- ಸುರಭಾರತಿ – ೩೩ - ಜೂನ್ 20, 2021
- ಸುರಭಾರತಿ – ೩೨ - ಜೂನ್ 13, 2021
- ಸುರಭಾರತಿ – ೩೧ - ಜೂನ್ 6, 2021
ರಂಗದ ಮೇಲೆ ಶಕುಂತಲೆಯ ಜೊತೆಗಿದ್ದ ಅವಳ ಆತ್ಮೀಯ ಸಖಿಯರ ಪರಿಚಯ ಮಾಡಿಕೊಳ್ಳೋಣ. ನಾಯಿಕೆಯ ಸಮವಯಸ್ಕರವರು. ಮೂವರೂ ಸಹೋದರೀ ಭಾವವನ್ನು ಹೊಂದಿದವರು.
ಅನಸೂಯೆ ಸ್ವಲ್ಪ ಗಂಭೀರ ಸ್ವಭಾವದವಳಾದರೆ ಪ್ರಿಯಂವದೆ ಚಲ್ಲಾಟದ ಮುಗ್ಧ ಹುಡುಗಿ. ಸಖಿಯರಿಬ್ಬರೂ ಸದಾ ಶಕುಂತಲೆಯ ಯೋಗ ಕ್ಷೇಮವನ್ನು ಬಯಸುವವರು.ಇಬ್ಬರೂ ಜಾಣೆಯರು,ದಯಾಗುಣ ಪೂರ್ಣರು ಎಂಬುದು ಅವರ ನಡೆನುಡಿಗಳಲ್ಲಿ ಕಂಡುಕೊಳ್ಳುತ್ತೇವೆ.
ಅನಸೂಯ ಹೆಚ್ಚು ಅನುಭವಿ ಆದರೆ ಪ್ರಿಯಂವದೆ ಚಲ್ಲಾಟದ ಹುಡುಗಿ.
ಇರಲಿ ಈಗ ಪ್ರಸ್ತುತಕ್ಕೆ ಬರೋಣವೇ.
ದುಷ್ಯಂತ ಮರೆಯಲ್ಲಿ ನಿಂತು ಈ ಸಖಿಯರ ಮಾತು ಆಲಿಸುತ್ತಾ ಇರುವನು.ನಾರು ಬಟ್ಟೆಯಲ್ಲಿ ಶಕುಂತಲೆ ಗಿಡಕ್ಕೆ ಹಬ್ಬಿದ ಬಳ್ಳಿಯಂತೆ ನಾಜೂಕಾಗಿ, ಹೂಗಳಿಂತ ಸುತ್ತು ಗಟ್ಟಲ್ಪಟ್ಟು, ಸುಂದರವೂ, ಆಕರ್ಷಕಳೂ ಆಗಿದ್ದಾಳೆ.
“ಉತ್ತಮ ಪತಿಯನ್ನು ಆಧರಿಸಿದ ಪತ್ನಿಯಂತೆ, ನೀನು ಬೆಳೆಸಿದ ಈ ಬಳ್ಳಿ ಉತ್ತಮ ವೃಕ್ಷವನ್ನು ಆಧರಿಸಿ ಹಬ್ಬಿದೆ”
.ಎಂದು ಸಖಿಯರು ಶಕುಂತಲೆಗೆ ಛೇಡಿಸುವರು.
ಕಣ್ವರು ಅವಳಿಗಾಗಿ ಯೋಗ್ಯ ವರಾನ್ವೇಷಣೆಗೆ ಹೋದದ್ದನ್ನು ಸಖಿಯರ ಮಾತು ಸೂಚಿಸುತ್ತದೆ .
ಈ ವಿಷಯ, ಸಖಿಯರ ಸಂಭಾಷಣೆಯಿಂದ ತಿಳಿದಾಗ ಅವಳನ್ನು ವರಿಸುವ ಯೋಚನೆ ದುಷ್ಯಂತನ ಮನದಲ್ಲಿ ಹಾಯ್ದು ಹೋಯಿತು. ಇಲ್ಲೇ ಪ್ರೇಮದ ಬೀಜಾಂಕುರ ಆಯಿತೆನ್ನಬೇಕು.
ಇದೇ ಇರಬಹುದು, “Love at First sight” ಅಲ್ಲವೇ!.
