- ಸುರಭಾರತಿ – ೩೩ - ಜೂನ್ 20, 2021
- ಸುರಭಾರತಿ – ೩೨ - ಜೂನ್ 13, 2021
- ಸುರಭಾರತಿ – ೩೧ - ಜೂನ್ 6, 2021
“ವಸನ ಪರಿಧೂಸರೆ ವಸಾನಾ
ನಿ ಸಹಯಮಕ್ಷಾಮಮುಖೀ ಧೃತೈಕವೇಣಿ:
ಅತಿನಿಷ್ಕರುಣಸ್ಯ ಶುಧ್ಧಶೀಲಾ ಮಮ ದೀರ್ಘಂ ವಿರಹವ್ರತಂ ಬಿಭರ್ತಿ.“
“ಇವಳು ಉಟ್ಟ ಜೊತೆ ವಸ್ತ್ರಗಳು ಧೂಳಿನಿಂದ ಮಸುಕಾಗಿವೆ. ವೃತನೇಮಗಳನ್ನು ಆಚರಿಸಿದ ಮುಖ ಬಾಡಿದೆ, ಕ್ಷೀಣವಾಗಿದೆ. ಪಾತಿವ್ರತ್ಯವನ್ನು ಸೂಚಿಸುವ ಏಕವೇಣಿಯಾಗಿರುವಳು.
ನನ್ನಂತಹ ಪತಿಯ ಸಲುವಾಗಿ, ಅತ್ಯಂತ ಕ್ರೂರವಾದ, ನಿಷ್ಕರುಣಿಯಾದ ವ್ರತ ನೇಮವನ್ನು ಆಚರಿಸಿದ ಶುದ್ಧಶೀಲಳು ಇವಳು. ಇಷ್ಟು ದೀರ್ಘ ಕಾಲ ವಿರಹ ಅನುಭಸಿದರೂ ಪತಿಪರಾಯಣೆ ಇವಳು”.
ಶಕುಂತಲೆಯನ್ನು ನೋಡಿದಾಕ್ಷಣ ದುಷ್ಯಂತನಲ್ಲಿ ಉದ್ಭವಿಸಿದ ಭಾವನೆಗಳಿವು.
ಮಗ ಸರ್ವದಮನ ಓಡಿ ಬಂದು “ನೋಡಮ್ಮ , ಅದ್ಯಾರೋ ಪರಪುರುಷ ನನ್ನನ್ನು ಪುತ್ರ ಎಂದು ಆಲಂಗಿಸುತ್ತಿರುವನು.” ಅಮ್ಮನನ್ನು ಅಪ್ಪಿಕೊಂಡು ಕೇಳುವನು.
ಉಂಗುರ ನೋಡಿ ತನಗೆ ಶಕುಂತಲೆಯ ಅಭಿಜ್ಞಾನವಾದಂತೆ ಶಕುಂತಲೆಗೂ ತಾನು ಅಭಿಜ್ಞಾತನಾಗಲಿ ಎಂದು ದುಷ್ಯಂತನ ಆಶೆ.
“ನನ್ನ ಮೋಹ ಕಳಚಿದೆ. ಹೇ ಸುಮುಖಿ, ನಿನ್ನ ಆಕರ್ಷಕ ಮುಖ ಮತ್ತೆ ಕಾಣುವಂತಾದ ಭಾಗ್ಯಶಾಲಿ ನಾನಾಗಿರುವೆ. ರೋಹಿಣೀ ಚಂದ್ರರ ಸಮಾಗಮ ಆದಂತೆ ನಮ್ಮ ಮಿಲನದ ಯೋಗ ಬಂದಿದೆ.
ಚಂದ್ರಗ್ರಹಣ ಕಳೆದಂತಾಗಿದೆ.” ಎಂದು ಶಕುಂತಲೆಯನ್ನು ಬೇಡಿಕೊಳ್ಳುವನು.
” ಜಯತು ಜಯತು ಆರ್ಯಪುತ್ರ:” ಎಂದು ಹೇಳಲು ಹೊರಟ ಶಕುಂತಲೆಯ ಕಂಠ, ಭಾವೋದ್ರೇಕದಿಂದ ಕಣ್ಣೀರು ತುಂಬಿ ಬಂದು ಮುಂದೆ ಮಾತನಾಡಲಾರದವಳಾದಳು.
