ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಚೇರ್ಮನ್ ಅವರ ಕುರಿತ ಪುಸ್ತಕ ಮತ್ತು ನಾನು

ಪ್ರೊ.ಸಿದ್ದು ಯಾಪಲಪರವಿ

ಓದು-ಬರಹ-ಮಾತು ನನ್ನ ವೃತ್ತಿಯೂ ಹೌದು, ಪ್ರವೃತ್ತಿಯೂ ಹೌದು! ಕಳೆದ ದಶಕದಿಂದ ಈ ಕಾಯಕದಲ್ಲಿ ಹೊಸ ಸಡಗರ ಅನುಭವಿಸುತ್ತಾ ಸಾಗಿದ್ದೇನೆ. ನುಡಿದರೆ ಮುತ್ತಿನ ಹಾರದಂತೆ ಎಂಬ ಅಣ್ಣನ ಸಾಲುಗಳ ಹಾದಿಯಲ್ಲಿ ವಿಶ್ವಾಸವಿದೆ. ಕೇಳುಗರು ಮತ್ತು ಓದುಗರ ಸಮಯ ಅಮೂಲ್ಯ ಎಂಬುದನ್ನು ಮಾತಾಡುವವರು ಮತ್ತು ಬರೆಯುವವರು ಅರ್ಥ ಮಾಡಿಕೊಂಡರೆ ಒಳಿತು ಎಂದು ಬಲವಾಗಿ ನಂಬಿದ್ದೇನೆ. ಸರಳವಾಗಿ, ನೇರವಾಗಿ ವಿಷಯಕ್ಕೆ ಬಂದರೆ ಎಲ್ಲರೂ ಸೇಫ್. ಇದು ಅರಿವಿನ ಮಾತೆಂಬುದ ಅರಿತು ಸಾಗಿದ ಹೊತ್ತಿನಲ್ಲಿ ಮಾತು ಮತ್ತು ಬರಹದ ಮೇಲೆ ಸ್ವಯಂ ನಿಯಂತ್ರಣ ಹೇರಿಕೊಂಡಿದ್ದೇನೆ.

ಇಷ್ಟು ಹೇಳಲು ಮುಖ್ಯ ಕಾರಣ ಈ ವರ್ಷದ ಹೊಸ ಪುಸ್ತಕ ‘ದಣಿವರಿಯದ ದಾರಿ’ ಲೋಕಾರ್ಪಣೆ ಆಗುತ್ತಲಿದೆ.

ಕಳೆದ ವರ್ಷ ಇದೇ ಸಮಯದಲ್ಲಿ ಬರೆದ ಹಗಲಿನಲ್ಲಿಯೆ ಸಂಜೆಯಾಯಿತು ಕೊಟ್ಟ ಖುಷಿ ಮತ್ತು ವಿವಾದ ಹಚ್ಚ ಹಸಿರಾಗಿದೆ. ಮೂರು ಮುದ್ರಣ ಕಂಡು ಇತರ ಭಾಷೆಗೆ ಅನುವಾದವಾಗುವ ಸಂಭ್ರಮ ಬೇರೆ.

