- ಸುರಭಾರತಿ – ೩೩ - ಜೂನ್ 20, 2021
- ಸುರಭಾರತಿ – ೩೨ - ಜೂನ್ 13, 2021
- ಸುರಭಾರತಿ – ೩೧ - ಜೂನ್ 6, 2021
ಅಂಕಣಕ್ಕೆ ಸ್ವಾಗತ.
ದುಷ್ಯಂತ ತನ್ನ ಮನೋರಥದ ಸುಕುಮಾರ ಸುಂದರಿಯನ್ನು, ಕಲ್ಲು ಬಂಡೆಯ ಮೇಲೆ ಹೂವಿನ ಹಾಸಿಗೆ ಮೇಲೆ ಕಂಡು
“ಲಬ್ಧಂ ನೇತ್ರ ನಿರ್ವಾಣಂ“
ಎಂದು ಸಂತೋಷದಿಂದ ನಮ್ಮನ್ನೂ ನಿರ್ವಾಣಕ್ಕೆ ಕೊಂಡೊಯ್ದಂತಾಗಿದೆ !
“ಸ್ತ್ರೀ ರೂಪೋಜ್ವಲ ವರ್ಣನಾಸು ಮಹಿತ: ಶ್ರೀ ಕಾಲಿದಾಸ: ಕವಿ:
ತಸ್ಮಾತ್ ಏವ ಚ ತಸ್ಯ ಕಾವ್ಯಂ ಅಖಿಲಂ ಲೋಕಪ್ರಿಯಂ ರಾಜತೆ“
ಕವಿ ಕಾಳಿದಾಸ ಸ್ತ್ರೀ ಸೌಂದರ್ಯವನ್ನು ತನ್ನದೇ ಆದ ರೀತಿಯಲ್ಲಿ , ಉಜ್ವಲವಾದ ವರ್ಣನೆಯನ್ನು ಮಾಡುತ್ತ ಅವಳ ನೈಜ,ಸರ್ವಾಕರ್ಷಕ ಚಿತ್ರವನ್ನು ಚಿತ್ರಿಸುವಲ್ಲಿ, ಸರ್ವಶ್ರೇಷ್ಠ, ಮಹತ್ವದ ಸ್ಥಾನವನ್ನು ಸಂಪಾದಿಸಿದ್ದಾನೆ . ಅಂಗನೆಯರ ಸಾಮ್ರಾಜ್ಯದಲ್ಲಿ ನಾಯಕಿಯರು ಸೌಂದರ್ಯದ ಚಕ್ರೇಶ್ವರಿಯರು , ಚಕ್ರವರ್ತಿನಿಯರು.
ದುಷ್ಯಂತ, ಶಕುಂತಲೆಯ ಸಖಿಯರಿಂದ ಸ್ವಾಗತಿಸಲ್ಪಟ್ಟು , ಅವರ ವಿನಂತಿಯ ಮೇರೆಗೆ , ಕರುಣೆಯಿಂದ ಶಕುಂತಲೆಯ ರಕ್ಷಣೆಗೆ ಮುಂದಾದನು. ಆಗ ಶಕುಂತಲೆ ತನ್ನ ಸಖಿಯತ್ತ ನೋಡುತ್ತಾ
” ಹೇ ಸಖಿ,
ಮೊದಲೇ ಅಂತ:ಪುರದ ರಾಣಿಯರ ವಿರಹದಿಂದ ಬಳಲಿದ , ರಾಜರ್ಷಿಗೆ ಯಾಕೆ ಹೆಚ್ಚಿನ ತೊಂದರೆ ಕೊಡುತ್ತಾ ಇದ್ದೀರಾ“
ಎಂದು ಕನಿಕರ ತೋರಿಸುವಳು ರಾಜನ ಮೇಲೆ.
ಆಗ ದುಷ್ಯಂತನ ಉದ್ಗಾರ ಕೇಳಿರೀ!
“ಯದಿ ಸಮರ್ಥಯಸೆ ಮದಿರೇಕ್ಷಣೆ
ಮದನಬಾಣಹತೋಸ್ಮಿ ಹತ: ಪುನ:“
ಹೇ ಪ್ರಿಯೆ, ನನ್ನ ಹೃದಯ ಆಗಲೇ ನಿನ್ನ ವಶದಲ್ಲಿದೆ.ಮದನ ಬಾಣಗಳಿಂದ ಈಗಾಗಲೇ ನಾನು ಹತನಾಗಿದ್ದೆ. ನಿನ್ನ ಈ ಮೋಹಕ ನೋಟದಿಂದ ಮತ್ತೊಮ್ಮೆ ಹತನಾದೆ !!!
