- ಸುರಭಾರತಿ – ೩೩ - ಜೂನ್ 20, 2021
- ಸುರಭಾರತಿ – ೩೨ - ಜೂನ್ 13, 2021
- ಸುರಭಾರತಿ – ೩೧ - ಜೂನ್ 6, 2021
ಕಾಶ್ಯಪರು ಶಕುಂತಲೆಯನ್ನು ಕರೆದು ಹೀಗೆ ಹೇಳುತ್ತಾರೆ.
” ವತ್ಸೇ ,ಇತ: ಹುತಾನ್ ಅಗ್ನೀನ್ ಪ್ರದಕ್ಷಿಣೀ ಕುರುಷ್ವ.”
” ಅಪಘ್ನಾಂತೋ ದುರಿತಂ ಹವ್ಯ ಗಂಧೈ: ವೈತಾನಾಸ್ತ್ವಾಂ ವಹೂನಯ: ಪಾವಯಂತು.”
(“ಈ ಯಜ್ಞಕುಂಡಕ್ಕೆ ಪ್ರದಕ್ಷಿಣೆ ಹಾಕು .
ಈ ಅಗ್ನಿ ನಿನ್ನನ್ನು ದುಷ್ಟ ಶಕ್ತಿಗಳಿಂದ ರಕ್ಷಿಸುತ್ತದೆ.”)
ಮಗಳನ್ನು ಬೀಳ್ಕೊಡುವ ಈ ಸಂದರ್ಭ ಮನೋವಿದ್ರಾವಕವಾಗಿದೆ. ಇಂಥ ಪ್ರಸಂಗದ ವಿಶೇಷ ದೃಶ್ಯ ಮತ್ತೆ ಬೇರೆ ಯಾವ ಕಾವ್ಯಗಳಲ್ಲಿ ಬಂದಂತಿಲ್ಲ.
ಜನಕ ಸೀತೆಯನ್ನು ರಾಮನ ಜೊತೆಗೆ ಕಳಿಸಿಕೊಡುವಾಗ ಅಥವಾ ದ್ರುಪದ ದ್ರೌಪದಿಯನ್ನು ಪಂಚಪಾಂಡವರ ಜೊತೆ ಕಳಿಸುವಾಗ, ಈ ಮಹಾಕಾವ್ಯಗಳನ್ನು ರಚಿಸಿದ ವಾಲ್ಮೀಕಿ ,ವ್ಯಾಸರು ಈ ವರ್ಣನೆಯನ್ನು ತಂದಿಲ್ಲ ಅಲ್ಲವೇ? ಇದು ಕವಿ ಕಾಳಿದಾಸನ ವಿಶೇಷತೆ.
ಈ ನಾಲ್ಕನೆಯ ಅಂಕದಲ್ಲಿ , ಜೀವನದ ಈ ವಿಶೇಷ ಘಟ್ಟವನ್ನು, ಮನಮುಟ್ಟುವಂತೆ, ಸುಂದರವಾಗಿ ಬಣ್ಣಿಸಿದ್ದಾನೆ. ನೈಜತೆಗೆ ತೀರ ಹತ್ತಿರವಾಗಿದೆ. ಕನ್ಯಾ ಪಿತೃವಿನ ವಾತ್ಸಲ್ಯ, ಸ್ನೇಹ ಓದುಗರೆಲ್ಲರಿಗೂ ಕಣ್ಣೀರು ತರಿಸುವದು.
“ಪಾತುಂ ನ ಪ್ರಥಮಂ ವ್ಯವಸ್ಯತಿ
ಜಲಂ ಯುಷ್ಮಾಸ್ವಪೀತೇಷು ಯಾ
ನಾದತ್ತೆ ಪ್ರಿಯಮಂಡನಾಪಿ
ಭವತಾಂ ಸ್ನೇಹೇನ ಯಾ ಪಲ್ಲವಮ್ .
ಆದ್ಯೆ ವ: ಕುಸುಮಪ್ರಸೂತಿ ಸಮಯೆ ಯಸ್ಯಾ ಭವತಿ ಉತ್ಸವ:
ಸೇಯಂ ಯಾತಿ ಶಕುಂತಲಾ
ಪತಿಗೃಹಂ ಸರ್ವೈ: ಅನುಜ್ಞಾಯತಾಮ್.”
