆನಿಸಿದರೂ ಕಾಲ ಸರಿದಂತೆ ವೈಯಕ್ತಿಕ ಬದುಕು ಕೂಡ ಪ್ರಮುಖವಾಗುತ್ತದೆ.

ಇಡೀ ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ರಾಜ್ ವಿವಾದಗಳಿಲ್ಲದೆ ಬಾಳಿದರು.
ಒಂದೆರಡು ಸಣ್ಣ ಪುಟ್ಟ ವಿವಾದಗಳಿದ್ದರೂ ಅವು ಮುನ್ನೆಲೆಗೆ ಬರದಂತೆ ಕಾಪಾಡಿಕೊಂಡರು.
ಚಿತ್ರರಂಗದ ಆಳ ಅಗಲಗಳ‌ ಬಲ್ಲ ಕೆಲವು ಅಂತರಂಗದ ವ್ಯಕ್ತಿಗಳು ಕೂಡ ಈ ಕುರಿತು ಬಾಯಿ ಬಿಡದ ರೀತಿಯಲ್ಲಿ ರಾಜ್ ತಮ್ಮ ಹಿರಿಮೆ ಹೆಚ್ಚಿಸಿಕೊಳ್ಳಲು ಅವರ ವೈಯಕ್ತಿಕ ಬದುಕಿನ ಸರಳತೆಯೇ ಕಾರಣ.

ರಾಜ್ ಅವರಿಗೆ ತಮ್ಮ ದೇಹಸಿರಿ ಕಾಪಾಡಿಕೊಂಡು, ತನ್ಮಯತೆಯಿಂದ ಅಭಿನಯಿಸಿ, ಹೊಟ್ಟೆ ತುಂಬ ಊಟ ಮಾಡಿ ಕಣ್ತುಂಬ ನಿದ್ದೆ ಮಾಡುವ ಧ್ಯಾನಸ್ಥ ಸ್ಥಿತಿಯನ್ನು ತಲುಪಿದ್ದರು.
ವ್ಯವಹಾರ, ಜಾತಿ ವ್ಯವಸ್ಥೆ, ರಾಜಕಾರಣದ ಗೊಂದಲಗಳನ್ನು ಮೀರಿದ ಸೌಜನ್ಯ ಮತ್ತು ಜಾಣತನ.
ಸಿನೆಮಾ ಸಂಭಾಷಣೆ ಹೇಳಿ ಮತ್ತು ಹಾಡುಗಳನ್ನು ಹಾಡುವುದನ್ನು ಬಿಟ್ಟು ಇತರ ವಿಷಯಗಳ ಬಗ್ಗೆ ಮುಕ್ತವಾಗಿ ಮಾತನಾಡುವ ರಿಸ್ಕ್ ತೆಗೆದುಕೊಳ್ಳುತ್ತಿರಲಿಲ್ಲ. ಜಾಣತನದ ಮಾತು,ಚರ್ಚೆ ಮತ್ತು ಹೇಳಿಕೆಗಳಿಂದ ಸದಾ ಅಂತರ ಕಾಪಾಡಿಕೊಳ್ಳುತ್ತಿದ್ದರು.

ಎಂಬತ್ತರ ದಶಕದಲ್ಲಿ ಭಾರತೀಯ ಚಿತ್ರರಂಗದ ಅನೇಕ ನಟರು ರಾಜಕೀಯ ಪ್ರವೇಶ ಮಾಡಿ ಅಧಿಕಾರ ಅನುಭವಿಸಿದಾಗ ಅನೇಕ ರಾಜಕೀಯ ಪಕ್ಷಗಳು ಡಾ.ರಾಜ್ ಅವರನ್ನು ಕೆಣಕಿದರೂ ಅವರು ಉನ್ಮಾದಗೊಳ್ಳಲಿಲ್ಲ.
ಕೇವಲ ಅಭಿನಯ ಮಾತ್ರ ತಮ್ಮ ಶಕ್ತಿ ಎಂಬುದನ್ನು ಸ್ಪಷ್ಟ ಪಡಿಸಿದರು.

ನಟಿಯರೊಂದಿಗೆ ಗಾಸಿಪ್ ಇದ್ದರೂ ನಟರ ಇಮೇಜ್ ಹಾಳಾಗುತ್ತದೆ ಎಂಬ ಸೂಕ್ಷ್ಮ ಅರ್ಥ ಮಾಡಿಕೊಂಡರು.
ಸಿನೆಮಾ ನಟನೆಯ ಕಾರಣಕ್ಕಾಗಿ ಕೂಡ ನೆಗೆಟಿವ್ ಪಾತ್ರಗಳಲ್ಲಿ ಅಭಿನಯಿಸುವಾಗ ಕೈಯಲ್ಲಿ ಸಿಗರೇಟ್ ಮತ್ತು ಮದ್ಯದ ಬಾಟಲಿ ಹಿಡಿಯದಂತೆ ಎಚ್ಚರ ವಹಿಸಿದ್ದರು.
ತಲೆ ಮಾಂಸ, ನಾಟಿ ಕೋಳಿ ಆಹಾರದ ಸವಿ ರುಚಿ ಹಂಚಿಕೊಳ್ಳುವ ಮಟ್ಟಿಗೆ ಮಿತಿಗೊಳಿಸಿದರು.
ತಮನ್ನು ಆರಾಧಿಸುವ ಅಭಿಮಾನಿ ದೇವರುಗಳು ನೊಂದು ಕೊಂಡಾರು ಎಂಬ ಸೂಕ್ಷ್ಮ ಸಂವೇದನೆಯ ಎಚ್ಚರ ಪ್ರಜ್ಞೆ ಅವರದು.