ಆದರೂ ಇವಳು ಋಷಿಕನ್ಯೆ ಅಸವರ್ಣ ಆದೀತು ಎಂದು ಚಿಂತಿಸುವನು.ಕಾರಣ ,ಕ್ಷತ್ರಿಯ ಕನ್ಯೆ ಮಾತ್ರ ಕ್ಷತ್ರಿಯನ ಕೈ ಹಿಡಿದಾಗ,ಯಜ್ಞ ಯಾಗ ಗಳಲ್ಲಿ ,ಯಾವದೇ ಧಾರ್ಮಿಕ ಕಾರ್ಯದಲ್ಲಿ ಪತಿಯ ಜೊತೆ ಕೂಡಬಲ್ಲಳು ಎಂಬ ಧಾರ್ಮಿಕ ಪ್ರಜ್ಞೆ ದುಷ್ಯಂತನಲ್ಲಿ ಜಾಗೃತವಾಗಿದೆ.
ಅವನಿಗೆ ತನ್ನ ಮನಸಿನ ಮೇಲೆ ಪೂರ್ಣ ಭರವಸೆ.ತನ್ನ ಮನಸು ಇವಳಲ್ಲಿ ಅನುರಕ್ತ ಆಗಿದೆ ಎಂದ ಮೇಲೆ ಇವಳು ಶೂದ್ರ ಅಥವಾ ಬ್ರಾಹ್ಮಣ ಕನ್ಯೆ ಇರಲಾರಳು.
ಅವನ ಮನಸು ಧರ್ಮಬಧ್ಧ ಕಾರ್ಯವನ್ನೇ ಒಪ್ಪುವದು ಎಂದು ಅವನ ನಂಬಿಕೆ.ತನ್ನ ಅಂತ: ಪ್ರಜ್ಞೆಯಲ್ಲಿ ವಿಶ್ವಾಸ.
ತನ್ನ ಆರನೆಯ ಜ್ಞಾನೇಂದ್ರಿಯ ತಪ್ಪುದಾರಿ ಹಿಡಿಯಲಾರದೆಂಬ ಧೃಢ ನಂಬಿಕೆ ಆತನದು. ತನ್ನ ಆರ್ಯ, ಧರ್ಮವನ್ನು ಬಿಡಲಾರದು. ಹೀಗೆ ದುಷ್ಯಂತ ಧರ್ಮಾಧರ್ಮಗಳ ವಿಚಾರಗಳಲ್ಲಿ ಮಗ್ನನಾದಾಗ ಭೃಂಗವೊಂದು ಶಕುಂತಲೆಯ ಮುಖದ ಸುತ್ತ ತಿರುಗುತ್ತಾ ಇರುವುದನ್ನು ಗಮನಿಸುವನು.
“ಗುನ್ ಗುನಗುನ ಗುಂಜನ ಕರತಾ ಭೌಂರಾ “
(ಹಿಂದೀ ಸಿನೇಮಾದ ಈ ಹಾಡು ನೆನಪಾಗುತ್ತಿದೆ ಅಲ್ಲವೇ ! )
ಮಹಾಭಾರತದ ಶಕುಂತಲೋಪಾಖ್ಯಾನದಲ್ಲಿ ಈ ಪ್ರಸಂಗ ಇಲ್ಲ. ರಂಗಸ್ಥಳಕ್ಕೆ ಹೊಂದುವಂತೆ ಆಕರ್ಷಕವಾಗಿ ಮಾಡಲು ಇದು ಕಾಲಿದಾಸನ ಸೃಷ್ಟಿ .
ಶಕುಂತಲೆ ಗಿಡಕ್ಕೆ ನೀರು ಹನಿಸುವಾಗ ಬಳ್ಳಿಯಿಂದ ಭೃಂಗವೊಂದು ಹಾರಿ ಅವಳನ್ನು ಕಾಡುತ್ತಿದೆ. ಅದನ್ನು ಕಂಡ ದುಷ್ಯಂತ ಭಾವುಕನಾಗೀ ಮನಸಿನಲ್ಲಿ ಅಂದು ಕೊಳ್ಳುತ್ತಾನೆ.
