- ಸುರಭಾರತಿ – ೩೩ - ಜೂನ್ 20, 2021
- ಸುರಭಾರತಿ – ೩೨ - ಜೂನ್ 13, 2021
- ಸುರಭಾರತಿ – ೩೧ - ಜೂನ್ 6, 2021
ಗ್ರೀಷ್ಮ ಋತುವಿನ ವರ್ಣನೆಯನ್ನು ನಟಿ ಹಾಡುತ್ತಾ ಇರುವಾಗ ಆ ರಾಗದಲ್ಲಿ ಮಗ್ನನಾದ ನಟ,ಅಂದು ಆಡಲಿರುವ ನಾಟಕದ ಹೆಸರನ್ನೇ ಮರೆತಾಗ, ನಟಿ ಜ್ಞಾಪಿಸುವಳು.
” ಜಿಂಕೆಯ ಬೆನ್ನು ಹತ್ತಿ ಓಡಿದಂತೆ ನನ್ನ ಮನಸು ನಿನ್ನ ರಾಗ ಮಾಧುರ್ಯದ ಹಿಂದೆ ಸಾಗಿತ್ತು”
ಎಂದೆನ್ನುತ್ತಾ ಸೂತ್ರಧಾರನು,
ರಂಗ ಪ್ರವೇಶ ಮಾಡಲಿರುವ ಪಾತ್ರದ ಪರಿಚಯ ಮಾಡಿಕೊಡುತ್ತಾನೆ. ಇದನ್ನು ” ಪ್ರಸ್ತಾವನಾ” ಎಂದು ಕರೆಯುತ್ತಾರೆ.
” ತತ: ಪ್ರವಿಶತಿ ಮೃಗಾನುಸಾರೀ ಸಶರಚಾಪಹಸ್ತೊ ರಾಜಾ ರಥೇನ ಸೂತ: ಚ”
ಜಿಂಕೆಯ ಹಿಂದೆ ಓಡುತ್ತಿರುವ ಧನುರ್ಧಾರಿ ರಾಜ, ರಥದೊಂದಿಗೆ ಹಾಗೂ ಸೂತನೊಂದಿಗೆ ರಂಗಪ್ರವೇಶ ಮಾಡುವನು. ಸೂತ ಎಂದರೆ ಸಾರಥಿ ತಾನೇ.
ಸೂತನ ತಂದೆ ಕ್ಷತ್ರಿಯ, ಹಾಗೂ ಬ್ರಾಹ್ಮಣ ಸ್ತ್ರೀ ತಾಯಿಯಾಗಿರುತ್ತಾಳೆ. ಇದನ್ನೇ ಸಂಸ್ಕೃತದಲ್ಲಿ ” ಕ್ಷತ್ರಿಯಾದ್ವಿಪಕನ್ಯಾಯಾಂ” ಎಂದು ಹೇಳುವಾಗ ಈ ಬ್ರಾಹ್ಮಣ ಸ್ತ್ರೀ ಮದುವೆ ಆಗದವಳು ಅಂದರೆ ಕನ್ಯೆ ಆಗಿರುತ್ತಾಳೆ. ಇವಳಿಗೆ ಕ್ಷತ್ರಿಯನಿಂದ ಹುಟ್ಟಿದ ಮಗನು ” ಸೂತ ” ಎನಿಸುವನು. ” ಸೂತಾನಾಂ ಅಶ್ವ ಸಾರಥ್ಯಂ”. ಹೀಗೆ ಜಾತಿ ಸಂಕರದಿಂದ ಹುಟ್ಟಿದವನು ಸೂತನೆನಿಸಿ ರಥದ ಸಾರಥ್ಯ ಮಾಡುವನು.ಆ ಕಾಲದಲ್ಲಿ ಸಾರಥಿ ಒಳ್ಳೆಯ ಗೌರವಾನ್ವಿತ ವ್ಯಕ್ತಿ ಎಂದು ಗಣಿಸಲ್ಪಡುತ್ತಿದ್ದನು. ರಾಜಮನೆತನದಲ್ಲಿ,ಅವನಿಗೆ ಮರ್ಯಾದೆ ಇರುತ್ತಾ ಇತ್ತು. ಅನುಭವಸ್ಥನಾದ ಈತ ಸಾಮಾನ್ಯವಾಗಿ ರಾಜನಿಗಿಂತ ಹಿರಿಯನಾಗಿರುತ್ತಿದ್ದನು. ಹೀಗಾಗಿ ಸೂತನು ಅರಸನನ್ನು ಆಶೀರ್ವಾದ ಮಾಡುವ ಹಕ್ಕು ಪಡೆದವನಾಗಿದ್ದನು.
