- ಸುರಭಾರತಿ – ೩೩ - ಜೂನ್ 20, 2021
- ಸುರಭಾರತಿ – ೩೨ - ಜೂನ್ 13, 2021
- ಸುರಭಾರತಿ – ೩೧ - ಜೂನ್ 6, 2021
“ಪುತ್ರ ಸಾಂಗತಿ ಚರಿತ ಪಿತ್ಯಾಚೆ
ಸ್ವಯೇ ಶ್ರೀ ರಾಮ ಪ್ರಭು ಐಕತೀ“
ರಾಮಾಯಣದ ಗೀತೆಯನ್ನು ಹಾಡುತ್ತಾ ಇರುವ ಲವ ಕುಶರನ್ನು ಕಂಡಾಗ ಪುತ್ರ ವಾತ್ಸಲ್ಯ ಹರಿದಂತೆ ಇಲ್ಲಿಯೂ ದುಷ್ಯಂತ ಆಶ್ರಮದಲ್ಲಿ ಆಡುತ್ತಿದ್ದ ಬಾಲಕನಿಂದ ಅನೂಹ್ಯ ರೀತಿಯಲ್ಲಿ ಆಕರ್ಷಿತಗೊಂಡಿದ್ದಾನೆ.
ಬಾಲಕನ ತುಂಟತನವನ್ನು ತಾಳಲಾರದೇ ತಾಪಸಿ,
“ಈ ಬಾಲಕ ನನ್ನ ಮಾತು ಕೇಳುವುದಿಲ್ಲ. ಇವನ ಹಿಡಿತದಿಂದ ಪಾಪ ಆ ಸಿಂಹದ ಮರಿಯನ್ನು ಬಿಡಿಸಿ ಸಹಾಯ ಮಾಡಿ.”
ಎಂದು ದುಷ್ಯಂತನ ಮೊರೆ ಹೋಗುವಳು.
” ಅಯಿ, ಭೋ, ಮಹರ್ಷಿಪುತ್ರ,
ಏವಮ್ ಆಶ್ರಮ ವಿರುದ್ಧ ವೃತ್ತಿನಾ ಸಂಯಮ:
ಕಿಮ್ ಇತಿ ಜನ್ಮತ:
ತ್ವಯಾ, ಸತ್ವ ಸಂಶ್ಲಯಮ್ ಸುಖ:
ಅಪಿ ದೂಷ್ಯತೆ ಕೃಷ್ಣಸರ್ಪ ಶಿಶುನೇವ ಚಂದನ: “
” ಹೇ ಋಷಿಕುಮಾರನೇ, ಆಶ್ರಮಕ್ಕೆ ವಿಪರೀತ ಎನಿಸುವ ಕಾರ್ಯ ಮಾಡುತ್ತಾ ಇರುವಿಯಲ್ಲ!!?
ಎಲ್ಲ ಪ್ರಾಣಿಗಳೂ ಇಲ್ಲಿ ಸ್ನೇಹದಿಂದ ಇರುವಾಗ, ನೀನು ಸಿಂಹದ ಮರಿಯನ್ನು ಹೀಗೆ ಪೀಡಿಸುವದು
ಹಿಂಸೆಯೇ ಆದೀತು. ಆಶ್ರಮದಲ್ಲಿ ಬೇಟೆ ಆಡುವದು ನಿಷಿದ್ಧ. ಋಷಿಕುಮಾರನಾದ ನೀನು ಪ್ರಾಣಿಗಳ ಆರೈಕೆಯಲ್ಲಿ ಸಂತೋಷಿಸಬೇಕಾದವನು, ಅದ್ಹೇಗೆ ಈ ತುಂಟ ಕೆಲಸ ಮಾಡುತ್ತಿರುವೀ!!
ಕೃಷ್ಣ ಸರ್ಪವೊಂದು ಚಂದನದ ವೃಕ್ಷವನ್ನು ಸುತ್ತಿದಂತಿದೆ!!”
ಹೀಗೆ ಹೇಳುತ್ತ ದುಷ್ಯಂತ ಆ ಬಾಲಕನನ್ನು ಸಮೀಪಿಸಿದನು. ಆಗ ತಾಪಸಿ, “ಇವನು ಋಷಿಕುಮಾರ ಅಲ್ಲ” ಎಂದು ಹೇಳುವಳು.
