ನಸುಕು.ಕಾಮ್

ಕಸ್ತೂರಿ ಪರಿಮಳದ ಕನ್ನಡ ಪುರವಣಿ

ಶ್ರೀಮತಿ ತಾರಾಮತಿ ಕುಲಕರ್ಣಿ
ಇತ್ತೀಚಿನ ಬರಹಗಳು: ಶ್ರೀಮತಿ ತಾರಾಮತಿ ಕುಲಕರ್ಣಿ (ಎಲ್ಲವನ್ನು ಓದಿ)

ಸರಸ್ವತಿಯ ಪುತ್ರ ಕಾಳಿದಾಸ ವಿರಚಿತ ” ಅಭಿಜ್ಞಾನ ಶಾಕುಂತಲಮ್ ” ಎಂಬ ಈ ವಿಶ್ವವಿಖ್ಯಾತ ನಾಟಕದ ಹಲವು ರಸವಿವರಗಳನ್ನು ಇನ್ನು ಮುಂದಿನ ಹಲವು ಅಂಕಣಗಳಲ್ಲಿ ತೆರೆದಿಡಲು ಪ್ರಯತ್ನ ಮಾಡುವೆ.
ಕಾಲಿದಾಸನ ಇತರ ನಾಟಕಗಳಂತೆ ಇದೂ ಕೂಡ ಒಬ್ಬ ರಾಜನ ಪ್ರಣಯ‌ ಕಥೆಯನ್ನು ಒಳಗೊಂಡಿದೆ. ಈ ಭಾರತೀಯ ಕೃತಿ ೧೭೮೯ರಲ್ಲಿ ಸರ್.ವಿಲಿಯಂ ಜೋನ್ಸ್ ಅವರ ಭಾಷಾಂತರದಿಂದ ಜಗತ್ತಿಗೆ ಪರಿಚಯ ಆಗಿ ಮೆಚ್ಚುಗೆ ಪಡೆಯಿತು.

ಈ ನಾಟಕದ ಮೂಲಸಾಮಗ್ರಿ ಮಹಾಭಾರತದ ಆದಿ ಪರ್ವದಲ್ಲಿದೆ. ಕಥೆಯನ್ನು ಹೀಗೆ ಸಂಗ್ರರಹಿಸ ಬಹುದು.


ಒಂದು ದಿನ ದುಷ್ಯಂತ ಮಹಾರಾಜ ಬೇಟೆಗಾಗಿ ಹೋದಾಗ ಜಿಂಕೆಯೊಂದನ್ನು ಅಟ್ಟಿಸಿಕೊಂಡು ಹೋಗುತ್ತ ಮಾಲಿನೀ ತೀರದಲ್ಲಿದ್ದ ಕಣ್ವರ ಆಶ್ರಮ ಸೇರಿದನು.ಕಣ್ವರು ಆಶ್ರಮದಲ್ಲಿ ಇಲ್ಲವಾದ್ದರಿಂದ ಅವರ ಮಗಳು ಶಕುಂತಲೆ ಅತಿಥಿ ಸತ್ಕಾರ ಮಾಡಿದಳು.ಅವಳ ರೂಪದಿಂದ ಮೋಹಿತನಾದನು. ಕ್ಷತ್ರಿಯ ಸ್ತ್ರೀ ಅಲ್ಲದೇ ಬೇರೆ ವರ್ಣದ ಸ್ತ್ರೀಯಲ್ಲಿ ತನ್ನ ಮನಸು ಹೀಗೆ ಪ್ರವರ್ತಿಸಲಾರದು, ಆದ್ದರಿಂದ ಆಕೆ ಯಾರು? ಎಂದು ವಿಚಾರಿಸಿದಾಗ ಆಕೆ ವಿಶ್ವಾಮಿತ್ರ ಮೇನಕೆಯರ ಮಗಳು ಎಂದು ಗೊತ್ತಾಯಿತು. ದುಶ್ಯಂತ ಮದುವೆಯ ಪ್ರಸ್ತಾಪ ಮಾಡಿದಾಗ ಶಕುಂತಲೆ, ತನ್ನ ಹೊಟ್ಟೆಯಲ್ಲಿ ಹುಟ್ಟುವ ಮಗನಿಗೆ ಪಟ್ಟಕಟ್ಟುವದಾಗಿ ಪ್ರತಿಜ್ಞೆ ಮಾಡಿದರೆ ತಾನು ಈ ವಿವಾಹಕ್ಕೆ ಒಪ್ಪುವೆ ಎಂದಳು. ಅದಕ್ಕೆ ರಾಜ ಅನುಮತಿ ನೀಡಿದನು. ಗಾಂಧರ್ವ ವಿವಾಹ ಆಯಿತು. ಇದಕ್ಕೆ ಕಣ್ವರ ಆಕ್ಷೇಪಣೆ ಇರಲಾರದು ಎಂಬ ವಿಶ್ವಾಸ ದುಶ್ಯಂತನಿಗೆ. ರಾಜಯೋಗ್ಯವಾದ ವಸ್ತ್ರಭೂಷಣಾದಿಗಳನ್ನು , ಅನುಚರರನ್ನು ಕೊಟ್ಟು ಕಳುಹಿಸಿ ಆಕೆಯನ್ನು ಕರೆಸಿಕೊಳ್ಳುವದಾಗಿ ನಂಬಿಕೆ ಕೊಟ್ಟು ರಾಜಧಾನಿಗೆ ಮರಳಿದನು.