” ಚಲಾಪಾಂಗಾಂ ದೃಷ್ಟಿಂ ಸ್ಪೃಷಸಿ
ಬಹುಶೋ ವೇಪಥುಮತೀಂ
ರಹಸ್ಮಾಖ್ಯಾಯೀವ ಸ್ವನಸಿ ಮೃದುಕರ್ಣಾಂತಿಕಚರ:
ಕರೌವ್ಯಧುಂತ್ರತ್ಯಾ: ಪಿಬಸಿ ರತಿಸರ್ವಸ್ಸಮಧರಮ್
ವಯಂ ತತ್ವಾನ್ವೇಷಾನ್ಮಧುಕರ
ಹತಾಸ್ತ್ವಂ ಖಲು ಕೃತೀ “
‘ಅಪ್ರಸ್ತುತ’ ಅಲಂಕಾರಕ್ಕೆ ಈ ಶ್ಲೋಕ ಮಾದರಿ ಆಗಿದೆ.
ಇದರ ಅರ್ಥ ,ರಾಜನ ಸುಂದರ ಕಲ್ಪನೆಯನ್ನು ಪ್ರಸ್ತುತ ಪಡಿಸುತ್ತದೆ.
” ಹೇ ಭೃಂಗವೇ,
ನೀನು ಬಹಳ ಭಾಗ್ಯವಂತ.
ನಿನ್ನನ್ನು ಅನುಸರಿಸುತ್ತ
ಅವಳ ಕಣ್ಣುಗಳು ಚಲಿಸುತ್ತಿವೆ.
ರಹಸ್ಯವಾಗಿ ಪ್ರೇಮವನ್ನು ಸೂಸುತ್ತಿರುವಂತಿವೆ.
ಅವಳ ಕಣ್ಣಮುಂದೆ ಹಾರಾಡುತ್ತಾ ಅವಳ ಕಿವಿಗಳಲ್ಲಿಯೂ ರಹಸ್ಯವನ್ನು ಪಿಸುಗುಟ್ಟುತ್ತಾ ಇರುವಿ.
ಅವಳು ಕೈಯಿಂದ ನಿನ್ನನ್ನು ದೂರ ಸರಿಸಲು ಪ್ರಯತ್ನ ಮಾಡಿದರೂ ನೀನು ಅವಳ ಕೆಳದುಟಿಯ ಮೇಲೆ ಕುಳಿತು ಆಕೆಯ ಅಧರಾಮೃತ ಪಾನಮಾಡುವ ಅದೃಷ್ಟ ಹೊಂದಿರುವಿ.”
ಈ ಸುಂದರ ಅಲಂಕಾರದಲ್ಲಿ ರಾಜನ
ಬಯಕೆ ವ್ಯಕ್ತವಾಗುತ್ತದೆ ಎನಬಹುದು. ಆದರೂ ಅವನಲ್ಲಿ ನಿಗ್ರಹ ಇದೆ. ಆತ ಕಾಮಾಂಧನಲ್ಲ. ಪ್ರೀತಿ ಹುಟ್ಟಿದೆ ಆದರೆ ಮನಸು ಸ್ಥಿಮಿತ ಕಳೆದುಕೊಂಡಿಲ್ಲ.
ಈ ಭ್ರಮರದಿಂದ ತನ್ನನ್ನು ಯಾರಾದರೂ ರಕ್ಷಿಸಿರಿ ಎಂದು ಶಕುಂತಲೆ ಮೊರೆ ಇಡುತ್ತಾಳೆ. ಆಗ ಸಖಿಯರು ಚೇಷ್ಟೆ ಮಾಡುತ್ತಾರೆ.
“ಈ ಆಶ್ರಮದ ರಕ್ಷಣೆಯ ಹೊರೆ ಹೊತ್ತ, ಊರ ದೊರೆ, ಆ ದುಷ್ಯಂತನನ್ನು ಕರೆ “
ಈ ಅವಕಾಶವನ್ನೇ ಕಾಯುತ್ತಿದ್ದ ದುಷ್ಯಂತ ಪ್ರವೇಶಿಸಿ,
“ನ ಭೇತವ್ಯಯಂ”
ಅಂಜುವ ಕಾರಣವಿಲ್ಲ ಎಂದು ಭರವಸೆ ಕೊಡುವನು.
ಯಾರವರು, ಈ ಮುಗ್ಧ ತಪಸ್ವಿ ಹೆಣ್ಣುಮಕ್ಕಳಿಗೆ ತೊಂದರೆ ಕೊಡುವವರು, ಅವಿನಯದಿಂದ ವರ್ತಿಸುವವರು, ಧೀರ ವೀರ ಪೌರವ ನಾನಿಲ್ಲಿ ಇರುವಾಗ ಯಾರದು ದಾಳಿ ಮಾಡುತ್ತಿರುವದು ಎನ್ನುತ್ತಾ ಪ್ರವೇಶ ಗೈದ ರಾಜನನ್ನು ಕಂಡು ಸಖಿಯರು ಸಂಭ್ರಾಂತರಾದರು.