” ನಿನ್ನ ಜಯತು ಎಂಬ ಒಂದು ಪದ, ಅಶ್ರುಭರಿತ ಪದ ಸಾಕು ನನಗೆ. ನಾನು ಗೆದ್ದೆ”. ಎಂದು ಬಡಬಡಿಸುತ್ತಾ ದುಷ್ಯಂತ ಶಕುಂತಲೆಯ ಕಾಲಿಗೆ ಬೀಳುವನು.
ನೋಡಿದಿರಾ ಪಶ್ಚಾತ್ತಾಪದ ಪ್ರತಿಕ್ರಿಯೆ!
ಶ್ರೀರಾಮ ಸೀತೆಯ ಕಾಲಿಗೆ ಬಿದ್ಧೇ ಮತ್ತೆ ಅಡವಿಗೆ ಕಳಿಸಿದನೇನೋ!!!
ಶ್ರೀ ಕೃಷ್ಣ ಸತ್ಯಭಾಮೆಯ ಕಾಲಿಗೆ ಬಿದ್ದರೂ ಅವಳ ಕೋಪ ಕಡಿಮೆ ಆಗಲಿಲ್ಲವಲ್ಲ !!!
” ಹೇ ಸುಂದರಿ, ನಿನ್ನನ್ನು ನಿರಾಕರಿಸಿದೆ ನಿಜ. ಮನಸ: ಸಂಮೋಹ: ಬಲವಾನ್ ಅಭೂತ …ಮೋಹ ಪೂರ್ಣವಾಗಿ ನನ್ನ ಮನಸ್ಸನ್ನು ಆವರಿಸಿತ್ತು,ಬಲಹೀನವಾಗಿತ್ತು. ಮೋಹಾಂಧಕಾರ ಪ್ರಬಲವಾಗಿ ನಾನು ಕುರುಡನಾದೆ. ಕೊರಳಿಗೆ ಬಿದ್ದ ಹೂವಿನ ಹಾರವನ್ನು ಹಾವು ಎಂದು ತೆಗೆದು ಎಸೆದೆ. ಅಪರಾಧಿ ನಾನು” ಎಂದು ದುಷ್ಯಂತ ಶಕುಂತಲೆಯಲ್ಲಿ ಕ್ಷಮೆ ಯಾಚಿಸುವನು.
ಇದನ್ನೇ ವೇದಾಂತದಲ್ಲಿ ಸರ್ಪ ರಜ್ಜು ಭ್ರಾಂತಿ ಎನ್ನುವರು. ಕತ್ತಲೆಯಲ್ಲಿ ಹಗ್ಗವನ್ನು ಕಂಡು ಸರ್ಪ ಎಂದು ಭಾವಿಸುವದು. ಜ್ಞಾನದ ಬೆಳಕು ಮೂಡಿದಾಗ ಭ್ರಾಂತಿ ದೂರಾಗೀ ರಜ್ಜು ಎಂದು ಗುರುತಿಸುವುದು. ಒಳಗಿದ್ದ ಆತ್ಮನನ್ನು , ದೇಹಭಾವಾತ್ಮದ ಅಜ್ಞಾನದಿಂದ ಗುರುತಿಸಲಾರದೇ ಹೋಗಿ ಜ್ಞಾನದ ಪ್ರಕಾಶದಲ್ಲಿ ಗುರುತಿಸುವದು ‘ಅಭಿಜ್ಞಾನ’ ಆಯಿತು.
ಇದೀಗ ದುಷ್ಯಂತ ಮಾಯೆ ಕಳೆದು ಪ್ರೇಮ ಸಾಕ್ಷಾತ್ಕಾರ ಮಾಡಿಕೊಂಡಿರುವನು. ಕಠಿಣ ಹೃದಯಿಯಾದ ತನ್ನನ್ನು ಕ್ಷಮಿಸು ಎಂದು ಅಂಗಲಾಚುತ್ತಿರುವನು.
