ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ರೈತರ ಹಿಗ್ಗಿನ ಸುಗ್ಗಿ-ಹುಗ್ಗಿ ಸಂಕ್ರಾಂತಿ

ರಾಜೇಶ್ವರಿ ವಿಶ್ವನಾಥ್
ಇತ್ತೀಚಿನ ಬರಹಗಳು: ರಾಜೇಶ್ವರಿ ವಿಶ್ವನಾಥ್ (ಎಲ್ಲವನ್ನು ಓದಿ)

ವರ್ಷದ ಹನ್ನೆರಡು ಸಂಕ್ರಮಣಗಳಲ್ಲಿ ಮೊದಲು ಸಿಗುವುದೇ ಮಕರ ಸಂಕ್ರಮಣ. ಪುಷ್ಯ ಮಾಸದಲ್ಲಿ ಸೂರ್ಯನು ಧನುರ್ ರಾಶಿಯನ್ನು ಬಿಟ್ಟು ಮಕರ ರಾಶಿಗೆ ಪ್ರವೇಶಿಸುವನು. ಈ ಸಂದರ್ಭವನ್ನು ಮಕರ ಸಂಕ್ರಮಣ ಅಥವಾ ಮಕರ ಸಂಕ್ರಾಂತಿ ಎಂದು ಕರೆ ಯುವುದುಂಟು.ಮುಂದಿನ ಶುಭ ಕಾರ್ಯರಂಭಕ್ಕೆ ಸೂರ್ಯನ ಪಥಚಲನೆಯ ಈ ಹಬ್ಬ ಪ್ರಮುಖವಾದದು.ಪ್ರಪಂಚಕ್ಕೆ ಬೆಳಕು ನೀಡುವ ಸೂರ್ಯ ಜನಪದರ ನಿಜದೇವ. ಸೂರ್ಯನೇ ಈ ಸಂಕ್ರಾಂತಿ ಪುರುಷ.ಸೂರ್ಯನ ಆರಾಧನೆಯೇ ಈ ಹಬ್ಬದ ಮುಖ್ಯ ಉದ್ದೇಶ. ಜಗತ್ತಿನ ಎಲ್ಲಾ ಕಡೆಯಲ್ಲೂ ಸೂರ್ಯೋಪಾಸನೆ ನಡೆಯುತ್ತದೆ. ಸೂರ್ಯನು ಆರೋಗ್ಯದ ಅಧಿದೇವತೆ. ಬೆಳಗಿನ ಹೊತ್ತಿನಲ್ಲಿ ಮಾಡುವ ಸೂರ್ಯ ನಮಸ್ಕಾರದಿಂದ ದೇಹ ಶಕ್ತಿಯುತವಾಗುತ್ತದೆ. ಹಳ್ಳಿಗಳಲ್ಲಿ ರೈತರು ಬೆಳಗೆ ಎದ್ದು ವಿಭೂತಿ ಧರಿಸಿ ಸೂರ್ಯನಿಗೆ ವಂದಿಸುವುದು ಸಂಪ್ರದಾಯ. ಅದಕ್ಕಾಗಿ ಇದನ್ನು ಜೀವನ್ಮುಖಿ ಹಬ್ಬವೆಂದು ಕರೆಯುವರು.ಸುಗ್ಗಿಯ ಸಂಭ್ರಮದ ದಿನಗಳಲ್ಲಿ ಈ ಹಬ್ಬ ಬರುವುದರಿಂದ ಇದನ್ನು ಸುಗ್ಗಿ ಹಬ್ಬವೆಂದು ಕರೆಯುವರು.

ಈ ರೀತಿ ಜಗತ್ತಿಗೆ ಬೆಳಕು ನೀಡುವ ಸೂರ್ಯ ಚಲನೆಗೆ ಸಂಬಂಧಿಸಿದ ದಿನದ ಹಬ್ಬವೇ ಸಂಕ್ರಮಣ ಅಥವಾ ಮಕರ ಸಂಕ್ರಾಂತಿ ಎಂದು ಪ್ರಸಿದ್ಧವಾಗಿದೆ. ಸಂಕ್ರಾಂತಿ ಎಂದರೆ ವಿಶಿಷ್ಟವಾದ ಬದಲಾವಣೆ ಹಾಗೂ ಉಜ್ವಲವಾದ ಬೆಳಕು ಎಂದು ಅರ್ಥವಿದೆ. ಪುಷ್ಯ ಮಾಸದಲ್ಲಿ ಸೂರ್ಯನು ದ್ವಾದಶಿ ರಾಶಿಗಳಲ್ಲೊಂದಾದ ಮಕರ ರಾಶಿಗೆ ಪ್ರವೇಶಿಸಿ ದಕ್ಷಿಣದಿಂದ ಉತ್ತರಾಭಿಮುಖವಾಗಿ ಆರು ತಿಂಗಳ ಕಾಲ ಪ್ರಯಾಣ ಬೆಳೆಸುವನು. ಈ ಪಥ ಬದಲಿಕೆಯ ದಿನವನ್ನು ಮಕರ ಸಂಕ್ರಮಣ ಅಥವಾ ಮಕರ ಸಂಕ್ರಾಂತಿ ಎಂದು ಕರೆಯುವುದುಂಟು. ಕತ್ತಲೆಯಿಂದ ಬೆಳಕಿನ ಕಡೆಗೆ ಪ್ರಯಾಣ ಮಾಡುವ ಈ ಸುದಿನ ಕತ್ತಲೆಯು ನಿಧಾನವಾಗಿ ಕಡಿಮೆಯಾಗಿ ಹಗಲು ಅಧಿಕವಾಗಿರುತ್ತದೆ. ಪುರಾಣ ಪುಣ್ಯ ಕಥೆಗಳಲ್ಲಿ ಸಂಕ್ರಾಂತಿಯ ದಿನ ಸ್ವರ್ಗದ ಬಾಗಿಲು ತೆರೆದಿರುತ್ತದೆ ಎಂದು ನಂಬಿಕೆ ಇದೆ. ದೇವರು ಮಲಗಿದ್ದವನು ಈ ದಿನ ಏಳುತ್ತಾನೆ. ಈ ಶುಭ ದಿವಸದಿಂದ ಒಳ್ಳೆಯ ಕೆಲಸವನ್ನು ಪ್ರಾರಂಭಿಸುತ್ತಾನೆ. ಆಗಾಗಿ ಇದನ್ನು”ಉತ್ತರಾಯಣ ಪುಣ್ಯಕಾಲ”,”ದೇವಾಯನ ಕಾಲ” ಎಂದು ಕರೆಯುತ್ತಾರೆ.