ಅದಕ್ಕೇ ಇಲ್ಲಿ ರಂಗ ಪ್ರವೇಶ ಮಾಡುತ್ತಿರುವ ಸೂತ, ಜಿಂಕೆಯನ್ನೊಮ್ಮೆ , ರಾಜನನ್ನು ಒಮ್ಮೆ ಅವಲೋಕಿಸಿ
“ಆಯುಷ್ಮನ್” ಎಂದು ಸಂಭೋಧಿಸುವನು (Long lived Sir ಎಂದು ಹೇಳಿದಂತೆ )
“ಕೃಷ್ಣಸಾರೆ ದದಚ್ಚಕ್ಷು: ತ್ವಯಿ ಚ ಅಧಿಜ್ಯಕಾರ್ಮುಕೆ ಮೃಗಾನುಸಾರಿಣಂ ಸಾಕ್ಷಾತ್ ಪಶ್ಯಾಮಿ ಇವ ಪಿನಾಕಿನಮ್.”
ಇದು ಸೂತನಾಡಿದ ಮಾತು.
” ನನ್ನ ಒಂದು ಕಣ್ಣು ಹರಿಣದ ಮೇಲಿದ್ದರೆ ಇನ್ನೊಂದು ಕಣ್ಣು ಧನುರ್ಧಾರಿಯಾದ ನಿನ್ನನ್ನು ವೀಕ್ಷಿಸಿ ದಾಗ ಸಾಕ್ಷಾತ್ ಪಿನಾಕಿಧರನೇ ಜಿಂಕೆಯನ್ನು ಅಟ್ಟಿಸಿಕೊಂಡು ಹೋಗುವಂತಿದೆ”
ಎಂದು ರಾಜನನ್ನು ವರ್ಣಿಸುತ್ತಾನೆ.
ಹಾಗಾದರೆ ,ಯಾವಾಗಲೂ ಡಮರು, ಭಿಕ್ಷಾ ಪಾತ್ರೆಯನ್ನು ಮತ್ತು ತ್ರಿಶೂಲ ಹಿಡಿಯುವ ಶಿವ ಧನುರ್ಧಾರೀ ಆದದ್ದು ಯಾವಾಗ ಎಂದು ಆಶ್ಚರ್ಯ ಆಗುವುದು.
ದಕ್ಷಪ್ರಜಾಪತಿ ಅಶ್ವಮೇಧ ಯಾಗ ಮಾಡಿದಾಗ ಮಗಳಾದ ಸತಿಯನ್ನು , ಅಳಿಯನಾದ ಶಿವನನ್ನು ಆಹ್ವಾನಿಸಿಲಿಲ್ಲ ಅಲ್ಲವೇ? ಸತಿ ಒಬ್ಬಳೇ
ಯಾಗಕ್ಕೆ ಹೋದಾಗ ತಂದೆ ಅವಮಾನ ಗೊಳಿಸಲು,ಅವಳು ಓಡಿಹೋಗಲು ಪ್ರಯತ್ನ ಮಾಡಿದಾಗ, ಪ್ರಜಾಪತಿ ಸಾರಂಗದ ವೇಷಧಾರಣ ಮಾಡಿದನು. ಇದನ್ನು ತಿಳಿದ ಶಿವ, ಬೇಟೆಗಾರನಾಗೀ ಸಾರಂಗದ ಬೆನ್ನಟ್ಟಿ, ಅದರಮೇಲೆ ಬಾಣ ಪ್ರಯೋಗ ಮಾಡಿದನು.
