- ಸುರಭಾರತಿ – ೩೩ - ಜೂನ್ 20, 2021
- ಸುರಭಾರತಿ – ೩೨ - ಜೂನ್ 13, 2021
- ಸುರಭಾರತಿ – ೩೧ - ಜೂನ್ 6, 2021
ನಾರಾಯಣಂ ನಮಸ್ಕೃತ್ಯ
ನರಂ ಚೈವ ನರೋತ್ತಮಮ್
ದೇವೀಂ ಸರಸ್ವತಿಂ ವ್ಯಾಸಂ
ತತೊ ಜಯಂ ಉದೀರಯೆತ್ .
ಸುರ ಭಾರತಿ -೧
“ಭಾಷಾಸು ಮುಖ್ಯಾ ಮಧುರಾ
ದಿವ್ಯಾಗೀರ್ವಾಣ ಭಾರತೀ “
ಭಾಷೆಗಳಲ್ಲಿ ಅತಿ ಮುಖ್ಯವೂ ಮಧುರವೂ , ದಿವ್ಯವೂ ಆದದ್ದು ಸಂಸ್ಕೃತ ಭಾಷೆ. ಇದು ದೇವವಾಣಿ.
ಕವಿ ಬರೆಯುವ ಪ್ರತೀ ಪದವು ಮಧುರ ,
ಸಂಗೀತಮಯ, ಅದು ಪದ ಲಾಲಿತ್ಯಗಳ ದ್ಯೋತಕವಾಗಿರುತ್ತದೆ.
ಹಾಗಾದರೆ ಸಂಸ್ಕೃತ ಅಂದರೇನು ?
ಪರಿಶುದ್ಧವಾದದ್ದು ,ವ್ಯಾಕರಣ ದೋಷರಹಿತ ಆದದ್ದು ಯಾವದೋ ಅದು ಸಂಸ್ಕೃತ. ಸಂಸ್ಕೃತದ ಅಸ್ಮಿತೆಯಲ್ಲಿ ವಿದ್ವಾಂಸರೇ ದೇವರು .ಅದಕ್ಕೇ ಇದು ದೇವವಾಣಿ.
ಈ ಭಾಷೆ ಭಾರತೀದೇವಿ , ಭಾರತೀಯರಿಗೆ ಮಾತ್ರವಲ್ಲ, ಪಾಶ್ಚಾತ್ಯರಿಗೂ ಪ್ರಾಣರೂಪಿಣೀ.
ಜೀವನಕ್ಕೆ ಉನ್ನತಿದಾಯಕಳು ,ಸನ್ಮಾರ್ಗದರ್ಶಕಳು, ಕರ್ತವ್ಯ ಅಕರ್ತವ್ಯಗಳ ಬೋಧಕಳು ,ಎರಡೂ ಲೋಕದಲ್ಲೂ ಹಿತವನ್ನುಂಟು ಮಾಡುವವಳು.
ನಮ್ಮ ಪ್ರಾಚೀನ ವಾಙ್ಮಯವೆಲ್ಲ ಸಂಸ್ಕೃತ ಭಾಷೆಯನ್ನೇ ಆಧರಿಸಿದೆ .ವೈದಿಕ ವಾಙ್ಮಯವೇ ಆಗಲೀ, ರಾಮಾಯಣ, ಮಹಾಭಾರತ, ಸ್ಮೃತಿ ಗ್ರಂಥಗಳು, ದರ್ಶನಗಳು , ಧರ್ಮ ಗ್ರಂಥಗಳು , ಮಹಾಕಾವ್ಯಗಳು , ಲಘು ಕಾವ್ಯಗಳು ,ನಾಟಕಗಳು ,ಗದ್ಯಕಾವ್ಯ, ಗೀತೆ ಕಾವ್ಯ ,ಆಖ್ಯಾನ ಗ್ರಂಥಗಳು ,ನೀತಿ ಗ್ರಂಥಗಳು, ಹೀಗೆ ಸಾವಿರಾರು ಗ್ರಂಥಪ್ರಕಾರಗಳು ಸಂಸ್ಕೃತ ಭಾಷೆಯಲ್ಲಿ ಮಾತ್ರ ಸಿಗುತ್ತವೆ. ಇದಲ್ಲದೇ ವ್ಯಾಕರಣ, ಗಣಿತ, ಜ್ಯೋತಿಷ್ಯ, ಆಯುರ್ವೇದ ,ಧನುರ್ವೇದ , ವಾಸ್ತು ಕಲೆ , ಅರ್ಥಶಾಸ್ತ್ರ , ರಾಜನೀತಿ , ಛಂದಸ್ಸು ,ಅಲಂಕಾರ ಮೊದಲಾದ ಶಾಸ್ತ್ರಗಳೆಲ್ಲ ಸಂಸ್ಕೃತದಲ್ಲಿ ಇವೆ. ಈ ವಾಙ್ಮಯ, ವಿಪುಲವಾದದ್ದು, ಅಪಾರವಾದದ್ದು.