The significance of Makara Sankranti - Star of Mysore
What are the dishes you prepare on Pongal/Makar Sankranti? - Quora

ದೇವರ ಸಂದೇಶ
ಸಂಕ್ರಾಂತಿ ಹಬ್ಬದಂದು ದೇವರಿಗರ್ಪಿಸುವ ಈ ಸಂಕ್ರಾಂತಿ ಎಳ್ಳುಬೆಲ್ಲ, ಕರ್ಮದ ಹೊರೆಯನ್ನು ಕರಗಿಸಿ (ಎಳ್ಳು) ದೈವೀಗುಣ ಮೈಗೂಡಿಸಿಕೊಳ್ಳುತ್ತ (ಬೆಲ್ಲ) ಪ್ರಕೃತಿಗಾಗಿ ಹಂಬಲಿಸುತ್ತ (ಕಬ್ಬು) ತಾಳ್ಮೆಗೆಡದೆ ಮುನ್ನಡೆಯುವವರಿಗೆ ತನ್ನ ಕೃಪಾ ಪ್ರಸಾದದ ಸವಿ ಕಟ್ಟಿಟ್ಟದ್ದು ಎಂಬ ದೇವರ ಸಂದೇಶವನ್ನೇ ಬಿಂಬಿಸುತ್ತದೆ.
ಮಕರ ಸಂಕ್ರಾಂತಿ ಅಂದರೆ ಕತ್ತಲೆ ಮೇಲೆ ಪ್ರಕಾಶದ ವಿಜಯವಾಗಿದೆ. ಮಾನವ ಜೀವನವು ಅಂಧಕಾರ ಮತ್ತು ಪ್ರಕಾಶದಿಂದ ಕೂಡಿದೆ. ಇವತ್ತಿನ ದಿವಸ ಜನರು ಸಂಕ್ರಮಣ ಮಾಡುವ ಶುಭಸಂಕಲ್ಪ ಮಾಡುವುದಾಗಿದೆ. ಈ ಜಗತ್ತಿನಲ್ಲಿ ಯಾವುದೇ ಕೆಲಸ ಮಾಡುವುದಕ್ಕೆ ಒಬ್ಬನಿಗೆ ಸಾಧ್ಯವಾಗುವುದಿಲ್ಲ, ಎಲ್ಲರೂ ಸೇರಿದರೆ ಕಠಿಣ ಕೆಲಸಗಳು ಸಹಜ ರೀತಿಯಲ್ಲಿ ಸಾಧ್ಯವಾಗುತ್ತವೆ. ಎಲ್ಲರೂ ನಿಷ್ಠೆಯಿಂದ ಕೂಡಿರಬೇಕು ಎಂಬ ಸಂಗತಿ ಮರೆಯುವ ಆಗಿಲ್ಲ. ಹಾಗಾಗಿ ಈ ಹಬ್ಬದ ನೆಪದಿಂದ ಸ್ನೇಹಿತರ ಕಡೆಗೆ ಹೋಗಿ ಎಳ್ಳು-ಬೆಲ್ಲ ಕೊಟ್ಟು ಹಳೆಯ ಮತ ಭೇದವನ್ನು ಅಳಿಸಿ ಜಗಳವನ್ನು ಮರೆತು ಪುನಃ ಸ್ನೇಹದ ಆರಂಭ ಮಾಡಬೇಕು. ಈ ಉತ್ಸವವು ಬಹಳ ಪ್ರಸಿದ್ಧಿಯಲ್ಲಿದೆ. ಈ ಸಂಕ್ರಾಂತಿ ಹಬ್ಬದಂದು ಒಬ್ಬರಿಗೊಬ್ಬರು ಎಳ್ಳುಬೆಲ್ಲ ಕೊಟ್ಟು ಹೀಗೆ ಹೇಳುತ್ತಾರೆ “ಎಳ್ಳು-ಬೆಲ್ಲ ತಗೊಳ್ಳಿ,ಎಳ್ಳು ಬೆಲ್ಲದಾಂಗ ಇರೋಣ“. ಎಂದು ಮನದ ಸಿಹಿಯಾದ ಮಾತುಗಳಿಂದ ವಿನಿಮಯ ಮಾಡಿಕೊಳ್ಳುತ್ತಾರೆ. ಹಳೆಯ ಸ್ನೇಹಿತರನ್ನು ಪುನಃ ಗುರುತಿಸಿ ಜೀವನದಲ್ಲಿ ಹೊಸ ಮೌಲ್ಯ ತಂದುಕೊಳ್ಳಬೇಕು.