ಈ ಅಂಕದಲ್ಲಿಯ ಶ್ರೇಷ್ಠ ಚತುಷ್ಟಯಗಳಲ್ಲಿ ಇದು ಮೊದಲನೇ ಶ್ಲೋಕ.
ಕಣ್ವರು ಆಶ್ರಮದ ಗಿಡಬಳ್ಳಿಗಳಿಗೆ ಹೇಳುತ್ತಿರುವ ಮಾತುಗಳಿವು.
” ನಿಮಗೆಲ್ಲರಿಗೂ ನೀರು ಉಣಿಸಿದ ಬಳಿಕವೇ ಶಕುಂತಲೆ ತಾನು ನೀರು ಕುಡಿಯುತ್ತಾ ಇದ್ದಳು ಅಲ್ಲವೇ!
ಅವಳಿಗೆ ಆಭರಣ ತೊಡುವ ಆಶೆ ಇದ್ದರೂ, ಹೂವುಗಳನ್ನು ಕೊಯ್ದು ಎಂದೂ ನಿಮ್ಮನ್ನು ಘಾಸಿಗೊಳಿಸಲಿಲ್ಲ !!
ನಿಮ್ಮಲ್ಲಿ ಮೊಟ್ಟ ಮೊದಲ ಪುಷ್ಪ ಅರಳಿದಾಗ ಅವಳು ಅತ್ಯಂತ ಸಂತಸಪಟ್ಟವಳು!
ಆ ಶಕುಂತಲೆ ಇಂದು ನಿಮ್ಮನ್ನೆಲ್ಲ ಅಗಲಿ ,ಪತಿಗೃಹಕ್ಕೆ ಹೊರಟಿದ್ದಾಳೆ.
ಅವಳಿಗೆ ಅಪ್ಪಣೆ ಕೊಡಿ “
ಎಂದು ಕಳಕಳಿಯಿಂದ ಕೇಳಿಕೊಳ್ಳುತ್ತಾ ತಾವೂ ಕಣ್ಣೀರು ತುಂಬಿಕೊಂಡು ಗದ್ಗದಿತರಾದರು.
ಅನಿರ್ವಚನೀಯ ಭಾವಗಳು. ಶಕುಂತಲೆಗೆ ಪ್ರಕೃತಿಯ ಬಗ್ಗೆ ಇದ್ದ ಉತ್ಕಟ ಪ್ರೇಮ ಇಲ್ಲಿ ಸೂಚಿಸಲಾಗಿದೆ. ಅಷ್ಟರಲ್ಲಿ ಕೋಗಿಲೆಯ ಸಂಗೀತ ಕೇಳಿ ಬಂತು.
“ಅನುಮತ ಗಮನಾ ಶಕುಂತಲಾ
ತರುಭಿ: ಅಯಂ ವನವಾಸ ಬಂಧುಭಿ:
ಪರಭೃತವಿರುತಂ ಕಲಂ ಯಥಾ ಪ್ರತಿವಚನೀ ಕೃತಮ್ ಅಭಿರೀದೃಶಮ್.”
ಆಶ್ರಮದ ತರು ಲತೆಗಳು, ಪಶು ಪಕ್ಷಿಗಳೇ ಅವಳ ಸಂಗಾತಿಗಳು.
ಅವಳನ್ನು ಬೀಳ್ಕೊಡುತ್ತಿವೆಯೋ ಎನ್ನುವಂತೆ ಕೋಗಿಲೆ ಗಾನ ಮಾಡುತ್ತಾ ಇದೆ.
(ಹೆಣ್ಣು ಕೋಗಿಲೆ ತನ್ನ ತತ್ತಿಗಳನ್ನು ಕಾಗೆಯ ಗೂಡಿನಲ್ಲಿ ರಹಸ್ಯವಾಗಿ ಇಡುತ್ತದೆ. ಕಾಗೆ ಅವುಗಳನ್ನು ಕಾಪಾಡುತ್ತದೆ ಮರಿ ಹೊರಬಂದು ಪಕ್ಕಗಳು ಬಲಿತು ಹಾರಲು ಬರುವ ತನಕ. ಅದಕ್ಕೇ ಕೋಗಿಲೆಯನ್ನು ಪರಭೃತ ಎಂದರೆ ಬೇರೆಯವರಿಂದ ಸಂರಕ್ಷಿಸಲ್ಪಟ್ಟದ್ದು ಎಂಬ ಅರ್ಥ.)