” ಉತ್ತಿಷ್ಠತು ಆರ್ಯಪುತ್ರ: ,”
” ಬಹುಶಃ ನಾನೇ ಏನೋ ಪಾಪ ಕೃತ್ಯ ಎಸಗಿರಬೇಕು, ಅದರ ಫಲವನ್ನು ಅನುಭವಿಸಬೇಕಾಗಿ ಬಂತು. ನಿನ್ನಂಥ ಕರುಣಾಮಯಿ ಕೂಡ ಕಠಿಣ ಹೃದಯನಾಗಲು ನನ್ನ ಕರ್ಮವೇ ಕಾರಣ. ಈಗಲಾದರೂ ಈ ಹತಭಾಗ್ಯೆಯನ್ನು ಗುರುತಿಸಿದೆಯಲ್ಲಾ !!” ಎನ್ನುತ್ತಾ ಶಕುಂತಲೆ ತನ್ನ ಮಗನಿಗೆ, ದುಷ್ಯಂತನೇ ಅವನ ತಂದೆ ಎಂದು ಖಚಿತಗೊಳಿಸಿದಳು.
“ಮೋಹಾತ್ ಮಯಾ ಸುತನು ಪೂರ್ವಮ್ ಉಪೇಕ್ಷಿತಸ್ತೆ
ಯೊ ಬದ್ಧಬಿಂದು: ಪರಿಬಾಧಮಾನ:
ತಂ ತಾವದಾಕುಟಿಲಪಕ್ಷ್ಮ ವಿಲಗ್ನಮದ್ಯ, ಬಾಷ್ಪಂ ಪ್ರಮೃಜ್ಯ ವಿಗತಾನುಶಯೋ ಭವೇಯಮ್.“
“ಹೇ ಸುತನು, ನಿನ್ನ ಕಣ್ಣೀರು ನಿನ್ನ ಅಧರದ ಮೇಲೆ ಹರಿಯುತ್ತಾ ಇರುವುದನ್ನು ಅಂದು ನಾನು ನಿರ್ಲಕ್ಷ್ಯ ಮಾಡಿದೆ. ಇಂದು ಮೊದಲು ಆ ಬಿಂದುಗಳನ್ನು ಒರೆಸುವೆ. ನಿನ್ನ ಕಣ್ಣು ರೆಪ್ಪೆಗಳಿಂದ ಜಾರುತ್ತಿರುವ ಆ ಬಿಂದುಗಳನ್ನು ಒರೆಸಿ ನನ್ನ ಪಾಪವನ್ನು ಕಳೆದು ಕೊಳ್ಳಲು ಬಯಸುವೆ.” ಹೀಗೆ ಪ್ರಲಾಪಿಸುತ್ತ , ಅವಳ ಕಣ್ಣೀರು ಒರೆಸಲು ಮುಂದಾಗುವನು ದುಷ್ಯಂತ.
ಆಗ ಅವನ ಬೆರಳಲ್ಲಿಯ ಉಂಗುರ ಕಂಡು “ಇದೇ ಆ ಉಂಗುರ ನಾನು ಆಗ ತೋರಿಸಲು ಕಾತರಿಸಿದ್ದು” ಎಂದು ಉದ್ಗರಿಸಿದಳು ಶಕುಂತಲೆ. ತಮ್ಮ ಪುನರ್ಮಿಲನದ ಸಂಕೇತವಾಗಿ ಆ ಉಂಗುರವನ್ನು ಮತ್ತೆ ಅವಳ ಬೆರಳಿಗೆ ತೊಡಿಸಲು ಉದ್ಯುಕ್ತನಾದನು ದುಷ್ಯಂತ, ಬಳ್ಳಿಗೆ ಹೂವು ಮರಳಿಸಿದಂತೆ !!!
ಆಗ ಮಾತಲಿಯ ಪ್ರವೇಶ ..
ಪತ್ನಿ ಪುತ್ರ ರೊಂದಿಗೆ ಸಮಾಗಮ ಆನಂದಿಸುತ್ತಿರುವ ದುಷ್ಯಂತ ದೀರ್ಘಾಯು ಆಗಲಿ ಎಂದು ಹರಸುತ್ತಲಿರುವ ಮಾತಲಿಗೆ ಮಹಾರಾಜ ಆಜ್ಞಾಪಿಸುವನು…
“ಇಂದ್ರನ ಕೃಪೆಯಿಂದ ಈ ಅಪೂರ್ವ ಮಿಲನದ ಯೋಗ ಕೂಡಿ ಬಂದಿತು. ಇಂದ್ರನಿಗೆ ಈ ಸಂತಸದ ವಾರ್ತೆ ತಿಳಿಸೋಣವಾಗಲಿ “.
