- ಸುರಭಾರತಿ – ೩೩ - ಜೂನ್ 20, 2021
- ಸುರಭಾರತಿ – ೩೨ - ಜೂನ್ 13, 2021
- ಸುರಭಾರತಿ – ೩೧ - ಜೂನ್ 6, 2021
ರಾಜಾ ದುಷ್ಯಂತ ಧರ್ಮಾಸನದಲ್ಲಿ ವಿರಾಜಮಾನನಾಗಿದ್ದಾನೆ. ವೈತಾಲಿಕರು ಪದ್ಧತಿಯಂತೆ ಅರಸನ ಗುಣಗಾನ ಮಾಡುವರು. ಮೊದಲನೆಯವನು ಹೀಗೆ ಹೇಳುವನು. ಈ ಶ್ಲೋಕವೂ ಸಹ ಸುಭಾಷಿತದ ಸ್ಥಾನ ಪಡೆದಿದೆ.
” ಸ್ವಸುಖನಿರಭಿಲಾಷ: ಖಿದ್ಯಸೆ ಲೋಕ ಹೇತೊ: ಪ್ರತಿದಿನಮ್ ಅಥ ವಾ ತೇ
ವೃತ್ತಿ: ಏವಂ ವಿಧೈವ.
ಅನುಭವತಿ ಹಿ ಮೂರ್ಧ್ನಾ ಪಾದಪ: ತೀವ್ರಮ್ ಉಷ್ಣಂ ಶಮಯತಿ ಪರಿತಾಪಂ ಛಾಯಯಾ ಸಂಶ್ರತಾನಾಮ್.”
“ಅರಸನಾದ ನೀನು ಸ್ವತಃ ಆಶೆ ಆಕಾಂಕ್ಷೆಗಳನ್ನು ನಿರ್ಲಕ್ಷ್ಯ ಮಾಡಿ, ಪ್ರಜೆಗಳ ಹಿತರಕ್ಷಣೆಗಾಗಿ ಶ್ರಮಿಸುವಿ. ಕರ್ತವ್ಯಪಾಲನೆ ನಿನ್ನ ದಿನಚರಿಯೇ ಆಗಿದೆ. ವೃಕ್ಷಗಳು ತಾವು ಬಿಸಿಲಿನ ತಾಪ ಸಹಿಸಿ, ತಮ್ಮ ನೆರಳನ್ನು ಆಶ್ರಯಿಸಿ ಬಂದವರಿಗೆ ನೆರಳನ್ನೂ, ತಂಪನ್ನೂ ಕೊಡುವಂತೆ ರಾಜ ಪ್ರಜೆಗಳಿಗೆ ಆಶ್ರಯದಾತನು. ದಂಡ ಧರನಾದ ಅರಸು ತಪ್ಪಿತಸ್ಥರಿಗೆ ಸರಿಯಾದ ಶಿಕ್ಷೆಯನ್ನೂ ಕೊಡುವನು. ಪ್ರಜೆಗಳ ಆಪ್ತನೂ ಆಗುವನು. “
ದುಷ್ಯಂತನ ಆಡಳಿತ ಹೇಗಿತ್ತು ಎಂಬುದರ ಚಿತ್ರಣ ಇಲ್ಲಿದೆ ಅಲ್ಲವೇ.
ಇತ್ತ ನಗರವನ್ನು ಪ್ರವೇಶಿಸಿದ ಶಾರಂಗರವಗೆ ನಗರದ ಗಜಿಬಿಜಿ ಹಿಡಿಸುವುದಿಲ್ಲ. ದೇಹಶುದ್ಧಿ, ಮನಶುದ್ಧಿ ಹೊಂದಿದ ಆಶ್ರಮವಾಸಿಗಳು ವೈರಾಗ್ಯ ಹೊಂದಿದ ಪ್ರಬುದ್ಧರು. ಅದರಲ್ಲೇ ಸುಖ ಕಂಡ ತತ್ವಜ್ಞಾನಿಗಳು.
ಅವರಿಗೆ ಶಹರದ ವಾತಾವರಣ ಕತ್ತಲೆ ಇದ್ದಂತೆ.
