- ಸುರಭಾರತಿ – ೩೩ - ಜೂನ್ 20, 2021
- ಸುರಭಾರತಿ – ೩೨ - ಜೂನ್ 13, 2021
- ಸುರಭಾರತಿ – ೩೧ - ಜೂನ್ 6, 2021
ಸುರಭಾರತೀ ೮ ನೆಯ ಅಂಕಣಕ್ಕೆ
ಸ್ವಾಗತ.
ಇದೇ ಈಗ ಸ್ನೇಹಿತೆಯೊಬ್ಬಳ ಫೋನ್ ಬಂತು.
” ಏನವಾ, ಮಂತ್ರಕ್ಕಿಂತ ಉಗುಳೇ ಜಾಸ್ತಿ ಆಗೇದ. ಟಿ.ವಿ.ಸೀರಿಯಲ್ಸ ನೋಡುವಾಗ ಜಾಹಿರಾತುಗಳ ಹಾವಳೀನ ಮುಗಿಯೂದಿಲ್ಲ.ಹಾಂಗ ಆಗೇದ ನಿನ್ನ ಕಥಿ! ಶಾಕುಂತಲ ನಾಟಕ ರಿಲೀಜ ಆಗ್ತದೋ ಇಲ್ಲೋ!”
ಹಂಗಾದ್ರ ಈ ಎಂಟನೇ ಅಂಕಣದಾಗ ನಾಟಕ
ರಿಲೀಜ ಮಾಡೇ ಬಿಡೋಣ ಎಂದು
ನಿರ್ಧಾರ ಮಾಡಿದೆ.
ಅಥ ಅಭಿಜ್ಞಾನ ಶಾಕುಂತಲ ಪ್ರಥಮ ಅಂಕ
ಸ್ವಲ್ಪ ತಡೀರಿ. ಸಂಸ್ಕೃತದ ಯಾವದೇ ಗ್ರಂಥ “ಅಥ” ಶಬ್ದದಿಂದ ಪ್ರಾರಂಭ ಆಗಿ, “ಇತಿ ” ಶಬ್ದದಿಂದ ಮುಕ್ತಾಯವಾಗುತ್ತದೆ. ಅಥ ಈ ಶಬ್ದ ಮಂಗಳಕರ ಎಂದು ಭಾವಿಸಲಾಗುತ್ತದೆ. ಕಾರಣ ಇದು ಬ್ರಹ್ಮನ ಮುಖದಿಂದ ಹೊರಟ ಮೊಟ್ಟ ಮೊದಲು ಶಬ್ದ. ಅದಕ್ಕೇ ಅದನ್ನು ಮಂಗಳಕರ ಎಂದು ಭಾವಿಸುವರು.
ಶಕುಂತಲ ಈ ಶಬ್ದದ ಅರ್ಥವೂ ತಿಳಿದಿರಬೇಕು. ಶಕುಂತ ಇದು ಒಂದು ಪಕ್ಷಿಯ ಹೆಸರು.
ಋಷಿ ವಿಶ್ವಾಮಿತ್ರ ಹಾಗೂ ಅಪ್ಸರೆ
ಮೇನಕಾ ಇವರಿಗೆ ಹುಟ್ಟಿದ ಮಗುವನ್ನು ಅವರಿಬ್ಬರೂ ತ್ಯಜಿಸಿ ಹೋದರಲ್ಲವೇ!
ಆ ಮಗುವನ್ನು ಶಕುಂತಲ ಪಕ್ಷಿಗಳು
ಜೋಪಾನ ಮಾಡುತ್ತವೆ.
” ಶಕುಂತಲೈ: ಲಾತಾ” ಅಂದರೆ ಪಕ್ಷಿ ಗಳಿಂದ ಲಾಲಿಸಲ್ಪಟ್ಟವಳು ಎಂದರ್ಥ. ಅನಾಥ ಮಗುವನ್ನು ಕಣ್ವ ಋಷಿಗಳು ಎತ್ತಿಕೊಂಡು ಹೋಗಿ ಮಗಳಂತೆ ಬೆಳೆಸಿದರು.
ಉಂಗುರದ ಗುರುತಿನಿಂದ ದುಷ್ಯಂತ ಗೆ ಶಕುಂತಲೆಯ ನೆನಪು ಮರುಕಳಿಸಿದ್ದರಿಂದ ‘ಅಭಿಜ್ಞಾನ ಶಾಕುಂತಲ’ ಎಂದಾಯಿತು ಎಂದು ಈ ಮೊದಲೇ ತಿಳಿಸಿರುವೆ.
