- ಕನ್ನಡ ಕವಿಗಳಲ್ಲಿ ಪ್ರಜ್ವಲಿಸುತ್ತಿರುವ ದೀಪಮಾಲೆ - ಅಕ್ಟೋಬರ್ 27, 2024
- ಚಿಕ್ಕಣಿರಾಜ ಕೃತಿಯ ಜೀವಾಳ ಪುಟ್ಟ - ಸೆಪ್ಟೆಂಬರ್ 12, 2024
- ಹಾಲಾಡಿಯಲ್ಲಿ ಹಾರುವ ಓತಿ - ಜುಲೈ 20, 2024
ಸ್ವಾತಿಮಳೆ, ಸ್ವಾತಿನಕ್ಷತ್ರ ಎರಡೂ ಪದಗಳು ಮುತ್ತಿಗೆ ಸಂಬಂಧಿಸಿದ್ದೇ ಅಗಿವೆ, ‘ಮುತ್ತು’ ಎಂದರೆ ಅಭರಣಗಳಿಗೆ ಉಪಯೋಗಿಸುವ ರತ್ನ ಎಂದರ್ಥ. . ಅಮೂಲ್ಯವಾದದ್ದು, ಬೆಲೆಯುಳ್ಳದ್ದು ಎಂದು ಮನವರಿಕೆ ಮಾಡಲು “ಮುತ್ತು ಇದ್ದಹಾಗೆ”, ”ಮುತ್ತಿನಂತೆ” ಎಂಬ ಮಾತುಗಳ ಪ್ರಯೋಗ ನಮ್ಮಲ್ಲಿ ಜನಜನೀತ “ಮಾತು ಆಡಿದರೆ ಹೋಯಿತು! ಮುತ್ತು ಒಡೆದರೆ ಹೋಯಿತು!”, “ಮಾತೇ ಮುತ್ತು ಮಾತೇ ಮೃತ್ಯು” ಎಂಬ ಗಾದೆಗಳು ಮಾತಿನ ಮಹತ್ವವದ ಜೊತೆಗೆ ಮುತ್ತಿನ ಅಸಾಧಾರಣ ಮೌಲ್ಯಗಳನ್ನು ಕುರಿತು ವಿವರಿಸುತ್ತವೆ. ಮುತ್ತು ಕೈ ಜಾರಿದರೆ ಅದು ಒಡೆದಂತೆ ಮತ್ತೆ ಅದನ್ನು ಕೂಡಿಸಲು ಸಾಧ್ಯವಿಲ್ಲ ಹಾಗೆ ಮಾತನಾಡುವಾಗ ಪೂರ್ವಾಪರ ಯೋಚಿಸಿ ಮಾತನಾಡಬೇಕೆಂದು ಹಿರಿಯರು ಹೇಳುತ್ತಾರೆ. ಇಲ್ಲವಾದರೆ ತಪ್ಪು ಮಾತುಗಳನ್ನಾಡಿದ ಅಪರಾಧಿ ಪ್ರಜ್ಞೆ ನಮ್ಮನ್ನು ಭಾದಿಸುತ್ತದೆ ಎಂಬ ಕಿವಿಮಾತನ್ನು ಹೇಳಿದ್ದಾರೆ. ಸ್ವಾತಿ ಮಳೆಗೂ ಮತ್ತು ರೈತರಿಗೂ ಅವಿನಾಭಾವ ಸಂಬಂಧ ಬಯಲು ಸೀಮೆಯ ರೈತರಿಗೆ ಉತ್ತರೆ, ಸ್ವಾತಿ ಮಳೆಗಳು ಆಶ್ರಯವಾದರೆ ಮಲೆನಾಡ ರೈತನಿಗೆ ಪುನರ್ವಸು ಪುಷ್ಯ ನಕ್ಷತ್ರಗಳು ಆಶ್ರಯ. ಮಳೆ ದೇವತೆ ಇಂದ್ರನನ್ನು ಕಂಡರೆ ನಮ್ಮ ಜನರಿಗೆ ವಿಶೇಷ ಅಸ್ಥೆ ಹಾಗಾಗಿ ಮಳೆರಾಯ ದೇವೇಂದ್ರ ಎಂದು ಕರೆಯುವುದಿದೆ.