ಅದೇ ಖುಷಿಯಲ್ಲಿ ನಾನು ಬಹುವಾಗಿ ಗೌರವಿಸುವ ನಮ್ಮ ಸಂಸ್ಥೆಯ ಚೇರ್ಮನ್ ಸರ್ ಡಾ.ಬಿ.ಎಫ್. ದಂಡಿನ ಅವರ ಜೀವನ ಚರಿತ್ರೆ ಬರೆಯುವ ತುಡಿತ ಇಮ್ಮಡಿಯಾಯಿತು. ಒಂದು ವರ್ಷದ ಹಿಂದೆ ಬರೆಯಲಾರಂಭಿಸಿದಾಗ ಏನೇನೋ ಅಡೆತಡೆಗಳನ್ನು ಎದುರಿಸಿದೆ. ಒಂದರ್ಥದಲ್ಲಿ ‘ರೈಟರ್ಸ್ ಬ್ಲಾಕ್’ ಕಾಡಲಾರಂಭಿಸಿ ಕೈ ಓಡಲೇ ಇಲ್ಲ. ಆಗ ನೆರವಿಗೆ ಬಂದವರು ಶಿರಹಟ್ಟಿ ಕಾಲೇಜಿನ ಉಪನ್ಯಾಸಕಿ ಹಾಗೂ ಪ್ರಿಯ ವಿದ್ಯಾರ್ಥಿ ಸುಧಾ ಹುಚ್ಚಣ್ಣವರ ಅವರು. ಅಧ್ಯಾಯಗಳ ಆಯ್ಕೆ, ಅಗತ್ಯವಿರುವ ನುಡಿ ಮುತ್ತುಗಳ ಪೋಣಿಸಿ ಬರಹವನ್ನು ಓಡಿಸಿಕೊಂಡು ಹೋಗಿ, ಕಾಪಿ ರೈಟರ್ ತರಹ ನೆರವಾದ ಕಾರಣದಿಂದ ಕೃತಿ ಪೂರ್ಣಗೊಳ್ಳಲು ಸಾಧ್ಯವಾಯಿತು.

ಪ್ರತಿ ಅಧ್ಯಾಯಗಳನ್ನು ತುಂಬಾ ಸೂಕ್ಷ್ಮವಾಗಿ ಓದಿ,ಅನೇಕ ಸಲಹೆಗಳನ್ನು ನೀಡಿದವರು ಡಾ. ದಂಡಿನ ಅವರು. ಈ ವಯಸ್ಸಿನಲ್ಲಿ ಅವರ ಸೂಕ್ಷ್ಮ ಗ್ರಹಿಕೆಗೆ ಬೆರಗಾಗಿ ಹೋದೆ. ಪ್ರತಿಯೊಂದು ಘಟನೆಯನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿ, ಬರೆಯುವ ಭಾವ ಕೋಶವನ್ನು ಹದಗೊಳಿಸುತ್ತಿದ್ದರು. ಇನ್ನೋರ್ವ ಮಿತ್ರರಾದ ಶಿವನಗೌಡ ಗೌಡರ ಅವರು ಕಣ್ಣಲ್ಲಿ ಕಣ್ಣಿಟ್ಟು ಓದಿ ತಪ್ಪುಗಳ ಮಾಯ ಮಾಡಿದರು.
ಬಹುದಿನಗಳ ಕನಸು ನನಸಾಗಲು ಮುಖ್ಯ ಕಾರಣ ನಮ್ಮ ಕೃತಿಯ ಕತಾ ನಾಯಕರು ಎಂಬುದು ಇಲ್ಲಿನ ವಿಶೇಷ.

ಪುಸ್ತಕ ಪೂರ್ಣಗೊಳ್ಳುವ ಹೊತ್ತಿನಲ್ಲಿ, ಆಳವಾಗಿ ಓದಿ, ಮುನ್ನುಡಿ ಬರೆದು ಕೊಟ್ಟ ಹಿರಿಯ ಜೀವಿ ಸು.ರಾಮಣ್ಣ ಅವರ ಔದಾರ್ಯ ಅನುಕರಣೀಯ. ಬೆಂಗಳೂರು ಬದುಕನ್ನು ಹಸನಗೊಳಿಸಿ, ಓದು,ಬರಹ ಮತ್ತು ಮಾತಿಗೆ ಚೈತನ್ಯ ತುಂಬುವ ಹಿರಿಯರಾದ ಡಾ.ರಂಗನಾಥ ಸರ್ ಇಂಗ್ಲಿಷಿನಲ್ಲಿ ಅರ್ಥಪೂರ್ಣ ಮಾತುಗಳನ್ನು ಬರೆದು ಕಳಿಸಿದ್ದು ನನ್ನ ಸುದೈವ.
ಒಳ್ಳೆಯ ಉದ್ದೇಶದಿಂದ ಆರಂಭಗೊಂಡ ಕಾರ್ಯಗಳಿಗೆ ಹತ್ತಾರು ಕೈಗಳು ನಮ್ಮನ್ನು ಮುನ್ನಡೆಸುತ್ತವೆ ಆ ಮಾತು ಬೇರೆ!