ಆಗ ಅನಸೂಯೆಗೆ ಚಿಂತೆ. ಕಾರಣ ರಾಜರು “ಬಹುವಲ್ಲಭಾ: “
ರಾಜರು ಬಹು ಪತ್ನಿಯರನ್ನು ಹೊಂದಿರುವರೆಂದು ಅವಳು ಕೇಳಿದ್ದಾಳೆ. ಅಷ್ಟು ಬಂಧುಗಳಲ್ಲಿ ತನ್ನ ಪ್ರಿಯಸಖಿ ಶಕುಂತಲೆಯ ಸ್ಥಿತಿ ಶೋಚನೀಯ ಆಗಬಾರದಲ್ಲ !!
ಆಗ ದುಷ್ಯಂತ ಹೇಳುವ ಮಾತು ಬಹಳ ಮಹತ್ವದ್ದು.
ಸಖಿಯರಿಗೆ ಭರವಸೆ ನೀಡುವನು.
“ನನಗೆ ಇಬ್ಬರೇ ಪತ್ನಿಯರು… ಒಬ್ಬಳು ಸಮುದ್ರವಸನೆಯಾದ
ಊರ್ವೀ( ಪೃಥ್ವಿ ) ಇನ್ನೊಬ್ಬಳು ನಿಮ್ಮಿಬ್ಬರ ಈ ಸಖೀ !!“
ಶಕುಂತಲೆ ತನ್ನ ವಂಶದ ಚಕ್ರವರ್ತಿಗೆ ಜನ್ಮ ಕೊಡುವವಳು…ಆದ್ದರಿಂದ ಅವಳಿಗೆ ರಾಜಧಾನಿಯಲ್ಲಿ ಪ್ರತಿಷ್ಠಿತ ಸ್ಥಾನವೇ ಕಾಯ್ದಿದೆ ಎಂಬ ಅರ್ಥದಲ್ಲಿ ಹೇಳಿರುವನು. ಇಲ್ಲಿ ” ಸಮುದ್ರ ವಸನಾ ” ಎಂದು ಸಂಬೋಧಿಸುವಲ್ಲಿ ಇನ್ನೂ ಒಂದು ವಿವರವನ್ನೂ ಕೊಡಬಹುದು.
” ಸ ಮುದ್ರ ವಸನಾ ” ಎಂದು ಶಬ್ದಗಳನ್ನು ಬಿಡಿಸಿದಾಗ ಅವಳು ಉಟ್ಟ ಬಟ್ಟೆ, ಪುಷ್ಪಗಳಿಂದ ಮುದ್ರಿತವಾಗಿದೆ ಎಂದೂ ಅರ್ಥೈಸಬಹುದು.
ಇಲ್ಲಿ ಕವಿ ಹೀಗೆ ಶ್ಲೇಷಾಲಂಕಾರ ಬಳಸಿರುವನು.
ಸಖಿಯರಿಬ್ಬರೂ, ಶಕುಂತಲೆ ಹಾಗೂ ದುಷ್ಯಂತರಿಗೆ ಏಕಾಂತ ಕಲ್ಪಿಸಬೇಕೆಂದು, ಚಿಗರೆಯ ಮರಿಯೊಂದು ತಪ್ಪಿಸಿಕೊಂಡಿದ್ದು , ಅದನ್ನು ಅದರ ತಾಯಿಯ ಹತ್ತಿರ ಕಳಿಸುವ ನೆಪ ಹೂಡೀ ,ಅಲ್ಲಿಂದ ಜಾರಿ ಹೋಗುತ್ತಾ ಹೋಗುತ್ತಾ
” ಪೃಥಿವ್ಯಾ ಯ: ಶರಣಂ
ಸ: ತವ ಸಮೀಪೇ ವರ್ತತೆ ,”
ಭೂಮಿಯನ್ನೇ ಕಾಪಾಡುವವ ನಿನ್ನ ಸಮೀಪದಲ್ಲಿ ಇರುವನು, ನೀನೇನು ಈಗ ಏಕಾಕಿ ಅಲ್ಲ ಎಂದು
ಸಖಿಯನ್ನು ಛೇಡಿಸುತ್ತ ಹೊರಟರು ಹೋದರು.