ಶಕುಂತಲೆಯ ಪ್ರಯಾಣ ಸುಖಕರವಾಗಿರಲಿ ಎಂದು ಪ್ರಕೃತಿ
ಶುಭಾಶಯಗಳನ್ನು ಹೇಳುತ್ತಿರುವುದು ಸುಂದರ, ಮನೋಹರ ಕಲ್ಪನೆ ಅಲ್ಲವೇ!.
ಅಲ್ಲಲ್ಲಿ ಸರೋವರಗಳು ಕಮಲದಿಂದ ತುಂಬಿ ಇವಳಿಗೆ ಸಂತಸ ಕೊಡಲಿ. ರಸ್ತೆಯ ಗಿಡಮರಗಳು ನೆರಳು ನೀಡಿ ಇವಳನ್ನು ಬಿಸಿಲಿನ ತಾಪದಿಂದ ರಕ್ಷಿಸಲಿ. ಹೂಗಳ ಸುವಾಸನಾ ಭರಿತ ಪವನ ಆನಂದವೀಯಲಿ.
” ಶಾಂತಾನುಕೂಲ ಪವನ: ಚ ಶಿವ: ಚ ಪಂಥಾ:”
ಪ್ರಯಾಣದ ಮಾರ್ಗ ಸುಖಕರವಾಗಿರಲಿ, ಶಾಂತವಾಗಿರಲಿ, ಶುಭದಾಯಕವಾಗಿ ಇರಲಿ.
ಯಾವ ಅಡೆತಡೆ ಬರುವದು ಬೇಡ ಎಂದು ತರುಲತೆಗಳೂ ಆಶೀರ್ವದಿಸುವಂತೆ ಇದೆ.
ಈಗಲೂ ಯಾರನ್ನೂ ಬೀಳ್ಕೊಡುವಾಗ ನಾವು ಹೇಳುತ್ತೇವೆ ಅಲ್ಲವೇ.
Happy journey ,Safe landing ಅಂತೆಲ್ಲಾ ಆಶಿಸುವದುಂಟು. ಅದನ್ನೇ ಸಂಸ್ಕೃತದಲ್ಲಿ
” ಶಿವಶ್ಚ ಪಂಥಾ: “
ಎಂದು ಹೇಳುವ ವಾಡಿಕೆ.
ಕೇವಲ ತಪೋವನ ವಾಸಿಗಳಷ್ಟೇ ಅಲ್ಲ, ಸಮಸ್ತ ವನದೇವತೆ, ಶಕುಂತಲೆಯ ವಿರಹ ಸನ್ನಿವೇಶದಲ್ಲಿ ಕಣ್ಣೀರು ಹಾಕುತ್ತಿವೆ. ಜಿಂಕೆಗಳು ಆಹಾರವನ್ನು ತ್ಯಜಿಸಿ ನಿಂತಿವೆ, ನವಿಲು ನೃತ್ಯ ಮಾಡಲೊಲ್ಲದು, ತಮ್ಮ ಎಲೆಗಳನ್ನು ಉದುರಿಸುತ್ತಿರುವ ತರು ಲತೆಗಳೂ ಕಣ್ಣೀರು ಸುರಿಸುವಂತಿವೆ.
ಏನು ರಮ್ಯವಾದ ವರ್ಣನೆ!ಕಾಳಿದಾಸನದು!
ಉಪಮಾಲಂಕಾರದಲ್ಲಿ ಕಾಲಿದಾಸನ ಸಮಾನರು ಯಾರೂ ಇಲ್ಲ ಎಂಬ ಪ್ರತೀತಿ ಸಾರ್ಥಕವಾಗಿದೆ ಅವನ ಕಾವ್ಯದಲ್ಲಿ !!
ಕಣ್ವರು ತಮ್ಮ ಶಿಷ್ಯರಿಗೆ ಶಕುಂತಲೆಯನ್ನು, ಗೌತಮಿಯನ್ನು ಜೊತೆ ಮಾಡಿಕೊಂಡು ಹೊರಡಲು ಹೇಳುತ್ತಿದ್ದಾರೆ. ಆಗ ಶಕುಂತಲೆ ಹೀಗೆ ಹೇಳುವಳು.