ತ್ವರಿತ ಮುದ್ರಣದ ಅಶೋಕ ಖಟವಟೆ ಮತ್ತು ತಂಡದವರು ಅಷ್ಟೇ ಮುತುವರ್ಜಿಯಿಂದ ಅಚ್ಚು ಹಾಕಿದ್ದಾರೆ. ಸಾಂಗತ್ಯ ಪ್ರಕಾಶನಕ್ಕೆ ಈಗ ಆನೆ ಬಲ ಬಂದಿದೆ. ಗುಣಮಟ್ಟದ ಪುಸ್ತಕಗಳನ್ನು ಪ್ರಕಟಿಸಬಹುದು ಎಂಬ ವಿಶ್ವಾಸವೂ ಹೆಚ್ಚಾಗಿದೆ. ಬಾಹ್ಯ ಸೌಂದರ್ಯ ಕೂಡ ಕೃತಿ ಪ್ರವೇಶಕ್ಕೆ ಪ್ರೇರಣೆ ಕೊಡುತ್ತದೆ. ಕೆಲವು ವಿಷಯಗಳಲ್ಲಿ ರಾಜಿಯಾಗದ ಮನದ ಸಾತ್ವಿಕ ಹಟಗಳಲ್ಲಿ ಪುಸ್ತಕ ಪ್ರೇಮವೂ ಒಂದು.

ಪ್ರತಿ ವರ್ಷ ಡಾ.ದಂಡಿನ ಅವರ ಹುಟ್ಟು ಹಬ್ಬದಂದು ಭೌತಿಕ ವಸ್ತುಗಳನ್ನು ಉಡುಗೊರೆಯಾಗಿ ಕೊಟ್ಟು ಖುಷಿ ಪಡುತ್ತಿದ್ದೆ. ಆದರೆ ಈ ಬಾರಿ ಅವರ ಬದುಕಿನ ಘಟನೆಗಳನ್ನು ಅಕ್ಷರಿಸಿ ಬೌದ್ಧಿಕ ಕಾಣಿಕೆಯನ್ನು ನೀಡುತ್ತಿದ್ದೇನೆ ಎಂಬ ಸಂತೋಷವಿದೆ. ಎಂದಿನಂತೆ ಪುಸ್ತಕ ಮೆಚ್ಚಿಕೊಂಡು ಲೋಕಾರ್ಪಣೆಗೆ ನೆರವಾದ ಕಾರ್ಯದರ್ಶಿಗಳಾದ ರವಿ ದಂಡಿನ, ಸಹಕಾರ್ಯದರ್ಶಿಗಳಾದ ಡಾ.ಪುನೀತಕುಮಾರ,
ಕ್ರಿಯಾಶೀಲ ಗೆಳೆಯ, ಸಂಘಟಿಕ ಪ್ರೊ.ಸಂದೀಪ ಬೂದಿಹಾಳ ಅವರ ಸಹಕಾರ ಮರೆಯಲಾಗದು.
ಇರಲಿ ಖಂಡಿತವಾಗಿ ಎಲ್ಲರೂ ಓದಬಹುದಾದ ಪುಸ್ತಕ ಬಂದಿದೆ ಎಂಬ ಸಮಾಧಾನವಿದೆ.
ನೀವೂ ದಯವಿಟ್ಟು ಓದಿ, ಹಿಮ್ಮಾಹಿತಿ ನೀಡುವಿರೆಂಬ ವಿಶ್ವಾಸವಿದೆ.

ಸಿದ್ದು ಯಾಪಲಪರವಿ ಕಾರಟಗಿ.
9448358040