ಆಗ ದುಷ್ಯಂತ ಶಕುಂತಲೆಯ ಬಳಿಸಾರಿ
“ನಿನಗೆ ತಂಪು ನೀಡಲು ಕಮಲ ಪತ್ರದಿಂದ ಗಾಳಿ ಬೀಸಲಾ ? ಕಮಲದಂತೆ ಕೆಂಪಗಿರುವ ನಿನ್ನ ಪಾದಗಳನ್ನು ನನ್ನತೊಡೆಯ ಮೆಲೆ ಇರಿಸಿ ಹಸ್ತದಿಂದ ಮರ್ದಿಸಲಾ …ಸಂವಾಹಯಾಮಿ
ಎಂದು ಅವಳ ಆವೇಗವನ್ನು ಕಡಿಮೆ ಮಾಡಲು ಉಪಾಯ ಸೂಚಿಸುವನು. ಆಗ ಆಕೆ ಅಲ್ಲಿಂದ ಎದ್ದು ಹೋಗಲು ಪ್ರಯತ್ನಿಸಿದಾಗ
“ನೀನು ಬಳಲಿದ ಈ ಸ್ಥಿತಿ ಯಲ್ಲಿ ,ಹೂವಿನ ಹಾಸಿಗೆಯಿಂದ ಹೋಗಬಾರದು ” ಎಂದು ಶಕುಂತಲೆಯನ್ನು ತಡೆಯುವನು.
ಅವಳೂ ಸಹ ಮದನಸಂತಪ್ತಳಾಗಿದ್ದರೂ, ಸಂಯಮದಿಂದ ದುಷ್ಯಂತನನ್ನು ಎಚ್ಚರಿಸುವಳು.
“ಪೌರವ ,ರಕ್ಷ ವಿನಯಮ್ .“
ನೀನು ಪುರುವಂಶದ ಮಹಾರಾಜ ಎಂದು ನೆನಪಿಸಿ ಎಲ್ಲೆಮೀರ ಬಾರದು ಎನ್ನುವಳು .
ರಕ್ಷ ಎಂದರೆ ಇಲ್ಲಿ avoid or keep away ಎಂಬಂತೆ.
“ಅಹಂ ನ ಆತ್ಮನ: ಪ್ರಭವಾಮಿ“
ಅಂದರೆ
“ಈ ಪರಿಸ್ಥಿತಿಯಲ್ಲಿ ನನ್ನನ್ನು ನಾನು ಆಳಲಾರೆ, I am not the mistress of my person .
ನಾನು ನನ್ನ ಹೃದಯವನ್ನು ಅರ್ಪಿಸಬಲ್ಲೆ ಆದರೆ ನನ್ನನ್ನು ನಿನಗೆ ಒಪ್ಪಿಸುವ ಜವಾಬ್ದಾರಿ ನನ್ನ ತಂದೆಯದು.”
ವಯಸ್ಸಿನ ಆಕರ್ಷಣೆಯ ಭರದಲ್ಲಿ ಇಬ್ಬರೂ ದಾರಿ ತಪ್ಪುವುದಿಲ್ಲ. ವಿವೇಚನೆ ಇದೆ.
ಆಗ ದುಷ್ಯಂತನಿಗೆ ಒಂದು ಆಲೋಚನೆ ಬರುವದು.
“ಗಂಧರ್ವೇನ ವಿವಾಹೇನ ಬಹ್ವ್ಯೊ
ರಾಜರ್ಷಿ ಕನ್ಯಕಾ:
ಶ್ರೂಯಂತೆ ಪರಿಣಿತಾರತಾ:
ಪಿತೃಭಿ: ಚ ಅಭಿನಂದಿತಾ: .
“ಅನೇಕ ಪಿತೃಗಳಿಂದ ಸಮ್ಮತವಾದ , ಸ್ವೀಕರಿಸಲ್ಪಟ್ಟ ‘ಗಾಂಧರ್ವ ವಿವಾಹ’ ಮಾಡಿಕೊಳ್ಳೋಣ “
ಎಂದು ದುಷ್ಯಂತ ಸೂಚಿಸಿದನು.
‘ಗಂಧರ್ವ ವಿವಾಹ’, ವಿವಾಹದ ಎಂಟು ಪದ್ಧತಿಗಳಲ್ಲಿ ಒಂದು.
ಯುವಕ ,ಯುವತಿ ಒಬ್ಬರನ್ನೊಬ್ಬರು ಪ್ರೀತಿಸಿ ,ಗುರು ಹಿರಿಯರ ಅಪ್ಪಣೆ ಇಲ್ಲದೇ, ಸಮಾರಂಭ ಇಲ್ಲದೇ ಆಗುವದು ಗಾಂಧರ್ವ ವಿವಾಹ.
