- ಸ್ನೇಹ ಸೌರಭ - ಜನವರಿ 6, 2025
- ನಂಬಿಕೆಯ ವರ್ಷಧಾರೆ - ಜುಲೈ 8, 2024
- ಹುಚ್ಚು ಅಚ್ಚುಮೆಚ್ಚಾದಾಗ - ಜನವರಿ 27, 2024
ಮುಗಿಲಂಚಿನ ಕೊನೆಯ ಹನಿಯು, ಪೃಥ್ವಿಯ ಇಕ್ಕೆಲಗಳಲ್ಲಿ ಜಾರಿ ಮರೆಯಾಯಿತು. ಕಾರ್ಮೋಡಗಳೆಲ್ಲಾ ಸರಿದ ಶುಭ್ರ, ಸ್ವಚ್ಛಂದ ನೀಲಾಂಬರವು ಅದೆಷ್ಟೋ ಆಪ್ಯಾಯತೆಯನ್ನು, ಅನಿವಾರ್ಯತೆಗಳನ್ನು, ಅವಘಡಗಳನ್ನು, ಅಪ್ರತಿಮ ಸಂತಸವನ್ನು, ಅದ್ವಿತೀಯ ಪಕ್ವತೆಯನ್ನು ಕಂಡ ನಂತರ ಶೋಭಿಸುತ್ತಿದೆ ಅನನ್ಯತೆಯಿಂದ. ತಾರಾಮಂಡಲದ ಪ್ರತೀ ಚುಕ್ಕಿಯು ಭುವಿಯ ಬೆಸುಗೆಯಿಂದ ದೂರವಿದ್ದು, ಈ ದಿನದ ಕ್ಷಿತಿಜನಲ್ಲಿ ಮುಳುಗುವ ಅರ್ಕಾಸ್ತಮಾನದಿಂದ, ಭಾದ್ರಪದದ ಚಂದ್ರ ಬಿಂದಿಗೆಯೊಂದಿಗೆ ನಭೋವ್ಯಾಪ್ತಿಯಲ್ಲಿ ರಾರಾಜಿಸಲು ಕಾದುಕುಳಿತಿವೆ. ಎಷ್ಟಾದರೂ ಭುವಿಯಂಗಳದ ಹೃದಯಗಳೆಡೆಗೆ ಹೇಳದ ತಂತುವಿದೆಯಲ್ಲಾ! ಮಳೆರಾಯನ ಮುಗಿಲಾರ್ಭಟವೆಲ್ಲಾ ಮುಗಿದು ಶರತ್ ಋತುವಿನ ಶೀತಲತೆಯನ್ನು ತೆಕ್ಕೆಗಳಲ್ಲಿ ತುಂಬಿಕೊಳ್ಳಲು ಇಳೆಯು ಸಜ್ಜಾಗಿದೆ. ಹ್ಮ! ಋತು ಬದಲಾವಣೆಯ ಪರ್ವ ಕಾಲ, ಸೋಜಿಗದ ಮಹಾಹಬ್ಬ.
