- ಸುರಭಾರತಿ – ೩೩ - ಜೂನ್ 20, 2021
- ಸುರಭಾರತಿ – ೩೨ - ಜೂನ್ 13, 2021
- ಸುರಭಾರತಿ – ೩೧ - ಜೂನ್ 6, 2021
ಬೇಟೆ ಆಡುವುದನ್ನು ನಿಲ್ಲಿಸಿ, ಆಶ್ರಮದ ಪ್ರಶಾಂತ ವಾತಾವರಣವನ್ನು ಕಾಪಾಡಬೇಕು ಎಂದು ಆಜ್ಞಾಪಿಸಿ, ದುಷ್ಯಂತ ಸೇನಾಪತಿಯನ್ನು ಕಳಿಸಿಕೊಡುವನು.
ಆಗ ವಿದೂಷಕ ರಾಜನಿಗೆ
” ಈಗ ವಾತಾವರಣ ನಿರ್ಮಕ್ಷಿಕವಾಯಿತು. ಯಾವ ಆತಂಕವೂ ಇಲ್ಲ. ಇನ್ನು ನಿಸ್ಸಂಕೋಚವಾಗಿ ಮಾತಾಡು”
ಆಗ ದುಷ್ಯಂತ ಹೇಳುವನು
“ಹೇ ಮಾಧವ್ಯ , ನಿನ್ನ ಕಣ್ಣುಗಳು ಇನ್ನೂ ಸಾರ್ಥಕತೆಯನ್ನು ಪಡೆದಿಲ್ಲ,ಏಕೆಂದರೆ ನಿನಗೆ ಇನ್ನೂ ಶಕುಂತಲೆಯ ದರ್ಶನ ಆಗಿಲ್ಲ”
“ಆಶ್ರಮ ಲಲಾಮಭೂತಾಂ ಶಕುಂತಲಾಮ್”
ಈ ಆಶ್ರಮದ ರತ್ನ ಇದ್ದಂತೆ ಅವಳು ಎಂದು ದುಷ್ಯಂತ ಉದ್ದರಿಸಿದಾಗ ಅವನು, ಶಕುಂತಲೆಯ ಲಾವಣ್ಯದಿಂದ ಎಷ್ಟು ಆಕರ್ಷಿತನಾಗಿದ್ದಾನೆ ಎಂಬುದರ ಪರಿಚಯ ಆಗುತ್ತದೆ.ಅಲ್ಲದೇ ಪುರುವಂಶಜನಾದ ತನ್ನ ಮನಸು ನಿಷಿದ್ಧ ವಸ್ತುವಿನಿಂದ ಆಕರ್ಷಿತ ಆಗಲಾರದು ಎಂಬ ಭರವಸೆ ಕೂಡ ಆತನಿಗೆ.
“ಅಂತ:ಪುರದಲ್ಲಿ ಸುಂದರ ಯುವತಿಯರು ಇರುವಾಗ ಖರ್ಜೂರವನ್ನು ಬಿಟ್ಟು, ಹುಣಸೆ ಹಣ್ಣು ಬಯಸಿದಂತಿದೆ ನಿನ್ನ ಸ್ಥಿತಿ”
ಹೀಗೆ ವಿದೂಷಕ ದುಷ್ಯಂತನನ್ನು ತಡೆಯಲು ಪ್ರಯತ್ನಿಸಿದ.
ಆಗ ರಾಜ ಅವಳನ್ನು ಬಣ್ಣಿಸಿದ ರೀತಿ ನೋಡಿ!
“ಚಿತ್ರೆ ನಿವೇಷ್ಯ ಪರಿಕಲ್ಪಿತ ಸತ್ವಯೋಗಾ
ರೂಪೋಚ್ಚಯೇನ ಮನಸಾ ವಿಧಿನಾ ಕೃತಾ ನು.
ಸ್ತ್ರೀ ರತ್ನ ಸೃಷ್ಟಿ : ಅಪರಾ ಪ್ರತಿಭಾತಿ ಸಾ ಮೆ.