ವಿಬಿನ್ನ ರೀತಿಯ ಹಬ್ಬ

Lohri, Makar Sankranti, Pongal: History and Significance
ಲೋಹ್ರಿ,ಪೊಂಗಲ್ ಇತ್ಯಾದಿ ಹೆಸರಿನ ಸಂಕ್ರಾಂತಿ

ಮಕರ ಸಂಕ್ರಾಂತಿ ಹಬ್ಬವನ್ನು ಎಲ್ಲಾ ಕಡೆಗಳಲ್ಲಿಯೂ ವಿಭಿನ್ನ ರೀತಿಯಲ್ಲಿ ಆಚರಿಸುತ್ತಾರೆ. ಸಂಕ್ರಾಂತಿ ಹಬ್ಬದ ಆಚರಣೆ ಮೂಲ ಉದ್ದೇಶ ಒಂದೇ ಆದರೂ ಆಚರಿಸುವ ವಿಧಿವಿಧಾನಗಳು ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾಗಿರುತ್ತದೆ. ಎಳ್ಳು-ಬೆಲ್ಲ ಬೀರುವುದು ಒಂದು ವಿಶಿಷ್ಟ ಸಂಪ್ರದಾಯವಾಗಿದೆ.
ರೈತನಿಗೆ ಸಂಕ್ರಾಂತಿ ಒಂದು ದೊಡ್ಡ ಹಬ್ಬ, ಮುಖ್ಯವಾಗಿ ಬೆಳೆಗಳ ಹಬ್ಬ. ಅಂದರೆ ಸುಗ್ಗಿಯ ಹಬ್ಬ. ರೈತನು ಅನೇಕ ಬೆಳೆಗಳನ್ನು ಈ ಚಳಿಗಾಲದಲ್ಲಿ ಬೆಳೆದಿರುತ್ತಾನೆ. ಒಂದೇ ರೀತಿಯ ವ್ಯವಸಾಯ ಜೀವನದಿಂದ ಬೇಸತ್ತ ಅವರ ಜೀವನದಲ್ಲಿ ಒಂದು ಬದಲಾವಣೆಯನ್ನು ತರುವುದಕ್ಕೆ ಈ ಹಬ್ಬ ಬೆಳಕಿಗೆ ಬಂದಿದೆ. ಪ್ರಕೃತಿ ದೇವತೆಗೆ ವಂದನೆ ಸಲ್ಲಿಸುವುದೇ ಈ ಹಬ್ಬದ ಉದ್ದೇಶ. ಭೋಗಿ ಹಬ್ಬದ ದಿನ ರೈತರು ಇಂದ್ರ ದೇವನಿಗೆ ಮೊದಲ ಕೃತಜ್ಞತೆಗಳನ್ನು ಸಲ್ಲಿಸುತ್ತಾರೆ. ಇಂದ್ರದೇವನಿಗೆ ರೈತರ ಮೊದಲ ನಮನ.
ಶುಭಕಾರಕವಾದ ಈ ಹಬ್ಬ ಮನಸ್ಸಿನ ಕೆಟ್ಟತನವನ್ನು ದ್ವೇಷ,ಅಸೂಯೆಗಳನ್ನು ನಿವಾರಿಸುತ್ತದೆಂಬ ನಂಬಿಕೆ ಗ್ರಾಮೀಣ ಪ್ರದೇಶದಲ್ಲಿದೆ.‌ ಹಾಗಾಗಿ ಗ್ರಾಮೀಣ ಪ್ರದೇಶದಲ್ಲಿ ರೈತರು ಸಂಕ್ರಾಂತಿಯನ್ನು ಸಂತೋಷ ಸಂಭ್ರಮದಿಂದ ಆಚರಿಸುತ್ತಾರೆ. ಈ ಸಂಭ್ರಮಕ್ಕಾಗಿ “ಎಳ್ಳು-ಬೆಲ್ಲ ತಿಂದು ಒಳ್ಳೆಯ ಮಾತನಾಡಬೇಕು” ಎಂಬ ಸಂಪ್ರದಾಯ ಬೆಳೆದುಬಂದಿದೆ. ಎಳ್ಳು ಫಲವಂತಿಕೆಯನ್ನು ,ಜೀರಿಗೆ ಹೆಣ್ಣು-ಗಂಡುಗಳ ಸಂಬಂಧವನ್ನು ಬೆಸೆಯುವ ಧಾನ್ಯಗಳಾಗಿದ್ದು ಅವನು ಬೆಳೆದು ಕೊಡುವ ಭೂಮಿ ಸಾಕ್ಷಾತ್ ತಾಯಿ.