ಬದುಕ ಬೀದಿಯಲ್ಲಿನ ಪ್ರತೀ ಮನೆಗಳೆದುರು ಸಿಗುವ ಚಂದದ ರಂಗೋಲಿಯೆಡೆಗೆ ಅಂದದ ನಗು ಬೀರುವೆವಲ್ಲಾ, ಅದಾವುದೋ ಸೆಳೆತದಿಂದಲೋ, ಆಪ್ಯಾಯತೆಯಿಂದಲೋ, ಆ ರಂಗಿನ ಛಾಪು ಕೆಲವೊಮ್ಮೆ ನಮ್ಮ ಹೆಜ್ಜೆಯ ಪ್ರತೀ ಅಚ್ಚಿನಲ್ಲೂ ಅರಿಯದ ಬಣ್ಣಗಳನ್ನು ತುಂಬಿ ಬಿಡುತ್ತವೆ. ಬಳ್ಳಿ ರಂಗೋಲಿಯ ಶುದ್ಧತೆಯನ್ನರಿವ ಮೊದಲು ಕೊಂಚ ದಿಗಿಲಾಗುವುದು; ಚುಕ್ಕಿ ರಂಗೋಲಿಯ ಸರಳತೆಯೆದುರು ಮನ ಹಗುರಾಗಬಹುದು. ಆದರೆ, ತಿಳಿದಿದೆಯೇನು, ಬಳ್ಳಿಯಲ್ಲಿನ ಗೋಜಲಾದ ಎಳೆಯಿಂದಲೇ ಬಹು ಅನಿರೀಕ್ಷಿತ ಉತ್ತರಗಳು ಲಭಿಸುವುದೆಂದು. ಕಣ್ಣಿಗೆ ತಂಪಿಡುವ ಸರಳ ರೇಖೆಗಳ ಚಿತ್ತಾರ ಸಮಯ ಸರಿದಂತೆ ಸನಿಹ ತೊರೆಯುವುದು. ಇನ್ನು ಚಿಕ್ಕ ಚೊಕ್ಕ ಚಿತ್ತಾರಗಳಂತೂ ಚಿತ್ತದಲ್ಲಿ ಪರಿಚಿತವಾಗಿರದಿದ್ದರೂ, ನಯನದ್ವಯಗಳಿಗೆ ಚಿರಪರಿಚಿತವೇ. ಮಹಾಪರ್ವಗಳಲ್ಲಿ ಕ್ಲಿಷ್ಟತೆಯಿದ್ದರೂ, ಕ್ಷಿಪೆಯ ಕೃಪೆಯಡಿಯಲ್ಲೂ ಕಂಗೊಳಿಸುವ ರಂಗವಲ್ಲಿಗಳಲ್ಲವೇ ಮನದ ಮಂದಿರದಲ್ಲಿ ಮಹೋನ್ನತವಾಗಿ ಮೂಡುವುದು! ಸೋಜಿಗದ ಹಬ್ಬದ ಸುಪ್ತ ಸಂಗಾತಿ ಈ ಚುಕ್ಕಿಯಾಟ.
ಈಗಿನ ವಿದ್ಯಮಾನಗಳ ಅವಧಿಯಲ್ಲಂತೂ ಗೆಳೆತನವೆಂಬುದು ತೀರ ಸಾಮಾನ್ಯ. ಆದರೆ, ಅರಳುವ ಪ್ರತೀ ಸುಮವೂ ಹೇಗೆ ತಾನೇ ಸ್ನೇಹ ಸೌರಭವ ಬೀರಲು ಸಾಧ್ಯ? ಅಪರಿಚಿತರನ್ನೆಲ್ಲಾ ಮಿತ್ರತ್ವದ ಮಳೆಯಲ್ಲಿ ಮಿಂದೇಳಿಸುವುದೆಂದರೆ ಮೂರ್ಖತನದ ಪರಾಕಾಷ್ಠೆ. ಮೇಘ ಸಂದೇಶಗಳ ಕಾಲದಲ್ಲಿಯೇ ಕೆಲವೊಂದು ಬೆಸುಗೆಗಳು ಬಹು ನಿಷ್ಠವಾಗಿದ್ದವು. ಅಂದ ಹಾಗೇ,ಅಪರಿಚಿತರೆಲ್ಲರೂ ಆಗಂತುಕರೆಂಬ ವಾದವಲ್ಲ. ಇಂದಿನ ಕಾಲಮಾನದಲ್ಲಿ ಕೇವಲ ಚಿಕ್ಕ ಚೊಕ್ಕ ರಂಗೋಲಿಗಳ ಹಾವಳಿಯೇ ಹೆಚ್ಚು. ಈ ಕೊರಗೊಂದನ್ನು ಕರುಬುತ್ತಿಲ್ಲ ಬದಲಾಗಿ ಸ್ಪಷ್ಟತೆ ಹಾಗೂ ಕ್ಲಿಷ್ಟತೆಯ ಮಹಾ ಎಳೆಯೊಂದನ್ನು ನಾಜೂಕಾಗಿ ನೇಯ್ದು, ನವೀಕರಿಸಿ, ನಮ್ಮದಾಗಿಸಿಕೊಳ್ಳುವ ನಡೆಯಲ್ಲಿ ಎಡವಿ ಬೀಳಬಾರದೆಂಬ ದೃಷ್ಟಿಕೋನವಷ್ಟೇ.