ಶಿವನ ಈ ರೂಪವನ್ನು , ಸೂತನ ಮಾತಿನ ದ್ವಾರಾ ನೆನಪಿಸಿಕೊಡುತ್ತಾನೆ ಕವಿ ಕಾಲಿದಾಸ !
ಪ್ರಸ್ತುತ ದೃಶ್ಯದಲ್ಲಿ,ಸಾರಂಗವನ್ನು ರಾಜಾ ದುಷ್ಯಂತ ಬೆನ್ನಟ್ಟಿರುವನು. ಮುಂದೆ ಓಡುತ್ತಿರುವ ಜಿಂಕೆ ಕಣ್ಮರೆಯಾದಾಗ ದುಷ್ಯಂತನು ಸವಿಸ್ಮಯವಾಗಿ ಆಡಿದ ಮಾತು ಹೀಗಿದೆ.
” ಗ್ರೀವಾಭಂಗಾಭಿರಾಮಮ್ ಮುಹುರನುಪತತಿ ಸ್ಯಂದನೆ ದತ್ತದೃಷ್ಟಿ: .
ಪಶ್ಚಾರ್ಧೇನಪ್ರವಿಷ್ಟ: ಶರಪತನಭಯಾದ್ ಭೂಯಸಾ ಪೂರ್ವಕಾಯಮ್.
ದರ್ಭೈ:ಅಧಿವಿಲೀಢೈ: ಶ್ರಮವಿವೃತಮುಖರಂಶಿಭಿ: ಕೀರ್ಣವರ್ತ್ಮಾ
ಪಶ್ಯೋದಗ್ರಪ್ಲುತತ್ವಾದ್ವಿಯತಿ ಬಹುಣರಂ ಸ್ತೋಕಮ್ ಊರ್ವ್ಯಾ ಪ್ರಯಾತಿ”
ಇದು ಮೊದಲನೆ ಅಂಕದ ಅತಿ ಪ್ರಮುಖವಾದ ಶ್ಲೋಕವು.
ಸಾರಂಗವು ಭಯದಿಂದ ಓಡುತ್ತ ತನ್ನ ಕತ್ತನ್ನು ಹೊರಳಿಸಿ ನೋಡುತ್ತಲಿದೆ. ಅದು ಅರ್ಧ ಅರ್ಧ ತಿಂದ ದರ್ಭೆ ಹುಲ್ಲು ಅದರ ಬಾಯಿಯಿಂದ ಜಾರುತ್ತಿದೆ. ವೇಗದಿಂದ ಓಡುತ್ತಿರುವ ಜಿಂಕೆಯ ಕಾಲುಗಳು ನೆಲದಮೇಲೆ ಕಾಣುತ್ತಿಲ್ಲ. ದೇಹ ಆಕಾಶದತ್ತ ಜಿಗಿಯುತ್ತಿದೆ. ನೋಡು ನೋಡುತ್ತಿದ್ದಂತೆ ಜಿಂಕೆ ಮಾಯವಾಗಿ ಬಿಡುತ್ತದೆ. ರಾಜನಿಗೆ ವಿಸ್ಮಯವಾಗಿದೆ.
ಸಾರಂಗವು ತನ್ನ ಕತ್ತನ್ನು ಹೊರಳಿಸಿ ಹಿಂದೆ ಭಯದಿಂದ ನೋಡುತ್ತಾ ಮುಂದೆ ಸಾಗುತ್ತಿದೆ.ಆಶ್ರಮದ ದಾರಿ ಸರಳವಾಗಿ ಇಲ್ಲ. ಕಲ್ಲು ಬಂಡೆಗಳಿಂದ ತುಂಬಿದೆ. ಇಂಥ ದಾರಿಯಲ್ಲಿ ಎದುರಿಗೆ ನೋಡದೇ, ಹಿಂದೆ ನೋಡುತ್ತಾ ಸಾಗಿದರೆ ಹಳ್ಳದಲ್ಲಿ ಬೀಳುವದು ಖಂಡಿತ.
ಈ ಮಾತಿನಿಂದ ಕವಿ ನಮ್ಮನ್ನೂ ಎಚ್ಚರಿಸಿದ್ದಾನೆ ಅನಬೇಕು ಅಲ್ಲವೇ?.
