- ಚಿಕ್ಕಣಿರಾಜ ಕೃತಿಯ ಜೀವಾಳ ಪುಟ್ಟ - ಸೆಪ್ಟೆಂಬರ್ 12, 2024
- ಹಾಲಾಡಿಯಲ್ಲಿ ಹಾರುವ ಓತಿ - ಜುಲೈ 20, 2024
- ನಾಡೋಜ ಕಮಲಾಮೇಡಂಗೆ ಅಂತಿಮ ನಮನಗಳು - ಜೂನ್ 22, 2024
ಜಗತ್ತಿನಲ್ಲಿ ಇರುವ ಸುಖವೆಲ್ಲ ನಮ್ಮದೇ ಆಗಬೇಕೆಂಬ ತುಡಿತ, ಎಲ್ಲರಿಗಿಂತಲೂ ನಾವೇ ಮುಂದೆ ಇರಬೇಕು ಎಂಬ ಉತ್ಕಟ ಭಾವ ಪ್ರತಿಯೊಬ್ಬರಲ್ಲಿಯೂ ಇದ್ದದ್ದೇ. “ಎಲ್ಲಿಯೂ ನಿಲ್ಲದಿರು, ಹೇಗೋ ಅವರಿವರ ತಳ್ಳಿ ಮನ್ನುಗ್ಗು ಎಲ್ಲಾದರೂ ಸರಿಯೇ, ಬೇರೂರು ಹೀರು” ಎಂಬ ಜಿ.ಎಸ್.ಎಸ್ ಅವರ ‘ಮುಂಬೈ ಜಾತಕ’ ಕವಿತೆಯ ಸಾಲಿನಂತೆ ಎಲ್ಲರಿಗೂ ಬದುಕಿನಲ್ಲಿ ಮನ್ನುಗ್ಗುವ ಹಿಗ್ಗು. ಪರಸ್ಪರ ಪ್ರೀತಿ, ವಿಶ್ವಾಸ ಇವುಗಳಿಗಿಂತ ವ್ಯಾವಹಾರಿಕತೆ ಮತ್ತು ವ್ಯಾಮೋಹಕತೆಯೇ((commercial and infatuation) ಲಾಸ್ಯವಾಡುತ್ತಿರುವುದು. ಪ್ರೀತಿಯಿಂದ ವ್ಯವಹರಿಸಬೇಕು, ಪರಸ್ಪರ ಭಾವನೆಗಳನ್ನು ಗೌರವಿಸಬೇಕು, ನೋವಿಗೆ ಸಾಂತ್ವನ ಹೇಳಬೇಕು, ಎಲ್ಲರೂ ನಮ್ಮವರೆ ಎಂಬ ಭಾವನಾತ್ಮಕತೆಯ ನಂಟು ಇಂದಿಲ್ಲ. ನಮಗೋಸ್ಕರ ಯಾರಾದರೂ ಇದ್ದಾರೆ ಎಂದರೆ ಸಾಧ್ಯವಾಗದಷ್ಟು ಕೆಲಸ ತೆಗೆದುಕೊಂಡು ವಿಸರ್ಜಿಸುವವರೇ ಹೆಚ್ಚು. ಈ ಪ್ರವೃತ್ತಿಗೆ ‘ಸೊಪ್ಪು ಅರೆಸುವುದು’ ಎಂಬ ನುಡಿಗಟ್ಟನ್ನು ಬಳಸಬಹುದೇನೋ. ಸೊಪ್ಪು ಅರೆಯುತ್ತಾರೆ ಎಂದರೆ ಶಕ್ತಿ ಮೀರಿಸಿ ಅರೆಸಿಕೊಳ್ಳುವ ಜಾಯಮಾನ. ನಾವೊಂದು ಬಗೆದರೆ ದೈವವೊಂದು ಬಗೆದಂತೆ ಎಂಬಂತೆ ಆಗುವುದೆಲ್ಲಾ ಉಲ್ಟಾ.
ಕೃತಜ್ಞರಾಗಿರುವುದರ ಬದಲು ಕೃತಘ್ನರಾಗಿ ವಿಕೃತಿ ಮೆರೆಯುವುದು. ವ್ಯಕ್ತಿ ವ್ಯಕ್ತಿಗಳ ನಡುವಣ ಮೌಲ್ಯಗಳು ಇಂದಿಗೆ ನೇಪಥ್ಯಕ್ಕೆ ಸರಿಯುತ್ತಿವೆ. ‘ಹಣ’ ಎಂದರೆ ‘ಹೆಣ’ ಎನ್ನುವಷ್ಟು ಮನುಷ್ಯನ ಮನಸ್ಸು ಋಣಾತ್ಮಕತೆಯ ಕಡೆಗೆ ತಿರುಗಿದೆ. ಸಮಯ ಕೊಂಡು ಕೊಳ್ಳುವ ಸರಕಲ್ಲ. ಯಾರಾದರೂ ಸಹೃದಯಿಗಳು ಇರುವ ಸಮಯವನ್ನು ಇತರರಿಗೆ ಕೊಡುತ್ತಾರೆ ಎಂದರೆ ಸಂತೋಷಿಸಬೇಕು. ಮಾಡಲು ಕೆಲಸವಿಲ್ಲ ಪುಕ್ಸಟ್ಟೆ ಪುರಾಣ ಕೊಚ್ಚುತ್ತಾರೆ ಎಂದರೆ ಅರ್ಥವಿದೆಯೇ? ಇಂತಹ ವೈರುಧ್ಯಗಳಿಂದಲೇ ಮನುಷ್ಯನ ವ್ಯಕ್ತಿತ್ವ ಉನ್ನತಿಯಿಂದ ಅವನತಿಯತ್ತ ಇಳಿಯುತ್ತ ಇರುವುದು. ಇದಕ್ಕೆಲ್ಲದಕ್ಕಿಂತ ಅತ್ಯಂತ ಸೇಫ್ ಜೋನ್ ಎಂದರೆ ಸಮಯಕ್ಕೆ ಬೆಲೆ ಕೊಡುವುದು. ವ್ಯಕ್ತಿಗಳಿಗೆ ನಾವು ಅತ್ಯಂತ ಮಾನ್ಯತೆ ಕೊಡುತ್ತಾ ಹೋದರೆ ಅವರು ಅದನ್ನು ಧನಾತ್ಮಕವಾಗಿ ಸ್ವೀಕರಿಸಿದರೆ ಸರಿ ಇಲ್ಲವಾದರೆ ನಮ್ಮ ವ್ಯಕ್ತಿತ್ವಕ್ಕೆ ಧಕ್ಕೆ ತಂದುಕೊಂಡಂತೆ. ಅದೇ ಸಮಯಕ್ಕೆ ಬೆಲೆ ಕೊಟ್ಟು ಅದರ ಸದುಪಯೋಗ ಮಾಡಿಕೊಂಡರೆ ಸಮಯ ನಮ್ಮ ವ್ಯಕ್ತಿತ್ವದ ಘನತೆಯನ್ನು ಹೆಚ್ಚಿಸುತ್ತದೆ.ಅಮೂಲ್ಯ ಹರಳು ಕಳೆದರೆ ಸಂಪಾದಿಸಿಕೊಳ್ಳಬಹುದು ಆದರೆ ಸಮಯವನ್ನು ತರಲಾದೀತೆ?