” ಯಸ್ಯಾಂ ಜಾಗ್ರತಿ ಭೂತಾನಿ ಸಾ ನಿಶಾ ಪಶ್ಯತೋ ಮುನೆ:”
ಭಗವದ್ಗೀತೆಯ ಎರಡನೇ ಅಧ್ಯಾಯದ (೬೯) ಶ್ಲೋಕದಲ್ಲಿ ಹೇಳಿದಂತೆ ಮುನಿಕುಮಾರರ ಪರಿಸ್ಥಿತಿ ಆಯಿತು.
ನಗರ ವಾಸಿಗಳು ಇವರ ವೇಷಭೂಷಣ ನೋಡಿ ಹಾಸ್ಯ ಮಾಡುತ್ತಿದ್ದರು. ಆದರೂ ನಗರದ ವಾತಾವರಣದಲ್ಲಿ ಒಂದಾಗಲು ಪ್ರಯತ್ನ ಮಾಡಿದರು.
ಇದೇ ಸಮಯದಲ್ಲಿ ಶಕುಂತಲೆಗೆ ತನ್ನ ಬಲಗಣ್ಣು ಹಾರಿದ ಅನುಭವ ಆಗೀ ಅಶುಭ ಸೂಚಕ ಎಂದು ಬೆಚ್ಚಿದಳು.
” ಅಹೋ , ಕಿಂ ಮೇ ವಾಮೇತರನ್ ನಯನಂ ವಿಸ್ಫುರತಿ ! “
” ನಿನ್ನ ಪತಿಯ ಕುಲದೇವತೆ ನಿನ್ನನ್ನು ರಕ್ಷಿಸಲಿ, ಸುಖವನೀಯಲೀ ‘
ಎನ್ನುತ್ತಾ, ಗೌತಮಿ ಶಕುಂತಲೆಗೆ ಧೈರ್ಯ ಕೊಡುವಳು.
ಪುರೋಹಿತರು, ಆಗಂತುಕರಿಗೆ ಅರಸನ ಪರಿಚಯ ಮಾಡಿಕೊಡುವರು.
” ಚಾತುರ್ವರ್ಣದವರಿಗೆಲ್ಲ ಆಶ್ರಯ ಕೊಟ್ಟು ಕಾಪಾಡುವ ಅರಸನೀತ “
ಇದು ದುಷ್ಯಂತನ ಪರಿಚಯ!
ಇದನ್ನು ಕೇಳಿದ ಶಾರಂಗರವ ಹೇಳಿದ ಶ್ಲೋಕವೂ ಸುಭಾಷಿತಕ್ಕೆ ಸಮಾನವಾದುದು.
” ಭವಂತಿ ನಮ್ರಾ: ತರವ: ಫಲಾಗಮೈ:
ಪವಾಂಬುಭಿ: ದೂರ ವಿಲಂಬಿನ: ಘನಾ: .
ಅನುಧ್ಧತಾ: ಸತ್ಪುರುಷಾ: ಸಮೃದ್ಧಿಭಿ: ಸ್ವಭಾವ ಏವೈಷ ಪರೋಪಕಾರಿಣಾಮ್. “
ಈ ಶ್ಲೋಕದ ತಾತ್ಪರ್ಯ, ಹೀಗಿದೆ.
“ಫಲಭರಿತವಾದ ವೃಕ್ಷಗಳು ಬಾಗುತ್ತವೆ. ಭಾಷ್ಪದಿಂದ ಭಾರವಾದ ಮೋಡಗಳು ಭೂಮಿಗೆ ಹತ್ತಿರ ತೇಲಾಡುತ್ತವೆ. ಅದರಂತೆ ಸತ್ಪುರುಷರು, ಶ್ರೀಮಂತಿಕೆಯಿಂದ ಸೊಕ್ಕದೇ ನಮ್ರತೆಯಿಂದ ಎಲ್ಲರ ಜೊತೆಗೆ ಬಾಗಿಯೇ ವರ್ತಿಸುವರು.”
ಇದು ದುಷ್ಯಂತನ ಬಗೆಗಿನ, ಋಷಿಕುಮಾರರ ಸದಭಿಪ್ರಾಯವನ್ನೇ ಸೂಚಿಸುತ್ತದೆ.
ಆಶ್ರಮವಾಸಿಗಳ ಪ್ರಸನ್ನತೆಯನ್ನು ಗಮನಿಸುತ್ತಾ ದುಷ್ಯಂತನ ದೃಷ್ಟಿ ಶಕುಂತಲೆಯ ಮೇಲೆ ಬೀಳುವದು. ಆದರೆ ಪರಸ್ತ್ರೀಯನ್ನು ಹೀಗೆ ನೋಡುವುದು ಸರಿ ಅಲ್ಲ ಎಂದುಕೊಳ್ಳುವನು ಮನದಲ್ಲಿ.
‘ಅವಗುಂಠನವತೀ’ ಆದದ್ದರಿಂದ ಶಕುಂತಲೆಯ ಮುಖ ಲಾವಣ್ಯ ಹೊರಸೂಸದಿದ್ದರೂ ಅವಳ ಬಳುಕುವ ಸುಕೋಮಲ ಶರೀರ ಬಳ್ಳಿಯಂತೆ ಕಾಣಿಸಿತು. ಅವಳ ಅವಯವಗಳ ಹೊಳಪು ಇಣುಕುತ್ತಿತ್ತು.
ಹೀಗೆ ಪರಸ್ತ್ರೀಯನ್ನು ಕೂಲಂಕಷವಾಗಿ ಗಮನಿಸುವುದು ಪಾಪ ಎಂಬುದನ್ನು ಅರಿತವ ದುಷ್ಯಂತ. ಕವಿ ಇಲ್ಲಿ ವಿವೇಕಿಯಾದ ಆದರ್ಶ ನಾಯಕ ದುಷ್ಯಂತ, ಅವನು ಒಳ್ಳೆಯ ನಡತೆಯವನು ಎಂದು ಎತ್ತಿ ಹಿಡಿಯುವ ಪ್ರಯತ್ನ ಮಾಡಿದಂತಿದೆ. ಶಕುಂತಲೆಗೆ ಆತ ಆರ್ಯಪುತ್ರ, ಗೌರವಾನ್ವಿತ.
ಗಾಬರಿಯಿಂದ ಹಾರುತ್ತಿದ್ದ ಹೃದಯವನ್ನು ಸಮಾಧಾನಗೊಳಿಸಿ ಶಕುಂತಲೆ ಧೈರ್ಯ ತುಂಬಿಕೊಳ್ಳುವಳು.
ಆಗ ಋಷಿಕುಮಾರರು,
” ವಿಜಯಸ್ವ ರಾಜನ್, ಇಷ್ಟೇನ ಯುಜ್ಯಸ್ವ “
ಎಂದು ಹರಸುವರು.
” ಆಶ್ರಮದಲ್ಲಿ ಎಲ್ಲ ಕ್ಷೇಮವೇ. ತಪಸ್ಸಿಗೆ ಅಭ್ಯಂತರ, ಅಡ್ಡಿ ಆತಂಕ ಗಳೇನಾದರೂ ಒದಗಿವೆಯೇ! ಕ್ರೂರ ಪ್ರಾಣಿಗಳು ತೊಂದರೆ ಕೊಡುತ್ತಿವೆಯಾ? “
ಎಂದೆಲ್ಲಾ ಕ್ಷೇಮ ಸಮಾಚಾರ ತಿಳಿಯ ಬಯಸಿದ ದುಷ್ಯಂತನ ಮಾತುಗಳು, ಆತ ಎಷ್ಟು ಕರ್ತವ್ಯ ಬದ್ಧ ಎನ್ನುವುದನ್ನು ತೋರಿಸುತ್ತದೆ.
“ರಾಜ ಕೆಟ್ಟರೆ ಕಾಲ ಕೆಡುವದು. ತಾನು ಎಚ್ಚರದಿಂದ ಇರಬೇಕು ” ಎಂಬ ಪ್ರಜ್ಞಾವಂತ ದುಷ್ಯಂತ. ತನ್ನಿಂದ ಆಶ್ರಮವಾಸಿಗಳಿಗೆ ತೊಂದರೆ ಆಗಬಾರದೆಂಬ ಎಚ್ಚರಿಕೆ.
ಋಷಿಕುಮಾರರೂ ನಗರದ ಗಲಭೆಯಿಂದ ಬೇಸರಗೊಂಡಿದ್ದರು. ಕಾರಣ, ನಗರ ಅವರಿಗೆ ಅಪರಿಚಿತ. ನಗರ ವಿರೋಧಿ ಆದರೂ ರಾಜವಿರೋಧಿ ಅಲ್ಲ ಶಾರಂಗರವ, ಶಾರದ್ವತರು.