ಆಗ ದುಷ್ಯಂತ ಮನಸಿನಲ್ಲಿ ಅಂದುಕೊಂಡನು.. “ಈ ಬಾಲಕನ ಅಸಾಮಾನ್ಯ ಕೃತಿಯೇ ಅದನ್ನು ಸಾರುತ್ತದೆ “
ಮಗುವಿನ ಸ್ಪರ್ಶದಿಂದ ಅವರ್ಣನೀಯ ಆನಂದವನ್ನು ಅನುಭವಿಸುತ್ತಾನೆ. ಬಾಲಕ ಮತ್ತು ದುಷ್ಯಂತರಲ್ಲಿ ಸಾಮ್ಯವನ್ನು ಕಂಡ ತಾಪಸಿ, ಆಶ್ಚರ್ಯಚಕಿತಳಾದಳು. ಋಷಿಕುಮಾರ ಅಲ್ಲವಾದರೆ ಇವನು ಇವನು ಯಾವ ವಂಶದವನು ಎಂದು ರಾಜ ವಿಚಾರಿಸಲು,
“ಇವನು ಪುರುವಂಶದ ಸಂತಾನ” ಎಂದು ಸ್ಪಷ್ಟಪಡಿಸಿದಳು.
ಕುಮಾರ ತನ್ನ ವಂಶಜನೇ ಎನಲು ತಮ್ಮಿಬ್ಬರ ಸಾಮ್ಯ ಸ್ವಾಭಾವಿಕವೇ ಎಂದುಕೊಂಡನು ದುಷ್ಯಂತ. ತನ್ನ ವಂಶಜರು ರಾಜನಾಗಿ ಅರಮನೆಯ ವೈಭವದಲ್ಲಿ ಕಾಲ ಕಳೆದರೂ ವಾನಪ್ರಸ್ಥಕ್ಕೆ ವನದಲ್ಲಿ ಆಶ್ರಮದೊಳಗೆ ವಾಸಿಸುವದು ವಾಡಿಕೆಯೇ ಆಗಿತ್ತು ಎಂದು ನೆನೆಸುವನು.
” ಈ ಬಾಲಕನ ತಾಯಿ ಅಪ್ಸರೆ. ಧರ್ಮ ಮರ್ಯಾದೆಗಾಗಿ ಧರ್ಮ ಪತ್ನಿಯನ್ನು ತ್ಯಾಗ ಮಾಡಿದ ಮಹಾರಾಜನ ಹೆಂಡತಿ ಈ ಮಗುವಿನ ತಾಯಿ. ಮಾರೀಚ ಋಷಿಗಳ ಈ ಆಶ್ರಮದೊಳಗೆ ಮಗುವಿಗೆ ಜನ್ಮ ಕೊಟ್ಟಳು ” ಎಂದು ತಾಪಸಿ ಹೇಳುತ್ತಿರುವಾಗ ಆ ತಾಯಿಯ ಹೆಸರೇನು ಎಂದು ದುಷ್ಯಂತ ಕೇಳುವನು.
ಅಷ್ಟರಲ್ಲಿ ತಾಪಸಿಯೊಬ್ಬಳು ಮಣ್ಣಿನ ಪಕ್ಷಿಯೊಂದನ್ನು ತಂದು,ಮಗುವಿಗೆ ಕೊಡುತ್ತ,
” ಇಗೋ, ಸರ್ವದಮನ, ಈ ಶಕುಂತಲ ಪಕ್ಷಿಯ ಲಾವಣ್ಯವನ್ನು ನೋಡು! ಎಷ್ಟು ಅಂದವಾಗಿದೆ “
ಎನ್ನುತ್ತಾ ಮಗುವಿನ ಗಮನವನ್ನು ಸಿಂಹದ ಮರಿಯಿಂದ ಬೇರೆ ಕಡೆಗೆ ಎಳೆಯಲು ಪ್ರಯತ್ನಿಸಿದಳು.
ಆಗ ತಟ್ಟನೇ ಮಗು ಕೇಳಿತು.
” ಕುತ್ರ ವಾ ಮಮ ಮಾತಾ? “
” ಎಲ್ಲಿ ನನ್ನ ಅಮ್ಮ”
ಕವಿಯ ಜಾಣ್ಮೆ ನೋಡಿ ಇಲ್ಲಿ.