ಇನ್ನೂ ಒಂದು ವಿಶ್ಲೇಷಣೆ ಅಂದರೆ, ನಾಟಕದ ಕೊನೆಯ ಅಂಕದಲ್ಲಿ ಶಕುಂತಲೆ ಅವಳ ಮಗ ಸರ್ವದಮನನಿಂದ ಗುರುತಿಸಲ್ಪಡುವಳು. ಶಕುಂತಲೆಯ ಮಗ “ಶಾಕುಂತಲ” ಎಂದೆನಿಸುವನು.
ಇದಿಷ್ಟು ಈ ನಾಟಕದ ತಲೆಬರಹದ
ಸಾರ್ಥಕತೆ.
ಅಗೋ ನೋಡಿ!!
ಗಂಟೆ ಬಾರಿಸಿತು.ಅಂಕದ ಪರದೇ ಏರಿತು.
ಮೊಟ್ಟ ಮೊದಲು ಸರ್ವಜನರ ಶುಭ ಕೋರೀ ಶಿವನ ಆರಾಧನೆ.
ಯಾ ಸೃಷ್ಟಿ: ಸ್ರಷ್ಷುರಾದ್ಯಾ ವಹತಿ
ವಿಧಿಹುತಂ ಯಾ ಹವಿರ್ಯಾ ಚ ಹೋತ್ರೀ
ಯೆ ದ್ವೇ ಕಾಲಂ ವಿಧತ್ತ: ಶೃತಿವಿಷಯಗುಣಾ ಯಾ ಸ್ಥಿತಾ ವ್ಯಾಪ್ಯ ವಿಶ್ವಮ್ ।
ಯಾಮಾಹು: ಸರ್ವಬೀಜ ಪ್ರಕೃತಿ: ಇತಿ ಯಯಾ ಪ್ರಾಣಿನ: ಪ್ರಾಣವಂತ:
ಪ್ರತ್ಯಕ್ಷಾಭಿ: ಪ್ರಪನ್ನ: ತನುಭಿ: ಅವತು ವಸ್ತಾಭಿ: ಅಷ್ಟಾಭಿ: ಈಶ: ।।
ಸರ್ವಗುಣಗಳ ಆಶ್ರಯನಾದ
ಶಿವನ ಆರಾಧನೆ ಮೊದಲಲ್ಲಿ. ಶಿವನ ಎಂಟು ರೂಪಗಳನ್ನು ತಿಳಿಸಿದ್ದಾನೆ ಕವಿ.
“ನಮ್ಮ ಕಣ್ಣಿಗೆ ಕಾಣುವ ಎಂಟು ವಸ್ತುಗಳಲ್ಲಿ ವಾಸವಾದ ಭಗವಂತ ಎಲ್ಲರನ್ನೂ ಕಾಪಾಡಲಿ.
ಮೊದಲು ಸೃಷ್ಟಿ ಆದದ್ದು ಜಲ.
ಎರಡನೇಯದು ಅಗ್ನಿ.ಅಗ್ರೆನಯತಿ ಅಂದರೆ ನಮ್ಮ ಪ್ರಾರ್ಥನೆಗಳನ್ನು ದೇವತೆಗಳಿಗೆ ತಲುಪಿಸುವವನು ಅಗ್ನಿ.ಮೂರನೇದು ಹೋತೃ,ಅಂದರೆ ಯಜ್ಞ ಮಾಡುವವನು ಯಜ್ಞಕರ್ತಾ.
ನಾಲ್ಕನೆಯವನು ಸೂರ್ಯ, ಐದು ಚಂದ್ರ,ಆರು ಆಕಾಶ,ಏಳು ಬೀಜ ಪೃಥ್ವಿ, ಎಂಟು ವಾಯು,ಶ್ವಾಸ. ಈ ಎಂಟು ಪ್ರಕೃತಿ ರೂಪಗಳಲ್ಲಿ ಸನ್ನಿಹಿತನಾದ ಶಿವ ಪ್ರಸನ್ನ ಆಗಲಿ.”
ಸಾಮಾನ್ಯವಾಗಿ ಕಾಲಿದಾಸನ ಎಲ್ಲ ಕೃತಿಗಳು ಶಿವ ಸ್ತುತಿ ಯಿಂದ ಆರಂಭ ಆಗುತ್ತವೆ. ಹಾಗೆಂದು ಕವಿ ಕೇವಲ ಶಿವಾರಾಧಕನೇ ಎನ್ನುವಂತಿಲ್ಲ.
‘ಕುಮಾರ ಸಂಭವ’, ‘ರಘುವಂಶ’ ಕೃತಿಗಳಲ್ಲಿ ಕೆಲವೆಡೆ ಬ್ರಹ್ಮ ವಿಷ್ಣು ಇವರನ್ನೂ ಆರಾಧಿಸಿದ್ದಾನೆ.