“ಹೆತ್ತಯ್ಯ ಅರ್ಜುನಾದರೆ ಮುತ್ತಯ್ಯ ದೇವೇಂದ್ರ” ಎಂಬ ಗಾದೆಯ ಮಾತು ಎಲ್ಲರಿಗೂ ತಿಳಿದಿರುವಂತಹದ್ದೆ. ಡಿ.ವಿ.ಜಿಯವರು ಮಂಕುತಿಮ್ಮನಕಗ್ಗದಲ್ಲಿ “ಸ್ವಾತಿ ಮಳೆ ಹನಿ ಬೀಳ್ವ ಶುಕ್ತ ಬಾಯ್ದರೆದೇಳ್ವ ಕೌತುಕದ ಸಮಯೋಗಂ” ಎಂದು ಉಲ್ಲೇಖಿಸಿದ್ದಾರೆ. ಅದರಂತೆಯೆ ಕಪ್ಪೆ ಚಿಪ್ಪಿನ ಹೃದಯಗರ್ಭದೊಳಗೆ ಸ್ವಾತಿ ಮಳೆಯ ಜಲಬಿಂದು ಸೇರಿದಾಗ ಆ ಹನಿಯೇ ಮುತ್ತಾಗಿ ಪುನರ್ಜನ್ಮ ಪಡೆಯುತ್ತದೆ ಎಂಬುದು ವಾಡಿಕೆ. ಹಾಗಂತ ಚಲನಚಿತ್ರ ಗೀತೆಯ ಸಾಲೇ ಇದೆಯಲ್ಲ “ಸ್ವಾತಿ ಮುತ್ತಿನ ಮಳೆಹನಿಯೇ ಮೆಲ್ಲ ಮೆಲ್ಲನೆ ಧರೆಗಿಳಿಯೇ” ಎಂಬುದಾಗಿ, ಹಾಡುಬಾರದವರೂ ತಮಗೆ ಪರಿವಿಲ್ಲದೆಯೆ ಗುನುಗುನಿಸುತ್ತಾರೆ. ಈ ಸಾಲುಗಳು ಮುತ್ತಿನ ಪಾರಮ್ಯವನ್ನು ಎತ್ತಿಹಿಡಿದಿವೆ. ಜೊತೆಗೆ ರೊಮ್ಯಾಂಟಿಕ್ ಭಾವವನ್ನು ಓದುಗರಲ್ಲಿ, ಕೇಳುಗರಲ್ಲಿ ಮಾಡುತ್ತದೆ. “ಸಿಹಿಚುಂಬನಕೆ ಸ್ವಾತಿ ಮಳೆ” ಇದು ನಲ್ಲನಲ್ಲೆಯರ ಪ್ರೀತಿಯನ್ನು ಕುರಿತು ವಿವರಿಸುತ್ತದೆ.
ಮೃದ್ವಂಗಿ ಗುಂಪಿಗೆ ಸೇರಿದ ಕೆಲವು ಪ್ರಭೇದದ ಚಿಪ್ಪುಮಿನುಗಳು(ಕಪ್ಪಚಿಪ್ಪು) ಮುತ್ತುಗಳನ್ನು ಉತ್ಪಾದಿಸುತ್ತದೆ. ಕಡಲು ಮತ್ತು ನದಿತೀರದಲ್ಲಿ ಹೆಚ್ಚಾಗಿ ಸಿಹಿನೀರಿನ ವಾತಾವರಣ ಇರುವ ಜಾಗದಲ್ಲಿ ಈ ಚಮತ್ಕಾರ ನಡೆಯುತ್ತದೆ. ಭಾರತದಲ್ಲಿ ತಮಿಳುನಾಡಿನ ರಾಮೇಶ್ವರಂನ ಅಸುಪಾಸಿನಲ್ಲಿ ಮುತ್ತುಗಳ ಸಹಜ ಕೊಯ್ಲಾಗುತ್ತದೆ. ಮುತ್ತುಗಳ ಅಸಲಿ ಅಥವಾ ನಕಲಿ ಎಂದು ತಿಳಿಯಲು ಸ್ಕ್ಯಾನಿಂಗ್ನಿಂದ ಮಾತ್ರ ಸಾಧ್ಯ. ಕೃತಕ ಮುತ್ತಿನಲ್ಲಿ ಕಡಿಮೆ ಪದರವಿದ್ದು ನೈಜ ಮುತ್ತಿನಲ್ಲಿ ಪದರಗಳು ಹೆಚ್ಚಾಗಿರುತ್ತವೆ. ಮುತ್ತು ಮೂಲತಃ ಒಂದು ಸುಣ್ಣದ ರೂಪ. ಇದನ್ನು ವೈಜ್ಞಾನಿಕವಾಗಿ ಕ್ಯಾಲ್ಸಿಯಂ ಕಾರ್ಬೋನೆಟ್ ಎಂಬ ಹೆಸರಿನಿಂದ ಕರೆಯುವುದಿದೆ. ನೀರಿನಲ್ಲಿ ಸಕ್ಕರೆ ಸುಲಭವಾಗಿ ಕರಗುವಂತೆ ವಿನಿಗರ್ನಲ್ಲಿ ಮುತ್ತುಗಳು ಕರಗುತ್ತದೆ. ಬಿಳಿ, ಹಳದಿ, ಬಂಗಾರವರ್ಣ, ಕೆನಯಬಣ್ಣ, ಬಿಳಿ, ಕಪ್ಪು, ಗುಲಾಬಿ, ನೀಲಿ, ಹಸಿರು ಬಣ್ಣದಲ್ಲಿ ಮುತ್ತುಗಳು ಲಭ್ಯವಿವೆ. ಮುತ್ತು, ಮುತ್ತಿನ ಅಭರಣಗಳು ಎಂತಹ ಮಹಿಳೆಯರ ಮೇಲೂ ಶೋಭಿಸುವಂತಹದ್ದು. ವಯೋಸಹಜ ಕಾಯಿಲೆಗಳಿಗೆ ಅದರ ಹತೋಟಿಗೆ ಮುತ್ತುಗಳನ್ನು ಧೃರಿಸುವ ಕ್ರಮ ಪ್ರಾಚೀನರಿಂದಲೂ ರೂಢಿಯಲ್ಲಿದೆ. ಆಧುನಿಕರಲ್ಲಿ ಅದೊಂದು ಫ್ಯಾಷನ್ “ಸ್ವಾತಿ ಮುತ್ತಿನ ಮಳೆ ಹನಿಯೊಂದಿಗೆ ಮಳೆ ಹುಡುಗಿಯ ಇನಿಯನಿತ್ತ ಮೊದಲ ಮುತ್ತು ಹೇಗೆ ಮರೆಯಾದೀತು” ಎನ್ನಬಹುದು. ದೇಹಕ್ಕೂ ಒಂದು ರೀತಿಯ ಅಹ್ಲಾದವನ್ನು ಕೋಡುತ್ತಿದೆನ್ನಿ. ಅಂದಹಾಗೆ ಮುತ್ತಿನೋಲೆ ಮುತ್ತೈದೆತನದ ಸಂಕೇತ ಎಂಬ ನಂಬಿಕೆಯೂ ಇದೆ. ಮುತ್ತಿನ ಆಭರಣಗಳನ್ನು ಧರಿಸುವಾಗ ಸೋಪು, ನೆಲ ಒರೆಸುವ ರಾಸಯನಿಕಗಳಿಂದ ಆದಷ್ಟು ದೂರವಿಡಬೇಕಾಗುತ್ತದೆ.