ಶಕುಂತಲ ಎಂಬ ಪಕ್ಷಿಯ ಮಣ್ಣಿನ ಗೊಂಬೆಯೊಂದನ್ನು ಮಗುವಿಗೆ ಕೊಡುವ ನೆಪದಲ್ಲಿ ಮಗುವಿನ ತಾಯಿ ಶಕುಂತಲೆ ಎಂಬುದನ್ನು ಅರಸನಿಗೆ ತಿಳಿಸಿಕೊಟ್ಟಿದ್ದಾನೆ.
ಆಟಿಕೆ ತೆಗೆದುಕೊಳ್ಳಲು ಬಾಲಕ ಕೈ ಮುಂದೆ ಮಾಡಿದಾಗ,
” ಅಯ್ಯೋ ,ಇವನ ಕೈಗೆ ಕಟ್ಟಿದ ರಕ್ಷಾಕರಂಡಕ ಎಲ್ಲಿ ಹೋಯಿತು.” ಎಂದು ಗಾಬರಿ ಆಗುತ್ತಾ , ಅರಚಿದಳು ತಾಪಸಿ.
ಸಿಂಹಶಾವದ ಜೊತೆ ಕುಸ್ತಿ ಹಿಡಿದಾಗ ,ಇಗೋ ನೋಡಿ! ಇಲ್ಲಿಯೇ ಬಿದ್ದಿದೆ” ಎನ್ನುತ್ತಾ ದುಷ್ಯಂತ ಅದನ್ನು ಎತ್ತಿ ಕೊಡಲು ಮುಂದಾದನು. ಆಗ ಇಬ್ಬರೂ ತಾಪಸಿಯರು ಕೂಗುತ್ತಾರೆ.
“ಅದನ್ನು ಮುಟ್ಟ ಬೇಡೀ!
ಮಗುವಿನ ಜಾತಕರ್ಮದ ದಿನ ಈ ರಕ್ಷಾಕರಂಡಕವು ಮಾರೀಚಮಹರ್ಷಿಗಳಿಂದ ಕಟ್ಟಲಾಗಿದೆ. ಅಪರಾಜಿತಾ ಎಂಬ ಹೆಸರಿನ ಬಳ್ಳಿಯ ಬೇರಿನಿಂದ ಮಾಡಿದ ಕವಚವಿದು.
ಅದನ್ನು ಮಗುವಿನ ತಂದೆ, ತಾಯಿಯರ ಹೊರತಾಗಿ ಯಾರೂ ಮುಟ್ಟುವ ಹಾಗಿಲ್ಲ. ಹಾಗೇನಾದರೂ ಇತರರು ಮುಟ್ಟಿದರೆ ಅದು ಆ ಕ್ಷಣವೇ ಸರ್ಪ ಆಗಿ ಕಚ್ಚಿಬಿಡುತ್ತದೆ.”
ಎಂದು ಅದರ ವಿಶೇಷತೆಯನ್ನು ತಿಳಿಸಿದಳು ತಾಪಸಿ. ಹಾಗೆ ಆದದ್ದನ್ನು ತಾವು ಪ್ರತ್ಯಕ್ಷ ಕಂಡಿದ್ದೇವೆ
ಎಂದು ಹೇಳುತ್ತಿರಲಾಗಿ, ಹಾಗಾದರೆ ನೋಡೇ ಬಿಡೋಣ ಎಂದು ದುಷ್ಯಂತ ಕೈಯಿಂದ ರಕ್ಷಾಕರಂಡವನ್ನು ಎತ್ತುವನು.
ಅದು ಸರ್ಪದ ರೂಪ ತಾಳದೇ ಇರಲು ಎಲ್ಲರಿಗೂ ಆಶ್ಚರ್ಯ! ಆಗ ದುಷ್ಯಂತನಿಗೆ ತಾನೇ ಆ ಬಾಲಕನ ತಂದೆ ಎಂದು ಖಾತ್ರಿ ಆಯಿತು.
ರಾಜನ ಕೈಯಿಂದ ಬಿಡಿಸಿಕೊಂಡು ತಾಯಿಯನ್ನು ಕಾಣಲು ಆತುರಗೊಂಡ ಮಗುವಿಗೆ ದುಷ್ಯಂತ ಹೇಳುವನು. ” ಮಗೂ, ತಂದೆಯೊಡಗೂಡಿಯೇ ನಿನ್ನ ತಾಯಿಯನ್ನು ಅಭಿನಂದಿಸೋಣ ನಡೆ” ಎಂದು ಸಿದ್ಧನಾಗಿರುವಾಗ “ಏಕವೇಣೀ'” ಆದ ಶಕುಂತಲೆಯ ಪ್ರವೇಶ ಆಗುವದು.