ಆ ಕಾರಣಕ್ಕೆ ರೈತರು ” ಬೆಳಗಾಗಿ ನಾನೆದ್ದು ಯಾರ್ಯರ ನೆನೆಯಲಿ ಎಳ್ಳು ಜೀರಿಗೆ ಬೆಳೆಯೋಳ – ಭೂಮಿತಾಯ ಎದ್ದೊಂದು ಗಳಿಗೆ ನೆನೆದೇನು” ಎಂದು ಹಾಡಿ, ‌ಭೂಮಿತಾಯಿಗೆ ಕೃತಜ್ಞತೆ ಸಲ್ಲಿಸುತ್ತಾರೆ. ನಂತರ ಬೆಳೆಗಳನ್ನು ಕೊಯ್ಲು ಮಾಡಿ ಕಣದಲ್ಲಿ ಹಾಕಿ ಶುದ್ಧ ಮಾಡಿ ದವಸ ಧಾನ್ಯಗಳನ್ನು ಮನೆಯಲ್ಲಿ ರಾಶಿ ಹಾಕಿ ಪೂಜಿಸಿ ಬಂದ ಬಡಬಗ್ಗರಿಗೆ ದಾನ ಮಾಡಿ ಭೂತಾಯಿಯ ಋಣ ಸ್ಮರಣೆ ಮಾಡುವ ದಿನ.ಹಾಗೆ ಬಸವಣ್ಣ ಹಾಗೂ ದನಕರುಗಳನ್ನು ಚೆನ್ನಾಗಿ ತೊಳೆದು ಸ್ನಾನ ಮಾಡಿಸುತ್ತಾರೆ.ನಂತರ ರಂಗು ರಂಗಿನ ಬಣ್ಣಗಳಿಂದ ಉತ್ತಮ ರೀತಿಯಲ್ಲಿ ಶೃಂಗರಿಸುತ್ತಾರೆ. ಕೊಂಬುಗಳಿಗೆ ಬಲೂನು ರಿಬ್ಬನ್, ಕುಚ್ಚು ,ಹೂವು, ಮುಂತಾದವುಗಳನ್ನು ಕಟ್ಟಿ ಸಾಕ್ಷಾತ್ ನವವಧುವಿನಂತೆ ಸಿಂಗರಿಸುತ್ತಾರೆ. ನಂತರ ಕೊಟ್ಟಿಗೆಗೆ ಹುಲ್ಲು ಮೆದೆಗಳಿಗೆ ಹಾಗೂ ಮನೆಯ ಸೂರಿಗೆ ಮಾವಿನಸೊಪ್ಪು ಸಿಕ್ಕಿಸಿ ಅಲಂಕರಿಸುತ್ತಾರೆ. ಅಲಂಕಾರಗೊಂಡ ದನಕರುಗಳನ್ನು ಪೂಜಿಸಿ, ದೇವರಿಗೆ ನೈವೇದ್ಯ ಮಾಡಿದ ಅಡುಗೆ ಪದಾರ್ಥ ಹಾಗೂ ಹಣ್ಣುಗಳನ್ನು ತಿನ್ನಿಸುತ್ತಾರೆ.ನಂತರ ಮೆರವಣಿಗೆ ಸಹ ಮಾಡುತ್ತಾರೆ.
‌ರೈತರಿಗೆ ಸಂಭ್ರಮದ ಸಂಕೇತ
‌ಹಳ್ಳಿಗಳಲ್ಲಿ ಈ ದಿನ ರಾತ್ರಿ ನಡೆಯುವ ಒಂದು ಕುತೂಹಲಕಾರಿ ಕಾರ್ಯಕ್ರಮವೆಂದರೆ ದನಗಳಿಂದ ಕಿಚ್ಚು ಹಾಯಿಸುವುದು. ಸಂಜೆ ಆಯಿತೆಂದರೆ ಗ್ರಾಮದ ಪೂರ್ವ ಭಾಗಕ್ಕೆ ಹುಲ್ಲು ಹಾಕಿ ಬೆಂಕಿ ಹಚ್ಚುತ್ತಾರೆ. ನಂತರ ಎಲ್ಲರ ಸಂತಸದ ನಡುವೆ ಹಸುಗಳನ್ನು ದೂರದಿಂದ ಓಡಿಸಿಕೊಂಡು ಬಂದು ಹೊತ್ತಿಸಿದ ಬೆಂಕಿಯ ಮೇಲೆ ಓಡಿಸುತ್ತಾರೆ. ಇದಕ್ಕೆ ಕಿಚ್ಚು ಹಾಯಿಸುವುದು ಎನುತ್ತಾರೆ. ಈ ಸಂದರ್ಭದಲ್ಲಿ ಕೇಕೆ ಹಾಕಿ ಎತ್ತುಗಳನ್ನು ಓಡಿಸುವಾಗ ಇಡೀ ಊರಿಗೆ ಊರೇ ಸಂಭ್ರಮದಲ್ಲಿರುತ್ತದೆ.