ಈ ಪದ್ದತಿ ,ಕ್ಷತ್ರಿಯರಲ್ಲಿ ಮಾತ್ರ ಹೆಚ್ಚು ಪ್ರಚಲಿತವಿತ್ತು. ಆದರೆ ಈ ವಿಧಾನದಲ್ಲಿ ಪ್ರೀತಿ ,ವಿಶ್ವಾಸ ಮುಖ್ಯವಾಗಿತ್ತು.
ಅಷ್ಟರಲ್ಲಿ ಸಖಿಯರಿಬ್ಬರೂ ಕೂಗುತ್ತಾರೆ..
” ಕತ್ತಲೆ ಆವರಿಸಿತು. ಈಗ ಚಕ್ರವಾಕಗಳು ಬೇರೆ ಬೇರೆ ಆಗಬೇಕು”
ಎಂದು ಎಚ್ಚರಿಕೆ ಕೊಡುತ್ತಾ ಮಾತಾ ಗೌತಮೀ ಬರುವುದನ್ನು ಪ್ರೇಮಿಗಳಿಗೆ ಸೂಚಿಸಿದರು.
ಸಖಿಯರ ಮುಂಜಾಗ್ರತೆ ಎಂಥದು ನೋಡಿದಿರಾ !
ಗೌತಮಿಯ ಕೈಯಲ್ಲಿ ಇವರು ಸಿಕ್ಕಿ ಹಾಕಿ ಕೊಳ್ಳಬಾರದೆಂಬ ಮುಂಜಾಗ್ರತೆ. ಗಂಡು , ಹೆಣ್ಣು ಚಕ್ರವಾಕಪಕ್ಷಿಗಳು ಹಗಲು ಹೊತ್ತಿನಲ್ಲಿ ಮಾತ್ರ ಕೂಡಿ ಇರುತ್ತವೆ. ರಾತ್ರಿ ಬೇರೆ ಬೇರೆಯಾಗಿ ವಾಸಿಸುವವು.(ಇದು ಒಂದು ಋಷಿಯ ಶಾಪದಿಂದ ಎಂದು ಕಥೆ ಇದೆ )
ಅಲ್ಲದೇ ಇನ್ನೂ ಒಂದು ಕಥೆ ಹೀಗಿದೆ
” ಶ್ರೀ ರಾಮ , ಸೀತೆಯ ವಿರಹದಿಂದ, ಪಂಪಾಸರೋವರದ ಬಳಿ ಪರಿತಪಿಸುತ್ತಿದ್ದಾಗ , ಅವನನ್ನು ನೋಡಿ ಅಲ್ಲಿ ವಾಸವಾಗಿದ್ದ ಚಕ್ರವಾಕ ಪಕ್ಷಿಗಳು ನಕ್ಕವಂತೆ. ಆಗ ರಾಮ ಸಿಟ್ಟಿನಿಂದ ಅವುಗಳಿಗೆ ರಾತ್ರಿ ವೇಳೆಯಲ್ಲಿ ಸಂಗಮ ಆಗದಿರಲಿ ಎಂದು ಶಾಪ ಕೊಟ್ಟನಂತೆ.
ರಜನಿ, ಕತ್ತಲೆ ಎಂಬ ಶಬ್ದದಿಂದ ಗೌತಮಿಯನ್ನು ಸೂಚಿಸಲಾಗಿದೆ.
ಶಕುಂತಲೆಯ ಮುಖವನ್ನು ಕೈಯಲ್ಲಿ ಹಿಡಿದರೂ , ಅಧರವನ್ನು ಚುಂಬಿಸಲಿಲ್ಲ, ಸೌಂದರ್ಯವನ್ನು ಸಮೀಪಿಸಿದ, ಆದರೆ ಇಬ್ಬರೂ ಸಂಯಮವನ್ನು ಕಾಪಾಡಿಕೊಂಡರು.
ಗೌತಮಿಯ ಆಗಮನ ತಿಳಿದು, ದುಷ್ಯಂತ ಮರೆಯಲ್ಲಿ ಸರಿದನು.
ಅವಳು ಬಂದು ಶಕುಂತಲೆಯ ಯೋಗ ಕ್ಷೇಮವನ್ನು ವಿಚಾರಿಸಿ, ದರ್ಭೆಯಿಂದ ನೀರನ್ನು ಅವಳಿಗೆ ಸಿಂಚನ ಮಾಡಿದಳು.