ಧಾತು: ವಿಭುತ್ವಂ ಅನುಚಿಂತ್ಯ ವಪು: ಚ ತಸ್ಯಾ: “
ಎಂದರೆ, ಬ್ರಹ್ಮನು , ದೋಷರಹಿತ ಚಿತ್ರವನ್ನು ಮೊದಲು ಬರೆದು, ನಂತರ ಅದರಲ್ಲಿ ಜೀವಕಳೆ ತುಂಬಿದಂತೆ ಇರುವಳು ಶಕುಂತಲೆ. ಅಥವಾ ಸಕಲ ಸೌಂದರ್ಯದ ಸಕಲ ಅಂಶಗಳನ್ನು ಸಂಗ್ರಹಿಸಿ ಶಕುಂತಲೆಯ ಸೃಷ್ಟಿ ಮಾಡಿರುವಂತಿದೆ. ರತ್ನ ಎಂದರೆ ಶ್ರೇಷ್ಠ.ಈ ಸ್ತ್ರೀ ರತ್ನ ಅಪರಾ ಅಂದರೆ ಇವಳಿಗೆ ಸಮಾನ ಆದವರು ಅನ್ಯರಿಲ್ಲ.
ಇಲ್ಲಿ ಟೆನಿಝನ್ ಕವಿ ಜ್ಯುಲಿಯೆಟ್ ಳ ವರ್ಣನೆ ಮಾಡಿದ್ದನ್ನು ಉದಾಹರಿಸಿದ್ದಾರೆ M.R.Kale ಅವರು ತಾತ್ಪರ್ಯದಲ್ಲಿ…..
“A certain miracle of symmetry,
A miniature of loveliness all grace
Summed up and closed in little.”
ಇದರಂತೆ ಕಾಳಿದಾಸ, ಶಕುಂತಲೆಯ ಅಪ್ರತಿಮ ಲಾವಣ್ಯವನ್ನು ಬಣ್ಣಿಸುವಲ್ಲಿ ಅಗಾಧ ಕುಶಲತೆಯನ್ನು ಪ್ರದರ್ಶಿಸಿದ್ದಾನೆ. ಉಳಿದ ಸೌಂದರ್ಯವೆಲ್ಲ ಇವಳ ಸೌಂದರ್ಯದಿಂದ ಗ್ರಹಣಗ್ರಸ್ತ ಆಗಿವೆ.
ಮತ್ತೆ ಮುಂದುವರೆಸಿದ್ದಾನೆ ದುಷ್ಯಂತ!
“ಅನಾಘ್ರಾತಂ ಪುಷ್ಪಂ ಕಿಸಲಯಮಲೂನಮ್ ಕರರುಹೈ:
ಅನಾವಿಧ್ಧಂ ರತ್ನಂ ಮಧುನವಂ ಅನಾಸ್ವಾದಿತರಸಮ್
ಅಖಂಡಪುಣ್ಯಾನಾಂ ಫಲಮಿವ ಚ ತದ್ರೂಪಮ್ ಅನಘಮ್
ನ ಜಾನೆ ಭೋಕ್ತಾರಂ ಕಮ್ ಇಹ
ಸಮುಪಸ್ಥಾಸ್ಯತಿ ವಿಧಿ:”
ತಾತ್ಪರ್ಯ, ಹೀಗಿದೆ:
“ಶಕುಂತಲೆಯ ದೋಷದೂರವಾದ ಸೌಂದರ್ಯ, ಇನ್ನೂ ಯಾರೂ ಯಾರೂ ಆಘ್ರಾಣಿಸದ ಪುಷ್ಪದಂತೆ ಇದೆ. ಯಾರೂ ಕೀಳಲು ಪ್ರಯತ್ನಿಸದ ಪುಷ್ಪ ಇದು. ಈ ಪುಷ್ಪದ ಮಧುವನ್ನು ಯಾರೂ ಸೇವಿಸಿಲ್ಲ. ಇಂಥ ಅನಾಘೃತ ಪುಷ್ಪವನ್ನು ಸೇವಿಸುವ ಭಾಗ್ಯ ಯಾರಿಗೆ ಇದೆಯೋ.”