ಕಣ್ವರು ಆಶ್ರಮಕ್ಕೆ ಮರಳಿದಾಗ ಎಲ್ಲ ವೃತ್ತಾಂತ ತಿಳಿದು ಅದನ್ನು ಅನುಮೋದಿಸಿದರು.ಶಕುಂತಲೆ
ಗರ್ಭಿಣಿಯಾಗಿ ಮಗನನ್ನು ಹೆತ್ತಳು.
ಜಾತಕರ್ಮ,ನಾಮಕರಣಾದಿಗಳೂ ಆದವು.ಹೀಗೇ ಹನ್ನೆರಡು ವರ್ಷಗಳೇ ಕಳೆದರೂ ದುಷ್ಯಂತ ಕರೆಸಿಕೊಳ್ಳಲಿಲ್ವ. ಶಕುಂತಲೆಯನ್ನು ಮರೆತೇ ಬಿಟ್ಟರೂ ಅವಳು ಮಾತ್ರ ಪತಿಯನ್ನು ನೆನೆಯುತ್ತಾ ಅವನ ನಿರೀಕ್ಷೆ ಯಲ್ಲಿ ಕೊರಗಿದಳು.
ಮಗ ” ಸರ್ವದಮನ”ನು ಬಾಲ್ಯದಲ್ಲಿ
ಕೂಡ ಅತಿ ಧೀರನಾಗಿ ಕಾಡಿನ ಕ್ರೂರ ಮೃಗಗಳನ್ನು ನಿಗ್ರಹಿಸುತ್ತಿದ್ದನು.
ಅವನು ರಾಜ್ಯವನ್ನಾಳಲು ಯೋಗ್ಯ ನೆಂದೂ, ಶಕುಂತಲೆ ಪತಿ ಗೃಹಕ್ಕೆ ಹೋಗುವದು ಉಚಿತ ಎಂದೂ ಕಣ್ವರು ನಿರ್ಧರಿಸಿದರು. ಋಷಿಕುಮಾರರೊಂದಿಗೆ ಅಮ್ಮ ಮಗನನ್ನು ಕಳಿಸಿ ಕೊಡುವರು. ನಗರವನ್ನು ಸೇರಿದಾಗ ಅವರು ಆಶ್ರಮವಾಸಿಗಳ ಹಾಸ್ಯ ಮಾಡಿದಾಗ ಜುಗುಪ್ಸೆ ಇಂದ ಋಷಿಕುಮಾರರು ಶಕುಂತಲೆ
ಹಾಗೂ ಅವಳ ಮಗನನ್ನು ಅಲ್ಲಿಯೇ ಬಿಟ್ಟು ವನಕ್ಕೆ ಹಿಂತಿರುಗಿದರು. ಶಕುಂತಲೆ ಧೈರ್ಯದಿಂದ ದುಷ್ಯಂತನನ್ನು ಕಂಡು ವೃತ್ತಾಂತವನ್ನು ತಿಳಿಸಿದಳು.