ಕುಮಾರವ್ಯಾಸ ತನ್ನು ‘ಗದುಗಿನಭಾರತ’ದ ವಿರಾಟಪರ್ವದ ಕೀಚಕವಧೇಯ ಪ್ರಸಂಗದಲ್ಲಿ ಮುತ್ತಿನ ಬಗ್ಗೆ ಪ್ರಸ್ತಾಪ ಮಾಡುತ್ತಾ “ಸೀಕರಿಯೋದವೆಕಾವಳಿಯ ಮುತ್ತುಗಳು ಸಂದಣಿಸಿದೆವೆಗಳ ಭಾಷ್ಪದ ನಿಡು ಸುಯಿಲಿಂದ ಬಿಂದುಗಳ ದಿಸೆಯಿಂದ”. ಎಂದು ಬರೆಯುತ್ತಾನೆ (ದ್ರೌಪದಿಯ ಕಣ್ಣೀರ ಕಾರಣದಿಂದ ಅವಳ ಧರಿಸಿದ್ದ ಒಂದೆಳೆಯ ಮುತ್ತಿನ ಸರ ಮುಸುಕುಕಾಗಿತ್ತು). ಅರ್ಧಾತ್ ಬೆವರು, ಕಣ್ಣೀರು ಮುಂತಾದವುಗಳಿಂದ ಮುತ್ತುಗಳನ್ನು ರಕ್ಷಿಸಿಕೊಂಡರೆ ಮುತ್ತುಗಳು ಕಳೆಗುಂದಲಾರವು ಎಂಬ ಕಿವಿ ಮಾತು ಇಲ್ಲಿ ಅಡಕವಾಗಿದೆ. ಈ ಮುತ್ತಿನ ಅಭರಣಗಳನ್ನು ಎಲ್ಲಾ ಉಡುಪು ಧರಿಸಿದ ಬಳಿಕ ಧರಿಸಬೇಕು, ನಂತರ ಎತ್ತಿಡುವಾಗ ಮೃದು ಬಟ್ಟೆಯಲ್ಲಿ ಸ್ವಚ್ಛಗೊಳಿಸಿ ತೇವಾಂಶ ಕಾಪಾಡುವ ಸಲುವಾಗಿ ಹತ್ತಿಬಟ್ಟೆಯಲ್ಲೇ ಸುತ್ತಿ ಇಡಬೇಕಾಗುತ್ತದೆ. ಇಲ್ಲವಾದರೆ ಬಿರುಕುಗಳು ಕಾಣುತ್ತವೆ. ಸುಗಂಧ ದ್ರವ್ಯಗಳನ್ನು ತಾಗಿಸಿದರಂತೂ ಮುತ್ತುಗಳು ಬಹುಬೇಗ ತಮ್ಮ ನೈಜ ಬಣ್ಣಕಳೆದುಕೊಂಡು ಮಾಸಲಾಗುತ್ತವೆ, ಕೇವಲ ಅಲಂಕಾರಕ್ಕೆ ಮಾತ್ರವಲ್ಲದೆ ಔಷಧೀಯ ಗುಣಗಳನ್ನು ಈ ಸ್ವಾತಿ ಮಳೆಯಲ್ಲಿ ಕಾಣಬಹುದು. ಸ್ವಾತಿ ಮಳೆ ನಕ್ಷತ್ರದಲ್ಲಿ ನಮ್ಮ ಜಾನಪದರು ರೇಷ್ಮಬಟ್ಟೆಯನ್ನು ಹೊರಹಾಕಿ ಗಾಳಿಯಾಡಿಸಿ ತೆಗೆದಿರಿಸಿದರೆ ಆ ವಸ್ತುಗಳಿಗೆ ನುಸಿ ಹಿಡಿಯುವುದಿಲ್ಲ ಎಂಬ ಕಲ್ಪನೆಯನ್ನು ಹೊಂದಿದ್ದರು.
ದನಕರುಗಳನ್ನು ಉಣ್ಣೆಗಳು ಭಾದಿಸುತ್ತಿದ್ದಲ್ಲಿ ಸ್ವಾತಿ ಮಳೆ ನೀರು ತಾಗಿದ ಕೂಡಲೆ ಅವುಗಳಿಗೆ ಅದರಿಂದ ಮುಕ್ತಿ ದೊರಕುತ್ತದೆ ಎಂಬ ನಂಬಿಕೆಯೂ ಇತ್ತು. ಸ್ವಾತಿ ಮಳೆ ನೀರನ್ನು ಮಣ್ಣಿನ ಅಥವಾ ತಾಮ್ರದ ಪಾತ್ರೆಯಲ್ಲಿ ಸಂಗ್ರಹಿಸಿ ೧೦ ಭಾಗ ಸಾಧಾರಣ ನೀರಿಗೆ ೧ ಭಾಗ ಈ ಮಳೆ ನೀರನ್ನು ಸೇರಿಸಿ ಬೆಳೆಗಳಿಗೆ ಸಿಂಪಡಿಸಿದರೆ ಕೀಟಭಾದೆ ನಿಯಂತ್ರಣಕ್ಕೆ ಬರುತ್ತದೆ ಎಂಬ ಮಾತು ಇದೆ. ಹಾಗೆ ನೇರವಾಗಿ ಬರುವ ಮಳೆ ನೀರನ್ನು ಸಂಗ್ರಹಿಸಿ ಹತ್ತಿಬಟ್ಟೆಯಲ್ಲಿ ಶೋಧಿಸಿ ಔಷಧಿಯಂತೆ ಬೇಕಾದಾಗ ಅಂದರೆ ಸುಟ್ಟಗಾಯಗಳಿಗೆ, ಗಾಯಗಳಿಗೆ, ಕಿವಿನೋವಿಗೆ ಬಿಂದು ಬಿಂದುಗಳಾಗಿ ಉಪಯೋಗಿಸುವ ಜಾಣ್ಮೆ ಜಾನಪದರಲ್ಲಿತ್ತು. ನೋವು ನಿವಾರಕ ಹಾಗು ನಂಜುನಿವಾರಕ ಗುಣ ಈ ಮಳೆ ನೀರಿಗೆ ಇರುತ್ತದೆ ಎಂಬ ಕಾರಣವನ್ನವರು ಕೊಡುತ್ತಿದ್ದರು. ಇತ್ತೀಚಿಗೆ ಈ ಸ್ವಾತಿ ಮಳೆ ನೀರು ನೀರಿನ ಬಗ್ಗೆ ಹೆಚ್ಚು ಹೆಚ್ಚು ಸಂಶೋಧನೆಗಳಾಗಬೇಕೆಂಬ ಮಾತುಗಳೂ ಕೇಳಿಬರುತ್ತಿದೆ.
ಧರಣಿ ತಣಿಸುವ ಭರಣಿ ಮಳೆ ಮಳೆ ಹಸ್ತ ಚಿತ್ತ ಸ್ವಾತಿ ಮಳೆ ಮಳೆ ಎಂಬ ಹಂಸಲೇಖರವರ ಗೀತೆಯ ಸಾಲಿನಂತೆ ತಣಿಸುವ ಗುಣ ಈ ಮಳೆಗೆ ಇದೆಯಂತೆ ಅಂದರೆ ಹೊಟ್ಟೆಯನ್ನು ತಣಿಸುವ ಸಿಹಿಮಜ್ಜಿಗೆ ಔಷಧಕ್ಕೆ ಕೆಲವೂಮ್ಮೆ ಬೇಕಾಗುವ ಹುಳಿಮಜ್ಜಿಗೆ ಒಟ್ಟಂದದಲಿ ಒಳ್ಳೆಯ ಮಜ್ಜಿಗೆಗೆ ಸ್ವಾತಿಮಳೆ ಇದ್ದರೆ ಚೆನ್ನ ಎಂಬ ಮಾತಿವೆ ಅಂದರೆ ಸ್ವಾತಿ ಮಳೆನೀರನ್ನು ಹಾಲಿಗೆ ಹಾಕಿದರೆ ಹೆಪ್ಪಾಗಿ ಹೊಸಮಜ್ಜಿಗೆಯಾಗುತ್ತದೆ ಎಂಬ ಅನುಭವದ ಮಾತೂ ನಮ್ಮ ಹಿರಿಯರಲ್ಲಿವೆ. “ಸ್ವಾತಿ ಮಳೆ ಬಂದರೆ ಮುತ್ತಿನಂಥ ಬೆಳೆ”, ಸ್ವಾತಿ ಮಳೆಯಾದರೆ ಚಾಪೆ ಕೆಳಗಿನದೂ ತೆನೆಯಾಗ್ತದೆ”, “ಸ್ವಾತಿ ಮಳೆ ಹೋದ ಮ್ಯಾಗ ಐತೇನು” ಮುಂತಾದ ಗಾದೆಮಾತುಗಳು ಅಕ್ಷರಷಃ ರೈತರ ಪಾಲಿಗೆ ಸ್ವಾತಿ ಮುತ್ತಿನಂತೆ ಅಮೂಲ್ಯವಾದದ್ದು ಎಂಬುದನ್ನು ಅರ್ಥೈಸುತ್ತದೆ. ಪ್ರೀತಿ ಇಲ್ಲದ ಮೇಲೆ ಇನ್ನೆಲಿಯ ಬದುಕು ಅಲ್ವೆ!. ಅಂತಹ ಪ್ರೀತಿಯ ದ್ಯೋತಕ ಸ್ವಾತಿ ಮಳೆ ಎಂಬುದರಲ್ಲಿ ಎರಡು ಮಾತಿಲ್ಲ. ‘ಸ್ವಾತಿ’ ಎಂಬ ಹೆಸರು, ‘ಸೌಂದರ್ಯ’ ‘ಮೋಹಕತೆ, ‘ರಸಿಕತೆ’ಯನ್ನು ಸಂಕೇತಿಸುತ್ತದೆ.ಹಾಗಂತಲೇ ಈ ಮಳೆಯನ್ನು ಪ್ರೀತಿಯ ಮಳೆ ಎಂದು ಕರೆಯುವುದು. ವಿರಹ ವೇದನೆಯನ್ನು ನಿವೇದಿಸುವಂತೆಯೇನೋ? :”ಸ್ವಾತಿ ಮಳೆಯ ತನಕ ಕಾಯಬೇಕಾ” ಎಂಬ ಉದ್ಗಾರ ಜಾನಪದ ಕಾಲದ ಪ್ರೇಮಿಗಳಲ್ಲಿ ಉಕ್ತವಾಗುತ್ತಿತ್ತು. ರೈತರ ಬದುಕಲ್ಲಿ ಸ್ವಾತಿನಕ್ಷತ್ರ ಪಾತ್ರ ವಹಿಸಿದೆ.