ಹೀಗೆ ನಾಟಕ “ನಾಂದೀ ಪದ್ಯ” ದಿಂದ
ಆರಂಭ ಆಗುವದು. ಆ ಮೂಲಕ ದೇವತೆಗಳನ್ನು ಸಂತೋಷ ಪಡಿಸುವದು ಎಂಬರ್ಥ.
ನಾಟಕ ಯಶಸ್ವಿಯಾಗಿ ಪೂರ್ಣಗೊಳ್ಳಲಿ,ಮಂಗಲಕರವಾಗಿ ಇರಲೀ ಎಂಬುದು ಪ್ರಾರ್ಥನೆಯ ಉದ್ದೇಶ.
“ತಥಾ ಅಪಿ ಅವಶ್ಯಂ ಕರ್ತವ್ಯಂ
ವಿಘ್ನಪ್ರಶಾಂತಯೇ”.
ಇದು ಭರತ ಮುನಿಯ ಆದೇಶ. ಪ್ರಾರ್ಥನೆ ಅವಶ್ಯವಾಗ ಮಾಡಬೇಕು.
ಈ ಮೊದಲನೇ ಸ್ತುತಿ ದೀಪಕಲಂಕಾರದಲ್ಲಿ ಇದ್ದು ಕಾವ್ಯಾರ್ಥ ಸೂಚಕವೂ ಆಗಿದ್ದು, ಆಶೀರ್ವಾದ, ನಮಸ್ಕಾರ ಕ್ರಿಯೆಯನ್ನೂ ವ್ಯಕ್ತಪಡಿಸುವದು.
ಸೂತ್ರಧಾರ ನಾಂದೀ ಪದ್ಯವನ್ನು ಹೇಳುತ್ತಾನೆ. ಇಲ್ಲಿ ಇವನೇ ಬ್ರಹ್ಮನೆಂದು ಪರಿಗಣಿಸಲ್ಪಡುವನು.
ಸೂತ್ರವನ್ನು ಹಿಡಿದವನು (ಮ್ಯಾನೇಜರ್ ) ಮುಖ್ಯ ಪಾತ್ರಧಾರೀ ಕೂಡ ಇವನೇ.
ನಾಟಕದ ಇತರ ಪ್ರಸಂಗಗಳನ್ನು, ನಟ ನಟಿಯರನ್ನು, ದೃಶ್ಯಗಳನ್ನು, ಸುವ್ಯವಸ್ಥಿತವಾಗಿ ಕಲ್ಪಿಸುತ್ತಾನೆ.
ಗೊಂಬೆಗಳ ಆಟದಲ್ಲಿ ಸೂತ್ರ, ಸೂತ್ರಧಾರನ ಕೈಯಲ್ಲಿ ಇದ್ದಹಾಗೆ ಎನ್ನಬಹುದು.
ನೇಪಥ್ಯ ಅಂದರೆ ಪರದೆಯತ್ತ ಮುಖಮಾಡಿ ನಟಿಯನ್ನು ಸಂಭೋಧಿಸುವನು.
” ಆರ್ಯೆ, ಎಲ್ಲ ವ್ಯವಸ್ಥೆ ಆಯಿತೇ? ನಟರೆಲ್ಲ ಸಿದ್ಧರಿರುವರೇ? “
ಎಂದು ಕೇಳುವನು.
ಆರ್ಯೆ ಈ ಸಂಭೋದನೆಯೆ ವಿಶಿಷ್ಟವಾದುದು. ಕುಲ, ಶೀಲ, ದಯೆ, ದಾನ, ಧರ್ಮ, ಸತ್ಯ, ಕೃತಜ್ಞತಾ ಭಾವ ಈ ಎಲ್ಲ ಗುಣದಿಂದ ಕೂಡಿದವನು ಆರ್ಯ ಎನಿಸುವನು.
ಆಗ ನಟಿಯ ಪ್ರವೇಶ. ಆಕೆ ಮುಂದೆ ಬಂದು ಎಲ್ಲವೂ ಸಿಧ್ಧವಾಗಿದೆ ಎಂದು ಸಾರುವಳು.
ಆಗ ಸೂತ್ರಧಾರ ಹೇಳುವ ಈ ಮಾತು ಮಹತ್ವದ್ದು.
“ಆರ್ಯೆ,ಅಭಿರೂಪಭೂಯಿಷ್ಠಾ ಪರಿಶದಿಯಮ್”
ಅಂದರೆ ಪ್ರೇಕ್ಷಕರು ವಿದ್ಯಾವಂತರು. ಕಾಲಿದಾಸನ ಕೃತಿಯ ರಸಾಸ್ವಾದನೆ ಮಾಡಬಲ್ಲವರು.