ಅವಳ ಮಾತು ಕೇಳಿ ಹಿಂದಿನ ಸಂಗತಿಗಳೆಲ್ಲ ಜ್ಞಾಪಕಕ್ಕೆ ಬಂದರೂ ಹೆದರಿ ತನಗೆ ಒಂದೂ ತಿಳಿಯದು ಎಂದು ಬಿಟ್ಟನು. ಅವಮಾನಗೊಂಡ ಶಕುಂತಲೆ ,ಕೊನೆಗೆ ರಾಜನನ್ನು ಚೆನ್ನಾಗಿ ಭರ್ತ್ಸನೆ ಮಾಡಿ ತನ್ನ ಮಾತನ್ನು ಅಲಕ್ಷ್ಯ ಮಾಡಿದರೆ ಅವನ ತಲೆ ಸಹಸ್ರ ಹೋಳಾದೀತು ಎಂದು ಗರ್ಜಿಸಿದಳು.ಬಗೆ ಬಗೆಯಾಗಿ ಹಿಂದಿನ ವೃತ್ತಾಂತ ಜ್ಞಾಪಿಸಿ , ನೀತಿಯನ್ನು , ಧರ್ಮವನ್ನು ಬೋಧಿಸಿ , ತನ್ನನ್ನು ಸ್ವೀಕರಿಸದಿದ್ದರೂ ಚಿಂತೆ ಇಲ್ಲ ಮಗನನ್ನು ಪರಿಗ್ರಹಿಸಲು ಕೇಳಿಕೊಂಡಳು. ಅವನ ಮನಸಿಗೆ‌ ಯಾವದೂ ಹಿಡಿಸದೇ ಅವಳನ್ನು ವೇಶ್ಯಾ ಪುತ್ರಿ ಎಂದು ಜರೆದನು.
ಆಗ ಶಕುಂತಲೆ , ದುಷ್ಯಂತನ ಪೂರ್ವಿಕರು ಊರ್ವಶಿಯಿಂ ಹುಟ್ಟಿದ್ದನ್ನು ಜ್ಞಾಪಿಸಿದಳು.
ಕೋಪಾಗ್ನಿಯನ್ನು ಅಡಗಿಸಿಕೊಂಡು ಮಗನೊಡನೆ ಹಿಂತಿರುಗಿ ಹೊರಟಾಗ “ಶಕುಂತಲೆ ಹೇಳಿದ್ದೆಲ್ಲವೂ ಸತ್ಯ” ಎಂಬ ಅಶರೀರವಾಣಿ ಮೊಳಗುತ್ತದೆ. ಆಗ ರಾಜ ಸಿಂಹಾಸನದಿಂದ ಇಳಿದು ಬಂದು ಪತ್ನಿಯನ್ನೂ , ಮಗನನ್ನೂ ಸ್ವೀಕರಿಸುವದಾಗೀ ಹೇಳಿದನು .
ಇದು ತನಗೆ ಮೊದಲೇ ತಿಳಿದಿದ್ದರೂ
ಅವಳನ್ನು ಪರಿಗ್ರಹಿಸಿ ಬಿಟ್ಟರೆ ಲೋಕ ತನ್ನನ್ನು ಅನುಮಾನಿಸಬಹುದು.
ಪುತ್ರನೂ ಶುದ್ಧ ಎಂದು ನಂಬಿಕೆ ಬರಲಾರದು. ಅದಕ್ಕೇ ತಿರಸ್ಕರಿಸಿದೆ. ಎಂಬ ಸಮಜಾಯಿಷಿ ಕೊಟ್ಟು ಅವರನ್ನು ಬರಮಾಡಿಕೊಂಡು ಮಗ ಸರ್ವದಮನನಿಗೆ ಯೌವರಾಜ್ಯಾಭೀಷೇಕ ಮಾಡಿದನು .ಇವನೇ ಮುಂದೆ ಭರತನೆಂದು ಪ್ರಖ್ಯಾತನಾದನು.