“ಹೊಳೆಯಲ್ಲಿ ನೀರು ತುಂಬಿ ಹೊಲದಲ್ಲಿ ಬೆಳೆ ತುಂಬಿ, ಊರಿನ ಗುಡಿಯಲ್ಲಿ ಜನತುಂಬಿ-ಬಸವಯ್ಗ ಕಿಚ್ಚ ಹಾಯಿಸಿದ್ರು ಮನತುಂಬಿ ಎತ್ತು ಎನ್ನಬಹುದೆ ಎಚಚೋರಿ ಬಸವನ ಸುತ್ತೇಳು ಲೋಕ ಸಲಗದವನ -ಬಸವನ ಸತ್ಯ ಮೆರೆಯಿತು ಧರೆಯಲ್ಲಿ.
‌ ಎಂದು ಹಾಡನ್ನು ಹಾಡುತ್ತ ಕಿಚ್ಚು ಹಾಯಿಸುವುದು ರೈತರಿಗೆ ಸಂಭ್ರಮದ ಸಂಕೇತವಾಗಿದೆ.

‌ವೈಜ್ಞಾನಿಕ ದೃಷ್ಟಿ ಕೋನದಿಂದ ಅದಕ್ಕೊಂದು ಅರ್ಥವಿದೆ. ವರ್ಷವಿಡೀ ದುಡಿದ ದನಕರುಗಳಿಗೆ ಆಯಾಸ ನಿವಾರಣೆಗೆ ಬೆಂಕಿ ಕಾವು ಕೊಟ್ಟರೆ, ತಮ್ಮ ಕೆಲಸದಲ್ಲಿ ಮತ್ತಷ್ಟು ಚುರುಕು ಕಂಡುಕೊಳ್ಳುತ್ತವೆ.ಅಲ್ಲದೇ ಚಳಿಗಾಲದಲ್ಲಿ ಹಸುಗಳಿಗೆ ಸಾಕಷ್ಟು ಕ್ರಿಮಿಕೀಟಗಳು ಬಾಧೆ ಬಾಧಿಸುತ್ತಿರುತ್ತವೆ, ಮೈ ಸಹ ಜಡ್ಡುಗಟ್ಟಿರುತ್ತದೆ.ಇಂಥ ಸಂದರ್ಭದಲ್ಲಿ ಬೆಂಕಿಯೊಡನೆ ಮೈ ಆಡಿಸುವುದರಿಂದ ಕಚ್ಚಿಕೊಂಡಿರುವ ಉಣ್ಣೆಗಳು ಬೆಂಕಿಖಾಖಕ್ಕೆ ಉದುರುತ್ತವೆ.ಕ್ರಿಮಿಕೀಟಗಳು ಬೆಂಕಿಗೆ ಬಿದ್ದು ಸಾಯುತ್ತವೆ. ಶರೀರಕ್ಕೆ ಹಾಯ್ ಎನಿಸಬಹುದಾಗಿರುತ್ತದೆ. ಹಬ್ಬಕ್ಕೆಂದು ಮೈ ತೊಳೆಯುವುದರಿಂದ ಮೈ ಮೇಲಾದ ಗಾಯಗಳು ಮಾಯುತ್ತವೆ. ಅವುಗಳನ್ನು ವಾಸಿ ಮಾಡಲು ಇದೇ ಸುಸಂದರ್ಭ. ಹಾಗಾಗಿ ಈ ಹಬ್ಬದಲ್ಲಿ ಧಾನ್ಯಗಳ ಜೊತೆಗೆ ದನಕರುಗಳಿಗೂ ಮಹತ್ವ ಬಂದಿದೆ. ರೈತರು ವರ್ಷವಿಡಿ ಬೇಸಾಯ ಕೆಲಸದಲ್ಲಿ ತಮ್ಮೊಂದಿಗೆ ಹೆಗಲುಕೊಟ್ಟು ದುಡಿದ ದನಕರುಗಳಿಗೆ ಈ ರೀತಿ ಕೃತಜ್ಞತೆ ಸಲ್ಲಿಸುತ್ತಾರೆ.