ಕವಿ ಕಾಲಿದಾಸ ಆಶ್ರಮ, ನಗರ ಎರಡನ್ನೂ ಕಂಡವ. ನಗರದ ರಾಜಾಶ್ರಯದಲ್ಲಿ ನಿಂತ ಆಶ್ರಮವಾಸೀ ಕಾಲಿದಾಸ!
ಮಹಾರಾಜ ದುಷ್ಯಂತ ಉದಾರಿ, ಧರ್ಮಕ್ಕೆ ಗೌರವ ಕೊಡುವವನು. ನಯ, ವಿನಯದಿಂದ
ಋಷಿಗಳನ್ನು ಗೌರವಿಸಿದನು.
ದುಷ್ಯಂತನು
” ಅಥ, ಭಗವಾನ್ ಲೋಕ ಅನುಗ್ರಹಾಯ ಕುಶಲೀ ಕಾಶ್ಯಪ:? “
ಎಂದು ಕಣ್ವರ ಕುಶಲತೆಯ ಬಗ್ಗೆ ಪ್ರಶ್ನೆ ಮಾಡುತ್ತಾನೆ.
ಆಗ ಶಿಷ್ಯ ಹೇಳುವ ಉತ್ತರ ಕೇಳೀ
” ಸ್ವಾಧೀನ ಕುಶಲಾ: ಸಿಧ್ಧಿಮಂತ: “
ಯಜ್ಞಕ್ಕೆ ಬೇಕಾಗುವ ಕುಶವನ್ನು (ಹುಲ್ಲು) ಅತ್ಯಂತ ಜಾಗರೂಕತೆಯಿಂದ ಕತ್ತರಿಸುವ ಕುಶಲತೆ ಇರಬೇಕು.
It is a skilful ,clever job.
ಕುಶವನ್ನು ಕೀಳಲು ನದೀ ತೀರದಲ್ಲಿ ನಿತ್ಯ ಅಡ್ಡಾಡುವದರಿಂದ ಆರೋಗ್ಯ ಸದೃಢವಾಗಿ ಇರುವದು.
ಅದಕ್ಕೇ ಕುಶಲೀ ವಾ ಎಂದು ಕೇಳಿದಾಗ ಮಾನಸಿಕ ,ದೈಹಿಕ ಆರೋಗ್ಯವನ್ನು ಸೂಚಿಸುತ್ತದೆ.
ಋಷಿಗಳು ಜ್ಞಾನ, ವೈರಾಗ್ಯ ಯೋಗದಿಂದ, ಭಗವದನುಗ್ರಹದಿಂದ ಹೊಂದಿದ ಸಾಮರ್ಥ್ಯ, ಶಕ್ತಿಯನ್ನು ಪಡೆದ ಸಿದ್ಧರು. ಯಾವಾಗಲೂ ಲೋಕೋಪಕಾರಕ್ಕಾಗಿ ತಮ್ಮ ಶಕ್ತಿಯನ್ನು ವಿನಿಯೋಗಿಸುವರು.
ಕಣ್ವರು ಅಂಥವರು. ಈ ರೀತಿ ದುಷ್ಯಂತ ಅವರನ್ನು ಅನ್ವರ್ಥಕ ನಾಮದಿಂದ ಸಂಬೋಧಿಸಿದ್ದಾನೆ “ಭಗವಾನ್ “. ಅವರು ಅನಾಮಯರು ಅಂದರೆ ಮಾನಸಿಕ ಅಥವಾ ಶಾರೀರಿಕ ಅಸ್ವಸ್ಥತೆ ಇಲ್ಲದವರು.
ದುಷ್ಯಂತ ಅವರ ಯೋಗಕ್ಷೇಮ ವಿನಯದಿಂದ ವಿಚಾರಿಸಿದನಲ್ಲದೇ ಕಣ್ವರು ತನಗಾಗಿ ಏನು ಆಜ್ಞಾಪಿಸಿದ್ದಾರೆ ಎಂದು ಕೇಳಿದನು.
ಇಲ್ಲಿ ಮಹರ್ಷಿಗಳ ಬಗೆಗೆ ಅರಸನಿಗೆ ಇದ್ದ ಗೌರವ, ಪೂಜ್ಯ ಭಾವನೆಗಳನ್ನು ಗುರುತಿಸಬಹುದು.