” ಅಭಿಜ್ಞಾನ ಶಾಕುಂತಲ” ವನ್ನು ಈಗ ಪ್ರದರ್ಶಿಸೋಣ.ಜಾಣ ಪ್ರೇಕ್ಷಕರಿಗೆ ತೃಪ್ತಿ ತರುವ ಕೃತಿಯಾಗಿರಬೇಕು. ಶೃತಿಪ್ರಸಾದನತ: ಎಂದರೆ ಅವರ ಕರ್ಣಗಳಿಗೆ ಸುಶ್ರಾವ್ಯವಾಗಿ ಇರಬೇಕು.
ನಾಟಕದ ಪ್ರಾರಂಭದಲ್ಲಿ ಗ್ರೀಷ್ಮ ಋತುವಿನ ವರ್ಣನೆ ಇದೆ.
“ಈಷದೀಷಚ್ಚುಂಬಿತಾನಿ ಭ್ರಮರೈ:
ಸುಕುಮಾರ ಕೇಸರಶಿಖಾನಿ
ಅವತಂಸಯಂತಿ ದಯಮಾನಾ:
ಪ್ರಮಾದಾ: ಶಿರೀಷಕುಸುಮಾನಿ “
ಸುಕುಮಾರ ಶಿರೀಶ ಪುಷ್ಪಗಳು ಅರಳಿವೆ. ಹೆಚ್ಚು ಮಧುವನ್ನು ಹೀರಿದರೆ ಪುಷ್ಪಗಳು ಎಲ್ಲಿ ಬಾಡಿ ಹೋಗುತ್ತವೋ ಎಂದು, ಅವುಗಳ ಸುಕುಮಾರ್ಯ ಕಾಪಾಡಲು ದುಂಬಿಗಳು ಮೆಲ್ಲಗೆ ಪುಷ್ಪಗಳನ್ನು
ಚುಂಬಿಸುತ್ತಿವೆ, ಎಂತಹಾ ಅದ್ಭುತ ಕವಿಕಲ್ಪನೆ ಅಲ್ಲವೇ.
ಮೇಲಿನ ಪದ್ಯದಲ್ಲಿ ಕವಿ ಕಾಲಿದಾಸನು ಶಿರೀಶ ಪುಷ್ಪದ ನಾಜೂಕತೆಯನ್ನು ವರ್ಣಿಸುತ್ತಾ ,ಶಕುಂತಲೆಯ ಸುಕೋಮಲತೆಯನ್ನು ಸೂಚಿಸುತ್ತಾನೆ ಎನಬಹುದು.
ಮುಂದೆ, ನಾಟಕದ ಒಂದು ಅಂಕದಲ್ಲಿ ಭ್ರಮರ ಒಂದು, ಶಿರೀಷ ಪುಷ್ಪದಂತೆ ಕೋಮಲವಾದ ಶಕುಂತಲೆಯನ್ನು
ಪೀಡಿಸುವ ಸಂದರ್ಭದಲ್ಲಿ, ಭ್ರಮರ ಅವಳ ಕಪೋಲದ ಮೇಲೆ ಮೆಲ್ಲಗೆ
ಮುತ್ತು ಕೊಡುವುದನ್ನು ಕಲ್ಪಿಸಿರುವನು. ಇದೇ ದೃಶ್ಯ ದುಷ್ಯಂತ ಶಕುಂತಲೆಯರ ಮಿಲನಕ್ಕೆ
ಕಾರಣೀಭೂತವಾಗಿದೆ
ಹೀಗೆ, ಪ್ರಕೃತಿ ವರ್ಣನೆ ಮಾಡುತ್ತ ಪರವಶನಾದ ಸೂತ್ರಧಾರ ಮತ್ತೆ ನಟಿಯನ್ನು ಕೇಳುತ್ತಾನೆ,
“ಇವತ್ತಿನ ಪ್ರದರ್ಶನ ಯಾವದು” !!
ಆಗ ನಟಿ ಅವನು ಮರೆತದ್ದನ್ನು “ನೆನಪಿಸಿದಳು” ಇಲ್ಲಿಂದಲೇ ಪ್ರಾರಂಭ ಆಯಿತೆನ್ನೋಣವೇ ‘ಅಭಿಜ್ಞಾನ’ದ ಸಾರ್ಥಕತೆ.
ಸೂತ್ರಧಾರ ಮರೆತದ್ದನ್ನು ಗುರುತಿಸಿ ಕೊಡುವ ಕೆಲಸ ನಟಿಯದಾಯಿತು.
ಮುಂದೆ ದುಷ್ಯಂತನ ಪ್ರವೇಶಕ್ಕಾಗೀ ಕಾಯೋಣವೇ!!!
ಹೆಚ್ಚಿನ ಬರಹಗಳಿಗಾಗಿ
ಬೇಲಿಯೇ ಎದ್ದು…..
ಗಣೇಶನ ಕೈಯಲ್ಲಿಯ ಲಾಡು
ನೋ ಪಾರ್ಕಿಂಗ್