ಮಾತನಾಡಲೊಲ್ಲದವರಿಂದ ಮಾತನಾಡಿಸುವಾಗ ಏನು ‘ಮುತ್ತುಸುರಿಯುತ್ತ’ ಎಂದು ವ್ಯಂಗ್ಯವಾಗಿ ಹೇಳಿ ಅವರನ್ನು ಮಾತನಾಡುವಂತೆ ಪ್ರೇರೆಪಿಸುವ ವಿಧಾನವೂ ಇದೆ, ಹಾಗೆ ದುಂಡನೆಯ ಅಕ್ಷರಗಳನ್ನು ‘ಮುತ್ತು ಪೋಣಿಸಿದಂತೆ’ ಎಂಬ ಮಾತಿನ ಮೂಲಕ ಪ್ರಶಂಸೆ ಮಾಡುವುದಿದೆ. ಮೌನವಾಗಿ ಸುರಿಯುವ ಕಣ್ಣಹನಿಗಳಿಗೂ “ಮುತ್ತಿನಂತೆ ಜಲಬಿಂದುಗಳ್ ಉರುಳ್ಳುವು” ಎಂಬ ಮಾತು ಸಹೃದಯದರಿಗೆ ಹೊಸತಲ್ಲ ಬಿಡಿ.
ಪಂಪಭಾರತದಲ್ಲಿ ಕವಿ ಪಂಪ “ನೆತ್ತಮನಾಡಿ ಭಾನುಮತಿ ಸೋಲ್ತೋಡೆ. ಸೋಲಮನೀವುದೆಂದು ಕಾಡುತ್ತಿದೆ………….. ಲಂಬಣಂ ಪರಿಯೆ …………… ಮುತ್ತಿನ ಕೇಡ ನೋಡಿ ನೋಡಿ ……………” ಎಂದು ಮುತ್ತುಗಳ ಕುರಿತು ಹೇಳುವುದಿದೆ. ಮುತ್ತು ಅಮೂಲ್ಯವಾದದ್ದು. ಆಗಿನ ಕಾಲಕ್ಕೇ ಮುತ್ತಿನ ಹೇರಳ ಬಳಕೆ ಹಾಗು ಕರ್ಣ ದುರ್ಯೋಧನರ ನಡುವಿನ ಸ್ನೇಹದ ಸಲುಗೆಯನ್ನು ಮತ್ತು ಪಾವಿತ್ರತೆಯನ್ನು ಪ್ರಸ್ತುತ ಸಾಲುಗಳು ಧ್ವನಿಸುತ್ತವೆ. ರಾಣಿಯರು ಕಂಚುಕ ಎಂಬುದನ್ನು ಮುತ್ತುಗಳಿಂದಲೇ ಮಾಡಿಸಿಕೊಳ್ಳುತ್ತಿದ್ದರೆಂಬ ವಿಚಾರವೂ ಇದೆ.
