- ಸುರಭಾರತಿ – ೩೩ - ಜೂನ್ 20, 2021
- ಸುರಭಾರತಿ – ೩೨ - ಜೂನ್ 13, 2021
- ಸುರಭಾರತಿ – ೩೧ - ಜೂನ್ 6, 2021
ಕಾಳಿದಾಸ ಮಹಾಕವಿಯ ಅಭಿಜ್ಞಾನ ಶಾಕುಂತಲವನ್ನು ಕಳೆದ ೩೨ ವಾರಗಳಿಂದ ನಿರಂತರವಾಗಿ ‘ಸುರ ಭಾರತಿ’ ಅನ್ನುವ ಈ ಅಂಕಣದ ಮುಖೇನ ಶ್ರೀಮತಿ ತಾರಾಮತಿ ಕುಲಕರ್ಣಿ ಅವರು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ. ಈ ಸರಣಿಯ ಕೊನೆಯ ಕಂತು ಇಂದು. ೩೩ನೇ ಈ ಬರೆಹದೊಂದಿಗೆ, ಕವಿಗೆ ಕೃತಜ್ಞತೆ ಸಲ್ಲಿಸುವುದರ ಮೂಲಕ ಈ ಅಂಕಣಕ್ಕಿಂದು ಅಧಿಕೃತ ತೆರೆ ಬೀಳುತ್ತಿದೆ. ನಸುಕು.ಕಾಮ್ ಸಂಪಾದಕ ಬಳಗದ ಪರವಾಗಿ ಲೇಖಕಿ ಶ್ರೀಮತಿ ತಾರಾಮತಿ ಕುಲಕರ್ಣಿ ಅವರಿಗೂ, ಸಮಸ್ತ ಓದುಗ ಬಳಗಕ್ಕೂ ಹೃತ್ಪೂರ್ವಕ ಧನ್ಯವಾದಗಳು.
“ಪ್ರವರ್ತತಾಂ ಪ್ರಕೃತಿ ಹಿತಾಯ ಪಾರ್ಥಿವ: .
ಸರಸ್ವತೀ ಶೃತಮಹತಾಂ ಮಹೀಯತಾಮ್.
ಮಮಾಪಿ ಕ್ಷಪಯತು ನೀಲಲೋಹಿತ:
ಪುನರ್ಭವ ಪರಿಗತ ಶಕ್ತಿರಾತ್ಮಭೂ: .”
ಈ ಭರತವಾಕ್ಯದೊಂದಿಗೆ ಅಭಿಜ್ಞಾನ ಶಾಕುಂತಲ ನಾಟಕವು ಸಮಾಪ್ತಿಗೊಳ್ಳುತ್ತದೆ.
“ರಾಜನಿಗೆ ಪ್ರಜೆಗಳ ಹಿತರಕ್ಷಣೆಯೇ
ಮೊದಲ ಕರ್ತವ್ಯ ಆಗಲಿ.
ಸರಸ್ವತೀ, ವಾಗ್ದೇವೀ ಪುತ್ರರೆನಿಸುವ
ಪಂಡಿತರನ್ನು, ಕವಿಗಳನ್ನು ಗೌರವಿಸುವಂತಾಗಲಿ. ವೇದಪಾರಂಗತರ ಮನ್ನಣೆ ಜರುಗಲಿ.
ನೀಲಲೋಹಿತ ಶಿವ, ನನಗೆ ಪುನರ್ಜನ್ಮ ಕೊಡದೇ ಮೋಕ್ಷ ದಯಪಾಲಿಸಲಿ.”
ಇದು ಮಹಾರಾಜ ದುಷ್ಯಂತನು ಮಾರೀಚ ಮಹರ್ಷಿಗಳಲ್ಲಿ ಮಾಡಿಕೊಂಡ ಕೊನೆಯ ಪ್ರಾರ್ಥನೆ.