ಪ್ರಾಚೀನ ಕಾಲದಲ್ಲಿ ಇದು ಕೇವಲ ವಿದ್ವಾಂಸರ ವ್ಯವಹಾರ ಭಾಷೆ ಆಗಿರದೇ , ಜನಸಾಮಾನ್ಯರ ಲೌಕಿಕ ವ್ಯವಹಾರದಲ್ಲಿ ಆಡು ಭಾಷೆಯೂ ಆಗಿತ್ತು .ವೈದಿಕ ಸಾಹಿತ್ಯದ ಆರಂಭದ ಋಗ್ವೇದ, ಪ್ರಪಂಚದ ಪ್ರಾಚೀನತಮ ಸಾಹಿತ್ಯ ಎನಿಸಿದೆ. ಎಲ್ಲ ಶಾಸ್ತ್ರಗಳ ಪ್ರಾಚೀನ ಗ್ರಂಥಗಳು ಸಂಸ್ಕೃತ ಭಾಷೆಯಲ್ಲಿವೆ.
ಶಿಕ್ಷಾ ,ಕಲ್ಪ , ವ್ಯಾಕರಣ ,ನಿರುಕ್ತ , ಛಂದಸ್ಸು , ಜ್ಯೋತಿಷ್ಯ ,ಇವು ಆರು ವೇದಾಂಗಗಳು . ವ್ಯಾಕರಣ ಅಂದರೆ ಶಬ್ದ ಶಾಸ್ತ್ರವು. ಇದು ಆರು ಅಂಗಗಳಲ್ಲಿ ಪ್ರಮುಖವಾದದ್ದು .ವರ್ಣ ವಿವರವಲ್ಲದೇ , ಉಚ್ಚಾರಣೆಯ ಜ್ಞಾನವೂ ಇಲ್ಲಿದೆ. ಯಾವದೇ ಭಾಷಾಜ್ಞಾನ ವ್ಯಾಕರಣವನ್ನು ಅವಲಂಬಿಸಿದೆ .
ನಮ್ಮ ಶರೀರದಲ್ಲಿ ಪ್ರಧಾನ ಅಂಗ ಮುಖವಿದ್ದಂತೆ. ವ್ಯಾಕರಣದ ಪಿತಾಮಹರಾದ ಪಾಣಿನೀ ,ಮತ್ತು ಪತಂಜಲ ಅವರನ್ನು ಇಂದಿಗೂ ಅನುಸರಿಸಲಾಗುತ್ತಿದೆ.
ಮಾನಸಿಕ, ದೈಹಿಕ ವ್ಯಾಧಿಗಳಿಂದ ಸಂತಪ್ತ ರಾದ, ಮಾಯಾಮೋಹ ನಿಬಧ್ಧರಾದವರಿಗೆ ಮೋಕ್ಷ ಮಾರ್ಗ ತೋರಿಸಲು, ಭವಾಭ್ಧಿಯನ್ನು ದಾಟಲು ತತ್ವಜ್ಞಾನದ ಪ್ರಭೆಯನ್ನು ನೀಡುತ್ತವೆ ಉಪನಿಷತ್ ಗಳು.
“ಸಹ ನಾ ವವತು
ಸಹನೌ ಭುನಕ್ತು
ಸಹವೀರ್ಯಂ ಕರವಾವ ಹೈ”
ಎಂದು ಸಹಬಾಳ್ವೆಯನ್ನು ಕಲಿಸುತ್ತವೆ ಶಾಂತಿ ಮಂತ್ರಗಳು. ಹಾಗೆಯೇ ಎಲ್ಲರೂ ಕೂಡಿ ಕೆಲಸ ಮಾಡೋಣ, ದೇವರು ಸರ್ವರನ್ನೂ ಸಂರಕ್ಷಿಸಲಿ “ಸರ್ವೇ ಜನಾ: ಸುಖಿನೋ ಭವಂತು” ಎಂದು ವಿಶ್ವ ಶಾಂತಿಯನ್ನೂ ಕೋರುತ್ತವೆ. ಬ್ರಹ್ಮ ಜ್ಞಾನ ಇಲ್ಲದೇ ಜೀವನ ನಿಷ್ಫಲ ಎಂದು ತಿಳಿಸಿ ಕೊಡುತ್ತವೆ .ಈ ಬ್ರಹ್ಮ ಜ್ಞಾನವೇ ಸಮತ್ವ ಎಂಬ ತತ್ವವಲ್ಲದೇ ಭಗವಂತನ ವಿಶ್ಶ ವ್ಯಾಪ್ತಿತ್ವದ ಅರಿವು ಕೂಡ ಇಲ್ಲಿದೆ.