ಎಲ್ಲರೂ ಹೊರಡಲು ಸಿದ್ಧರಾದಾಗ, ಶಕುಂತಲೆ
” ಹೇ, ಲತೆಗಳೇ,ನೀವೂ ನನ್ನ ಸಂತಾಪಹಾರಕರು. ಆಮಂತ್ರಯೆ ,ತ್ವಾಂ ಭೂಯೋಪಿ ಪರಿಭೋಗಾಯ “
ಮತ್ತೆ ಉಪಭೋಗಿಸಲು ಕರೆಯುವೆ ಎಂದು ಸೂಚ್ಯವಾಗಿ ದುಷ್ಯಂತನಿಗೆ
ಸಂದೇಶ ತಲುಪಿಸಿ ಹೊರಡುವಳು.
ಅವರು ಹೊರಟು ಹೋದ ಮೇಲೆ ದುಷ್ಯಂತ ಮತ್ತೆ ಲತಾಮಂಟಪದ ಹತ್ತಿರ ಬಂದು , ಬಂಡೆಯ ಮೇಲೆ ಅವಳು ಮಲಗಿದ್ದರಿಂದ ಬಾಡಿದ ಹೂವಿನ ಹಾಸಿಗೆಯನ್ನು ಕಂಡ. ಶಕುಂತಲೆ ಬರೆದ ಪ್ರೇಮ ಪತ್ರ,ಅವಳು ಅದನ್ನು ಎದೆಗೆ ಒತ್ತಿ ಕೊಂಡಿದ್ದರಿಂದ ಅದಕ್ಕಂಟಿದ ,ಅವಳ ಎದೆಯ ಗಂಧವನ್ನು ಅನುಭವಿಸಿದ. ಕಮಲದ ದಂಟಿನಿಂದ ಮಾಡಿದ ಅವಳ ಕೈಯ ಕಂಕಣ ಜಾರಿ ಬಿದ್ದುದನ್ನು ಗಮನಿಸಿದನು. ಶಕುಂತಲೆಯ ಜ್ಞಾಪಕದಲ್ಲಿ ದುಷ್ಯಂತ ಮುಳುಗಿರುವಾಗ ಧ್ವನಿ ಕೇಳುತ್ತದೆ.
” ಕತ್ತಲೆ ಕವಿದು, ಯಜ್ಞವನ್ನು ಕೆಡಿಸಲು ರಾಕ್ಷಸರು ಅನೇಕ ದಿಕ್ಕು ಗಳಿಂದ ಬರುತ್ತಿದ್ದಾರೆ.ಹೇ ರಾಜನ್ ,ರಕ್ಷಿಸು “
ಈ ಕೂಗು ಕೇಳುತ್ತಲೇ, ಸ್ವಪ್ನಲೋಕದಿಂದ ಹೊರ ಬಂದು ದುಷ್ಯಂತ , ತ್ವರಿತ ಗತಿಯಿಂದ ತನ್ನ ಕರ್ತವ್ಯಗಳನ್ನು ನೆರವೇರಿಸಲು ಧಾವಿಸುತ್ತಾನೆ.
ದುಷ್ಯಂತ, ಜಿತೇಂದ್ರಿಯ , ವಿಜಿತೇಂದ್ರಿಯ ಅಲ್ಲದೆ ಕರ್ತವ್ಯ ಪ್ರಜ್ಞೆ ಸದಾ ಅವನಲ್ಲಿ ಜಾಗೃತವಾಗಿದೆ ಎಂಬುದನ್ನು ಈ ಅಂಕಣದಲ್ಲಿ ಕಾಣಬಹುದು.
ಶಕುಂತಲೆಯ ಪ್ರೇಮಪತ್ರ ಎಲ್ಲಿ ಹೋಯಿತು?!!, ಇದು ಓದುಗರಿಗೆ ಬಿಟ್ಟದ್ದು !!