ಶಾರಂಗರವ ಕಣ್ವರ ಸಂದೇಶವನ್ನು ತಿಳಿಸುವನು.
“ನನ್ನ ದುಹಿತರಂ, ನನ್ನ ಮಗಳನ್ನು ,(ನನ್ನ ಮನೆಯ ಸಂಪತ್ತು) ನಿನಗೆ ಒಪ್ಪಿಸುತ್ತಿರುವೆ.
ನೀನು ಯೋಗ್ಯನಾದವನೂ, ಅರ್ಹತೆ ಉಳ್ಳವನೂ ಇರುವಿ. ನಿನ್ನಂಥ ದಕ್ಷ ಪ್ರಜಾಪಾಲಕನಿರುವಾಗ ಆಶ್ರಮವಾಸಿಗಳೆಲ್ಲ ಸುಖದಿಂದ ಇರುವೆವು. ಯಜ್ಞ ಯಾಗಾದಿಗಳು ನಿಷ್ಕಂಟಕವಾಗಿ ಸಾಗಿವೆ. ಸೂರ್ಯ ಬೆಳಗುತ್ತಿರುವಾಗ ಕತ್ತಲೆಗೆ ಅವಕಾಶ ಎಲ್ಲಿ!!!
ನಿನ್ನ ಹಾಗೆಯೇ ಈ ನನ್ನ ಪುತ್ರಿ ಶಕುಂತಲೆಯೂ ಸಹ ಸದ್ಗುಣಗಳ ಮೂರ್ತಿಯೇ ಆಗಿದ್ದಾಳೆ. ವಧೂವರ ಇಬ್ಬರೂ ಸಮಾನ ಗುಣಮಟ್ಟದವರು. ಇಬ್ಬರೂ ಒಬ್ಬರನ್ನೊಬ್ಬರು ಒಪ್ಪಿಕೊಂಡು ವಿವಾಹ ಮಾಡಿಕೊಂಡಿರುವಿರಿ. ಇಂಥ ಸಮಾನಗುಣದ ವಧೂ ವರರು ಒಂದಾಗಿದ್ದಕ್ಕೆ ನನ್ನ ಸಮ್ಮತಿಯೂ ಇದೆ. ದೇವರ ಕೃಪೆಯಿಂದ ನೀವು ಒಂದಾಗಿರುವಿರಿ. ಅವಳು ನಿನ್ನ ಸಂತಾನದ ಭಾರ ಹೊತ್ತಿರುವಳು. ಧಾರ್ಮಿಕ ಕ್ರಿಯೆಗಳಲ್ಲಿ ನಿನ್ನ ಜೊತೆಗೆ ಭಾಗ ವಹಿಸಲು ಅವಳನ್ನು ಸ್ವೀಕರಿಸು “
ಇದು ಕಾಶ್ಯಪರು ದುಷ್ಯಂತ ಮಹಾರಾಜನಲ್ಲಿ ಮಾಡಿದ ವಿನಂತಿ.
ಆಗ ಹಿರಿಯಳಾದ ಗೌತಮಿಯೂ ಒಂದು ಮಾತು ಸೇರಿಸುವಳು.
“ಶಕುಂತಲೆಯೂ ತನ್ನ ಹಿರಿಯರ ಸಲಹೆಯನ್ನು, ವಿವಾಹದ ವಿಚಾರವಾಗಿ ಕೇಳಲಿಲ್ಲ. ತಾವೂ ಸಹ ಗುರುಜನರ , ಬಂಧುಗಳನ್ನು ವಿಚಾರಿಸಲಿಲ್ಲ. ನೀವಿಬ್ಬರೂ ಪರಸ್ಪರ ಮೆಚ್ಚಿಕೊಂಡು, ಸ್ವತಂತ್ರವಾಗಿ ನಿರ್ಣಯ ತೆಗೆದುಕೊಂಡಿರುವಿರಿ.”
ಇದನ್ನೆಲ್ಲ ಆಲಿಸುತ್ತಾ ಇದ್ದ ಮಹಾರಾಜ ಪ್ರತ್ಯುತ್ತರ ಕೊಡದೇ ಇದ್ದಾಗ ಶಕುಂತಲೆ ಕಳವಳಗೊಳ್ಳುವಳು.
” ಕಿಮ್ ಇದಮ್ ಉಪನ್ಯಸ್ತಮ್ “
” ಆದೇನು ನೀವು ಹೇಳುತ್ತಿರುವುದು.