ಕನ್ನಡಿಯ ಮೇಲಿನ ಧೂಳು ಸರಿದು ದುಷ್ಯಂತ ಅಪರಾಧ ಪ್ರಜ್ಞೆಯಿಂದ ದೂರಾಗಿದ್ದಾನೆ. ಅರ್ಥ, ಕಾಮಗಳನ್ನು ಧರ್ಮದಿಂದ ಆಚರಿಸಿ ಮೋಕ್ಷ ಹೊಂದಿ ಪುರುಷಾರ್ಥ ಸಾಧನೆಗಾಗಿ ಪ್ರಯತ್ನಿಸುವಂತಾಗಲಿ ಎಂಬ ಇಚ್ಛೆ.
ಶುಭಾಶಯಗಳೊಂದಿಗೆ ನಟನೊಬ್ಬನ ಬಾಯಿಯಿಂದ ಹೊರಬರುವದು ಮತ್ತು ಹಿರಿಯರಿಂದ ಆಶೀರ್ವಾದ ಪಡೆಯಲು ಈ ಭರತವಾಕ್ಯ ನಾಟಕದ ಕೊನೆಗೆ ಹೇಳಲ್ಪಡುವದು.
ಇದು ದುಷ್ಯಂತನ ಮಗ ಭರತ ಹೇಳಿದ ಭರತವಾಕ್ಯ ಎದು ಪರಿಗಣಿಸಬಾರದು.
ನಾಟ್ಯ ಶಾಸ್ತ್ರದ ಸೃಷ್ಟಿಕರ್ತನಾದ ಭರತಮುನಿಗೆ ಗೌರವಾರ್ಥವಾಗಿ ಇದನ್ನು ” ಭರತವಾಕ್ಯ” ಎಂದು ಕರೆಯುತ್ತಾರೆ.
ನಾಟಕದ ಪ್ರಮುಖ ಪಾತ್ರಧಾರಿ ಒಬ್ಬನು, ತನ್ನ ತಂಡದ ಪರವಾಗಿ ಮಾತನಾಡುವನು.
ಈಶ್ವರನ ಪ್ರಾರ್ಥನೆಯಿಂದ ಪ್ರಾರಂಭವಾದ ನಾಟಕ ಈಶ್ವರ ಆರಾಧನೆಯಿಂದ ಮುಕ್ತಾಯ ಆಗುವದು.
“ಕ್ಷಪಯತು
ನೀಲಲೋಹಿತ:“
ನೀಲಲೋಹಿತ: ಶಿವನ ಹೆಸರು. ಕಂಠದಲ್ಲಿ ನೀಲಿ, ಜಟೆಯಲ್ಲಿ ಕೆಂಪು ಬಣ್ಣಧರಿಸಿದವನು. ಅವನು ಜನ್ಮ ಮೃತ್ಯುಗಳ ಚಕ್ರದಿಂದ ಪಾರು ಮಾಡಿ ಮೋಕ್ಷ ದಯಪಾಲಿಸಲಿ ಎಂದು ಪ್ರಾರ್ಥನೆ.
“ಮೋಹ ಮಾಯೆಗೆ ಒಳಗಾಗಿ, ಆತ್ಮವನ್ನು ಮರೆತು ದು:ಖ ಅನುಭವಿಸಿ ಮನಸು ಪಕ್ವ ಆದಾಗ, ಭಗವಂತನನ್ನು ಕಾಣಬೇಕು ಎಂಬ ಜಿಜ್ಞಾಸೆ ತೀವ್ರವಾದಾಗ, ಆತ್ಮಸಾಕ್ಷಾತ್ಕಾರ ಆಗುವದು”
ಇದು ಈ ನಾಟಕದ ಆಧ್ಯಾತ್ಮಿಕ ಪಾಠ ಎನಬಹುದು.
ಪುನರ್ಜನ್ಮ ಬೇಡವೆಂದ ಕಾಳಿದಾಸ. ಆದರೆ ಮಹಾಕವಿ ಮತ್ತೆ ಹುಟ್ಟಲಿ, ಮತ್ತೆ ಮಹಾಕಾವ್ಯಗಳು ಜನ್ಮ ತಳೆಯಲಿ ಎಂಬ ಆಶೆ. ಅವನ ಕೃತಿಗಳಿಗೆ ಪುನರ್ಜನ್ಮ ಆಗುತ್ತಲೇ ಇದೆ ಎಂದರೂ ಅತಿಶಯೋಕ್ತಿಯಲ್ಲ.