ಅದೂ ಅಲ್ಲದೆ ಶಕುಂತಲೆ ಮುಂದಾಲೋಚನೆ ಇಲ್ಲದೇ ನಿರ್ಣಯ ತೆಗೆದುಕೊಂಡು ದು:ಖಕ್ಕೆ ಈಡಾಗುವ ಮುನ್ಸೂಚನೆಯನ್ನು ಕೊಡುವ ಕಾವ್ಯ ತಂತ್ರ ಇಲ್ಲಿದೆ ಅನಿಸುವದು.
ಈ ಶ್ಲೋಕವು ಭಯಾನಕ ರಸದ ಉದಾಹರಣೆ ಎಂದು ಅಭಿಪ್ರಾಯ.
ಈ ಶ್ಲೋಕಾರ್ಥ ನಮಗೂ ಪಾಠ. ಭೂತಕಾಲ ಬೇಡ, ವರ್ತಮಾನದಲ್ಲಿ ಇರುವದು ಕ್ಷೇಮ.
ಕಲ್ಲು ಗುಂಡುಗಳಿದ್ದ ಮಾರ್ಗವಾದ್ದರಿಂದ, ಸೂತನು ರಥದ ವೇಗವನ್ನು ತಗ್ಗಿಸಿದನಾದ್ದರಿಂದ ವೇಗದಿಂದ ಓಡಿದ ಜಿಂಕೆ ಕಣ್ಮರೆ ಆಯಿತೆಂದು ಸೂತ ಹೇಳುವನು.
ರಥದ ವೇಗ ಹೆಚ್ಚಿಸಲು ದುಷ್ಯಂತ ಹೇಳುವಾಗ ಕೆಲವು ತಪಸ್ವಿಗಳು ಮಧ್ಯದಲ್ಲಿ ನಿಂತಿರುವದು ಕಾಣುತ್ತದೆ.
ಅವರು ಆಶ್ರಮವಾಸಿಗಳಾದ ವೈಖಾನಸರು. ಅವರೆಲ್ಲ ಕೈ ಎತ್ತಿ ಕೇಳಿಕೊಳ್ಳುತ್ತಾ ಇದ್ದಾರೆ.
“ನ ಖಲು ನ ಖಲು ಬಾಣ: ಸಂನಿಪಾತ್ಯ: ಅಯಮ್ ಅಸ್ಮಿನ್ ಮೃದುನಿ ಮೃಗ ಶರೀರೆ ಪುಷ್ಪರಾಶಾ ಇವ ಅಗ್ನಿ: “
” ಹೇ ರಾಜನ್ ,ಇದು ಆಶ್ರಮದಲ್ಲಿ ಸಾಕಿದ ಮೃಗವು, ಕೊಲ್ಲಕೂಡದು.
ಈ ಮೃದುಶರೀರದ ಹರಿಣಿಯ ಮೇಲೆ ಮಾಡುವ ಬಾಣ ಪ್ರಯೋಗ, ಪುಷ್ಪ ರಾಶಿಯ ಮೇಲೆ ಬೆಂಕಿಯ ಕಿಡಿ ಬಿದ್ದಂತೆ ಆಗುತ್ತದೆ. ಅವುಗಳ ನಾಜೂಕಾದ ಶರೀರವೆಲ್ಲಿ , ನಿನ್ನ ಕೈಯಲ್ಲಿಯ ವಜ್ರದ ಶರಗಳೆಲ್ಲಿ ? “
ಎಂದು ರಾಜನಿಗೆ ಎಚ್ಚರಿಕೆ ಕೊಡುವರು.
” ಆರ್ತ ತ್ರಾಣಾಯ ವ: ಶಸ್ತ್ರಂ ನ ಪ್ರಹರ್ತುಂ ಅನಾಗಸಿ “
” ನಿನ್ನ ಬಾಣಗಳು ಕಷ್ಟದಲ್ಲಿ ಇರುವವರನ್ನು ರಕ್ಷಿಸಲು ಇವೆಯೇ ಹೊರತು ಅವರನ್ನು ಕೊಲ್ಲಲು ಅಲ್ಲ! “
ಪುರುವಂಶದಲ್ಲಿ ಜನ್ಮವೆತ್ತಿದ ನಿನಗೆ
ಚಕ್ರವರ್ತಿ ಮಗನು ಹುಟ್ಟಲಿ ಎಂದು ಆಶೀರ್ವದಿಸುವರು.