“ಮುತ್ತು ಇದ್ದರೆ ಹೇಗೆ ಬೇಕಾದರೂ ಪೋಣಿಸಿಕೊಳ್ಳಬಹುದು” ಎಂಬ ಹಿರಿಯರ ವ್ಯಂಗ್ಯ ಮಾತಿನ ಹಿಂದೆ ಬದುಕಿಗೆ ಅವಕಾಶ ಮುಖ್ಯ ಎಂಬ ಸತ್ಯವೂ ಅಡಗಿದೆ. ಒಂದು ಮಗುವಿದ್ದರೆ “ಒಂದು ಮುತ್ತುಕಟ್ಟಿದ್ದೇನೆ” ಎಂದೂ ಎರಡು ಮಕ್ಕಳಿದ್ದರೆ ಎರಡು ಕಣ್ಣಿದ್ದಂತೆ ಎರಡು ಮುತ್ತಿನಂತೆ ಎಂದೂ ಮೂರು ಮಕ್ಕಳಿದ್ದರೆ “ಮುತ್ತಿನಂಥ ಮೂರು ಮಕ್ಕಳು” ಎಂದು ತಾಯಂದಿರು ಪ್ರಶಂಸೆ ಮಾಡಿಕೊಳ್ಳುತ್ತಿದ್ದ ದಿನವೂ ಇತ್ತು. ದುಂಡಗೆ, ಚಪ್ಪಟೆ, ತತ್ತಿಯಾಕಾರದಲ್ಲಿ ದೊರೆಯುವ ಈ ಮುತ್ತುಗಳ ಗಾತ್ರದ ಮೇಲೆ ಅವುಗಳ ಬೆಲೆ ನಿರ್ಧರಿಸಲ್ಪಡುತ್ತದೆ. ಈ ಮುತ್ತಿಗೆ ಚಿನ್ನದ ಗುಂಡುಗಳು, ಹವಳ, ಜೇಡ್ ಮುಂತಾದವುಗಳನ್ನು ಸೇರಿಸಿದರೆ ರಾಜ ಕಳೆಯೇ ಸರಿ. ಅನುಕೂಲಕ್ಕೆ ತಕ್ಕಂತೆ ಚಿನ್ನ, ಬೆಳ್ಳಿ ಅಥವ ಸಾಧಾರಣ ದಾರದಲ್ಲಿ ಪೋಣಿಸಿ ಹೆಂಗಳೆಯರು ಧರಿಸುವುದಿದೆ.
ಜಾನಪದ ಗೀತೆಗಳಲ್ಲಿ ‘ಮುತ್ತಿನೋಲ್ಯೊಳೆ’, ‘ಮುತ್ತಿನ ಮುಗುತಿಯೋಳೆ’, ‘ಮುತ್ತಿನುಂಗರದ ನಾರಿ’ ಎಂಬ ಮಾತುಗಳು ಮುತ್ತಿನ ಪ್ರಚುರತೆಗೆ ಸಾಕ್ಷಿ. ಕರ್ನಾಟಕದಲ್ಲಿ ಮೈಸೂರಿನ ಒಡೆಯರ್ ವಂಶಸ್ಥರು, ಕೊಡವ ಜನಾಂಗದವರು ಮುತ್ತಿನ ಅಭರಣಗಳನ್ನು ಹೆಚ್ಚು ಹೆಚ್ಚು ಬಳಸುವುದಿದೆ. ಮರಾಠಿಗರಲ್ಲಂತೂ ಮುತ್ತಿನ ಮೂಗತಿ ಬಹಳ ಪ್ರಸಿದ್ಧ ಅವರ ಸಿಗ್ನೇಚರ್ ಅಭರಣ ಎಂದರೆ ತಪ್ಪಿಲ್ಲ. ಉತ್ತರ ಭಾರದ ರಾಜಮಾತೆಯರ ಪೋಷಾಕು ಎಂದರೆ ಮುತ್ತಿನ ಅಭರಣಗಳು ಇದ್ದೇ ಇರುತ್ತದೆ ಬಿಡಿ. ಸಮಯವನ್ನು ವಿನಾಃಕಾರಣ ಕಳೆಯುವುದು ಬಂದ ಅವಕಾಶಗಳನ್ನು ಕೈಚೆಲ್ಲುವುದಕ್ಕೆ “ಮುತ್ತನ್ನು