“ತಾತ ,ಲತಾಭಗಿನೀಂ ವನಜ್ಯೋತ್ಸ್ನಾಂ ತಾವತ್ ಆಮಂತ್ರಯಿಷ್ಯೇ.”
ತಾನು ಪೋಷಿಸಿ ಬೆಳೆಸಿದ ವನಜ್ಯೋತ್ಸ್ನಾ ಎಂದು ನಾಮಕರಣ ಮಾಡಿದ ಲತೆಯಲ್ಲಿ , ಶಕುಂತಲೆಗೆ ಒಡಹುಟ್ಟಿದವರಲ್ಲಿ ಇರುವ ಸ್ನೇಹ ಇದೆ. ತಾನು ಆಶ್ರಮ ಬಿಡುವ ಮೊದಲು ಒಮ್ಮೆ ಲತೆಯನ್ನು ಆಲಂಗಿಸ ಹೊರಟಿದ್ದಾಳೆ. ಅದರ ಯೋಗಕ್ಷೇಮ ನೋಡಿಕೊಳ್ಳಲು ಸಖಿಯರಿಗೆ ವಿನಂತಿಸುವಳು.
ಎಲ್ಲರೂ ಕೂಡಿ ನಡೆಯುತ್ತಾ ಸರೋವರದ ಹತ್ತಿರ ಬಂದಿದ್ದಾರೆ. ಆಗ ಶಿಷ್ಯ ಗುರುಗಳಿಗೆ, ಸರೋವರದ ವರೆಗೆ ಮಾತ್ರ ತಾವು ಬರಬೇಕು. ಶಾಸ್ತ್ರದ ಹೇಳುತ್ತದೆ,
“ಸ್ನಿಗ್ಧರು ಅಂದರೆ ಅಗಾಧವಾಗಿ ಪ್ರೀತಿಸುವ ವ್ಯಕ್ತಿಯನ್ನು ಕಳಿಸಲು ಜಲಾಂತದ ವರೆಗೆ (ಓದಕಾಂತಂ ಮಾತ್ರ ಹೋಗಬೇಕು,”
ಸರೋವರದ ಹತ್ತಿರದ ಒಂದು ಮರದ ನೆರಳಲ್ಲಿ ಎಲ್ಲರೂ ನಿಲ್ಲುವರು.
ದುಷ್ಯಂತನಿಗೆ ಯುಕ್ತವಾದ ಸಂದೇಶ ಏನೆಂದು ಕಳಿಸಲಿ ಎಂದು ವಿಚಾರ ಮಗ್ನರಾಗಿದ್ದರು ಕಾಶ್ಯಪರು.
ಸರೋವರದಲ್ಲಿ ಕಮಲ ಪತ್ರದ ಹಿಂದೆ ಮರೆಯಾದ ಚಕ್ರವಾಕವು ಕಾಣಿಸದೇ ಹೆಣ್ಣು ಚಕ್ರವಾಕವು ವ್ಯಾಕುಲಗೊಂಡಿದೆ. ಇದೇ ತರಹ ಶಕುಂತಲೆ ವಿಹ್ವಲಗೊಂಡಿದ್ದಾಳೆ. ಅವಳ ಅಂತರಂಗದ ದು:ಖವನ್ನರಿತ ಸಖಿ ಅನಸೂಯಾ ಅವಳನ್ನು ಸಮಾಧಾನಪಡಿಸುವ ಪ್ರಯತ್ನ ಮಾಡುತ್ತಿರುವಳು.
“ಏಷಾಪಿ ಪ್ರಿಯೇಣ ವಿನಾ ಗಮಯತಿ
ರಜನೀಂ ವಿಷಾದ ದೀರ್ಘತರಾಮ್
ಗುರ್ವಪಿ ವಿರಹ ದು:ಖಮ್ ಆಶಾಬಂಧ: ಸಾಹಯತಿ.”
ಚಕ್ರವಾಕವು ವಿರಹ ವ್ಯಥೆಯಲ್ಲಿ ದೀರ್ಘವೆನಿಸಿದ ರಾತ್ರಿಯನ್ನು ಕಳೆಯುವುದು. ಭಾರವಾದ ಮನಸು. ಆದರೆ ಆ ಪ್ರೇಮದ ಅನುಬಂಧ ಅವುಗಳ ಮಿಲನದ ನಿರೀಕ್ಷೆಯಲ್ಲಿ ,ವಿರಹವನ್ನು ಸಹಿಸುತ್ತಿವೆ ಚಕ್ರವಾಕಗಳು.