ನಾನು ಇವಳನ್ನು ಸ್ವೀಕರಿಸಬೇಕೇ? “
ಎಂದು ದು಼ಷ್ಯಂತ ಆಶ್ಚರ್ಯ ಸೂಚಿಸಿದಾಗ
” ಇದೇನಿದು ಇವನ ಮಾತು ಪಾವಕ: ಖಲು , ಅಗ್ನಿಯೇ ಆಗಿದೆಯಲ್ಲಾ “
ಎಂದು ಶಕುಂತಲೆ ತನ್ನಲ್ಲೇ ಪ್ರಲಾಪಿಸುವಳು.
ಆಗ ಶಾರಂಗರವ ಸ್ವಲ್ಪ ಖಾರವಾಗೇ ಮಾತಾಡುವನು.
” ತನ್ನ ಪತಿಯ ಮನೆಯಲ್ಲೇ ಇದ್ದ ಸ್ತ್ರೀ ಪತಿವೃತೆ ಆಗಿದ್ದರೂ ಸಹ ಜನರು ಸಂಶಯದಿಂದ ಕಾಣುವರು.
ಅಂಥದು ಪರರ ಮನೆಯಲ್ಲಿ ಇದ್ದವಳನ್ನು ಆಡಿಕೊಳ್ಳದೇ ಇರಲಾರರು ಈ ಜನ. ಆದ್ದರಿಂದ, ಪತ್ನಿ ಅವಳ ಪತಿಯೊಂದಿಗೆ ಪ್ರೇಮದಿಂದ ಇರಲೀ ಬಿಡಲೀ, ಅವಳು ಗಂಡನ ಮನೆಯಲ್ಲಿಯೇ ಇರತಕ್ಕದ್ದು .”
ಆಗ ಇನ್ನೂ ಒಂದು ಆಘಾತ. ದುಷ್ಯಂತ ತಾನು ಇವಳನ್ನು ಪರಿಗ್ರಹಿಸಿದ್ದೇನೆಯೇ? ಎಂದು ಆಶ್ಚರ್ಯ ಚಕಿತನಾಗುತ್ತಾನೆ.
ಶಕುಂತಲೆ,ತನ್ನ ಹೃದಯ ಕಳವಳಗೊಂಡದ್ದರ ಕಾರಣ ಊಹಿಸುತ್ತಾಳೆ.
” ಐಶ್ವರ್ಯದ ಮದ, ಮಾಡಿದ ಕರ್ಮದಿಂದ ವಿಮುಖರಾಗುತ್ತಿದ್ದಾನೆ
ರಾಜ.” ಎಂದು ಶಾರಂಗರವ ದೂರುವನು ದಾಕ್ಷಿಣ್ಯವಿಲ್ಲದೇ !
ಇದನ್ನು ಕೇಳಿಯೂ ದುಷ್ಯಂತ ಮನಸಿನ ಸ್ಥಿಮಿತ ಕಳೆದು ಕೊಳ್ಳುವುದಿಲ್ಲ. ತನ್ನದೇ ಆದ ಘನತೆಯಿಂದ, ಶಾಂತ ರೀತಿಯಲ್ಲೇ ಮುನಿಕುಮಾರರ ಕೂಡೆ ವರ್ತಿಸುತ್ತಾನೆ.
ಆಗ ಗೌತಮಿ ಒಂದು ಸಲಹೆ ಕೊಡುವಳು.
” ಮಗಳೇ, ಲಜ್ಜೆಯನ್ನು ದೂರ ಮಾಡು. ನಿನ್ನ ಅವಗುಂಠನವನ್ನು ಸರಿಸುವೆ. ಆಗ ನಿನ್ನ ಪತಿ ನಿನ್ನನ್ನು ಗುರುತಿಸುವನು.”
ದುಷ್ಯಂತ ಗುರುತಿಸಿದನೇ?
ಮುಂದಿನ ವಾರ ತಿಳಿಯೋಣ !!
ಹೆಚ್ಚಿನ ಬರಹಗಳಿಗಾಗಿ
ಬೇಲಿಯೇ ಎದ್ದು…..
ಗಣೇಶನ ಕೈಯಲ್ಲಿಯ ಲಾಡು
ನೋ ಪಾರ್ಕಿಂಗ್