ಅವರ ವಚನ ಕೇಳಿ ರಾಜನು ಅವರಿಗೆ ವಂದಿಸುವನು. ಇಲ್ಲಿ ‘ವೈಖಾನಸರು’ ಅಂದರೆ ವಾನಪ್ರಸ್ಥಾಶ್ರಮದಲ್ಲಿ ಇದ್ದ
ತಪಸ್ವಿಗಳು.
” ರಮ್ಯಾ: ತಪೋಧನಾನಾಂ ಪ್ರತಿಹತ ವಿಘ್ನ್: “
ರಾಜನೇ, ನೀನು ರಕ್ಷಕನಾಗಿದ್ದರಿಂದ ಈ ತಪೋವನ ಸುರಕ್ಷಿತ ಆಗಿದ್ದು,
ಆ ತಪಸ್ವಿಗಳ ಪುಣ್ಯದ ಫಲವು ನಿನಗೆ ದೊರಕುತ್ತದೆ. ನಿನ್ನ ಉತ್ಕರ್ಷಕ್ಕಾಗಿ ಅವರು ತಪಸ್ಸು ಮಾಡುವರು.”
ಹೀಗೆ ವೈಖಾನಸರು ದುಷ್ಯಂತನಿಗೆ ತಿಳಿ ಹೇಳಿದರು.
ಆಗ ದುಷ್ಯಂತ ಆಶ್ರಮದ ಕುಲಪತಿಯನ್ನು ಕಾಣಬೇಕು, ಎಂದು ವಿನಂತಿಸಿದಾಗ, ಅವರು ಸೋಮತೀರ್ಥಕ್ಕೆ ಹೋದ ವಿಷಯ ತಿಳಿಯಿತು. ಅವರ ಮಗಳು ಶಕುಂತಲೆ ಅತಿಥಿ ಸತ್ಕಾರದ ಕರ್ತವ್ಯ ನಿರ್ವಹಿಸುತ್ತಿರುವಳು ಎಂದರು ವೈಖಾನಸರು.
ದುಷ್ಯಂತ ಆಶ್ರಮದ ವಾತಾವರಣದಲ್ಲಿ ಪುನೀತನಾಗುವ ಇಚ್ಛೆ ಉಳ್ಳವನಾಗಿ, ಸೂತನಿಗೆ ವಿಶ್ರಾಂತಿ ತೆಗೆದುಕೊಳ್ಳಲು ಹೇಳುವನು.
” ಶಾಂತಂ ಇದಮ್ ಆಶ್ರಮಪದಂ
ಸ್ಫುರತಿ ಚ ಬಾಹು: ಫಲಮಿಹಸ್ಯ
ಅಥವಾ ಭವಿತವ್ಯಾನಾಂ ದ್ವಾರಾಣಿ
ಭವಂತಿ ಸರ್ವತ್ರ.”
‘ಶಾರ್ದೂಲವಿಕ್ರೀಡಿತ’ದಲ್ಲಿ ಈ ಶ್ಲೋಕವನ್ನು ರಚಿಸಿದ್ದಾನೆ, ಕಾಲಿದಾಸ.
ಆಶ್ರಮದ ಪ್ರಶಾಂತ ವಾತಾವರಣ ಮೆಚ್ಚುಗೆ ಆಯಿತು.
