ಇತ್ತೀಚಿನ ಬರಹಗಳು: ಮಂಜುನಾಥ್ ಲತಾ (ಎಲ್ಲವನ್ನು ಓದಿ)
- ಸದ್ಯದ ಪದ್ಯ - ಏಪ್ರಿಲ್ 30, 2020
ಮುಚ್ಚಿದ ದೇಗುಲದೊಳಗೆ
ದೇವರು ಬೇಸರಗೊಂಡಿದ್ದಾನೆ.
ಗಂಟೆ ಸದ್ದು, ಮಂತ್ರಘೋಷ
ನಿಂತಿದೆ ಎಂದಲ್ಲ;
ದೇಗುಲದಾಚೆಯ ಭಿಕ್ಷುಕರ
ದೈನೇಸಿ ದನಿಗಳು ಕೇಳುತ್ತಿಲ್ಲವೆಂದು!
ಬಯಲು, ಬಿಸಿಲು, ಗಾಳಿ, ಮರ
ಎಂದಿಗಿಂತ ಸನಿಹ ಕುಳಿತು
ಕಷ್ಟ ಸುಖ ಹಂಚಿಕೊಳ್ಳುತ್ತಿವೆ;
ಮನುಷ್ಯರ ಸುಳಿವಿನ ಭಯವಿಲ್ಲದೆ!
ಮನೆಯೊಳಗೆ ಇಷ್ಟೂ ಮಂದಿ
ಮೌನವಾಗಿ ಕೂತಿದ್ದೇವೆ;
ಪರದೆಯ ಚಿತ್ರಗಳು ಮಾತ್ರ
ಮಾತಾಡುತ್ತಿವೆ!
ಕೂತು ಉಣ್ಣುವಷ್ಟು
ಕುಡಿಕೆಗಳಿದ್ದವು ಹಟ್ಟಿಯಲ್ಲಿ.
ನೆನ್ನೆ ಎಲ್ಲವನ್ನೂ ಮಾರಿದೆವು
ಉಣ್ಣಲು ಕಾಸಿಲ್ಲದೆ ಉಡಿಯಲ್ಲಿ!
ಮಲಗಿರುವ ರಸ್ತೆಗಳು
ಇಂದಿನ ನಿರಾಳತೆಯ
ಸುಖಿಸುತ್ತಿಲ್ಲ;
ನಾಳೆಯಿಂದ ಹಾಯುವ
ಭಾರಗಳ ನೆನೆದು
ಭಯಗೊಂಡಿವೆ.
ನಿದ್ದೆಯಿಂದ ಎದ್ದ ಮಗು
ಹೊಸ್ತಿಲಲ್ಲಿ ನಿಂತು ನೋಡುತ್ತಿದೆ
ಇನ್ನೂ ಆಟಕ್ಕೆ ಕರೆಯದ ಬೀದಿಯನ್ನು.
ಹೆಚ್ಚಿನ ಬರಹಗಳಿಗಾಗಿ
ಮಹಾಸಾಗರವಾದಳು
ಪುಸ್ತಕ ಪ್ರೇಮಿಯ ಸ್ವಗತ
ಪೊರೆವ ತಂದೆ