ಹೀಗೆ ಹೇಳುತ್ತ ಶಕುಂತಲೆಗೆ ಸಮಾಧಾನ ಮಾಡುತ್ತ ಅವಳಿಗೂ ಪ್ರಿಯಕರನ ಸಮಾಗಮದ ಭರವಸೆಯನ್ನು ಕೊಡುವಳು.
ಕಣ್ವರು ತಮ್ಮ ಶಿಷ್ಯ ಶಾರಂಗರವನನ್ನು ಕರೆದು, ದುಷ್ಯಂತನಿಗಾಗಿ ಒಂದು ಸಂದೇಶ ವ್ಯಕ್ತಪಡಿಸುವರು.
“ಅಸ್ಮಾನ್ ಸಾಧು ವಿಚಿಂತ್ಯ ಸಂಯಮಧನಾನುಚ್ಚೈ: ಕುಲಂ ಚ ಆತ್ಮನ: ತು ವಯ್ಯಸ್ಯಾ: ಕಥಮಪಿ ಅಬಾಂಧವ ಕೃತಾಂ ಸ್ನೇಹಪ್ರವೃತ್ತಿಂ ಚ ತಾಮ್.
ಸಾಮಾನ್ಯ ಪ್ರತಿಪತ್ತಿ ಪೂರ್ವಕಮಿಯಮ್ ದಾರೇಷು ದೃಷ್ಯಾ ತ್ವಯಾ, ಭಾಗ್ಯಾಯತ್ತಮತ: ಪರಂ ನ ಖಲು ತದ್ವಾಚ್ಯಂ ವಧೂ ಬಂಧುಬಿ: “
( ಶಕುಂತಲೆಯನ್ನು ದುಷ್ಯಂತನಿಗೆ ಒಪ್ಪಿಸುವಾಗ ಈ ನನ್ನ ಮಾತು ಹೇಳು.
ನಮ್ಮದು ಸಾಧುಕುಲ. ಸಂಯಮವೇ ನಮ್ಮ ಧನ. ಈ ಆಶ್ರಮದಲ್ಲಿ ಬೆಳೆದ ಶಕುಂತಲೆಯನ್ನು ಯೋಗ್ಯ ರೀತಿಯಲ್ಲಿ ಸ್ವೀಕರಿಸು. ನಿನ್ನದೂ ಶ್ರೇಷ್ಠ ಕುಲ. ನೀವು ಒಬ್ಬರಿಗೊಬ್ಬರು ಆಕರ್ಷಣೆಗೆ ಒಳಗಾಗಿ ನಿರ್ಣಯ ತೆಗೆದುಕೊಂಡಿರುವಿರಿ. ನಿನಗೆ ಅನೇಕ ಪತ್ನಿಯರು. ಅವರಲ್ಲಿ ಒಬ್ಬಳನ್ನಾಗಿ ಇವಳನ್ನು ಆದರಿಸು. ಇದಕ್ಕಿಂತ ಹೆಚ್ಚಿಗೆ ಹೇಳಲು ಕನ್ಯಾ ಪಿತೃವು ಇಚ್ಛಿಸುವುದಿಲ್ಲ.)
ಬ್ರಾಹ್ಮಣ ಕನ್ಯೆಯನ್ನು ಮದುವೆ ಮಾಡಿಕೊಂಡು ಪಶ್ಚಾತ್ತಾಪ ಪಟ್ಟು, ದುಷ್ಯಂತ ಅವಳನ್ನು ಬಹಿರಂಗವಾಗಿ ಸ್ವೀಕರಿಸಲು ಸಿದ್ಧನಾಗಲಿಕ್ಕಿಲ್ಲ ಎಂಬ ಸಂಶಯ ಕಣ್ವರಿಗೆ ಇದೆ. ಹಿರಿಯರ ಒಪ್ಪಿಗೆಗೆ ದಾರಿ ಕಾಯದೇ ಅವರು ಮದುವೆ ಆದದ್ದರಿಂದ ಭವಿಷ್ಯದಲ್ಲಿ
ಏನೋ ದುರಂತ ಜರುಗೀತು ಎಂಬ ಭಯವೂ ಕಣ್ವರನ್ನು ಕಾಡಿರಬೇಕು.