ಸಿನೆಮಾ ರಂಗದಲ್ಲಿ ಕಲೆಯಾಚೆಗೆ ಆರಂಭಗೊಂಡ ಜಾತಿ ವಿಷ ಬೀಜ ಬಿತ್ತುವ ಪ್ರಯತ್ನಕ್ಕೆ ಅವರು ಬಲಿಯಾಗಲಿಲ್ಲ ಆದರೆ ಅವರನ್ನು ಬಲಿ ತೆಗೆದುಕೊಳ್ಳುವ ಪ್ರಯತ್ನ ನಡೆಯಿತು.

ಅಮರಶಿಲ್ಪಿ ಜಕಣಾಚಾರಿ ಪಾತ್ರ ಕೈ ತಪ್ಪಿದ್ದು, ರಾಘವೇಂದ್ರ ಸ್ವಾಮಿಗಳ ಪಾತ್ರ ಅಭಿನಯ ನಿರಾಕರಣೆ ಮಾಡಿದ್ದ ಉದಾಹರಣೆಗಳನ್ನು ನೋಡಬಹುದು.
ರಾಯರ ಮುಂದೆ ಚೀಟಿ ಎತ್ತಿದಾಗ ಆ ಪಾತ್ರ ಲಭಿಸಿದ್ದು ಅವರ ಭಕ್ತಿ ಪರಾಕಾಷ್ಠೆಯ ಸಂಕೇತ.

ವೈವಿಧ್ಯಮಯ ಪಾತ್ರಗಳನ್ನು ಅಭಿನಯಿಸುವ ತುಡಿತವನ್ನು ಕೆಲವರು ಉದ್ದೇಶಪೂರ್ವಕವಾಗಿ ತುಳಿದರು ಎಂಬುದನ್ನು ಇತಿಹಾಸ ಮರೆಯುವುದಿಲ್ಲ.‌
ಪುಟ್ಟಣ್ಣ ಕಣಗಾಲ್ ಅವರಂತಹ ಪ್ರತಿಭಾವಂತ ನಿರ್ದೇಶಕರು ಡಾ.ರಾಜಕುಮಾರ್ ಅವರ ಬಗ್ಗೆ ಹೊಂದಿದ್ದ ಅಸೂಯೆಗೆ ಕಾರಣ ಹುಡುಕಲಾರದಷ್ಟು ಎತ್ತರಕ್ಕೆ ಅವರು ಬೃಹದಾಕಾರವಾಗಿ ಬೆಳೆದು ತೋರಿಸಿದರು.

ಅವಕಾಶ ಕಳೆಯುವ ಹುನ್ನಾರ ಆರಂಭವಾದ ಹೊತ್ತಲ್ಲಿ ಶ್ರೀಮತಿ ಪಾರ್ವರತಮ್ಮನವರು ನಿರ್ಮಾಪಕರಾಗಿ ಅವರ ಪ್ರತಿಭೆ ಸಾಬೀತಾಗುವ ಅದ್ಭುತ ಸಿನೆಮಾಗಳನ್ನು ತಯಾರಿಸಿ ಹೊಸ ಮಾರುಕಟ್ಟೆ ಸೃಷ್ಟಿ ಮಾಡಿದರು.
ಅಲ್ಲಿಯತನಕ ನಟರಾಗಿ ರಾಜ್ ಅನುಭವಿಸಿದ ಯಾತನೆಗೆ ಇತಿಶ್ರೀ ಹಾಡಿದರು. ‌
ಒಂದು ವೇಳೆ ಪಾರ್ವತಮ್ಮ ಅವರು ನಿರ್ಮಾಣ ಆರಂಭ ಮಾಡದಿದ್ದರೆ ಅವರನ್ನು ಹತ್ತಿಕ್ಕುವ ಪ್ರಯತ್ನ ಮುಂದುವರೆಯುತ್ತಿತ್ತು.
ಆದರೆ ರಾಜ್ ಅವರ ಸರಳತೆ, ದೈವ ಭಕ್ತಿ, ಮುಗ್ಧತೆ, ನಟನಾ ಸಮರ್ಪಣೆ‌ ಮತ್ತು ಅಭಿಮಾನಿಗಳ ಮೇಲಿನ ಒಲವಿನಂತಹ ಸಕಾರಾತ್ಮಕ ನಿಲುವುಗಳು ಅವರನ್ನು ದುಷ್ಟ ಶಕ್ತಿಯಿಂದ ಕಾಪಾಡಿದವು.