ಇದನ್ನು ಕೇಳಿದ ವಿದೂಷಕ ದುಷ್ಯಂತನನ್ನು ಉದ್ದೇಶಿಸಿ
“ತೇನ ಏವ ಪರಿತ್ರಾಯತಾಮ್ ಏನಾಂ ಭವಾನ “
ಎಂದು ಸಲಹೆ ಕೊಡುವನು.
“ಬೇರೆ ಯಾರೋ ತಪಸ್ವಿಯ ವಶವಾಗುವ ಮೊದಲೇ
ಅವಳನ್ನು ರಕ್ಷಿಸು” ಎಂದು ಉಪದೇಶಿಸುವನು.
ಶಕುಂತಲೆ ಕುಟೀರದತ್ತ ಹೋಗುವಾಗ,ಕಾಲಿಗೆ ಮುಳ್ಳು ಚುಚ್ಚಿದ ನೆಪದಿಂದ, ಹಾಗೂ ಅವಳ ಸೀರೆಯ ಸೆರಗು ಗಿಡದ ಕಂಟಿಯಲ್ಲಿ ಸಿಕ್ಕಿದ್ದನ್ನು ಬಿಡಿಸುವ ನೆಪದಿಂದ ಮತ್ತೆ ಮತ್ತೆ ತನ್ನತ್ತ ತಿರುಗಿ ನೋಡಿದ್ದನ್ನು ಗಮನಿಸಿ ಅವಳೂ ಸಹ ತನ್ನಲ್ಲಿ ಅನುರಕ್ತಳಾಗಿರುವಳೆಂದು ದುಷ್ಯಂತ ಭಾವಿಸುವನು.
ಆಶ್ರಮದಲ್ಲಿ ಇನ್ನೂ ಕೆಲವು ಸಮಯ ಕಳೆಯಲು ಇಚ್ಛುಕನಾದ ರಾಜನಿಗೆ ಏನಾದರೂ ಉಪಾಯ ಸೂಚಿಸಲು ವಿದೂಷಕನ ಮೊರೆ ಹೋಗುವನು.
ವಿದೂಷಕ ಕೇವಲ ಹಾಸ್ಯಗಾರನಲ್ಲ, ಪ್ರತ್ಯುತ್ಪನ್ನ ಮತಿಯೂ ಆಗಿದ್ದಾನೆ.
“ಆಶ್ರಮ ವಾಸಿಗಳು ಬೆಳೆದ ಧಾನ್ಯದಲ್ಲಿ ಒಂದಾರಾಂಶ ನಮ್ಮ ಅರಸನಿಗೆ ಸಲ್ಲಿಸಬೇಕು. ಅದರ ಸಂಗ್ರಹಕ್ಕಾಗಿ ನೀನು ಇಲ್ಲಿ ಉಳಿಯುವ ನೆಪ ಒಡ್ಡಬಹುದು. ತಪಸ್ವಿಗಳ ಪುಣ್ಯದ ಕೆಲ ಭಾಗ ಕೂಡ ರಾಜನಿಗೆ ಸಮರ್ಪಿತ ಆಗುವುದುಂಟು. ಹೀಗಾಗಿ ತಪಸ್ವಿಗಳ ರಕ್ಷಣೆಯ ಹೊಣೆ ರಾಜನದಾಯಿತು ತಾನೆ ! ಯಜ್ಞ ಯಗಾದಿಗಳಲ್ಲಿ ಬರುವ ಆತಂಕ ದೂರ ಮಾಡುವದು ರಾಜನ ಕರ್ತವ್ಯ ಆಯಿತು.”
ಈ ಉಪಾಯ ಸೂಚಿಸುತ್ತಾ ಇರುವಾಗಲೇ ರಾಜಧಾನಿಯಿಂದ
ದುಷ್ಯಂತನ ತಾಯಿಯ ಸಂದೇಶ ಹೊತ್ತ ದೂತರ ಆಗಮನ ಆಗುತ್ತದೆ.
ರಾಜನಿಗೆ ಪುತ್ರ ಸಂತಾನ ಪ್ರಾಪ್ತಿಗಾಗಿ ರಾಜಮಾತೆ ವ್ರತ ಒಂದನ್ನು ಮಾಡುತ್ತಿದ್ದು ಅದರ ಪರಿಸಮಾಪ್ತಿಗಾಗಿ ದುಷ್ಯಂತ ರಾಜಧಾನಿಗೆ ಹಿಂದಿರುಗುವ ಅವಶ್ಯಕತೆ ಇತ್ತು.