ಇಲ್ಲಿ ಏಳು ಅಂಕಗಳಲ್ಲಿ ಕಾಳಿದಾಸನ ಪ್ರತಿಭಾ ಭಾರತಿ ಎದ್ದು ಕಾಣುವಳು. ವಿಶ್ವಮೋಹಕ ಕವಿ ಕಾಳಿದಾಸ, ಮನೆ ಅಂಗಳಕ್ಕೆ, ಎದೆಯಂಗಳಕೆ ಇಳಿದಿದ್ದಾನೆ ತನ್ನ ಕೃತಿಗಳ ಮೂಲಕ.
ಮಹಿಳಾಪರ ವಾದಿಗಳು ದುಷ್ಯಂತನನ್ನು ಹೀನಾಯವಾಗಿ ಕಾಣುವರು. ಕವಿಯ ಶೃಂಗಾರ ವರ್ಣನೆಯನ್ನು ಟೀಕಿಸಿದರು ಇನ್ನು ಕೆಲವರು. ಆದರೆ ಕವಿ ಎಲ್ಲಿಯೂ ಔಚಿತ್ಯ ಸಂಯಮವನ್ನು ಮೀರಿಲ್ಲ. ಓದುಗರ ಮನಸ್ಸಿಗನುಸಾರವಾಗಿ ಅಭಿಪ್ರಾಯಗಳಲ್ಲಿ ಭಿನ್ನತೆ.
ಮನಸ್ಸಿನಂತೆ ಮಾಧವ, ನೋಟದಂತೆ ನಟರಾಜ !!
ಮನುಷ್ಯನ ಮೂಲಕ್ಕೆ ಪಾತಾಳಗರಡಿ ಹಾಕಿ, ಸ್ವಭಾವವನ್ನು ಹೊರಗೆ ತಂದಿದ್ದಾನೆ ಕವಿ.
ಶಕುಂತಲೆ ಎಲ್ಲರ ಮನೆಯ ಮಗಳಾಗಿದ್ದಾಳೆ. ಕಣ್ವರು ಹಿರಿಯರು ಪೂಜ್ಯರು, ಮೃದುಮನದ ಸಖಿಯರು, ಹತಭಾಗೀ ದುಷ್ಯಂತ, ಸಮಾಜ ಹೇಗಿರಬೇಕು ಎಂಬುದಕ್ಕೆ ಆದರ್ಶ.
ಭಾವಕೌಶಲ ಬೇಕು ಕಾಳಿದಾಸನ ಕೃತಿ ಅರಿಯಲು ಎನ್ನುತ್ತಾರೆ ಶತಾವಧಾನಿ ಆರ್.ಗಣೇಶ್ ಅವರು. ಕಾಳಿದಾಸನ ಕೃತಿ ಅರಿಯಲು ಶಬ್ದಕೋಶ ಸಾಲದು. ಕವಿಗೆ ಕೃತಜ್ಞತೆಯ ಅಭಿಜ್ಞಾನ ಸಲ್ಲಿಸೋಣ.
ಶಬ್ದದ ಸುತ್ತಿಗೆಯಿಂದ ಕಟೆದು ಕೆತ್ತಿದ ಕೃತಿಯ ಶಿಲ್ಪಿ ಕವಿ ಕಾಳಿದಾಸ. ಅದೇ ಹೊತ್ತಿಗೆ, ಅವನ ಪ್ರತಿಭಾ ಕೌಶಲದ ಈ ಕೃತಿ ಬೋಧಪ್ರದವೂ ಹೌದು.
ಒಟ್ಟಿನಲ್ಲಿ, ವ್ಯಾಸರದೇ ಕಾಲ್ಪನಿಕ ಕಥೆ, ಕಾಳಿದಾಸನದೇ ಒರಿಜಿನಲ್(original) ಕಥೆ ಅನ್ನುವಷ್ಟು ಪ್ರಸಿದ್ಧಿ ಬಂದಿತು ಈ ‘ಅಭಿಜ್ಞಾನ ಶಾಕುಂತಲಂ’ ನಾಟಕದಿಂದ ಎನಿಸುತ್ತದೆ.