” ದ್ವಾಸುಪರ್ಣಾಸಯುಜಾ ಸಖಾಯಾ “
ಅಂದರೆ ಎರಡು ಪಕ್ಷಿಗಳು ಒಂದೇ ಮರದಲ್ಲಿ ವಾಸವಾಗಿದ್ದರೂ ಒಂದು ವೈರಾಗ್ಯ ಭಾವದಿಂದ ಸುಖೀ, ಇನ್ನೊಂದು ಆಶೆ.. ನಿರಾಶೆ ಗಳನ್ನು ಹೊಂದಿ ಅಸುಖೀ ಆಗಿವೆ. ಛಾಂದೋಗ್ಯ ಇದನ್ನು ಬಹಳ ಸುಂದರವಾಗಿ ಬಣ್ಣಿಸಿದೆ.
“ಸರ್ವೋಪನಿಷದೋ ಗಾವೋ …”
ಸರ್ವ ಉಪನಿಷತ್ ಗಳ ಸಾರವನ್ನು ಕರೆಯುತ್ತಾ ಇರುವ ಗೋವು ಹಾಗೂ ಭಗವದ್ಗೀತೆ, ನಿಷ್ಕಾಮ ಕರ್ಮವನ್ನೇ ಯೋಗವೆಂದು ಸಾರುತ್ತದೆ . ಅದಕ್ಕೇ ಹೇಳುವರು …
” ಗೀತಾ ಸುಗೀತಾ ಕರ್ತವ್ಯಾ ,ಕಿಮ್
ಅನ್ಯೈ: ಶಾಸ್ತ್ರ ವಿಸ್ತರೈ: ? “
ಗೀತಾ ಶಾಸ್ತ್ರ ಒಂದನ್ನು ಜೀರ್ಣಿಸಿಕೊಂಡಾಗ ಉಳಿದ ಶಾಸ್ತ್ರಗಳ ಅಧ್ಯಯನ ಬೇಕೇ ಇಲ್ಲ .
ಆತ್ಮಕ್ಕೆ ಹುಟ್ಟು ಸಾವು ಇಲ್ಲ , ” ಶಾಶ್ವತ: ಅಯಂ ಪುರಾಣ: ” ಅಂದರೆ ಅಶಾಶ್ವತ ಶರೀರದಲ್ಲಿ ಶಾಶ್ವತ ಆತ್ಮದ ನಿವಾಸ. ಈ ಎಲ್ಲ ” ಸತ್ಯಂ ಶಿವಂ ಸುಂದರಮ್ ” ತತ್ವವನ್ನು ಸಂಸ್ಕೃತದಲ್ಲಿಯೇ ಓದಿ ಆನಂದಿಸುವ ಭಾಗ್ಯವೇ ವಿಶೇಷ. ಅದನ್ನು ಅರ್ಥಮಾಡಿಕೊಂಡು ,ಚಿಂತನೆ ಮಾಡಿ ಆಚರಣೆಯಲ್ಲಿ ತಂದರೆ ,ಮಾನವನಿಗೆ ಸಾರ್ಥಕತೆಯನ್ನು ಸಾಧಿಸಿ ಸದಾ ಸುಖ ಶಾಂತಿ ಸಮನ್ವಿತರಾಗಿ ಬಾಳುವುದು ಸಾಧ್ಯ.
Live and Let Live !
ವೇದ ಉಪನಿಷತ್ ಗಳ ಮಹತ್ವ :
ವೇದ ಶಬ್ದವೇ ಜ್ಞಾನಾರ್ಥಕವಾದದ್ದು. ‘ವಿದ್’ ಎಂದರೆ ತಿಳಿದುಕೋ. ವೇದಗಳು Manual ಇದ್ದಹಾಗೆ. ಅಲ್ಲಿ ಜ್ಞಾನರಾಶಿ ಇದೆ. ಅವು ಮಾನವರ ಹಿತವನ್ನು ಬಯಸುತ್ತಾ, ಕರ್ತವ್ಯಗಳನ್ನು ಬೋಧಿಸುವವು.
ವೇದಗಳು ವಿವಿಧ ಜ್ಞಾನ , ವಿಜ್ಞಾನಗಳ ರಾಶಿ. ಶುಭ ಅಶುಭಗಳ ನಿರ್ದೆಶನ ಇಲ್ಲಿದೆ. ಸುಖ ,ಶಾಂತಿಗಳ ಸಾಧನೆಗೆ ಮಾರ್ಗ ದರ್ಶನವನ್ನು ಇವು ಮಾಡುತ್ತವೆ. ವಿಶ್ವ ಶಾಂತಿ ಸ್ಥಾಪನೆಯ ಮೆಟ್ಟಿಲುಗಳು ಇವು.