“ಅಂಥ ಪ್ರಮಾದ ಏನೂ ಜರಗಿಲ್ಲ, ನಮ್ಮ ಪ್ರಿಯ ಸಖಿಗೆ ಭ್ರಮರ ಕೀಟಲೆ ಕೊಡುತ್ತಿದೆ”
ಎಂದರು ಸಖಿಯರು.
ಆಗ ದುಷ್ಯಂತ ಶಕುಂತಲೆಯನ್ನು ಗಮನಿಸಿ ಕುಶಲೋಪರಿ ವಿಚಾರಿಸುವನು.
” ಅಪಿ ತಪೋ ವರ್ಧತೇ ! “
ತಪೋವನದಲ್ಲಿ ಎಲ್ಲ ಸುರಕ್ಷಿತವೇ ಎಂದು ಕೇಳಿದನು.
ಅನಸೂಯೆ ಮಧುಪರ್ಕ , ಪಾದೋದಕದಿಂದ ಅತಿಥಿಯ ಸತ್ಕಾರ ಮಾಡಲು ಶಕುಂತಲೆಗೆ ಸೂಚಿಸಿದಾಗ ರಾಜ, ಬಹಳ ವಿನಯದಿಂದ ಹೇಳುವನು.
” ಭವತೀನಾಂ ಸೂನೃತಯೈವ
ಗಿರಾ ಕೃತಮ್ ಆತಿಥ್ಯಮ್”
“ನಿಮ್ಮ ಮಧುರ ನುಡಿಗಳಿಂದ ಆತಿಥ್ಯ ಆದಂತೆಯೇ” ಎಂದು ಉದ್ಗರಿಸಿದನು.
ಶಕುಂತಲೆ ಮೂಕಳಾದಳು.
ಅತಿಥಿ ಸತ್ಕಾರ ಮಾಡಲು ಸಾಮಗ್ರಿ ತರಲು ಸಖಿಯರು ಹೋದರು. ದಣಿದ ರಾಜ ಗಿಡದ ಕೆಳಗೆ ವಿಶ್ರಾಂತಿ ಪಡೆಯುತ್ತಾನೆ.
ಆಶ್ರಮದ ಸರಳ ಜೀವನದಲ್ಲಿ ಬೆಳೆದ ಶಕುಂತಲೆ, ದುಷ್ಯಂತನನ್ವು ಕಂಡಾಗ ತನ್ನಲ್ಲಿ ಉಂಟಾದ ಪ್ರೇಮ ಭಾವನೆಗಳನ್ನು ಅನುಭವಿಸಿ ಅವಳಿಗೇ ಆಶ್ಚರ್ಯ ಎನಿಸುವದು. ಅವಳೀಗ ತಪೋವನದ ಮುಗ್ಧೆ ಅಲ್ಲ.
ದುಷ್ಯಂತನೂ ಆಶ್ರಮವಾಸಿಗಳ ಸೌಹಾರ್ದ ಹೃದಯವನ್ನು ಮೆಚ್ಚುವನು. ನಯ, ವಿನಯ, ಶಿಷ್ಟಾಚಾರ ಎಲ್ಲವೂ ಆತನಿಗೆ ತೃಪ್ತಿಕರವಾಗಿತ್ತು.
ಅನಸೂಯೆ ದುಷ್ಯಂತನ ಕುಲಗೋತ್ರ ಅರಿಯಲು ಪ್ರಯತ್ನಿಸುವಳು. ಅವನು ಆಶ್ರಮಕ್ಕೆ ಆಗಮಿಸಿದ ಕಾರಣ ಕೇಳುವಳು. ಅವನು ತಾನು ರಾಜನ ರಾಯಭಾರೀ ಆಗಿದ್ದು , ಆಶ್ರಮದಲ್ಲಿ
ಎಲ್ಲ ಸುರಕ್ಷಿತವೇ ಎಂದು ನೋಡಲು ಬಂದವನು ಎಂದು ಹೇಳುತ್ತಾನೆ.
ಶಕುಂತಲೆಯ ಗೋತ್ರ ವಿಚಾರಿಸಲು ದುಷ್ಯಂತನೂ ಆತುರನಾಗಿರುವನು. ಭಗವಾನ್ ಕಾಶ್ಯಪರು (ಕಣ್ವರು) ಶಾಶ್ವತ ಬ್ರಹ್ಮಚಾರಿಗಳಲ್ಲವೇ ಎಂದು ಸಂಶಯ ವ್ಯಕ್ತಪಡಿಸುತ್ತಾನೆ.