ಸ್ನೇಹವೆಂದರೆ ಹಾಗೇ, ಮನ ನುಡಿವ ಭಾವಗಳಿಗೆ ಮನವೇ ಸ್ಪಂದಿಸುವ ಮಹೋತ್ಸವ. ಅದೊಮ್ಮೆ ಅರಿಯದೇ ಬಿರಿದ ಕುಸುಮದ ಕಂಪನ್ನು ಕ್ಷಿಪ್ರಗತಿಯಿಂದಲೋ, ಮಂದಗತಿಯಿಂದಲೋ ಅಂತರಾಳದಿಂದ ಆಘ್ರಾಣಿಸುವ ಅದ್ವಿತೀಯ ಕಲೆ. ಮಾದರಿಯ ಲೆಕ್ಕವಿಲ್ಲದೆಯೇ, ಸದವಕಾಶಗಳ ಕಾತುರತೆಯಿರದೇ, ಸರಿಸಮಯದ ಕಾಯುವಿಕೆಯಿಲ್ಲದೇ, ವದನದ ನೆರಿಗೆಗಳ ಹಂಗಿಲ್ಲದೇ, ಮೊಗ್ಗರಳಿ ಹೂವಾಗಲೇಬೇಕೆಂಬ ಒತ್ತಾಯವಿಲ್ಲದೆ, ಮನ ನುಡಿವ ಮುಗ್ಧ ತಂತುವಿನ ಸ್ವರವಿದೆಯಲ್ಲಾ ಅದು ಸ್ನೇಹ.
ಉತ್ತರವಿರದ ನೂರು ಪ್ರಶ್ನೆಗಳಿಗೂ, ಉತ್ತರ ಹುಡುಕುವ ಪ್ರಯತ್ನದಲ್ಲಿ, ಅಪ್ರಯತ್ನಪೂರ್ವಕವಾಗಿ, ಕೇವಲ ಕೆನ್ನೆಗುಳಿಯ ನಗುವಿಗಾಗಿ, ಮಾಸದ ನೆನಪಿಗಾಗಿ, ಮುಗ್ಧತೆಯ ಅನಾವರಣಕಾಗಿ, ಪರಿಪಕ್ವತೆಯ ಪೂರ್ಣತೆಗಾಗಿ, ಸ್ಪಷ್ಟತೆಯ ಸಾಕ್ಷಾತ್ಕಾರಕ್ಕಾಗಿ, ದಾರಿಯ ದೀವಿಗೆಯಾಗಿ, ತುಂಟತನದ ಪರಮಾವಧಿಗಾಗಿ, ನಿಸ್ವಾರ್ಥದಲ್ಲಿನ ಸ್ವಾರ್ಥಕ್ಕಾಗಿ, ನಂಬಿಕೆಯೆಂಬ ಮೂರಕ್ಷರದ ನಿಷ್ಠೆಗಾಗಿ, ಸದ್ದಿಲ್ಲದೇ ನೆರಳಾಗಿ ಜೊತೆಯಾಗುವ ಬಂಧವಿದೆಯಲ್ಲಾ ಅದು ಸ್ನೇಹ.