ಆಗ ಯಾಕೋ ಬಲಭುಜ ಹಾರುತ್ತಾ ಇರುವ ಅನುಭವ ಆಗಿ, ಶುಭ ಸೂಚಕ ಎಂದು ಭಾವಿಸಿದರೂ, ಋಷಿಗಳ ಆಶ್ರಮದಲ್ಲಿ ತನಗೆಂತಹ ಶುಭಲಾಭ ಕಾಯ್ದಿದೆ ಎಂದು ರಾಜ ಆಶ್ಚರ್ಯ ಪಡುವನು. ಬಹುಶ: ಇಲ್ಲಿ ತನ್ನ ಭವಿಷ್ಯದಲ್ಲಿ ಸಿಗುವ ಸುಖದ ಘಟನೆ ಸಂಭವಿಸಬಹುದು ಎಂದು ಆಲೋಚಿಸುವನು. ವೈಖಾನಸರನ್ನು ಹಿಂಬಾಲಿಸಿ ಆಶ್ರಮದ ದ್ವಾರವನ್ನು ತಲುಪಿದ್ದಾನೆ. ಆಗ ಹೆಣ್ಣುಮಕ್ಕಳ ಸಂಭಾಷಣೆ ಕೇಳಿ ಬರುವದು.
ಗಿಡದ ಮರೆಯಲ್ಲಿ ನಿಂತು ಆಲಿಸಿ, ಗಿಡಗಳಿಗೆ ನೀರೆರೆಯುತ್ತಿರುವ ಯುವತಿಯರ ಲಾವಣ್ಯ ಕಂಡು ಬೆರಗಾಗುತ್ತಾನೆ.
ಈ ಪ್ರಸಂಗ ಆಧರಿಸಿ ಕೆಲ ವಿಮರ್ಶಕರು ದುಷ್ಯಂತನನ್ನು ಸ್ತ್ರೀ ಲಂಪಟ ಎಂದಿದ್ದಾರೆ.
ಪ್ರಕೃತಿ ದತ್ತ ಸೌಂದರ್ಯವನ್ನು ನೋಡಿ ಆನಂದ ಪಡುವದು ತಪ್ಪಾದೀತೇ?.
ರಾಜನ ಅಂತ:ಪುರದಲ್ಲಿ ಮಾತ್ರ ಅಸಾಧಾರಣ ಸುಂದರಿಯರು ಇರುವರೆಂದು ನಂಬಿದವ ದುಷ್ಯಂತ.
” ದೂರೀಕೃತಾ: ಖಲು ಗುಣೈ: ಉದ್ಯಾನಲತಾ ವನಲತಾಭಿ: “
ಎಂದು ಉದ್ಗರಿಸುವನು.
ನಗರದ ಉದ್ಯಾನಗಳಿಗಿಂತ ದೂರದ ವನದ ಈ ಲತೆಗಳು ವಿಶಿಷ್ಟ ಸೌಂದರ್ಯವನ್ನು ಹೊಂದಿರುವಂತೆ, ಬಳ್ಳಿಯಂತಿರುವರು ಈ ಸುಕೋಮಲೆಯರು. ಆಶ್ರಮದ ಶುಧ್ಧ ವಾತಾವರಣದಲ್ಲಿ ಹೆಂಗಳೆಯರ ಸೌಂದರ್ಯ ದುರ್ಲಭ ಆದದ್ದು, ಎಂದು ಮೆಚ್ಚುಗೆ ಸೂಚಿಸಿದನು. ನಿರಾಭರಣ,ನಾರುಬಟ್ಟೆಯ ಸುಂದರಿಯರನ್ನು ಕಂಡು ಅವನಲ್ಲಿ ಆರಾಧನಾ ಭಾವ ಮೂಡಿತು. ಇಂಥ ಸುಕುಮಾರ ಬಳ್ಳಿಯಂತಹ ಯುವತಿಯರಿಗೆ, ನದಿನೀರು ಹೊತ್ತು ತಂದು ಗಿಡಗಳಿಗೆ ನೀರುಣಿಸುವ ಕಠಿಣ ಕೆಲಸ ಹೊರಿಸಿರುವರಲ್ಲ ಕಣ್ವರು, ಎಂದು ಕನಿಕರ ಪಡುವನು.
ಆಶ್ರಮ ವಾಸಿಗಳು ಪ್ರಕೃತಿಯ
ಕಾಳಜಿ ವಹಿಸುವುದನ್ನು ಇಲ್ಲಿ ಗಮನಿಸಬೇಕಾದ ವಿಷಯ.
(ಇಂದು ನಮ್ಮ ಮನೆ ಅಂಗಳದ ಗಿಡಗಳಿಗೆ ಪೈಪಿನಿಂದ ನೀರು ಹಾಕುವದೂ ಕಠಿಣ ಕೆಲಸವಾಗಿದೆ!!)