ಪ್ರೇಮಪತ್ರ ಎಂದ ಕೂಡಲೇ ನನ್ನ ಮನಸು ೫೦ ,೬೦ ವರುಷಗಳ ಹಿಂದೆ ಜಾರಿತು. ತವರಿಗೆ ಹೋದಾಗ ಇನಿಯನ ಪತ್ರಕ್ಕಾಗಿ ಪೋಸ್ಟ್ ಮನ್ ನ ದಾರಿಕಾಯುವದು, ಅವನು ಯಾವದೋ ಮಾಯದಲ್ಲಿ ಹಾಕಿಹೋದ ಪತ್ರವನ್ನು ತಮ್ಮಂದಿರು ಮುಚ್ಚಿಟ್ಟು , ಕಾಡಿಸೀ ಬೇಡಿಸೀ ಕೊನೆಗೆ ಪತ್ರ handover ಮಾಡುವದು, ಅದನ್ನು ಪುಸ್ತಕದಲ್ಲಿ ಮುಚ್ಚಿ ಮತ್ತೆ ಓದುವಾಗ ಗೆಳತಿಯ ಕೈ ಗೆ ಸಿಕ್ಕಿ ಹಾಕಿಕೊಂಡದ್ದು! ಎಲ್ಲ ಚಿತ್ರಗಳು ಕಣ್ಣಮುಂದೆ ಹಾದು ಹೋದಾಗ, ತುಟಿಗಳ ಮೇಲೆ ಮುಗುಳುನಗೆ ತಾನಾಗೇ ಲಾಸ್ಯವಾಡಿತು.
ಆದರೆ ಇಂದಿನ ದಂಪತಿಗಳಲ್ಲಿ ಪತ್ರ ಬರೆಯುವ ಕಲೆಯೇ ಮಾಯವಾಯಿತಲ್ಲ ಎನಿಸಿತು.
ಮೊಬೈಲೇ ಹಂಸವಾಹನ!!
ಕಾಲಾಯ ತಸ್ಮೈ ನಮ: .
ಗಂಧರ್ವ ವಿವಾಹ ಮಾತು ಬಂದಾಗ
ಮತ್ತೊಂದು ನೆನಪಿನ ಸುರುಳಿ ಬಿಚ್ಚಿಕೊಂಡಿತು .
ಮೊಮ್ಮಗಳಿಗೆ ವರ ಹುಡುಕುತ್ತಾ ಇರುವ ಸಂದರ್ಭದಲ್ಲಿ ಅವಳೊಂದು
ಪ್ರಶ್ನೆ ಮಾಡಿದಳು.
” ಅಜ್ಜಿ ,ನೀವು ಮದುವೆಗೆ ಮುಂಚೆ ಅಜ್ಜನ ಜೊತೆ ಮಾತಾಡಿದ್ರಾ !”
ಉತ್ತರ ನಕಾರವೇ!,
” ಸರಿಯಾಗಿ ನೋಡಿದ್ದೇ ಇಲ್ಲ , ಇನ್ನ ಮಾತಾಡೂದು ಎಲ್ಲಿಂದ ಬಂತು, ಹಿರಿಯರ ಅಭಿಪ್ರಾಯ ಸ್ವೀಕಾರ ಮಾಡಿದೆವು”
ಎಂದಾಗ ಅವಳಿಗೆ ಆಶ್ಚರ್ಯವಾಯಿತು. ತನ್ನ ಕನಸಿನ ಪತಿ ಹೀಗೆ ಇರಬೇಕು, ಹಾಗೆ ಇರಬೇಕೆಂದು ಏನೆಲ್ಲಾ ಹೇಳಿದಾಗ ಬ್ರಹ್ಮದೇವರ ಹತ್ತರ ಅಮೆಜಾನ್ ಇಲ್ಲವಲ್ಲ!! order place ಮಾಡಲು!
ಎಂದಾಗ, ತಾನು ಮಾಡಿ ಆಗಿದೆ ಎಂದಾಗ ಇವಳ ಗುಟ್ಟು ಹೊರಬಂತು.
ಆದರೆ ದುಷ್ಯಂತ ಶಕುಂತಲೆಯರ ಗಾಂಧರ್ವ ವಿವಾಹದ ದಾರಿ ಹಿಡಿಯದೆ ಗುರು ಹಿರಿಯರ ಉಪಸ್ಥಿತಿಗಾಗೀ ಕಾಯ್ದರು.
ಶುಭಮಸ್ತು , ಕುರ್ಯಾತ್ ಸದಾ ಮಂಗಲಮ್ ಎಂದೆ.
ಹೆಚ್ಚಿನ ಬರಹಗಳಿಗಾಗಿ
ವಿಶ್ವ, ವಿಶಾಲೂ ಮತ್ತು ಅಧ್ಯಾತ್ಮ
ರೇಟಿಂಗ್ ಗಳ ಧೋರಣೆ
ಬೇಲಿಯೇ ಎದ್ದು…..