ನಂಬಿಕೆಯೆಂಬ ಎಳೆ ಬೀಜದಿಂದ, ಮನ್ವಂತರದ ಮಹಾಕಾಲದಲ್ಲಿ ಆಡಂಬರಗಳ ಹಂಗಿರದೇ, ನೋವು ನಲಿವಿನ ಸಿಗ್ಗಿಲ್ಲದೇ, ಮೇಲು ಕೀಳಿನ ವರ್ಗ ತಾರತಮ್ಯವಿರದೇ, ಕೆಲವೊಂದು ದಿಟ, ಸ್ಪುಟ, ಆಸ್ಥೆ, ಆಸೆ, ಆಕಾಂಕ್ಷೆಗಳ ಪರಿಧಿಯಲ್ಲಿ ಕುಚೇಲ-ಗೋಪಾಲರ ಸ್ನೇಹದೊಲವಿನಂತೆ, ಅಸೂಯೆ ಅಹಂಕಾರಗಳ ಕಣವೂ ಸೇರದೆ, ಮಾತು ಮೌನಗಳೆರಡನ್ನೂ ಅರಿವ ಮನದಿಂದ ಮನಸ್ಫೂರ್ತಿಯಾಗಿ ಮೊಗ್ಗಾಗಿ, ಮಂದಾರವಾಗಿ ಪ್ರಫುಲ್ಲಿಸುತ್ತದೆಯೆಲ್ಲಾ ಅಂತಹ ಸ್ನೇಹದ ಆಯುಷ್ಯ ಅಧಿಕ.
ಅಪರಿಚಿತ ಹೃದಯವೊಂದರ ಪರಿಚಿತ ಸೆಳೆತವಿದೆಯಲ್ಲಾ, ಅಂತರಂಗದಾಬ್ಧಿಯೊಂದು ಕಿನಾರೆಯೆಡೆಗೆ ತೋರುವ ಅಬ್ಬರ ಹಾಗೂ ತುಡಿತವದು ಮೈತ್ರಿ. ಸ್ನೇಹವೆಂದರೆ ಕೇವಲ ನಗು ವಿನಿಮಯದ ನಂಟಲ್ಲ. ದೂರ ತೀರವ ಸೇರಿದರೂ, ನೋವಾದರೆ, ಎಲ್ಲಿಯೋ ಇರುವ ತಾಯಿಯೊಡಲಲ್ಲಾಗುವ ಸಂಕಟದಂತೆ ಮತ್ತೊಂದು ಹೃದಯವೂ ತಿಳಿಯದೇ ಅನುಭವಿಸುವ ಬಂಧ. ನಂಬಿಕೆಯೊಂದರ ರುದ್ರವೀಣೆ.
ಚಿತ್ತ ಚಾಕಚಕ್ಯತೆಯ ಕ್ಲಿಷ್ಟವೆಲ್ಲಾ ಸರಳವಾಗಿಸಿಹ ಅದೆಷ್ಟು ಚಿತ್ತಾರಗಳು ಬಾಳಿನಲ್ಲಿ ರಂಗ ಮೂಡಿಸುತ್ತಿವೆಯೆಂದು ಒಮ್ಮೆ ನೋಡಿ, ಹಿಡಿಯಷ್ಟು ಹೃದಯದಲ್ಲಿ ಜತನಗೊಳಿಸಿ.
ಅಂದ ಹಾಗೇ ಶುಕ್ಲ ಚತುರ್ದಶಿಯ ಚಂದ್ರಿಕೆಯ ಬೆಳ್ಳಿಹೊಳೆ, ಅಪರಿಚಿತರನ್ನೆಲ್ಲಾ ಚಿರಪರಿಚಿತರಾಗಿಸಿದ ಚಿನ್ಮಯ ಗಳಿಗೆಗಳಿಗೆ ಹಾಗೂ ಆ ಕೆಲವೇ ಕೆಲವು ಚಿರಂತನ ಚಿತ್ತಗಳಿಗೆ ಸ್ನೇಹದ ಅಮೃತವನ್ನು ಎರಕ ಹೊಯ್ಯಲಿ ಎಂಬ ಮಹದಾಸೆಯೊಂದಿಗೆ…
ಹೆಚ್ಚಿನ ಬರಹಗಳಿಗಾಗಿ
‘ಒಬ್ಬಂಟಿಕರಣ’ ದ ಲೋಕಾರ್ಪಣೆ
ವಿಶ್ವ, ವಿಶಾಲೂ ಮತ್ತು ಅಧ್ಯಾತ್ಮ
ರೇಟಿಂಗ್ ಗಳ ಧೋರಣೆ