“ದೇವತೆಗಳಿಗೆ ಅರಿವಾಗದ ವಿಷಯವಾವುದು? ಮಹರ್ಷಿ ಮಾರೀಚರು ತಮ್ಮ ಭೇಟಿಗಾಗಿ ಕಾಯುತ್ತಾ ಇದ್ದಾರೆ” ಎಂಬ ವಾರ್ತೆಯನ್ನು ಮಾತಲಿ ತಿಳಿಸಿದನು.
ಆರ್ಯಪುತ್ರನೊಂದಿಗೆ ಗುರುಗಳ ಹತ್ತಿರಕ್ಕೆ ಹೋಗಲು ಶಕುಂತಲೆಗೆ ನಾಚಿಕೆ !! ಈ ಮಿಲನದ ಶುಭವೇಳೆಯಲ್ಲಿ ಗುರುಹಿರಿಯರ ದರ್ಶನ ಮಾಡುವದು ಶುಭಕರ ಎಂದು ದುಷ್ಯಂತ ಹೇಳಲಾಗಿ, ಶಕುಂತಲೆ ಪುತ್ರನೊಂದಿಗೆ ಅರಸನನ್ನು ಹಿಂಬಾಲಿಸುವಳು. ಮಾರೀಚ, ಅದಿತಿಯರನ್ನು ಕಾಣಲು ಎಲ್ಲರೂ ಮುಂದಾದರು.
ಉಂಗುರದ ದರ್ಶನದಿಂದ ಶಕುಂತಲೆಯ ಅಭಿಜ್ಞಾನ ಆಯಿತು ಅಂದು. ಇಂದು ಅವಳನ್ನು ಗುರುತಿಸಲು ಮಗ ಇರುವನು. ಅಂದು ಹೊರಗಿನ ಆಭರಣ ಬೇಕಾಯಿತು. ಇಂದು ಅಂತ:ಕರಣದ ಕುಡಿಯೇ ಎದುರು ನಿಂತಿರುವನು. ಆದಿತಿಯ ಮಗ ಇಂದ್ರ. ಈಗ ಇಂದ್ರನನ್ನು ರಕ್ಷಿಸಲು ಹೋಗಿ ಅವನ ವಜ್ರಾಯುಧವೇ ಆಭರಣವಾಗಿ ಪರಿಣಮಿಸಿ ಧರ್ಮಪತ್ನಿ ಹಾಗೂ ಪುತ್ರರ ಲಾಭವಾಗಿದೆ. ಇದರ, ಯಶಸ್ಸನ್ನು ಇಂದ್ರನಿಗೆ ಸಮರ್ಪಿಸುವನು ದುಷ್ಯಂತ. ಇದು ಅವನ ಹಿರಿಮೆ ಅಲ್ಲವೇ!!?
ಹಿಂದೆ ಮಾಡಿದ ಅಪಚಾರಕ್ಕಾಗೀ ಶಕುಂತಲೆಗೆ ದುಷ್ಯಂತನ ಮೇಲೆ ರೋಷವೂ ಇಲ್ಲ. ತನ್ನ ಕರ್ಮಫಲ ಎಂದು ಆಕೆ ಭಾವಿಸುವಳು.
ಆಯ್ತಲ್ಲ!!,
ಮೀಯಾ ಬೀಬೀ ರಾಜೀ.
ಇನ್ನು ಯಾಕೆ ತಾಪತ್ರಯ
ಕೋರ್ಟ್ ಕಚೇರೀ !!!
ಹೆಚ್ಚಿನ ಬರಹಗಳಿಗಾಗಿ
ಬೇಲಿಯೇ ಎದ್ದು…..
ಗಣೇಶನ ಕೈಯಲ್ಲಿಯ ಲಾಡು
ನೋ ಪಾರ್ಕಿಂಗ್