ದಿಕ್ಕು ಬದಲಿಸುವ ಸೂರ್ಯ
‌ ಉತ್ತರಾಯಣವನ್ನು ಪುಣ್ಯಕಾಲವೆಂದು ಈ ಶುಭದಿನ ಮನೆಯನ್ನು ಶುಚಿ ಮಾಡಿ ಬಣ್ಣ ಬಣ್ಣದ ರಂಗೋಲಿ ಇಟ್ಟು ಹೊಸ್ತಿಲು ಬಾಗಿಲುಗಳಿಗೆ ತಳಿರು ತೋರಣ, ಹೂಗಳಿಂದ ಅಲಂಕರಿಸುತ್ತಾರೆ. ಅನಂತರ ಎಳ್ಳೆಣ್ಣೆಗೆ ಹರಿಶಿನವನ್ನು ಬೆರಸಿ ಮೈಗೆ ಹಚ್ಚಿಕೊಂಡು ಸ್ನಾನ ಮಾಡಬೇಕೆಂಬ ಸಂಪ್ರದಾಯ ಬೆಳೆದುಬಂದಿದೆ. ಏಕೆಂದರೆ ಈ ಹಬ್ಬದಲ್ಲಿ ಸೂರ್ಯ ದಿಕ್ಕು ಬದಲಿಸುತ್ತಾನೆ. ಮುಂದೆ ಬಿಸಿಲು ಧಗೆ ಹೆಚ್ಚಾಗುತ್ತದೆ. ಆ ಧಗೆಯನ್ನು ತಡೆಯಲು ಮೈಯಲ್ಲಿ ಶಕ್ತಿ ಬೇಕು ಅದಕ್ಕಾಗಿ ದೇಹದಲ್ಲಿ ಎಣ್ಣೆ ಅಂಶವನ್ನು ಹೆಚ್ಚಿಸಿ ಕೊಳ್ಳಬೇಕು, ಹಾಗಾಗಿ ಹಬ್ಬದಲ್ಲಿ ಎಳ್ಳೆಣ್ಣೆ ಹರಿಶಿನ ಹಚ್ಚಿ ಸ್ನಾನ ಮಾಡಿ ದೇವರ ಪೂಜೆ ಮಾಡಿ ಪೊಂಗಲ್ ಮತ್ತು ಎಳ್ಳು ಬೆಲ್ಲದ ಮಿಶ್ರಣವನ್ನು ನೈವೇದ್ಯ ಮಾಡುತ್ತಾರೆ. ಮತ್ತೊಂದು ವಿಶೇಷವೆಂದರೆ ಈ ದಿನ ಸೂರ್ಯನಿಗೆ ಅರ್ಘ್ಯವನ್ನು ಕೊಟ್ಟು ಹೆಸರು ಬೇಳೆ ಅಕ್ಕಿಯಿಂದ ತಯಾರಿಸಿದ ಪೊಂಗಲ್ ( ಹುಗ್ಗಿ ) ಅನ್ನು ಬೇಯಿಸುವಾಗ ಹೊರಗೆ ಉಕ್ಕುವಂತೆ ತಯಾರಿಸಬೇಕು. ನಂತರ ಸೂರ್ಯನಿಗೆ ನೈವೇದ್ಯ ಮಾಡಬೇಕು. ಆಗ ನಮ್ಮೊಳಗಿನ ಅಹಂಕಾರ ಮತ್ತಿತರ ಕೆಟ್ಟ ಭಾವನೆಗಳು ನಾಶವಾಗುತ್ತವೆ, ಮನಸ್ಸು ಶುದ್ಧವಾಗುತ್ತದೆ. ಅತಿಯಾದ ಬಿಸಿ ಹೊಗೆಯಲ್ಲಿ ಕಳೆಯುವ ಅವಧಿ ಬದುಕಿನ ಎಂಥ ಕಷ್ಟಗಳನ್ನಾದರೂ ತಾಳಿಕೊಳ್ಳುವ ಶಕ್ತಿಯನ್ನು ಕೊಡುತ್ತದೆ. ಪೊಂಗಲ್ ಉಕ್ಕುವ ರೀತಿಯಲ್ಲಿ ಮನೆಯಲ್ಲಿ ಐಶ್ವರ್ಯಗಳು ತುಂಬಬೇಕೆನ್ನುವುದು ಇದರ ಅರ್ಥ.
ಬಾಂಧವ್ಯ ಬೆಸೆಯಲಿ
‌ಸಂಕ್ರಾಂತಿ ಹಬ್ಬದ ಮತ್ತೊಂದು ವಿಶೇಷ ಸಂಭ್ರಮವೆಂದರೆ ಬಿಳಿ ಎಳ್ಳು, ಕಡಲೆ ಬೀಜ ಇವುಗಳನ್ನು ಘಮ್ ಎಂದು ಹುರಿದು, ಇದರ ಜೊತೆಗೆ ಬೆಲ್ಲ, ಕೊಬ್ಬರಿ, ಹುರಿಗಡಲೆಗಳನ್ನು ಸೇರಿಸುತ್ತಾರೆ. ಇದಕ್ಕೆ ” ಸಂಕ್ರಾಂತಿ ಎಳ್ಳು” ಎನ್ನುತ್ತಾರೆ. ಈ ಸಂಕ್ರಾಂತಿ ಎಳ್ಳನ್ನು ಪ್ರತಿ ಮನೆಗೂ ಬೀರುವುದು ಒಂದು ಪ್ರಮುಖ ಕಾರ್ಯ. ಎಳ್ಳು ಹಾಗೂ ಬೆಲ್ಲಕ್ಕೆ ನಮ್ಮ ಹಿರಿಯರು ಬಹಳ ಮಹತ್ವದ ಸ್ಥಾನವನ್ನು ಕೊಟ್ಟಿದ್ದಾರೆ. ಎಳ್ಳು ಶನಿಯ ಸಂಕೇತವಾದರೆ, ಬೆಲ್ಲ ಸೂರ್ಯನ ಸಂಕೇತ. ಇದೊಂದು ತಂದೆ ಮಕ್ಕಳ ಬಾಂಧವ್ಯ ಸೂಚಿಸುತ್ತದೆ. ಎಳ್ಳು ಸ್ನೇಹ ಸೌಹಾರ್ದವನ್ನು ಸೂಚಿಸುವುದಾದರೆ, ಬೆಲ್ಲ ಮಧುರವಾದ ನಡೆ-ನುಡಿಗಳನ್ನು ಸೂಚಿಸುತ್ತದೆ. ಇದರ ಜೊತೆಗೆ ಕಬ್ಬು, ಬಾಳೆಹಣ್ಣು, ಎಲಚಿಹಣ್ಣು ಇವುಗಳನ್ನು ಮನೆಮನೆಗೆ ಬೀರುವುದರ ಮೂಲಕ ಬಾಂಧವ್ಯಗಳನ್ನು ಬೆಸೆಯಲಿ ಎನ್ನುವುದು ಇದರ ಉದ್ದೇಶ.