ಆಗ ಶಕುಂತಲೆ, ಕೌಶಿಕ ಹಾಗೂ ಊರ್ವಶಿಯರ ಮಗಳು ಎಂದು ಗೊತ್ತಾದಾಗ ಅವನಿಗನಿಸಿತು, ಇವಳು ಗಂಧರ್ವ ಕನ್ಯೆ ,ಕ್ಷತ್ರಿಯ ಪುತ್ರಿ. ಕಣ್ವರ ದುಹಿತೃ ಅಂದರೆ ಸಾಕುಮಗಳು. ತನಗೆ ಯೋಗ್ಯ ಕನ್ಯೆ ಎಂದು ಭಾವಿಸುವನು. ಅವಳ ಲಾವಣ್ಯಕ್ಕೆ ಮಾರು ಹೋಗಿದ್ದಾನೆ. ಹೊಳೆಯುವ ಚಂದ್ರಮನ ಮಾರ್ದವ ಸೌಂದರ್ಯ ಅವಳಲ್ಲಿ ಕಂಡನು. ಕಣ್ವರೂ ಸಹ ಯೋಗ್ಯವರನಿಗೇ ಮಗಳನ್ನು ಒಪ್ಪಿಸುವ ಚಿಂತೆಯಲ್ಲಿ ಇರುವರು.
ತಾನು ರಾಜಪುರುಷ ಎಂದು ಖಚಿತ ಪಡಿಸಲು ದುಷ್ಯಂತ ತನ್ನ ಮುದ್ರಿಕೆಯ ಉಂಗುರ ತೋರಿಸುವವನು.
ಆಪ್ಸರೆಯ ರೂಪ ಮಿಂಚಿನಂತೆ ಆಕರ್ಷಿಸಿದೆ ದುಷ್ಯಂತನನ್ನು. ಆ ಕಾಲದ ಪದ್ಧತಿಯಂತೆ ರಾಜನಿಗೆ ಬಹುಪತ್ನಿಯರು. ಆದರೆ ದುಷ್ಯಂತನಿಗೆ ಮಕ್ಕಳಿಲ್ಲದ ಕೊರಗು. ವಂಶೋಧ್ಧಾರಕ ಪುತ್ರನ ಆಶೆ. ಆಶ್ರಮ ಪ್ರವೇಶ ಮಾಡುವಾಗ ವೈಖಾನಸರು ಚಕ್ರವರ್ತಿ ಪುತ್ರ ಪ್ರಾಪ್ತಿ ಆಗಲೀ ಎಂದು ಆಶೀರ್ವದಿಸಿ ದ್ದು ಫಲಿಸುವದೇನೋ ಎಂಬ ಆಶಾಕಿರಣ ಮೂಡಿತು. ಅದಕ್ಕೇ ಏನೋ ತನ್ನ ಬಲ ಭುಜ ಹಾರಿ ಶುಭ ಸೂಚನೆ ಕಂಡಿದೆ ಎಂದು ಆತನಿಗೆ ಅನಿಸುತ್ತದೆ.
ಅಷ್ಟರಲ್ಲಿ ನೇಪಥ್ಯದಲ್ಲಿ ಮುನಿಗಳ ಕೂಗು ಕೇಳಿಬಂತು.
” ದೊರೆ ದುಷ್ಯಂತ ಆಶ್ರಮ ಹೊಕ್ಕು ಪ್ರಾಣಿಗಳ ಬೇಟೆ ಆಡುತ್ತಾ ಇದ್ದಾನೆ.
ಪ್ರಾಣಿಗಳನ್ನು ರಕ್ಷಿಸಿರಿ.ರಥವನ್ನು ಕಂಡು ಆನೆಗಳು ಬೆದರಿವೆ.”
ಈ ಕೂಗನ್ನು ಕೇಳಿ ದುಷ್ಯಂತನಿಗೆ ಗೊತ್ತಾಯಿತು, ಇವರೆಲ್ಲ ತನ್ನನ್ನು ಹುಡುಕುತ್ತಾ ಇದ್ದಾರೆ ಎಂದು.
ಕೂಗು ಕೇಳಿ ಹೆದರಿದ ಸಖಿಯರು ಆಶ್ರಮದ ಒಳಗೆ ಹೋಗುವರು.