ಹೀಗೆ ಮಹಾಭಾರತದ ” ಶಾಕುಂತಲೋಪಾಖ್ಯಾನ ” ವು ಕಾಳಿದಾಸನ ಕೈಕುಶಲತೆಯಲ್ಲಿ ” ಶಾಕುಂತಲ ನಾಟಕ ” ಆಗಿದೆ .
ಪೌರಾಣಿಕ ಕಥೆ ಒಂದು ಬಂಗಾರದ ಅದಿರು. ಅದರಿಂದ ಬಂಗಾರವನ್ನು ಕಣಕಣವಾಗಿ ಸಂಸ್ಕರಿಸಿ ನಾಟಕದ
ಪಾತ್ರಗಳಾಗಿ ಎರಕ ಹೊಯ್ದಿದ್ದಾನೆ.

ಅಪೂರ್ವವಾದ ಛಂದೋಬಧ್ಧ ಮತ್ತು ಅರ್ಥಪೂರ್ಣ ಶ್ಲೋಕಗಳು ನಾಟಕದ ತುಂಬಾ ಇವೆ.
ಕಾಳಿದಾಸನ ಕಥೆಯಲ್ಲಿ ಸ್ವಲ್ಪ ಮಾರ್ಪಾಡು ಇದೆ.
ದುರ್ವಾಸರ ಶಾಪ ಸೃಷ್ಟಿಯಿಂದ ದುಷ್ಯಂತ ಶಕುಂತಲೆಯರ ಬಣ್ಣ ಬದಲಾಯಿಸಿ ಕೊನೆಯಲ್ಲಿ ಮಾರೀಚಾಶ್ರಮವನ್ನು ಸೇರಿಸಿ,
ಮಹಾಭಾರತದಲ್ಲಿ ಮೊಟಕಾದ ಕಥೆ ರಮಣೀಯವಾಗಿ ಮುಗಿಯುವಂತೆ ಮಡಿದ್ದಾನೆ ಮಹಾಕವಿ ಕಾಳಿದಾಸ .

ಮೂಲಕಥೆಯಲ್ಲಿ ಇರುವ ದುಷ್ಯಂತ ಋಷಿ ಗೌರವದಿಂದ ಆಶ್ರಮ ಹೊಕ್ಕರೂ ರೂಪ ಮೋಹಿತನಾಗಿ ಭೋಗಲಾಲಸೆಯಿಂದ ಸ್ವಾರ್ಥಸಾಧಿಸಿ ,ಒಂದುಕಡೆ ಕಣ್ವರಿಗೆ , ಇನ್ನೊಂದು ಕಡೆ ಲೋಕಾಪವಾದಕ್ಕೆ ಹೆದರಿ ಪತಿವ್ರತೆ ಆದ ,ಅಸಹಾಯಳಾದ ಆದ ಧರ್ಮಪತ್ನಿಯನ್ನು ತ್ಯಜಿಸಿದ ಅಧರ್ಮಿ ಎನಿಸುವನು.

ಆದರೆ ಕಾಳಿದಾಸನ ನಾಟಕದಲ್ಲಿ ಅವನು ರಾಜರ್ಷಿ. ಸ್ವರ್ಗ ಮರ್ತ್ಯಗಳೆರಡರಲ್ಲೂ ಮೆಚ್ಚುಗೆ
ಪಡೆದಿದ್ದನು. ಶಕುಂತಲೆಯನ್ನು ಮರೆಯಲು ದುರ್ವಾಸರ ಶಾಪ ಅಡ್ಡ ಬಂದಿದೆ .ಉಶ್ಶಾಪದಿಂದ, ಉಂಗುರ ದ ಗುರುತಿನಿಂದ ಅವಳ ನೆನಪು ಮರುಕಳಿಸಿ ಬಹಳ ಪರಿತಾಪ ಪಟ್ಟಿರುವನು.