ಅದೇನು, ಪ್ರೇಕ್ಷಕರು ಚಪ್ಪಾಳೆ ತಟ್ಟುವದಿಲ್ಲವೇ !?
ಮಳೆ ಬಂದಂತೆ ಸಪ್ಪಳ. (ಅಲ್ಲಲ್ಲ! ಪ್ರೇಕ್ಷಕರು ಪಾಪ್ ಕಾರ್ನ ತಿನ್ನುವ ಶಬ್ದವೇ?!!.)
ಎಚ್ಚರಗೊಳ್ಳಿ. ನಮ್ಮೆಲ್ಲರ ನೆಚ್ಚಿನ ನಾಯಕಿ, ಎಲ್ಲರ ಕರುಣೆಗೆ, ಪ್ರೀತಿಗೆ ಪಾತ್ರಳಾದ ನಾಯಕಿಯ ಆಗಮನ ಆಗಿದೆ ವೇದಿಕೆಯ ಮೇಲೆ.
‘ಏಕವೇಣೀ’ ಎಂಬ ಒಂದೇ ಶಬ್ದದಲ್ಲಿ ಶಕುಂತಲೆಯ ಮನದ ಚಿತ್ರಣ ಕೊಟ್ಟಿದ್ದಾನೆ ಕವಿ.
ಇದೇ ಶಬ್ದವನ್ನು ವಾಲ್ಮೀಕಿ ಕವಿ, ರಾಮನಿಂದ ಬೇರ್ಪಟ್ಟು, ರಾವಣನ ಅಶೋಕವನದಲ್ಲಿ ಕಾಲಕಳೆಯುತ್ತಿದ್ದ ಸೀತೆಯನ್ನು ವರ್ಣಿಸಲು ಮಾಡಿರುವನು.
” ಏಕಾ ವೇಣೀ ತಸ್ಯ ಧರಾ…
ಧೃತೈಕಾ ವೇಣಿ: ಯಸ್ಯಾ: ಸಾ.“
ಗಂಡನಿಂದ ಬೇರ್ಪಟ್ಟ ದಿನದಿಂದ ತಲೆಯನ್ನು ಬಾಚದೇ ಇದ್ದವಳು ಎಂದು ಅರ್ಥ. ಹಿಂದು ಪದ್ಧತಿಗನುಸಾರವಾಗಿ ಪತಿವ್ರತೆ ಸ್ತ್ರೀ, ತನ್ನ ಪತಿಯಿಂದ ದೂರ ಆದಮೇಲೆ ತಲೆಯನ್ನು, ಬಾಚುವ ಹಾಗಿಲ್ಲ, ಜಡೆ ಹೆಣೆಯುವ ದಿಲ್ಲ, ಜಡೆಯನ್ನು ಅಲಂಕರಿಸುವದಿಲ್ಲ. ಇದನ್ನು ಶಕುಂತಲೆ ಅನುಸರಿಸಿದ್ದಳು ಎಂಬುದು ಸ್ಪಷ್ಟವಾಗುತ್ತದೆ. ಇದು ಅವಳ ಶುದ್ಧ ಶೀಲವನ್ನು, ಶುದ್ಧ ಸ್ವಭಾವವನ್ನು ತಿಳಿಸುತ್ತದೆ. ಬಹುಕಾಲೀನ ವಿರಹ ವ್ಯಥೆಯನ್ನು ಸಾರುವಂತಿದೆ.
ಒಬ್ಬರನ್ನೊಬ್ಬರು ಭೇಟಿ ಆದಾಗ ಇಬ್ಬರ ಮನದ ಸ್ಥಿತಿ ಗತಿಗಳ ವರ್ಣನೆ ಮುಂದಿನ ವಾರ!!
ಅಲ್ಲಿಯವರೆಗೆ ಊಹಾಪೋಹಗಳಿಗೆ ಅವಕಾಶ.
( ಏಕ್ ಛೋಟಾಸಾ ಬ್ರೇಕ್!)
**************
ಹೆಚ್ಚಿನ ಬರಹಗಳಿಗಾಗಿ
ಬೇಲಿಯೇ ಎದ್ದು…..
ಗಣೇಶನ ಕೈಯಲ್ಲಿಯ ಲಾಡು
ನೋ ಪಾರ್ಕಿಂಗ್