ಆಶ್ರಮದ ವನಿತೆಯರನ್ನು, ಶಕುಂತಲೆಯನ್ನು, ಮಾತಾಡಿಸಲು ದುಷ್ಯಂತನ ಮನಸು ಹಾತೊರೆಯುತ್ತದೆ.
ಇವಳು ಕಣ್ವ ಮಹರ್ಷಿಗಳ ಮಗಳು ಹೇಗಾದಾಳೂ ಎಂಬ ಸಂಶಯವೂ ಕಾಡುತ್ತಿದೆ. ಸಖಿಯರಿಬ್ಬರೂ ಶಕುಂತಲೆಗೆ ಚೇಷ್ಟೆ ಮಾಡುತ್ತಾ ಮಾತನಾಡುತ್ತಿದ್ದಾರೆ. ಶಕುಂತಲೆ ಪ್ರೀತಿಯಿಂದ ಬೆಳೆಸಿದ
” ವನಜ್ಯೋತ್ಸ್ನಾ”ಎಂದು ಶಕುಂತಲೆಯಿಂದ ಹೆಸರಿಸಲ್ಪಟ್ಟ ಬಳ್ಳಿ, ನವ ವಧುವಿನಂತೆ ಶೋಭಿಸುತ್ತಿದೆ.
ನೀನೂ ನವವಧುವಿನಂತೆಯೇ ಕಾಣುತ್ತಿರುವಿ! ಎಂದು ಸಖಿಯರು ಕೀಟಲೆ ಮಾಡಿದಾಗ, ದುಷ್ಯಂತ ಶಕುಂತಲೆಯ ಅಂದವನ್ನು ಮೆಚ್ಚಿ ಮನದಲ್ಲೇ ಅಂದುಕೊಳ್ಳುತ್ತಾನೆ.
” ಅಧರ: ಕಿಸಲಯರಾಗ: ಕೋಮಲವಿಟಪಾನು ಕಾರಿಣೌ ಬಾಹೂ ಕುಸುಮಮಿವ ಲೋಭನೀಯಮ್ ಯೌವನಂ ಅಂಗೇಷು ಸಂನಧ್ಧಮ್.”
ಶಕುಂತಲೆಯ, ಮಾವಿನ ಚಿಗುರಿನ ಬಣ್ಣದ ತುಟಿಗಳನ್ನು ,ಬಳ್ಳಿಯಂತಹ ಬಾಹುಗಳನ್ನು ಗಮನಿಸುತ್ತಾನೆ.
ಮಾವಿನ ಗಿಡಕ್ಕೆ ಹಬ್ಬಿದ ಬಳ್ಳಿಗೆ
” ವನಜ್ಯೋತ್ಸ್ನಾ” ಎಂದು ಹೆಸರು ಇಟ್ಟಿದ್ದಾಳೆ ಶಕುಂತಲೆ. ಅಂದರೆ ವನದ ಬೆಳದಿಂಗಳು. ನೀರುಣಿಸಿ ಗಿಡಮರಗಳನ್ನು ತನ್ನ ಸಹೋದರ ,ಸಹೋದರಿಯರಂತೆ ಪ್ರೀತಿಸುತ್ತಾಳೆ ಶಕುಂತಲೆ, ಎಂಬ ಸತ್ಯವನ್ನು ಕಾಣುತ್ತಾ ಅವಳ ಆತ್ಮಸೌಂದರ್ಯವನ್ನೂ ದುಷ್ಯಂತ ಮೆಚ್ಚುತ್ತಾನೆ.
ಇಲ್ಲಿಗೆ ಇವತ್ತು ಒಂದು ” ಅಲ್ಪ ವಿರಾಮ” (short break ) ತೆಗೆದು ಕೊಳ್ಳೋಣವೇ ?
ಹೆಚ್ಚಿನ ಬರಹಗಳಿಗಾಗಿ
ಬೇಲಿಯೇ ಎದ್ದು…..
ಗಣೇಶನ ಕೈಯಲ್ಲಿಯ ಲಾಡು
ನೋ ಪಾರ್ಕಿಂಗ್