ದುಷ್ಯಂತನ ಪಾತ್ರ ನಿರ್ಮಾಣಕ್ಕಿಂತಲೂ ಶಕುಂತಲೆಯ ನಿರ್ಮಾಣಕ್ಕೆ ಹೆಚ್ಚು ಗಮನ ಕೊಟ್ಟಿದ್ದಾನೆ ಕವಿ. ಅವಳದೇ ಪ್ರಧಾನ ಪಾತ್ರ ,ಅದಕ್ಕೆ ” ಶಾಕುಂತಲ “ಎಂಬ ಹೆಸರು. ಅಂತ:ಪುರದಲ್ಲಿ ದುಷ್ಯಂತನಿಗೆ ಇದ್ದ ಅನೇಕ ‌ಸ್ತ್ರೀಯರ ಜೊತೆಗೆ ಇವಳನ್ನು ಸೇರಿಸಿ ಬಿಡುತ್ತಿದ್ದನೋ ಏನೋ !
ದುರ್ವಾಸರ ಶಾಪ ವೆಂಬ ಬಾಹ್ಯಯಂತ್ರದಿಂದ ಕವಿ ತನ್ನ ಕೆಲಸ ಸಾಧಿಸಿಕೊಂಡು ದುಷ್ಯಂತನ ಪಾತ್ರ ಕಾಪಾಡಿದ್ದಾನೆ. ದುಷ್ಯಂತನ ನೆನಪಿನಲ್ಲಿ ತನ್ನನ್ನೇ ತಾನು ಮರೆತುಕೊಂಡು ,ದುರ್ವಾಸರನ್ನು ಅಲಕ್ಷಿಸಿ, ಶಾಪ ತಂದು ಕೊಂಡಳು ಶಕುಂತಲೆ.

ಕಣ್ವರ ಆಶ್ರಮದಲ್ಲಿ ಪ್ರಾರಂಭವಾದ ನಾಟಕ ,ಮಾರೀಚರ ಆಶ್ರಮದಲ್ಲಿ ಮಗನನ್ನು ದುಷ್ಯಂತ ಗುರುತಿಸುವ ಹಾಗೂ ಶಕುಂತಲೆಯ ಸಮಾಗಮದೊಂದಿಗೆ ಕೊನೆಗೊಳ್ಳುತ್ತದೆ.

ಋಷಿಗಳ ಆಶ್ರಮದಲ್ಲಿ ಬರುವ ಶಕುಂತಲೆಯ ಸಖಿಯರು, ತಾಪಸಿಯರು, ಪ್ರಧಾನರಲ್ಲ. ಅವರು ಹೂವಿನ ಹಿಂದೆ ಇದ್ದ ಎಲೆಯ ಹಾಗೆ.

ಆದರೆ ಇಂತಹಾ ಗೌಣ ಪಾತ್ರಗಳ ಸೃಷ್ಟಿ , ಸ್ವಭಾವದ ವಿವರದಲ್ಲಿಯೂ ಕವಿ ಕೌಶಲವನ್ನು ತೋರಿಸಿದ್ದಾನೆ.

” ಅಭಿಜ್ಞಾನ ಶಾಕುಂತಲಮ್ ” ಈ ಹೆಸರಿನ ಔಚಿತ್ಯ ತಿಳಿಯ ಬೇಕಲ್ಲಾ !
ಅಭಿ + ಜಾನತೆ ಅಂದರೆ ಒಂದು ವಸ್ತುಸಂಕೇತದಿಂದ ಗುರುತು ಹಿಡಿಯಲ್ಪಟ್ಟವಳು ಎಂದು.
ದುರ್ವಾಸರ ಶಾಪ ಮರವು ತಂದರೂ,ಅವನು ಅವಳಿಗೆ ಕೊಟ್ಟ ಉಂಗುರ ಸಿಕ್ಕಾಗ ಎಲ್ಲ ನೆನಪಾಯಿತಲ್ಲವೇ. ಇದೇ ಅಭಿಜ್ಞಾನ.

ಕಾಳಿದಾಸನನ್ನೇ ಮರೆತ ನಮಗೆ
ಈ ಅಂಕಣ ಬರೆಯುವ ನೆಪದಿಂದ ಅವನ ಕೃತಿಯನ್ನು ಮತ್ತೆ ನೆನಪಿಗೆ ತಂದುಕೊಂಡದ್ದೂ ಒಂದು ರೀತಿಯ ” ಅಭಿಜ್ಞಾನ ” ಎಂದೇ ಹೇಳಬೇಕು!!