ಜಾತಿ ಮತಗಳನ್ನು ಮೀರಿ, ಗೊಂದಲಕ್ಕೆ ಪರಿಹಾರವಾಗಿ ನಂಬಿಕೆ , ಶ್ರದ್ಧೆ , ಸತ್ಯದ ಪ್ರತಿಪಾದನೆ ಮಾಡುತ್ತವೆ . ಭಕ್ತಿ ,ಆರಾಧನೆ ,ಆಚರಣೆ , ಸದಾಚಾರ , ಸದ್ಗುಣಗಳನ್ನು ವೈಜ್ಞಾನಿಕವಾಗಿ ಮತ್ತು ತರ್ಕಬದ್ಧವಾಗಿ ಸನಾತನ ಧರ್ಮವನ್ನು ತಿಳಿಸಿಕೊಡುತ್ತವೆ.
ಪರಿಪೂರ್ಣನಾದ ಭಗವಂತ ಒಬ್ಬನೇ ,ಹೆಸರು ಮಾತ್ರ ಬೇರೆ ಬೇರೆ.
” ಏಕಂ ಸತ್ ವಿಪ್ರಾ: ಬಹುಧಾ ವದಂತಿ”.
ಋಕ್ ,ಯಜು ,ಸಾಮ ,ಅಥರ್ವ ಈ ಚತುರ್ವೇದಗಳಲ್ಲಿ ವೈದಿಕ ಕರ್ಮಗಳ ವರ್ಣನೆ ಇದೆ . ಜೊತೆಗೆ ಅವು ಆಧ್ಯಾತ್ಮವನ್ನೂ ಬೋಧಿಸುತ್ತವೆ . ಉಪನಿಷತ್ ಗಳಲ್ಲಿ ಆಧ್ಯಾತ್ಮವಿದ್ಯೆ ಚರಮೋತ್ಕರ್ಷ ಹೊಂದಿದೆ.
ಶಾಸ್ತ್ರಕಾರರಿಗೆ ವೇದಗಳೇ ಪರಮ ಪ್ರಮಾಣಗಳು. ಕೆಲವರು ವೇದಾಭ್ಯಾಸವನ್ನೇ ತಪಸ್ಸು ಎಂದು ಭಾವಿಸುವರು. ನೈತಿಕ ದರ್ಶನಕ್ಕೆ ಇವು ಕನ್ನಡಿ ಎನಿಸಿವೆ .ಸಮಾಜದ ವಿಕಾಸ, ಸಭ್ಯತೆಯ ಮಾಹಿತಿ ಕೊಡುತ್ತ ಅರ್ಥಶಾಸ್ತ್ರ , ರಾಜನೀತಿ, ರಾಜತಂತ್ರ, ಪ್ರಜಾತಂತ್ರ ,ಶಾಸನ ವ್ಯವಸ್ಥೆ, ಶತ್ರುಸಂಹಾರ, ‘ಸಾಮ ದಾನ ದಂಡ ಭೇದ’ ಮೊದಲಾದ ವಿಧಿಗಳ ವಿವಿಧ ಪ್ರಯೋಗ, ಹೀಗೆ ಸರ್ವ ವಿಷಯಗಳ ಕೈಪಿಡಿ ಆಗಿವೆ.
ವೇದಗಳು ಜಗತ್ತಿನ ಅತ್ಯಂತ ಪ್ರಾಚೀನತಮ ಗ್ರಂಥಗಳು ಎಂದು ಪರಿಗಣಿಸಲಾಗಿದೆ.ಇತಿಹಾಸ , ಕಾವ್ಯ ಶಾಸ್ತ್ರ , ಸಾಹಿತ್ಯ ಗಳ ದರ್ಶನವೂ ಇಲ್ಲಿ ಆಗುವದು.ವೇದಾಧ್ಯಯನ ಜೀವನವನ್ನು ಪವಿತ್ರಗೊಳಿಸುತ್ತದೆ. ಪಾಶ್ಚಾತ್ಯರೂ ವೇದಗಳ ಮಹತ್ವನ್ನು ಒಪ್ಪಿ ಅನುಸರಿಸಲು ಪ್ರಯತ್ನಿಸುತ್ತಿದ್ದಾರೆ.
ಹೆಚ್ಚಿನ ಬರಹಗಳಿಗಾಗಿ
ಬೇಲಿಯೇ ಎದ್ದು…..
ಗಣೇಶನ ಕೈಯಲ್ಲಿಯ ಲಾಡು
ನೋ ಪಾರ್ಕಿಂಗ್