” ನಿಮ್ಮ ದರ್ಶನದಿಂದ ನಾನು ಪುರಸ್ಕೃತನು ” ಎಂದು ಅವರಿಗೆ ದುಷ್ಯಂತನು ಆಭಾರ ಸಲ್ಲಿಸಿದನು.
ಶಕುಂತಲೆಯೂ ಹೊರಡುವಳು. ಗಿಡ ಮುಳ್ಳುಗಳಲ್ಲಿ ಸಿಕ್ಕ ತನ್ನ ಸೆರಗನ್ನು ಬಿಡಿಸುವ ನೆಪದಿಂದ ತಿರುಗಿ, ಮತ್ತೆ ಮತ್ತೆ ದುಷ್ಯಂತನನ್ನು ನೋಡುತ್ತ ನಿರ್ಗಮಿಸುವಳು.
” ಗಚ್ಛತಿ ಪುರ: ಶರೀರಂ ಧಾವತಿ
ಪಾಶ್ಚಾತ್ ಅಸಂಸ್ತುತಂ ಚೇತ:
ಚೀನಾಂಶುಕಮಿವ ಕೇತೊ:
ಪ್ರತಿವಾತಂ ನೀಯಮಾನಸ್ಯ”
” ಶರೀರ ಮುಂದೆ ಸಾಗುತ್ತಿದ್ದರೂ ವಿಚಲಿತ ಹೃದಯ ಹಿಂದೆ ಹಿಂದೆ ಧಾವಿಸುತ್ತಿದೆ. ಚೀನಾಂಬರದ ಪತಾಕೆ ಗಾಳಿಯಿಂದ ವಿರುದ್ಧ ದಿಕ್ಕಿನಲ್ಲಿ ಹಾರುವಂತಿದೆ”
ಇದು ಶಕುಂತಲೆಯ ಮನಸ್ಥಿತಿ ಎಂದು ದುಷ್ಯಂತನಿಗೆ ಅರಿವಾಗುತ್ತದೆ.
ಇಲ್ಲಿಗೆ ಮೊದಲನೇ ಅಂಕ ಮುಗಿಯುತ್ತದೆ.
ಹೀಗೆ ಗ್ರೀಷ್ಮದ ಮನ್ಮಥನ ಕಾವಿನೊಂದಿಗೆ ದುಷ್ಯಂತ ಆಶ್ರಮವನ್ನು ಹೊಕ್ಕನು.
ಶಕುಂತಲೆಯ ಸಾತ್ವಿಕಗುಣಗಳ ಮೇಲೆ ರಾಜನ ರಜೋಗುಣದ ಪ್ರಹಾರ, ಈ ಅಂಕದಲ್ಲಿ ಚಿತ್ರಿತವಾಗಿದೆ.
ಕಾಡಾನೆ ಜಿಂಕೆಗಳನ್ನು ಓಡಿಸುತ್ತದೆ.
ಆನೆ ಕಾಮದ ಸಂಕೇತ. ಎಷ್ಟೇ ಧಾರ್ಮಿಕ ಸಂಯಮ ಇದ್ದರೂ ಕಾಮ ವಿಘ್ನ ತರಬಲ್ಲದು.
ಆಶ್ರಮದ ಪ್ರಾಣಿಗಳ ರಕ್ಷಣೆಗೆ ದುಷ್ಯಂತ ಸನ್ನಧ್ಧನಾಗಿ ಹೊರಟನು.
ಇಲ್ಲಿ ಅವನ ಕರ್ತವ್ಯ ಪ್ರಜ್ಞೆ ಎಚ್ಚರ ಗೊಂಡಿದೆ. ವನಿತೆಯರನ್ನು ಪರ್ಣಶಾಲೆಗೆ ಬಿಟ್ಟು ತಾನು ಆಶ್ರಮದ ಮೇಲೆ ಬಂದೊದಗಿದ
ಕಷ್ಟದ ನಿವಾರಣೆಗೆ ಹೋದನು.
ಇತಿ ನಿಕ್ರಾಂತಾ: ಸರ್ವೇ
ಹೆಚ್ಚಿನ ಬರಹಗಳಿಗಾಗಿ
ಬೇಲಿಯೇ ಎದ್ದು…..
ಗಣೇಶನ ಕೈಯಲ್ಲಿಯ ಲಾಡು
ನೋ ಪಾರ್ಕಿಂಗ್