ಅಂದಿನ ಸಮಾಜದ ಪ್ರತಿಚಿತ್ರದಂತೆ ಇದ್ದ ಈ ನಾಟಕ ಕೆಲವು ಮೌಲ್ಯ ಗಳನ್ನು ನೆನಪಿಸಲು, ಪ್ರಕೃತಿ, ಪ್ರಾಣಿಗಳ ಮೇಲಿನ ಪ್ರೀತಿ
ವಾತಾವರಣದ ಶುದ್ಧತೆಯನ್ನು ತಿಳಿಸಿ ಕೊಡುವ, ಹೀಗೆ ಅನೇಕ‌ ಅಭಿಜ್ಞಾನಗಳಿಗೆ ಕೂಡಾ ಕಾರಣ ಆಗುತ್ತದೆ ಅಲ್ಲವೇ !!.

ಕೊನೆಯ ಅಂಕದಲ್ಲಿ ಸರ್ವದಮನನ ಕೈಯ ರಕ್ಷಾಯಂತ್ರ, ಚಕ್ರವರ್ತಿ ಲಕ್ಷಣ ಉಳ್ಳ ಮಗನನ್ನು ಗುರುತಿಸುವದೂ ಅಭಿಜ್ಞಾನವೇ !!

ಮೊದಲನೇ ಅಂಕದಲ್ಲಿ ದುಷ್ಯಂತ, ಶಕುಂತಲೆಯರ ಸಮಾಗಮ ಎಷ್ಟು ಅನಿರೀಕ್ಷಿತವೋ ಅಷ್ಟೇ ಅನಿರೀಕ್ಷಿತ ಕೊನೆಯ ಅಂಕದಲ್ಲಿ ಆಗುವ
ಪುನಸ್ಸಮಾಗಮ .ಈ ಸಮ್ಮೇಳನವು‌ ದೈವ ಸಂಕಲ್ಪಿತವಾದದ್ದು, ದೇವತೆಗಳಿಗೆ ಸಮ್ಮತವಾದದ್ದು.
ಹಾಗಾದರೆ ಕಾಳಿದಾಸ ದೈವ ಪ್ರಾಬಲ್ಯವಾದಿಯೇ ??

ನಾಟಕದ ಕೊನೆಯ ” ಭರತ ವಾಕ್ಯ” ದಲ್ಲಿ ಪ್ರಜೆಗಳ ಕಲ್ಯಾಣ ವಾಗ್ದೇವಿಯ ಉಪಾಸಕರ ಕಲ್ಯಾಣ, ಋಷಿಗಣದ ಕಲ್ಯಾಣ, ಇವೆಲ್ಲವನ್ನೂ ಸೂಚಿಸಲಾಗಿದೆ.

ಸಾಹಿತ್ಯ ಸಮಾಜದ ದರ್ಪಣವಾಗಿದೆ. ವಾಕ್ಯಂ ರಸಾತ್ಮಕಂ ಕಾವ್ಯಾತ್ಮಕ ಐಶ್ವರ್ಯ ಇಲ್ಲಿದೆ. ರಸ ಭಾವಗಳ ಮಹಾಪೂರ. ಅಲಂಕಾರ ,ಉಪಮಾನ ಉಪಮೇಯಗಳ ಸುರಿಮಳೆ, ಹೀಗೆ ಅನೇಕ ಕಾರಣಗಳಿಂದ ಈ ನಾಟಕ ರಮ್ಯವಾಗಿದೆ. ಉಪಮಾ ಕಾಲಿದಾಸಸ್ಯ ಎಂಬ ಉಕ್ತಿ ಸಾರ್ಥಕ ಗೊಂಡಿದೆ. ಈ ನಾಟಕ ದೃಶ್ಯ ರೂಪಕಗಳಿಂದ ರಮಣೀಯವಾಗಿದೆ. ಒಟ್ಟಿನಲ್ಲಿ ಒಂದು ಸಮಗ್ರ ಸಾಹಿತ್ಯ “ಅಭಿಜ್ಞಾನ ಶಾಕುಂತಲಮ್”.