‌ಪಾಪ ಪರಿಹಾರ
‌ಅಂದು ಸಾಯಂಕಾಲ ಮಕ್ಕಳಿಗೆ ಅಲಂಕಾರ ಮಾಡಿ, ಕೂರಿಸಿ ಈ ಸಂಕ್ರಾಂತಿ ಎಳ್ಳು, ಎಲಚಿಹಣ್ಣು, ಅವರೇ ಕಾಯಿ, ಕಡ್ಲೆಕಾಯಿ, ಕಬ್ಬಿನ ಚೂರು, ಕಿತ್ತಳೆ ಹಣ್ಣಿನ ತೊಳೆ, ಇವುಗಳನ್ನು ಬೆರೆಸಿ ಪಾವಿನಲ್ಲಿ ತುಂಬಿ ಮುತ್ತೈದೆಯರು ಮಕ್ಕಳ ತಲೆಯ ಮೇಲೆ ಸುರಿದು ಆರತಿ ಮಾಡಿ ಶುಭವಾಗಲೆಂದು ಹರಸುತ್ತಾರೆ. ಹೀಗೆ ಮಾಡುವುದರಿಂದ ಮಕ್ಕಳಿಗೆ ಬರಬಹುದಾದ ಪೀಡೆ ತೊಲಗುತ್ತದೆ ಎಂಬ ನಂಬಿಕೆ ಇದೆ. ಹಾಗೆ ಮಕ್ಕಳ ತಲೆ ಮೇಲೆ ಬೋರೆಹಣ್ಣನ್ನು (ಎಲಚಿಹಣ್ಣು), ಎಳ್ಳನ್ನು ತಲೆಗೆ ಸುರಿಯುವವರಲ್ಲವೇ? ಇದಕ್ಕೆ ಕಾರಣ ಬೋರೆ ಹಣ್ಣಿನಲ್ಲಿರುವ ಔಷಧೀಯ ಗುಣಗಳು,ಇದು ಮಕ್ಕಳಲ್ಲಿರುವ ಹಟಮಾರಿತನ ಹಾಗೂ ತುಂಟತನಗಳನ್ನು ಕಡಿಮೆ ಮಾಡುತ್ತದೆ ಎಂಬ ನಂಬಿಕೆಯಿದೆ.
ಅನಂತರ ತಟ್ಟೆಯಲ್ಲಿ ಸಂಕ್ರಾಂತಿ ಎಳ್ಳಿನ ಜೊತೆ ಕಬ್ಬಿನ ತುಂಡು, ಎಲಚಿಹಣ್ಣು, ಬಾಳೆಹಣ್ಣು, ಕಿತ್ತಳೆ ಹಣ್ಣು ಹಾಗೂ ಬಣ್ಣ ಬಣ್ಣದ ಸಕ್ಕರೆ ಅಚ್ಚು ಇವುಗಳನ್ನು ಇಟ್ಟುಕೊಂಡು ಪ್ರತಿ ಮನೆಗೂ ಕೊಟ್ಟು ಬರುತ್ತಾರೆ.ಈ ಸಂಕ್ರಾಂತಿ ಎಳ್ಳನ್ನು ದಾನಮಾಡುವುದರಿಂದ ಪಾಪ ಪರಿಹಾರ ವಾಗುತ್ತದೆ ಎಂಬ ನಂಬಿಕೆ ಇದೆ. ಎಳ್ಳು ಪೀಡೆಯ ಪರಿಹಾರ ಎಂಬುದು ಮೂಲ ಉದ್ದೇಶವಾದರೂ,ಎಳ್ಳು ಸಹ ಸಿಹಿ ಕಹಿಯ ಸಂಕೇತ. ನಾವು ಜೀವನದಲ್ಲಿ ಕಷ್ಟ ಸುಖಗಳನ್ನು ಸಮಾನವಾಗಿ ಸ್ವೀಕರಿಸಬೇಕೆಂಬುದೇ ಇದರರ್ಥ. ಎಳ್ಳು-ಬೆಲ್ಲ ಹಂಚುವುದರಿಂದ ಜನರ ಪರಸ್ಪರ ಪರಿಚಯವಾಗುತ್ತದೆ, ಸ್ನೇಹ ವೃದ್ಧಿಯಾಗುತ್ತದೆ. ಇದರಿಂದ ಸಮಾಜದಲ್ಲಿ ಐಕ್ಯತೆ ವೃದ್ಧಿಸುವುದು.” ಎಳ್ಳು-ಬೆಲ್ಲ ತಿಂದು ಒಳ್ಳೆಯ ಮಾತನಾಡು ” ಎನ್ನುವಾಗ ಪ್ರೀತಿ ಸ್ನೇಹದ ಸಂಕೇತವೂ ಆಗಿದೆ.