ಪ್ರತಿಯೊಬ್ಬರಿಗೂ ಒಂದು ವ್ಯಕ್ತಿ, ಒಂದು ಜೀವ ಎಂಬ ಐಡೆಂಟಿಫಿಕೇಷನ್ ಹೇಗಿದೆಯೋ ಅಂತಯೇ ಅವರ ಸಮಯಕ್ಕು ಮಹತ್ವ ಕೊಡಬೇಕು.ಶರೀರರೂಪಿ ಮನುಷ್ಯನಿಗೆ ಗೌರವಕೊಡದೆ ಇದ್ದರೂ ಅವನಲ್ಲಿ ಅಂತರ್ಗತವಾಗಿರುವ ಆತ್ಮಕ್ಕೆ ಅರ್ಥಾತ್ ಭಗವಂತನಿಗೆ ಗೌರವ ಕೊಡುವಂತೆ ಆ ವ್ಯಕ್ತಿಗೆ ಇರುವ ಸಮಯಕ್ಕೆ ಗೌರವ ಕೊಡಬೇಕು, ನಾನು ಉನ್ನತ ಆಧಿಕಾರದಲ್ಲಿದ್ದೇನೆ, ನಾನು ಹೆಚ್ಚು ಕೀರ್ತಿವಂತ, ನನ್ನಲ್ಲಿ ಹಣವಿದೆ, ನಾನು ಹೆಚ್ಚು ಕಲಿತಿದ್ದೇನೆ, ಜನ ನನ್ನನ್ನು ಗುರುತಿಸುತ್ತಾರೆ ಇತ್ಯಾದಿ, ಇತ್ಯಾದಿಗಳನ್ನು ನೆಪ ಮಾಡಿಕೊಂಡು ಇತರರ ಸಮಯವನ್ನು ದುರುಪಯೋಗ ಮಾಡಿಕೊಳ್ಳುವ ಹಕ್ಕು ಅಧಿಕಾರ ಯಾರಿಗೂ ಇಲ್ಲ. ಸಮಯದ ಸಾಹುಕಾರ ಯಾರೂ ಅಲ್ಲ.ಅದು ಮೂರು ವರ್ಷ ದಿಂದ ಮಗುವಿನ ವಿಷಯದಲ್ಲಾಗಲಿ, ನೂರು ವರ್ಷದ ವೃದ್ಧನ ವಿಷಯದಲ್ಲಾಗಲೀ ಎಲ್ಲರಿಗೂ ಅನ್ವಯ. “ಅನ್ನವೇ ಬ್ರಹ್ಮ” ಎಂಬಂತೆ ಆಧುನಿಕರಿಗೆ “ಸಮಯವೇ ಬ್ರಹ್ಮ” ಇದರ ದುರುಪಯೋಗ ಯಾರಿಂದಲೂ ಯಾರಿಗೂ ಆಗಬಾರದು.
‘ಮನುಷ್ಯನನ್ನು ಸಮಯದ ಕೊಲೆಗಾರ’ ಎನ್ನುವುದಿದೆ. ನಮಗೆ ಸಮಯ ಪ್ರಜ್ಞೆ ಅವಶ್ಯವಾಗಿರಬೇಕು. ’ಸಮಯದ ಕೈಗೊಂಬೆ’, ‘ಸಮಯದ ಕೈಗೂಸು ಮನುಜ’ , ‘ಕಾಲಾಯೈ ತಸ್ಮೈ ನಮಃ’ ಎಂಬಂತೆ ಕಾಲ ಎಲ್ಲರಿಗೂ ತಿಳಿವಳಿಕೆ ನೀಡುತ್ತದೆ ಎಂದ ಮೇಲೆ ಸಾಧಕತನ, ಕುತಂತ್ರತೆಯ ಅವಶ್ಯಕತೆಯಿದೆಯೇ ನಮ್ಮ ನಮ್ಮ ಬೇಡಿಕೆಗಳನ್ನು ಅಸಮಾಧಾನದ ಹೊಗೆಯಾಡಿಸಿ, ದ್ವೇಷದ ಕಿಚ್ಚು ಹೊತ್ತಿಸಿ ಬೇಯಿಸಿಕೊಳ್ಳುವ ಅವಶ್ಯಕತೆಯಿದೆಯೇ? ಸಮಯದ ಮುಂದೆ ನಿಲ್ಲಬಲ್ಲವರು ಯಾರೂ ಇಲ್ಲ.ಸಮಯಾಸಮಯ ಯಾವುದೇ ಆಗಿರಲಿ ಅದನ್ನು ಎದುರಿಸುವ ದಿಟ್ಟತನವಿರಬೇಕು. ಫಲಿತಾಂಶ ಏನೇ ಬರಲಿ ಸಮಯವನ್ನು ಸವಿನಯದಿಂದ ಸ್ವೀಕರಿಸಿದ್ದೇ ಆದಲ್ಲಿ ನಾವೇ ಬಾಸ್. ಕಟ್ಟುವ ಜೀವಕ್ಕೆ ಮುಟ್ಟುವ ಪಥಕ್ಕೆ ಸಮಯವೇ ಸಂಜೀವಿನಿ.
ಹೆಚ್ಚಿನ ಬರಹಗಳಿಗಾಗಿ
ಬೇಲಿಯೇ ಎದ್ದು…..
ಗಣೇಶನ ಕೈಯಲ್ಲಿಯ ಲಾಡು
ನೋ ಪಾರ್ಕಿಂಗ್