ಇನ್ನು ಲೋಕೋ ಭಿನ್ನ ರುಚಿ: ಎಂಬಂತೆ ಎಲ್ಲರ ರುಚಿ ಬೇರೆ ಬೇರೆ ತಾನೇ. ಇದು ನಿರಪೇಕ್ಷ ಅಲ್ಲ. ಸಾಪೇಕ್ಷ .
ಶೃಂಗಾರ ,ಶಾಂತ ,ವೀರ ಹೀಗೆ‌
ರಸಗಳು, ರುಚಿಗಳು ಭಿನ್ನ ಭಿನ್ನ.
ಆದರೆ “ಅಭಿಜ್ಞಾನ ಶಾಕುಂತಲಮ್” ‌ಎಲ್ಲರ ಮೆಚ್ಚುಗೆ ಪಡೆದಿದ್ದು ,ಶೃಂಗಾರ ರಸ ಪ್ರಧಾನ ವಾಗಿದ್ದರಿಂದಲೇ.

ಸಾಪೇಕ್ಷ , ನಿರಪೇಕ್ಷದ ಮಾತು ಬಂದಾಗ ಒಂದು ಘಟನೆ ನೆನಪಾಗುತ್ತಿದೆ.

೧೯೬೩ ರಲ್ಲಿ ತವರಿನಲ್ಲಿ ಇದ್ದ ನನ್ನನ್ನು ಕರೆದು ಕೊಂಡು ಹೋಗಲು ” ಇವರು ” ವಿಜಾಪುರಕ್ಕೆ ಬಂದಾಗ
ಅಲ್ಲಿ ” ಸಂಗೀತ ಸೌಭದ್ರ ” ಎಂಬ ಮರಾಠಿ ನಾಟಕದ ಪ್ರದರ್ಶನ ನಡೆದಿತ್ತು. ಮರಾಠಿ ನಾಟ್ಯ ಸಂಗೀತದಲ್ಲಿ ವಿಶೇಷ ರುಚಿ ಇದ್ದ ನಮ್ಮವರು ನಾಟಕಕ್ಕೆ
ಹೋಗೋಣ ಎಂದಾಗ ನನ್ನ ಸೋದರ ಮಾವ, ತಿಕೀಟು , ಫ್ರಂಟ್ ಸೀಟುಗಳ ವ್ಯವಸ್ಥೆ ಮಾಡಿ ಕರೆದು ಕೊಂಡು ಹೋದನು.

ನಾಟಕ ಪ್ರಾರಂಭ ಆಗಿ ಸ್ವಲ್ಪ ಹೊತ್ತು ಆಯಿತು. ನನ್ನ ಮಿತ್ರನನ್ನು ಮಾತಾಡಿಸಿ ಬರ್ತೀನೀ ಎಂದು ಹೋದ ನನ್ನ ಮಾವ ,ನಾಟಕ ಮುಗಿದ ಮೇಲೆಯೇ ಬಂದದ್ದು!!

ನನ್ನವರು, ನಾಟಕದ ಪ್ರತಿ ಸಂಭಾಷಣೆ ಹಾಗೂ ಹಾಡನ್ನು ಆಸ್ವಾದಿಸುತ್ತಾ ಇರುವುದನ್ನು, ನಾನು ಆಗಾಗ ಕಣ್ಣು ತೆರೆದಾಗ ಕಂಡೆ !

” ನ ಚ ಸುಂದರೀ ಕರೂ ಕೋಪಾ
ಮಝವರೀ ಧರಿ ಅನುಕಂಪಾ “

(ಹೇ, ಸುಂದರೀ ನನ್ನ ಮೇಲೆ ಕೋಪಗೊಳ್ಳ ಬೇಡ,ನನ್ನ ಮೇಲೆ ಅನುಕಂಪ ತೋರಿಸು)

” ಪ್ರಿಯೆ ಪಹಾ, ಏತ ಉಷ: ಕಾಲ ಹಾ “
( “ಹೇ ಪ್ರಿಯೆ, ಅಲ್ಲಿ ನೋಡು, ಉಷ:ಕಾಲ ಬರುತ್ತಿದೆ.”)