ಆಶ್ರಮವನ್ನು ರಾಕ್ಷಸರಿಂದ ರಕ್ಷಿಸುವಅವಶ್ಯಕತೆ ಇದೆ , ಕಾರಣ
ತಪಸ್ವಿಗಳ ಪುಣ್ಯದ ಅಕ್ಷಯ ಅಂಶ ರಾಜನಿಗಾಗಿ ಮೀಸಲು ಇರುವಾಗ ಈ ಕರ್ತವ್ಯವನ್ನು ನಿರ್ವಹಿಸಲು ದುಷ್ಯಂತ ಈಗ ಆಶ್ರಮದಲ್ಲಿ ಕೆಲವು ದಿನ ಇರುವದು ಅನಿವಾರ್ಯ ಪ್ರಸಂಗ.
ತಪಸ್ವಿಗಳಿಂದ ಪ್ರಾಪ್ತವಾಗುವ ಪುಣ್ಯ ಯಾವುದೇ ಸಂಪತ್ತನ್ನು ಮೀರಿದ್ದು , ಅಲ್ಲದೇ ಆಶ್ರಮದಿಂದ ಬಲಿ (tax ) ಸಂಗ್ರಹಿಸುವುದರಿಂದ ಆಶ್ರಮವಾಸಿಗಳ ರಕ್ಷಣೆ ಆದ್ಯ ಕರ್ತವ್ಯವಾಗಿದೆ ಅಲ್ಲವೇ!
ಅದಕ್ಕೇ ದುಷ್ಯಂತ ತನ್ನ ಮಿತ್ರನಿಗೆ ಹೀಗೆ ಹೇಳುವನು.
“ಹೇ ಮಿತ್ರ , ನಿನ್ನನ್ನೂ ನನ್ನ ತಾಯಿ ಮಗನಂತೇ ಕಾಣುತ್ತಾಳೆ. ಆದ್ದರಿಂದ ನೀನೀಗ ರಾಜಧಾನಿಗೆ ಹಿಂತಿರುಗಿ ನನ್ನ ಪಾತ್ರವನ್ನ ನಿರ್ವಹಿಸು. ನಾನು ಇಲ್ಲಿ ಆಶ್ರಮದೊಳಗೆ ಮಾಡುವ ಕರ್ತವ್ಯ ಮಹತ್ವದ್ದು ಎಂದು ರಾಜಮಾತೆಗೆ ತಿಳಿಸು“
ನಿನ್ನ ಚಿಕ್ಕ ತಮ್ಮನಾಗಿ ಹೋಗುವೆ ಎಂದು ವಿದೂಷಕ ಒಪ್ಪಿಗೆ ಕೊಡುವನು.ತನ್ನ ಜೊತೆಗೆ ಬಂದವರನ್ನು ಕರೆದುಕೊಂಡು ಹೋಗಲು ದುಷ್ಯಂತ ಸೂಚಿಸಿದನು.
ಆಗ ದುಷ್ಯಂತನ ಮನದಲಿ ಒಂದು ಸಂಶಯ ಉತ್ಪನ್ನವಾಗಿ
“ಈ ನನ್ನ ವಿದೂಷಕ ಭಾರಿ ಚಾಣಾಕ್ಷನೂ , ಚಪಲನೂ ಇರುವನು. ತನ್ನ ಹಾಗೂ ಶಕುಂತಲೆಯ ಪ್ರಕರಣಕ್ಕೆ ಒಗ್ಗರಣೆ ಹಾಕಿ ಪ್ರಚಾರ ಮಾಡದೇ ಬಿಡನು. ರಾಜ ಪರಿವಾರದಲ್ಲಿ ತಪ್ಪು ಕಲ್ಪನೆ ಆಗಬಾರದು ಎಂಬ ಉದ್ದೇಶದಿಂದ ವಿದೂಷಕನಿಗೆ ಹೇಳುವನು.