ಹಿಗ್ಗಿ ನಲಿಯುವ ಹಬ್ಬ
‌ಸಂಕ್ರಾಂತಿ ಚಳಿಗಾಲದ ಹಬ್ಬ. ಆಗ ನಮ್ಮ ದೇಹದಲ್ಲಿ ಕೊಬ್ಬಿನ ಅಂಶ ಕಡಿಮೆಯಾಗುತ್ತದೆ. ಅದಕ್ಕಾಗಿಯೇ ಎಲ್ಲಾ ಕೊಬ್ಬಿನಾಂಶವಿರುವ ಹೆಸರು ಬೇಳೆಯಿಂದ ಮಾಡಿದ ಪೊಂಗಲ್ ಶರೀರದ ಅನೇಕ ದೋಷಗಳನ್ನು ನಿವಾರಿಸುವ ಶಕ್ತಿ ಪಡೆದಿದೆ. ಮತ್ತು ಕೊಬ್ಬಿನಂಶವಿರುವ ಸಂಕ್ರಾಂತಿ ಎಳ್ಳು ಮತ್ತು ವಿಟಮಿನ್, ಕ್ಯಾಲ್ಸಿಯಂ,ಪ್ರೊಟೀನ್ ಇರುವ ಕಬ್ಬು, ಹಣ್ಣುಗಳು ಇವುಗಳೆಲ್ಲವನ್ನು ಸೇವಿಸುವುದರಿಂದ ನಮ್ಮ ದೇಹಕ್ಕೆ ಅಗತ್ಯವಾದ ಕೊಬ್ಬಿನಂಶ ದೊರಕುತ್ತದೆ. ದೇಹದ ಮಾಂಸಖಂಡಗಳನ್ನು ಸುಸ್ಥಿತಿಯಲ್ಲಿಡುತ್ತದೆ.ಹೀಗೆ ದೇಹದ ಆರೋಗ್ಯವನ್ನು ಸಮತೋಲನದಲ್ಲಿಡಲು ಹಬ್ಬಗಳಲ್ಲಿ ಈ ರೀತಿಯ ವಸ್ತುಗಳನ್ನು ಬಳಸುವಂತೆ ನಮ್ಮ ಹಿಂದಿನವರು ಅರ್ಥಮಾಡಿಕೊಂಡು ಪ್ರಕೃತಿಯ ವಿದ್ಯಮಾನಕ್ಕೆ ಅನುಗುಣವಾಗಿ ಆಹಾರವನ್ನು ಬಳಸುವಂತೆ ಮಾಡಿದ್ದಾರೆ. ಅಂತು ಏನೇ ಆಗಲಿ ಸಂಕ್ರಾಂತಿ ಸುಗ್ಗಿ ರೈತರಿಗೆ ಹಿಗ್ಗಿ ನಲಿಯುವ ಹಬ್ಬ ಎನ್ನುವುದರಲ್ಲಿ ಎರಡು ಮಾತಿಲ್ಲ.

makara sankranti recipes, pongal recipes 2018, snakranti recipe

ಒಳ್ಳೆಯ ಮಾತನಾಡಿ
‌ಆಗಾಗಿ ಸಂಕ್ರಾಂತಿ ಹಬ್ಬ ಆರೋಗ್ಯಪೂರ್ಣ ಮತ್ತು ಪ್ರೀತಿ ವಿಶ್ವಾಸಗಳನ್ನು ಬೆಳೆಸುವ ಒಂದು ಪವಿತ್ರ ಹಬ್ಬವಾಗಿದೆ. ಸಮಾಜದಲ್ಲಿ ಭಾವೈಕ್ಯತೆಯನ್ನು ಮೂಡಿಸಲು ದುಡಿಮೆಯ ಶ್ರಮವನ್ನು ಬಾಳಿನ ಬೇಸರವನ್ನು ಪರಿಹರಿಸಿ ಮನುಷ್ಯನ ಮನಸ್ಸಿಗೆ ಮುದ ನೀಡುವ ಈ ಹಬ್ಬ ಸೂರ್ಯನ ಪ್ರಕಾಶವು ಎಳ್ಳಿನ ಸ್ನೇಹ ಬೆಲ್ಲದ ಸಿಹಿ ನಮ್ಮ ಜೀವನದಲ್ಲಿ ಸಾಕಾರವಾಗಬೇಕಾದರೆ ಕತ್ತಲನ್ನು ಓಡಿಸಿ ಜ್ಞಾನದ ಜ್ಯೋತಿಯಾಗಿ ಹೊಸ ಬದುಕನ್ನು ಹಸನು ಮಾಡಿಕೊಳ್ಳುವ ದಿವ್ಯ ಸಂದೇಶವನ್ನು ನೀಡುವ ಈ ಮಕರ ಸಂಕ್ರಾಂತಿ ಹಬ್ಬವನ್ನು ಸ್ವಾಗತಿಸಿ ಒಳ್ಳೆಯ ಮಾತುಗಳನ್ನಾಡುತ್ತಾ ಸಂತೋಷದಿಂದ ಆಚರಿಸೋಣ.

‌ ಶ್ರೀಮತಿ ರಾಜೇಶ್ವರಿ ವಿಶ್ವನಾಥ್.
‌ ಹಾಸನ.