ಎಂದು ಹಾಡಿ ನನ್ನನ್ನು ನಿದ್ರೆಯಿಂದ ಎಬ್ಬಿಸಿದಾಗ ಬೆಳಗಿನ ೪ ಘಂಟೆಯ
ಸಮಯ. ??

ಕಾಳಿದಾಸನ ಒಂದೊಂದು ಕಾವ್ಯವು
ಒಂದೊಂದು ಗುಣ ಪಡೆದಿವೆ. ಆದರೆ ‘ಅಭಿಜ್ಞಾನ ಶಾಕುಂತಲಮ್’ ಆ ಎಲ್ಲಾ ಗುಣಗಳನ್ನೂ ಹೊಂದಿದೆ.
ಅದ್ವಿತೀಯ ,ಮಹನೀಯ , ಅಭೂತಪೂರ್ವ ,ರಮಣೀಯ “ಎಲ್ಲದರ ಸಮಾಗಮ ಆಗಿ
” ತತ್ರರಮ್ಯಾ ಶಾಕುಂತಲಾ ” ಎಂಬುದು ಸಾರ್ಥಕವಾಗಿದೆ. ಭಾವನಾ ಪ್ರಧಾನ ಆಗಿದೆ.

ಪ್ರೇಮ‌,ಪ್ರೀತಿ ಕೇವಲ ಪ್ರಣಯಿಗಳಲ್ಲಿ ಅಷ್ಟೇ ಅಲ್ಲ ,ಅದೇ ಪ್ರೀತಿ ,ಪಶುಪಕ್ಷಿಗಳಲ್ಲಿ , ವೃಕ್ಷ ಲತೆಗಳಲ್ಲಿ ,ಸಖಿಯರಲ್ಲಿ‌ ಹೇಗಿತ್ತು ಎಂಬುದನ್ನು ತೋರಿಸುತ್ತದೆ.
ವಿಶ್ವ ಐಕ್ಯತೆಗೆ ಆದರ್ಶ ಸಂದೇಶ ಇಲ್ಲಿದೆ.

ಸರಳ ಭಾಷಾಶೈಲೀ

ಮಹಾಕಾವ್ಯ ಓದಿ ರಸಾನುಭವ ಪಡೆಯಲು ಕೆಲವು ಕಾಲ ಬೇಕಾದೀತು .ಶ್ರವಣದಿಂದನೂ ಎಲ್ಲವೂ ಸ್ಪಷ್ಟ ಆಗಲಾರದು .ಆದರೆ ದೃಶ್ಯ ರೂಪಕದ ಮಾಧ್ಯಮದಲ್ಲಿ
ದೃಶ್ಯ ,ಶ್ರವಣ ಎರಡೂ ಇರುವದರಿಂದ ಕಾವ್ಯದ ರಸಾನುಭವ ತತ್ಕಾಲವೇ ಆಗಿಬಿಡುತ್ತದೆ. ಇದು ನಾಟಕದ ಪ್ರಯೋಜನ .

ಯೌವನದ ಭರದಲ್ಲಿ ಗುರುಹಿರಿಯರ ಸಲಹೆ ಪಡೆಯದೇ ಶೀಘ್ರ ನಿರ್ಧಾರ ತೆಗೆದುಕೊಳ್ಳುವ ಶಕುಂತಲೆಗೆ, ದುಷ್ಯಂತ ತನ್ನನ್ನು ಮುಂದೆ ನಿರಾಕರಿಸಿದಾಗ , ತಾನು ಮಾಡಿದ ತಪ್ಪಿನ ಅಭಿಜ್ಞಾನ ಆಯಿತು ಎನ್ನಬಹುದು .
ಅಂತೂ ‘ಅಭಿಜ್ಞಾನ’ ಎಂಬ ಹೆಸರು ಅನೇಕ ರೀತಿಗಳಲ್ಲಿ ಸಾರ್ಥಕ ಗೊಂಡಿದೆ ಅಂತ ಅನಿಸುವುದಿಲ್ಲವೇ ?