“ಈ ತಾಪಸ ಕನ್ಯೆ ಯಲ್ಲಿ ಅನುರಕ್ತ ಆದದ್ದು ಸತ್ಯವಲ್ಲ. ಶಹರದ ವಾತಾವರಣದಲ್ಲಿ ಬೆಳೆದ ನಾನೆಲ್ಲಿ ,ಈ ಅಡವಿಯ ಪಶುಗಳ ಜೊತೆ ಬೆಳೆದ ಇವಳೆಲ್ಲಿ! ನಾನು ಹೇಳಿದ್ದು ಪರಿಹಾಸ್ಯ ಎಂದು ಮರೆತು ಬಿಡು.”
” ಸಖೇ, ಪರಮಾರ್ಥೇನ ನ ಗೃಹ್ಯತಾಂ ವಚ: “
“ನನಗೆ ಶಕುಂತಲೆಯಲ್ಲಿ ಯಾವ ಅಭಿಲಾಷೆಯೂ ಇಲ್ಲ.ತಮಾಷೆಗೆ ಹೇಳಿದ ಮಾತನ್ನು ನಿಜ ಎಂದು ಭಾವಿಸಬೇಡ “
” ಹಾಗೇ ಆಗಲೀ “
ಎಂದು ಹೇಳುತ್ತ ವಿದೂಷಕ ನಿರ್ಗಮಿಸುವನು.
ಇಲ್ಲಿಗೆ ಎರಡನೇ ಅಂಕ ಮುಗಿಯುತ್ತದೆ. ಇಲ್ಲಿ ಗಮನಿಸಬೇಕಾದದ್ದು ಕವಿಯ ಕುಶಲತೆ. ದುಷ್ಯಂತನಿಗೆ ತನ್ನ ಹಾಗೂ ಶಕುಂತಲೆಯ ಗಂಧರ್ವ ವಿವಾಹದಲ್ಲಿ ಸಾಕ್ಷಿ ಆಗಿ ಇರುವದು ಬೇಡವಾಗಿದೆ. ಈಗ ವಿದೂಷಕ ಸಾಕ್ಷಿ ಆಗಿದ್ದರೆ ಮುಂದೆ ೫ ನೇ ಅಂಕದಲ್ಲಿ ದುಷ್ಯಂತ, ಶಕುಂತಲೆಯನ್ನು ನಿರಾಕರಿಸುವಾಗ ಇವನು ವಿರೋಧಿಸಲು ಸಾಧ್ಯವಾಗ ಬಹುದಿತ್ತು. ಆಗ ಮುಂದೆ ದುಷ್ಯಂತನ ವಿರಹದ ಪರಿಚಯ ಆಗುತ್ತಿರಲಿಲ್ಲ. ಅಲ್ಲದೇ ಅಂತ:ಪುರದ ಪತ್ನಿಯರಿಗೆ ಈ ವಿಷಯ ಗೊತ್ತಾಗಬಾರದು. ಆದ್ದರಿಂದ ತಾನು ಶಕುಂತಲೆಯ ವಿಷಯವಾಗಿ ಮಾತಾಡಿದ್ದೆಲ್ಲ ತಮಾಷೆಯಾಗಿದ್ದು ಅದನ್ನು ಗಂಭೀರವಾಗಿ ಪರಿಗಣಿಸ ಬೇಡ , ಅದನ್ನೆಲ್ಲ ಮರೆತು ಬಿಡು ಎಂದು ವಿದೂಷಕನಿಗೆ ಹೇಳಿದ ದುಷ್ಯಂತ , ದುರ್ದೈವವಶಾತ್ ತಾನೂ ಮುಂದೆ ಶಕುಂತಲೆಯನ್ನು ಮರೆತು ಬಿಡುವನಲ್ಲ !!!
ಎರಡನೇ ಅಂಕದ ಸಾರಾಂಶ ಹೀಗೆ ಹೇಳಬಹುದು.
ಶಕುಂತಲೆಯಲ್ಲಿ ಅನುರಕ್ತನಾದ ದುಷ್ಯಂತ, ಅವಳನ್ನು ಮತ್ತೆ ಕಾಣಲು ಆಶ್ರಮದೊಳಗೆ ಉಳಿಯಲು ನೆಪ ಹುಡುಕುತ್ತಿದ್ದಾಗ ವಿದೂಷಕ ಕರವಸೂಲಿಯ ನವ ಧಾನ್ಕಗಳ ಸಂಗ್ರಹದ ಯೋಚನೆ ಸೂಚಿಸಿದಾಗ
ದುಷ್ಯಂತ ಹೇಳುವ ಮಾತು ಮಹತ್ವದ್ದು.