ಕಳೆದುಕೊಂಡಂತೆ” ಎಂಬ ಮಾತಿನ ಪ್ರಯೋಗವೂ ಇದೆ. ಮುತ್ತು ಪರಿಪೂರ್ಣತೆಯ ಸಂಕೇತ. ಚಂದ್ರಗ್ರಹದ ರತ್ನ ಇದಾಗಿರುವುದರಿಂದ ಮನಃಶಾಂತಿಗೆ ಇದನ್ನು ಧರಿಸಬೇಕೆಂಬ ನಂಬಿಕೆಯೂ ಇದೆ. ಶಾಸ್ತ್ರೀಯ ನೃತ್ಯ ಕಲಾವಿದರು ಆಭರಣ ಇಲ್ಲವೆ ಸಾಂಪ್ದಾಯಿಕ ಆಭರಣ(ಆ್ಯಂಟಿಕ್) ಎಂದರೆ ಮುತ್ತಿನ ಬಳಕೆ ಶತಸಿದ್ಧ. ಮುತ್ತಿನ ಬ್ರೆಸ್ಲೆಟ್ಗಳು, ವಾಚ್ಕೇಸ್ಗಳು ಇಂದಿನ ಯುವತಿಯರ ಹಾಟೆಸ್ಟ್ ಟ್ರೆಂಡ್ ಆಗಿದೆ. ಯಾರು ಯಾರು ಯಾವ ರೀತಿಯ ಯಾವ ಬಣ್ಣದ ಮುತ್ತುಗಳನ್ನು ಧರಿಸುತ್ತಾರೆ ಎಂಬುದರ ಮೇಲೆ ಅವರ ಅಭಿರುಚಿ, ಸಿರಿವಂತಿಕೆಯನ್ನು ಟೀಕಾಕಾರರು ಗುರುತ್ತಿಸುತ್ತಾರೆ. ಅಲ್ಲದೆ ಇದು ಘನತೆಯ ಸಂಕೇತವೂ ಹೌದು.
‘ಮುತ್ತು’ ಎಂದು ಹೇಳಿದ ಕೂಡಲೆ ನಮಗೆ ಹೈದರಬಾದ್ ನೆನಪಾಗುತ್ತದೆ. ಕಾರಣ ಎರಡು ಮೊದನೆಯದ್ದು ಅಲ್ಲಿ ಕೃತಕ ಮುತ್ತುಗಳನ್ನು ಕೊಯ್ಲ ಮಾಡುತ್ತಾರೆ. ಇನ್ನೊಂದು ಮುತ್ತಿನ ಉದ್ಯಮದ ರಾಜಧಾನಿ ಎಂಬ ಕಾರಣಕ್ಕೆ. ಮೊಘಲರ ಕಾಲದಿಂದ ಪ್ರಾರಂಭಗೊಂಡು ಬ್ರಿಟಿಷ್ರನ್ನು ಒಳಗೊಂಡು ಇಂದಿನವರೆಗೂ ಮುತ್ತಿನ ಸಂಸ್ಕರಣೆ, ಅದರ ವಿನ್ಯಾಸ ಎಲ್ಲವೂ ಹೈದರಾಬಾದ್ನಲ್ಲಿ ಯಥೇಚ್ಛವಾಗಿ ಆಗುವುದು. “ಹತ್ತು ಕಟ್ಟೋ ಕಡೆ ಒಂದು ಮುತ್ತು ಕಟ್ಟು” ಎಂಬ ಮಾತು ಮುತ್ತಿನ ಶ್ರೇಷ್ಠತೆಗೆ ಹಾಗು ಅನನ್ಯತೆಗೆ ಸಂಕೇತವಾಗಿದೆ. ಏನಾದರಾಗಲಿ ಸಿಹಿಮುತ್ತು ಚುಂಬನಕೆ, ಹಿಡಿ ಮುತ್ತು ಆಭರಣಕೆ ದೊರೆತ ಮಾನಿನಿಯರನ್ನು ಹಿಡಿಯಲು ಸಾಧ್ಯವೆ???
ಹೆಚ್ಚಿನ ಬರಹಗಳಿಗಾಗಿ
ವಿಶ್ವ, ವಿಶಾಲೂ ಮತ್ತು ಅಧ್ಯಾತ್ಮ
ರೇಟಿಂಗ್ ಗಳ ಧೋರಣೆ
ಬೇಲಿಯೇ ಎದ್ದು…..