೩೩ ಅಂಕಣಗಳಲ್ಲಿ ಪೂರ್ತಿಗೊಳ್ಳುತ್ತಿದೆ ಎನ್ನುವಾಗ ಪ್ರಿಯ ಶಶಿಧರ ಕೃಷ್ಣ ಹೇಳಿದ ಒಂದು ಮಾತು, ಅಭಿಮಾನನೀಯ.
“೩೩ ಕೋಟಿ ದೇವತೆಗಳ ಸನ್ನಿಧಿ ಈ ಅಂಕಣದಲ್ಲಿ ಇದೆ ,ಅಮ್ಮಮ್ಮ “
ಶಶಿಧರಗೆ ಧನ್ಯವಾದಗಳು.
ಆದರೆ ನನ್ನ ಕಣ್ಣಿಗೆ ಕಾಣುವ ನೀವೆಲ್ಲ ದೇವತೆಗಳು, ಅಂಕಣಗಳನ್ನು ಸಹನೆಯಿಂದ ಓದಿದಿರಿ. ಪ್ರೀತಿಯ ಒಲವಿನ, ಉತ್ಸಾಹದ ನೀರನ್ನು ಎರೆದು ಪೋಷಿಸಿದಿರಿ.
ಹಲವಾರು ಸಹೃದಯರ ಪ್ರೋತ್ಸಾಹದ ಮೇರೆಗೆ ಬರೆಯುವ ಕಾರ್ಯ ಪ್ರಾರಂಭಿಸಿದೆನೇನೋ ನಿಜ. ಆದರೆ ಗುರಿ ಮುಟ್ಟುವ ಯೋಗ್ಯತೆ ನನಗೆ ಇದೆಯಾ ಎಂದು ಪ್ರಶ್ನಿಸಿಕೊಂಡದ್ಧೂ ಉಂಟು.
ಅದು ಇಂದು ಪೂರ್ತಿ ಆಗಿ, ಏನಾದರೂ ಪ್ರಯೋಜನ ಇದ್ದರೆ, ಅದರ ಗೌರವ ತಮಗೇ ಸಲ್ಲುತ್ತದೆ, ಸಂಶಯವಿಲ್ಲ.
“ಕಾಯೇನ ವಾಚಾ ಮನಸೇಂದ್ರಿಯೈ: ವಾ ಬುದ್ಧ್ಯಾತ್ಮನಾ ವಾ ಕರೋಮಿ ಯದ್ಯತ್ ಸಕಲಂ ಪರಸ್ಮೈ
ನಾರಾಯಣಾಯೇತಿ ಸಮರ್ಪಯಾಮಿ.”
“ಕಾಂತೆಯಿಂದ ಸಹಿತಾದವಗೆ ಸಂತೋಷದಿ ತಾ ಕುಳಿತಿರುವವಗೆ
ಸಂತತ ಶ್ರೀ ಮದನಂತಾದ್ರೀಶ ಶಾಂತ ಮೂರುತಿ ಸರ್ವೋತ್ತಮಗೆ
ಮಂಗಳಂ ಜಯ ಮಂಗಳಂ“.
ನಾನು ತಮಗೆಲ್ಲರಿಗೂ ಚಿರ ಋಣಿ .
ಅನೇಕಾನೇಕ ಧನ್ಯವಾದಗಳು.
*********
ಎಲ್ಲಾ ೩೩ ಕಂತುಗಳನ್ನು ಒಟ್ಟಿಗೆ ಓದಲು ಈ ಕೊಂಡಿಯನ್ನು ಬಳಸಬಹುದು :
ಹೆಚ್ಚಿನ ಬರಹಗಳಿಗಾಗಿ
ಬೇಲಿಯೇ ಎದ್ದು…..
ಗಣೇಶನ ಕೈಯಲ್ಲಿಯ ಲಾಡು
ನೋ ಪಾರ್ಕಿಂಗ್