‘ತಪಸ್ವಿಗಳಿಂದ ತನಗೆ ಪ್ರಾಪ್ತವಾಗುವ ಪುಣ್ಯದ ಫಲ ರತ್ನಗಳ ರಾಶಿಗಿಂತ ಹೆಚ್ಚು.ಅದು ಶಾಶ್ವತವಾದ ಸಂಪತ್ತು’ ಎಂದು ಪರಿಗಣಿಸುವ ರಾಜನನ್ನು ಕಂಡಾಗ ಅವನ ಧಾರ್ಮಿಕ ಪ್ರಜ್ಞೆ ಮತ್ತು ಧೀರೋದಾತ್ತ ಶಾಲೀನ ಗುಣ ವ್ಯಕ್ತವಾಗಿದೆ.
ಆಶ್ರಮದ ನಿಯಮದ ವಿರುದ್ಧವಾಗಿ , ಸುಮ್ಮನೆ ಆಶ್ರಮದಲ್ಲಿ ಅವನು ನುಗ್ಗಲಾರ.
ಅಷ್ಟರಲ್ಲಿ ತಪಸ್ವಿಗಳು ಬಂದು ಇವನನ್ನು ಪ್ರಜಾರಕ್ಷಕ ಎಂದು ಕರೆಯುತ್ತಾ, ಭೂಲೋಕದ ಇಂದ್ರ, ಸುರೇಂದ್ರ ಎಂದು ಹೊಗಳಿದರು.
ಇವರು ಅರಮನೆಯ ಹೊಗಳು ಭಟ್ಟರು ಅಲ್ಲಾ. ದುಡ್ಡಿಗಾಗಿ ಹೊಗಳಿಕೆ ಅಲ್ಲ. ಇದರಿಂದ ದುಷ್ಯಂತನ ಪ್ರಜಾರಕ್ಷಣೆಯ ಪ್ರಭಾವ ಗೊತ್ತಾಗುತ್ತದೆ.
ಅದನ್ನೇ ಅವನು ತಪಸ್ಸು, ಪೂಜೆ , ಯಾಗ ಎಂದು ಭಾವಿಸಿದವನು.
ತಪಸ್ವಿಗಳು, ಕಣ್ವರ ಅನುಪಸ್ಥಿತಿಯಲ್ಲಿ , ಈ ರಾಜರ್ಷಿಯ ಸಹಾಯ ಕೋರಿ, ತಮ್ಮನ್ನು ರಾಕ್ಷಸರಿಂದ ರಕ್ಷಿಸಿ, ಯಜ್ಞ ಯಾಗಾದಿಗಳನ್ನು ಮುಂದುವರೆಸಲು ಅನುಕೂಲ ಮಾಡಿಕೊಡಬೇಕು ಎಂದು ಮನವಿ ಮಾಡುವರು.
ರೋಗಿ ಬಯಸಿದ್ದು ಹಾಲು ಅನ್ನ.
ವೈದ್ಯ ಹೇಳಿದ್ದೂ ಹಾಲು ಅನ್ನ!!
ರಾಜಮಾತೆ ಮಾಡಲಿರುವ “ಪುತ್ರ ಪಿಂಡ ಪಾಲನ ವ್ರತ” ಕ್ಕೆ ವಿದೂಷಕ ನನ್ನು ಕಳಿಸಿ ದುಷ್ಯಂತ, ತಪಸ್ವಿಗಳ ರಕ್ಷಣೆಗೆ ಮುಂದಾದನು.
ಹೆಚ್ಚಿನ ಬರಹಗಳಿಗಾಗಿ
ಬೇಲಿಯೇ ಎದ್ದು…..
ಗಣೇಶನ ಕೈಯಲ್ಲಿಯ ಲಾಡು
ನೋ ಪಾರ್ಕಿಂಗ್