ಉಚ್ಚಕುಲದ ಅರಸ ಯೋಗ್ಯ ರೀತಿಯಲ್ಲಿ ವರ್ತಿಸಲಿ ಎಂಬ ಆಶಯ.
ಸಾಮಾನ್ಯಳಂತೆ ಅವಳನ್ನು ಕಾಣು. ಇದಕ್ಕೆ ವಿಮರ್ಶಕರು ಹೇಗೆ ಅರ್ಥೈಸಬಹುದು ನೋಡಿ.
“ಸಾ ಮಾ ನ ಅನ್ಯಾ”
ಅವಳು ನನ್ನಿಂದ ಬೇರೆ ಅಲ್ಲ, ಅವಳು ಹೊರಗಿನವಳಲ್ಲ. ಅಂದರೆ ಶಕುಂತಲೆ, ದುಷ್ಯಂತ ಬೇರೆ ಬೇರೆ ಅಲ್ಲ, ಅದ್ವೈತ ದಾಂಪತ್ಯ ಇರಲಿ.
” ಸಾ ಮಾ ..”
ಇಲ್ಲಿ ಮಾ ಈ ಅಕ್ಷರಕ್ಕೆ ಲಕ್ಷ್ಮೀ ಎಂದೂ ಅರ್ಥ ಇದೆ .
ಅವಳು ನಿನ್ನ ಮನೆಯ ಲಕ್ಷ್ಮೀ ಎಂದು ಸೂಚಿಸಿದಂತೆ.
ದಾಂಪತ್ಯ ಜೀವನ ಹೇಗಿರಬೇಕು ಎಂಬುದನ್ನು ಕಾಶ್ಯಪರು ಬೋಧಿಸಿದ್ದಾರೆ ಎನಿಸುವದು.
ಈಗಿನ ದಾಂಪತ್ಯದಲ್ಲಿ ಈ ಪರಸ್ಪರ ಸಹನೆ, ನಮ್ರತೆ ಇದೆಯೇ?
ಪರಸ್ಪರರಲ್ಲಿ ಸ್ಪರ್ಧೆ ಕಾಣುತ್ತಿದೆ. ಕಾಂಪಿಟೇಶನ್. ಮದುವೆ ಒಂದು contract ಆಗಿದೆ. ತಾದಾತ್ಮ್ಯ ಭಾವ, ಅದ್ವೈತ ಮನಸ್ಸು ಕಡಿಮೆ ಆಗಿದೆ.
ವನೌಕಸರಾದರೂ ತಾವು ಸಮದರ್ಶಿಗಳು, ಜ್ಞಾನಿಗಳು. ಸ್ಥಿತಪ್ರಜ್ಞರು, ಧೀರರೂ ಕೂಡ.
ಒಂದು ವೇಳೆ ದುಷ್ಯಂತ ಯೋಗ್ಯ ರೀತಿಯಲ್ಲಿ ಸ್ವೀಕರಿಸದಿದ್ದರೆ ಪರಿಸ್ಥಿತಿಯನ್ನು ಎದುರಿಸುವ ಸಾಮರ್ಥ್ಯ , ಸ್ಥೈರ್ಯ ತಮಗಿದೆ ಎಂಬ ಸಂದೇಶವನ್ನೂ ಸೂಚ್ಯವಾಗಿ ಹೇಳಿದ್ದಾರೆ ಎನಿಸುವದು.
ಈ ಶ್ಲೋಕವನ್ನು , ಈ ಅಂಕದ ಶ್ರೇಷ್ಠ ನಾಲ್ಕು ಶ್ಲೋಕಗಳಲ್ಲಿ ಎರಡನೆಯದು ಎನ್ನಬಹುದು. ಇನ್ನುಳಿದ ಎರಡು,ಮೂರು ಶ್ಲೋಕಗಳಿಗಾಗಿ ಮುಂದಿನ ಅಂಕಣದಲ್ಲಿ ನಿರೀಕ್ಷಿಸಿರಿ.
ಹೆಚ್ಚಿನ ಬರಹಗಳಿಗಾಗಿ
ಬೇಲಿಯೇ ಎದ್ದು…..
ಗಣೇಶನ ಕೈಯಲ್ಲಿಯ ಲಾಡು
ನೋ ಪಾರ್ಕಿಂಗ್