ಜಾತಿ ವ್ಯವಸ್ಥೆ ಕುರಿತು ಕೇಳಿದ ಪ್ರಶ್ನೆಗಳಿಗೆ ಉತ್ತರಿಸುವ ಗೊಡವೆಗೆ ಹೋಗುತ್ತಿರಲಿಲ್ಲ.
ವೀರಪ್ಪನ್ ಅಪಹರಣ ಅವರನ್ನು ವಿಪರೀತ ಘಾಸಿ ಗೊಳಿಸಿತು.
ಅಂತಹ ದುರಳನ ಮನವೊಲಿಸಲು ಯಶಸ್ವಿಯಾದದ್ದು ಸಣ್ಣ ಸಂಗತಿಯಲ್ಲ.
ನೂರಾರು ದಿನ ದೈಹಿಕ ಮತ್ತು ಮಾನಸಿಕ ಹಿಂಸೆ
ಅನುಭವಿಸಿದಾಗಲೂ ಯೋಗ ಸಾಧನೆಯಿಂದ ತಮ್ಮ ಮನೋಸ್ಥೈರ್ಯ ಉಳಿಸಿಕೊಂಡರು.

ಕೋಟ್ಯಾಂತರ ಅಭಿಮಾನಿಗಳು, ನೂರಾರು ಕೋಟಿ ಹಣ ಎದುರಿಗಿದ್ದರೂ ಅಂತರಂಗದ ಸರಳತೆ ಮಾಯವಾಗಿರಲಿಲ್ಲ.
ಉಡುಗೆ, ತೊಡುಗೆಗಳು ಮತ್ತು ಆಹಾರ ಕ್ರಮದಲ್ಲಿ ವ್ಯತ್ಯಾಸ ಕಾಣಲಿಲ್ಲ.
ಹಳೆ ಕಾಲದ ತಮ್ಮ ಬಡತನ, ಹೋರಾಟಗಳನ್ನು ಪದೇ ಪದೇ ಮೆಲುಕು ಹಾಕಿ ತಮ್ಮ ಸರಳತೆಯನ್ನು ಜಾಗೃತಗೊಳಿಸುತ್ತಿದ್ದರು.
ಸಹ ಕಲಾವಿದರೊಂದಿಗೆ ಊಟ ಮಾಡುವಾಗ ಇತರರು ಹೊಟ್ಟೆ ತುಂಬ ಊಟ ಮಾಡಲಿ ಎಂಬುದು ಕೇವಲ ಮೇಲ್ನೋಟದ ಔದಾರ್ಯವಾಗಿರದೆ ಅನ್ನದ ಮಹಿಮೆಯನ್ನು ಸಾರುತ್ತಿತ್ತು.

ಸಿರಿತನದ ಅಮಲೇರಿಸಿಕೊಳ್ಳದೆ ಹೃದಯ ಸಿರಿವಂತರಾಗಿ, ತೆರೆಯ ಹಿಂದಿನ ನಾಯಕರಾಗಿಯೂ ಮೆರೆದರು.
ಪಾತ್ರಗಳಿಗೂ ಮೀರಿದ ವೈಯಕ್ತಿಕ ಬದುಕಿನ ಆದರ್ಶದಿಂದಾಗಿ ಕೊನೆಯವರೆಗೂ ಅದೇ ಆದರ್ಶ ಮೈ ಗೂಡಿಸಿಕೊಂಡರು.

ತಂತ್ರಜ್ಞಾನದ ಸೌಲಭ್ಯ ಹೆಚ್ಚಾದರೂ ಉತ್ತಮ ಸಿನೆಮಾಗಳ ಕೊರತೆಯನ್ನು ಸೂಕ್ಷ್ಮವಾಗಿ ಗುರುತಿಸಿ ನೊಂದುಕೊಂಡರು.

ಈಗ ಹೀರೋಗಿರಿ, ಹಣ ಮತ್ತು ದರ್ಪದಿಂದ ಸಾರ್ವಜನಿಕವಾಗಿ ಅಸಭ್ಯವಾಗಿ ನಡೆದುಕೊಳ್ಳುವ ನಟರ ವರ್ತನೆಯನ್ನು ಕಂಡಾಗ ಮತ್ತೆ ಮತ್ತೆ ಡಾ.ರಾಜ್ ಬೇಡವೆಂದರೂ ನೆನಪಾಗಿ ಕಾಡುತ್ತಾರೆ.

ಎರಡು ನೂರು ಸಿನೆಮಾಗಳು, ಸಾವಿರಾರು ಹಾಡುಗಳು ಮತ್ತು ವೈಯಕ್ತಿಕ ಬದುಕಿನ ವಿಶೇಷ ವ್ಯಕ್ತಿತ್ವದ ಶಕ್ತಿ, ಸಾಮರ್ಥ್ಯದಿಂದಾಗಿ ರಾಜ್ ಅಜರಾಮರ.

ಪ್ರೊ.ಸಿದ್ದು ಯಾಪಲಪರವಿ ಕಾರಟಗಿ. ‌